Tag: ಸಿಗಂದೂರು ಸೇತುವೆ

  • ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ – ಪೊಲೀಸರಿಂದ ಪುಂಡನಿಗೆ ದಂಡದ ರುಚಿ!

    ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ – ಪೊಲೀಸರಿಂದ ಪುಂಡನಿಗೆ ದಂಡದ ರುಚಿ!

    ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಸೇತುವೆ (Sigandur Bridge) ಮೇಲೆ ದುಬಾರಿ ಬೈಕ್‌ನಲ್ಲಿ ವ್ಹೀಲಿಂಗ್ ಮಾಡಿದ ಪುಂಡನಿಗೆ ಪೊಲೀಸರು ದಂಡ ವಿಧಿಸಿ, ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ.

    ಆಗಸ್ಟ್‌ 15ರಂದು ಯುವಕ ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ಮಾಡಿದ್ದ. ಆತನ ಬೈಕ್‌ ಸ್ಟಂಟ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆ ಗ್ರಾಮಾಂತರ ಠಾಣೆ ಪೊಲೀಸರು ಬೈಕ್‌ ಸವಾರನನ್ನು ಪತ್ತೆ ಹಚ್ಚಿ, ಆತನಿಗೆ 5000 ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ಯುವಕ ವಿಡಿಯೋ ಮೂಲಕ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಇನ್ನುಮುಂದೆ ವ್ಹೀಲಿಂಗ್ ಮಾಡೋದಿಲ್ಲ. ಯಾರು ಈ ರೀತಿಯ ತಪ್ಪು ಮಾಡಬಾರದು ಎಂದು ಹೇಳಿದ್ದಾನೆ. ವ್ಹೀಲಿಂಗ್ ಮಾಡಿದ ಯುವಕನ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

  • ಸಿಎಂಗೆ ಆಹ್ವಾನ ಕೊಡೋ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ನಿತಿನ್ ಗಡ್ಕರಿ

    ಸಿಎಂಗೆ ಆಹ್ವಾನ ಕೊಡೋ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ನಿತಿನ್ ಗಡ್ಕರಿ

    ಬೆಂಗಳೂರು: ಸಿಗಂಧೂರು ಸೇತುವೆ (Sigandur Bridge) ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಡುವ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅನ್ನೋ ಆರೋಪವನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅಲ್ಲಗಳೆದಿದ್ದಾರೆ.

    ಈ ಕುರಿತು‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಆಹ್ವಾನಿಸುವ ವಿಚಾರದಲ್ಲಿ ಶಿಷ್ಟಾಚಾರ (Protocols) ಉಲ್ಲಂಘನೆ ಆಗಿಲ್ಲ. ಜುಲೈ 11ರಂದೇ ಅಧಿಕೃತ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಲು ಅವರನ್ನ ಆಹ್ವಾನಿಸಲಾಗಿತ್ತು. ಖುದ್ದು ಹಾಜರಾಗಲು ಸಾಧ್ಯವಾಗದಿದ್ರೆ ವರ್ಚುವಲ್ ಮೂಲಕ ಭಾಗಿಯಾಗುವಂತೆ ಪತ್ರದ ಮೂಲಕ ಕೋರಲಾಗಿತ್ತು ಎಂದು ಪತ್ರ ಸಹಿತ ತಿಳಿಸಿದ್ದಾರೆ. ಇದನ್ನೂ ಓದಿ: ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

    ಕೇಂದ್ರ ಸರ್ಕಾರವು ಸ್ಥಾಪಿತ ಶಿಷ್ಟಾಚಾರಗಳನ್ನು ಕೇಂದ್ರ ಸದಾ ಎತ್ತಿ ಹಿಡಿಯುತ್ತೆ. ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿಯವರ ಕೊಡುಗೆಗಳು ಮತ್ತು ಸಹಕಾರ ಶ್ಲಾಘಿಸ್ತೇವೆ. ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳೊಂದಿಗೆ ನಿಕಟ ಸಮನ್ವಯಕ್ಕೆ ಕೇಂದ್ರ ಸದಾ ಬದ್ಧವಾಗಿರುತ್ತದೆ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Sigandur Bridge | ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಸಿಎಂಗೆ ಆಹ್ವಾನ ನೀಡಲಾಗಿದೆ: ರಾಘವೇಂದ್ರ ತಿರುಗೇಟು

    ಸೇತುವೆ ಉದ್ಘಾಟನೆ ಕಾರ್ಯಕ್ರಮದ ಕರಡು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರಿದೆ. ಆದ್ರೆ ಹೆದ್ದಾರಿ ಸಚಿವಾಲಯದಿಂದ ತಮಗೆ ಯಾವುದೇ ಮಾಹಿತಿ ನೀಡಿಲ್ಲ. ಸಾಧ್ಯವಾದ್ರೆ ಕಾರ್ಯಕ್ರಮ ಮುಂದೂಡಿ. ಇಂತಹ ಕಾರ್ಯಕ್ರಮಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ಜತೆ ಸೂಕ್ತವಾಗಿ ವ್ಯವಹರಿಸುವಂತೆ ನಿಮ್ಮ ಸಚಿವಾಲಯಕ್ಕೆ ನಿರ್ದೇಶನ ನೀಡಿ ಎಂದು ಸಿದ್ದರಾಮಯ್ಯ ಅವರು ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆ| ಕೇಂದ್ರದಿಂದ ಶಿಷ್ಟಾಚಾರ ಉಲ್ಲಂಘನೆ: ಸಿದ್ದರಾಮಯ್ಯ ಆಕ್ರೋಶ

  • Sigandur Bridge | ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಸಿಎಂಗೆ ಆಹ್ವಾನ ನೀಡಲಾಗಿದೆ: ರಾಘವೇಂದ್ರ ತಿರುಗೇಟು

    Sigandur Bridge | ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಸಿಎಂಗೆ ಆಹ್ವಾನ ನೀಡಲಾಗಿದೆ: ರಾಘವೇಂದ್ರ ತಿರುಗೇಟು

    ಬೆಂಗಳೂರು: ಸಿಗಂದೂರು ಸೇತುವೆ (Sigandur Bridge) ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದರೆ ಮುಖ್ಯಮಂತ್ರಿಯವರಿಗೆ ಶಿಷ್ಟಾಚಾರದ ಪ್ರಕಾರವೇ ಅಹ್ವಾನ ನೀಡಲಾಗಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ (BY Raghavendra) ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯನವರ ಆರೋಪಕ್ಕೆ ಬಿವೈ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಗೌರವಯುತವಾಗಿ ಆಹ್ವಾನ ನೀಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್‌ | ರಾಹುಲ್, ಸೋನಿಯಾ ವಿರುದ್ಧದ ಆರೋಪ ಪರಿಗಣನೆ ಕುರಿತು ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್‌

    ಪೋಸ್ಟ್‌ನಲ್ಲಿ ಏನಿದೆ?
    ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮುಂಚಿತವಾಗಿ ಅಂದರೆ ಇದೇ ತಿಂಗಳ ಜುಲೈ 9 ರಂದು ಅಂಬಾರಗೋಡ್ಲು – ಕಳಸವಳ್ಳಿ – ಸಿಗಂದೂರು ಸೇತುವೆ ಉದ್ಘಾಟನೆಗೆ ನಾನು ಗೌರವಯುತವಾಗಿ ಆಹ್ವಾನ ನೀಡಿದ್ದೇನೆ. ಆದರೂ ಹಿರಿಯರಾದ ಸಿದ್ದರಾಮಯ್ಯ ಅವರು ಆಹ್ವಾನ ತಲುಪಿರುವುದು ತಡವಾಗಿದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದು ಎಷ್ಟು ಸಮಂಜಸ.

    ಶರಾವತಿ ನದಿಗೆ ಕಟ್ಟಿರುವ ಈ ಸೇತುವೆ ಆರು ದಶಕಗಳ ಸಾವಿರಾರು ಜನರ ಹೋರಾಟದ ಬೆವರಿನ ಪ್ರತಿಫಲ. ಇಷ್ಟು ಮಾತ್ರವಲ್ಲದೆ ಸಾವಿರಾರು ಜನರ ಭಾವನೆಗಳ ಪ್ರತಿರೂಪ. ಅವರೆಲ್ಲರ ಭಾವನೆಗಳಿಗೆ ಘಾಸಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆ| ಕೇಂದ್ರದಿಂದ ಶಿಷ್ಟಾಚಾರ ಉಲ್ಲಂಘನೆ: ಸಿದ್ದರಾಮಯ್ಯ ಆಕ್ರೋಶ

    ವಿವಿಧ ವಿಚಾರಗಳಲ್ಲಿ ಪರಸ್ಪರ ರಾಜಕೀಯ ಮಾಡುವುದು ಸರಿ. ಆದರೆ ಆಹ್ವಾನ ಪತ್ರಿಕೆ ಮುಂಚಿತವಾಗಿ ತಲುಪಿಯು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಶರಾವತಿ ಹಿನ್ನೀರಿನ ಪ್ರದೇಶದ ಜನತೆಗೆ ನೀವು ಮಾಡುವ ಅವಮಾನ ಎಂದು ಭಾವಿಸುತ್ತೇನೆ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ತಮ್ಮ ಹೇಳಿಕೆ ಹಿಂಪಡೆದು ನಿಜಾಂಶ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸುತ್ತೇನೆ.

    ಇಷ್ಟಲ್ಲದೆ, ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ನಿತಿನ್ ಗಡ್ಕರಿ ಅವರು ಇದೇ ತಿಂಗಳ ಜುಲೈ 11 ರಂದು ಖುದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಧಿಕೃತವಾಗಿ ಆಹ್ವಾನ ನೀಡಿರುತ್ತಾರೆ ಎಂಬುದನ್ನು ಕ್ಷೇತ್ರದ ಜನತೆಯ ಗಮನಕ್ಕೆ ತರಲು ಇಚ್ಛಿಸುತ್ತೇನೆ.

  • ಸಿಗಂದೂರು ಸೇತುವೆ ಉದ್ಘಾಟನೆ| ಕೇಂದ್ರದಿಂದ ಶಿಷ್ಟಾಚಾರ ಉಲ್ಲಂಘನೆ: ಸಿದ್ದರಾಮಯ್ಯ ಆಕ್ರೋಶ

    ಸಿಗಂದೂರು ಸೇತುವೆ ಉದ್ಘಾಟನೆ| ಕೇಂದ್ರದಿಂದ ಶಿಷ್ಟಾಚಾರ ಉಲ್ಲಂಘನೆ: ಸಿದ್ದರಾಮಯ್ಯ ಆಕ್ರೋಶ

    ಬೆಂಗಳೂರು: ಸಿಗಂದೂರು ಸೇತುವೆ (Sigandur Bridge) ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaih) ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಸೇತುವೆ ಉದ್ಘಾಟನೆಗೆ ಬೇರೆ ಸಮಯ ನಿಗದ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Nitin Gadkari) ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಯಾರು ಕೂಡಾ ಭಾಗಿಯಾಗುತ್ತಿಲ್ಲ. ನಾನೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿ ಬೇರೆ ದಿನ ನಿಗದಿ ಮಾಡುವಂತೆ ಕೇಳಿಕೊಂಡಿದ್ದೆ. ಬಳಿಕ ಪತ್ರವನ್ನು ಬರೆದಿದ್ದೆ. ಅದಕ್ಕೆ ಗಡ್ಕರಿ ಅವರು ಕಾರ್ಯಕ್ರಮ ಮುಂದಕ್ಕೆ ಹಾಕೋದಾಗಿ ಹೇಳಿದರು. ಆದರೆ ಇಲ್ಲಿನ ಬಿಜೆಪಿ ನಾಯಕರು ಅವರಿಗೆ ಒತ್ತಡ ಹಾಕಿರಬಹುದು ಅನ್ನಿಸುತ್ತೆ. ಅವರು ನನಗೆ ಏನು ಹೇಳದೇ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ನಾನು ಮೊದಲೇ ನಿಗದಿಯಾಗಿರುವ ಇಂಡಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಪ್ರತಿಭಟನಾರ್ಥವಾಗಿ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾರು ಹೋಗುತ್ತಿಲ್ಲ. ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಾಗರ ಶಾಸಕರು ಹೋಗ್ತಿಲ್ಲ.ಕೇಂದ್ರ ಸರ್ಕಾರದವರು ಕರೆಯಬೇಕಿತ್ತು. ಸರ್ಕಾರಗಳ ನಡುವೆ ಹೀಗೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಷ್ಟಾಚಾರ ಪಾಲನೆ ಮಾಡದೇ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

    ಈ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ನಡೆಯುತ್ತಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಇದ್ದೇವೆ. ಅನೇಕ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ 75% ಹಣ ಕೊಟ್ಟರೂ ಎಲ್ಲಾ ಕಾರ್ಯಕ್ರಮಕ್ಕೆ ಕೇಂದ್ರದವರನ್ನ ಕರೆಯುತ್ತೇವೆ. ರೈಲ್ವೇಯಲ್ಲಿ ಜಾಗ, 50% ಹಣ ನಾವೇ ಕೊಡುತ್ತೇವೆ. ಕೇಂದ್ರ ಸರ್ಕಾರದವರು ಶಿಷ್ಟಾಚಾರದ ಪ್ರಕಾರ ನನ್ನನ್ನ, ಇಲಾಖೆ ಮಂತ್ರಿ, ಉಸ್ತುವಾರಿ ಮಂತ್ರಿ, ಶಾಸಕರನ್ನ ಕರೆಯಬೇಕಿತ್ತು. ಆದರೆ ಯಾರನ್ನು ಕರೆದಿಲ್ಲ ಎಂದು ಸಿಟ್ಟು ಹೊರಹಾಕಿದರು.

  • 2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

    2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

    ಶಿವಮೊಗ್ಗ: ಶರಾವತಿ (Sharavathi) ಹಿನ್ನೀರು ಭಾಗದ ಜನರ 60 ವರ್ಷದ ಕನಸು ನನಸಾಗಿದೆ. ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರು ಬ್ರಿಡ್ಜ್‌ (Sigandur Bridge) ಕಾಮಗಾರಿ ಪೂರ್ಣವಾಗಿದ್ದು ಇಂದು ಲೋಕಾರ್ಪಣೆಯಾಗಲಿದೆ. 2019ರಲ್ಲಿ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

    ನಾಗ್ಪುರದಿಂದ ವಿಶೇಷ ವಿಮಾನದ ಮೂಲಕ ಬೆಳಗ್ಗೆ 10:45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamogga) ಗಡ್ಕರಿ ಬರಲಿದ್ದಾರೆ. ಬಳಿಕ ಹೆಲಿಕಾಪ್ಟರ್‌ನಲ್ಲಿ ಸಾಗರದ ಮಂಕಳಲೆ ಹೆಲಿಪ್ಯಾಡಿಗೆ ಬಂಧು ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಿಗಂದೂರು ಸೇತುವೆ ಬಳಿ ಬರಲಿದ್ದಾರೆ.

     

    ಮಧ್ಯಾಹ್ನ 12 ಗಂಟೆಗೆ ಐತಿಹಾಸಿಕ ಸೇತುವೆ ಉದ್ಘಾಟನೆಯಾಗಲಿದ್ದು ಬಳಿಕ 12:40ಕ್ಕೆ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ಸಭಾ ಕಾರ್ಯಕ್ರಮದಲ್ಲಿ ಗಡ್ಕರಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ಸೇತುವೆ ಲೋಕಾರ್ಪಣೆ ಜೊತೆಗೆ ರಾಜ್ಯದ 2,056 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ನಿತಿನ್‌ ಗಡ್ಕರಿ ಚಾಲನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

    ಸಭಾ ಕಾರ್ಯಕ್ರಮದ ಬಳಿಕ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಗಡ್ಕರಿ ಪ್ರಯಾಣ ಬೆಳೆಸಲಿದ್ದಾರೆ.

    ಸೇತುವೆಯ ವಿಶೇಷತೆ ಏನು?
    470 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದು 2.25 ಕಿ.ಮೀ. ಉದ್ದವಿದೆ. 16 ಮೀಟರ್ ಅಗಲ ಹೊಂದಿದ್ದು ಸೇತುವೆಯ ಎರಡು ಬದಿ ಫುಟ್‌ಪಾತ್‌ ನಿರ್ಮಾಣವಾಗಿದೆ. ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಸಿಗಲಿದೆ. ಸಿಗಂದೂರು, ಕೊಲ್ಲೂರು ಕ್ಷೇತ್ರಗಳಿಗೆ ಅನುಕೂಲವಾಗಲಿದೆ.