Tag: ಸಿಕ್ಸ್

  • ವಿಶ್ವಕಪ್‌ ಪವರ್‌ ಪ್ಲೇನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ರೋಹಿತ್‌ ಶರ್ಮಾ

    ವಿಶ್ವಕಪ್‌ ಪವರ್‌ ಪ್ಲೇನಲ್ಲಿ ವಿಶೇಷ ಸಾಧನೆ ನಿರ್ಮಿಸಿದ ರೋಹಿತ್‌ ಶರ್ಮಾ

    ಬೆಂಗಳೂರು: ಟೀಂ ಇಂಡಿಯಾದ ನಾಯಕ, ಆರಂಭಿಕ ಆಟಗಾರ ರೋಹಿತ್‌ ಶರ್ಮಾ (Rohit Sharma) ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Crciket) ವಿಶೇಷ ಸಾಧನೆ ಮಾಡಿದ್ದಾರೆ.

    ಈ ವಿಶ್ವಕಪ್‌ನ ಪವರ್‌ ಪ್ಲೇನಲ್ಲಿ (Power Play) 250ಕ್ಕೂ ಹೆಚ್ಚು ರನ್‌ ಗಳಿಸಿದ ಏಕೈಕ ಆಟಗಾರನಾಗಿ ರೋಹಿತ್‌ ಶರ್ಮಾ ಹೊರಹೊಮ್ಮಿದ್ದಾರೆ. ಈ ಟೂರ್ನಿಯಲ್ಲಿ 2 ಅರ್ಧಶತಕ, ಒಂದು ಶತಕವನ್ನು ಹಿಟ್‌ಮ್ಯಾನ್‌ ಸಿಡಿಸಿದ್ದಾರೆ. ರೋಹಿತ್‌ ಬ್ಯಾಟಿನಿಂದ ಇಲ್ಲಿಯವರೆಗೆ 22 ಸಿಕ್ಸ್‌, 50 ಬೌಂಡರಿ ಸಿಡಿಯಲ್ಪಟ್ಟಿದೆ.

    ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪೈಕಿ ರೋಹಿತ್‌ ಶರ್ಮಾ 5ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಒಟ್ಟು 8 ಪಂದ್ಯಗಳಿಂದ 442 ರನ್‌ ಹೊಡೆದಿದ್ದಾರೆ. ಇದನ್ನೂ ಓದಿ: ಪಾಕ್‌ ಮುಂದಿರುವ ಘೋರ ಸವಾಲು ಯಾವುದು? – ಎಷ್ಟು ರನ್‌ ಅಂತರದಲ್ಲಿ ಗೆದ್ದರೆ ಸೆಮಿಸ್‌ ತಲುಪಬಹುದು?

    ನ್ಯೂಜಿಲೆಂಡ್‌ನ ರಚಿನ್‌ ರವೀಂದ್ರ (Rachin Ravindra) 565 ರನ್‌ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ 550 ರನ್‌ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

     

    ವಿರಾಟ್‌ ಕೊಹ್ಲಿ (Virat Kohli) 543 ರನ್‌ ಹೊಡೆಯುವ ಮೂಲಕ 3ನೇ ಸ್ಥಾನ ಪಡೆದರೆ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ 446 ರನ್‌ ಹೊಡೆಯುವ ಮೂಲಕ 4ನೇ ಸ್ಥಾನ ಪಡೆದಿದ್ದಾರೆ.

    ಭಾರತದ ಪರ ಏಕದಿನ ಪಂದ್ಯದಲ್ಲಿ 300ಕ್ಕೂ ಅಧಿಕ ಸಿಕ್ಸರ್‌ (Sixer) ಸಿಡಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ರೋಹಿತ್‌ ಶರ್ಮಾ ಈಗಾಗಲೇ ಪಾತ್ರರಾಗಿದ್ದಾರೆ.

  • ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

    ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

    ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 7 ಸಿಕ್ಸ್ (Six) ಸಿಡಿಸಿ ಮಹಾರಾಷ್ಟ್ರ (Maharashtra) ತಂಡದ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad) ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದಿದ್ದಾರೆ.

    ಉತ್ತರ ಪ್ರದೇಶ (Uttar Pradesh)  ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯಕ್ವಾಡ್ 49ನೇ ಓವರ್‌ನಲ್ಲಿ 7 ಸಿಕ್ಸ್ ಸಹಿತ 43 ರನ್ ಚಚ್ಚಿದ್ದಾರೆ. 48ನೇ ಓವರ್‌ನ 4ನೇ ಎಸೆತ ನೋಬಾಲ್ ಎಸೆದ ಕಾರಣ ಫ್ರೀ ಹಿಟ್ ಎಸೆತವನ್ನು ಸಿಕ್ಸ್ ಚಚ್ಚಿದರು. ಬಳಿಕ ಮುಂದಿನ 3 ಎಸೆತಗಳನ್ನು ಸಿಕ್ಸ್ ಸಿಡಿಸಿ ಒಟ್ಟು 43 ರನ್ ಚಚ್ಚಿ ಬಿಸಾಡಿದರು. ಇದನ್ನೂ ಓದಿ: ಮಾರೊಕ್ಕೂ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಅಷ್ಟೇ ಅಲ್ಲದೇ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದು ಅಜೇಯ 220 ರನ್ (159 ಎಸೆತ, 10 ಬೌಂಡರಿ, 16 ಸಿಕ್ಸ್) ಚಚ್ಚಿ ದ್ವಿಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಮಹಾರಾಷ್ಟ್ರ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ಪೇರಿಸಿತು. ಇದನ್ನೂ ಓದಿ: ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಈ ಹಿಂದೆ ಯುವರಾಜ್ ಸಿಂಗ್ ಟಿ20 ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಅವರ 6 ಎಸೆತಗಳಿಗೆ 6 ಸಿಕ್ಸ್ ಚಚ್ಚಿ ದಾಖಲೆ ಬರೆದಿದ್ದರು. ಇದೀಗ ಗಾಯಕ್ವಾಡ್ 7 ಸಿಕ್ಸ್ ಸಿಡಿಸಿ ನೂತನ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಮೆರಾಮ್ಯಾನ್‌ಗೆ ಬಡಿದ ತಿಲಕ್ ವರ್ಮಾರ ಬಿಗ್ ಹಿಟ್

    ಕ್ಯಾಮೆರಾಮ್ಯಾನ್‌ಗೆ ಬಡಿದ ತಿಲಕ್ ವರ್ಮಾರ ಬಿಗ್ ಹಿಟ್

    ನವದೆಹಲಿ: ಮುಂಬೈ ತಂಡದ ಯುವ ಆಟಗಾರ ತಿಲಕ್ ವರ್ಮಾ ಹೊಡೆದ ಭರ್ಜರಿ ಹೊಡೆತವೊಂದು ಕ್ಯಾಮೆರಾಮ್ಯಾನ್ ತಲೆಗೆ ಬಡಿದ ಪ್ರಸಂಗ ಇಂದು ಐಪಿಎಲ್‍ನಲ್ಲಿ ನಡೆಯಿತು.

    ಅದೃಷ್ಟವಶಾತ್ ಚೆಂಡು ಕ್ಯಾಮೆರಾಮ್ಯಾನ್ ತಲೆಗೆ ಬಡಿದರೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಕೇವಲ 33 ಎಸೆತಗಳಲ್ಲಿ 61 ರನ್ ಗಳಿಸಿದ ತಿಲಕ್ ವರ್ಮಾ, 12ನೇ ಓವರ್‌ನಲ್ಲಿ ತಮ್ಮ ಅದ್ಭುತ ಸಿಕ್ಸರ್‌ನೊಂದಿಗೆ ಕ್ಯಾಮೆರಾಮ್ಯಾನ್‍ಗೆ ಶಾಕ್ ನೀಡಿದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು ಮುಂಬೈ ವಿರುದ್ಧ 194 ರನ್‍ಗಳ ಗುರಿ ನೀಡಿತ್ತು. ಆದರೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ 20 ಓವರ್‌ಗಳಲ್ಲಿ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಸ್ಟಾರ್ ಓಪನರ್ ಜೋಸ್ ಬಟ್ಲರ್ ಅದ್ಭುತ ಶತಕ ಗಳಿಸಿ ಮುಂಬೈ ವಿರುದ್ಧ ರಾಜಸ್ಥಾನ ದೊಡ್ಡ ಮೊತ್ತ ದಾಖಲಿಸಲು ನೆರವಾದರು. ಅವರು 11 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 100 ರನ್ ಸಿಡಿಸಿದರು. ಮುಂಬೈ ವಿರುದ್ಧ ಜಯಗಳಿಸಿದ ನಂತರ, ರಾಜಸ್ಥಾನವು ಐಪಿಎಲ್ 2022ರ ಅಂಕಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು.

  • ಡೇವಿಡ್ ವಾರ್ನರ್ ಸಿಡಿಸಿದ ಆ ಒಂದು ಸಿಕ್ಸ್ – ಕ್ರೀಡಾಸ್ಫೂರ್ತಿಗೆ ವಿರುದ್ಧವೇ?

    ಡೇವಿಡ್ ವಾರ್ನರ್ ಸಿಡಿಸಿದ ಆ ಒಂದು ಸಿಕ್ಸ್ – ಕ್ರೀಡಾಸ್ಫೂರ್ತಿಗೆ ವಿರುದ್ಧವೇ?

    ದುಬೈ: ಟಿ20 ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಸೆಣಸಾಡಿದವು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸಿಡಿಸಿದ ಒಂದು ಸಿಕ್ಸರ್ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 176 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. 177 ರನ್‍ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಭರ್ಜರಿ ಓಪನಿಂಗ್ ನೀಡಿದ್ದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ಕಡೆ ತಾಳ್ಮೆಯುತ ಬ್ಯಾಟಿಂಗ್ ಮಾಡುತ್ತಿದ್ದ ವಾರ್ನರ್ ತಾಳ್ಮೆ ಕಳೆದುಕೊಂಡರು. 8ನೇ ಓವರ್ ಎಸೆಯಲು ಬಂದ ಮೊಹಮ್ಮದ್ ಹಫೀಜ್ ಎಸೆದ ಚೆಂಡು ಪಿಚ್‍ನಲ್ಲಿ ಎರಡು ಬಾರಿ ಪುಟಿದೆದ್ದು, ಪಿಚ್‍ನಿಂದ ಹೊರಕ್ಕೆ ಹೋಯಿತು. ಹೀಗೆ ನಿಯಂತ್ರಣವನ್ನು ಕಳೆದುಕೊಂಡು ಮೊಹಮ್ಮದ್ ಹಫೀಜ್ ಎಸೆದ ಎಸತಕ್ಕೆ ಸ್ಟ್ರೈಕ್‍ನಲ್ಲಿದ್ದ ವಾರ್ನರ್ ಪಿಚ್‍ನಿಂದ ಹೊರಹೋಗುತ್ತಿದ್ದ ಚೆಂಡಿನ ಸಮೀಪ ಬಂದು ಸಿಕ್ಸ್ ಬಾರಿಸಿದರು. ಈ ಸಿಕ್ಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಬಳಿಕ ಮುಚ್ಚಿತು ಐವರ ಟಿ20 ವೃತ್ತಿಜೀವನ

     

    View this post on Instagram

     

    A post shared by ICC (@icc)

    ಹಫೀಜ್ ನಿಯಂತ್ರಣ ಕಳೆದುಕೊಂಡ ಎಸೆತವನ್ನು ಗಮನಿಸಿ ಕ್ರೀಡಾಸ್ಫೂರ್ತಿ ಮೆರೆದಿದ್ದರೆ ಅದನ್ನು ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಬಹುದಿತ್ತು. ಆದರೆ ವಾರ್ನರ್ ಸಿಕ್ಸರ್‍ ಗಟ್ಟಿದ ಪರಿಣಾಮ ಅಂಪೈರ್ ನೋ ಬಾಲ್ ಎಂದು ಘೋಷಿಸಿದರು. ಕಡೆಗೆ ವಾರ್ನರ್ 49 ರನ್ (30 ಎಸೆತ 3 ಬೌಂಡರಿ, ಸಿಕ್ಸ್) ಸಿಡಿಸಿ ವಿವಾದಿತವಾಗಿ ಔಟ್ ಆದರು. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು

    ವಾರ್ನರ್ ಈ ಸಿಕ್ಸ್ ಬಗ್ಗೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಕಿಡಿಕಾರಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ವಾರ್ನರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಗಂಭೀರ್ ರಂತೆ ಹಲವು ಮಾಜಿ ಆಟಗಾರರು ಸಹಿತ ಕ್ರಿಕೆಟ್ ಪ್ರೇಮಿಗಳು ವಾರ್ನರ್ ಕ್ರೀಡಾಸ್ಫೂರ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್

  • ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ಗಲ್ಲಿ ಕ್ರಿಕೆಟ್ ನೆನಪಿಸಿದ ಧೋನಿ ಸಿಕ್ಸರ್

    ದುಬೈ: ಐಪಿಎಲ್‍ಗಾಗಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿದಿರುವ ಧೋನಿ ದುಬೈ ಕ್ರೀಡಾಂಗಣದಲ್ಲಿ ಸಿಕ್ಸ್ ಗಳ ಮಳೆ ಸುರಿಸಿದ್ದಾರೆ. ಬಳಿಕ ಸಿಕ್ಸ್ ಹೊಡೆದ ಬಾಲ್‍ಗಳು ಕಾಣೆಯಾದಾಗ ತಾವೇ ಹುಡುಕಿ ತಂದು ಗಲ್ಲಿ ಕ್ರಿಕೆಟ್ ನೆನಪಿಸಿದ್ದಾರೆ.

    ಐಪಿಎಲ್ ಆರಂಭಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ನಡುವೆ ಎಲ್ಲ ತಂಡಗಳು ಕೂಡ ದುಬೈನತ್ತ ಪ್ರಯಾಣ ಬೆಳೆಸಿವೆ. ಅದರಂತೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ದುಬೈನಲ್ಲಿ ಬೀಡುಬಿಟ್ಟಿದ್ದು, ಭರ್ಜರಿ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ವೇಳೆ ಧೋನಿ ಸಿಕ್ಸ್ ಮೇಲೆ ಸಿಕ್ಸ್ ಹೊಡೆದು ಮೈದಾನದಿಂದ ಹೊರ ಹೋದ ಬಾಲ್‍ಗಳು ಕಾಣೆಯಾಗುವಂತೆ ಮಾಡಿದ್ದಾರೆ. ಬಳಿಕ ಸ್ವತಃ ತಾವೇ ಪೊದೆಗಳಲ್ಲಿ ಸಿಲುಕೊಂಡಿದ್ದ ಬಾಲ್‍ಗಳನ್ನು ಹೆಕ್ಕಿತಂದಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರು ಕೂಡ ತಮ್ಮ ಗಲ್ಲಿಕ್ರಿಕೆಟ್ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಸೆಣಸಾಟ

    ಧೋನಿ ಸಿಕ್ಸ್ ಸಿಡಿಸಿ ಬಾಲ್‍ಗಳನ್ನು ಪೊದೆಗಳಲ್ಲಿ ಬ್ಯಾಟ್‍ನಿಂದ ಹುಡುಕುತ್ತಿರುವ ವೀಡಿಯೋವನ್ನು ಸಿಎಸ್‍ಕೆ ಫ್ರಾಂಚೈಸ್ ಪೋಸ್ಟ್ ಮಾಡಿ ಧೋನಿಯ ಸಿಕ್ಸರ್‍ಗಳಿಗೆ ಮತ್ತು ಧೋನಿಯ ಪ್ರೀತಿಗೆ ಗಡಿರೇಖೆಗಳಿಲ್ಲ ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ಮಾಹಿ ಅಭಿಮಾನಿಗಳು ಖುಷಿಯಾಗಿದ್ದಾರೆ.

    ದುಬೈನಲ್ಲಿ ನಡೆಯುವ ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

  • ಆಸ್ಟ್ರೇಲಿಯಾದಲ್ಲಿ ಧೋನಿ ಬ್ಯಾಟ್‍ನಿಂದ ಸಿಡಿದ ಸಿಕ್ಸರ್‌ಗಳ ವೀಡಿಯೋ ನೋಡಿ

    ಆಸ್ಟ್ರೇಲಿಯಾದಲ್ಲಿ ಧೋನಿ ಬ್ಯಾಟ್‍ನಿಂದ ಸಿಡಿದ ಸಿಕ್ಸರ್‌ಗಳ ವೀಡಿಯೋ ನೋಡಿ

    ಸಿಡ್ನಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಈ ಸಂದರ್ಭ ಮಾಹಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಅವರ ನೆಲದಲ್ಲಿ ಮಾಹಿ ಸಿಡಿಸಿದ ಅತೀ ದೂರದ ಸಿಕ್ಸ್ ಗಳನ್ನು ನೆನಪಿಸುವ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಶುಭಾಶಯ ಕೋರಿದೆ.

    ಧೋನಿ ವಿಶ್ವ ಕ್ರಿಕೆಟ್ ಕಂಡ ಚಾಣಾಕ್ಷ ನಾಯಕ, ಉತ್ತಮ ಗೇಮ್ ಫಿನಿಶರ್ ಮತ್ತು ವಿಕೆಟ್ ಹಿಂದೆ ಜಾದುಮಾಡುವ ಆಟಗಾರ. ಇದರೊಂದಿಗೆ ಧೋನಿ ತಂಡಕ್ಕೆ ಸಂಕಷ್ಟ ಎದುರಾದಾಗ ಏಕಾಂಗಿಯಾಗಿ ಮುಂದೆ ನಿಂತು ಗೆಲ್ಲಿಸಿಕೊಡಬಲ್ಲ ಶಕ್ತಿ ಹೊಂದಿದ್ದರು. ಅದಲ್ಲದೆ ಧೋನಿ ಬ್ಯಾಟ್‍ನಿಂದ ಅದ್ಭುತ ಎನಿಸುವಂತಹ ಬಾನೆತ್ತರದ ಸಿಕ್ಸ್ ಗಳು ಕೂಡ ಕಾಣಸಿಗುತ್ತಿದ್ದವು. ಧೋನಿಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇಂದು ಧೋನಿ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಆ ಪ್ರಯುಕ್ತ ಕ್ರಿಕೆಟ್ ಆಸ್ಟ್ರೇಲಿಯಾ, ಧೋನಿ ಆಸ್ಟ್ರೇಲಿಯಾ ನೆಲದಲ್ಲಿ ಸಿಡಿಸಿದ ಅದ್ಭುತ ಸಿಕ್ಸರ್‌ಗಳ ವೀಡಿಯೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಶುಭ ಹಾರೈಸಿದೆ.

    ಧೋನಿ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಆಸ್ಟ್ರೇಲಿಯಾ ನೆಲದಲ್ಲಿ 60 ಸಿಕ್ಸ್ ಸಿಡಿಸಿದ್ದಾರೆ. ಅದರಲ್ಲೂ 2012ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ಏಕದಿನ ಪಂದ್ಯವೊಂದರಲ್ಲಿ ಕ್ಲಿಂಟ್ ಮೆಕೆ ಬೌಲಿಂಗ್‍ನಲ್ಲಿ ಧೋನಿ ಸಿಡಿಸಿದ ಸಿಕ್ಸ್ ಅಭಿಮಾನಿಗಳ ಕಣ್ಣಂಚಲ್ಲಿ ಹಾಗೆ ಉಳಿದುಕೊಂಡಿದೆ. ಇದನ್ನೂ ಓದಿ: ಧೋನಿ ಹುಟ್ಟು ಹಬ್ಬಕ್ಕೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

    ಧೋನಿ ಹುಟ್ಟು ಹಬ್ಬದ ಪ್ರಯುಕ್ತ ಬಿಸಿಸಿಐ, ಐಸಿಸಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ವೀರೇಂದ್ರ ಸೆಹ್ವಾಗ್, ಇಶಾಂತ್ ಶರ್ಮಾ, ಸೇರಿದಂತೆ ಸಾವಿರಾರು ಹಾಲಿ ಹಾಗೂ ಮಾಜಿ ಆಟಗಾರರು ಶುಭಾ ಹಾರೈಸಿದ್ದಾರೆ.

  • ಟಿ 20ಯಲ್ಲಿ ಧೋನಿಯನ್ನು ಹಿಂದಿಕ್ಕಿದ ಹಿಟ್‍ಮ್ಯಾನ್

    ಟಿ 20ಯಲ್ಲಿ ಧೋನಿಯನ್ನು ಹಿಂದಿಕ್ಕಿದ ಹಿಟ್‍ಮ್ಯಾನ್

    ಚೆನ್ನೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಒಂದೇ ಪಂದ್ಯದಲ್ಲಿ ಎರಡು ಮೈಲಿಗಲ್ಲನ್ನು ತಲುಪಿ ತನ್ನ ಬ್ಯಾಟಿಂಗ್ ವೈಭವವನ್ನು ತೋರಿದ್ದಾರೆ.

    ಐಪಿಎಲ್‍ನ 9 ಪಂದ್ಯದಲ್ಲಿ ಪರಸ್ಪರ ಎದುರುಬದುರಾದ ಮುಂಬೈ ಮತ್ತು ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಪರ ಆರಂಭಿಕರಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 32 ರನ್( 35 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ 28 ರನ್ ಬಾರಿಸುತ್ತಿದ್ದಂತೆ ರೋಹಿತ್ ಶರ್ಮಾ ನಾಯಕನಾಗಿ 4000 ರನ್ ಪೂರೈಸಿದರು. ಈ ಮೂಲಕ ನಾಯಕನಾಗಿ ಟಿ20 ಕ್ರಿಕೆಟ್‍ನಲ್ಲಿ 4 ಸಾವಿರ ರನ್ ಪೂರೈಸಿದ ಹೊಸ ಮೈಲುಗಲ್ಲು ಸ್ಥಾಪಿಸಿದರು. ಈ ಮೊದಲು ಈ ಮೈಲುಗಲ್ಲು ಸ್ಥಾಪಿಸಿದ ಭಾರತೀಯ ನಾಯಕರಲ್ಲಿ ವಿರಾಟ್ ಕೊಹ್ಲಿ 6044 ರನ್‍ಗಳೊಂದಿಗೆ ಮುಂಚೂಣಿಯಲ್ಲಿ ಕಾಣಿಸಿಕೊಂಡರೆ, ನಂತರ 5,872 ರನ್‍ಗಳೊಂದಿಗೆ ಚೆನ್ನೈ ತಂಡದ ನಾಯಕ ಧೋನಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ 3ನೇ ಸ್ಥಾನದಲ್ಲಿ 4,272 ರನ್‍ಗಳಿಸಿರುವ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಇದ್ದಾರೆ.

    ಇದೇ ಪಂದ್ಯದಲ್ಲಿ ರೋಹಿತ್ ಐಪಿಎಲ್‍ನಲ್ಲಿ ಸಿಕ್ಸರ್‍ನಲ್ಲೂ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಚೆನ್ನೈ ತಂಡದ ನಾಯಕ ಧೋನಿ ಅವರನ್ನು ಹಿಂದಿಕ್ಕಿ 3 ಸ್ಥಾನಕ್ಕೆ ನೆಗೆದಿದ್ದಾರೆ. ಐಪಿಎಲ್‍ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿರುವ ಪಟ್ಟಿಯಲ್ಲಿ 351 ಸಿಕ್ಸ್ ನೊಂದಿಗೆ ಕ್ರೀಸ್ ಗೇಲ್ ಪ್ರಥಮ ಸ್ಥಾನದಲ್ಲಿದ್ದರೆ. ಎರಡನೇ ಸ್ಥಾನದಲ್ಲಿ 240 ಸಿಕ್ಸರ್‍ ಗಳೊಂದಿಗೆ ಅರ್‍ಸಿಬಿ ತಂಡದ ಆಟಗಾರ ಎ.ಬಿ.ಡಿ ವಿಲಿಯರ್ಸ್ ಕಾಣಿಸಿಕೊಂಡಿದ್ದಾರೆ. ಇದೀಗ ರೋಹಿತ್ ಶರ್ಮಾ 217 ಸಿಕ್ಸ್ ಸಿಡಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದು, ನಂತರದ 4 ಸ್ಥಾನದಲ್ಲಿ ಧೋನಿ 216 ಸಿಕ್ಸರ್ ನೊಂದಿಗೆ ಕೇವಲ ಒಂದು ಸಿಕ್ಸ್‍ನಿಂದ ಹಿಂದೆ ಉಳಿದಿದ್ದಾರೆ.

    ಮುಂದಿನ ಪಂದ್ಯಗಳಲ್ಲಿ ಈ ಆಟಗಾರರ ಮಧ್ಯೆ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮುಂಚೂಣಿಯಾಗಿ ಕಾಣಿಸಿಕೊಳ್ಳಲು ಫೈಟ್ ಶುರುವಾಗಲಿದೆ.

  • ಮ್ಯಾಕ್ಸ್ ವೆಲ್ ಬಿಗ್‍ಹಿಟ್ ಸಿಕ್ಸ್ ನೋಡಿ ದಂಗಾದ ಕೊಹ್ಲಿ

    ಮ್ಯಾಕ್ಸ್ ವೆಲ್ ಬಿಗ್‍ಹಿಟ್ ಸಿಕ್ಸ್ ನೋಡಿ ದಂಗಾದ ಕೊಹ್ಲಿ

    ಚೆನ್ನೈ: ಐಪಿಎಲ್ ಪ್ರಾರಂಭಗೊಳ್ಳುತ್ತಿದ್ದಂತೆ ಮೊದಲ ಪಂದ್ಯದಿಂದಲೇ ಬ್ಯಾಟ್ಸ್ ಮ್ಯಾನ್‍ಗಳು ಸಿಕ್ಸರ್‍ ಗಳ ಹಬ್ಬ ಶುರುಮಾಡಿಕೊಂಡಿದ್ದಾರೆ. ಆರ್‌ಸಿಬಿ ಮತ್ತು ಮುಂಬೈ ನಡುವಿನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟ್ಸ್ ಮ್ಯಾನ್ ಗ್ಲೇನ್ ಮ್ಯಾಕ್ಸ್ ವೆಲ್ ಸಿಡಿಸಿದ ಆಕರ್ಷಕ ಸಿಕ್ಸ್ ಕಂಡ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ದಂಗಾಗಿದ್ದಾರೆ.

    ಮುಂಬೈ ವಿರುದ್ಧದ ಪಂದ್ಯದಲ್ಲಿ 160 ರನ್‍ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಹೊರಟ ವೇಳೆ ಆರ್‌ಸಿಬಿ ತಂಡದ ಆಟಗಾರ ಮ್ಯಾಕ್ಸ್ ವೆಲ್, 11ನೇ ಓವರ್ ಎಸೆಯಲು ಬಂದ ಕೃಣಾಲ್ ಪಾಂಡ್ಯ ಅವರ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್‍ ಗಟ್ಟಿದರು. ಈ ಬಾಲ್ 100 ಮೀಟರ್ ಮೇಲೆ ಹೋಗಿ ಸ್ಟೇಡಿಯಂನಿಂದ ಹೊರ ಬಿದ್ದಿತ್ತು. ಇದನ್ನು ನಾನ್‍ಸ್ಟ್ರೈಕ್‍ನಲ್ಲಿದ್ದ ವಿರಾಟ್ ಕಂಡು ಸ್ಟನ್ ಆಗಿ ಮುಖದ ಭಾವದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರು.

    ಈ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ 39ರನ್(28 ಎಸೆತ, 3ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಆಸರೆಯಾದರು. ಈ ಬಾರಿಯ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡದ ಪರ ಆಡುತ್ತಿರುವ ಮ್ಯಾಕ್ಸಿ ಆಡಿದ ಮೊದಲ ಪಂದ್ಯದಿಂದಲೇ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಆದರೆ ಕಳೆದ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ಪರ ಆಡುತ್ತಿದ್ದ ಮ್ಯಾಕ್ಸಿ ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ಬಾರಿ ಪಂಜಾಬ್ ಪರ 13 ಪಂದ್ಯಗಳನ್ನು ಆಡಿ 108 ರನ್ ಬಾರಿಸಿದ್ದರು ಈ 13 ಪಂದ್ಯಗಳಲ್ಲೂ ಕೂಡ ಮ್ಯಾಕ್ಸ್‍ವೆಲ್ ಬ್ಯಾಟ್‍ನಿಂದ ಒಂದೇ ಒಂದು ಸಿಕ್ಸ್ ಸಿಡಿದಿರಲಿಲ್ಲ. ಆದರೆ ಈ ಬಾರಿ ಭರ್ಜರಿ ಲಯದಲ್ಲಿರುವಂತೆ ಕಂಡು ಬಂದಿರುವ ಮ್ಯಾಕ್ಸ್ ವೆಲ್ ಬ್ಯಾಟ್‍ನಿಂದ ರನ್‍ಹೊಳೆ ಹರಿದು ಬಂದರೆ ಆರ್‌ಸಿಬಿ ಚಾಂಪಿಯನ್ ಆಗೋದ್‍ರಲ್ಲಿ ನೋ ಡೌಟ್.

  • ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂಪರ್‌ ಹ್ಯೂಮನ್‌ ಮಯಾಂಕ್‌

    ಚಂಗನೆ ಜಿಗಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂಪರ್‌ ಹ್ಯೂಮನ್‌ ಮಯಾಂಕ್‌

    ದುಬೈ: ಕ್ರಿಕೆಟ್‌ ಇತಿಹಾಸದಲ್ಲಿ ಎರಡು ಸೂಪರ್‌ ಓವರ್‌ ಕಂಡು ದಾಖಲೆ ಬರೆದ ಪಂದ್ಯದಲ್ಲಿ ಕನ್ನಡಿಗ ಮಯಾಂಕ್‌ ಅಗರ್‌ವಲ್‌ ಅವರ ಅತ್ಯುತ್ತಮ ಫೀಲ್ಡಿಂಗ್‌ ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ಮೊದಲ ಸೂಪರ್‌ ಓವರ್‌ನಲ್ಲಿ ಬ್ಯಾಟ್‌ ಮತ್ತು ಬೌಲ್‌ ಮಾಡಿದವರು ಎರಡನೇ ಸೂಪರ್‌ ಓವರ್‌ನಲ್ಲಿ ಬ್ಯಾಟ್‌, ಬೌಲ್‌ ಮಾಡುವಂತಿಲ್ಲ ಎಂಬ ನಿಯಮದ ಹಿನ್ನೆಲೆಯಲ್ಲಿ ಪಂಜಾಬ್ ಪರ ಕ್ರಿಸ್ ಜೋರ್ಡಾನ್ ಅವರು ಎರಡನೇ ಸೂಪರ್ ಓವರ್ ಬೌಲ್ ಮಾಡಿದರು.

    ಮೊದಲ ಬಾಲ್‌ ವೈಡ್‌ ಆದರೆ ನಂತರದ ಬಾಲಿನಲ್ಲಿ ಒಂದು ಸಿಂಗಲ್ ಬಂತು. ಎರಡನೇ ಬಾಲಿನಲ್ಲಿ ಒಂದು ರನ್ ಬಂತು. ಮೂರನೇ ಎಸೆತವನ್ನು ಕೀರನ್ ಪೊಲಾರ್ಡ್ ಬೌಂಡರಿಗಟ್ಟಿದರು. ನಾಲ್ಕನೇ ಎಸೆತ ಮತ್ತೆ ವೈಡ್ ಆಯ್ತು. ನಾಲ್ಕನೇ ಬಾಲ್ ಸಿಂಗಲ್ ಬಂದು ಹಾರ್ದಿಕ್ ಪಾಂಡ್ಯ ಔಟ್ ಆದರು. ಐದನೇ ಬಾಲ್ ಡಾಟ್ ಬಾಲ್ ಆಯ್ತು. ಇದನ್ನೂ ಓದಿ: ಪಂದ್ಯ ಟೈ ಆಗಿ ಸೂಪರ್‌ ಓವರ್‌ ಗೆ ಹೋಗಿದ್ದು ಹೇಗೆ?

    ಸ್ಟ್ರೈಕ್‌ನಲ್ಲಿದ್ದ ಕೊನೆಯ ಎಸೆತವನ್ನು ಕೀರನ್‌ ಪೋಲಾರ್ಡ್‌ ಸಿಕ್ಸರ್‌ ಅಟ್ಟಲು ಬಲವಾಗಿ ಹೊಡೆದರು. ಚೆಂಡು ಸಿಕ್ಸ್‌ಗೆ ಹೋಗುತ್ತದೆ ಎನ್ನುವಷ್ಟರಲ್ಲಿ ಬೌಂಡರಿ ಗೆರೆ ಬಳಿ ಇದ್ದ ಮಯಾಂಕ್‌ ಜಿಗಿದು ಬಾಲನ್ನು ತಡೆದು ಎಸೆದರು. 4ರನ್‌ ತಡೆದ ಪರಿಣಾಮ ಮುಂಬೈ 11 ರನ್‌ ಗಳಿಸಿತು.

    ಒಂದು ವೇಳೆ ನೇರವಾಗಿ ಸಿಕ್ಸ್‌ ಹೋಗುತ್ತಿದ್ದರೆ ಅಥವಾ ತಡೆಯುವ ಪ್ರಯತ್ನದಲ್ಲಿ ಕೈಗೆ ಸಿಕ್ಕಿ ಬಾಲ್‌ ಬೌಂಡರಿ ಗೆರೆ ದಾಟುತ್ತಿದ್ದರೆ ಕ್ರಿಸ್‌ ಗೇಲ್‌ ಮತ್ತು ಮಯಾಂಕ್‌ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇತ್ತು. ಆದರೆ ಮಯಾಂಕ್‌ ಅವರ ಅತ್ಯುತ್ತಮ ಫೀಲ್ಡಿಂಗ್‌ ಪಂದ್ಯವನ್ನೇ ಬದಲಾಯಿಸಿ ಬಿಟ್ಟಿತು. 4 ರನ್‌ ಸೇವ್‌ ಮಾಡಿ ಕೇವಲ 2 ರನ್‌ ನೀಡಿದ ಮಯಾಂಕ್‌ ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    11 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ ಪರ ಆಟವಾಡಲು ಗೇಲ್‌ ಮತ್ತು ಅಗರ್‌ವಾಲ್‌ ಕ್ರೀಸಿಗೆ ಬಂದರು. ಮುಂಬೈ ಪರ ಟ್ರೆಂಟ್ ‌‌‌‌ಬೌಲ್ಟ್ ಬೌಲ್ ಮಾಡಿದರು. ಮೊದಲ ಬಾಲನ್ನೇ ಕ್ರಿಸ್ ಗೇಲ್ ಸಿಕ್ಸರ್ ಗೆ ಅಟ್ಟಿದರು. ನಂತರ ಎರಡನೇ ಬಾಲನ್ನು ಗೇಲ್ ಅವರು ಸಿಂಗಲ್ ತೆಗೆದುಕೊಂಡರು. ನಂತರ ಮೂರನೇ ಬಾಲನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಬೌಂಡರಿಗಟ್ಟಿದರು. ನಂತರ ಒಂದು ರನ್ ಬೇಕಿದ್ದಾಗ ನಾಲ್ಕನೇ ಬಾಲನ್ನು ಕೂಡ ಮಯಾಂಕ್ ಬೌಂಡರಿ ಕಳುಹಿಸಿ ಪಂಜಾಬ್‍ಗೆ ಜಯ ತಂದುಕೊಟ್ಟರು.

    https://twitter.com/ShivamChatak/status/1317903973290893312

  • ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

    ಧೋನಿ ವಿರುದ್ಧ 3 ಸಿಕ್ಸ್‌ ಚಚ್ಚಿ ಸೇಡು ತೀರಿಸಿಕೊಂಡ ಅಕ್ಷರ್‌ ಪಟೇಲ್‌

    ಶಾರ್ಜಾ: ಕೊನೆಯ ಓವರ್‌ನಲ್ಲಿ ಮೂರು ಸಿಕ್ಸರ್‌ ಚಚ್ಚುವ ಮೂಲಕ ಅಕ್ಷರ್‌ ಪಟೇಲ್‌ ಅವರು ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ.

    ಹೌದು. ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯವನ್ನು ತಂದಿಟ್ಟ ಅಕ್ಷರ್‌ ಪಟೇಲ್‌ ಮೂರು ಸಿಕ್ಸ್‌ ಸಿಡಿಸುವ ಮೂಲಕ ಧೋನಿ ವಿರುದ್ಧ ಸೇಡನ್ನು ತೀರಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    2016 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಿಂದ ಅಮಾನತುಗೊಂಡಿದ್ದ ಹಿನ್ನೆಲೆಯಲ್ಲಿ ಧೋನಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದರು. ಈ ವೇಳೆ ಅಕ್ಷರ್‌ ಪಟೇಲ್‌ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಪರ ಆಡುತ್ತಿದ್ದರು.

    ವಿಶಾಖಪಟ್ಟಣದಲ್ಲಿ ಮೇ 21 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು.

    173 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಪುಣೆ ತಂಡಕ್ಕೆ ಕೊನೆಯ ಓವರ್‌ನಲ್ಲಿ 23 ರನ್‌ಗಳು ಬೇಕಿತ್ತು. ಅಕ್ಷರ್‌ ಪಟೇಲ್‌ ಎಸೆದ ಈ ಓವರ್‌ನಲ್ಲಿ 3 ಸಿಕ್ಸ್‌, ಒಂದು ಬೌಂಡರಿ ಹೊಡೆಯುವ ಮೂಲಕ ಧೋನಿ 23 ರನ್‌ ಚಚ್ಚಿದ್ದರು. ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಧೋನಿ ಔಟಾಗದೇ 64 ರನ್‌(32 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

    https://twitter.com/Romeo_theboss/status/1317547044068679682

    ಅಂದು ಮೂರು ಧೋನಿ 3 ಸಿಕ್ಸ್‌ ಹೊಡೆದಿದ್ದರೆ ಶನಿವಾರದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಕೊನೆಯ ಓವರಿನಲ್ಲಿ 3 ಸಿಕ್ಸ್‌ ಹೊಡೆದಿದ್ದರು. 180 ರನ್‌ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್‌ ಬೇಕಿತ್ತು. 19ನೇ ಓವರ್‌ ಎಸೆದ ಕರ್ರನ್‌ 4 ರನ್‌ ನೀಡಿ 1 ವಿಕೆಟ್‌ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್‌ ಬೇಕಿತ್ತು.

    ಕೊನೆಯ ಓವರ್‌ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್‌ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್‌ ಬಂತು. ಸ್ಟ್ರೈಕ್‌ಗೆ ಅಕ್ಷರ್‌ ಪಟೇಲ್‌ ಬಂದರು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

    29 ಎಸೆತಗಳಲ್ಲಿ 50 ರನ್‌ ಹೊಡೆದ ಶಿಖರ್‌ ಧವನ್‌ ಅಜೇಯ 101 ರನ್‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದರು.