Tag: ಸಿದ್ದರಾಮಯ್ಯ

  • ‘ಸಿಎಂ ಸ್ಥಾನ ಉಳಿಸಿಕೊಳ್ಳಲು ಕೇಂದ್ರದ ಕೈ ನಾಯಕರಿಗೆ ಎಂಎಲ್‍ಸಿ ಗೋವಿಂದ್ ರಾಜ್‍ರಿಂದ 1 ಸಾವಿರ ಕೋಟಿ ದುಡ್ಡು’

    – ಬಾಗಲಕೋಟೆಯಲ್ಲಿ ಬಿಎಸ್‍ವೈ ಆರೋಪಕ್ಕೆ ಕೈ ನಾಯಕರ ತಿರುಗೇಟು

    ಬಾಗಲಕೋಟೆ/ ಬೆಂಗಳೂರು: ಸಿಎಂ ಆಪ್ತರಾಗಿರುವ ಎಂಎಲ್‍ಸಿ ಗೋವಿಂದ್‍ರಾಜ್ ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ಸಾವಿರ ಕೋಟಿಗೂ ಹೆಚ್ಚಿನ ದುಡ್ಡು ಕೊಟ್ಟಿದ್ದಾರೆ. ಇಂದೋ ನಾಳೆ ಈ ಸತ್ಯ ಹೊರಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸಿಎಂ ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು, ಜನರ ತೆರಿಗೆ ಹಣದ ಜೊತೆ ಚೆಲ್ಲಾಟವಾಡಿ, ಕಾಂಗ್ರೆಸ್ ನಾಯಕರಿಗೆ ದುಡ್ಡು ಕೊಟ್ಟಿದ್ದಾರೆ, ಈ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಲಿ ಎಂದು ಸವಾಲ್ ಎಸೆದಿದ್ದಾರೆ.

    ಗೋವಿಂದ್‍ರಾಜ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ, ಒಂದು ಡೈರಿ ಸಿಕ್ಕಿದೆ, ಸದ್ಯದಲ್ಲೇ ಸಿಬಿಐ ತನಿಖೆ ಸಹ ನಡೆಯಬಹುದು, ಸತ್ಯ ಬೆಳಕಿಗೆ ಬರಲಿದೆ ಎಂದರು.

    ಮಾಜಿ ಸಚಿವ ಶಿವರಾಜ್ ತಂಗಡಗಿ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದಾಗ, ಕಾಮಗಾರಿ ನಡೆಸದೇ 43.88 ಕೋಟಿ ರೂ ಹಣ ಗುಳುಂ ಮಾಡಿದ್ದಾರೆ, ಈ ಬಗ್ಗೆ ತನಿಖೆಯಾಗಿ ಅಕ್ರಮ ನಡೆದಿರುವುದು ಸಾಬೀತಾಗಿದ್ದರೂ ಸಿಎಂ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

    ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂ. ಸಿಕ್ಕರೂ ಅವ್ರು ಮಂತ್ರಿಸ್ಥಾನದಲ್ಲೇ ಮುಂದುವರೆದಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಚಾಟಿ ಬೀಸಿದ್ರಲ್ಲದೇ, ನನ್ನ ಬಳಿ ಇನ್ನು ಹಲವಾರು ಮಾಹಿತಿಗಳಿವೆ ಎಂದು ಹೇಳಿ ಸುದ್ದಿಗೋಷ್ಠಿ ಮುಗಿಸಿದರು.

    ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರೋ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.. ಆರೋಪವನ್ನ ರುಜುವಾತು ಮಾಡಲ್ಲಿ ಇಲ್ಲ ರಾಜಕೀಯ ನಿವೃತ್ತಿ ಪಡೆಯಲಿ ಅಂತಾ ಸವಾಲು ಎಸೆದಿದ್ದಾರೆ. ಸಾವಿರ ಕೋಟಿ ಹೈಕಮಾಂಡ್ ಗೆ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಸಿದ ಸಿಎಂ ಸಿದ್ದರಾಮಯ್ಯ,

    ಪ್ರೂವ್ ಮಾಡಲಿ: ಬಿಎಸ್‍ವೈ ನೀಡಿರುವ ಹೇಳಿಕೆಯನ್ನ ಪ್ರೂವ್ ಮಾಡಲಿ, ಇಲ್ಲವಾದರೆ ರಾಜಕೀಯಕ್ಕೆ ನಿವೃತ್ತಿ ನೀಡಲಿ ಸಿಎಂ ಸಿದ್ದರಾಮಯ್ಯ ಬಿಎಸ್‍ವೈಗೆ ಸವಾಲು ಹಾಕಿದ್ದಾರೆ.

    ಮಾನ ನಷ್ಟ ಕೇಸ್ ಹಾಕ್ಬೇಕು: ರಾಜಕೀಯದಲ್ಲಿ ಇಂತಹ ವ್ಯವಸ್ಥೆ ಬಂದುಬಿಟ್ಟಿದೆ. ಒಂದಿಬ್ಬರ ಮೇಲೆ ಮಾನನಷ್ಟ ಕೇಸ್ ಹಾಕಿದ್ರೆ ಎಲ್ಲವೂ ಬಂದ್ ಆಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

  • ಅಂತೂ ಕಾಂಗ್ರೆಸ್ ಬತ್ತಳಿಕೆ ಸೇರಿತು ಜೆಡಿಎಸ್ ಬ್ರಹ್ಮಾಸ್ತ್ರ

    ಕೆಪಿ ನಾಗರಾಜ್
    ನಂಜನಗೂಡಿನ ಪ್ರಭಾವಿ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವುದು ಅಧಿಕೃತವಾಗಿದೆ. ಯಾವಾಗ ಎಂಬ ದಿನಾಂಕ ಮಾತ್ರ ನಿರ್ಧಾರವಾಗಬೇಕಿದೆ. ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದೆ ಪಬ್ಲಿಕ್ ಟಿವಿ ವೆಬ್‍ಸೈಟ್. ಒಂದು ತಿಂಗಳ ಹಿಂದೆಯೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ಈ ಸುದ್ದಿ ಬರೆಯಲಾಗಿತ್ತು. ಇವತ್ತು, ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

    ನಂಜನಗೂಡಿನಲ್ಲಿ ಸಭೆ ನಡೆಸಿದ ಕಳಲೆ ಕೇಶವಮೂರ್ತಿ ತಾವು ತಮ್ಮ ಹಿತೈಷಿಗಳ ಅಭಿಪ್ರಾಯದಂತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಂಜನಗೂಡು ಉಪ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ವಿರುದ್ಧ ತಾವೇ ಕಾಂಗ್ರೆಸ್‍ನ ಅಭ್ಯರ್ಥಿ ಎಂಬುದನ್ನು ಹೇಳಿದ್ದಾರೆ. ಹೀಗಾಗಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯೋ ಪ್ಲಾನ್ ನಡೆಸಿದ್ದ ಮೂಲ ಕಾಂಗ್ರೆಸಿಗರ ಕನಸಿಗೆ ತಣ್ಣೀರು ಎರಚಿದಂತಾಗಿದೆ.

    ಈ ಉಪ ಚುನಾವಣೆಯಲ್ಲೆ ತಮ್ಮ ಮಗನಿಗೆ ಚುನಾವಣಾ `ಟ್ರಯಲ್’ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ, ಮಹದೇವಪ್ಪ ಅಂದುಕೊಂಡಿದ್ದರು. ಇದಕ್ಕಾಗಿ, ನಂಜನಗೂಡು ಕ್ಷೇತ್ರದ ಹಳ್ಳಿ ಹಳ್ಳಿಯನ್ನು ಸುತ್ತಿದ್ದರು. ಯಾರೇ ಅಭ್ಯರ್ಥಿ ಆದರೂ ತಾವೇ ಓಡಾಟ ಮಾಡಬೇಕು. ಹಣ ವೆಚ್ಚ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ ತಮ್ಮ ಮಗನಿಗೆ ಯಾಕೆ ಟಿಕೆಟ್ ಕೊಡಿಸಿ ಒಂದು ಟ್ರಯಲ್ ನೋಡಬಾರದು. ಗೆದ್ದರೆ ಮಗ ಶಾಸಕ, ಸೋತರೆ ಮಗನಿಗೆ ಒಂದು ಕ್ಷೇತ್ರ ಸಿಕ್ಕಂತಾಗುತ್ತೆ. ಜೊತೆಗೆ ಚುನಾವಣೆ ಎದುರಿಸೋ ಅನುಭವವಾಗುತ್ತೆ ಅನ್ನೋದು ಮಹದೇವಪ್ಪ ಅವರ ಪ್ಲಾನ್ ಆಗಿತ್ತು.

    ಆದರೆ, ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸಚಿವರ ಮಗ ಸುನೀಲ್‍ಬೋಸ್‍ಗೆ ಟಿಕೆಟ್ ಕೊಡೋ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಶ್ರೀನಿವಾಸಪ್ರಸಾದ್ ಅಂತಹ ಹಿರಿಯ ರಾಜಕಾರಣಿ ಮುಂದೆ ಸುನೀಲ್‍ಬೋಸ್ ಸ್ಪರ್ಧಿಸಿದರೆ ಸೋಲಿನ ಜೊತೆಗೆ ದೊಡ್ಡ ಅವಮಾನ ಎದುರಿಸಬೇಕಾಗುತ್ತೆ. ಹೀಗಾಗಿ, ಸುನೀಲ್‍ಬೋಸ್‍ಗೆ ಟಿಕೆಟ್ ಬೇಡ ಅನ್ನೋ ಕೂಗು ಎದ್ದಿತ್ತು. ಈ ಕೂಗಿಗೆ ಚಾಮರಾಜನಗರ ಸಂಸದ ಧೃವನಾರಾಯಣ್ ಕೂಡ ಧ್ವನಿ ಸೇರಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ, ಮಹದೇವಪ್ಪಗೆ ಮಗನನ್ನು ಕಣಕ್ಕೆ ಇಳಿಸೋ ಯೋಚನೆ ಕೈ ಬಿಡುವಂತೆ ಹೇಳಿದ್ದರು. ಇದರಿಂದ, ಮಹದೇವಪ್ಪ ಬೇಸರಕ್ಕೆ ಒಳಗಾಗಿದ್ದು ಈಗ ಕ್ಷೇತ್ರದಲ್ಲಿ ಗುಟ್ಟಾಗಿ ಉಳಿದಿಲ್ಲ.

    ಪ್ರತಿಷ್ಠೆಯ ಮಹಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿಗಾಗಿ ಕವಡೆ ಬೀಡುತ್ತಿದ್ದ ಸಿಎಂ ಟೀಂ ಈಗ ಯಶಸ್ವಿಯಾಗಿ ಆಪರೇಷನ್ ಕಾಂಗ್ರೆಸ್ ನಡೆಸಿದೆ. ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಲು ನಿರ್ಧರಿಸಿದೆ. ಇದನ್ನು ಒಪ್ಪಿದ ಕಳಲೆ ಕೇಶವಮೂರ್ತಿ ಇವತ್ತು ಜೆಡಿಎಸ್‍ಗೆ ಗುಡ್ ಬೈ ಹೇಳಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ, ಶ್ರೀನಿವಾಸಪ್ರಸಾದ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಈ ಭಾಗದ ದಲಿತ, ಲಿಂಗಾಯತ ಹಾಗೂ ಒಕ್ಕಲಿಗ ಮತದಾರರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರೋ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಚುನಾವಣೆಯಲ್ಲಿ ಲಾಭವಾಗುತ್ತೆ ಅನ್ನೊ ಲೆಕ್ಕಚಾರ ದಿಂದ ಕಾಂಗ್ರೆಸ್ ಕಳಲೆ ಕೇಶವಮೂರ್ತಿಗೆ ಮಣೆ ಹಾಕಿದೆ.

    ಅಲ್ಲದೆ, ಕಳಲೆ ಕೇಶವಮೂರ್ತಿ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ಇಳಿಯೋ ಕಾರಣ ಜೆಡಿಎಸ್‍ಗೆ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ. ತಮ್ಮ ಬತ್ತಳಿಕೆಯಲ್ಲಿನ ಪ್ರಬಲ ಆಸ್ತ್ರವೇ ಕಾಂಗ್ರೆಸ್‍ಗೆ ಹೋಗಿರೋ ಕಾರಣ ಜೆಡಿಎಸ್ ಮೌನವಾಗಿಯೆ ಕಣದಿಂದ ಹಿಂದೆ ಸರಿಯುತ್ತಾರೆ. ಇದರಿಂದ ಜೆಡಿಎಸ್ ಮತಗಳು ಕೇಶವಮೂರ್ತಿ ವರ್ಚಸ್ಸಿನಿಂದ ಕಾಂಗ್ರೆಸ್‍ಗೆ ಬರುತ್ತೆ ಅನ್ನೋ ಲೆಕ್ಕ ಹಾಕಿಯೇ ಸಿಎಂ ಟೀಂ, ಕಳಲೆ ಕೇಶವಮೂರ್ತಿಯನ್ನು ಅಭ್ಯರ್ಥಿ ಮಾಡಲು ಮುಂದಾಗಿದೆ.

    ಅಲ್ಲಿಗೆ, ಕಳೆದ ಚುನಾವಣೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಯಾರು ಪ್ರಬಲ ಪೈಪೋಟಿ ನೀಡಿದ್ದರೋ ಅವರೆ ಇವತ್ತು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಯೋದು ನಿಶ್ಚಿತ. ಕಾಂಗ್ರೆಸ್‍ನ ಈ ಆಪರೇಷನ್ ಲೆಕ್ಕಚಾರಗಳು ವರ್ಕ್ ಔಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಗೋಕೆ ಇನ್ನೂ ಎರಡು ತಿಂಗಳು ಕಾಯಬೇಕಿದೆ.

  • ಇಂದಿನಿಂದ ವಿಧಾನಮಂಡಲ ಅಧಿವೇಶನ – ನಾಳೆ ಮಾರ್ದನಿಸಲಿದೆ ಐಟಿ ರೇಡ್, ದೌರ್ಜನ್ಯ ಪ್ರಕರಣ

    ಬೆಂಗಳೂರು: ಇಂದು ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಅಧಿವೇಶನದಲ್ಲಿ ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಬಗ್ಗೆ, ಬರ ನಿರ್ವಹಣೆಯ ಬಗ್ಗೆ ಚರ್ಚೆ ಕಾವೇರುವ ಸಾಧ್ಯತೆ ಇದೆ.

    ವರ್ಷದ ಕೊನೆಯಿಂದಲೇ ಚುನಾವಣಾ ಜ್ವರ ಆರಂಭವಾಗಲಿದ್ದು, ಈ ದೃಷ್ಟಿಯಲ್ಲಿ ಸರ್ಕಾರದ ಯೋಜನೆ, ನೀಲಿ ನಕ್ಷೆ ಏನು ಅನ್ನೋದು ರಾಜ್ಯಪಾಲರ ಭಾಷಣದಲ್ಲಿ ಅಡಕವಾಗಿರುತ್ತೆ. ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಜು ಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದ್ದು, ನಾಳೆಯಿಂದ ಶುಕ್ರವಾರದವರೆಗೆ ಕಲಾಪಗಳು ನಡೆಯಲಿವೆ.

    ಸರ್ಕಾರದ ವಿರುದ್ಧ `ಐಟಿ’ ಅಸ್ತ್ರ!: ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಬಗ್ಗೆ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆ ನಡೆಯಲಿದೆ. ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲಿನ ಐಟಿ ದಾಳಿಯನ್ನು ವಿಪಕ್ಷಗಳು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲಿವೆ. ಇದರ ಜೊತೆಗೆ ಬರಗಾಲದ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಕಪ್ಪತಗುಡ್ಡ ವಿವಾದ ಕೂಡ ಪ್ರತಿಧ್ವನಿಸಲಿದೆ.

    ಇದರೊಂದಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ತಿದ್ದುಪಡಿ ವಿಧೇಯಕ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ಕಲಾಪದ ಮಧ್ಯೆ ಎಸ್‍ಎಂ ಕೃಷ್ಣ ರಾಜೀನಾಮೆ ಸೇರಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗಗಳೂ ಚರ್ಚೆಗೆ ಬರಲಿವೆ. ಈ ನಡುವೆ ಕೇವಲ 5 ದಿನ ಅಧಿವೇಶನ ನಡೆಸುತ್ತಿರುವುದಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

  • ಯಾದಗಿರಿ: ಸಿಎಂ ಬರ್ತಾರೆ ಅಂತ ರಾತ್ರೋರಾತ್ರಿ ರಸ್ತೆಗೆ ಟಾರು

    ಯಾದಗಿರಿ: ಜಿಲ್ಲೆಯ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿರೋ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿ ವರ್ಗ ರಾತ್ರೋರಾತ್ರಿ ರಸ್ತೆಗೆ ಟಾರ್ ಹಾಕಿಸಿದ್ದಾರೆ.

    ಕಳೆದ 2-3 ವರ್ಷಗಳಿಂದ ತಗ್ಗು ಗುಂಡಿಗಳಿಂದ ಕೂಡಿದ ಟಾರ್ ಕಾಣದ ರಸ್ತೆಗಳೀಗ ಥಳಥಳ ಫಳಫಳ ಹೊಳೆಯುವಂತೆ ಮಾಡಿದ್ದಾರೆ. ಗ್ರಾಮೀಣ ಭಾಗದ ಮತ್ತು ನಗರದ ಇತರೆ ರಸ್ತೆಗಳು ಹಾಳಾದರೂ ಹೊರಳಿ ನೋಡದ ಅಧಿಕಾರಿಗಳು, ಸಿಎಂ ಮೆಚ್ಚಿಸಲು ಮಾಡಿದ ಈ ಕ್ರಮ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಯಾದಗಿರಿ ಜಿಲ್ಲೆಗೆ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣವಾಗಿ 6 ತಿಂಗಳಾಯ್ತು. ಎರಡು ಮೂರು ಬಾರಿ ಟೇಪ್ ಕತ್ತರಿಸಲು ಸಮಯ ನಿಗದಿ ಮಾಡಿ ಮುಂದಕ್ಕೆ ಹಾಕಿದ್ರು. ಇಂದು ಸಿದ್ದರಾಮಯ್ಯನವರು ಸಮಯ ಕೊಟ್ರು. ಅದಕ್ಕೆ ಮುಖ್ಯಮಂತ್ರಿಗಳನ್ನ ಮೆಚ್ಚಿಸೋಕೆ ರಾತ್ರೋರಾತ್ರಿ ರಸ್ತೆಗೆ ಟಾರ್ ಹಾಕಿದ್ದಾರೆ. ಬಣ್ಣನೂ ಬಳಿದು ಫಳಫಳ ಮಿಂಚಿಸಿದ್ದಾರೆ.

    ಆದ್ರೆ ಪ್ರಶ್ನೆ ಇರೋದು ಇಲ್ಲೇ. ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ 60 ಹಳ್ಳಿಗಳ ರಸ್ತೆಗಳು ಟಾರನ್ನೇ ನೋಡಿಲ್ಲ. ವಡಗೇರಾ ರಸ್ತೆ ಕೆಲಸ 5 ವರ್ಷದಿಂದ ಆಗ್ತಿದೆ. ಆದ್ರೆ ಮುಖ್ಯಮಂತ್ರಿಗಳನ್ನ ಮೆಚ್ಚಿಸೋಕೆ ಇಂಥಾ ಕೆಲಸ ಮಾಡ್ಬೇಕಾ ಅನ್ನೋದು ಜನರ ಪ್ರಶ್ನೆ. ಈ ಬಗ್ಗೆ ಸಚಿವರನ್ನ ಕೇಳಿದ್ರೆ, ಆಯ್ತು ಬಿಡಿ ಬೇಗ ಸರಿಮಾಡಿಸೋಣ ಅಂತಾರೆ.

    ನಮ್ಮ ಮುಖ್ಯಮಂತ್ರಿಗಳಿಗೆ ನಿಜಕ್ಕೂ ಜನಪರ ಕಾಳಜಿ ಇದ್ರೆ, ಇವತ್ತು ಹಳ್ಳಿಗಳ ರಸ್ತೆ ಕಡೆ ಹೋಗಿ ಬರ್ಲಿ. ಆಗ ಅಧಿಕಾರಿಗಳ ಬಣ್ಣ ಬಯಲಾಗುತ್ತೆ ಅಂತಾರೆ ಇಲ್ಲಿನ ಜನ.

  • ಕಾಗೆ, ಗೂಬೆ ಆಯ್ತು, ಈಗ ಹಾವು: ವಿಧಾನಸೌಧದಲ್ಲಿ ಬುಸ್ ಎಂದ ನಾಗರಹಾವು

    ಬೆಂಗಳೂರು: ಕಾಗೆ ಆಯ್ತು, ಗೂಬೆ ಆಯ್ತು, ಈಗ ಹಾವಿನ ಸರದಿ. ವಿಧಾನಸೌಧದ ಆವರಣದಲ್ಲಿ ನಾಗರಹಾವು ಕಾಣಿಸಿಕೊಂಡಿದೆ.

    ನಾರ್ಥ್ ಗೇಟ್‍ನ ಲಾನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಜನ ಸೇರಿದ ಕೂಡಲೇ ಹಾವು ಬಿಲದ ಒಳಗಡೆ ಸೇರಿಕೊಂಡಿತು.

    ಈ ಹಿಂದೆ ಸಿಎಂ ಸಿದ್ದರಾಮಯ್ಯನವರ ಫಾರ್ಚುನರ್ ಕಾರು ಮೇಲೆ ಕಾಗೆಯೊಂದು ಕುಳಿತುಕೊಂಡಿತ್ತು. ಎರಡು ವಾರದ ಹಿಂದೆ ಕೇರಳದ ಮಂಜೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರ ಪಂಚೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಈ ಮಧ್ಯೆ ಗೂಬೆಯೂ ಬಂದಿತ್ತು. ಈ ಮೂರು ವಿಚಾರದ ಬಗ್ಗೆ ವಿಧಾನಸೌಧದ ಸಿಬ್ಬಂದಿ ಮಾತನಾಡುತ್ತಿದ್ದರು. ಈಗ ಈ ಚರ್ಚೆಗೆ ನಾಗರಹಾವು ವಿಷಯ ಹೊಸದಾಗಿ ಸೇರ್ಪಡೆಯಾಗಿದೆ.

    ಇದನ್ನೂ ಓದಿ:ಕಾಗೆ ಹಿಕ್ಕೆ ಹಾಕಿದ ವಿಷಯದ ಬಗ್ಗೆ ಸಿಎಂ ಹೀಗಂದ್ರು!

    https://www.youtube.com/watch?v=hbmbFBDlBsQ

    https://www.youtube.com/watch?v=7kkETPn6ThA

    https://www.youtube.com/watch?v=uuT-NXjnhhU

  • ಫಲಾನುಭವಿಯೊಬ್ಬರ ಮೀಸೆ ತಿರುವಿ ಸಂತೋಷ ಪಟ್ಟ ಸಿಎಂ

    ಮೈಸೂರು:  ಸಿಎಂ ಸಿದ್ದಾಮಯ್ಯ ಫಲಾನುಭವಿಯೊಬ್ಬರ ಮೀಸೆಯನ್ನು ತಿರುವಿ ಸಂತೋಷಪಟ್ಟಿದ್ದಾರೆ.

    ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆದಿವಾಸಿಗಳಿಗೆ ಸವಲತ್ತು ವಿತರಣಾ ಬೃಹತ್ ಸಮಾವೇಶ ಬುಧವಾರ ನಡೆಯಿತು.

    ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಗ, ಜೇನುಕುರುಬ, ಮಲೆಕುಡಿಯ, ಕೊರಗ, ಸಿದ್ಧಿ ಸೇರಿದಂತೆ 13 ಆದಿವಾಸಿ ಸಮುದಾಯದ ಜನರಿಗೆ ಪೌಷ್ಠಿಕ ಆಹಾರ ಸೇರಿದಂತೆ ಮೊದಲಾದ ಸವಲತ್ತುಗಳನ್ನು ವಿತರಿಸಿದರು.

    ಈ ವೇಳೆ ಹಕ್ಕು ಪತ್ರ ಪಡೆಯಲು ಬಂದಿದ್ದ ಫಲಾನುಭವಿಯೊಬ್ಬರ ಮೀಸೆಯನ್ನು ಸಿಎಂ ತಿರುವಿದರು. ಸಚಿವ ಹೆಚ್.ಆಂಜನೇಯ, ಡಾ.ಹೆಚ್.ಸಿ.ಮಹದೇವಪ್ಪ, ರಮಾನಾಥ ರೈ ಹಾಗೂ ತನ್ವೀರ್ ಸೇಠ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.