Tag: ಸಿಡಿಲು

  • ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ- ಸಿಡಿಲಿಗೆ ವೃದ್ಧೆ ಬಲಿ

    ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ- ಸಿಡಿಲಿಗೆ ವೃದ್ಧೆ ಬಲಿ

    – ಕೊಡಗಿನಲ್ಲಿ ಹಳದಿ ಅಲರ್ಟ್ ಘೋಷಣೆ

    ಬೆಂಗಳೂರು: ರಾಜ್ಯದಲ್ಲಿ ವರುಣ ಅಬ್ಬರ ಮುಂದುವರಿದಿದ್ದು, ಗುರುವಾರವೂ ಬೆಂಗಳೂರು, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧೆಡೆ ಭರ್ಜರಿ ಮಳೆಯಾಗಿದೆ.

    ಕೊಡಗಿನ ಭಾಗಮಂಡಲ ತಲಕಾವೇರಿಯಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಕೊಡಗಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹವಾಮಾನ ಇಲಾಖೆಯ ವರದಿ ಆಧರಿಸಿ ಕೊಡಗಿನಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯ ಜನರು ಹಾಗೂ ಪ್ರವಾಸಿಗರು ಎಚ್ಚರದಿಂದ ಇರುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸಿಡಿಲಿನ ಭಯದಿಂದ ರೈಲ್ವೆ ಹಳಿ ದಾಟುತ್ತಿದ್ದ ಯುವಕರಿಗೆ ರೈಲು ಡಿಕ್ಕಿ- ಓರ್ವ ಸಾವು

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಯ ಮೇಲೆ ಮಳೆಯ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ವರುಣನ ಅಬ್ಬರದಿಂದಾಗಿ ಮಲೆನಾಡಿ ಜನರು ಆತಂಕಕ್ಕೀಡಾಗಿದ್ದಾರೆ.

    ವೃದ್ಧೆ ಸಾವು:
    ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಗುಡುಗು, ಸಿಡಿಲು ಸೇರಿದಂತೆ ಭಾರೀ ಮಳೆಯಾಗುತ್ತಿದೆ. ಮುಂದುವರಿದ ಮಳೆರಾಯನ ಅಬ್ಬರಕ್ಕೆ ಜಿಲ್ಲೆಯಾದ್ಯಂತ ಕಾರ್ಮೋಡ ಆವರಿಸಿದೆ. ಮೂಡಬಿದರೆಯ ಕರೀಂಜೆ ಎಂಬಲ್ಲಿ ಸಿಡಿಲಿಗೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಕರಿಂಜೆ ನಿವಾಸಿ ಅಪ್ಪಿ ಶೆಡ್ತಿ (85) ಮೃತಪಟ್ಟ ವೃದ್ಧೆ.

    ಮುಂಗಾರು ಮಳೆ ಮುಗಿದು, ಇಂದಿನಿಂದ ಹಿಂಗಾರು ಮಳೆ ಶುರುವಾಗಿದೆ. ನೈರುತ್ಯ ಮಾರುತಗಳು ದೇಶದಿಂದ ನಿರ್ಗಮಿಸಿದ್ದು, ಈಶಾನ್ಯ ಮಾರುತಗಳು 10 ದಿನ ಮೊದಲೇ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿವೆ. ಮುಂದಿನ ಮೂರು ದಿನಗಳ ಕಾಲ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಮಳೆ ಆಗಲಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳು, ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಕೊಚ್ಚಿಹೋಯ್ತು ರಸ್ತೆ

    ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಕೊಚ್ಚಿಹೋಯ್ತು ರಸ್ತೆ

    – ಸಿಡಿಲಿಗೆ ಯುವಕ ಬಲಿ

    ಉಡುಪಿ: ಜಿಲ್ಲೆಯ ಹಿರಿಯಡ್ಕ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಕುಸಿದಿದೆ. ಉಡುಪಿಯಲ್ಲಿ ಸಂಜೆಯ ವೇಳೆಗೆ ಏಕಾಏಕಿ ಧಾರಾಕಾರ ಮಳೆಯಾಗಿದ್ದು ಭೂಮಿ ಕುಸಿದು, ರಸ್ತೆ ಕೊಚ್ಚಿಹೋಗಿದೆ.

    ಜಿಲ್ಲೆಯಾದ್ಯಂತ ಮಧ್ಯಾಹ್ನ ನಂತರ ಗುಡುಗು ಸಹಿತ ಮಳೆಯಾಗಿದ್ದೆದು, ಮಳೆಯ ಅಬ್ಬರಕ್ಕೆ ಪೆರ್ಡೂರು- ಹರಿಖಂಡಿಗೆ ಸಂಪರ್ಕ ರಸ್ತೆ ಕುಸಿದಿದೆ. ಜನ ನೋಡ ನೋಡುತ್ತಿದಂತೆ ಗದ್ದೆ ಪಕ್ಕದ ಭೂಮಿ ಕುಸಿದಿದ್ದು, ರಸ್ತೆ ಕೊಚ್ಚಿಕೊಂಡು ಹೋಗಿದೆ. ಭೂಮಿ ತೇವಗೊಂಡು ಕುಸಿದಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಕಳೆದ ಬೇಸಿಗೆಯಲ್ಲಿ ಈ ರಸ್ತೆಗೆ ಡಾಂಬರೀಕರಣ ನಡೆದಿದ್ದು, ರಸ್ತೆ ಸಮೇತ ಭೂಮಿ ಕೊಚ್ಚಿಕೊಂಡು ಹೋಗಿದೆ. ಸುಮಾರು ಒಂದು ಗಂಟೆ ಸುರಿದ ಮಳೆಗೆ ಕೆಲವೆಡೆ ಭತ್ತದ ಬೆಳೆ ಕೊಚ್ಚಿಕೊಂಡು ಹೋಗಿದೆ.

    ಸಿಡಿಲಿಗೆ ಯುವಕ ಬಲಿ: ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹುಗುಲೂರಿನಲ್ಲಿ ಸಿಡಲು ಬಡಿದು ಯುವಕ ಸಾವನ್ನಪ್ಪಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಹ್ಮದ್ ರಫೀ (24) ಮೃತ ದುರ್ದೈವಿಯಾಗಿದ್ದು, ಸಂಜೆ ಗುಡುಗು ಸಹಿತ ಸುರಿದ ಮಳೆಯಿಂದ ತಪ್ಪಸಿಕೊಳ್ಳಲು ಮರದಡಿ ನಿಂತ ಸಂದರ್ಭದಲ್ಲಿ ಸಿಡಲು ಬಡಿದಿದೆ. ಘಟನೆ ಹೂವಿನ ಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಬೀದರ್: ಸಿಡಿಲು ಬಡಿದರೂ ಭಕ್ತರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಉಪ್ಪಳ ಗ್ರಾಮದ ಬಳಿ ಇರುವ ಗುತ್ತಿ ಭವಾನಿ ಮಾತಾ ದೇವಸ್ಥಾನದಲ್ಲಿ ನಡೆದಿದೆ.

    ವಿಜಯದಶಮಿ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ದೇವಾಲಯಕ್ಕೆ ಸಿಡಿಲು ಬಡಿದಿದೆ. ಸಿಡಿಲ ಬಡಿತಕ್ಕೆ ದೇವಸ್ಥಾನದ ಗೋಪುರ, ಗೋಡೆ ಮುರಿದು ಹೋದರೂ ದೇವಸ್ಥಾನದ ಒಳಗಡೆ ಇದ್ದ ಭಕ್ತರು ಪವಾಡ ಎಂಬಂತೆ ಅಪಾಯದಿಂದ ಪಾರಾಗಿದ್ದಾರೆ.

    ಭಕ್ತರೊಬ್ಬರು ಪ್ರತಿಕ್ರಿಯಿಸಿ, ಬಡಿದ ಸಿಡಿಲು ದೇವಾಲಯ ಒಳಗಡೆ ಹೋದ ಅನುಭವವಾಗಿದೆ. ನಂತರ ಈ ಸಿಡಿಲು ಕಾಣೆ ಆಗಿದ್ದು ಹೇಗೆ ಎನ್ನುವುದೇ ಆಶ್ಚರ್ಯ ಎಂದು ಹೇಳಿದ್ದಾರೆ.

    ಈಗ ಸಿಡಿಲನ್ನೇ ತಡೆದು ಭಕ್ತರನ್ನು ಕಾಪಾಡಿದ ಭಾವಾನಿ ಮಾತಾ ದೇವಸ್ಥಾನ ನೋಡಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬರುತ್ತಿದೆ.

  • ಮನೆಯ ಗೋಡೆ ಕುಸಿದು 5 ವರ್ಷದ ಮಗು ಸಾವು- ಸಿಡಿಲಿಗೆ ಮೂವರು ರೈತ ಮಹಿಳೆಯರು ಬಲಿ

    ಮನೆಯ ಗೋಡೆ ಕುಸಿದು 5 ವರ್ಷದ ಮಗು ಸಾವು- ಸಿಡಿಲಿಗೆ ಮೂವರು ರೈತ ಮಹಿಳೆಯರು ಬಲಿ

    ಹಾವೇರಿ: ಇಂದು ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು ಐದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು ಐದು ವರ್ಷದ ಸಂದೀಪ ಮೆಳ್ಳಳ್ಳಿ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ 6 ವರ್ಷದ ಪ್ರತಾಪ, ಹದಿಮೂರು ವರ್ಷದ ರಕ್ಷಿತಾ ಮತ್ತು ನಾಲ್ವತ್ತೈದು ವರ್ಷದ ನೀಲಮ್ಮ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅಕ್ಕಿಆಲೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮದ ಗುಡ್ಡಪ್ಪ ಅಂಗಡಿ ಎಂಬುವರ ಮನೆಗೆ ಮಕ್ಕಳು ಆಟವಾಡಲು ತೆರಳಿದ್ದ ವೇಳೆ ಗುಡ್ಡಪ್ಪನ ಪಕ್ಕದ ಮನೆಯ ಗೋಡೆ ಬಿದ್ದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಆಡೂರು ಠಾಣೆ ಪಿಎಸ್‍ಐ ಆಂಜನೇಯ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಬೆಳಗ್ಗಿನಿಂದ ಸಂಜೆವರೆಗೂ ಬಿಸಿಲಿನ ತಾಪ ಹೆಚ್ಚಾಗಿದ್ದರೆ, ರಾತ್ರಿ ವೇಳೆಗೆ ಗುಡುಗು ಸಿಡಿಲಲು ಸಮೇತ ಧಾರಾಕಾರವಾಗಿ ಮಳೆಯಾಗುತ್ತಿದೆ. ಜಿಲ್ಲೆಯ ರಾಣೇಬೆನ್ನೂರು, ಸವಣೂರು ಹಾಗೂ ಹಾವೇರಿ ನಗರದ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ.

    ಸಿಡಲಿಗೆ 3 ಸಾವು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಕಿರಟಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತರನ್ನು ದ್ರಾಕ್ಷಾಯಿಣಿ ತೋಟಗೇರಿ (35), ವಿಜಯಲಕ್ಷ್ಮಿ ತೋಟಗೇರಿ (39) ಎಂದು ಗುರುತಿಸಲಾಗಿದೆ. ಮೃತರಿಬ್ಬರು ಒಂದೇ ಕುಟುಂಬದವರಾಗಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಬೆಟಗೇರಿ ಪೊಲೀಸರು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ರಾಜನಾಳ ಗ್ರಾಮದ ಸುಶಿಲೆವ್ವ ಪರಸಪ್ಪ ಚಿಮ್ಮಲಗಿ (50) ಎಂಬವರು ಕೂಡ ಸಿಡಿಲಿಗೆ ಬಲಿಯಾಗಿದ್ದು, ಜಮೀನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ್ಕಳದಲ್ಲಿ ಎದ್ದ ಸುಂಟರಗಾಳಿಗೆ ಸಿಕ್ತು ಕಾರಣ

