Tag: ಸಿಡಿಲು

  • ಸಿಡಿಲು ಬಡಿದು ರೈತ ದುರ್ಮರಣ

    ಸಿಡಿಲು ಬಡಿದು ರೈತ ದುರ್ಮರಣ

    ಹಾವೇರಿ: ಸಿಡಿಲು ಬಡಿದು ರೈತನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಲ್ಲೂರು ಗ್ರಾಮದ ತಮ್ಮಣ್ಣ ಸಾವಕ್ಕನವರ (42) ಸಿಡಿಲಿಗೆ ಬಲಿಯಾದ ರೈತ. ಇಂದು ಎಂದಿನಂತೆ ರೈತ ತಮ್ಮಣ್ಣ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಸಂಜೆ 4.30ರ ಸುಮಾರಿಗೆ ಜಮೀನಿನಲ್ಲಿ ಕೆಲಸದಲ್ಲಿ ತೊಡಗಿದ್ದಾಗಿ ಏಕಾಏಕಿ ಸಿಡಿಲು ಬಡಿದು ಕುಸಿದು ಬಿದ್ದಿದ್ದಾರೆ. ಕೂಡಲೇ ಅಕ್ಕ-ಪಕ್ಕದ ಜಮೀನಿನವರು ಗಮನಿಸಿ ತಮ್ಮಣ್ಣನವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

    ರೈತ ಸಾವನ್ನಪ್ಪಿದ ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬುಧವಾರದಿಂದಲೂ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಇಂದು ಸಹ ಗುಡುಗು ಸಹಿತ ಮಳೆಯಾಗಿದೆ. ಅಲ್ಲದೇ ಕೆಲವು ಕಡೆ ಭಾರೀ ಗುಡುಗು-ಸಿಡಿಲು ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಜೋರು – ರಾಜ್ಯದ ವಿವಿಧೆಡೆ ಸಿಡಿಲಿಗೆ ಆರು ಬಲಿ

    ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ ಜೋರು – ರಾಜ್ಯದ ವಿವಿಧೆಡೆ ಸಿಡಿಲಿಗೆ ಆರು ಬಲಿ

    ಬೆಂಗಳೂರು: ಕಳೆದ 2 ದಿನಗಳಿಂದ ಸುರಿಯುತ್ತಿರುವ ದಾಖಲೆ ಮಳೆಗೆ ರಾಜಧಾನಿ ತತ್ತರಿಸಿ ಹೋಗಿದೆ. ಇತ್ತ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕಿನ ಸುತ್ತಮುತ್ತ ಗುಡುಗು, ಸಿಡಿಲು ಸಮೇತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲಿಗೆ ಮೂವರು ಮೃತ ಪಟಿದ್ದಾರೆ. ಬಸವಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು ವಿಠಲ್ ನಾಟಿಕಾರ್ (28), ಯಲಗೂರಪ್ಪ ಯರಝರಿ (27) ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮೃತರು ಕಾನಾಳ ಗ್ರಾಮದ ವಾಸಿಗಳು ಎಂದು ತಿಳಿದು ಬಂದಿದೆ.

    ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮದ ಬಳಿ ಗಿಡದ ಕೆಳಗೆ ಊಟಕ್ಕೆ ಕುಳಿತಿದ್ದ ಮಹಿಳೆ ಮಲ್ಲಮ್ಮ (42) ಸಿಡಿಲಿಗೆ ಮೃತಪಟ್ಟಿದ್ದು, ಈ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್ ಕೂಡ ಸಿಡಿಲಿನ ಹೊಡೆತಕ್ಕೆ ಸ್ಫೋಟಗೊಂಡಿದೆ. ಮಲ್ಲಮ್ಮ ಬಸವನ ಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

