Tag: ಸಿಡಿಲು

  • ಬೀದರ್‌ನಲ್ಲಿ ಸಿಡಿಲಿಗೆ ತಾಯಿ, ಮಗಳು ಬಲಿ

    ಬೀದರ್‌ನಲ್ಲಿ ಸಿಡಿಲಿಗೆ ತಾಯಿ, ಮಗಳು ಬಲಿ

    ಬೀದರ್: ಕೃಷಿ ಚಟುವಟಿಕೆಗಾಗಿ ಜಮೀನಿಗೆ ಹೋಗಿದ್ದ ಸಮಯದಲ್ಲಿ ಸಿಡಿಲು ಬಡಿದು ತಾಯಿ, ಮಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಲಸೂರು ತಾಲೂಕಿನ ಖಾದನಾಪುರ್ ಗ್ರಾಮದಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದೀಗ 38 ವರ್ಷದ ಭಾಗ್ಯಶ್ರೀ ಭೀಮ್ ಮೇತ್ರ ಹಾಗೂ 6 ವರ್ಷದ ವೈಶಾಲಿ ಸಿಡಿಲಿಗೆ ಬಲಿಯಾಗಿದ್ದಾರೆ. ಕೃಷಿ ಚಟುವಟಿಕೆಗಾಗಿ ಜಮೀನಿಗೆ ತೆರಳಿದಾಗ ಮಳೆ ಜೋರಾಗಿದ್ದು, ಈ ವೇಳೆ ಸಿಡಿಲು ಬಡಿದಿದೆ.

    ಇಂದು ಕೂಡ ಜಿಲ್ಲೆಯಲ್ಲಿ ತುಂತುರು ಮಳೆ ಮುಂದುವರಿದಿದ್ದು, ಮಹಾ ಮಳೆ ಬಂದರೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಲಿದೆ. ಭಾರೀ ಮಳೆಗೆ ಈಗಾಗಲೇ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದು, 17ರ ವರೆಗೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಇನ್ನೂ ಏನೇನು ಅನಹುತ ಕಾದಿದೆಯೋ ಎಂದು ಜನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

  • ಅಸ್ಸಾಂನಲ್ಲಿ ಘೋರ ದುರಂತ – ಒಂದೇ ಜಾಗದಲ್ಲಿ 18 ಆನೆಗಳು ದುರ್ಮರಣ

    ಅಸ್ಸಾಂನಲ್ಲಿ ಘೋರ ದುರಂತ – ಒಂದೇ ಜಾಗದಲ್ಲಿ 18 ಆನೆಗಳು ದುರ್ಮರಣ

    ಗುವಾಹಟಿ: ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು ಒಂದೇ ಜಾಗದಲ್ಲಿ 18 ಆನೆಗಳು ಸಾವನ್ನಪ್ಪಿವೆ. ಈ ಆನೆಗಳು ಸಿಡಿಲು ಬಡಿದು ಆನೆಗಳು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ವನ್ಯಜೀವಿ ವಿಭಾಗದಮುಖ್ಯ ಸಂರಕ್ಷಣಾಧಿಕಾರಿ ಅಮಿತ್ ಶಾಯ್ ಮಾಹಿತಿ ನೀಡಿದ್ದು, ಘಟನೆ ನಡೆದ ಪ್ರದೇಶ ದುರ್ಗಮವಾಗಿದೆ. ಗುರುವಾರ ಮಧ್ಯಾಹ್ನದ ತನಕ ನಮ್ಮ ತಂಡ ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ಬೆಟ್ಟ ಪ್ರದೇಶವೊಂದರ ಮೇಲೆ 14, ಕೆಳಗೆ 4 ಆನೆಗಳ ಶವಗಳು ಪತ್ತೆಯಾಗಿದೆ. ಆನೆಗಳು ಸಿಡಿಲು ಬಡಿದು ಮೃತಪಟ್ಟಿವೆ ಎಂಬುದಾಗಿ ತೀಳಿದ್ದುಬಂದಿದ್ದು, ಇಂದು ಮೃತಪಟ್ಟ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಖಚಿತ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.

    ಸದ್ಯ ಆನೆಗಳು ಸಾಲಾಗಿ ಬಿದ್ದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಲವರು ಈ ಘಟನೆಗೆ ಸಂತಾಪವನ್ನು ಸೂಚಿಸಿದ್ದಾರೆ.

  • ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದ 7 ಜನರಲ್ಲಿ ನಾಲ್ವರು ಸಾವು

    ಸಿಡಿಲು ಬಡಿದು ಆಸ್ಪತ್ರೆ ಸೇರಿದ್ದ 7 ಜನರಲ್ಲಿ ನಾಲ್ವರು ಸಾವು

    ಚಿಕ್ಕಬಳ್ಳಾಪುರ: ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದ 7 ಜನರಲ್ಲಿ 4 ಮಂದಿ ಸಾವನ್ನಪ್ಪಿದ್ದು, ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕು ಸೋಮಯಾಜಲಹಳ್ಳಿ ಗ್ರಾಮದಲ್ಲಿ ಇದೇ ತಿಂಗಳ 22ರಂದು ಸಿಡಿಲು ಬಡಿದು ಚಪ್ಪಡಿ ಮನೆ ಕುಸಿದು ಬಿದ್ದಿತ್ತು. ಸಿಡಿಲಿನ ಅಬ್ಬರಕ್ಕೆ ಮನೆ ಕುಸಿತಗೊಂಡು ಮನೆ ಮಾಲೀಕ ಆಂಬರೀಶ್ ಪತ್ನಿ ಗಾಯತ್ರಿ ಇವರ ಮಕ್ಕಳಾದ ಗೌತಮ್, ವಾಣಿ, ಲಾವಣ್ಯ, ದರ್ಶನ್ ಹಾಗೂ ಅಂಬರೀಶ್ ತಂದೆ ಜಗನ್ನ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. 7 ಮಂದಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದ್ದಾರೆ.

    ಮೊದಲು ಗೌತಮ್ ಸಾವನ್ನಪ್ಪಿದ್ದು, ನಂತರ ಅಂಬರೀಶ್ ಹಾಗೂ ಇಂದು ಲಾವಣ್ಯ ಹಾಗೂ ವಾಣಿ ಶ್ರೀ ಇಬ್ಬರು ನಿಧನರಾಗಿದ್ದಾರೆ. ಅಂಬರೀಶ್ ಪತ್ನಿ ಗಾಯತ್ರಿ, ತಂದೆ ಜಗನ್ನ ಹಾಗೂ ಬಾಲಕ ದರ್ಶನ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನಾಲ್ವರ ಸಾವಿನಿಂದ ಸೋಮಯಾಜಲಹಳ್ಳಿ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು ಶೋಕಸಾಗರದಲ್ಲಿ ಮುಳುಗಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತಹಶೀಲ್ದಾರ್ ಹನುಮಂತರಾಯಪ್ಪ, 7 ಮಂದಿಗೆ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಈಗ ನಾಲ್ವರು ಮೃತಪಟ್ಟಿದ್ದು, ಉಳಿದವರ ಸ್ಥಿತಿಯೂ ಗಂಭೀರವಾಗಿದೆ. ಘಟನೆ ಆಗಬಾರದಿತ್ತು, ಬಹಳ ನೋವಿನ ಸಂಗತಿ, ತುಂಬಾ ಬೇಸರವಾಗಿದೆ. ಇಡೀ ಕುಟುಂಬಕ್ಕೆ ಇಂತಹ ಪರಿಸ್ಥಿತಿ ಬಂದಿದ್ದು, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಅಂತ್ಯಕ್ರಿಯೆ ಸೇರಿ ಆಸ್ಪತ್ರೆಗೆ ಬೇಕಾಗುವ ಖರ್ಚು ವೆಚ್ಚಗಳನ್ನು ಭರಿಸಿದ್ದು, ಉಳಿದವರಾದರೂ ಬದುಕಿ ಬರಲಿ ಎಂದು ತಹಶೀಲ್ದಾರ್ ಆಶಿಸಿದರು.

  • ಗದಗನಲ್ಲಿ ಭಾರೀ ಮಳೆ- ಸಿಡಿಲಿಗೆ ಮೂವರು ಬಲಿ, ನಾಲ್ವರಿಗೆ ಗಾಯ

    ಗದಗನಲ್ಲಿ ಭಾರೀ ಮಳೆ- ಸಿಡಿಲಿಗೆ ಮೂವರು ಬಲಿ, ನಾಲ್ವರಿಗೆ ಗಾಯ

    ಗದಗ: ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ. ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

    ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಘಟನೆ ನಡೆದಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಸಿಡಿಲು ಬಡಿದು 3 ಜನ ಸಾವನ್ನಪ್ಪಿದು, ನಾಲ್ವರಿಗೆ ಗಾಯಗಳಾಗಿವೆ. ರೈತರಾದ ಮಾರುತಿ ಗೋಗಣ್ಣವರ್(44), ಶರಣಪ್ಪ ಅಡವಿ (35) ಹಾಗೂ ಕುಮಾರ್ ಮಾದರ್ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರಿಗೆ ಗಾಯಗಳಾಗಿದ್ದು, ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಮೃತ ಮೂವರಲ್ಲಿ ಇಬ್ಬರು ಕಡಕೋಳ ಗ್ರಾಮದವರಾಗಿದ್ದು, ಓರ್ವ ರೈತ ಶಿರಹಟ್ಟಿ ನಿವಾಸಿ ಎನ್ನಲಾಗುತ್ತಿದೆ. ಮಳೆ, ಗಾಳಿ ಜೋರಾದ ಕಾರಣ ಜಮೀನಿನಲ್ಲಿದ್ದ ಹುಣಸೆ ಮರದ ಕೆಳಗೆ ಆಸರೆ ಪಡೆದಿದ್ದರು. ಈ ವೇಳೆ ಹುಣಸೆ ಮರಕ್ಕೆ ಸಿಡಿಲು ಬಡಿದಿದೆ. ಹೀಗಾಗಿ ಮೂವರೂ ಸಾವನ್ನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ಸಿಪಿಐ ವಿಕಾಸ್ ಲಮಾಣಿ ಹಾಗೂ ಕಂದಾಯ ನಿರೀಕ್ಷರು ಭೇಟಿ ನೀಡಿದ್ದಾರೆ. ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಹಾಂತೇಶ ಹಣಗಿ ಅವರ ಮನೆ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಧಗ ಧಗಿಸಿದೆ. ಸಿಡಿಲಿನ ಶಬ್ದ ಕೇಳಿ ಸ್ಥಳೀಯರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಜಿಲ್ಲೆಯ ಅನೇಕ ಕಡೆಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅನಾಹುತಗಳು ಸಂಭವಿಸಿವೆ.

  • ಸಿಡಿಲು ಬಡಿದು ಮನೆ ಕುಸಿತ- ನಾಲ್ವರು ಮಕ್ಕಳು ಸೇರಿ 7 ಜನರಿಗೆ ಗಂಭೀರ ಗಾಯ

    ಸಿಡಿಲು ಬಡಿದು ಮನೆ ಕುಸಿತ- ನಾಲ್ವರು ಮಕ್ಕಳು ಸೇರಿ 7 ಜನರಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಸಿಡಿಲು ಬಡಿದ ಪರಿಣಾಮ ಚಪ್ಪಡಿಕಲ್ಲಿನ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ 4 ಜನ ಮಕ್ಕಳು ಸೇರಿ 7 ಜನ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಾಯಂಕಾಲ ಇದ್ದಕ್ಕಿದ್ದಂತೆ ತುಂತುರು ಶುರುವಾಗಿದ್ದು, ಮಳೆಯ ನಡುವೆ ಸಿಡಿಲು ಬಡಿದು ನೋಡು ನೋಡುತ್ತಿದ್ದಂತೆ ಗ್ರಾಮದ ಅಂಬರೀಶ್ ಹಾಗೂ ಗಾಯತ್ರಿ ದಂಪತಿ ಅವರ ಮನೆಗೆ ಸಿಡಿಲು ಹೊಡೆದು ಮನೆಯಲ್ಲಿದ್ದ ವೃದ್ಧ ಜಗನ್ನ 60, ಅಂಬರೀಶ್ 32, ಗಾಯತ್ರಿ 28, ಗೌತಮ್ 3, ವಾಣಿಶ್ರೀ 6, ದರ್ಶನ್ 1 ಹಾಗೂ 4 ವರ್ಷದ ಲಾವಣ್ಯಗೆ ತೀವ್ರ ರೀತಿಯ ಗಾಯಗಳಾಗಿವೆ.

    ಗಾಯಾಳುಗಳನ್ನು ತಕ್ಷಣವೇ ಚಿಂತಾಮಣಿಯ ತಾಲೂಕು ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ತಹಶೀಲ್ದಾರ್ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೆಳಗಾವಿಯಲ್ಲಿ ಧಾರಾಕಾರ ಮಳೆ – ಸಿಡಿಲು ಬಡಿದು ಯುವಕ ಸಾವು

    ಬೆಳಗಾವಿಯಲ್ಲಿ ಧಾರಾಕಾರ ಮಳೆ – ಸಿಡಿಲು ಬಡಿದು ಯುವಕ ಸಾವು

    ಬೆಳಗಾವಿ: ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಇಟ್ಟಂಗಿ ಭಟ್ಟಿಯಲ್ಲಿ ನಡೆದಿದೆ.

    ಗುರುನಾಥ ನಾರ್ವೇಕರ್(20) ಮೃತ ದುರ್ದೈವಿ. ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅಸು ಗ್ರಾಮದಿಂದ ಗುರುನಾಥ ಕೆಲಸಕ್ಕಾಗಿ ಆಗಮಿಸಿದ್ದರು. ಆದರೆ ನಿನ್ನೆ ಬೆಳಗಾವಿಯ ಸುತ್ತಮುತ್ತ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

    ಇಟ್ಟಂಗಿ ಭಟ್ಟಿಗೆ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿದ್ದಾಗ ಸಿಡಿಲು ಬಡಿದು ಗುರುನಾಥ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೆ ಈ ಘಟನೆ ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ರಾಯಚೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವು- ಓರ್ವನ ಸ್ಥಿತಿ ಗಂಭೀರ

    ರಾಯಚೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವು- ಓರ್ವನ ಸ್ಥಿತಿ ಗಂಭೀರ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಿಂದ ಓರ್ವನ ಸ್ಥಿತಿ ಗಂಭೀರವಾಗಿದೆ.

    38 ವರ್ಷದ ನಾಗಪ್ಪ, 12 ವರ್ಷದ ವೆಂಕಟೇಶ್ ಸಿಡಿಲಿಗೆ ಬಲಿಯಾದ ದುರ್ದೈವಿಗಳು. ಸ್ಥಳದಲ್ಲಿದ್ದ ಒಂದು ಕುರಿ ಸಹ ಸಾವನ್ನಪ್ಪಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.

    ನಾಗಪ್ಪನ ಜಮೀನಿಗೆ ತಾಯಿ ಜೊತೆ ಕೂಲಿ ಕೆಲಸಕ್ಕೆ ಬಂದಿದ್ದ ಬಾಲಕ ವೆಂಕಟೇಶ್ ಸಾವನ್ನಪ್ಪಿದ್ದಾನೆ. ಮಳೆ ಹಿನ್ನೆಲೆ ಮರದ ಕೆಳಗೆ ನಿಂತಿದ್ದವರಿಗೆ ಸಿಡಿಲು ಬಡಿದಿದೆ. ಘಟನೆಯಲ್ಲಿ ಇನ್ನೊರ್ವನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯಲ್ಲಿ ಇನ್ನೂ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ರಾಯಚೂರಿನಲ್ಲಿ ಸಿಡಿಲು ಬಡಿದು ಅಣ್ಣ ತಮ್ಮ ಸಾವು

    ರಾಯಚೂರಿನಲ್ಲಿ ಸಿಡಿಲು ಬಡಿದು ಅಣ್ಣ ತಮ್ಮ ಸಾವು

    ರಾಯಚೂರು: ತಾಲೂಕಿನ ಸಿಂಗನೋಡಿಯಲ್ಲಿ ಸಿಡಿಲು ಬಡಿದು ಸಹೋದರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

    ರವಿಚಂದ್ರ(23), ವಿಷ್ಣು (18) ಸಿಡಿಲು ಬಡಿದು ಪ್ರಾಣಬಿಟ್ಟಿರುವ ಸಹೋದರರು. ಜಮೀನಿನಲ್ಲಿರುವ ಗುಡಿಸಲು ಬಳಿ ನಿಂತಿದ್ದಾಗ ಸಿಡಿಲು ಬಡಿದು ಇಬ್ಬರೂ ಸಾವನ್ನಪ್ಪಿದ್ದಾರೆ. ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ, ತಂದೆ ಸಿಡಿಲಿನಿಂದ ಬಚಾವಾಗಿದ್ದಾರೆ.

    ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಬಂದಿದೆ. ಆಗ ಕುಟುಂಬದ ನಾಲ್ಕು ಜನ ಗುಡಿಸಿಲಿನಲ್ಲೆ ಉಳಿದಿದ್ದರು. ಆದರೆ ದುರಾದೃಷ್ಟವಶಾತ್ ಇವರಿಬ್ಬರು ಸಾವನ್ನಪ್ಪಿದ್ದಾರೆ. ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳಾಗಿವೆ, ತಂದೆ ಗೋವಿಂದ ಸಿಡಿಲಿನಿಂದ ಪಾರಾಗಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಮೃತರ ಶವಗಳನ್ನ ಮರಣೋತ್ತರ ಪರೀಕ್ಷೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

  • ಜಮೀನಿನಲ್ಲಿ ಕೆಲಸ ಮಾಡ್ತಿದ್ದಾಗ ಸಿಡಿಲು ಬಡಿದು ರೈತ ಸಾವು

    ಜಮೀನಿನಲ್ಲಿ ಕೆಲಸ ಮಾಡ್ತಿದ್ದಾಗ ಸಿಡಿಲು ಬಡಿದು ರೈತ ಸಾವು

    ಗದಗ: ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.

    34 ವರ್ಷದ ಕೃಷ್ಣಪ್ಪ ಭಜಮ್ಮನವರ್ ಮೃತ ದುರ್ದೈವಿ ರೈತ. ನಾಲ್ಕು ಜನ ಸೇರಿಕೊಂಡು ಜಮೀನಿನಲ್ಲಿ ಮೆಣಸಿನ ಬೀಜ ಬಿತ್ತನೆ ಮಾಡ್ತಿದ್ದರು. ಮಳೆ ಬಂದ ಹಿನ್ನೆಲೆಯಲ್ಲಿ ಇತರೆ 3 ಬೇರೆ ಮರದಡಿ ನಿಂತುಕೊಂಡಿದ್ದಾರೆ. ಆದರೆ ಕೃಷ್ಣಪ್ಪ ಒಬ್ಬನೇ ಒಂದು ಮರದಡಿ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಸಿಡಿಲು ಬಡಿದಿದೆ.

    ಮಳೆ ಬರುವ ಮುನ್ನ ಜೊತೆಗಿದ್ದ ಕೃಷ್ಣಪ್ಪ ಮಳೆ ನಿಂತ ಮೇಲೆ ಜೀವವೇ ನಿಂತು ಹೋಗಿದ್ದು, ಜೊತೆಗಿದ್ದವರಿಗೂ ಒಂದು ರೀತಿ ಶಾಕ್ ಹೊಡೆದಂತಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮ ಲೆಕ್ಕಾಧಿಕಾರಿ, ರೋಣ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಜಿಲ್ಲೆಯ ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಿಹಾರದಲ್ಲಿ ಸಿಡಿಲಿಗೆ 83 ಜನ ಬಲಿ- 4 ಲಕ್ಷ ಪರಿಹಾರ ಘೋಷಿಸಿದ ಸಿಎಂ ನಿತೀಶ್ ಕುಮಾರ್

    ಬಿಹಾರದಲ್ಲಿ ಸಿಡಿಲಿಗೆ 83 ಜನ ಬಲಿ- 4 ಲಕ್ಷ ಪರಿಹಾರ ಘೋಷಿಸಿದ ಸಿಎಂ ನಿತೀಶ್ ಕುಮಾರ್

    ಪಾಟ್ನಾ: ಬಿಹಾರದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ 83 ಜನರ ಕುಟುಂಬಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಿಹಾರ ಘೋಷಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಬಿಹಾರದಲ್ಲಿ ಅಪಾರ ಸಾವು ನೋವು ಸಂಭವಿಸಿದ್ದು, ಗುರುವಾರ ಒಂದೇ ದಿನ ಸುಮಾರು 83 ಜನ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಸಿಎಂ ನಿತೀಶ್ ಕುಮಾರ್ ಇಂದು ಘೋಷಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸಹ ಈ ಕುರಿತು ಸಂತಾಪ ಸೂಚಿಸಿದ್ದು, ಸರ್ಕಾರ ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ. ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಗುಡುಗು, ಸಿಡಿಲಿಗೆ ಹಲವು ಜನ ಸಾವನ್ನಪ್ಪಿರುವ ಸುದ್ದಿ ನನ್ನ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಗೋಪಾಲ್‍ಗಂಜ್ ಜಿಲ್ಲೆಯೊಂದರಲ್ಲೇ 13ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ ಬಿಹಾರದ ಹಲವು ಭಾಗಗಳಲ್ಲಿ 83ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೊಲಗಳಲ್ಲಿ ಕೆಲಸ ಮಾಡುತ್ತಿರುವಾಗ ಬಹುತೇಕರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.