Tag: ಸಿಡಿಲು

  • ರಾಜ್ಯದ  ವಿವಿಧೆಡೆ ಸಿಡಿಲು ಮಳೆಗೆ ಇಬ್ಬರು ಮಹಿಳೆಯರು ಬಲಿ

    ರಾಜ್ಯದ ವಿವಿಧೆಡೆ ಸಿಡಿಲು ಮಳೆಗೆ ಇಬ್ಬರು ಮಹಿಳೆಯರು ಬಲಿ

    ಕಾರವಾರ/ಹಾವೇರಿ: ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಪರಿಣಾಮ ಸಿಡಿಲಿಗೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಭಾನುವಾರ ರಾತ್ರೀ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಸಿಡಿಲು ಬಡಿದು ಶೋಭಾ ಚಂದ್ರಕಾಂತ ಗೌಡ (37) ಸಾವನ್ನಪ್ಪಿದ್ದಾರೆ. ಅಲ್ಲದೇ ಸಿಡಿಲು ಬಡಿದು ಇಬ್ಬರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಈ ಘಟನೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಇನ್ನೂ ಹಾವೇರಿ ಜಿಲ್ಲೆಯ ಕೆಲವೆಡೆ ಸಿಡಿಲು, ಗುಡುಗು ಮತ್ತು ಬಿರುಗಾಳಿ ಸಮೇತ ಧಾರಾಕಾರ ಮಳೆಯಾಗಿದೆ. ಸಿಡಿಲು ಬಡಿದು ಓರ್ವ ರೈತ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸನಿಡನೇಗಿಲು ಗ್ರಾಮದ ಬಳಿ ನಡೆದಿದೆ.

    ಮೃತಪಟ್ಟ ರೈತ ಮಹಿಳೆಯನ್ನ ಮಲ್ಲವ್ವ ನಾಯ್ಕರ (55) ಎಂದು ಗುರುತಿಸಲಾಗಿದೆ. ಜಮೀನಿಗೆ ಮೆಕ್ಕೆಜೋಳ ಬಿತ್ತನೆ ಮಾಡಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹಿರೇಕೆರೂರು ಪಟ್ಟಣದಲ್ಲಿ ಬಿರುಗಾಳಿಗೆ ಸರ್ಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿವೆ. ಬಿರುಗಾಳಿ ಮಳೆಗೆ ಜಿಲ್ಲೆಯ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಬೆಳಗಾವಿ, ಧಾರವಾಡ ಮತ್ತು ಮಲೆನಾಡು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಇತ್ತ ವಿಜಯಪುರ ಜಿಲ್ಲೆಯಲ್ಲೂ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದೆ. ಹೀಗಾಗಿ ಜಿಲ್ಲಾದ್ಯಂತ ಆರೆಂಜ್ ಅಲರ್ಟ್ ಘೋಷಣೆ

  • ಮೆಕ್ಕೆಜೋಳ ಬಿತ್ತಲು ಹೋಗಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು

    ಮೆಕ್ಕೆಜೋಳ ಬಿತ್ತಲು ಹೋಗಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು

    ಹಾವೇರಿ: ಹಾವೇರಿ ಜಿಲ್ಲೆಯ ಕೆಲವೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ರೈತ ಮಹಿಳೆಯೊಬ್ಬರು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.

    ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸನಿಡನೇಗಿಲು ಗ್ರಾಮದ ಬಳಿ ಘಟನೆ ನಡೆದಿದ್ದು, ಮೃತಪಟ್ಟ ರೈತ ಮಹಿಳೆಯನ್ನು ಮಲ್ಲವ್ವ ನಾಯ್ಕರ (55) ಎಂದು ಗುರುತಿಸಲಾಗಿದೆ. ಮೆಕ್ಕೆಜೋಳ ಬಿತ್ತನೆ ಮಾಡಲು ಜಮೀನಿಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಜಿಲ್ಲೆಯ ಕೆಲವೆಡೆ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನ ತ್ತತರಿಸಿ ಹೋಗಿದ್ದಾರೆ. ಹಿರೇಕೆರೂರು ಪಟ್ಟಣದಲ್ಲಿ ಸಹ ಬಿರುಗಾಳಿ ಸಹಿತ ಮಳೆಗೆ ಸರಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಬಿರುಗಾಳಿ ಮಳೆಗೆ ಜಿಲ್ಲೆಯ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಆತಂಕದಲ್ಲೇ ಜನ ಬದುಕು ದೂಡುತ್ತಿದ್ದಾರೆ.

  • ಸಿಡಿಲಿಗೆ ಇಬ್ಬರು ಯುವತಿಯರು, ತಂದೆ ಸಾವು, ಹಾವೇರಿಯಲ್ಲಿ ತೆಂಗಿನ ಮರಕ್ಕೆ ಬೆಂಕಿ

    ಸಿಡಿಲಿಗೆ ಇಬ್ಬರು ಯುವತಿಯರು, ತಂದೆ ಸಾವು, ಹಾವೇರಿಯಲ್ಲಿ ತೆಂಗಿನ ಮರಕ್ಕೆ ಬೆಂಕಿ

    ಹಾವೇರಿ, ಕೋಲಾರ: ರಾಜ್ಯದ ಕೆಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೋಲಾರದ ಗಡಿ, ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿದ್ದರೆ, ಹಾವೇರಿಯಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ.

    ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಗ್ರಾಮದ ರೈತ ರಾಮಕೃಷ್ಣ ಹಾಗೂ ಇಬ್ಬರು ಪುತ್ರಿಯರು, ಒಂದು ಹಸು ಸಾವನ್ನಪ್ಪಿದೆ.

    ತಂದೆ ರಾಮಕೃಷ್ಣ (52), ಎಂಟೆಕ್ ಮಾಡುತ್ತಿದ್ದ ಮಕ್ಕಳಾದ ರಮಾದೇವಿ(24), ಮೀನಾ (22) ಮೃತ ದುರ್ದೈವಿಗಳು. ತೋಟದ ಮನೆ ಬಳಿ ಹಸುವಿನ ಹಾಲು ಕರೆಯುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಸಿಡಿಲಾಘಾತದಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಸೇರಿದಂತೆ ಆಂಧ್ರದ ಗಡಿಯಲ್ಲಿ ಕಳೆದ 3 ದಿನಗಳಿಂದ ಮಳೆರಾಯನ ಅರ್ಭಟ ಜೋರಾಗಿದ್ದು, ಗುಡುಗು, ಬಿರುಗಾಳಿ ಸಹಿತ ಜೋರು ಮಳೆಗೆ 3 ದಿನಗಳಿಂದ ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ.

    ಇತ್ತ ಹಾವೇರಿಯಲ್ಲಿ ಸಿಡಿಲು ಬಡಿದು ತೆಂಗಿನಮರಕ್ಕೆ ಬೆಂಕಿ ಬಿದ್ದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಏಳುಕೋಟೆಪ್ಪ ಅವರ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು, ಹೊತ್ತಿ ಉರಿದಿದೆ.

  • ರಾಯಚೂರಿನಲ್ಲಿ ಸಿಡಿಲಿಗೆ 4 ಎತ್ತು ಬಲಿ – ಬಿರುಗಾಳಿಗೆ 9 ಕುಟುಂಬ ಬೀದಿಗೆ

    ರಾಯಚೂರಿನಲ್ಲಿ ಸಿಡಿಲಿಗೆ 4 ಎತ್ತು ಬಲಿ – ಬಿರುಗಾಳಿಗೆ 9 ಕುಟುಂಬ ಬೀದಿಗೆ

    ರಾಯಚೂರು: ತಾಲೂಕಿನ ಅರಷಿಗೆರೆಯಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಬಯಲು ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಸಾವನ್ನಪ್ಪಿವೆ.

    ಅರಷಿಗೆರೆಯ ರೈತ ಶೇಖರಯ್ಯವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ. ಮುಂಗಾರು ಬಿತ್ತನೆಯ ಸಂದರ್ಭದಲ್ಲಿ ಎತ್ತುಗಳ ಕಳೆದುಕೊಂಡಿರುವುದು ರೈತನಿಗೆ ತುಂಬಲಾರದ ನಷ್ಟವಾಗಿದೆ. ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ರಾಯಚೂರು ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ಬಿರುಗಾಳಿಗೆ 9 ಟಿನ್ ಶೆಡ್ ಮನೆಗಳು ಸಂಪೂರ್ಣ ಜಖಂಗೊಂಡಿವೆ. ಟಿನ್‍ಗಳು ಗಾಳಿಗೆ ಹಾರಿ ವಿದ್ಯುತ್ ತಂತಿಯ ಮೇಲೆ ಬಿದ್ದಿವೆ. ಮನೆಯಲ್ಲಿನ ದವಸ ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳು ಬಿರುಗಾಳಿ ಸಹಿತ ಮಳೆಗೆ ಹಾಳಾಗಿವೆ. ಬಿರುಗಾಳಿಯಿಂದ ಒಂಭತ್ತು ಬಡ ಕುಟುಂಬಗಳು ಸೂರನ್ನು ಕಳೆದುಕೊಂಡು ವಾಸಮಾಡಲು ಜಾಗವಿಲ್ಲದೆ ಪರದಾಡುತ್ತಿವೆ.

    ರಮೇಶ್, ಜಿಂದಾವಲಿ, ಅಬ್ದುಲ್ ಸಾಬ್, ಮಾರೆಪ್ಪ, ಹುಲಿಗೆಮ್ಮ, ಹನುಮಂತಿ ಸೇರಿ ಒಂಭತ್ತು ಜನರ ಮನೆಗಳು ಸಂಪೂರ್ಣ ಹಾಳಾಗಿವೆ. ತಾಲೂಕು ಆಡಳಿತ ಕೂಡಲೇ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಮನೆ ಕಳೆದುಕೊಂಡ ನಿರಾಶ್ರಿತರು ಒತ್ತಾಯಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಅಲ್ಲಲ್ಲಿ ಭಾರಿ ಗಾಳಿ ಹಾಗೂ ಮಳೆಯಾಗಿದೆ.

  • ಮನೆಯಲ್ಲಿ ಕುಳಿತ್ತಿದ್ದ ಯುವಕನಿಗೆ ಸಿಡಿಲು ಬಡಿದು ಸಾವು

    ಮನೆಯಲ್ಲಿ ಕುಳಿತ್ತಿದ್ದ ಯುವಕನಿಗೆ ಸಿಡಿಲು ಬಡಿದು ಸಾವು

    ಉಡುಪಿ: ಭಾನುವಾರ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲೂ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.

    ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಈ ಘಟನೆ ನಡೆದಿದ್ದು, ಕಟಪಾಡಿ ಏಣಗುಡ್ಡೆ ನಿವಾಸಿ ಭರತ್ (22) ಮೃತ ಯುವಕ.

    ಮೃತ ಭರತ್ ಸಿಡಿಲು ಸಹಿತ ಮಳೆ ಬರುವಾಗ ಮನೆಯಲ್ಲಿ ಕುಳಿತಿದ್ದನು. ಆದರೂ ಸಿಡಿಲು ಬಡಿದು ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಭರತ್ ಕೊನೆಯುಸಿರೆಳೆದಿದ್ದಾರೆ.

    ಮಾಹಿತಿ ತಿಳಿದು ಜಿಲ್ಲೆಯ ಕಾಪು ತಾಲೂಕಿನ ಪೊಲೀಸ್ ಠಾಣಾಧಿಕಾರಿ ರಾಜ್‍ಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಮಲೆನಾಡಲ್ಲಿ ಭಾರೀ ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

    ಮಲೆನಾಡಲ್ಲಿ ಭಾರೀ ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭರಣಿ ಮಳೆ ಅಬ್ಬರಕ್ಕೆ ಮಲೆನಾಡಿಗರು ತತ್ತರಿಸಿದೆ.

    ಮೂಡಿಗೆರೆಯಲ್ಲಿ ಸಂಜೆಯಿಂದ ಧಾರಾಕಾರ ಮಳೆ ಸುರಿದಿದ್ದು, ಜನ ಆತಂಕಕ್ಕೀಡಾಗಿ, ಕಳೆದ ವರ್ಷದ ಮಳೆಯನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ತೋರಣಮಾವು ಗ್ರಾಮದಲ್ಲಿ ಮಳೆ ಆರಂಭಕ್ಕೂ ಮುನ್ನ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ನೋಡನೋಡ್ತಿದ್ದಂತೆ ತೆಂಗಿನ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗ ಕಳಸಾಪುರ, ಬೆಳವಾಡಿ ಹಾಗೂ ಮಾಗಡಿ ಸುತ್ತಮುತ್ತಲೂ ವರುಣದೇವ ಅಬ್ಬರಿಸಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆ ನೀರು ರಸ್ತೆ ಮೇಲೆ ಉಕ್ಕಿ ಹರಿದಿದೆ. ಕಳಸಾಪುರ ಗ್ರಾಮದಲ್ಲಿ ಕೆಲ ಮನೆಗಳ ಒಳಗೂ ನೀರು ನುಗ್ಗಿದ್ದು, ತಗ್ಗು ಪ್ರದೇಶದ ಜನ ಪರದಾಡುವಂತಾಗಿದೆ.

    ಕಳಸಾಪುರ, ಬೆಳವಾಡಿ ಸಂಪೂರ್ಣ ಬಯಲುಸೀಮೆ ಭಾಗ. ಈ ಭಾಗದಲ್ಲಿ ಮಳೆ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಡೂರು ತಾಲೂಕಿನ ಬೀರೂರು ಸುತ್ತಮುತ್ತ ಕೂಡ ಸಾಧಾರಣ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೆಲ ಭಾಗ ಸಂಜೆಯಿಂದಲೇ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದು, ಮಳೆಯ ಅಬ್ಬರ ಕಂಡು ಜನ ಕಂಗಾಲಾಗಿದ್ದಾರೆ.

  • ಸಿಡಿಲು ತಾಗಿ ಹೊತ್ತಿ ಉರಿದ ತೆಂಗಿನ ಮರ

    ಸಿಡಿಲು ತಾಗಿ ಹೊತ್ತಿ ಉರಿದ ತೆಂಗಿನ ಮರ

    ಉಡುಪಿ: ಸಿಡಿಲು ತಾಗಿ ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಹೆಬ್ರಿಯ ವಂಡರಬೆಟ್ಟಿನಲ್ಲಿ ನಡೆದಿದೆ.

    ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚಾರ ಯಶವಂತ ಕಾಮತ್ ಮನೆ ತೆಂಗಿನ ತೋಟದ ಮರವೊಂದಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಹಸಿ ತೆಂಗಿನ ಮರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇನ್ನು ಮರಕ್ಕೆ ಬೆಂಕಿ ಹತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಉಡುಪಿಯ ಕುಂದಾಪುರ, ಕಾರ್ಕಳ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಜನಕ್ಕೆ ವರುಣದೇವ ತಂಪು ನೀಡಿದ್ದಾನೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಸಹ ಮಳೆಯಾಗುವ ಸಾಧ್ಯತೆಗಳಿವೆ.

    ಚಿಕ್ಕಮಗಳೂರುಇ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರದಲ್ಲಿ ಮಳೆಯಾಗಿದೆ. ಮೂಡಿಗೆರೆಯ ಬಣಕಲ್, ಕೊಟ್ಟಿಗೆಹಾರ, ಬಾಳೂರು, ಜಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಹಾಸನ, ವಿಜಯಪುರ, ಧಾರವಾಡ, ಯಾದಗಿರಿಯಲ್ಲಿಯೂ ಮಳೆಯಾಗಿದೆ.

  • ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಸಾವು

    ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಸಾವು

    ಚಿಕ್ಕಮಗಳೂರು: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ತಮಿಳುನಾಡು ಮೂಲದ ಜ್ಯೋತಿ (28), ಮಾದಮ್ಮ(65), ಮಾರಿ (27) ಮೃತ ತೋಟದ ಕಾರ್ಮಿಕರು. ಮಾದಮ್ಮ ಹಾಗೂ ಜ್ಯೋತಿ ತಾಯಿ ಮಗಳಾಗಿದ್ದು, ಮಾರಿ ಸಂಬಂಧಿ ಎಂದು ತಿಳಿದು ಬಂದಿದೆ.

    ತಮಿಳುನಾಡಿನ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನ 14 ಕಾರ್ಮಿಕರು ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯ ಕಾಫಿತೋಟದಲ್ಲಿ ಕಾಫಿ ಕಟಾವು ಕೆಲಸಕ್ಕೆಂದು ವಲಸೆ ಬಂದಿದ್ದರು. ಕಳಸ ಪಟ್ಟಣದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗಜೇಂದ್ರ ಅವರ ಕಾಫಿ ತೋಟದಲ್ಲಿ ಕೆಲ ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ಲಾಕ್‍ಡೌನ್‍ನಿಂದ ತಮ್ಮ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ತೋಟದ ಕೂಲಿ ಲೈನ್ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಸಂಜೆ ಗುಡುಗು, ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಹಿತ್ಲುಮಕ್ಕಿ ಗ್ರಾಮದ ಲೈನ್ ಮನೆಗಳ ಮುಂದೆ ನಿಂತಿದ್ದ ಮೂವರು ಮಹಿಳೆರಿಗೆ ಸಿಡಿಲು ಬಡಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮಳೆಯ ಸಿಡಿಲಿನ ಅಬ್ಬರ – 15 ಟಿವಿ, 5 ಫ್ರಿಡ್ಜ್, 3 ಯುಪಿಎಸ್, ಎಸಿಗಳಿಗೆ ಹಾನಿ

    ಮಳೆಯ ಸಿಡಿಲಿನ ಅಬ್ಬರ – 15 ಟಿವಿ, 5 ಫ್ರಿಡ್ಜ್, 3 ಯುಪಿಎಸ್, ಎಸಿಗಳಿಗೆ ಹಾನಿ

    ಬೆಂಗಳೂರು: ಒಂದು ಕಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮಳೆಯ ಸಿಡಿಲಿನ ಅಬ್ಬರಕ್ಕೆ ಗೃಹಪಯೋಗಿವಸ್ತುಗಳು ಹಾನಿಯಾಗಿವೆ.

    ನೆಲಮಂಗಲ ನಗರದ ವಿನಾಯಕ ನಗರ ಹಾಗೂ ಹೊನ್ನಗಂಗಯ್ಯನ ಪಾಳ್ಯದಲ್ಲಿ ಗುರುವಾರ ರಾತ್ರಿ ಮಳೆಯ ಜೊತೆ ಸಿಡಿಲ ಅಬ್ಬರಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಗೃಹಪಯೋಗಿವಸ್ತುಗಳು ನಾಶವಾಗಿದೆ. ಹೊನ್ನಗಂಗಯ್ಯನಪಾಳ್ಯದಲ್ಲಿ 15 ಟಿವಿ, 5 ಫ್ರಿಡ್ಜ್, ಮನೆಯಲ್ಲಿನ ವೈರಿಂಗ್, ಸ್ವಿಚ್ ಬೋರ್ಡ್ ಗಳು, 3 ಯುಪಿಎಸ್, ಎಸಿಗಳಿಗೆ ಹಾನಿಯಾಗಿದೆ.