    ಕೊಪ್ಪಳದ ಹಲವಾಗಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಸುರೇಶ್ ಹಳ್ಳಿ (35) ಸಾವನ್ನಪ್ಪಿದ್ದು, ಅವರ ಪತ್ನಿ ಕರಿ ಬಸಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಅಲ್ತಾಪ್ ನಾಯ್ಕರ್ (20) ಜಮೀನಿನ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ನೂರಜಾನ್ ಕಿಂಡ್ರಿ (40) ಸಾವನ್ನಪ್ಪಿದ್ದಾರೆ. ಭಾರೀ ಮಳೆಗೆ ಬಳ್ಳಾರಿ ಗಡಿ ಭಾಗದ ಹಿರೇಹಳ್ಳದ ಸೇತುವೆ ಮೇಲಿಂದ ಆಂಧ್ರ ಸರ್ಕಾರಿ ಬಸ್ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

    ಬೆಂಗಳೂರು ನಗರದಲ್ಲಿ ಸೋಮವಾರ ಸುರಿದ ಮಳೆಯಿಂದ ಚೇತರಿಕೆ ಕಾಣುವ ಹೊತ್ತಿಗೆ ಮತ್ತೆ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಸಿಲ್ಕ್ ಬೋರ್ಡ್, ಎಚ್‍ಎಸ್‍ಆರ್ ಲೇಔಟ್, ಶಾಂತಿನಗರ, ಹೆಬ್ಬಾಳ, ನವರಂಗ್, ರಾಜಾಜಿನಗರ, ಯಲಹಂಕ ನಾಗವಾರ, ಹೆಚ್‍ಬಿಆರ್ ಲೇಔಟ್, ವಿಜಯನಗರ, ಆರ್ ಪಿ ಸಿ ಲೇಔಟ್ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.

    ಉಳಿದಂತೆ ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ಹುಳಿಮಾವು, ಗೊಟ್ಟಿಗೆರೆ, ಬಸವನಪುರ ಕೆರೆ, ಗುಬ್ಬಲಾಲ ಕೆರೆ, ದೊಡ್ಡಕಲ್ಲಸಂದ್ರ ಕೆರೆ ಸೇರಿ ಒಟ್ಟು 9 ಕೆರೆಗಳು ಉಕ್ಕಿ ಹರಿದಿವೆ. ಪರಿಣಾಮ ಕೆರೆ ಸುತ್ತಮುತ್ತಲ ಮನೆಗಳು ಮತ್ತು ಅಪಾರ್ಟ್‍ಮೆಂಟ್‍ಗಳ ಪಾರ್ಕಿಂಗ್ ಲಾಟ್‍ಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಇತ್ತ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದೆ. ಹೆಬ್ಬಾಳ ಫ್ಲೈಓವರ್ ಮೇಲೆ ಮತ್ತು ಕೆಳಗೆ ನೀರು ತುಂಬಿತ್ತು. ನವರಂಗ್ ಬಳಿ ಪಾದಾಚಾರಿ ಮಾರ್ಗದ ನೆಲಹಾಸು ಕುಸಿದು ವ್ಯಕ್ತಿಯೊಬ್ಬ ಅದರಲ್ಲಿ ಬಿದ್ದಿದ್ದಾನೆ. ಬನ್ನೇರುಘಟ್ಟ ರಸ್ತೆ, ಬಿಳೇಕಹಳ್ಳಿ, ಡಾಲರ್ಸ್ ಲೇಔಟ್‍ನ ಹಲವು ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿ ಬೈಕ್, ಕಾರು ಸೇರಿದಂತೆ ವಾಹನಗಳೆಲ್ಲಾ ಮುಳಗಿದ್ದವು. ನಗರದ ಹಲವೆಡೆ ಮರಗಳು, ವಿದ್ಯುತ್ ಕಂಬ ಬಿದ್ದಿವೆ. ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಆಗುತ್ತೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

    ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
    * ಮನೋರಾಯನಪಾಳ್ಯ – 58 ಮಿ.ಮೀ
    * ನಾಗರಬಾವಿ – 57.5 ಮಿ.ಮೀ
    * ಹೆಚ್‍ಆರ್‍ಬಿ ಲೇಔಟ್ – 55.5 ಮಿ.ಮೀ
    * ಕೋಣನಕುಂಟೆ – 53ಮಿ.ಮೀ
    * ಗಾಳಿ ಆಂಜನೇಯ ದೇವಾಲಯ ರಸ್ತೆ, ನಾಯಂಡಹಳ್ಳಿ – 50 ಮಿ.ಮೀ
    * ಮಾರುತಿ ಮಂದಿರ – 50 ಮಿ.ಮೀ
    * ಹಂಪಿನಗರ – 50 ಮಿ.ಮೀ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    – ಸಿಡಿಲಿನ ಹೊಡೆತಕ್ಕೆ ಉಡುಪಿಯಲ್ಲಿ ಮಹಿಳೆ ಬಲಿ

    ಉಡುಪಿ: ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದೆ. ಮೆಕ್ನೂ ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಕಾರ್ಕಳದಲ್ಲಿ ಸಿಡಿಲಿನ ಹೊಡೆತಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

    ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಚಂಡಮಾರುತ, ಈಗ ಕರ್ನಾಟಕ ಕರಾವಳಿಯನ್ನು ನಡುಗಿಸುತ್ತಿದೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ ಮೇಲೇರಿ ಬರುತ್ತಿದೆ. ಕಡಲಿನ ಅಬ್ಬರ ಕಂಡು ಕರಾವಳಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಕಾಪು, ಮಲ್ಪೆ, ಮರವಂತೆ, ಪಡುಬಿದ್ರೆ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

    ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಡೆದಿದೆ. ಮಲಗಿದಲ್ಲೇ 34 ವರ್ಷದ ಶೀಲಾ ನಲ್ಕೆ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಭಾರೀ ಗುಡುಗು ಸಹಿತ ಮಳೆಯಾಗಿತ್ತು. ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ಶೀಲಾ, ಮನೆಯೊಳಗೆ ಮೃತಪಟ್ಟಿದ್ದಾರೆ.

    ಘಟನಾ ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ವರುಣನ ಅಬ್ಬರಕ್ಕೆ ರಾಜ್ಯದಲ್ಲಿ ಸಿಡಿಲಿಗೆ ಬಾಲಕ ಸೇರಿ 6 ಬಲಿ

    ವರುಣನ ಅಬ್ಬರಕ್ಕೆ ರಾಜ್ಯದಲ್ಲಿ ಸಿಡಿಲಿಗೆ ಬಾಲಕ ಸೇರಿ 6 ಬಲಿ

    ಬೆಂಗಳೂರು/ಮಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆರಾಯ ರುದ್ರ ತಾಂಡವವಾಡಿದ್ದಾನೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಹೊಡೆದು 6 ಮಂದಿ ಸಾವನ್ನಪ್ಪಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿರುವ ‘ಮೆಕುನು’ ಚಂಡಮಾರುತದಿಂದಾಗಿ ಮಳೆರಾಯ ಆರ್ಭಟಿಸುತ್ತಿದ್ದಾನೆ.

