Tag: ಸಿಡಿಲು

  • ವರುಣನ ಆರ್ಭಟಕ್ಕೆ ಮತ್ತೆ ಮೂರು ಸಾವು – ಬೆಂಗಳ್ಳೂರಿನಲ್ಲಿ ಧರಗೆ ಉರುಳಿದ ಮರಗಳು

    ವರುಣನ ಆರ್ಭಟಕ್ಕೆ ಮತ್ತೆ ಮೂರು ಸಾವು – ಬೆಂಗಳ್ಳೂರಿನಲ್ಲಿ ಧರಗೆ ಉರುಳಿದ ಮರಗಳು

    ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದ್ದು, ಇಂದು ಮತ್ತೆ ಮೂವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇತ್ತ ಬೆಂಗಳೂರಿನಲ್ಲಿ ರಾತ್ರಿ ಗಾಳಿ, ಸಹಿತ ಮಳೆಯಾಗಿದ್ದು ಮರಗಳು ಧರೆಗೆ ಉರುಳಿವೆ.

    ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ. ರಾಣೆಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಟಪಟ್ಟಿದ್ದಾರೆ. ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡರ (48) ಮೃತ ರೈತ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಜಿಲ್ಲೆಯ ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ರಟ್ಟಿಹಳ್ಳಿಯಲ್ಲಿ ಗುಡುಗು ಸಹಿತ ಕೆಲಕಾಲ ಮಳೆಯಾಗಿದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ರೈತರು ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರೇಹಳ್ಳಿಯಲ್ಲಿ ಸಿಡಿಲಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಅರೇಹಳ್ಳಿ ಗ್ರಾಮದ ವಿರೂಪಾಕ್ಷಪ್ಪ(45) ಸಿಡಿಲಿಗೆ ಬಲಿಯಾದ ರೈತ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ರೈತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರೇಣುಕಾಚಾರ್ಯ ಅವರು ಸಾಂತ್ವಾನ ಹೇಳಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರಹಟ್ಟಿಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆನಂದ್ (38) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಗರದ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೋರೇಷನ್ ಸೇರಿದಂತೆ ಹಲವಡೆ ವರುಣನ ಆರ್ಭಟ ಮುಂದುವರಿದಿದ್ದು, ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಗಿದೆ.

    ಬೆಂಗಳೂರಿನಲ್ಲಿ ಮಧ್ಯೆ ರಾತ್ರಿವರೆಗೂ ವರುಣನ ಆರ್ಭಟ ಮುಂದುವರಿಯಲಿದ್ದು, ಗಂಟೆಗೆ 25-30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಶವಿವಾರ ಗರಿಷ್ಠ 98 ಮಿಲಿಮೀಟರ್ ಮಳೆಯಾಗಿತ್ತು. ಇಂದು ಗರಿಷ್ಠ ಮಳೆಯಾಗುವ ಸಾಧ್ಯತೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಯಶವಂತಪುರ ಸರ್ಕಲ್ ಪೋಲಿಸ್ ಸ್ಟೇಶನ್ ರೋಡ್‍ನಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಬಿಎಚ್‍ಎಲ್ ಫ್ಯಾಕ್ಟರಿ ಪಕ್ಕದಲ್ಲಿ ಮರವೊಂದು ಬಿದ್ದು, ಬಿಬಿಎಂಪಿ ಕಸದ ಗಾಡಿ ಜಖಂಗೊಂಡಿದೆ. ಇತ್ತ ಮಂತ್ರಿಮಾಲ್ ಹತ್ತಿರ ಎರಡು ಮರಗಳು ನೆಲಕ್ಕೆ ಬಿದ್ದಿದೆ.

  • ಬೆನ್ನಿಗೆ ಸಿಡಿಲು ಬಡಿದ್ರೂ ಸಾವನ್ನೇ ಗೆದ್ದ ವ್ಯಕ್ತಿ

    ಬೆನ್ನಿಗೆ ಸಿಡಿಲು ಬಡಿದ್ರೂ ಸಾವನ್ನೇ ಗೆದ್ದ ವ್ಯಕ್ತಿ

    ಚಿಕ್ಕಮಗಳೂರು: ಊಟ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರ ಬೆನ್ನಿಗೆ ಸಿಡಿಲು ಬಡಿದರೂ ಬದುಕುಳಿದು, ಸಾವು ಗೆದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಯಡಿಯೂರು ಗ್ರಾಮದಲ್ಲಿ ನಡೆದಿದೆ.

    ಯಡಿಯೂರು ಗ್ರಾಮದ ಮಂಜುನಾಥ್ ಸಾವನ್ನೇ ಗೆದ್ದವರು. ಕಳಸ ಸುತ್ತಮುತ್ತ ಶುಕ್ರವಾರ ಸಂಜೆ ಭಾರೀ ಮಳೆಯಾಗಿತ್ತು. ಈ ವೇಳೆ ಕೆಲಸಕ್ಕೆ ಹೋಗಿದ್ದ ಮಂಜುನಾಥ್ ಮನೆಗೆ ಬಂದು ಊಟ ಮಾಡುತ್ತಿದ್ದರು. ಮನೆಗೆ ಬಡಿದ ಸಿಡಿಲು ಊಟ ಮಾಡುತ್ತಿದ್ದ ಮಂಜುನಾಥ್ ಅವರ ಬೆನ್ನಿಗೆ ಅಪ್ಪಳಿಸಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಚಿಕಿತ್ಸೆ ಫಲಕಾರಿಯಾಗಿದ್ದು, ಮಂಜುನಾಥ್ ಚೇತರಿಸಿಕೊಂಡಿದ್ದಾರೆ. ಮನುಷ್ಯರಿಗೆ ಸಿಡಿಲು ಬಡಿದರೆ ಬದುಕುವುದು ತೀರಾ ವಿರಳ. ಮಂಜುನಾಥ್ ಸಿಡಿಲಿಗೆ ಸಿಕ್ಕು ಬದುಕುಳಿದು, ಸಾವನ್ನೇ ಗೆದ್ದಿದ್ದಾರೆ.

    ಅನ್ನ ತಿನ್ನುವಾಗ ಯಮ ಕೂಡ ಸಾವು ಕೊಡದೇ ಕಾಯುತ್ತಾನೆ. ನಾನು ಕೂಡ ಅಂತಹ ಅದೃಷ್ಟದಿಂದ ಬದುಕುಳಿದಿದ್ದೇನೆ ಎಂದು ಮಂಜುನಾಥ್ ಹೇಳಿದ್ದಾರೆ.

  • ಸಿಡಿಲಿಗೆ ಸೀಮೆ ಹಸುವಿನ ಕರು ಸಜೀವ ದಹನ

    ಸಿಡಿಲಿಗೆ ಸೀಮೆ ಹಸುವಿನ ಕರು ಸಜೀವ ದಹನ

    – 5 ನಿಮಿಷದಲ್ಲಿ ಹೊತ್ತಿ ಉರಿದ ಗುಡಿಸಲು
    – ತೆಂಗಿನ ಮರಕ್ಕೆ ಬೆಂಕಿ
    – ಸಿಡಿಲು ಬಡಿದು ಮೂವರಿಗೆ ಗಾಯ

    ಚಿಕ್ಕಬಳ್ಳಾಪುರ: ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡಿಸಲಿನಲ್ಲಿದ್ದ ಸೀಮೆ ಹಸು ಕರು ಸಜೀವದಹನವಾಗಿರೋ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಘಟನೆಯಲ್ಲಿ ಕೇವಲ ನೋಡ ನೋಡುತ್ತಿದ್ದಂತೆ 5 ನಿಮಿಷದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಸೀಮೆ ಹಸು ಕರು ಸುಟ್ಟು ಕರಕಲಾಗಿದ್ರೆ ಉಳಿದ ಮೂರು ಸೀಮೆಹಸುಗಳು ತೀವ್ರತರವಾದ ಸುಟ್ಟುಗಾಯಗಳಿಂದ ಸಾವು ಬದುಕಿನ ನಡುವೆ ನರಳಾಟ ನಡೆಸಿವೆ.

    ಅಂದಹಾಗೆ ಬಾಲಪ್ಪ-ನರಸಮ್ಮ ದಂಪತಿಗೆ ಸೇರಿದ ಸೀಮೆಹಸುಗಳಾಗಿವೆ. ಸಿಡಿಲಿನ ಅರ್ಭಟಕ್ಕೆ ಬೆಚ್ಚಿಬಿದ್ದು ಗುಡಿಸಲಿನಿಂದ ಓಡಿ ಬಂದಿರೋ ಬಾಲಪ್ಪ-ನರಸಮ್ಮ ದಂಪತಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬದುಕಿಗೆ ಆಧಾರವಾಗಿದ್ದ ಸೀಮೆಹಸುಗಳು ಕಣ್ಣೇದುರೇ ಬೆಂಕಿಗಾಹುತಿಯಾದ ದೃಶ್ಯ ಕಂಡ ದಂಪತಿ ಕಣ್ಣೀರಧಾರೆಯೇ ಹರಿದಿದೆ.

    ಜೀವನಧಾರ ಹಸುಗಳನ್ನ ಕಳೆದುಕೊಳ್ಳುವ ಆತಂಕದಲ್ಲಿರೋ ಬಡ ದಂಪತಿಗೆ ದಿಕ್ಕುತೋಚದಂತಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮತ್ತೊಂದೆಡೆ ಸಿಡಲಿನ ಅರ್ಭಟಕ್ಕೆ ಇದೇ ಗ್ರಾಮದ ವೆಂಕಟನಾರಾಯಣಪ್ಪನವರ ವಠಾರದಲ್ಲಿದ್ದ ತೆಂಗಿನಮರಕ್ಕೂ ಸಹ ಬೆಂಕಿ ಹೊತ್ತಿಕೊಂಡು ಧಗ ಧಗ ಅಂತ ಹೊತ್ತಿಉರಿದಿದೆ. ಅಲ್ಲದೆ ಇದೇ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

  • ಸಿಡಿಲಿಗೆ ದಂಪತಿ ಸೇರಿ ಮೂವರ ಬಲಿ

    ಸಿಡಿಲಿಗೆ ದಂಪತಿ ಸೇರಿ ಮೂವರ ಬಲಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಕಂಗಲಾಗಿದ್ದು, ಸಿಡಿಲು ಬಡಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ. ಇತ್ತ ಬಳ್ಳಾರಿಯಲ್ಲಿ ಕಾಲೇಜು ವಿದ್ಯಾರ್ಥಿಯನ್ನ ಸಿಡಿಲು ಬಲಿ ಪಡೆದಿದೆ.

    ಮೃತರನ್ನ ಮಂಜುನಾಥ್ ಆಚಾರ್ (50) ಹಾಗೂ ಭಾರತಿ (43) ಎಂದು ಗುರುತಿಸಲಾಗಿದೆ. ಬಳ್ಳಾರಿ ವೆಂಕಟೇಶ್ (20) ಮೃತ ವಿದ್ಯಾರ್ಥಿ. ಗೌತಮ ನಗರದ ಹಾಸ್ಟೆಲ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ವೆಂಕಟೇಶ್ ಸಂಜೆ ಹೊರ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ.

    ಇತ್ತ ಬೆಳಗ್ಗೆಯಿಂದ ಸಂಜೆಯವರೆಗೂ ತೇಗೂರು ಬಳಿಯ ತಮ್ಮ ಜಮೀನಿನಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಸಂಜೆ ವೇಳೆಗೆ ಮಳೆ ಬಂದ ಕಾರಣ ಮೇಯಲು ಬಿಟ್ಟಿದ್ದ ಹಸುಗಳನ್ನು ಹೊಡೆದುಕೊಂಡು ಮನೆಗೆ ಬರುವಾಗ ತೇಗೂರು ಕೆರೆ ಏರಿ ಮೇಲೆ ಸಿಡಿಲು ಬಡಿದು ದುರ್ಘಟನೆ ನಡೆದಿದೆ.

    35-38 ಡಿಗ್ರಿ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಚಿಕ್ಕಮಗಳೂರು ಜನ ಭಾರೀ ಗುಡುಗು-ಸಿಡಿಲು ಸಮೇತ ಸುರಿದ ಮಳೆಗೆ ಹೈರಾಣಾಗಿದ್ದಾರೆ. ಇತ್ತ ರೈತರು ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆ ನಡೆಸಲು ಮಳೆಯ ಅಗತ್ಯವಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಶಿವಮೊಗ್ಗ, ರಾಯಚೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಶಕುನವಳ್ಳಿ, ಶಂಕರಿಕೊಪ್ಪದಲ್ಲಿ ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.

  • ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

    ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

    ಬೀದರ್: ಸುಡು ಬಿಸಿಲಿನಿಂದ ಬಸವಳಿದಿದ್ದ ಗಡಿ ಜಿಲ್ಲೆ ಬೀದರ್‍ನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

    ಬಿಸಿಲ ಬೇಗೆಯಿಂದ ಬೀದರ್ ಜನತೆ ತತ್ತರಿಸಿ ಹೋಗಿದ್ದರು. ಈಗ ಆಕಾಲಿಕ ಮಳೆಯಿಂದ ಜನ ಫುಲ್ ಖುಷ್ ಆಗಿದ್ದಾರೆ. ಹಲವು ನಿಮಿಷಗಳ ಕಾಲ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆ ಆಗಿದೆ.

    ಬೀದರ್ ತಾಲೂಕಿನ ಚಿರ್ಲಗಿ ಗ್ರಾಮದಲ್ಲಿ ಸಿಡಿಲಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. 26 ವರ್ಷದ ರಾಮು ಸಿಡಿಲಿಗೆ ಬಲಿಯಾದ ಯುವಕ. ರಾಮು ಜಮೀನಿಗೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆಯಾಗಿದೆ.

  • ರಾಯಚೂರು: ಸಿಡಿಲು ಬಡಿದು ವ್ಯಕ್ತಿ ಸಾವು, ಇಬ್ಬರು ಮಕ್ಕಳಿಗೆ ಗಾಯ

    ರಾಯಚೂರು: ಸಿಡಿಲು ಬಡಿದು ವ್ಯಕ್ತಿ ಸಾವು, ಇಬ್ಬರು ಮಕ್ಕಳಿಗೆ ಗಾಯ

    ಯಾದಗಿರಿ/ರಾಯಚೂರು: ಕುರಿ ಮೇಯಿಸಲು ಹೋಗಿದ್ದ ವೇಳೆ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟು, ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನೀಲೊಗಲ್ ಕ್ಯಾಂಪ್ ಬಳಿ ನಡೆದಿದೆ.

    ನಾಗರಾಜ್ (28) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ರಾಯಚೂರು ತಾಲೂಕಿನ ಜಂಬಲದಿನ್ನಿ ಗ್ರಾಮದ ನಿವಾಸಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸಣ್ಣ ಪ್ರಮಾಣದಲ್ಲಿ ಕೂಡ ಗಾಯವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

    ಇತ್ತ ಯಾದಗಿರಿ ಜಿಲ್ಲೆಯ ಕೆಳ ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಸೇರಿದಂತೆ ಶೆಡ್‍ಗಳು ನೆಲಕಚ್ಚಿದೆ. ಗಾಳಿಯ ವೇಗಕ್ಕೆ ಮನೆಯ ಟಿನ್ ಶೆಡ್ ಹಾರಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಗಾಯಗಳುಗಳಿಗೆ ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಸುರಪುರ ನಗರದ ತಿಮ್ಮಾಪುರದ ವಡ್ಡರಗಲ್ಲಿಯಲ್ಲಿ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.

  • ರಾಜ್ಯದಲ್ಲಿ ಹಲವೆಡೆ ತಂಪೆರೆದ ಮಳೆರಾಯ

    ರಾಜ್ಯದಲ್ಲಿ ಹಲವೆಡೆ ತಂಪೆರೆದ ಮಳೆರಾಯ

    ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಹಲವೆಡೆ ಮಂಗಳವಾರ ಸಂಜೆ ವರುಣ ತಂಪೆರೆದಿದ್ದಾನೆ. ಮಡಿಕೇರಿ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ  ಮಳೆಯಾಗಿದೆ.

    ಪ್ರವಾಸಿಗರ ಹಾಟ್ ಸ್ಪಾಟ್, ಮಂಜಿನ ನಗರಿ ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಕರೆಯುವ ಕೊಡಗಿಗೆ ವರುಣ ಎಂಟ್ರಿ ಕೊಟ್ಟಿದ್ದನು. ಹಾಟ್ ಸ್ಪಾಟ್ ಆಗಿದ್ದ ಕೊಡಗಿನ ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಇಷ್ಟು ದಿನ ಬಿಸಿಲ ಬೇಗೆಯಿಂದ ಜಿಲ್ಲೆಯ ಜನ ಬೇಸತ್ತು ಹೋಗಿದ್ದು, ಮಳೆಯ ಆಗಮನದಿಂದ ಜನ ಸಂತಸಗೊಂಡಿದ್ದಾರೆ.

    ಮಂಗಳವಾರ ಸಂಜೆ ವೇಳೆಗೆ ಕೊಡಗಿನ ವಿವಿಧ ಭಾಗದಲ್ಲಿ ಗುಡುಗು, ಅಲ್ಲಿಕಲು ಸಹಿತ ಮಳೆಯಾಗಿದೆ. ಒಂದೆಡೆ ಬೇಸತ್ತ ಕೊಡಗಿನ ಜನತೆ ಕೊಂಚ ನಿಟ್ಟುಸಿರು ಬಿಟ್ಟರೆ, ಇನ್ನೊಂದೆಡೆ ಭಾರೀ ಗುಡುಗಿನ ಸದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

    ಇತ್ತ ಚಿಕ್ಕಮಗಳೂರಿನಲೂ ಭರ್ಜರಿ ಮಳೆ ಆಗಿದೆ. ಚಿಕ್ಕಮಗಳೂರು ನಗರ ಸೇರಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಭಯಂಕರ ಗುಡುಗು-ಸಿಡಿಲಿನೊಂದಿಗೆ ವರುಣ ತನ್ನ ಅಬ್ಬರವನ್ನು ತೋರಿದ್ದಾನೆ. ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ವರುಣ ಧಾರಾಕಾರವಾಗಿ ಸುರಿದಿದ್ದಾನೆ. ಮಳೆ ಕಂಡು ರೈತ ಸಮುದಾಯದಲ್ಲಿ ಸಂತಸ ವ್ಯಕ್ತವಾಗಿದೆ.

    ಮಂಗಳೂರು ನಗರದಲ್ಲಿ ಕೂಡ ಸಂಜೆ 5 ಗಂಟೆ ವೇಳೆಗೆ ಧೂಳು ಮಿಶ್ರಿತ ಪ್ರಬಲ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿತ್ತು. ಕಳೆದ ಕೆಲ ದಿನಗಳಿಂದ ಬಿಸಿಲಿನ ಧಗೆಯಲ್ಲಿದ್ದ ಕರಾವಳಿಯಲ್ಲಿ ಮಂಗಳವಾರ ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ.

    ಕೆಲವೆಡೆ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಮರಗಳು ಧಾರಾಶಾಹಿಯಾಗಿವೆ. ಅಲ್ಲದೆ ತೆಂಗಿನ ಮರಗಳು ಮನೆ ಮೇಲೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಭಾರೀ ಗಾತ್ರದ ಮರಗಳು ನೆಲಕ್ಕುರುಳಿದ್ದರಿಂದ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾದ ಘಟನೆಯೂ ನಡೆದಿದೆ.

  • ಗುಡುಗು ಸಹಿತ ಭಾರೀ ಮಳೆ – ಸಿಡಿಲಿಗೆ ಯುವಕ ಬಲಿ

    ಗುಡುಗು ಸಹಿತ ಭಾರೀ ಮಳೆ – ಸಿಡಿಲಿಗೆ ಯುವಕ ಬಲಿ

    ಹಾಸನ/ಮಂಗಳೂರು: ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ.

    ಹಾಸನ ನಗರದಲ್ಲಿ ಗುಡುಗುಗಳೊಂದಿಗೆ ತುಂತುರು ಮಳೆಯಾಗಿದೆ. ಕಾಫಿ, ಭತ್ತ ಹಾಗೂ ರಾಗಿ ಕಟಾವಿಗೆ ಬಂದಿದ್ದು, ಆದರೆ ಗುರುವಾರ ಸುರಿದ ಅಕಾಲಿಕ ಮಳೆಗೆ ಬೆಳೆಗಳು ನಾಶವಾಗಿವೆ. ಇದರಿಂದ ರೈತರಿಗೆ ಕೊಂಚ ನಿರಾಸೆಯಾಗಿದೆ. ಆದರೆ ಬಿಸಿಲಿನ ಬೇಗೆಯಲ್ಲಿ ತುಂತುರು ಮಳೆ ಸುರಿದು ಮಳೆರಾಯ ಕೊಂಚ ತಂಪೆರೆದಿದ್ದಾನೆ.

    ಇನ್ನು ಕೊಡಗಿನಲ್ಲಿ 2 ದಿನದಿಂದ ಸಂಜೆ ವೇಳೆಗೆ ಮಳೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರ ವಸತಿಗೃಹ ಬಳಿ ಸಿಡಿಲು ಬಡಿದು ಯುವಕ ಸಾವನಪ್ಪಿದ್ದಾನೆ. ಸುಳ್ಯ ತಾಲೂಕಿನ ಹರಿಹರ ನಿವಾಸಿ ಪ್ರವೀಣ್ (21) ಮೃತ ದುರ್ದೈವಿಯಾಗಿದ್ದು, ವಸತಿಗೃಹ ಬಳಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಸುಬ್ರಹ್ಮಣ್ಯ ಸುತ್ತಮುತ್ತ ಗುಡುಗು ಸಿಡಿಲಿನೊಂದಿದೆ ಅಕಾಲಿಕ ಮಳೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲೆಡೆ ಮಳೆಯ ಅನಾಹುತ – ಐವರ ಬಲಿ ಪಡೆದು ಸಿಡಿಲಿನ ಆರ್ಭಟ

    ರಾಜ್ಯದಲ್ಲೆಡೆ ಮಳೆಯ ಅನಾಹುತ – ಐವರ ಬಲಿ ಪಡೆದು ಸಿಡಿಲಿನ ಆರ್ಭಟ

    – ಮೂಡಿಗೆರೆಯಲ್ಲಿ ಪ್ರವಾಹದಂತಹ ಕಾಟ

    ಬೆಂಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆ-ಗಾಳಿಗೆ ತಾಲೂಕು ಕಚೇರಿಯ ಕಾಂಪೌಂಡ್ ಕುಸಿದು ಬಿದ್ದಿದ್ದರೆ, ಅಂಗಡಿಯ ನಾಮಫಲಕದ ಬೋರ್ಡ್ ಗಳು ಕೂಡ ನೆಲಕ್ಕುರುಳಿವೆ.

    ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಯ ತುಂಬೆಲ್ಲಾ ಮಳೆ ನೀರು ಪ್ರವಾಹದಂತೆ ಹರಿದಿದೆ. ಪ್ರವಾಹದ ರೀತಿಯಲ್ಲಿ ಮಳೆ ನೀರನ್ನ ಕಂಡ ಮೂಡಿಗೆರೆ ಜನ ಆತಂಕಕ್ಕೀಡಾಗಿದ್ದಾರೆ. ಈಗ ಆಗಿರೋ ಮಳೆ ಅವಾಂತರಗಳಿಂದ ಜನ ಹೊರಬರೋದಕ್ಕೆ ಕನಿಷ್ಠ ಮೂರು ವರ್ಷಗಳು ಬೇಕು ಅಂತೆ. ಮತ್ತೆ ಈ ರೀತಿ ಮಳೆ ಸುರಿಯುವುದನ್ನು ಕಂಡ ಮಲೆನಾಡಿಗರು ಭವಿಷ್ಯ ನೆನಪಿಸಿಕೊಂಡು ವರುಣದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ಕರಾವಳಿ ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಕರ್ನಾಟಕ ಭಾಗದಲ್ಲು ಭಾರೀ ಮಳೆ ಆಗಿದೆ. ಸಿಡಿಲು ಹೊಡೆತಕ್ಕೆ ಸಿಲುಕಿ ಹಲವರು ಬಲಿಯಾಗಿದ್ದಾರೆ. ಮೈಸೂರಿನಲ್ಲಿ ಸುರಿದ ಧಾರಕಾರ ಮಳೆ ದಸರಾ ಕಾರ್ಯಕ್ರಮಗಳಿಗೆ ಅಡ್ಡಿ ಮಾಡಿತು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ತಳೇವಾಡ ಗ್ರಾಮದಲ್ಲಿ ಸಿಡಿಲಿಗೆ ಮರದಡಿ ಕುಳಿತಿದ್ದ ಬಾಲಕಿ ಹಾಗೂ ಬಾಲಕಿಯ ಚಿಕ್ಕಮ್ಮ ಬಲಿಯಾಗಿದ್ದಾರೆ. ದಸರಾ ರಜೆಗೆ ಚಿಕ್ಕಮ್ಮನ ಮನೆಗೆ ಬಂದಿದ್ದ ಬಾಲಕಿ ಸಾವಿತ್ರಿ ಸಿಲಿಡಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ.

    ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಮೀಪದ ಹೊಲದಲ್ಲಿ ರೈತ ಚಂದ್ರಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಮೈಲಾರಪುರದಲ್ಲಿ ರೈತರೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿಯ ವಾಡಿ ಪಟ್ಟಣದಲ್ಲಿ ಧಾರಾಕಾರ ಮಳೆ ಆಗಿದ್ದು, ಹಲವು ಬಡಾವಣೆಗೆ ನೀರು ನುಗ್ಗಿ, ಮನೆಗಳು ಜಲಾವೃತವಾಗಿವೆ. ಜನ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದ್ದಾರೆ. ಉಡುಪಿಯಲ್ಲಿ ಭಾರೀ ಮಳೆ ಆಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಲವೆಡೆ ಸಂಜೆ ಸುರಿದ ಧಾರಕಾರ ಮಳೆಗೆ, ಇಲ್ಲಿನ ಮಾರುಕಟ್ಟೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ, ತಾಲೂಕು ಪಂಚಾಯತಿ ವತಿಯಿಂದ ನಿರ್ಮಿಸಲಾಗಿದ್ದ ಮಾರುಕಟ್ಟೆಗೆ ನೀರು ನುಗ್ಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿನ ತರಕಾರಿಗಳೆಲ್ಲ ಮಳೆ ನೀರಲ್ಲಿ ನೆನೆದು ಹಾಳಾಗಿವೆ. ತಮ್ಮ ಅಂಗಡಿಗಳಿಗೆ ನುಗ್ಗಿದ ನೀರನ್ನ ಹೊರಹಾಕಲು ವ್ಯಾಪಾರಿಗಳು ಹರಸಾಹಸ ಪಟ್ಟರು. ಅವೈಜ್ಞಾನಿಕವಾಗಿ ಮಾರುಕಟ್ಟೆಯನ್ನ ನಿರ್ಮಿಸಿದ್ದಾರೆಂದು, ತಾಲೂಕು ಪಂಚಾಯತಿ ಅಧಿಕಾರಿಗಳ ವಿರುದ್ಧ ಇಲ್ಲಿನ ವರ್ತಕರು ಹಿಡಿಶಾಪ ಹಾಕಿದರು. ಮಾರುಕಟ್ಟೆಯ ತುಂಬಾ ಚರಂಡಿ ಹಾಗೂ ಮಳೆಯ ನೀರು ನುಗ್ಗಿ ಅವಾಂತರವನ್ನ ಸೃಷ್ಟಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿ, ಮಡಿಲಲ್ಲಿದ್ದ ಪುಟ್ಟ ಕಂದಮ್ಮ ಸಿಡಿಲಿಗೆ ಬಲಿ!

    ತಾಯಿ, ಮಡಿಲಲ್ಲಿದ್ದ ಪುಟ್ಟ ಕಂದಮ್ಮ ಸಿಡಿಲಿಗೆ ಬಲಿ!

    ದಾವಣಗೆರೆ: ದುರ್ದೈವ  ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ತಾಯಿ-ಮಗು ಸಿಡಿಲಿಗೆ ಬಲಿಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಹರಪನಹಳ್ಳಿ ತಾಲೂಕಿನ ಚನ್ನಳ್ಳಿ ತಾಂಡ ನಿವಾಸಿ ಕವಿತಾಬಾಯಿ (33) ಹಾಗೂ ಪವಿತ್ರಾ(12) ಮೃತ ದುರ್ದೈವಿಗಳು. ಕವಿತಾಬಾಯಿ ಅವರು ಪುಟ್ಟ ಕಂದಮ್ಮನ ಜೊತೆಗೆ ತಾಂಡಾ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಾಣಿಸಿಕೊಂಡಿದೆ. ಇದರಿಂದಾಗಿ ಮಗಳ ಜೊತೆಗೆ ಮನೆಗೆ ಮರಳುತ್ತಿದ್ದಾಗ, ದಿಢೀರ್ ಸಿಡಿಲು ಬಡಿದ ಪರಿಣಾಮ ತಾಯಿ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಹಿತಿ ಪಡೆದು, ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv