Tag: ಸಿನಿ

  • ಬುಲೆಟ್ ಬೈಕ್ ಮೇಲೆ ಬಂದು ಗುಡ್‍ನ್ಯೂಸ್ ಕೊಟ್ಟ ಶ್ರೀಮನ್ನಾರಾಯಣ

    ಬುಲೆಟ್ ಬೈಕ್ ಮೇಲೆ ಬಂದು ಗುಡ್‍ನ್ಯೂಸ್ ಕೊಟ್ಟ ಶ್ರೀಮನ್ನಾರಾಯಣ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ `ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಮೂಲಕ ತೆರೆಯ ಮೇಲೆ ಬರಲು ಸಿದ್ಧಗೊಂಡಿದ್ದಾರೆ. ಬಹು ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯೂ ಅಧಿಕೃತವಾಗಿ ತಿಳಿದಿರಲಿಲ್ಲ. ಇದೀಗ ಮೊದಲ ಬಾರಿಗೆ `ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

    ರಿಲೀಸ್ ಆಗಿರುವ ಪೋಸ್ಟರಿನಲ್ಲಿ ರಕ್ಷಿತ್ ಶೆಟ್ಟಿ ಬುಲೆಟ್ ಬೈಕ್ ಮೇಲೆ ಕುಳಿತುಕೊಂಡು ಒಂದು ಕೈಯಲ್ಲಿ ಬೈಕ್ ಹ್ಯಾಂಡಲ್ ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಗನ್ ಹಿಡಿದ ಶೂಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅವರ ಹಿಂದೆ ಖಳನಾಯಕರು ಕುದುರೆಯನ್ನೇರಿ ಬರುತ್ತಿದ್ದಾರೆ. ಸಿನಿಮಾದ ಫಸ್ಟ ಲುಕ್ ಜೊತೆಗೆ ಇದೇ ತಿಂಗಳ 28 ರಂದು ಟ್ರೈಲರ್ ಬಿಡುಗಡೆ ಮಾಡುವುದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಪೋಸ್ಟರ್ ಬಿಡುಗಡೆಗೆ ಒಂದು ಗಂಟೆ ಮೊದಲು ರಕ್ಷಿತ್ ಶೆಟ್ಟಿ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದರು. “ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಇಂದು ಸಂಜೆ 6 ಗಂಟೆಗೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಫಸ್ಟ್ ಲುಕ್ ಅನ್ನು ಮತ್ತು ಟ್ರೈಲರ್ ದಿನಾಂಕದ ಜೊತೆಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದರು.

    ಚಿತ್ರಕ್ಕೆ ಎಚ್.ಕೆ ಪ್ರಕಾಶ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಯಾಗಿ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್‍ಗೆ ನಟಿ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.