    ಕಾರ್ಕಳದಲ್ಲಿ ಎದ್ದ ಸುಂಟರಗಾಳಿಗೆ ಸಿಕ್ತು ಕಾರಣ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ರಾದ್ಧಾಂತ ಎಬ್ಬಿಸಿದ್ದ ಸುಂಟರಗಾಳಿ ಏಳು ಮನೆಗಳನ್ನು ಹಾರಿಸಿತ್ತು. ನೂರಾರು ಎಕ್ರೆ ಕೃಷಿಯನ್ನು ಹಿಚುಕಿ ಹಾಕಿತ್ತು. ಕೆರೆ ಗದ್ದೆಯ ನೀರನ್ನು ಇನ್ನೂರು ಮೀಟರ್ ಎತ್ತರಕ್ಕೆ ಹಾರಿಸಿತ್ತು. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಕಾರಣ ಏನು ಎಂದು ಹುಡುಕಿದ ಪಬ್ಲಿಕ್ ಟಿವಿಗೆ ಇದೀಗ ಕಾರಣ ಸಿಕ್ಕಿದೆ.

    ಆಗಸ್ಟ್ 1 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪೆರ್ವಾಜೆ ಗ್ರಾಮದಲ್ಲಿ ಸಿಡಿಲು ಬಡಿದಂತೆ, ಭೂಮಿ ಕಂಪಿಸಿದಂತೆ ಅನುಭವವಾಗಿತ್ತು. ಆ ಮಧ್ಯಾಹ್ನ ಬೀಸಿದ್ದ ಸುಂಟರಗಾಳಿಗೆ ಇದೀಗ ಕಾರಣ ಸಿಕ್ಕಿದೆ. ಉಡುಪಿಯ ಭೌತ ಶಾಸ್ತ್ರಜ್ಞ ಡಾ. ಎ.ಪಿ ಭಟ್ ಸಂಶೋಧನೆ ನಡೆಸಿ, ಸ್ಥಳ ವಿಮರ್ಶೆ ಮಾಡಿದ್ದಾರೆ. ಭೂಮಿಯ ಮೇಲೆ ನಿರ್ವಾತ ಪ್ರದೇಶ ಸೃಷ್ಟಿಯಾಗುವುದೇ ಸುಂಟರಗಾಳಿಯ ಜನ್ಮಕ್ಕೆ ಕಾರಣ ಎಂದು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾ. ಎ.ಪಿ ಭಟ್, ಕಾರ್ಕಳ ಎನ್ನುವ ತಾಲೂಕಿನ ಹೆಸರಿನ ಅರ್ಥ ಕಪ್ಪು ಕಲ್ಲುಗಳ ಊರು ಎಂದು. ಕಾರ್ಕಳದಲ್ಲಿ ಯಾವ ಭಾಗಕ್ಕೆ ಹೋದರೂ ಅಲ್ಲಿ ಕರಿ ಕಲ್ಲುಗಳೇ ಕಾಣಸಿಗುತ್ತವೆ. ಕಳೆದ ಐದಾರು ದಿನದಿಂದ ಕಾರ್ಕಳದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆ ನಿಂತು ಎರಡು ದಿನ ವಿಪರೀತ ಬಿಸಿಲು. ಬಿಸಿಲಿಗೆ ಬಂಡೆಗಳೆಲ್ಲಾ ಕಾದು ಕೆಂಡವಾಗಿದೆ. ಸುತ್ತಮುತ್ತ ಕಾಡಿನ ವಾತಾವರಣ ತಂಪಿತ್ತು. ಅದ್ದರಿಂದ ಬಿಸಿಗಾಳಿಯ ಜೊತೆ ತಂಗಾಳಿ ಸೇರಿ ಖಾಲಿ ಜಾಗ ಅಂದ್ರೆ ನಿರ್ವಾತ ಪ್ರದೇಶ ಸೃಷ್ಟಿಯಾಗಿತ್ತು. ಈ ಸಂದರ್ಭ ಸುಂಟರಗಾಳಿ ಹುಟ್ಟಿ ಸುರುಳಿಯಾಗುತ್ತದೆ. ಗಾಳಿ ಶಕ್ತಿ ಪಡೆದು ಸುತ್ತೆಲ್ಲಾ ಬೀಸುತ್ತದೆ. ಸಿಕ್ಕ ಸಿಕ್ಕ ವಸ್ತುಗಳನ್ನು ಸುತ್ತಿ ಬಿಸಾಕುತ್ತದೆ. ಕಾರ್ಕಳ ನಕ್ರೆಕಲ್ಲು ಎಂಬಲ್ಲಿ ಸುಂಟರಗಾಳಿ ಹುಟ್ಟಿದೆ. ಮುಂದೆ ಅದು ಕಾರ್ಕಳ, ಪೆರ್ವಾಜೆಯಾಗಿ ಮಾಳ ಗ್ರಾಮದ ಕಡೆ ಹಾರಿದೆ. ಗದ್ದೆ, ನದಿ, ಕೆರೆಯ ನೀರನ್ನು ಬಾನಿಗೆ ಚಿಮ್ಮಿಸಿದೆ ಎಂದು ಹೇಳಿದ್ದಾರೆ.

    ಸಮುದ್ರದಲ್ಲಿ ಸುಂಟರಗಾಳಿ ಸಾಮಾನ್ಯ. ಮೈದಾನಗಳಲ್ಲಿ ಬೇಸಿಗೆ ಸುಳಿಗಾಳಿ ನೋಡಿದ್ದೇವೆ. ಆದರೆ ಇಲ್ಲಿ ಮಳೆಗಾಲದ ಸುಂಟರಗಾಳಿ ಅಲ್ಲೋಲ ಕಲ್ಲೋಲ ಮಾಡಿದೆ. ಕಾಡು ನಾಶದಿಂದ ಇಷ್ಟೆಲ್ಲಾ ಅವಾಂತರ ಆಗಿರೋದು ಸತ್ಯ. ಗಿಡ ನೆಟ್ಟು ಕಾಡನ್ನು ವೃದ್ಧಿಮಾಡದಿದ್ದರೆ. ಈಗ ಕಾರ್ಕಳಕ್ಕಾದ ಗತಿ ಮುಂದೊಂದು ದಿನ ನಮ್ಮ ನಿಮ್ಮ ಊರಿಗೆ ಬಂದರೂ ಆಶ್ಚರ್ಯವಿಲ್ಲ ಎಂದು ಎ.ಪಿ. ಭಟ್ ಹೇಳಿದ್ದಾರೆ.

  • ಸಿಡಿಲ ಬಡಿತಕ್ಕೆ 35 ಮಂದಿ ಬಲಿ

    ಸಿಡಿಲ ಬಡಿತಕ್ಕೆ 35 ಮಂದಿ ಬಲಿ

    ಲಕ್ನೋ: ಉತ್ತರ ಪ್ರದೇಶದ ಹಲವು ಕಡೆ ನಿರಂತರ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಸುಮಾರು 35 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಭಾನುವಾರದಂದು ರಾಜ್ಯದ ವಿವಿಧೆಡೆಯಲ್ಲಿ ಸಿಡಿಲು ಬಡಿದು 35 ಮಂದಿ ಪ್ರಾಣಬಿಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಒಂದೇ ದಿನದಲ್ಲಿ ಕಾನ್ಪುರ್ ಮತ್ತು ಫತೇಪುರ್ ಜಿಲ್ಲೆಗಳಲ್ಲಿ ಸಿಡಿಲು ಬಡಿದ ಪರಿಣಾಮ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವನ್ನಪ್ಪ್ದಿದ್ದಾರೆ.

    ವರದಿ ಪ್ರಕಾರ ಕಾನ್ಪುರದಲ್ಲಿ 7 ಮಂದಿ ಹಾಗೂ ಫತೇಪುರದಲ್ಲಿ 7 ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಝಾನ್ಸಿಯಲ್ಲಿ 5, ಜಾಲೌನ್ ನಲ್ಲಿ 4, ಹಮೀರ್‍ಪುರದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ, ಗಾಜಿಪುರದಲ್ಲಿ 2 ಮತ್ತು ಜಾನ್‍ಪುರದಲ್ಲಿ 1 ಮತ್ತು ಪ್ರತಾಪಗಢದಲ್ಲಿ ಓರ್ವ ವ್ಯಕ್ತಿ ಜೀವಬಿಟ್ಟಿದ್ದಾನೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಡಿಲು ಬಡಿದು ಹಾಗೂ ಹಾವು ಕಚ್ಚಿ ಸಾವನ್ನಪ್ಪಿರುವ ಕುಟುಂಬಕ್ಕೆ ಸಂತಾಪ ಸೂಚಿಸಿ, ರಾಜ್ಯದಲ್ಲಿ ಮಳೆಯಿಂದಾಗಿ ಆಗಿರುವ ಸಾರ್ವಜನಿಕ ನಷ್ಟದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂತ್ರಸ್ತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.

    ಅಷ್ಟೇ ಅಲ್ಲದೆ ಸಿಡಿಲ ಬಡಿತಕ್ಕೆ ಗಾಯಗೊಂಡಿರುವ ಮಂದಿಗೂ ಕೂಡ ಸರ್ಮಪಕವಾಗಿ ಚಿಕಿತ್ಸೆ ಒದಗಿಸಿ. ಸಂತ್ರಸ್ತರಿಗೆ ನೀಡುವ ಪರಿಹಾರ ಕಾರ್ಯದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಸಿಡಿಲಿನ ಆರ್ಭಟಕ್ಕೆ ಮೂವರು ಬಲಿ

    ಸಿಡಿಲಿನ ಆರ್ಭಟಕ್ಕೆ ಮೂವರು ಬಲಿ

    ವಿಜಯಪುರ: ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲೂಕಿನ ಮಂದ್ರೂಪ ಗ್ರಾಮದಲ್ಲಿ ಸಿಡಿಲು ತಾಗಿ ಮೂವರು ಸಾವನ್ನಪ್ಪಿದ್ದಾರೆ.

    ಮೃತರನ್ನು ಪಂತುಸಿಂಗ್ ರಜಪೂತ (40), ಸಂಕೇತ್ ಚೌರಮೋಳೆ (17) ಮತ್ತು ಪಾರ್ವತಿ ಕೋರೆ (44) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರವಿಕಾಂತ ಮೋಳೆ ಹಾಗೂ ಧರೆಪ್ಪ ಮೇತ್ರೆ ಗಾಯಗೊಂಡಿದ್ದು, ಇಬ್ಬರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ತಾಗಿದ್ದು, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಂದ್ರೂಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇಂದು ಸಂಜೆ ವಿಜಯಪುರ ನಗರದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಹಳ್ಳದಂತೆ ನೀರು ಹರಿದಿದೆ. ನಗರದ ಜಾಡರ ಓಣಿ, ಹರಣ ಶಿಖಾರಿ ರಸ್ತೆಗಳಲ್ಲಿ ಹೆಚ್ಚು ನೀರು ಹರಿದಿದ್ದರಿಂದ ವಾಹನ ಸವಾರರು ಪರದಾಡುವಂತಾಯ್ತು. ವಿಜಯಪುರದ ಸುತ್ತಲಿನ ಪರಿಸರದಲ್ಲಿ ಮಳೆಯಾಗಿದ್ದು, ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಮೊದಲ ದಿನವೇ 115 ಮಿಲಿಮೀಟರ್ ಮಳೆ – ಉಡುಪಿಯಲ್ಲಿ ತುಂಬಿ ಹರಿಯುತ್ತಿದೆ ತೊರೆಗಳು

    ಮೊದಲ ದಿನವೇ 115 ಮಿಲಿಮೀಟರ್ ಮಳೆ – ಉಡುಪಿಯಲ್ಲಿ ತುಂಬಿ ಹರಿಯುತ್ತಿದೆ ತೊರೆಗಳು

    ಉಡುಪಿ: ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 120 ಮಿಲಿಮೀಟರ್ ಮಳೆ ಬಿದ್ದಿದೆ. ನದಿ, ತೊರೆಗಳು ಉಕ್ಕಿ ಹರಿಯಲಾರಂಭಿಸಿದೆ.

    ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಕಳೆದ ರಾತ್ರಿ ಪೂರ್ತಿ ಭಾರೀ ಮಳೆಯಾಗಿದ್ದು, ಸಣ್ಣಪುಟ್ಟ ತೊರೆಗಳು ತುಂಬಿ ಹರಿಯುತ್ತಿದೆ. ಮಳೆ ಜಾಸ್ತಿ ಆಗಿರುವ ಕಾರಂ ಸಮುದ್ರದ ಅಬ್ಬರ ಜಾಸ್ತಿಯಾಗಿದೆ. ಮಲ್ಪೆ ಕಡಲ ತೀರದತ್ತ ದೊಡ್ಡ ದೊಡ್ಡ ಅಲೆಗಳು ಅಪ್ಪಳಿಸುತ್ತಿದೆ.

    ಸಾಮಾನ್ಯವಾಗಿ ಜುಲೈ ತಿಂಗಳ ವಿಪರೀತ ಮಳೆ ಸಂದರ್ಭ 100 ಮಿಲಿಮೀಟರ್ ಮಳೆಯಾಗುವುದು ವಾಡಿಕೆ. ಆದ್ರೆ ಮೊದಲ ಮಳೆಯೇ 120 ಮಿಲಿಮೀಟರ್ ದಾಟಿದೆ. ಈ ಮೂಲಕ ಈ ಮಳೆ ಒಂದು ಹಂತದ ನೀರಿನ ಬರ ನೀಗಿಸಿದೆ. ಜಿಲ್ಲೆಯಾದ್ಯಂತ ಸುರಿದ ಮಳೆಗೆ ನಗರದ ಹಳ್ಳಕೊಳ್ಳಗಳು ತುಂಬಿ ಹರಿದಿದೆ. ರಸ್ತೆಗಳಲ್ಲಿ, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.

    ಜಿಲ್ಲೆಯಾದ್ಯಂತ ಮಳೆ ಮೋಡ ಆವರಿಸಿದ್ದು, ಇಂದು ಕೂಡಾ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಸಿಡಿಲು ಗುಡುಗು ಮಿಶ್ರಿತ ಮಳೆಯಾಗಿದ್ದು, ವಿದ್ಯುತ್ ವ್ಯತ್ಯಯ, ಕೆಲವೆಡೆ ಮರ ಉರುಳಿದ್ದು ಬಿಟ್ಟರೆ ಯಾವುದೇ ಅನಾಹುತಗಳಾಗಿಲ್ಲ.

  • ಸಿಡಿಲು ಬಡಿದು ದೇವಾಲಯದ ಗೋಪುರ ಛಿದ್ರ

    ಸಿಡಿಲು ಬಡಿದು ದೇವಾಲಯದ ಗೋಪುರ ಛಿದ್ರ

    ಚಿಕ್ಕಬಳ್ಳಾಪುರ: ದೇವಾಲಯಕ್ಕೆ ಸಿಡಿಲು ಬಡಿದ ಪರಿಣಾಮ ದೇವಾಲಯದ ಗೋಪುರ ಛಿದ್ರ-ಛಿದ್ರವಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ದೇವರಾದ ಶ್ರೀ ಲಕ್ಷ್ಮೀಜನಾರ್ಧನಸ್ವಾಮಿ ದೇಗುಲಕ್ಕೆ ಸಿಡಿಲು ಬಡಿದಿದ್ದು, ಪರಿಣಾಮ ದೇವಾಲಯದ ಗೋಪುರದ ಕಳಸ ಕಿತ್ತು ಬಂದಿದೆ. ಗೋಪುರದ ಬಹುತೇಕ ಭಾಗ ಕಳಚಿದ್ದು ಸಿಡಿಲು ಬಡಿದ ಶಬ್ಧಕ್ಕೆ ಇಡೀ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ.

    ಸಿಡಲಿನ ಹೊಡೆತಕ್ಕೆ ದೇವಾಲಯದ ಗೋಡೆಗಳು ಬಿರುಕು ಬಿಟ್ಟಿದ್ದು, ಗೋಡೆ ಹಾಗೂ ನೆಲಹಾಸುಗಳಿಗೆ ಅಳವಡಿಸಿದ್ದ ಟೈಲ್ಸ್ ಗಳು ಕಿತ್ತು ಬಂದಿವೆ. ಸಿಡಿಲಿನ ಶಬ್ಧದಿಂದ ಬೆಚ್ಚಿಬಿದ್ದಿರುವ ಗ್ರಾಮಸ್ಥರು ದೇವಾಲಯದ ಬಳಿ ಬಂದು ನೋಡಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ.

    ದೇವಾಲಯದ ಬಹುತೇಕ ಭಾಗ ಹಾನಿಗೆ ಒಳಗಾಗಿದೆ. ಗ್ರಾಮಸ್ಥರನ್ನು ರಕ್ಷಿಸುವ ಸಲುವಾಗಿ ದೇವರೇ ತನ್ನ ಮೇಲೆ ಸಿಡಿಲನ್ನು ಬರ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ದೇವರ ಶಕ್ತಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

  • ಸಿಡಿಲಿಗೆ ಬಿದ್ದ ಮನೆ – ಮಕ್ಕಳು ಸೇರಿ ಮೂವರ ದುರ್ಮರಣ

    ಸಿಡಿಲಿಗೆ ಬಿದ್ದ ಮನೆ – ಮಕ್ಕಳು ಸೇರಿ ಮೂವರ ದುರ್ಮರಣ

    ಕಲಬುರಗಿ: ಸಿಡಿಲಿಗೆ ಮನೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ನಡೆದಿದೆ.

    ಅಬಿದಾಭಿ (60), ಅಲ್ದಿಯಾ (12), ಶಪೀಕ್ (10) ಮೃತರು. ಮೃತ ಅಬಿದಾಭಿ ಕಾಳಗಿ ತಾಲೂಕಿನ ಕುಕನೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ರಂಜಾನ್ ಹಬ್ಬದ ಇಫ್ತಿಯಾರ್ ಹಿನ್ನೆಲೆಯಲ್ಲಿ ಮಂಗಲಗಿ ಗ್ರಾಮಕ್ಕೆ ಬಂದಿದ್ದರು. ಮೂವರು ಕೂಡ ಸಂಬಂಧಿಗಳಾಗಿದ್ದು, ರಾತ್ರೀ ಊಟ ಮಾಡಿ ಒಂದೇ ಕಡೆ ಮಲಗಿದ್ದರು.

    ಇಂದು ನಸುಕಿನ ಜಾವದಲ್ಲಿ ಸಿಡಿಲು ಬಡಿದಿದೆ. ಪರಿಣಾಮ ಮಲಗಿದ್ದವರ ಮೇಲೆ ಮನೆ ಬಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಈ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸೇಡಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.