Tag: ಸಿಡಿಲು

  • ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

    ಸಿಡಿಲು ಬಡಿದು ಇಬ್ಬರು ಸಾವು, ಇಬ್ಬರಿಗೆ ಗಾಯ

    ಹಾವೇರಿ/ಧಾರವಾಡ: ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಗೇರಿ ಗ್ರಾಮದಲ್ಲಿ ನಡೆದಿದೆ.

    ಫಕ್ಕೀರಪ್ಪ ಗೋಣೇರ(25) ಮೃತ ಯುವಕ. ಶರಣಪ್ಪ ಗೋಣೇರ (35) ಮತ್ತು ಮಾರುತಿ ವಾಲೀಕಾರ(25) ಎಂಬುವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಹಿರೇಕೆರೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಮೀನಿನಲ್ಲಿರೋ ಗುಡಿಸಲಿನಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಂಸಬಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಅದೇ ರೀತಿ ಧಾರವಾಡದಲ್ಲಿಯೂ ಸಹ ಗುಡುಗು ಮಿಶ್ರಿತ ಮಳೆ ಸಿಡಿಲಿನಿಂದ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಮೃತ ವ್ಯಕ್ತಿ ಮಲಕಪ್ಪ ಸೂರ್ಯವಂಶಿ(40) ಎಂದು ಗುರುತಿಸಲಾಗಿದೆ.

    ಮೃತ ಮಲಕಪ್ಪ ಸೂರ್ಯವಂಶಿ ಅವರು ಧಾರವಾಡದ ನವಲೂರು ನಿವಾಸಿಯಾಗಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ಬಳ್ಳಾರಿಯಲ್ಲಿ ರಾತ್ರಿ ಧಾರಾಕಾರ ಮಳೆ- 200 ಕುರಿಗಳ ಸಾವು

    ಬಳ್ಳಾರಿಯಲ್ಲಿ ರಾತ್ರಿ ಧಾರಾಕಾರ ಮಳೆ- 200 ಕುರಿಗಳ ಸಾವು

    ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಸುಮಾರು 3 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದೆ.

    ಗುಡುಗು ಸಿಡಿಲು ಸಹಿತ ಮಳೆಯಿಂದ ಬಳ್ಳಾರಿ ಹೊರವಲಯದ ಭತ್ರಿಯ ಬಳಿಯ ಜಮೀನಿನಲ್ಲಿದ್ದ ಕುರಿಗಳಲ್ಲಿ ಸುಮಾರು 200 ಕುರಿಗಳು ಸಾವನ್ನಪ್ಪಿವೆ.

    ಸಾವನ್ನಪ್ಪಿರುವ ಕುರಿಗಳು ಗಂಗಾಧರ, ಮಲ್ಲಯ್ಯ ಹಾಗೂ ನಾರಾಯಣ ಎನ್ನುವವರಿಗೆ ಸೇರಿದ್ದವಾಗಿವೆ. 200 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಪರಿಣಾಮ ಕುರಿಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

    ಕುರಿಗಳು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ವೆಂಕಟರಮಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಕುರಿಗಾರರಿಗೆ ಸ್ವಾಂತನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

  • ಸಿಡಿಲಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಹಾನಿ!

    ಸಿಡಿಲಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಹಾನಿ!

    ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಗೋಪುರಕ್ಕೆ ಸಿಡಿಲು ಬಡಿದು ಅಲ್ಪ ಪ್ರಮಾಣ ಹಾನಿ ಸಂಭವಿಸಿದೆ.

    ದೇವಸ್ಥಾನದ ಸುತ್ತಮುತ್ತಲಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು, ಮಿಂಚು ಸಹಿತ ತುಂತುರು ಮಳೆಯಾಗುತ್ತಿದ್ದು ಅಲ್ಲಲ್ಲಿ ಸಿಡಿಲು ಹೊಡೆದಿದೆ. ಸಿಡಿಲಿನ ತೀವ್ರತೆಗೆ ಗೋಪುರ ಒಂದು ಭಾಗದ ಸಿಮೆಂಟ್ ತುಂಡು ಕಿತ್ತು ಹೋಗಿದೆ. ಉಳಿದಂತೆ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ.