    ಸಿಡಿಲು ಬಡಿತಕ್ಕೆ ಕಂಗಾಲಾದ ಮನೆಯ ಮಾಲೀಕರು ಹೊಸದಾಗಿ ವೈರಿಂಗ್ ಮಾಡುವ ಅನಿವಾರ್ಯತೆ ಎದುರಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನೆಲಮಂಗಲ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಕಳೆದ ರಾತ್ರಿ ಮಳೆ ಗಾಳಿಯ ರಭಸಕ್ಕೆ ಬಸ್ ಮೇಲೆ ಕಬ್ಬಿಣದ ಕಂಬಿಗಳು ವಾಲಿ ಬಿದ್ದ ಘಟನೆ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ನಡೆದಿತ್ತು. ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿದ್ದರಿಂದ ಮೆಟ್ರೋ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ರಾತ್ರಿ ಜೋರಾಗಿ ಬಂದ ಗಾಳಿ ಮಳೆಯಿಂದ ಮೆಟ್ರೋ ಪಿಲ್ಲರ್‌ಗೆ ಅಳವಡಿಸಲು ನಿಲ್ಲಿಸಲಾಗಿದ್ದ ಕಬ್ಬಿಣದ ಕಂಬಿಗಳು ಹಾರೋಹಳ್ಳಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಕಂಪನಿಯ ಬಸ್ ಮೇಲೆ ಬಿದ್ದಿತ್ತು.

    ಅದೃಷ್ಟವಶಾತ್ ಬಸ್ ಮುಂಭಾಗದಲ್ಲಿ ಕಂಬಿಗಳು ಬಿದ್ದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಬಸ್‍ನಲ್ಲಿದ್ದ 25 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಹುಳಿಮಾವು ಪೊಲೀಸರು ಸ್ಥಳಕ್ಕಾಗಮಿಸಿ ರಸ್ತೆ ತೆರವುಗೊಳಿಸಿದ್ದರು.

  • ಸಿಡಿಲು ಬಡಿದು ಮನೆ ಕಳೆದುಕೊಂಡ ವೃದ್ಧ ದಂಪತಿ

    ಸಿಡಿಲು ಬಡಿದು ಮನೆ ಕಳೆದುಕೊಂಡ ವೃದ್ಧ ದಂಪತಿ

    -ಬಿದ್ದೋದ ಮನೆಯಲ್ಲಿ 5 ತಿಂಗಳಿನಿಂದ ವಾಸ

    ದಾವಣಗೆರೆ: ಸಿಡಿಲು ಬಡಿದು ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಡ ಕುಟುಂಬವೊಂದು ಬೀದಿಯಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಳೆದ ಐದು ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ಶಿವಪ್ಪ ಎನ್ನುವರ ಮನೆಗೆ ಸಿಡಿಲು ಬಡಿದಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು. ಇಡೀ ಕುಟುಂಬವೇ ಬೀದಿಗೆ ಬಿದ್ದಂತಾಯಿತು.

    ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕೇವಲ ಐದು ಸಾವಿರ ರೂ. ನೀಡಿ ಕೈ ತೊಳೆದುಕೊಂಡಿದ್ದಾರೆ. ಉಟ್ಟಬಟ್ಟೆಯಲ್ಲಿ ಮನೆಯಿಂದ ಬಂದು ಜೀವ ಉಳಿಸಿಕೊಂಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗದೇ ಬೀದಿಗೆ ಬಿದ್ದಿದ್ದಾರೆ. ಮಾಯಕೊಂಡ ಕ್ಷೇತ್ರದ ಶಾಸಕ ಪ್ರೋ. ಲಿಂಗಣ್ಣನವರ ಮನೆ ಬಾಗಿಲು ಕಾದರೂ ಕೂಡ ಶಾಸಕರಿಗೆ ಬಡ ಕುಟುಂಬದ ಮೇಲೆ ಕರುಣೆ ಎನ್ನುವುದೇ ಬಂದಿಲ್ಲ.

    ಕಳೆದ ಐದು ತಿಂಗಳಿಂದ ಯಾವುದೋ ಬಿದ್ದೋದ ಮನೆಯಲ್ಲಿ ವೃದ್ಧ ದಂಪತಿ ಜೀವನ ನಡೆಸುತ್ತಿದ್ದು, ಸರ್ಕಾರ ಮಾತ್ರ ಇವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ವೃದ್ಧ ದಂಪತಿ ನಮಗೆ ವಿಷವಾದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ. ಅಲ್ಲದೆ ಸಿಡಿಲು ಬಡಿದ ರಭಸಕ್ಕೆ ಶಿವಪ್ಪನ ಪತ್ನಿ ಕರಿಯಮ್ಮನಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ.