Tag: ಸಿದ್ಧತೆ

  • ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

    ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

    ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಸಾವು-ನೋವು, ಕಷ್ಟ-ನಷ್ಟ ಸಂಭವಿಸಿತ್ತು. ಹೀಗಾಗಿ ಜಿಲ್ಲಾಡಳಿತ ಜಡಿ ಮಳೆಯ ಆರಂಭಕ್ಕೂ ಮುನ್ನವೇ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲೆಯ ಆರೋಗ್ಯ, ಮೆಸ್ಕಾಂ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕಳೆದ ಎರಡು ವರ್ಷದಂತೆ ಭಾರೀ ಮಳೆ ಸುರಿದರೆ ಯಾವ ರೀತಿ ವಿಪತ್ತು ನಿರ್ವಹಣೆ ಮಾಡಬೇಕೆಂದು ಸಿದ್ಧತೆ ನಡೆಸಿದೆ.

    ಜಿಲ್ಲಾಡಳಿತ ಈಗಾಗಲೇ ಪ್ರವಾಹ, ಬೆಟ್ಟಗುಡ್ಡ ಕುಸಿತ, ನೀರು ಕೊಚ್ಚಿ ಹೋಗುವ ಜಾಗ, ಲೋ ಲೈನ್ ಏರಿಯಾ, ಸಂಕಷ್ಟಕ್ಕೀಡಾಗುವ ಗ್ರಾಮಗಳು ಸೇರಿದಂತೆ ಸಮಸ್ಯೆಯಾಗುವ ಜಾಗವನ್ನು ಪಟ್ಟಿ ಮಾಡಿ, ವರುಣನ ಅಬ್ಬರವನ್ನು ಎದುರಿಸಲು ರೂಪುರೇಷೆಯನ್ನು ಸಿದ್ಧಪಡಿಸಿಕೊಂಡಿದೆ. ಅದೇ ರೀತಿ ಮಳೆ ವಿಪತ್ತನ್ನು ನಿರ್ವಹಿಸಲು ಭೂಕುಸಿತವಾಗುವ 108 ಗ್ರಾಮಗಳು ಹಾಗೂ ಪ್ರವಾಹ ಉಂಟಾಗಬಹುದಾದ 40 ಏರಿಯಾಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಜೊತೆಗೆ ಭಾರೀ ಮಳೆ ಸುರಿದರೆ ಬೆಟ್ಟ-ಗುಡ್ಡ ಕುಸಿಯುವ 58 ಪ್ರದೇಶಗಳನ್ನೂ ಪಟ್ಟಿ ಮಾಡಿದ್ದಾರೆ. ತಜ್ಞರು ಕೂಡ ಬೆಟ್ಟಗುಡ್ಡ ಕುಸಿಯೋ ಜಾಗ ಹಾಗೂ ಪ್ರವಾಹ ಬರಬಹುದಾದ ಜಾಗದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಆದ ಸಮಸ್ಯೆ ಈ ಬಾರಿ ಆಗಬಾರದು ಎಂದು ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಜೊತೆ ಸ್ಥಳಿಯರು ಕೈಜೋಡಿಸಿದ್ದು, 463 ಸ್ವಯಂ ಸೇವಕರು, 290 ಹೋಮ್ ಗಾಡ್ರ್ಸ್, 70 ಈಜು ತಜ್ಞರು, 16 ಎನ್‍ಜಿಓ ತಂಡ, ಹೋಬಳಿ ಮಟ್ಟದಲ್ಲಿ ರಿಲೀಫ್ ಟೀಮ್, 62 ಸೇಫ್ ಸೆಂಟರ್ ಗಳು ಮಳೆ ಎದುರಿಸಲು ಸಜ್ಜಾಗಿವೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇರುವ ಹಿಟಾಚಿ, ಜೆಸಿಬಿ, ಟ್ರ್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್ ಎಲ್ಲವುದರ ಮಾಹಿತಿಯನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಮಳೆ ಹೆಚ್ಚಾಗಿ ವಿಪತ್ತು ಉಂಟಾದರೆ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ತಂಡವು ಎನ್‍ಡಿಆರ್‍ಎಫ್ ತಂಡದಿಂದ ತರಬೇತಿ ಪಡೆದಿದೆ. ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ತರಬೇತಿ ಪಡೆದ ಸ್ವಯಂ ಸೇವರು ಮಳೆ ವಿಪತ್ತನ್ನ ಎದುರಿಸಲು ರೆಡಿಯಾಗಿದ್ದಾರೆ.

    ಈ ವರ್ಷದ ಮುಂಗಾರು ಕೂಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಶಾದಾಯಕವಾಗಿ ಆರಂಭಗೊಂಡಿದ್ದು, ಜಿಲ್ಲೆಯ ಜನರಿಗೆ ಮಳೆಗಾಲದ ಮಳೆ ಬಗ್ಗೆ ಆತಂಕ ಉಂಟಾಗಿದೆ. ಆಕಾಶದಲ್ಲಿ ಮೋಡ ಕಡುಗಟ್ಟುತ್ತಿದ್ದರೆ, ಮಲೆನಾಡಿಗರ ಮನದಲ್ಲಿ ಭಯ ಹುಟ್ಟುತ್ತಿದೆ. ಕಳೆದ ಎರಡು ವರ್ಷಗಳ ಮಳೆ ಅಬ್ಬರ ಅರ್ಧ ಮಲೆನಾಡನ್ನು ಹಿಂಡಿ ಹಿಪ್ಪೆಮಾಡಿತ್ತು. ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿತ್ತು. ವರುಣನ ಅಬ್ಬರಕ್ಕೆ ಬೆಟ್ಟ-ಗುಡ್ಡಗಳೇ ಕಳಚಿ ಬಿದ್ದಿದ್ದವು. ಮನೆ-ಮಠಗಳು ಕೊಚ್ಚಿ ಹೋಗಿ, ಜೀವಗಳು ನೀರಲ್ಲಿ ತೇಲಿ ಹೋಗಿದ್ದವು. ನದಿಗಳು ಊರು, ಗದ್ದೆ, ತೋಟ ಯಾವುದನ್ನೂ ಲೆಕ್ಕಿಸದೆ ಮನಸೋ ಇಚ್ಛೆ ಹರಿದು ಪ್ರವಾಹದ ರೂಪ ತಾಳಿದ್ದನ್ನು ಮಲೆನಾಡಿಗರು ಮರೆತಿಲ್ಲ. ಹೀಗಾಗಿ ಎಚ್ಚರಿಕೆ ವಹಿಸಿದ್ದಾರೆ.

    ಈ ವರ್ಷದ ಆರಂಭದ ಮಳೆಯೂ ಪ್ರವಾಹದ ಮೂನ್ಸೂಚನೆ ನೀಡಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರಿಗೆ ಮತ್ತದೇ ಆತಂಕ ತಂದಿದೆ. ಈ ಬಾರಿ ಜಿಲ್ಲಾಡಳಿತ ವರುಣದೇವನಿಗೂ ಸೆಡ್ಡು ಹೊಡೆದು, ಹೈ ಅಲರ್ಟ್ ಘೋಷಿಸಿದೆ.

  • ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯ ಮಠದಲ್ಲಿ ಭರ್ಜರಿ ಸಿದ್ಧತೆ

    ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯ ಮಠದಲ್ಲಿ ಭರ್ಜರಿ ಸಿದ್ಧತೆ

    ರಾಯಚೂರು: 12 ವರ್ಷಕ್ಕೆ ಒಂದು ಬಾರಿ ಬರುವ ಸಂಭ್ರಮದ ಪುಷ್ಕರ ಈ ಬಾರಿ ತುಂಗಭದ್ರಾ ನದಿಯಲ್ಲಿ ನಡೆಯಲಿದೆ. ಹೀಗಾಗಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠ ಪುಷ್ಕರಕ್ಕೆ ಭರ್ಜರಿ ತಯಾರಿ ನಡೆಸಿದೆ. ಭಕ್ತರ ಪುಣ್ಯ ಸ್ನಾನಕ್ಕೆ ಹದಿನೈದು ದಿನಗಳ ಮುಂಚಿತವಾಗಿಯೇ ಮಠ ಅಂತಿಮ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

    ತುಂಗಭದ್ರಾ ನದಿಯ ಪುಷ್ಕರ ಪುಣ್ಯ ಸ್ನಾನಕ್ಕೆ ಈಗ ದಿನಗಣನೇ ಆರಂಭವಾಗಿದೆ. 12 ವರ್ಷಕ್ಕೆ ಒಂದು ಬಾರಿ ಬರುವ ಪುಷ್ಕರ ಆಚರಣೆ ಈ ವರ್ಷ ತುಂಗಾಭದ್ರ ನದಿಗೆ ಬಂದಿದೆ. ಪುಷ್ಕರವನ್ನು ಗುರು ಮಕರ ರಾಶಿಗೆ ಪ್ರವೇಶಿಸಿದ ಸಮಯದಿಂದ 12 ದಿನಗಳವರೆಗೆ ಆಚರಿಸಲಾಗುತ್ತದೆ. ನವೆಂಬರ್ 20ರಿಂದ ಡಿಸೆಂಬರ್ 1ರ ವರೆಗೆ ತುಂಗಭದ್ರಾ ನದಿಯ ಪುಷ್ಕರ ನಡೆಯಲಿದೆ. ಈ ವೇಳೆ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಅನ್ನೋ ನಂಬಿಕೆಯಿದೆ. ಈ ಹಿನ್ನೆಲೆ ಮಂತ್ರಾಲಯದಲ್ಲಿ ಗುರು ರಾಯರ ಉತ್ಸವದೊಂದಿಗೆ ತುಂಗಭದ್ರಾ ನದಿಯ ತೀರದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

    ಮಠದಲ್ಲಿ ಅನ್ನಪ್ರಸಾದ, ಪರಿಮಳ ಪ್ರಸಾದದ ವ್ಯವಸ್ಥೆಯನ್ನು ಭಕ್ತರಿಗೆ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವ ನಿಯಮಪಾಲನೆಗೆ ಒತ್ತುಕೊಡಲಾಗಿದೆ. ಪುಷ್ಕರದ ವೇಳೆ ದಿನಕ್ಕೆ 25 ಸಾವಿರ ಭಕ್ತಾಧಿಗಳು ಬರುವ ಸಾಧ್ಯತೆ ಇದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ತಿಳಿಸಿದ್ದಾರೆ.

    ಪುಷ್ಕರ ವೇಳೆ ದೇಶದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮಠ ಮನವಿ ಮಾಡಿದೆ. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಇಲ್ಲಿನ ಐದು ಘಾಟ್‍ಗಳಲ್ಲಿ ಒಂದು ಘಾಟ್ ನಲ್ಲಿ ಒಂದು ಗಂಟೆಗೆ 60 ಜನ ಸ್ನಾನ ಮಾಡಲು ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 6 ಗಂಟೆಯವರೆಗೆ ತುಂಗಾಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

    ಮಠದ ಸಿಬ್ಬಂದಿಯಿಂದ ಆವರಣದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಭಕ್ತರಿಗೆ ತಿಳುವಳಿಕೆ ನೀಡಲು ಸಿದ್ಧತೆ ನಡೆದಿದೆ. ವಿವಿಧೆಡೆಯಿಂದ ಪುಣ್ಯ ಸ್ನಾನ ಹಾಗೂ ರಾಯರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ವಸತಿ ಗೃಹ, ತಾತ್ಕಾಲಿಕ ಶಾಮಿಯಾನ ಕಲ್ಪಿಸಲಾಗುತ್ತಿದೆ. ಪ್ರಾಥಮಿಕ ಚಿಕಿತ್ಸೆ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ತಯಾರಿಗಳನ್ನು ಮಠದ ಆಡಳಿತ ಮಂಡಳಿ ನಡೆಸಿದೆ.

  • ಪ್ರತಿ ಮನೆಗೆ ತೆರಳಿ ಕೊರೊನಾ ಪರೀಕ್ಷೆ ನಡೆಸಿ: ಬಿ.ಸಿ.ಪಾಟೀಲ್

    ಪ್ರತಿ ಮನೆಗೆ ತೆರಳಿ ಕೊರೊನಾ ಪರೀಕ್ಷೆ ನಡೆಸಿ: ಬಿ.ಸಿ.ಪಾಟೀಲ್

    – ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ನೀಡಿ
    – 263 ಜನರ ಸ್ಯಾಂಪಲ್ ಪರೀಕ್ಷೆ, ಎಲ್ಲವೂ ನೆಗೆಟಿವ್
    – ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಪ್ರಕರಣವಿಲ್ಲ

    ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಥರ್ಮಲ್ ಸ್ಕ್ಯಾನರ್ ಬಳಸಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಸೋಂಕು ಪತ್ತೆ ಹಚ್ಚಲು ಎಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕೆಂದು ಸರ್ಕಾರ ಸೂಚಿಸಿದ್ದು, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಮಾಡಬೇಕು. ಅವರಿಗೆ ಅವಶ್ಯವಾಗಿ ಬೇಕಾದ ಥರ್ಮಲ್ ಸ್ಕ್ಯಾನರ್ ಗಳನ್ನು ಪ್ರತಿ ಪಂಚಾಯಿತಿಗೆ ಎರಡರಂತೆ ಒದಗಿಸಬೇಕು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಜಿಲ್ಲಾಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಹೀಗಾಗಿ ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಪರ್ಯಾಯವಾಗಿ ವ್ಯವಸ್ಥೆ ಮಾಡಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿ. ಔಷಧ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಿ. ಜಿಲ್ಲೆಯಲ್ಲಿನ ಸರ್ಕಾರಿ ವೈದ್ಯರನ್ನು ಕೋವಿಡ್ ಚಿಕಿತ್ಸೆಗೆಂದು ನಿಯೋಜಿಸಿರುವದರಿಂದ ಪರ್ಯಾಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗಬಹುದು. ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ವೈದ್ಯರನ್ನು ಪಾಳಿ ಪ್ರಕಾರ ನಿಯೋಜಿಸಿ ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ. ಕೋವಿಡ್ ಸೋಂಕಿತರು ಪತ್ತೆಯಾದಲ್ಲಿ ಅವರ ಚಿಕಿತ್ಸೆಗೆ ಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಅಗತ್ಯವಿದ್ದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಿ. ಕೊರೊನಾ ಚಿಕಿತ್ಸೆಗೆ ತಜ್ಞರಿಂದ ವೈದ್ಯರಿಗೆ ಸೂಕ್ತ ತರಬೇತಿ ಕೊಡಿಸಿ. ವೆಂಟಿಲೇಟರ್‍ಗಳ ನಿರ್ವಹಣೆ ಕುರಿತು ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿ ಚಿಕಿತ್ಸೆಗೆ ಸಿದ್ಧಗೊಳಿಸಿ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಚಿಕಿತ್ಸೆ ಹಾಗೂ ವೈದ್ಯರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ಎಂದರು.

    ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ರಫ್ತು ಮಾಡಲು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಿ. ಜಿಲ್ಲೆಯ ಗಡಿ ಭಾಗಗಳಲ್ಲಿ ಸ್ಯಾನಿಟೈಸರ್ ಟನಲ್‍ಗಳನ್ನು ಸ್ಥಾಪಿಸಿ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಸರಕು ಸಾಗಣೆ ವಾಹನಗಳ ಚಾಲಕರು ಮತ್ತಿತರರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಿ. ಎಲ್ಲ ಚೆಕ್‍ಪೋಸ್ಟ್‍ಗಳಲ್ಲೂ ನಿಯಮ ಮೀರಿ ಯಾವ ವಾಹನಗಳನ್ನೂ ಬಿಡಬೇಡಿ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ತುರ್ತು ವಿಷಯಗಳಿಗಾಗಿ ಜಿಲ್ಲೆಯ ಗಡಿ ದಾಟಿ ಹೋಗಬೇಕಾದಾಗ ಅವರ ವಸ್ತು ಸ್ಥಿತಿಯನ್ನು ಪರಿಶೀಲಿಸಿ ಪಾಸ್ ನೀಡಿ ಎಂದು ತಿಳಿಸಿದರು.

    ಜಿಲ್ಲೆಯ ಶಾಸಕರು ಶಿಫಾರಸ್ಸು ಮಾಡಿರುವ ಪ್ರಕರಣಗಳಲ್ಲಿ ಅವಶ್ಯಕತೆಯನ್ನು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ (ಅತ್ಯಂತ ತುರ್ತು ಇರುವ ಪ್ರಕರಣಗಳಲ್ಲಿ) ಪಾಸ್‍ಗಳನ್ನು ಒದಗಿಸಿ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಅದರೊಂದಿಗೆ ದಿನಸಿ ಅಂಗಡಿಗಳನ್ನು ತೆರೆದಿಡುವ ಸಮಯವನ್ನು ವಿಸ್ತರಿಸಿ. ಅಗತ್ಯವಿದ್ದವರು ದಿನಸಿ ಅಂಗಡಿಗಳಿಂದಲೇ ಖರೀದಿಸಲಿ. ಈಗಾಗಲೇ ಪಡಿತರ ಚೀಟಿ ಹೊಂದಿರುವವರಿಗೆ ಹಾಗೂ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಪಡಿತರ ನೀಡಲಾಗುತ್ತಿದೆ. ಪಡಿತರ ಚೀಟಿ ಇಲ್ಲದವರು ಹಾಗೂ ಅರ್ಜಿ ಸಲ್ಲಿಸದವರಿಗೆ ದಾನಿಗಳಿಂದ ಪಡೆದ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಬೇರೆ ರಾಜ್ಯದ ವಲಸೆ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ ವೈದ್ಯಕೀಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ನಿಡಲಾಗುತ್ತಿದೆ. ಏಪ್ರಿಲ್ 20ರ ನಂತರ ಲಾಕ್‍ಡೌನ್ ಕುರಿತು ಹೊಸ ನಿಯಮಾವಳಿಗಳು ಬರುವ ಸಾಧ್ಯತೆ ಇದ್ದು, ಅವುಗಳ ಆಧಾರದಲ್ಲಿ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ಬಗ್ಗೆ, ಜಿಲ್ಲೆಯಲ್ಲಿ ಲಾಕ್‍ಡೌನ್ ನಿಯಮಗಳಲ್ಲಿ ಯಾವ ವಿಷಯಗಳಲ್ಲಿ ವಿನಾಯಿತಿ ನೀಡವ ಸಾಧ್ಯತೆ ಕುರಿತು ಪರಿಶೀಲಿಸಿ ನಿರ್ಧರಿಸೋಣ ಎಂದರು.

    ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ಕೋವಿಡ್-19 ಸೋಂಕಿನ ಕುರಿತಂತೆ ಈ ವರೆಗೆ 263 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ 4 ಜನರು ವಿದೇಶ ಪ್ರಯಾಣದ ಹಿನ್ನೆಲೆಯುಳ್ಳವರು, 25 ಜನ ತಬ್ಲೀಘಿ ಜಮಾತ್‍ಗೆ ಸಂಬಂಧಿಸಿದವರು, ರಾಜಸ್ಥಾನಕ್ಕೆ ತೆರಳಿದ್ದ ಕಾರಟಗಿಯ 8 ಜನರ ಸ್ಯಾಂಪಲ್‍ಗಳು ಸೇರಿದಂತೆ 263 ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಎಲ್ಲ ಸ್ಯಾಂಪಲ್‍ಗಳೂ ನೆಗೆಟಿವ್ ಎಂದು ವರದಿ ಬಂದಿವೆ. ಇನ್ನೂ ನಾಲ್ಕು ಸ್ಯಾಂಪಲ್‍ಗಳ ವರದಿ ಬರುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 19 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿಲಾಗಿದೆ. ಸ್ಯಾಂಪಲ್‍ಗಳ ಪರೀಕ್ಷೆ ಪ್ರಮಾಣದಲ್ಲಿ ಜಿಲ್ಲೆಯು ರಾಜ್ಯದಲ್ಲಿ 13 ನೇ ಸ್ಥಾನದಲ್ಲಿದೆ. ಸರ್ಕಾರ ನೀಡಿದ ಸೂಚನೆಯಂತೆ ಏಪ್ರಿಲ್ 19 ರವರೆಗೆ ದಿನನಿತ್ಯ 100 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ನಂತರ ನಿತ್ಯ 50 ರಂತೆ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವಿವರಿಸಿದರು.

  • ರಾಜ್ಯದ ಅತಿದೊಡ್ಡ ಶಿರಸಿ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

    ರಾಜ್ಯದ ಅತಿದೊಡ್ಡ ಶಿರಸಿ ಮಾರಿಕಾಂಬೆ ಜಾತ್ರೆಗೆ ಕ್ಷಣಗಣನೆ

    ಕಾರವಾರ: ಜಾಗೃತ ಶಕ್ತಿಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಗೆ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಜಾತ್ರೆ ಸಂದರ್ಭದಲ್ಲಿ ನವದಿನಗಳ ಕಾಲ ದೇವಿ ವಿರಾಜಮಾನವಾಗುವ ಗದ್ದುಗೆ ಮಂಟಪದ ತಯಾರಿ ಆರಂಭವಾಗಿದ್ದು, ಪುರಾತನ ಶೈಲಿಯ ಶೀಲಾ ಮಂಟಪದ ಮಾದರಿಯಲ್ಲಿ ಜಾತ್ರೆಯ ಮಂಟಪ ಇರಲಿದೆ.

    ಕರ್ನಾಟಕದ ಅತಿದೊಡ್ಡ ಜಾತ್ರೆಯಲ್ಲಿ ಒಂದಾದ ಮಾರಿಕಾಂಬಾ ಜಾತ್ರೆ ಮಾರ್ಚ್ 3ರಿಂದ 11ರವರೆಗೆ ನಡೆಯುವ ದೇವಿ ಜಾತ್ರೆಯ ಗದ್ದುಗೆ ಕಳೆ ತುಂಬಿಕೊಳ್ಳುತ್ತಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ದೇವಾಲಯದ ವತಿಯಿಂದ ಜಾತ್ರಾ ಗದ್ದುಗೆಗೆ ಬಣ್ಣ ಬಳಿಯುವ ಕಾರ್ಯ ನಡೆಸಿದೆ.

    ಜಾತ್ರೆ ಆರಂಭದಿಂದ ಮುಕ್ತಾಯದವರೆಗೆ ಮಾರಿಕಾಂಬೆ ವಿರಾಜಮಾನವಾಗಿ ಭಕ್ತರಿಗೆ ದರ್ಶನ ನೀಡುವ ಬಿಡಕಿ ಬೈಲಿನಲ್ಲಿರುವ ಜಾತ್ರಾ ಗದ್ದುಗೆಯೂ ಜನಾಕರ್ಷಣೆಯ ಕೇಂದ್ರವಾಗಿದ್ದು ಅದನ್ನು ಸುಂದರಗೊಳಿಸುವ ಕೆಲಸ ಆಗುತ್ತಿದೆ. ಹತ್ತಾರು ಜನರು ಗದ್ದುಗೆ, ಗೋಪುರವನ್ನು ಶುಚಿಗೊಳಿಸಿ, ಬಣ್ಣ ಬಳಿಯುತ್ತಿದ್ದಾರೆ. ಜೊತೆಗೆ ಹಣ್ಣು-ಕಾಯಿ ಮಾಡಿಸುವ ವೇಳೆ ಹಾಗೂ ದೇವಿಯ ದರ್ಶನದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಚಪ್ಪರ ನಿರ್ಮಿಸಲಾಗುತ್ತಿದೆ.

    ಗದ್ದುಗೆ ಮತ್ತು ಮುಖ ಮಂಟಪದ ಕೆಲಸಗಳು ಶೇ.50ರಷ್ಟು ಸಂಪನ್ನಗೊಂಡಿದ್ದು, ಈ ಕೆಲಸಕ್ಕಾಗಿ 50ಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚಪ್ಪರ ಕಟ್ಟುವ ಕೆಲಸವನ್ನು ಶಿರಸಿಯ ಆನಂದ ಗೌಳಿ ಜವಾಬ್ದಾರಿ ವಹಿಸಿಕೊಂಡರೆ ಇಡೀ ಜಾತ್ರೆಯನ್ನೆ ರಂಗೇರಿಸುವಂತೆ ಮಾಡುವ ಮುಖ ಮಂಟಪ ಕಟ್ಟುವ ಕಾರ್ಯಕ್ಕೆ ಉಡುಪಿಯ ರಾಜು ಅವರು ಮುಂದಾಗಿದ್ದಾರೆ. ಮಾ. 3ರಂದು ದೇವಿಯ ಕಲ್ಯಾಣೋತ್ಸವ ನಡೆಯಲಿದ್ದು, ಮಾ. 4ರಂದು ರಥೋತ್ಸವದ ಮೂಲಕ ದೇವಿ ಗದ್ದುಗೆಗೆ ಆಗಮಿಸಲಿದ್ದಾಳೆ.

    ಇದರಿಂದಾಗಿ ಗದ್ದುಗೆಯಲ್ಲಿ ಅಮ್ಮ ಬರುವ ಸಿದ್ಧತೆಗಾಗಿ ಸಕಲ ಕಾರ್ಯಗಳೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇಡಿ ಶಿರಸಿ ಜಾತ್ರೆಯ ರಂಗಿನಿಂದ ಕಂಗೊಳಿಸುತ್ತಿದ್ದು, ಅಗತ್ಯ ಸಿದ್ಧತೆಗಳು ಭರದಿಂದ ಸಾಗಿದೆ. ದೇವಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದು, ಜಾತ್ರೆಯ ಮೂಹುರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ.

  • ಹಾಸನಾಂಬೆ ಉತ್ಸವಕ್ಕೆ ದಿನಗಣನೆ – ಸಿದ್ಧತಾ ಕಾರ್ಯ ಸಾಗದ್ದಕ್ಕೆ ಭಕ್ತರ ಆಕ್ರೋಶ

    ಹಾಸನಾಂಬೆ ಉತ್ಸವಕ್ಕೆ ದಿನಗಣನೆ – ಸಿದ್ಧತಾ ಕಾರ್ಯ ಸಾಗದ್ದಕ್ಕೆ ಭಕ್ತರ ಆಕ್ರೋಶ

    ಹಾಸನ: ದಸರಾ ನಂತರ ನಡೆಯುವ ಹಾಸನದ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಸಹ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಆದರೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ.

    ತಿಂಗಳು 17ರ ಗುರುವಾರ ದೇವಿಯ ಜಾತ್ರೆ ಮಹೋತ್ಸವ ಆರಂಭ ಆಗಲಿದ್ದು. ಅಂದೇ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಇದಕ್ಕೆ ಕೇವಲ 15 ದಿನಗಳು ಮಾತ್ರ ಬಾಕಿ ಇವೆ. ನಗರದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿವೆ.

    ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಅರ್ಧ ರಸ್ತೆಯಲ್ಲಿ ಮಾತ್ರ ಸಂಚರಿಸುವ ಅನಿವಾರ್ಯತೆ ಇದೆ. ಪರಿಣಾಮ ಇಡೀ ನಗರ ತುಂಬ ಇರುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ದೇವಾಲಯಕ್ಕೆ ಸಂಪರ್ಕದ ಬಿಎಂ ರಸ್ತೆ, ಹೊಸ ಲೈನ್ ರಸ್ತೆ, ಗೊರೂರು ವೃತ್ತ, ಸೇರಿದಂತೆ ನಾಲ್ಕು ಕಡೆಗಳಿಂದಲೂ ಸಹ ಸಂಚಾರ ಸುಗಮವಾಗಿಲ್ಲ. ರಸ್ತೆಗಳ ದುರಸ್ತಿ ಕಾರ್ಯ ಆಮೆ ಗತಿಯಲ್ಲಿ ಸಾಗುತ್ತಿದೆ.

    ಎನ್ ಆರ್ ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು ಶೇ.25 ರಷ್ಟು ಕೆಲಸ ಬಾಕಿ ಇದೆ. ಉಳಿದಿರುವ ಕಾಮಗಾರಿ 15 ದಿನಗಳಲ್ಲಿ ಮುಗಿಯುವುದು ಅನುಮಾನ ಆಗಿದೆ. ಪ್ರತಿ ದಿನ 50 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಬರುವ ಹಿನ್ನಲೆ ರಸ್ತೆ ಸರಿಪಡಿಸದಿದ್ದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

    ದೇವಾಲಯ ಸುತ್ತಮುತ್ತ ರಸ್ತೆಗಳಲ್ಲಿ ಅಪಘಾತ ಉಂಟು ಮಾಡುವ ದೊಡ್ಡ ದೊಡ್ಡ ಗುಂಡಿಗಳೇ ನಿರ್ಮಾಣವಾಗಿದ್ದು, ನಗರಸಭೆ ಅಧಿಕಾರಿಗಳು ಅಲ್ಲಲ್ಲಿ ಕಲ್ಲು ಮಣ್ಣು ಸುರಿದು ಕೆಲ ರಸ್ತೆಗಳು ಬಂದ್ ಆಗಿವೆ. ಅಲ್ಲದೆ ಪ್ರತಿವರ್ಷ ಕೋಟಿ ಕೋಟಿ ಆದಾಯ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುತ್ತಿದ್ದರೂ ಜಿಲ್ಲಾಡಳಿತ ಮಾತ್ರ ದೇವಾಲಯದ ಅಭಿವೃದ್ಧಿಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೂರಾರು ವರ್ಷಗಳಿಂದ ಅಪಾರ ಭಕ್ತರನ್ನು ದೇವಾಲಯ ಹೊಂದಿದ್ದರೂ ಇಲ್ಲಿಯವರೆಗೂ ಶಾಶ್ವತ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೇವಲ ಎರಡು ವಾರ ಮಾತ್ರ ಬಾಕಿ ಇರುವಾಗ ಶೌಚಾಲಯಕ್ಕೆ ಮಾರ್ಕ್ ಮಾಡುತ್ತಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಲವಾರು ಪವಾಡಗಳನ್ನು ಹೊಂದಿರುವ ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಾಲಯಕ್ಕೆ ಕಳೆದ ಕೆಲವರ್ಷಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಇದನ್ನು ದೇವಾಲಯ ಅಭಿವೃದ್ಧಿಗೆ ಬಳಸುವ ಅವಕಾಶ ಇದ್ದರೂ ಜಿಲ್ಲಾಡಳಿತ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಿಯ ದರ್ಶನಕ್ಕೆ ಯಾವುದೇ ತೊಂದರೆಯಾಗದೆ ಕಾಮಗಾರಿ ಶೀಘ್ರವಾಗಿ ಮುಗಿಸಲಿ, ಹಾಸನಾಂಬೆ ಉತ್ಸವ ಅದ್ಧೂರಿಯಾಗಿ ಜರುಗಲಿ ಎಂಬುದು ಜನರ ಆಶಯವಾಗದೆ.

  • ಜುಲೈ 5ರ ಬಜೆಟ್‍ಗೆ ನಿರ್ಮಲಾ ಸೀತಾರಾಮನ್‍ರಿಂದ ಭಾರೀ ಸಿದ್ಧತೆ

    ಜುಲೈ 5ರ ಬಜೆಟ್‍ಗೆ ನಿರ್ಮಲಾ ಸೀತಾರಾಮನ್‍ರಿಂದ ಭಾರೀ ಸಿದ್ಧತೆ

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5ರ ಬಜೆಟ್‍ಗೆ ಭಾರೀ ಸಿದ್ಧತೆ ನಡೆಸುತ್ತಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಮೊದಲ ಬಜೆಟ್‍ನ ಪೂರ್ವಭಾವಿ ಸಲಹಾ ಸಭೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ವಲಯಕ್ಕೆ ನಿರ್ಮಲಾ ಅವರು ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಮುಂದಿನ 5 ವರ್ಷಗಳಲ್ಲಿ ರೈಲು, ರಸ್ತೆ, ಡಿಜಿಟಲ್ ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ಬರೋಬ್ಬರಿ 100 ಲಕ್ಷ ಕೋಟಿ ವೆಚ್ಚ ಮಾಡುವ ಬಜೆಟ್ ಹೊಂದಿರಲಿದೆ ಎನ್ನಲಾಗಿದೆ.

    ಈ ಮೊತ್ತದಲ್ಲಿ ಸಾರಿಗೆ ವಿಭಾಗಕ್ಕೆ ಹೆಚ್ಚು ಹಣ ಮೀಸಲು ಇರಿಸುವ ಸಾಧ್ಯತೆ ಇದ್ದು, ನಂತರ ಗೃಹ ನಿರ್ಮಾಣ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆ ಆಗಲಿದೆ. ಇದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ನಿರ್ಮಲಾ ಮತ್ತವರ ತಂಡದ ಲೆಕ್ಕಾಚಾರವಾಗಲಿದೆ.

  • ಚಾಮುಂಡೇಶ್ವರಿ ದೇವಿಯ 57 ಅಡಿ ಎತ್ತರದ ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಲು ಸಿದ್ಧತೆ

    ಚಾಮುಂಡೇಶ್ವರಿ ದೇವಿಯ 57 ಅಡಿ ಎತ್ತರದ ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಲು ಸಿದ್ಧತೆ

    ರಾಮನಗರ: ರಾಜ್ಯದಲ್ಲಿಯೇ ಅತೀ ಎತ್ತರದ ನಾಡದೇವತೆ ಚಾಮುಂಡೇಶ್ವರಿ ದೇವಿಯ 57 ಅಡಿ ಎತ್ತರದ ಪಂಚಲೋಹದ ವಿಗ್ರಹವನ್ನು ರಾಮನಗರ ಜಿಲ್ಲೆಯ -ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಲಾಗ್ತಿದೆ.

    ಗೌಡಗೆರೆಯಲ್ಲಿನ ಐತಿಹಾಸಿಕ ಹಾಗೂ ವಿಖ್ಯಾತ ಚಾಮುಂಡೇಶ್ವರಿ ಹಾಗೂ ಬಸವಣ್ಣನ ದೇವಾಲಯದ ಆವರಣದಲ್ಲಿ ಪಂಚಲೋಹ ವಿಗ್ರಹ ಪ್ರತಿಷ್ಠಾಪನೆಗೆ ಕಾರ್ಯ ನಡೆಸಲಾಗ್ತಿದೆ. ದೇವಾಲಯದ ಬಸವಣ್ಣ ಈಗಾಗಲೇ ರಾಜ್ಯದಾದ್ಯಂತ ಅಲ್ಲದೇ ಹೊರರಾಜ್ಯಗಳಲ್ಲೂ ಸಹ ಪ್ರಸಿದ್ಧಿ ಪಡೆದುಕೊಂಡಿದೆ.

    ಪಂಚಲೋಹಗಳನ್ನು ಒಳಗೊಂಡ 57 ಅಡಿ ಎತ್ತರ ಚಾಮುಂಡೇಶ್ವರಿ ವಿಗ್ರಹ ಭೂಮಿಯ ಮೇಲ್ಭಾಗದಲ್ಲಿ ಹಾಗೂ ತಳಭಾಗದಲ್ಲಿ ಸುಮಾರು 20 ಅಡಿಯ ಪೀಠವನ್ನು ನಿರ್ಮಿಸಲಾಗ್ತಿದೆ. 35 ರಿಂದ 40 ಕಲಾವಿದರು ಈ ವಿಗ್ರಹ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದು ಈಗಾಗಲೇ ಶೇ. 30ರಷ್ಟು ಕಾರ್ಯ ನೆರವೇರಿದೆ.

    ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ದೇವಿಯ ವಿಗ್ರಹವನ್ನು ನಿರ್ಮಾಣ ಮಾಡಲಾಗ್ತಿದೆ. ದೇವಿಯ ವಿಗ್ರಹ ಕಾರ್ಯಕ್ಕೆ ಭಕ್ತಾದಿಗಳು ತಮ್ಮಲ್ಲಿನ ಹಳೆಯ ಪಂಚಲೋಹಗಳನ್ನು ದಾನವಾಗಿ ನೀಡಲು ದೇವಾಲಯದ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ.

  • ಹಸಿರು ಥೀಮ್‍ನಲ್ಲಿ ಧ್ರುವ ನಿಶ್ಚಿತಾರ್ಥಕ್ಕೆ ಸಿದ್ಧತೆ – ಅತಿಥಿಗಳಾಗಿ ಬರಲಿವೆ 50 ಗೋವುಗಳು

    ಹಸಿರು ಥೀಮ್‍ನಲ್ಲಿ ಧ್ರುವ ನಿಶ್ಚಿತಾರ್ಥಕ್ಕೆ ಸಿದ್ಧತೆ – ಅತಿಥಿಗಳಾಗಿ ಬರಲಿವೆ 50 ಗೋವುಗಳು

    ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿಶ್ಚಿತಾರ್ಥ ಶಾಸ್ತ್ರಕ್ಕೆ ಅದ್ಧೂರಿಯಾಗಿ ತಯಾರಿ ನಡೆಯುತ್ತಿದೆ.

    ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದ ಆವರಣದಲ್ಲಿ ಡಿಸೆಂಬರ್ 9 ರಂದು ಅಂದರೆ ನಾಳೆ ನಡೆಯುವ ಧ್ರುವ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಸೆಟ್ ನಿರ್ಮಾಣದಲ್ಲಿ ತೊಡಗಿದ್ದಾರೆ.

    ಹಸಿರು ಥೀಮ್‍ನಲ್ಲಿ ತೆಂಗಿನ ಗರಿಗಳಿಂದ ನಿರ್ಮಾಣವಾಗುತ್ತಿರುವ ಸೆಟ್‍ಗೆ ಸಾಂಪ್ರದಾಯಿಕ ಪರಿಕರಗಳನ್ನೇ ಡೆಕೋರೇಷನ್‍ಗೆ ಉಪಯೋಗಿಸಲಾಗಿದೆ. ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಧ್ರುವ ಸರ್ಜಾ, ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಗೆ ಉಂಗುರ ತೊಡಿಸಿ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದಾರೆ.

    ಧ್ರುವ ಸರ್ಜಾ ನಿಶ್ಚಿತಾರ್ಥಕ್ಕೆ 50 ಗೋವುಗಳನ್ನ ತರಿಸಿ ಗೋ ಪೂಜೆ ಮಾಡಿ ವಿಭಿನ್ನ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಧ್ರುವ ಅವರು ವಿಶೇಷವಾಗಿ ಯೋಚಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ಜಾ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ನಟರು ಕೂಡ ಆಗಮಿಸಲಿದ್ದಾರೆ.

    ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರ ನಿಶ್ಚಿತಾರ್ಥ ಆಮಂತ್ರಣ ಪತ್ರಿಕೆಯನ್ನು ಸಿಂಪಲ್ ಆಗಿ ಮಾಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರ ಫೋಟೋ ಜೊತೆಗೆ ವಿವರಗಳನ್ನು ನೀಡಲಾಗಿದೆ. ಇದೇ ಭಾನುವಾರ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.

    ಧ್ರುವ ಹಾಗೂ ಪ್ರೇರಣಾರದ್ದು 16 ವರ್ಷದ ಪ್ರೀತಿಯಾಗಿದ್ದು, ಧ್ರುವಗೆ 16 ವರ್ಷವಿದ್ದಾಗ ಅವರು ಪ್ರೀತಿಯಲ್ಲಿ ಬಿದ್ದಿದ್ದರು. ಸದ್ಯ ಈಗ ಅವರು ಪ್ರೇರಣಾ ಜೊತೆ ಮದುವೆ ಆಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಮೈದಾನಕ್ಕೆ ಯಾವೆಲ್ಲ ವಸ್ತು ತರುವಂತಿಲ್ಲ?

    ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಮೈದಾನಕ್ಕೆ ಯಾವೆಲ್ಲ ವಸ್ತು ತರುವಂತಿಲ್ಲ?

    ಬೆಂಗಳೂರು: 72 ಸ್ವಾತಂತ್ರ್ಯ ದಿನಾಚರಣೆಗೆ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ.

    ಪೊಲೀಸ್ ಪಡೆ, ಹೊಂಗಾಡ್ರ್ಸ್, ಎನ್‍ಸಿಸಿ, ಶಾಲಾ ಮಕ್ಕಳು, ವಾದ್ಯಗೋಷ್ಠಿ ತಂಡ ಸೇರಿದಂತೆ ವಿವಿಧ ತಂಡಗಳು ಇಂದು ತಾಲೀಮು ನಡೆಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ಬೆಂಗಳೂರು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಜಂಟಿಯಾಗಿ ತಾಲೀಮು ಪರಿಶೀಲನೆ ನಡೆಸಿದರು.

    ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಮೈದಾನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಭದ್ರತೆಗಾಗಿ ಮೈದಾನದ ಸುತ್ತ 1,500 ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 9 ಡಿಸಿಪಿ, 16 ಎಸಿಪಿ, 47 ಪಿಐ, 102 ಪಿಎಸ್‍ಐ, 77 ಎಎಸ್‍ಐ, 540 ಪಿಸಿ, 75 ಮಹಿಳಾ ಸಿಬ್ಬಂದಿ, 114 ಮಪ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೈದಾನದ ಸುತ್ತ ಮುತ್ತ 56 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದರು.

    ಇಷ್ಟೇ ಅಲ್ಲದೇ 9 ಕೆಎಎಸ್‍ಆರ್‍ಪಿ ತುಕಡಿ, 5 ಸಿಎಆರ್ ತುಕಡಿ, 3 ಅಗ್ನಿಶಾಮಕ ವಾಹನ, 2 ಆಂಬುಲೆನ್ಸ್, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ-ಸ್ವಾಟ್, 1 ಆರ್ ಯಯವಿ ನಿಯೋಜನೆ, 4 ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ. ಮೈದಾನಕ್ಕೆ ಬರುವ ಸಾರ್ವಜನಿಕರು ಮೊಬೈಲ್, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್, ಶಸ್ತ್ರಾಸ್ತ್ರ, ಚಾಕು, ಚೂರಿ, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲಿ, ಬಾವುಟ, ಪಟಾಕಿ, ಸ್ಫೋಟಕ ವಸ್ತು ತರುವಂತಿಲ್ಲ ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.

    ಆಗಸ್ಟ್ 15 ರಂದು ಹಸಿರು ಕರ್ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಸಾಂಕೇತಿಕವಾಗಿ ಗಿಡ ನೆಟ್ಟು ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews