Tag: ಸಿದ್ದರಾಮಯ್ಯ

  • 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಠೇವಣಿ ಕಳೆದುಕೊಳ್ಳುತ್ತಾರೆ: ಸಿ.ಟಿ.ರವಿ

    2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಠೇವಣಿ ಕಳೆದುಕೊಳ್ಳುತ್ತಾರೆ: ಸಿ.ಟಿ.ರವಿ

    – ಎಸಿಬಿ ಆಲ್ ಕಲೆಕ್ಷನ್ ಬ್ಯುರೋ ಆಗಿದೆ

    ರಾಯಚೂರು: ಮಾರ್ಚ್ 11ರ ನಂತರ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ರಾಜಕೀಯ ಧೃವೀಕರಣ ನಡೆಯಲಿದೆ. ಉತ್ತರ ಪ್ರದೇಶದ ಫಲಿತಾಂಶದ ಬಳಿಕ ಬೇರೆ ಬೇರೆ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ

    ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಯುತ್ತಿದೆ. ನಾವು ಸ್ಟೀಲ್ ಬ್ರಿಡ್ಜ್ ವಿರೋಧಿಗಳಲ್ಲ. 1300 ಕೋಟಿ ಯೋಜನೆಯನ್ನು 2100 ಕೋಟಿ ರೂ. ಗೆ ಕಾಮಗಾರಿ ಕೊಡಲು ಸರ್ಕಾರ ಮುಂದಾಗಿತ್ತು. ಮುಂಗಡವಾಗಿ 65 ಕೋಟಿ ಕಪ್ಪ ತೆಗೆದುಕೊಂಡಿದ್ದಕ್ಕೆ ನಾವು ಈ ಯೋಜನೆಯನ್ನು ವಿರೋಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಠೇವಣಿ ಹೋಗುತ್ತೆ: ಹೈಕಮಾಂಡ್ ಗೆ ಕಪ್ಪ ನೀಡಿದ ದಾಖಲೆಯ ಡೈರಿ ನಕಲು ಅಲ್ಲ. ಯಾವ ತನಿಖೆ ಬೇಕಾದ್ರು ನಡೆಸಲಿ ಯಾರು ಯಾರು ಎಷ್ಟು ಹಣ ತಿಂದಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಸಿಎಂ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಅಂತಿದ್ದಾರೆ. ಆದ್ರೆ ಅವರ ಹತ್ತಿರ ನಷ್ಟವಾಗಲು ಏನೂ ಉಳಿದಿಲ್ಲ. ಉಳಿದಿರುವುದು ಠೇವಣಿ ಒಂದೇ. ಅದನ್ನೂ 2018 ರ ಚುನಾವಣೆಯಲ್ಲಿ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.

    ಕಲೆಕ್ಷನ್ ಬ್ಯುರೋ: ಎಸಿಬಿ ಯಲ್ಲಿ ಹಲವು ಆರೋಪ ಹೊತ್ತಿರುವವರೇ ಸ್ಥಾನಪಡೆಯುತ್ತಿದ್ದಾರೆ. ದಾಳಿಗೊಳಗಾದವರು ಆಯಾಕಟ್ಟಿನ ಹುದ್ದೆಗಳನ್ನ ಪಡೆಯುತ್ತಾರೆ. ಹೀಗಾಗಿ ಎಸಿಬಿ ಆಲ್ ಕಲೆಕ್ಷನ್ ಬ್ಯೂರೋ ಆಗಿದೆ. ಎಸಿಬಿಯನ್ನು ಕೈಬಿಟ್ಟು ಲೋಕಾಯುಕ್ತವನ್ನು ಬಲಪಡಿಸಿಕೊಡಿ ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ರು.

    ಸಾಲ ಮನ್ನಾ ಮಾಡಲಿ: ರಾಜ್ಯದ 160 ತಾಲೂಕಿನಲ್ಲಿ ಭೀಕರ ಬರಗಾಲವಿದೆ. ಹೀಗಾಗಿ ರಾಜ್ಯಸರ್ಕಾರ ಮೊದಲು ತನ್ನ ಕರ್ತವ್ಯ ನಿರ್ವಹಿಸಲಿ. ತನ್ನ ಪಾಲಿನ ಸಾಲ ಮನ್ನಾ ಮಾಡಲಿ. ರಾಜ್ಯ ನಿಯೋಗದ ಜೊತೆ ನಾವು ಕೇಂದ್ರಕ್ಕೆ ಒತ್ತಡ ಹೇರುತ್ತೇವೆ ಅಂತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

  • ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಬೆಂಗಳೂರು: ವಿವಾದಿತ ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಯೋಜನೆಯನ್ನು ಕೈಬಿಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ.

    ಕಪ್ಪ ಡೈರಿಯ ವಿಚಾರವಾಗಿ ಆರೋಪ ಮಾಡಿದ್ದ ಬಿಜೆಪಿಗೆ ತಿರುಗೇಟು ನೀಡಲು ಸಿದ್ದು ಮಾಸ್ಟರ್‍ಪ್ಲಾನ್ ಮಾಡಿದ್ದು, ಅಚ್ಚರಿಯ ತೀರ್ಮಾನ ಪ್ರಕಟಿಸಲು ಸಜ್ಜಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.

    ಸ್ಟೀಲ್ ಬ್ರಿಡ್ಜ್ ಸಂಬಂಧ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದ್ರು. ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪಿಸಿದ್ದರು.

    ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಸಿಲುಕ್ಕಿದ್ದ ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ಸ್ಟೀಲ್‍ ಬ್ರಿಡ್ಜ್ ನಿರ್ಮಾಣವನ್ನೇ ಕೈಬಿಡಲು ತೀರ್ಮಾನ ಮಾಡಿದ್ದು, ಆರೋಪ ಮಾಡಿದ್ದ ಬಿಜೆಪಿಗೆ ಟಾಂಗ್ ಕೊಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1856 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ ಬ್ರಿಡ್ಜ್ ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.

  • ಕರ್ನಾಟಕ ಸಿಎಂಗೆ ಕೇರಳ ಸಿಎಂ ಧನ್ಯವಾದ!

    ಕರ್ನಾಟಕ ಸಿಎಂಗೆ ಕೇರಳ ಸಿಎಂ ಧನ್ಯವಾದ!

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೋಮು ಸೌಹಾರ್ದ ಸಮಾವೇಶಕ್ಕೆ ರಾಜ್ಯ ಸರ್ಕಾರ ಭದ್ರತೆ ಒದಗಿಸಿದ ಹಿನ್ನೆಲೆಯಲ್ಲಿ ಕೇರಳ ಸಿಎಂ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಹಾಜರಾಗುವುದಕ್ಕೆ ಆರ್‍ಎಸ್‍ಎಸ್ ವಿರೋಧ ವ್ಯಕ್ತಪಡಿಸಿದ ಕುರಿತು ಪಿಣರಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಆರ್‍ಎಸ್‍ಎಸ್‍ನ ಈ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದದ್ದು ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಏನಿದು ಘಟನೆ: ಫೆ.25ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೃಹತ್ ಕೋಮುಸೌಹಾರ್ದ ಸಮಾವೇಶ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸಿ ಭಾಷಣ ಮಾಡಿದ್ದರು. ಆದ್ರೆ ಇದಕ್ಕೂ ಮೊದಲು ಸಂಘಪರಿವಾರ ಪಿಣರಾಯಿ ಆಗಮನ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಹೀಗಾಗಿ ಪಿಣರಾಯಿ ಮಂಗಳೂರಿಗೆ ಬರದಂತೆ ತಡೆಯಲು ಜಿಲ್ಲೆಯಾದ್ಯಂತ ಬಂದ್‍ಗೆ ಕರೆ ನೀಡಿದ್ದರು.

    ಆದ್ರೆ ಕಾರ್ಯಕ್ರಮದಲ್ಲಿ ಯಾವುದೇ ಅಹಿತರ ಘಟನೆ ಸಂಭವಿಸಬಾರದೆಂದು ಸರ್ಕಾರ ಮಂಗಳೂ ಕಮಿಷನರ್ ವ್ಯಾಪ್ತಿಯಲ್ಲಿ 144ಸೆಕ್ಷನ್ ಜಾರಿ ಮಾಡಿತ್ತು. ಮಾತ್ರವಲ್ಲದೇ 3 ಸಾವಿರಕ್ಕಿಂತಲೂ ಅಧಿಕ ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. 600 ಸಿಸಿ ಕ್ಯಾಮೆರಾ ಹಾಗೂ 60 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.

  • ಅದು ಫೇಕ್ ಡೈರಿ: ಯಾರು ಹೇಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು?

    ಅದು ಫೇಕ್ ಡೈರಿ: ಯಾರು ಹೇಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು?

    ಬೆಂಗಳೂರು: ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಈ ಷಡ್ಯಂತ್ರದಲ್ಲಿ ರಾಜ್ಯ ಬಿಜೆಪಿ ಜೊತೆ ಕೇಂದ್ರದ ಬಿಜೆಪಿಯೂ ಕೈಜೋಡಿಸಿದೆ. ಆದರೆ ಬಿಜೆಪಿಯವರು ತಮ್ಮ ಷಡ್ಯಂತ್ರದಲ್ಲಿ ಯಶಸ್ವಿಯಾಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಎಂಎಲ್‍ಸಿ ಗೋವಿಂದರಾಜು ನಿವಾಸದಲ್ಲಿ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿಯ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಿಎಂ ಕಪ್ಪ ಕೊಟ್ಟಿರುವ ಬಗ್ಗೆ ಡೈರಿ ಆಧಾರರಹಿತವಾಗಿ ಬಿಜೆಪಿ ಆರೋಪಿಸುತ್ತದೆ ಎಂದು ತಿರುಗೇಟು ನೀಡಿದರು.

    ಸಮನ್ವಯ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ನಾಲ್ಕು ವರ್ಷ ಪೂರೈಸಿರುವ ಸಚಿವರನ್ನು ಕೈ ಬಿಡುವ ಪ್ರಶ್ನೆಯಿಲ್ಲ. ಇದು ಮಾಧ್ಯಮದವರ ಸೃಷ್ಟಿ ಎಂದು ಸಿಎಂ ಹೇಳಿದರು.

    ಕೇಂದ್ರಕ್ಕೆ ಸವಾಲು: ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಫೇಕ್ ಡೈರಿ ವಿಚಾರವನ್ನು ಮುಂದಿಟ್ಟುಕೊಂಡು ವಾದ ಮಾಡುತ್ತಿದ್ದು, ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಬಿಡುಗಡೆ ಮಾಡಲಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸವಾಲು ಹಾಕಿದರು.

    ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಆಲೋಚಿಸದೇ ಆಧಾರ ಇಲ್ಲದ ಸುಳ್ಳು ಡೈರಿ ಇಟ್ಟುಕೊಂಡು ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಲೆಹರ್ ಸಿಂಗ್ ಮನೆಯಲ್ಲಿ ಸಿಕ್ಕ ಡೈರಿ ಬಗ್ಗೆ ಯಾಕೆ ಬಿಜೆಪಿ ಮಾತನಾಡುತ್ತಿಲ್ಲ. ಮೋದಿ ಗುಜರಾತ್ ಸಿಎಂ ಆದಾಗ ಸಹರಾ ಬಿರ್ಲಾ ಕಂಪನಿಯಿಂದ ಪಡೆದ 40 ಕೋಟಿ ಡೈರಿಯ ಬಗ್ಗೆ ಬಿಜೆಪಿಯವರು ಮಾತಾಡುತ್ತಿಲ್ಲ ಯಾಕೆ? ಅನಂತಕುಮಾರ್ ಬಿಎಸ್‍ವೈ ಮಾತನಾಡಿರುವ ಸಿಡಿ ಬಗ್ಗೆ ಮಾತಾನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ತನಿಖೆ ನಡೆಸಲು ಕೇಂದ್ರಕ್ಕೆ ಅಧಿಕಾರವಿದ್ದು, ಸರ್ಕಾರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

    ಫೇಕ್ ಡೈರಿ: ಕಪ್ಪ ಕೊಟ್ಟಿರುವ ಡೈರಿ ಪ್ರಕರಣ ತುಂಬಾ ಹಳೆಯದು. ಗೋವಿಂದ ರಾಜು ಅವರು ಏನು ತಪ್ಪು ಮಾಡಿಲ್ಲ. ನನಗೆ ಈ ಹಿಂದೆಯೇ ಐಟಿ ಡೈರಿ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿತ್ತು. ಇದು ಫೇಕ್ ಡೈರಿ. ಆ ಬಗ್ಗೆ ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟವಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದೆ. ರೇಡ್ ಆಗಿ ಒಂದು ಐಟಿ ನೋಟಿಸ್ ಜಾರಿ ಆದ್ರೆ ನಾವು ತಪ್ಪಿತಸ್ಥರೇ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

    ಈ ರೀತಿಯ ಡೈರಿ ನೂರು ಬರಲಿ ಕಾಂಗ್ರೆಸ್ಸಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಅವರಿಗೆ ಅವರ ಯೋಜನೆಗಳನ್ನು ಇಟ್ಟುಕೊಂಡು ಹೋರಾಟ ಮಾಡಲಿ. ನಾವು ನಮ್ಮ ಹೋರಾಟ ಮಾಡುತ್ತೇವೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಪಕ್ಷ ಏನು ಕೆಲಸ ಕೊಡುತ್ತದೆ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.

    ಶಿಸ್ತಿನ ಸಿಪಾಯಿ: ಹಿರಿಯ ಸಚಿವರನ್ನ ಸಂಪುಟದಿಂದ ಕೈ ಬಿಡುವ ವಿಚಾರದ ಬಗ್ಗೆ ಮಾತನಾಡಿ, ಪಕ್ಷದಲ್ಲಿ ನಾವು ಶಿಸ್ತಿನ ಸಿಪಾಯಿಗಳಾಗಿದ್ದು, ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಸರ್ಕಾರದ ಅಸ್ತಿತ್ವ ಕೆಡಿಸಲು ಬಿಜೆಪಿ ಯತ್ನಿಸುತ್ತಿದ್ದು. ಮಾಧ್ಯಮಗಳು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದರು.

    ಬಿಜೆಪಿಯ ಆರೋಪಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಸರಿಯಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಸಚಿವರನ್ನು ತೆಗೆಯುವುದು, ಬಿಡುವುದು ಸಿಎಂಗೆ ಸೇರಿದ್ದು. ನಾನು ಶಿಸ್ತಿನ ಸಿಪಾಯಿಯಾಗಿದ್ದು ನಾನು ಸರ್ಕಾರದ ಕೆಲಸಕ್ಕೂ ಸಿದ್ಧ. ಪಕ್ಷದ ಕೆಲಸಕ್ಕೂ ಬದ್ಧವಾಗಿದ್ದೇನೆ. ಸಚಿವರನ್ನು ಕೈಬಿಡುವ ವಿಚಾರ ಊಹಾಪೋಹವಾಗಿದ್ದು ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಸಮನ್ವಯ ಸಮಿತಿ ಸಭೆ ಡೈರಿಗಾಗಿ ಕರೆದಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

  • ಈ ಕಾರಣಕ್ಕೆ ಈಗ ಬಿಎಸ್‍ವೈ ಸಿದ್ದು ಟೀಂ ಹಗರಣದ ದಾಖಲೆ ರಿಲೀಸ್ ಮಾಡಲ್ಲ

    ಈ ಕಾರಣಕ್ಕೆ ಈಗ ಬಿಎಸ್‍ವೈ ಸಿದ್ದು ಟೀಂ ಹಗರಣದ ದಾಖಲೆ ರಿಲೀಸ್ ಮಾಡಲ್ಲ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ದೊಡ್ಡ ಹಗರಣ ಇದೆ. 4 ದಿನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಅಂತಾ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಈಗ ಎಲ್ಲ ಒಟ್ಟಾಗೋದು ಬೇಡ ಅಂತಾ ಸುಮ್ಮನಿದ್ದೇನೆ. ಈ ಹಗರಣದಲ್ಲಿ ಸಿದ್ದರಾಮಯ್ಯ ಕೈವಾಡ ಇದೆ. ಬಿಡುಗಡೆ ಮಾಡ್ತೀನಿ, ಕಾದು ನೋಡಿ ಅಂತೇಳಿದ್ರು.

    ಆ ಡೈರಿ ಗೋವಿಂದರಾಜುದೇ, ಅವರ ಬೆಡ್ ರೂಂನಲ್ಲಿ ಬೆಡ್ ಕೆಳಗೆ ಡೈರಿ ಸಿಕ್ಕಿದೆ. ಸಿಎಂ ಮನೆಯಲ್ಲಿ ಮಲ್ಕೊಂಡು ಏನ್ ರಿಯಾಕ್ಷನ್ ಕೊಡಬೇಕು ಅನ್ನೋದನ್ನು ಯೋಚನೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

    ಸಹರಾ ಡೈರಿ ಬೇರೆ, ಈ ಡೈರಿ ಬೇರೆ, ಈ ಡೈರಿ ಸುಮಾರು 27-28 ಪೇಜ್ ಇದೆ. ಇದು ಚುನಾವಣೆ ಗಿಮಿಕ್ ಅಲ್ಲ, ಗಿಮಿಕ್ ಆಗಿದ್ರೆ ಚುನಾವಣೆಗೆ ಮೂರು ತಿಂಗಳ ಮುಂಚೆ ರಿಲೀಸ್ ಮಾಡ್ತಿದ್ವಿ. ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ರು.

  • ಮಾರ್ಚ್ 15ಕ್ಕೆ ರಾಜ್ಯ ಬಜೆಟ್

    ಮಾರ್ಚ್ 15ಕ್ಕೆ ರಾಜ್ಯ ಬಜೆಟ್

    ಬೆಂಗಳೂರು: ಮಾರ್ಚ್ 15ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 15 ರಿಂದ 28ರ ತನಕ ಬಜೆಟ್ ಅಧಿವೇಶನ ನಡೆಸಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಕ್ಯಾಬಿನೆಟ್ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು. ಈ ವೇಳೆ ಎಸ್‍ಸಿ, ಎಸ್‍ಟಿ ಬಡ್ತಿ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಸಂಪೂರ್ಣ ಅಧ್ಯಯನದ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.

    ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ 27 ಕೋಟಿ ರೂಪಾಯಿ ವೆಚ್ಚದಲ್ಲಿ ವಿಂಡ್ಸರ್ ಮ್ಯಾನರ್‍ನಿಂದ ಹೆಬ್ಬಾಳದ ಕಡೆಗೆ 2 ಕಿಮೀ ರಸ್ತೆ ಅಗಲೀಕರಣಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆಯಕಲ್ಲಿ ಮಾರ್ಚ್ ವೇಳೆಗೆ ಮೇವಿನ ಕೊರತೆಯಾಗುವ ಮುನ್ಸೂಚನೆ ಸಿಕ್ಕಿದೆ. ನೆರೆರಾಜ್ಯಗಳಲ್ಲೂ ಮೇವಿನ ಅಭಾವವಿದ್ದು, ಅಲ್ಲಿದ್ದ ಬರುತ್ತಿದ್ದ ಮೇವು ಸ್ಥಗಿತಗೊಂಡಿದೆ, ಹೀಗಾಗಿ ಮೇವಿಗಾಗಿ ಇತರ ರಾಜ್ಯಗಳಲ್ಲಿ ಸಹಾಯ ಕೇಳಲಾಗುವುದು ಎಂದು ಹೇಳಿದರು.

    362 ಗೆಜೆಟೆಡ್ ಪ್ರೊಬೇಷನರಿ  ಮರು ನೇಮಕಾತಿಗೆ ಸಂಬಂಧಿಸಿದಂತೆ ಕೆಎಟಿ ಆದೇಶಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಕೆಎಟಿ ಆದೇಶ ಮಾನ್ಯ ಮಾಡಲು ಸಿಎಂ ಮುಂದಾಗಿದ್ದರು. ಆದರೆ ಈ ಕುರಿತು ಸಂಪೂರ್ಣ ಮಾಹಿತಿಯ ಕೊರತೆ ಇರುವ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಹಿನ್ನೆಲೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ, ತಿರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

  • ಉಗಾಂಡದ ಹುಚ್ಚು ಸರ್ವಾಧಿಕಾರಿ ಇದಿ ಅಮೀನ್‍ನಂತೆ ಬಿಎಸ್‍ವೈ ವರ್ತಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಉಗಾಂಡದ ಹುಚ್ಚು ಸರ್ವಾಧಿಕಾರಿ ಇದಿ ಅಮೀನ್‍ನಂತೆ ಬಿಎಸ್‍ವೈ ವರ್ತಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಬೆಂಗಳೂರು: ನಾನು ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯನವರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದ ಬಿಎಸ್‍ವೈ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡೂರಾವ್ ಉಗಾಂಡದ ಸವಾರ್ಧಿಕಾರಿ ಇದಿ ಅಮೀನ್‍ಗೆ ಹೋಲಿಕೆ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕುತ್ತಿದ್ದ. ಈಗ ಯಡಿಯೂರಪ್ಪನವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಅನ್ನೋದು ಖಾತ್ರಿ ಆಗಿದೆ. ಈಗ ಬಿಎಸ್‍ವೈ ಇದಿ ಅಮೀನ್ ರೀತಿಯಂತೆ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದು, ವೈದ್ಯರ ಬಳಿ ಚೆಕ್ ಅಪ್ ಮಾಡಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದರು.

    ಈಗಲೇ ಜೈಲಿಗೆ ಹಾಕಲಿ: ಅಧಿಕಾರಕ್ಕೆ ಬಂದ 24 ಗಂಟೆಯ ಒಳಗಡೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ನ್ಯಾಯಾಧೀಶರೇ? ಬಿಎಸ್‍ವೈ ಮುಖ್ಯಮಂತ್ರಿ ಆಗುವವರೆಗೂ ಕಾಯುವುದು ಯಾಕೆ ಎಂದು ಪ್ರಶ್ನಿಸಿದ ಅವರು ಕೇಂದ್ರ ಸರಕಾರದ ಇಲಾಖೆಗಳನ್ನು ಬಳಸಿ ಸಿಎಂ ಸಚಿವರ ವಿರುದ್ಧ ದಾಖಲೆಗಳಿದ್ದರೆ ಈಗಲೇ ಸಿಬಿಐ ತನಿಖೆ ನಡೆಸಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.

    ಬಿಎಸ್‍ವೈ ಬಲಿಪಶು: ಯಡಿಯೂರಪ್ಪರನ್ನು ಬಿಜೆಪಿ ಗುಂಪು ಬಲಿಪಶು ಮಾಡುತ್ತಿದೆ. ಬಿಎಸ್‍ವೈ ವರ್ಚಸ್ಸು ಕುಗ್ಗಿಸಲು ಈ ತರಹ ಹೇಳಿಕೆಗಳನ್ನು ಉದ್ದೇಶಪೂರ್ವಕ ಮಾಡಿಸಲಾಗುತ್ತಿದೆ ಎಂದು ಗುಂಡೂರಾವ್ ಆರೋಪಿಸಿದರು.

    ಕಾನೂನು ಕ್ರಮ: ಐಟಿ ಅಧಿಕಾರಿಗಳು ತನಿಖೆಯ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆ. ಐಟಿ ದಾಖಲೆ ಸೋರಿಕೆಯಾದ ಬಗ್ಗೆ ನಮ್ಮಲ್ಲಿ ಆಧಾರ ಇದೆ. ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗ ಮಾಡುತ್ತಿದ್ದು, ಐಟಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

    ಹುಚ್ಚಾಟಗಳಿಗೆ ಉತ್ತರ: ಬಿಜೆಪಿಯ ಹುಚ್ಚಾಟಗಳಿಗೆ ಫೆಬ್ರವರಿ 23 ರಂದು ಕಾಂಗ್ರೆಸ್ ನಿಂದ ‘ಸತ್ಯಮೇವ ಜಯತೇ’ ರ್ಯಾಲಿ ಮಾಡುತ್ತೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಹೇಳಿದರು.

  • ಸಿಎಂ ಆಪ್ತ ಪಿ. ರಮೇಶ್‍ರಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

    ಸಿಎಂ ಆಪ್ತ ಪಿ. ರಮೇಶ್‍ರಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಪಿ. ರಮೇಶ್ ವಿರುದ್ಧ ಈಗ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ.

    ಟೀಚರ್ ಕೆಲಸದ ವರ್ಗಾವಣೆ ವಿಚಾರದ ಸಂಬಂಧ ನಾನು ರಮೇಶ್ ಬಳಿ ತೆರಳಿದಾಗ ನಗರದ ಪ್ರತಿಷ್ಟಿತ ಹೋಟೆಲ್ ಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

    ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ದೂರು ನೀಡಲು ಹೋದಾಗ ದೂರನ್ನು ಸ್ವೀಕರಿಸಿಲ್ಲ. ಪೊಲೀಸರು ಕೇಸನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ರಮೇಶ್ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಯಾರೂ ಬಂದಿಲ್ಲ: ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಪಿ ಅಜಯ್ ಹಿಲೋರಿ ಪ್ರತಿಕ್ರಿಯಿಸಿದ್ದು, ರಮೇಶ್ ವಿರುದ್ಧ ಯಾರೂ ದೂರನ್ನು ನೀಡಲು ಬಂದಿಲ್ಲ.ಇದೂವರೆಗೂ ಮಹಿಳೆ ಪೊಲೀಸ್ ಠಾಣೆಗೆ ಬಂದೇ ಇಲ್ಲ. ಮಾಧ್ಯಮ ಪ್ರತಿನಿಧಿಗಳಿಂದ ನನಗೆ ವಿಚಾರ ತಿಳಿಯಿತು. ನಮಗೆ ದೂರು ತೆಗೆದುಕೊಳ್ಳಬೇಡಿ ಎಂದು ಒತ್ತಡ ಹೇರಿಲ್ಲ. ಠಾಣೆಗೆ ಬಂದರೆ ದೂರನ್ನು ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಲೈಂಗಿಕ ದೌರ್ಜನ್ಯ ನಡೆಸಿಲ್ಲ: ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ, ಆ ಯುವತಿ ಐಎಎಸ್ ಮಾಡಲು ಸಹಾಯ ಬೇಡಿಕೊಂಡು ನನ್ನ ಬಳಿ ಬಂದಿದ್ದಳು. ನಮ್ಮ ಟ್ರಸ್ಟ್ ವತಿಯಿಂದ ಆಕೆಗೆ ಸಹಾಯ ಮಾಡಿದ್ದು ನಿಜ, ಆದ್ರೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಇದೆಲ್ಲ ಕಟ್ಟುಕತೆಯಾಗಿದ್ದು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿ ಪಿ. ರಮೇಶ್ ಫೋನ್ ಕರೆಯನ್ನು ಕಡಿತಗೊಳಿಸಿದ್ದಾರೆ.

    ರಮೇಶ್ ಯಾರು?
    ಕಾಂಗ್ರೆಸ್ ನಾಯಕರಾಗಿರುವ ಪಿ. ರಮೇಶ್ ಸಿಎಂ ಆಪ್ತರಾಗಿದ್ದು, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಸಿವಿ ರಾಮನ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    ಪಿ. ರಮೇಶ್ ಡಿಸಿಪಿ ಅಜಯ್ ಹಿಲೋರಿಗೆ ತುಂಬಾ ಆಪ್ತರಾದ ಹಿನ್ನೆಲೆಯಲ್ಲಿ ಕೇಸನ್ನು ಮುಚ್ಚಿ ಹಾಕಲು ಅಧಿಕಾರಿಗಳು ಪ್ರುಯತ್ನಿಸುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

     

  • ಉಕ್ಕಿನ ಸೇತುವೆಗಾಗಿ 65 ಕೋಟಿ ರೂ. ಕಪ್ಪ – ಸಿಎಂ ವಿರುದ್ಧ ಬಿಎಸ್‍ವೈ ಹೊಸ ಬಾಂಬ್

    – ಬಿಜೆಪಿಯವ್ರೂ ಕೊಟ್ಟಿದ್ರು ಎಂದ ಹೆಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹೈಕಮಾಂಡ್‍ಗೆ 1 ಸಾವಿರ ಕೋಟಿ ರೂಪಾಯಿ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿರುವ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ವಿವಾದಿತ ಉಕ್ಕಿನ ಸೇತುವೆಗಾಗಿ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಉಕ್ಕಿನ ಸೇತುವೆ ಕಾಮಗಾರಿಯ ಆರಂಭಿಕ ಲೆಕ್ಕಾಚಾರ 1,350 ಕೋಟಿ ರೂಪಾಯಿ. ಆದ್ರೆ ನಂತರ 2,400 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಇದಕ್ಕಾಗಿ ಸಿಎಂ ಮತ್ತವರ ಶಿಷ್ಯರಿಗೆ 150 ಕೋಟಿ ರೂಪಾಯಿ ಕಮಿಷನ್ ಕೊಡುವುದಾಗಿ ಮಧ್ಯವರ್ತಿಗಳು ಮಾತುಕೊಟ್ಟಿದ್ದರು. ಅದರಲ್ಲಿ ಸಿಎಂಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬೆಂಗಳೂರಲ್ಲಿ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಎಸ್‍ವೈ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಕೋರ್ಟ್‍ನಲ್ಲಿ ದಾಖಲೆ ಕೇಳ್ತಾರೆಯೇ ಹೊರತು ಆಣೆ-ಪ್ರಮಾಣವನಲ್ಲ ಎಂದಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಪಾಸ್ತಿ ಸಿಕ್ಕಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದ್ರೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಬರೆದಿರುವ ಪತ್ರಕ್ಕೆ ತನಿಖೆ ಇನ್ನೂ ನಡೆಯುತ್ತಿದೆ ಅನ್ನೋ ಉತ್ತರವಷ್ಟೇ ಸಿಕ್ಕಿದೆ ಅಂತಾ ಸಿದ್ದರಾಮಯ್ಯ ಮೈಸೂರಲ್ಲಿ ತಿರುಗೇಟು ನೀಡಿದ್ದಾರೆ.

    ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಿಎಂ ಹೆಚ್‍ಡಿಕೆ ಬಿಜೆಪಿ ವಿರುದ್ಧವೇ ಹೈಕಮಾಂಡ್‍ಗೆ ಕಪ್ಪ ನೀಡಿದ ಆರೋಪ ಮಾಡಿದ್ದಾರೆ. ಹೈಕಮಾಂಡಿಗೆ ಕಪ್ಪ ಕೊಡುವುದು ಬಿಜೆಪಿ ಸರಕಾರ ಇದ್ದಾಗಲೂ ನಡೆಯುತ್ತಿತ್ತು. ಯಾವುದೋ ಯೋಜನೆ ಹೆಸರಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ಚೆಕ್ ಮೂಲಕ ದೆಹಲಿಯಲ್ಲಿರುವ ನಾಯಕರಿಗೆ ಹಣ ಪಾವತಿಯಾಗ್ತಿತ್ತು ಅಂತಾ ಮಂಗಳೂರಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

  • ಸಿಎಂ ಆಪ್ತ, ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ ಗೊತ್ತಾ?

    – ಬಿಎಸ್‍ವೈ ಆರೋಪ ಹಿನ್ನೆಲೆಯಲ್ಲಿ ಬೆನ್ನು ಬಿದ್ದ ಪಬ್ಲಿಕ್ ಟಿವಿಗೆ ಸಿಕ್ಕಿದೆ ಸ್ಫೋಟಕ ಮಾಹಿತಿ

    ಬೆಂಗಳೂರು: ಸಿಎಂ ಆಪ್ತ ಎಂಎಲ್‍ಸಿ ಗೋವಿಂದ್‍ರಾಜು ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ಸಾವಿರ ಕೋಟಿಗೂ ಹೆಚ್ಚಿನ ದುಡ್ಡು ಕೊಟ್ಟಿದ್ದಾರೆ. ಇಂದೋ ನಾಳೆಯೋ ಈ ಸತ್ಯ ಹೊರಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶುಕ್ರವಾರದಂದು ಆರೋಪ ಮಾಡಿದ್ದರು. ಈ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಯಡಿಯೂರಪ್ಪ ಸುಮ್ನೆ ಆರೋಪ ಮಾಡಿದ್ದಾರೆ ಅಂತ ಕೆಲವರು ಅಂದುಕೊಂಡಿದ್ರು. ಆದ್ರೆ, ಆರೋಪದ ಬೆನ್ನು ಹತ್ತಿ ಹೋದ ಪಬ್ಲಿಕ್ ಟಿವಿಗೆ ಈಗ ಆ ಡೈರಿ ಜಾರಿ ನಿರ್ದೇಶನಾಲಯದ ಬಳಿಯಿಲ್ಲ. ಬದಲಿಗೆ ಆದಾಯ ತೆರಿಗೆ ಅಧಿಕಾರಿಗಳ ಬಳಿ ಇದೆ ಅನ್ನೋದು ಗೊತ್ತಾಗಿದೆ.

    ಆ ಡೈರಿ ಬೇರೆ ಯಾವುದೂ ಅಲ್ಲ. ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಬ್ಲಾಕ್ ಡೈರಿ. ಆರು ತಿಂಗಳ ಹಿಂದೆಯಷ್ಟೇ ಇಂದಿರಾನಗರದ ಮನೆಯಲ್ಲಿ ಈ ಡೈರಿ ಸಿಕ್ಕಿತ್ತು.

    ಬ್ಲಾಕ್‍ಡೈರಿಯಲ್ಲಿ ಸಚಿವರ ಬಂಡವಾಳ!: ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಜನ ಸಿಕ್ಕಿ ಬೀಳ್ತಾರೆ ಅಂತ ಹೇಳಿದ್ದ ಯಡಿಯೂರಪ್ಪ ಮಾತಿಗೆ ಪುಷ್ಟಿಕೊಟ್ಟಿದ್ದೆ ಈ ಬ್ಲಾಕ್ ಡೈರಿ. ಸಿದ್ದರಾಮಯ್ಯ ಆಪ್ತ ಎಂಎಲ್‍ಸಿ ಗೋವಿಂದ ರಾಜು ಮನೆಯ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಒಂದು ಬ್ಲಾಕ್ ಡೈರಿಯನ್ನು ವಶಪಡಿಸಿಕೊಂಡಿತ್ತು. ಆಶ್ಚರ್ಯ ಅಂದ್ರೆ ಸಹಸ್ರ ಕೋಟಿ ವ್ಯವಹಾರದ ಪಿನ್ ಟು ಪಿನ್ ಡಿಟೈಲ್ಸ್ ಆ ಡೈರಿಯಲ್ಲಿ ಇತ್ತು. ಅದರ ಆಧಾರದ ಮೇಲೆ ಐಎಎಸ್ ಅಧಿಕಾರಿಗಳು, ಚೀಫ್ ಎಂಜಿನಿಯರ್‍ಗಳು, ಕೆಲ ಅಧಿಕಾರಿಗಳು ಸೇರಿದಂತೆ ಸಚಿವರಿಗೆ ನೋಟಿಸ್ ನೀಡಿತ್ತು.

    ಯಡಿಯೂರಪ್ಪ ಹೇಳಿದಂತೆ ಸಹಸ್ರ ಕೋಟಿ ಹಣ ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್, ಹಿರಿಯ ನಾಯಕ ಮೋತಿಲಾಲ್ ವೋರಾ, ದಿಗ್ವಿಜಯ್ ಸಿಂಗ್ ಮತ್ತಿತರರ ಹೆಸರಿಗೆ ಹೋಗಿ ಸೇರಿದೆ ಅಂತ ಡೈರಿಯಲ್ಲಿ ಉಲ್ಲೇಖ ಆಗಿದೆ ಅಂತ ಹೇಳಲಾಗಿದೆ. ಈ ಉಲ್ಲೇಖವನ್ನು ಹಿಡಿದುಕೊಂಡು ಮತ್ತಿತರರ ಬಗ್ಗೆ ಈಗ ಮಾಹಿತಿ ಕಲೆ ಹಾಕಲಾಗ್ತಿದೆ.

    ಪ್ರಭಾವಿ ಸಚಿವರೇ ಡೈರಿಯ ತಿರುಳು!: ಹೌದು, ಬ್ಲಾಕ್‍ಡೈರಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಪ್ರಭಾವಿ ಸಚಿವರಾದ ಡಿ.ಕೆ. ಶಿವಕುಮಾರ್, ಮಹದೇವಪ್ಪ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಅವರ ಹೆಸರು ಸೇರಿದಂತೆ 12 ಕ್ಕೂ ಹೆಚ್ಚು ಸಚಿವರ ಹೆಸರು ಐಟಿ ಅಧಿಕಾರಿಗಳ ಲಿಸ್ಟ್ ಸೇರಿತ್ತು. ಗೃಹ ಇಲಾಖೆಯನ್ನೇ ನಿಯಂತ್ರಣ ಮಾಡೋ ಕೆಂಪಯ್ಯ ಮತ್ತು ಅಧಿಕಾರಿಗಳು ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ರು. ಅದೇ ರೀತಿ, ಡಿಕೆಶಿ ಸೇರಿದಂತೆ ಎಲ್ಲಾ ಸಚಿವರು ಐಟಿ ಮುಂದೆ ಹೇಳಿಕೆ ಕೊಟ್ಟಿದ್ದರು. ಯಾವುದೋ ಒಂದು ಡೈರಿ ಇಟ್ಕೊಂಡು ನಮ್ಮನ್ನೆಲ್ಲಾ ಪ್ರಶ್ನೆ ಮಾಡಿದ್ದೀರಿ. ನಿಮ್ಮ ಪ್ರಶ್ನೆಗೆ ದಾಖಲೆಗಳೇ ಇಲ್ಲ ಅಂತ ಹೇಳಿ ವಾಪಸ್ಸು ಬಂದಿದ್ರು. ಆದ್ರೆ, ಇದೇ ಮಾಹಿತಿಯನ್ನು ಆಧರಿಸಿ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಸೇರಿದಂತೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರ ಮೇಲೆ ದಾಳಿ ಮಾಡಿದ್ದಾರೆ ಅನ್ನೋ ಮಾಹಿತಿಯೂ ಇದೆ.

    ಇನ್ಯಾರ ಬುಡಕ್ಕೆ ಬಿಸಿನೀರು?: ಈಗಾಗ್ಲೇ ಸಿದ್ದರಾಮಯ್ಯ ಅವರ ಆಪ್ತ ಗೋವಿಂದರಾಜು ಡೈರಿಯಲ್ಲಿರೋ ಮತ್ತಷ್ಟು ಮಾಹಿತಿ ಆಧರಿಸಿ ತನಿಖೆ ನಡೆಸ್ತಾ ಇರೋ ಐಟಿ ಅಧಿಕಾರಿಗಳು ಎಲ್ಲಾ ಸಚಿವರನ್ನು ವಿಚಾರಣೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿವೆ. ಸಚಿವ ಕೆ.ಜೆ. ಜಾರ್ಜ್ ಬಲಗೈಬಂಟ ಅನ್ನಿಸಿಕೊಂಡಿರೋ ಗನ್ ಮರ್ಚೆಂಟ್ ಇಸ್ಮಾಯಿಲ್ ಎಂಬವರ ಹೆಸರು ಕೂಡ ಡೈರಿಯಲ್ಲಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ, ಐಟಿ ಅಧಿಕಾರಿಗಳ ಅಂಗಳಕ್ಕೆ ಸೇರಿರೋ ಡೈರಿ ಇದೀಗ ಸಿದ್ದರಾಮಯ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ. ಆದರೆ, ಯಡಿಯೂರಪ್ಪ ಅವರ ಆರೋಪಕ್ಕೆ ಶುಕ್ರವಾರದಂದು ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದರು. ವಿಧಾನಸೌಧದ ಬಳಿ ಖಾರವಾಗೇ ಮಾತನಾಡಿ, ಇದನ್ನ ಸಾಬೀತು ಮಾಡಬೇಕು. ಇಲ್ಲಾಂದ್ರೆ, ರಾಜಕೀಯದಿಂದ ನಿವೃತ್ತಿಯಾಗಬೇಕು. ಅವರೊಬ್ಬ ಬೇಜಾವಾಬ್ದಾರಿ ಮನುಷ್ಯ ಅಂದಿದ್ರು.

    ಈ ಮೊದಲು ಹೇಳಿದಂತೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿ ಆಧರಿಸಿಯೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ ರೇಡ್ ಆಗಿದ್ಯಾ ಅನ್ನೋ ಸಂಶಯ ದಟ್ಟವಾಗ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ಐಟಿ ದಾಳಿಗಳು ಹೀಗಿವೆ:

    > ಚಿಕ್ಕರಾಯಪ್ಪ ( ಕಾವೇರಿ ನೀರಾವರಿ ನಿಗಮ ಎಂಡಿ)
    > ಜಯಚಂದ್ರ ( ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಮುಖ್ಯಾಧಿಕಾರಿ)
    > ಕೆಂಪಯ್ಯ ವಿಚಾರಣೆ (ಗೃಹ ಇಲಾಖೆ ಸಲಹೆಗಾರ ರಾತ್ರೋ ರಾತ್ರಿ ತನಿಖೆಗೆ ಹೋಗಿದ್ದು ಸುದ್ದಿಯಾಗಿತ್ತು)
    > ರಮೇಶ್ ಜಾರಕಿಹೊಳಿ
    > ಲಕ್ಷ್ಮಿ ಹೆಬ್ಬಾಳ್ಕರ್
    > ಎಂಟಿಬಿ ನಾಗರಾಜ್ (ಹೊಸಕೋಟೆ ಕಾಂಗ್ರೆಸ್ ಶಾಸಕ, ಸಿದ್ದರಾಮಯ್ಯ ಸಮುದಾಯದ ಶಾಸಕ)