Tag: ಸಿಕರ್

  • ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಹೇಳಲು ನಿರಾಕರಿಸಿದ ಆಟೋ ಚಾಲಕನ ಮೇಲೆ ಹಲ್ಲೆ

    ಜೈ ಶ್ರೀರಾಮ್, ಮೋದಿ ಜಿಂದಾಬಾದ್ ಹೇಳಲು ನಿರಾಕರಿಸಿದ ಆಟೋ ಚಾಲಕನ ಮೇಲೆ ಹಲ್ಲೆ

    – ಇಬ್ಬರ ಬಂಧನ

    ಜೈಪುರ: ಜೈ ಶ್ರೀರಾಮ್ ಹಾಗೂ ಮೋದಿ ಜಿಂದಾಬಾದ್ ಎಂದು ಹೇಳದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ.

    ಈ ಘಟನೆ ಶನಿವಾರ ರಾಜಸ್ಥಾನದ ಸಿಕರ್ ಎಂಬಲ್ಲಿ ನಡೆದಿದೆ. ಗಫರ್ ಅಹ್ಮದ್ ಕಚ್ಛಾವಾ(52) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಬಂಧಿತರನ್ನು ಶಂಭು ದಯಾಳ್(35) ಹಾಗೂ ರಾಜೇಂದ್ರ(30) ಎಂದು ಗುರುತಿಸಲಾಗಿದೆ.

    ಇಬ್ಬರು ನನ್ನ ಗಡ್ಡ ಹಿಡಿದುಕೊಂಡು ತಳ್ಳಿ ಹಲ್ಲೆಗೈದಿದ್ದಾರೆ. ಅಲ್ಲದೆ ಪಾಕಿಸ್ತಾನಕ್ಕೆ ಹೋಗು ಎಂದು ಗದರಿಸಿರುವುದಾಗಿ ಆಟೋ ಚಾಲಕ ಗಫರ್ ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಗಫರ್ ದೂರು ನೀಡಿದ ಬಳಿಕ ಕೇಲವ 6 ಗಂಟೆಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

    ಗಫರ್ ಪೊಲೀಸರಿಗೆ ನೀಡಿದ ದೂರಿನಲ್ಲಿ, ಆರೋಪಿಗಳು ನನ್ನ ಕೈಯಿಂದ ವಾಚ್ ಹಾಗೂ ಹಣವನ್ನು ಕಸಿದುಕೊಂಡರು. ನಂತರ ನನ್ನ ಕೆನ್ನೆಗೆ ಹೊಡೆದು ಹಲ್ಲು ಮುರಿದಿದ್ದಾರೆ. ಕಣ್ಣು, ಮುಖ ನೋಡದೆ ಹಿಗ್ಗಾಮುಗ್ಗ ಥಳಿಸಿದ್ದು, ಪರಿಣಾಮ ಕಣ್ಣು ಊದುಕೊಂಡಿದೆ ಎಂದು ತಿಳಿಸಿದ್ದಾರೆ.

    ಗಫರ್ ಶುಕ್ರವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಪ್ರಯಾಣಿಕರೊಬ್ಬರನ್ನು ಅವರ ಗ್ರಾಮಕ್ಕೆ ಬಿಟ್ಟು ವಾಪಸ್ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ಗಫರ್ ಅವರನ್ನು ತಡೆದಿದ್ದಾರೆ. ಅಲ್ಲದೆ ಗಫರ್ ಬಳಿ ತಂಬಾಕು ಕೊಡುವಂತೆ ಕೇಳಿದ್ದಾರೆ. ತಂಬಾಕು ಕೇಳಿದ ತಕ್ಷಣ ಗಫರ್ ಅವರಿಗೆ ನೀಡಿದ್ದರೂ, ಅದನ್ನು ತೆಗೆದುಕೊಳ್ಳಲು ಆರೋಪಿಗಳು ನಿರಾಕರಿಸಿದ್ದಾರೆ. ಅಲ್ಲದೆ ಮೋದಿ ಜಿಂದಾಬಾದ್ ಹಾಗೂ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ. ನನ್ನ ಆಟೋವನ್ನು ನೆಲಕ್ಕೆ ತಳ್ಳಿ ನನ್ನ ಮೇಲೆ ಹಿಗ್ಗಾಮುಗ್ಗವಾಗಿ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಗಫರ್ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಗಫರ್ ನೀಡಿದ ದೂರಿನಂತೆ ಘಟನೆಯ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಪಾನಮತ್ತ ಸ್ಥಿತಿಯಲ್ಲಿ ಸಂತ್ರಸ್ತನೊಂದಿಗೆ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ ಅಂತ ಸಿಕರ್ ನ ಹಿರಿಯ ಪೊಲೀಸ್ ಅಧಿಕಾರಿ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.