    ರಾಜ್ಯದ ವಿವಿಧ ಭಾಗಗಳಲ್ಲಿ ಸಿಡಲಿಗೆ 6 ಮಂದಿ ಬಲಿಯಾಗಿದ್ದಾರೆ. ತುಮಕೂರಿನ ಪಾವಗಡದಲ್ಲಿ 45 ವರ್ಷದ ರಾಮಕೃಷ್ಣ ಎಂಬವರು ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನ ರಾಮಾ ಕ್ಯಾಂಪಿನಲ್ಲಿ 37 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಗದಗಲ್ಲಿ 15 ವರ್ಷದ ಕುರಿಗಾಹಿ ಮುತ್ತಪ್ಪ ಬಲಿಯಾಗಿದ್ದಾರೆ. ಹಾವೇರಿಯ ಸವಣೂರಿನ 30 ವರ್ಷದ ರೈತ ಸುಭಾಸ ಕುರುಬರ ಎಂಬವರು ಸಾವನ್ನಪ್ಪಿದ್ದು, ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿದ್ದ ಕುರಿ ಹಾಗೂ ನಾಯಿಯೂ ಸಾವನ್ನಪ್ಪಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದಲ್ಲಿ ವಿರೂಪಾಕ್ಷಪ್ಪ ಮಾಸರ(25), ಕರಿಯವ್ವ ಹನುಮಪ್ಪ ಮಾಸರ (18) ಎಂಬವರು ಹೊಲದಲ್ಲಿ ಕೆಲಸ ಮಾಡುವ ವೇಳೆ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶಿರನಾಳ ಗ್ರಾಮದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ದಾವಣಗೆರೆ ನಗರದ ಕೆಲವೆಡೆ ತಗ್ಗು ಪ್ರದೇಶಗಳಿಗೆ ಚರಂಡಿ ನೀರು ನುಗ್ಗಿದೆ. ಇನ್ನು ರಾಜ್ಯದ ಹಲವೆಡೆ ಮರಗಳು ಧರೆಗುರುಳಿದ ಘಟನೆಗಳು ಸಹ ವರದಿಯಾಗಿದೆ. ಹಂಪಿಯಲ್ಲೂ ಇಂದು ಸಂಜೆ ಜೋರು ಮಳೆಯಾಗಿದೆ.

    ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 1 ಗಂಟೆ ಬಳಿಕ ನಗರದ ಕೆಲವೆಡೆ ಮಳೆ ಜೋರಾಯಿತು. ಒಂದು ಹಂತದಲ್ಲಿ ಮಳೆಯ ತೀವ್ರತೆ ಎಷ್ಟಿತ್ತೆಂದರೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನಕ್ಕೆ ಮಳೆರಾಯ ಅಡ್ಡಿಯಾಗುತ್ತಾನೆ ಎಂದೇ ಭಾವಿಸಲಾಗಿತ್ತು. ಆದರೆ ಸಂಜೆ 4 ಗಂಟೆ ವೇಳೆಗೆ ವಿಧಾನಸೌಧದ ಸುತ್ತಮುತ್ತ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪೂರ್ವನಿಗದಿಯಂತೆ ವಿಧಾನಸೌಧದ ಮೆಟ್ಟಿಲಿನಲ್ಲೇ ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದರು.

    ಬೆಂಗಳೂರು ನಗರದ ಎಂ.ಎಸ್.ಪಾಳ್ಯ, ಯಲಹಂಕ, ಹೆಸರಘಟ್ಟ, ಜಾಲಹಳ್ಳಿ, ಕೆಆರ್ ಸರ್ಕಲ್, ಪದ್ಮನಾಭ ನಗರದಲ್ಲಿ ಭಾರಿ ಮಳೆಯಾಗಿದೆ. ಉಳಿದಂತೆ ರಾಜ್ಯದ ತುಮಕೂರು, ರಾಯಚೂರು, ಗದಗ, ಕೋಲಾರ, ನೆಲಮಂಗಲ, ಆನೇಕಲ್ ಭಾಗಗಳಲ್ಲಿ ಮಳೆಯಾಗಿದೆ.

    ಮೆಕುನು ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಗುರುವಾರ ಇನ್ನಷ್ಟು ಉಗ್ರಸ್ವರೂಪ ಪಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಈ ಚಂಡಮಾರುತದ ತೀವ್ರತೆ ಅಷ್ಟಾಗಿ ಕಾಣಿಸದಿದ್ದರೂ ಕರ್ನಾಟಕ ಹಾಗೂ ತಮಿಳುನಾಡಿನ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಕರಾವಳಿ ಹಾಗೂ ತೆಲಂಗಾಣದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಈ ಬಾರಿಯ ಮುಂಗಾರು ಮೇ 29ರಂದು ಕೇರಳವನ್ನು ತಲುಪಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಬೆಂಗ್ಳೂರಲ್ಲಿ ಸಿಡಿಲಿಗೆ ಕ್ಷಣಾರ್ಧದಲ್ಲಿ ಮರ ಭಸ್ಮ!

    ಬೆಂಗ್ಳೂರಲ್ಲಿ ಸಿಡಿಲಿಗೆ ಕ್ಷಣಾರ್ಧದಲ್ಲಿ ಮರ ಭಸ್ಮ!

    ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಸುತ್ತಮುತ್ತ ಸಂಜೆ ವೇಳೆಗೆ ಭರ್ಜರಿ ಮಳೆಯಾಗುತ್ತಿದೆ.

    ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಮರವೊಂದು ಭಸ್ಮವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದ ಅಂಬೇಡ್ಕರ್ ಕಾಲೋನಿ ಬಳಿ ಈ ಘಟನೆ ಸಂಭವಿಸಿದೆ.

    ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಇದೇ ಸಂದರ್ಭದಲ್ಲಿ ಸಾಕಮ್ಮ ಮನೆಯ ಬಳಿ ಸಿಡಿಲು ಬಡಿದಿದೆ. ತಕ್ಷಣ ಬೆಂಕಿ ಹೊತ್ತಿಕೊಂಡು ಮರ ಸಂಪೂರ್ಣ ಭಸ್ಮವಾಗಿದೆ. ಈ ದೃಶ್ಯ ಪಕ್ಕದ ಅಂಬರೀಶ್ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಅವಘಡದಿಂದ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಸದ್ಯ ಸಿಡಿಲು ಬಡಿದ ಮರ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿರೋ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

  • ರಾಜ್ಯದ ವಿವಿಧೆಡೆ ಸುರಿದ ಗುಡುಗು ಸಹಿತ ಮಳೆ – ಸಿಡಿಲಿಗೆ 9ಕ್ಕೂ ಹೆಚ್ಚು ಮಂದಿ ಬಲಿ

    ರಾಜ್ಯದ ವಿವಿಧೆಡೆ ಸುರಿದ ಗುಡುಗು ಸಹಿತ ಮಳೆ – ಸಿಡಿಲಿಗೆ 9ಕ್ಕೂ ಹೆಚ್ಚು ಮಂದಿ ಬಲಿ

    ವಿಜಯಪುರ: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಗುಡುಗು ಸಹಿತ ಮಳೆ ಮುಂದುವರೆದಿದ್ದು, ಒಂದೇ ದಿನದಲ್ಲಿ ಸಿಡಿಲಿಗೆ ಬಲಿಯಾದವರ ಸಂಖ್ಯೆ 9 ಕ್ಕೆ ಏರಿಕೆ ಆಗಿದೆ.

    ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲಿ ಬಳಿ ಇಬ್ಬರು ಬಾಲಕಿಯರು ಸಿಡಿಲಿಗೆ ಬಲಿಯಾಗಿದ್ದಾರೆ. 8 ವರ್ಷದ ಪ್ರತಿಭಾ ಹನುಮಂತ ಸಂಖ್ ಹಾಗೂ 13 ವರ್ಷದ ಪೂಜಾ ಈರಣ್ಣ ಮೇಡೆದಾರ್ ಮೃತ ರ್ದುದೈವಿಗಳು.

    ಮೂಲತಃ ಇಂಡಿ ತಾಲೂಕಿನ ಚೋರಗಿ ಗ್ರಾಮದ ಇವರು ಜಮೀನಿಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಾವನ್ನಪ್ಪಿದ ಬಾಲಕಿಯರ ಜೊತೆಗಿದ್ದ ಮತ್ತಿಬ್ಬರು ಬಾಲಕಿಯರು ಸಿಡಿಲಿನಿಂದ ಪಾರಾಗಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಬ್ಬರದ ಪ್ರಚಾರದಲ್ಲಿ ಬೊಬ್ಬಿರಿದ ಮಳೆರಾಯ- ಧರೆಗುರುಳಿತು ಶಾಸಕ ಶಿವರಾಜ್ ತಂಗಡಗಿ ಪ್ರಚಾರಕ್ಕಾಗಿ ನಿರ್ಮಿಸಿದ್ದ ಶೆಡ್

    ಮತ್ತೊಂದು ಘಟನೆಯಲ್ಲಿ ಜಿಲ್ಲೆಯ ಸಿಂದಗಿ ಪಟ್ಟಣದ ಆರ್.ಡಿ. ಪಾಟೀಲ ಕಾಲೇಜು ಆವರಣದಲ್ಲಿ ಆಟವಾಡುತ್ತಿದ್ದ ಬಾಲಕ ಸತೀಶ ನಾರಾಯಣಪುರ (16) ಸಿಡಿಲಿಗೆ ಬಲಿಯಾಗಿದ್ದಾನೆ. ಶಾಲಾ ಆವರಣದಲ್ಲಿ ರನ್ನಿಂಗ್ ಮಾಡುವಾಗ ದುರ್ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿಡಿಲಿನ ಅಬ್ಬರಕ್ಕೆ ಯಾದಗಿರಿಯಲ್ಲಿ ಐದು ಜನ ಬಲಿಯಾಗಿದ್ದಾರೆ. ಪ್ರತ್ಯೇಕ ನಾಲ್ಕು ಘಟನೆಯಲ್ಲಿ ತಂದೆ-ಮಗ ಸೇರಿ ಒಟ್ಟು ಐದು ಜನ ಸಿಡಿಲಿಗೆ ಮೃತಪಟ್ಟಿದ್ದಾರೆ. ಶಾರದಹಳ್ಳಿಯಲ್ಲಿ ತಂದೆ-ಮಗ, ಪೀರಗಾರದೊಡ್ಡಿಯಲ್ಲಿ ದನಗಾಯಿ ಬಾಲಕ ಮೌನೇಶ, ಚಿಂತನಹಳ್ಳಿಯಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಈಶ್ವರಮಂದಿರಕ್ಕೆ ಹೋದ ಬುಗ್ಗಪ್ಪ, ಮೈಲಾಪುರ ಗ್ರಾಮದಲ್ಲಿ ಕುಮಾರ ಎಂಬಾತ ಮೃತಪಟ್ಟಿದ್ದಾನೆ. ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟಕ್ಕೆ ರಾಮಸಮುದ್ರ ಗ್ರಾಮದ ಹೋರಭಾಗದಲ್ಲಿ 12 ಕುರಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ಇನ್ನು ರಾಯಚೂರಿನ ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಸಿಡಿಲು ಬಡಿದು ಓರ್ವ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸಾಲಗುಂದ ಗ್ರಾಮದ 34 ವರ್ಷದ ಮೆಹಬೂಬ ರಾಜಾ ನಾಯ್ಕ್ ಮೃತ ದುರ್ದೈವಿ. ಮೇಕೆ ಕಾಯಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

    ಯಾದಗಿರಿ: ಬಿರುಗಾಳಿ ಸಹಿತ ಮಳೆ ವೇಳೆ ಸಿಡಿಲು ಬಡಿದು ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ನಡೆದಿದೆ.

    ಸುರಪುರ ತಾಲೂಕಿನ ಪೀರಗಾರದೊಡ್ಡಿ ಗ್ರಾಮದ 12 ವರ್ಷದ ಮೌನೇಶ್ ಸಿಡಿಲು ಬಡಿದ ಸಾವನ್ನಪ್ಪಿದ ಬಾಲಕ. ಗ್ರಾಮ ಹೊರ ವಲಯದಲ್ಲಿ ದನ ಮೇಯಿಸುತ್ತಿದ್ದ ಸಮಯದಲ್ಲಿ ಮಳೆ ಬಂದ ಕಾರಣ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಸಿಡಿಲು ತಾಗಿದೆ.

    ಮತ್ತೊಂದು ಘಟನೆಯಲ್ಲಿ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಕುಮಾರ್ (30) ಎಂಬ ಯುವಕ ಮೃತ ಪಟ್ಟಿದ್ದಾರೆ. ದೇವಾಲಯಕ್ಕೆ ತೆರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ 5 ಜನರು ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಿಡಿದು ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಅಲ್ಲದೇ ಜಿಲ್ಲೆಯ ರಾಮಸಮುದ್ರ ಬಳಿ ಸಿಡಿಲಿಗೆ ಚಂದ್ರಪ್ಪ, ಸಿದ್ದರಾಮಪ್ಪ ಎಂಬವರಿಗೆ ಸೇರಿದ 12 ಮೇಕೆಗಳು ಸಾವನ್ನಪ್ಪಿವೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸಾಲಗುಂದ ಬಳಿ ಸಿಡಿಲು ಬಡಿದು ಒಬ್ಬ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸಾಲಗುಂದ ಗ್ರಾಮದ 34 ವರ್ಷದ ಮಹಿಬೂಬ ರಾಜಾ ನಾಯ್ಕ್ ಮೃತ ದುರ್ದೈವಿ. ಮೇಕೆ ಕಾಯಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಸಿಡಿದು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜೊತೆಗಿದ್ದ ನಾಲ್ಕು ಮೇಕೆಗಳು ಸಾವಿಗೀಡಾಗಿವೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ನಗರದಲ್ಲೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಭಾಗದಲ್ಲಿ ಭತ್ತ ಸೇರಿ ವಿವಿಧ ಬೆಳೆ ಹಾನಿಯಾಗಿವೆ.

  • ರಾಯಚೂರಲ್ಲಿ ಗುಡುಗು ಸಹಿತ ಭಾರೀ ಮಳೆ-ಸಿಡಿಲು ಬಡಿದು ನರ್ಸ್ ಸಾವು

    ರಾಯಚೂರಲ್ಲಿ ಗುಡುಗು ಸಹಿತ ಭಾರೀ ಮಳೆ-ಸಿಡಿಲು ಬಡಿದು ನರ್ಸ್ ಸಾವು

    ರಾಯಚೂರು: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಸಿಡಿಲು ಬಡಿದು ನಸ್9 ಸಾವನ್ನಪ್ಪಿರುವ ಘಟನೆ ದೇವದುರ್ಗ ಪಟ್ಟಣದಲ್ಲಿ ನಡೆದಿದೆ.

    ಮಾನ್ವಿಯ ವಟಗಲ್ ಮೂಲದ 28 ವರ್ಷದ ನೀಲಮ್ಮ ಮೃತ ದುರ್ದೈವಿ. ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಆಸ್ಪತ್ರೆ ಕಾಂಪೌಂಡ್ ಪಕ್ಕದಲ್ಲೇ ಸಿಡಿಲು ಬಡಿದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೇವದುರ್ಗ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇನ್ನೂ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ವಿದ್ಯುತ್ ವಿತರಣಾ ಕೇಂದ್ರಕ್ಕೂ ನೀರು ನುಗ್ಗಿ ಸುತ್ತಮುತ್ತಲ ಗ್ರಾಮಗಳ ವಿದ್ಯುತ್ ಕಡಿತವಾಗಿದೆ.

    ಮಾನ್ವಿ ತಾಲೂಕಿನಲ್ಲೂ ಭಾರಿ ಮಳೆ ಸುರಿದಿದ್ದು ಹಳ್ಳಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಗವಿಗಟ್ಟು, ಅಮರಾವತಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಅಲ್ದಾಳ, ಗವಿಗಟ್ಟು, ಬಲ್ಲಟಗಿ ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಖಡಿತವಾಗಿದೆ. ಹಳ್ಳದ ಪಕ್ಕದ ಹೊಲಗಳಿಗೆ ನೀರು ನುಗ್ಗಿದ್ದು ಹತ್ತಿ, ಮೆಣಸಿನಕಾಯಿ ಬೆಳೆ ಹಾಳಾಗಿದೆ.

  • ಮೈಸೂರು: ದನ ಮೇಯಿಸುತ್ತಿದ್ದಾಗ ಸಿಡಿಲು ಬಡಿದು 6 ಮಂದಿ ಸಾವು

    ಮೈಸೂರು: ದನ ಮೇಯಿಸುತ್ತಿದ್ದಾಗ ಸಿಡಿಲು ಬಡಿದು 6 ಮಂದಿ ಸಾವು

    ಮೈಸೂರು: ರಾಜ್ಯದಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ. ದನ ಮೇಯಿಸುವಾಗ ಸಿಡಿಲು ಬಡಿದು 6 ಮಂದಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಂದಿನಾಥಪುರದಲ್ಲಿ ನಡೆದಿದೆ.

    ಪುಟ್ಟಣ್ಣ(60), ಸುವರ್ಣಮ್ಮ(45), ಸುದೀಪ್ ಹಾಗೂ ತಿಮ್ಮೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರಾದ ಸುಜಯ್(18) ಮತ್ತು ಉಮೇಶ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

    ದನ ಮೇಯಿಸುತ್ತಿದ್ದ ವೇಳೆ ಜೋರಾಗಿ ಮಳೆ ಸುರಿಯಲು ಆರಂಭಿಸಿತ್ತು. ಮಳೆ ಜೋರಾದ ಕಾರಣ ರಕ್ಷಣೆಗಾಗಿ ಗುಡಿಯ ಆಶ್ರಯ ಪಡೆದಿದ್ದವರಿಗೆ ಏಕಕಾಲಕ್ಕೆ ಸಿಡಿಲು ಬಡಿದಿದೆ.

    ಮೃತರೆಲ್ಲರೂ ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.

  • ರಾಯಚೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ- ಸಿಡಿಲಿಗೆ ಓರ್ವ ಮಹಿಳೆ ಸಾವು

    ರಾಯಚೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ- ಸಿಡಿಲಿಗೆ ಓರ್ವ ಮಹಿಳೆ ಸಾವು

    ರಾಯಚೂರು: ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ಕೃಷಿ ಕೆಲಸಕ್ಕೆ ಹೋಗಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಪುಚ್ಚಲದಿನ್ನಿಯಲ್ಲಿ ನಡೆದಿದೆ.

    30 ವರ್ಷದ ಚಂದ್ರಮ್ಮ ಸಿಡಿಲ ಹೊಡೆತಕ್ಕೆ ಮೃತಪಟ್ಟ ದುರ್ದೈವಿ. ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದ ವೇಳೆ ಮಳೆ ಬರಲು ಶುರುವಾಗಿದೆ. ಮಳೆಯಿಂದಾಗಿ ಚಂದ್ರಮ್ಮ ಮರದ ಕೆಳಗೆ ನಿಂತಿದ್ದಾರೆ. ಈ ವೇಳೆ ಮರಕ್ಕೆ ಸಿಡಿಲು ಬಡಿದಿದ್ದು, ಮರದ ಕೆಳಗೆ ಇದ್ದ ಚಂದ್ರಮ್ಮಗೂ ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇನ್ನು ರಾಯಚೂರಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಲವೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಇನ್ನೂ ಕೆಲವೆಡೆ ಹಳ್ಳ ಕೊಳ್ಳಗಳು ತುಂಬಿವೆ. ಇದರಿಂದ ಹಳ್ಳದಲ್ಲಿ ಎಮ್ಮೆ ಕೊಚ್ಚಿ ಹೋಗಿರುವ ಘಟನೆಗಳು ನಡೆದಿದ್ದು, ಮಳೆಯ ಅಬ್ಬರದಿಂದ ಹಲವು ಜಾನುವಾರಗಳು ಸಾವನ್ನಪ್ಪಿವೆ.

    ನಗರದಲ್ಲೂ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಅಲ್ಲದೇ ರಸ್ತೆಗಳು ನೀರಿನಿಂದ ಆವೃತಗೊಂಡಿದ್ದು ಕೆಲ ಸಮಯ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಜೊತೆಗೆ ವಿದ್ಯುತ್ ವ್ಯವಸ್ಥೆಯೂ ಕೂಡ ಸ್ಥಗಿತಗೊಂಡಿತ್ತು.