    ಕುಕ್ಕೆ ಸುತ್ತಮುತ್ತಲಿನ ಊರಿನ ಕೆಲವೊಂದು ಮನೆಗಳಿಗೂ ಸಿಡಿಲು ಬಡಿದಿದ್ದು ಅಲ್ಪ ಪ್ರಮಾಣದ ಹಾನಿಯಾಗಿರುವ ವಿಚಾರ ತಿಳಿದು ಬಂದಿದೆ.

  • ಭಟ್ಕಳದಲ್ಲಿ ಸಿಡಿಲು ಬಡಿದು ಗರ್ಭಿಣಿ ಸಾವು, ವಿಜಯಪುರದಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥ

    ಭಟ್ಕಳದಲ್ಲಿ ಸಿಡಿಲು ಬಡಿದು ಗರ್ಭಿಣಿ ಸಾವು, ವಿಜಯಪುರದಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥ

    ವಿಜಯಪುರ/ ಉತ್ತರಕನ್ನಡ: ಸಿಡಿಲು ಬಡಿದು ಒಂದೂವರೆ ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮದೀನಾ ಕಾಲೋನಿಯ ಫಿರದೋಸ್ ನಗರದಲ್ಲಿ ನಡೆದಿದೆ.

    22 ವರ್ಷದ ಬೀಬಿ ಸುಫಿಯಾ ಮೃತ ಗರ್ಭಿಣಿ. ಘಟನೆಯಲ್ಲಿ 19 ವರ್ಷದ ಮುಬಾರಕ್ ಹಾಗೂ 6 ವರ್ಷದ ಮಹಮದ್ ಕೈಫ್ ಎಂಬವರು ಗಾಯಗೊಂಡಿದ್ದಾರೆ. ಮನೆಯಲ್ಲಿ ಇದ್ದಾಗ ಸಿಡಿಲು ಬಡಿದು ಈ ಘಟನೆ ಸಂಭವಿಸಿದ್ದು ಗಾಯಾಳುಗಳಿಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತ ಮಹಿಳೆ 8 ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಜಾಕಿರ್ ಎಂಬವರನ್ನ ವಿವಾಹವಾಗಿದ್ದು, ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರು. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ವಿಜಯಪುರ ಜಿಲ್ಲೆಯಲ್ಲಿಯೂ ಭಾನುವಾರ ತಡರಾತ್ರಿ ಮಳೆಯಾಗಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನವಾಸಿ-ಗೋನಾಳ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದಿರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುದ್ದೇಬಿಹಾಳ ತಾಲೂಕಿನ ಸರೂರು, ತಂಗಡಗಿ, ನೇಬಗೇರಿ, ಹಿರೇಮುರಾಳ, ಕೊಳೂರು, ಬಸರಕೋಡ, ಗೆದ್ದಲಮರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಗಿದೆ. ಇನ್ನೂ ಕೆಲವು ಕಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.

     

  • ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ: ಸಿಡಿಲು ಬಡಿದು ಮೂವರ ಸಾವು

    ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ: ಸಿಡಿಲು ಬಡಿದು ಮೂವರ ಸಾವು

    ಬೆಂಗಳೂರು: ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಮೈಸೂರು, ಕೋಲಾರ, ಚಾಮರಾಜನಗರ, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

    ಕೋಲಾರದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಮೆಣಸಿಕಾಯಿ, ಟೊಮೆಟೋ ಮುಂತಾದ ಬೆಳೆಗಳು ನಾಶವಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ಗುರುವಾರ ಸುರಿದ ಮಳೆಗೆ ರೈತರು ಬರದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ನೆಲಕಚ್ಚಿವೆ. ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ನಿವಾಸಿ ಉಮೇಶ್ ಪಾಟೀಲ್ (18) ಎಂಬವರಿಗೆ ಸಿಡಿಲು ತಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಮೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಚಾಮರಾಜನಗರ ಜಿಲ್ಲೆಯಲ್ಲೂ ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಧಾರವಾಡ ನಗರದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದ್ದು, ರಸ್ತೆಯ ಬದಿಯ ಬೃಹತ್ ಮರುಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನೂ ಧಾರವಾಡ ನಗರದ ಕೆಲವು ಕಡೆ ಮರಗಳು ವಾಹನಗಳ ಮೇಲೆಯೇ ಬಿದ್ದಿದ್ದರಿಂದ ಬೈಕ್‍ಗಳು ಜಖಂಗೊಂಡಿವೆ.

    ಚಿಕ್ಕಬಳ್ಳಾಪುರದಲ್ಲಿ ಅಲಿಕಲ್ಲು ಸಹಿತ ಮಳೆಯಾಗಿದ್ದರಿಂದ ಗೇರಹಳ್ಳಿ ಗ್ರಾಮದ ರೈತ ಸುಬ್ಬರಾಯಪ್ಪ ಅವರು ಅಪಾರ ಸಾಲ ಮಾಡಿ ಬೆಳದಿದ್ದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿದೆ. ದಾವಣಗೆರೆಯಲ್ಲಿ ತುಂತುರು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಸ್ಥಳೀಯರಲ್ಲಿ ಖುಷಿ ತಂದಿದೆ.

    ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಾಶ್ (10), ಪುಟ್ಟ (8) ಮಕ್ಕಳು ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿಯೂ ಕೃಷ್ಣ ಮತ್ತು ಲಕ್ಷ್ಮಿ ದಂಪತಿಗಳ 4 ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಯಾದಗಿರಿ ತಾಲೂಕಿನ ಹಳೆಗೇರಾ ಗ್ರಾಮದಲ್ಲಿ ಸಿಡಿಲು ತಾಗಿ ಕುರಿಗಾಹಿಯೊಬ್ಬರ 30 ಕುರಿಗಳು ಸೇರಿದಂತೆ ಒಂದು ನಾಯಿ ಸಾವನ್ನಪ್ಪಿವೆ.

     

  • ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆ- ಚಿಕ್ಕಮಗಳೂರಿನಲ್ಲಿ ಇಬ್ಬರ ಸಾವು

    ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆ- ಚಿಕ್ಕಮಗಳೂರಿನಲ್ಲಿ ಇಬ್ಬರ ಸಾವು

    – ತುಮಕೂರಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಐವರಿಗೆ ಗಾಯ

    ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ಧಾರಾಕಾರ ಮಳೆಯಾಗಿದೆ.

    ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯ ವೇಳೆ ಸಿಡಿಲು ಬಡಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಮನೆಯ ಛಾವಣಿ ಹಾರಿಹೋಗಿ ಬಾಲಕನ ಮೇಲೆ ಬಿದ್ದ ಪರಿಣಾಮ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

    ಇತ್ತ ತುಮಕೂರಿನ ಮಧುಗಿರಿಯಲ್ಲೂ ಜೋರು ಮಳೆಯಾಗಿದೆ. ಮಳೆ ವೇಳೆ ಬೃಹತ್ ಮರವೊಂದು ನೆಲಕ್ಕುರುಳಿ ಕಾರು ಸಂಪೂರ್ಣ ಜಖಂಗೊಂಡಿದೆ. ತುಮಕೂರು ನಗರದಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಬಿದ್ದಿದೆ. ಮತ್ತೊಂದೆಡೆ ಸಿಡಿಲು ಬಡಿದು ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಹಾಸನ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹಾವೇರಿಯಲ್ಲಿ ಕೂಡ ಧಾರಾಕಾರ ಮಳೆಯಾಗಿದೆ.

  • ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ಭಾರಿ ಗಾಳಿಗೆ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣೆಗಳು ಹಾರಿಹೋಗಿವೆ.

    ಇಂದು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ಮನೆಯ ತಗಡಿನ ಮೇಲ್ಛಾವಣಿಗಳು ಹಾರಿಹೋಗಿವೆ. ವಾಸವಿದ್ದ ಮನೆಗಳ ಮೇಲ್ಛಾವಣೆಯ ತಗಡುಗಳು ಹಾರಿದ್ದರಿಂದ ಗ್ರಾಮದ ಜನರು ಬಯಲಲ್ಲಿ ಕೂರುವಂತಾಗಿದೆ. ಗ್ರಾಮದ ಕೆಲ ಮನೆಗಳ ಹೆಂಚುಗಳು ಸಹ ಭಾರೀ ಗಾಳಿಗೆ ಹಾರಿವೆ.

    ಇನ್ನು ಧಾರವಾಡ ನಗರದ ಮಂಗಳವಾರಪೇಟೆಯಲ್ಲಿ ಯಂಡಿಗೇರಿ ಎಂಬವರ ಮನೆಯ ಆವರಣದಲ್ಲಿಯ ತೆಂಗಿನ ಮರಕ್ಕೆ ಸಿಡಲು ತಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.

     

  • ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

    ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

    ಬೆಂಗಳೂರು: ಮಂಗಳವಾರ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ಬಂದಿದ್ದರಿಂದ ವಾಹನ ಸವಾರರು ಪರದಾಡಿದರು. ರಾಮನಗರದಲ್ಲೂ ಭಾರಿ ಮಳೆಯಾಗಿದ್ದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.

    ಮೈಸೂರಿನಲ್ಲೂ ಮಳೆಯಾಗಿದ್ದು, ನಗರದ ಹೊರವಲಯದ ಕೆಂಪಯ್ಯನಹುಂಡಿಯಲ್ಲಿ ಸಿಡಲು ಬಡಿದು ನಾಡನಹಳ್ಳಿ ಗ್ರಾಮದ ನಿವಾಸಿ ನಾಗರಾಜು (42) ಎಂಬವರು ಸಾವನ್ನಪ್ಪಿದ್ದಾರೆ. ಕೆಂಪಯ್ಯನಹುಂಡಿಗೆ ಕೂಲಿ ಕೆಲಸಕ್ಕೆ ನಾಗರಾಜು ಬಂದಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಪಿ.ಗಂಗಾಪುರದಲ್ಲಿ ಒನಮ್ಮ ಎಂಬುವರಿಗೆ ಸೇರಿದ ಸೀಮೆಹಸುವೊಂದು ಸಿಡಿಲು ಬಡಿತಕ್ಕೆ ಸಿಲುಕಿ ಸಾವನ್ನಪ್ಪಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರಗ್ರಾಮದಲ್ಲಿ ಗ್ರಾಮದ ನಂಜುಂಡಯ್ಯ ಎಂಬುವರಿಗೆ ಸೇರಿದ ಹಸು ಸಾವನ್ನಪ್ಪಿದೆ. ಈ ವೇಳೆ ಅದೃಷ್ಟವಶಾತ್ ಸ್ಥಳದಲ್ಲಿದ್ದ ನಂಜುಡಯ್ಯ ಪಾರಾಗಿದ್ದಾರೆ.

     

  • ಚಿಕ್ಕಬಳ್ಳಾಪುರದಲ್ಲಿ ಗುಡುಗು ಸಿಡಿಲಿನ ಮಳೆಗೆ ಎರಡು ಬಲಿ: ಹೊತ್ತಿ ಉರಿಯಿತು ತೆಂಗಿನ ಮರ

    ಚಿಕ್ಕಬಳ್ಳಾಪುರದಲ್ಲಿ ಗುಡುಗು ಸಿಡಿಲಿನ ಮಳೆಗೆ ಎರಡು ಬಲಿ: ಹೊತ್ತಿ ಉರಿಯಿತು ತೆಂಗಿನ ಮರ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಅಕಾಲಿಕ ಮಳೆಗೆ ರೈತರ ತೋಟಗಾರಿಕೆ ಬೆಳೆ ಹನಿಯಾಗಿದೆ.

    ಗುಡಿಬಂಡೆ ತಾಲೂಕಿನ ಕಂಬಾಲಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕ ನಾಗರಾಜು ಮತ್ತು ಗೌರಿಬಿದನೂರು ತಾಲೂಕಿನ ಭಾದಮಳ್ಳೂರು ಗ್ರಾಮದಲ್ಲಿ ಕುರಿಗಾಹಿ ಭೀಮಪ್ಪ (55) ಎಂಬವರು ಸಿಡಿಲ ಬಡಿತಕ್ಕೆ ಸಾವನ್ನಪ್ಪಿದ್ದಾರೆ.

    ನಾಗರಾಜು ತೋಟದಿಂದ ಮನೆಗೆ ಬರುವ ವೇಳೆ ರಸ್ತೆಯಲ್ಲಿ ಸಿಡಿಲು ಬಡಿತಕ್ಕೆ ತಗುಲಿ ಸಾವನ್ನಪ್ಪಿದ್ದಾನೆ. ನಿನ್ನೆ ಕುರಿ ಕಾಯಲು ಹೋಗಿದ್ದ ಭೀಮಪ್ಪ ಅವರು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಜಾಲಮರದ ಕೆಳಗೆ ಭೀಮಪ್ಪರ ಮೃತ ದೇಹ ಪತ್ತೆಯಾಗಿದೆ.

    ಅಕಾಲಿಕ ಮಳೆಯಿಂದಾಗಿ ಗೌರಿಬಿದನೂರು ತಾಲೂಕಿನ ವಿಳಪಿ ಗ್ರಾಮದ ನಾಗರಾಜು ಎಂಬುವವರ ಬಾಳೆತೋಟ ಸಂಪೂರ್ಣ ನೆಲಕಚ್ಚಿದೆ. ಹಲವೆಡೆ ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ ಬೆಳೆಗಳು ಸಹ ಹಾನಿಯಾಗಿ ಒಳಪಟ್ಟಿವೆ. ಇನ್ನು ಶಿಡ್ಲಘಟ್ಟ ತಾಲೂಕಿನ ಅಂಗತಟ್ಟಿ ಗ್ರಾಮದ ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದ್ದು ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಜಿಲ್ಲೆಯ ಜನತೆಗೆ ಮಳೆರಾಯ ತಂಪು ಎರೆದಿದ್ದು, ಕೆಲವು ಕಡೆ ಬೆಳೆ ಹಾನಿ ಕೂಡ ಸಂಭವಿಸಿದೆ.

    .

     

    https://youtu.be/Edfpkczu9zs

  • ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

    ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

    ಹೈದ್ರಾಬಾದ್ ಕರ್ನಾಟಕ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆರಾಯ ರಾತ್ರಿ ಸದ್ದು ಮಾಡಿದ್ದಾನೆ. ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಮಳೆಯಾಗಿದೆ. ಗಣಿನಾಡಲ್ಲಿ ಗುಡುಗು-ಸಿಡಿಲಿನೊಂದಿಗೆ 2 ಗಂಟೆ ಮಳೆ ಸುರಿದಿದೆ.

    ಮಳೆಯ ಪರಿಣಾಮ ಅನೇಕ ನಗರ ಸೇರಿದಂತೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾಯಚೂರಿನ ಲಿಂಗಸುಗೂರು, ಸಿಂಧನೂರು, ಮಾನ್ವಿಯಲ್ಲಿ ಮಳೆಯಾಗಿದೆ. ಲಿಂಗಸುಗೂರಿನಲ್ಲಿ ಭಾರೀ ಗಾಳಿಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ.

    ಕೊಪ್ಪಳ, ಯಲಬುರ್ಗಾದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಭಾರಿ ಮಳೆಗೆ ಹರನಾಳ, ಓತಿಹಾಳ ಗ್ರಾಮದಲ್ಲಿ ದ್ರಾಕ್ಷಿ, ಬಾಳೆ, ಲಿಂಬೆ ಬೆಳೆ ನಾಶವಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸಿಡಿಲು ಬಡಿದು 40 ವರ್ಷದ ಮಲ್ಲಪ್ಪ ಧರೆಪ್ಪ ಹುಣಶ್ಯಾಳ ಅನ್ನೋ ರೈತ ಮೃತಪಟ್ಟಿದ್ದಾರೆ.

    ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಸಿಡಿಲು ಬಡಿದು 25 ವರ್ಷದ ಖಾಜಾಹುಸೇನಿ ಮಾಶಾಳಕರ್ ಅನ್ನೋ ಯುವಕ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಸಿಂಚನವಾಗಿದೆ.