Tag: ಸಿಜೆಐ ಕಚೇರಿ

  • ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸುಪ್ರೀಂ ಕೋರ್ಟ್, ಸಿಜೆಐ ಕಚೇರಿ

    ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸುಪ್ರೀಂ ಕೋರ್ಟ್, ಸಿಜೆಐ ಕಚೇರಿ

    ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ನ್ಯಾಯಮೂರ್ತಿಗಳಾದ ರಮಣ, ಚಂದ್ರಚೂಡ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ನೇತೃತ್ವದ ಸಂವಿಧಾನ ಪೀಠದಿಂದ ತೀರ್ಪು ಪ್ರಕಟವಾಗಿದೆ. ಈ ಮೂಲಕ ಅಯೋಧ್ಯೆ ತೀರ್ಪಿನ ಬಳಿಕ ರಂಜನ್ ಗೊಗೋಯ್ ನಿವೃತ್ತಿಗೂ ಮುನ್ನ ಮತ್ತೊಂದು ಮಹತ್ವದ ತೀರ್ಪು ಪ್ರಕಟಿಸಿ 2010ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಎತ್ತಿ ಹಿಡಿದಿದ್ದಾರೆ.

    ನ್ಯಾಯ ಮೂರ್ತಿಗಳಾದ ರಂಜನ್ ಗೊಗೋಯ್, ದೀಪಕ್ ಗುಪ್ತಾ, ಸಂಜೀವ್ ಖನ್ನಾ ಅವರೆಲ್ಲ ಸೇರಿ ಒಂದು ಆದೇಶ ಪ್ರಕಟವಾಗಿದ್ದರೆ, ನ್ಯಾ.ರಮಣ ಮತ್ತು ನ್ಯಾ. ಚಂದ್ರಚೂಡ್ ಅವರು ಪ್ರತ್ಯೇಕ ತೀರ್ಪು ಬರೆದಿದ್ದಾರೆ.

    ಪಾರದರ್ಶಕತೆಯಿಂದ ನ್ಯಾಯಾಂಗದ ಸ್ವಾತಂತ್ರ್ಯ ಹಾಳಾಗುವುದಿಲ್ಲ. ಖಾಸಗಿ ಹಕ್ಕು ಮತ್ತು ಮಾಹಿತಿ ಹಕ್ಕು ಜೊತೆ ಜೊತೆಯಾಗಿ ಸಾಗಬೇಕು ಎಂದು ನ್ಯಾ. ಸಂಜೀವ್ ಖನ್ನಾ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಏನಿದು ಪ್ರಕರಣ?
    ದೇಶದ ಗೌಪ್ಯ ಮಾಹಿತಿಯನ್ನು ಬಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದೆಂಬ ಉದ್ದೇಶದಿಂದ 2005ರ ಅಕ್ಟೋಬರ್ 12 ರಂದು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇಲ್ಲಿಯವರೆಗೆ ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ.

    2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮತ್ತು ಸುಪ್ರೀಂ ಕೋರ್ಟ್ ಕೂಡ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಪ್ರೀಂ ಕೋರ್ಟ್ ನಲ್ಲಿ 2010 ರಲ್ಲಿ ಮೂರು ಅರ್ಜಿ ಸಲ್ಲಿಸಿದ್ದರು. ಈ ವರ್ಷ ಏಪ್ರಿಲ್‍ನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು.