Tag: ಸಿದ್ದೇಶ್ವರ್

  • 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತ – ಸಿಎಂ ಮನೆಗೆ ಸಂಸದ ಸಿದ್ದೇಶ್ವರ್ ಮುತ್ತಿಗೆ ಎಚ್ಚರಿಕೆ

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತ – ಸಿಎಂ ಮನೆಗೆ ಸಂಸದ ಸಿದ್ದೇಶ್ವರ್ ಮುತ್ತಿಗೆ ಎಚ್ಚರಿಕೆ

    ಬೆಂಗಳೂರು: ದೇಶದಲ್ಲಿ ಇಲ್ಲಿವರೆಗೆ 16 ಕೋಟಿ 49 ಲಕ್ಷದ 73 ಸಾವಿರದ 058 ಜನರಿಗೆ ವ್ಯಾಕ್ಸಿನೇಷನ್ ಆಗಿದೆ. ಆದರೆ ವ್ಯಾಕ್ಸಿನ್ ಕೊರತೆ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡದಂತೆ ಆಸ್ಪತ್ರೆಗಳಿಗೆ ಬಿಬಿಎಂಪಿ ಆದೇಶಿಸಿದೆ.

    2ನೇ ಡೋಸ್ ನೀಡೋವ್ರಿಗೆ ಅಗತ್ಯ ವ್ಯಾಕ್ಸಿನ್ ಕೊರತೆ ಆಗಬಹುದು. ಹಾಗಾಗಿ ಮುಂದಿನ ಆದೇಶದವರೆಗೂ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಬೇಡಿ ಅಂತ ಸೂಚಿಸಿದೆ. ವ್ಯಾಕ್ಸಿನ್ ಕೊರತೆ ಇದೆ ಅನ್ನೋದು ಗೊತ್ತಿದ್ದರೂ ಕೂಡ ಅದ್ಯಾರನ್ನ ಮೆಚ್ಚಿಸೋಕೋ ಏನೋ ಸಿಎಂ ಯಡಿಯೂರಪ್ಪ ಮೇ 1 ರಂದು ಚಾಲನೆ ನೀಡಿದ್ದ ವ್ಯಾಕ್ಸಿನೇಷನ್‍ಗೆ 7 ದಿನಗಳಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ರೇಕ್ ಬಿದ್ದಿದೆ.

    ಆದರೆ 70 ಲಕ್ಷ ಜನರು ಮೊದಲ ಡೋಸ್ ಪಡೆದಿದ್ದಾರೆ. 2ನೇ ಡೋಸ್ ಪಡೆಯೋರಿಗೆ ಆದ್ಯತೆ ಮೇಲೆ ಲಸಿಕೆ ಕೊಡ್ತೀವಿ ಅಂತ ಸಚಿವ ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನ ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್‍ಗಾಗಿ ಕಿತ್ತಾಡಿ, ಕೂಗಾಡಿದ ಘಟನೆಯೂ ನಡೆದಿದೆ.

    ದಾವಣಗೆರೆಗೆ ಅಗತ್ಯ ವ್ಯಾಕ್ಸಿನ್ ನೀಡದಿದ್ದರೆ ಸಿಎಂ ಮನೆ ಮುಂದೆ ಧರಣಿ ಮಾಡ್ತೇನೆ ಅಂತ ಸಂಸದ ಸಿದ್ದೇಶ್ವರ್ ಧಮ್ಕಿ ಹಾಕಿದ್ದಾರೆ. ಈ ಮಧ್ಯೆ, ಕೊರೋನಾ ಕಾಲದಲ್ಲಿ ಮತ್ತೆ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಸಿಎಂ ಆದೇಶಿಸಿದ್ದಾರೆ. ಲಿಂಬಾವಳಿಗೆ ಕೋಲಾರ, ಶಂಕರ್‍ಗೆ ಯಾದಗಿರಿ ಮತ್ತು ಪ್ರಭು ಚೌಹಾಣ್‍ಗೆ ಬೀದರ್ ಉಸ್ತುವಾರಿ ನೀಡಿದ್ದಾರೆ.

  • ಹೈಕಮಾಂಡ್ ನನಗೆ ಸರ್ಪ್ರೈಸ್ ನೀಡಿದೆ – ಶಾಮನೂರು

    ಹೈಕಮಾಂಡ್ ನನಗೆ ಸರ್ಪ್ರೈಸ್ ನೀಡಿದೆ – ಶಾಮನೂರು

    ದಾವಣಗೆರೆ: ನನಗೆ ಗೊತ್ತಿಲ್ಲದೆ ಹೆಸರು ಘೋಷಣೆಯಾಗಿದೆ. ಹೈಕಮಾಂಡ್ ನನಗೆ ಸರ್ಪ್ರೈಸ್ ಕೊಟ್ಟಿದೆ ಎಂದು ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ, 87 ವರ್ಷದ ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

    ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಿಂದೆಯೆಲ್ಲ ವಯಸ್ಸಾಗಿದೆ. ಟಿಕೆಟ್ ನೀಡಲ್ಲ ಎಂದು ಹೇಳುತ್ತಿದ್ದರು. ಈಗ ಅವರೇ ನಮಗೆ ಟಿಕೆಟ್ ನೀಡುತ್ತಿದ್ದಾರೆ. ನಾನು ಒಂದು ಬಾರಿ ಸಂಸದನಾಗಿದ್ದೆ, 5 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇಂದು ಬೆಂಗಳೂರಿಗೆ ಹೋಗಿ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಅಲ್ಲದೆ ಮಲ್ಲಿಕಾರ್ಜುನ್‍ಗೆ ಟಿಕೆಟ್ ಕೊಡುವಂತೆ ನಾನು ಕೇಳುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ಒಂದು ಲಕ್ಷ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದು ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ ಅವರವರ ಇಷ್ಟ ಬಂದಂತೆ ಹೇಳಿದ್ದಾರೆ ಎಂದರು.

    ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಸಂಕಲ್ಪ ತೊಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಆದ್ರೆ ಈ ಬಾರಿ ಸ್ವತಃ ಶಾಮನೂರು ಅವರೇ ಕಣಕ್ಕೆ ಇಳಿದು ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಸೋತಿರುವ ಭಯದಿಂದ ಈ ಬಾರಿ ಲೋಕಸಮರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಬೀಗರ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಯಾಕೆಂದರೆ ಶಾಮನೂರು ಹಾಗೂ ಸಿದ್ದೇಶ್ವರ್ ಇಬ್ಬರೂ ಸಂಬಂಧದಲ್ಲಿ ಮಾವ-ಅಳಿಯ ಆಗುತ್ತಾರೆ. ಆದ್ರೆ ಅಳಿಯನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕ್ತಾರಾ ಮಾವ ಅನ್ನೋದನ್ನ ಕಾದು ನೋಡಬೇಕಾಗಿದೆ.

  • ಬಿಜೆಪಿ ನಾಯಕರು ಸಿದ್ದೇಶ್ವರ್ ನಿವಾಸದ ಮುಂದೆ ಮೊದಲು ಧರಣಿ ನಡೆಸಲಿ: ಜಾರಕಿಹೊಳಿ

    ಬಿಜೆಪಿ ನಾಯಕರು ಸಿದ್ದೇಶ್ವರ್ ನಿವಾಸದ ಮುಂದೆ ಮೊದಲು ಧರಣಿ ನಡೆಸಲಿ: ಜಾರಕಿಹೊಳಿ

    ಬೆಳಗಾವಿ: ಬಿಜೆಪಿ ನಾಯಕರು ಮೊದಲು ದಾವಣಗೆರೆಯ ಸಂಸದ ಸಿದ್ದೇಶ್ವರ್ ಮನೆ ಮುಂದೆ ಧರಣಿ ನಡೆಸಲಿ ಎಂದು ಸಣ್ಣ ಕೈಗಾರಿಕಾ ಮತ್ತು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಐಟಿ ದಾಳಿಗೆ ಒಳಗಾದ ಕೈ ನಾಯಕರ ವಿರುದ್ಧ ಬಿಜೆಪಿ ಪ್ರತಿಭಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಸಾಮಾನ್ಯ ಪ್ರತಿಕ್ರಿಯೆ. ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಹೀಗಾಗಿ ಬಿಜೆಪಿ ಮುಖಂಡರು ಮೊದಲ ಸಿದ್ದೇಶ್ವರ್ ಮನೆ ಮುಂದೆ ಧರಣಿ ನಡೆಸಲಿ ಎಂದರು.

    ನನ್ನ ಮನೆಯಲ್ಲಿ 3 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಹಣ ಸಿಕ್ಕಿದರೆ ರಾಜಕೀಯ ನಿವೃತ್ತಿಗೆ ಸಿದ್ಧ ಎಂದು ಈ ಹಿಂದೆ ಹೇಳಿದ್ದ ಹೇಳಿಕೆಗೆ ಈಗಲೂ ಬದ್ಧ. ಐಟಿ ಇಲಾಖೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಇದಕ್ಕೆ ನಾವು ಹೇದರಲ್ಲ ಎಂದು ತಿಳಿಸಿದರು.

    10 ಜನ ನರೇಂದ್ರ ಮೋದಿ, 10 ಅಮಿಶ್ ಶಾ ಹಾಗೂ 10 ಯಡಿಯೂರಪ್ಪ ನಂತವರು ಬಂದರೂ ನಾನು ಹೆದರಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾರ್ನಿಂಗ್‍ಗೆ ಫುಲ್ ಆ್ಯಕ್ವೀವ್ ಆಗಿರುವ ಬಿಜೆಪಿ ನಾಯಕರು ಈ ಶುಕ್ರವಾರದಿಂದಲೇ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಂದಿನ ಶುಕ್ರವಾರದಿಂದ ಸತತ ಒಂದು ವಾರ ಕಾಲ, ಐಟಿ ದಾಳಿಗೆ ಒಳಗಾದ ಇಂಧನ ಸಚಿವ ಡಿ ಕೆ ಶಿವಕುಮಾರ್, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಪಂಜಿನ ಮೆರವಣಿಗೆ, ಬೈಕ್‍ರ್ಯಾಲಿ ಮೂಲಕ ಜನ ಜಾಗೃತಿ ಮೂಡಿಸುವುದಾಗಿ ಎಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

    ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಬಿಎಸ್ ಯಡಿಯೂರಪ್ಪ, ಅಮಿತ್ ಶಾ ಎಡವಟ್ಟು!

    ಇದನ್ನೂ ಓದಿ: ಕಾಂಗ್ರೆಸ್ ಅಂಜೋದಕ್ಕೆ ಅಮಿತ್ ಶಾ ದೆವ್ವನೋ, ಭೂತನೋ?: ಉಮಾಶ್ರೀ

  • ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

    ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

    ಚಿತ್ರದುರ್ಗ: ಕೇಂದ್ರ ಮಾಜಿ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದ ಭೀಮಸಂದ್ರದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಜಿಎಂ ಸಿದ್ದೇಶ್ವರ್ ಗೆ ಸೇರಿದ ಮೂರು ಫ್ಯಾಕ್ಟರಿ ಮತ್ತು ಜಿಎಂ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ ಮೇಲೂ ದಾಳಿ ನಡೆದಿದೆ.

    ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರವಾಗಿರುವ ಜಿಎಂ ಸಿದ್ದೇಶ್ವರ್ ಈ ಹಿಂದೆ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿದ್ದರು. ಮೋದಿ ಸಂಪುಟದ ಪುನಾರಚನೆ ವೇಳೆ ಅವರನ್ನು ಕೈಬಿಡಲಾಗಿತ್ತು.