Tag: ಸಿಡಿಪಿಒ

  • ಮೂವರು ಸಿಡಿಪಿಓಗಳು ಜೈಲು ಪಾಲು

    ಮೂವರು ಸಿಡಿಪಿಓಗಳು ಜೈಲು ಪಾಲು

    ವಿಜಯಪುರ: ಇಬ್ಬರು ಮಹಿಳಾ ಸಿಡಿಪಿಓ ಹಾಗೂ ಬಾಗಲಕೋಟೆ ಜಿಲ್ಲೆ ಬೀಳಗಿಯ ಓರ್ವ ಸಿಡಿಪಿಓ ಅಂದರ್ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಈ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಜಮಖಂಡಿಯ ಗೋಪಾಲ್ ತೇಲಿ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಗಿರೀಶ್ ತೇಲಿ, ಮಹಾದೇವ ತೇಲಿ ಎಂಬವರು ಬಡ ಅಂಗನವಾಡಿ ಮಕ್ಕಳಿಗೆ ಸೇರಬೇಕಿದ್ದ ಕೆಎಂಎಫ್ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಕಳೆದ 2020 ಅಕ್ಟೋಬರ್ 21 ರಂದು ಜಮಖಂಡಿ ಪೊಲೀಸರು ದಾಳಿ ನಡೆಸಿ ಹಾಲಿನ ಪ್ಯಾಕೆಟ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದರು.

    ಪೊಲೀಸರ ತನಿಖೆ ವೇಳೆ ಈ ಮೂವರು ಸಿಡಿಪಿಓಗಳ ಅಕ್ರಮ ಎಸಗಿದ್ದು ಬಯಲಾಗಿದೆ. ಕಾರಣ ವಿಜಯಪುರ ನಗರ ಸಿಡಿಪಿಓ ನಿರ್ಮಲಾ ಸುರಪೂರ, ಗ್ರಾಮೀಣ ಸಿಡಿಪಿಓ ಗೀತಾ ಗುತ್ತರಗಿಮಠ, ಬಾಗಲಕೋಟೆ ಜಿಲ್ಲೆ ಬೀಳಗಿ ಸಿಡಿಪಿಓ ಮಹಾದೇವಪ್ಪ ಇರನಾಳರನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಐಪಿಸಿ ಸೆಕ್ಷನ್ 218, 403, 406, 420, 465, 466, 477 (o) ಅಡಿಯಲ್ಲಿ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಕು ಮಗಳನ್ನು ಅಮಾನವೀಯವಾಗಿ ಸುಟ್ಟು ಹಿಂಸೆ ನೀಡಿದ ತಾಯಿ

    ಸಾಕು ಮಗಳನ್ನು ಅಮಾನವೀಯವಾಗಿ ಸುಟ್ಟು ಹಿಂಸೆ ನೀಡಿದ ತಾಯಿ

    ತುಮಕೂರು: ಸಾಕು ತಾಯಿಯಿಂದ ಅಮಾನವೀಯವಾಗಿ ದೈಹಿಕ ಹಿಂಸೆಗೊಳಗಾಗಿ ನರಕಯಾತನೆ ಅನುಭವಿಸುತ್ತಿದ್ದ 11 ವರ್ಷದ ಬಾಲಕಿಯನ್ನು ಕುಣಿಗಲ್ ತಾಲೂಕಿನ ಸಿಡಿಪಿಒ ಅನುಷಾ ಅವರು ರಕ್ಷಣೆ ಮಾಡಿ ಬಾಲಕಿಯರ ಬಾಲ ಭವನದ ವಶಕ್ಕೆ ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

    6ನೇ ತರಗತಿ ಓದುತ್ತಿರುವ ಬಾಲಕಿ ತನ್ನ ಸಾಕು ತಾಯಿಯ ಶೋಷಣೆಗೆ ಒಳಗಾಗಿದ್ದಾಳೆ. ಎರಡೂವರೆ ವರ್ಷವಿದ್ದಾಗ ಬಾಲಕಿಯ ಪೋಷಕರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಬಸ್ ನಿಲ್ದಾಣದಲ್ಲೇ ಬೊಂಡ ಬಜ್ಜಿ ಹಾಕುವ ರತ್ನಮ್ಮ ಅನಾಥ ಮಗುವನ್ನು ತಂದು ಸಾಕಿಕೊಂಡಿದ್ದರು.

    ರತ್ನಮ್ಮನ ಪತಿ 4 ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾಗಿ ಮೃತಪಟ್ಟಿದ್ದರು. ಪತಿ ಮೃತಪಟ್ಟ ನಂತರ ರತ್ನಮ್ಮ ಬಾಲಕಿಗೆ ಪ್ರತಿದಿನ ಚಿತ್ರ ಹಿಂಸೆ ಕೊಡಲು ಆರಂಭಿಸಿದ್ದಳು. ಬೊಂಡ ಬಜ್ಜಿಗೆ ಸಿದ್ಧತೆ ಮಾಡಿಕೊಳ್ಳಲು ಬಾಲಕಿಯನ್ನು ಬಳಕೆ ಮಾಡಿಕೊಂಡು ದುಡಿಸಿಕೊಳ್ಳತ್ತಾಳೆ. ಜೊತೆಗೆ ಕೆಲಸ ಮಾಡುವಂತೆ ಹಲ್ಲೆ ಮಾಡುವ ಮೂಲಕ ಹಿಂಸೆ ನೀಡುತ್ತಿದ್ದಳು.

    ಜ. 17ರಂದು ರತ್ನಮ್ಮ ಬಾಲಕಿಯ ಎರಡು ತೊಡೆಗಳಿಗೆ ಕಾದ ಕಬ್ಬಿಣದ ಜಾಲರಿಯಿಂದ ಅಮಾನವೀಯವಾಗಿ ಸುಟ್ಟಿದ್ದಳು. ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಕೊಡಿಸುವ ಗೋಜಿಗೂ ರತ್ನಮ್ಮ ಮುಂದಾಗುವುದಿಲ್ಲ. ಶಾಲೆಯಲ್ಲಿ ಸಹ ಪಾಠಿಗಳು ನೀಡಿದ ಮಾಹಿತಿ ಮೆರೆಗೆ ಮುಖ್ಯ ಶಿಕ್ಷಕ ರಾಜಣ್ಣ ವಿದ್ಯಾರ್ಥಿನಿಯನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಅದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಿದ್ದರು.

    ಈ ವಿಚಾರವನ್ನು ಆಶಾ ಕಾರ್ಯಕರ್ತೆಯ ಮೂಲಕ ಸಿಡಿಪಿಒ ಅನುಷಾ ಅವರು ತಿಳಿದುಕೊಂಡು ಗುರುವಾರ ಬಾಲಕಿಯನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿ ತುಮಕೂರಿನ ಬಾಲಕಿಯರ ಬಾಲಭವನದ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣಿಯಲ್ಲಿ ಸಾಕು ತಾಯಿ ರತ್ನಮ್ಮ ಹಾಗೂ ಆಕೆಯ ಮಗ ಸಾಗರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.