ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‍ವೈ ಮೇಟಿ ಅವರಿಗೆ ಸಿಐಡಿ ಕ್ಲೀನ್ ಚಿಟ್ ನೀಡುವ ಸಾಧ್ಯತೆಯಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಐಡಿಯಿಂದ ತನಿಖೆಗೆ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿಗೆ ಯಾರಿಂದಲೂ ಮೇಟಿ ಅವರ ವಿರುದ್ಧ ದೂರು ಬಂದಿರಲಿಲ್ಲ. ರಾಸಲೀಲೆಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯೂ ಸಹ ದೂರು ನೀಡಿರಲಿಲ್ಲ. ಹೀಗಾಗಿ ಯಾವುದೇ ದೂರು ಇಲ್ಲದ ಹಿನ್ನಲೆಯಲ್ಲಿ ಮೇಟಿ ಅವರಿಗೆ ಕ್ಲೀನ್ ಚಿಟ್ ಸಿಗೋ ಸಾಧ್ಯತೆ ಇದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸಿಐಡಿ ವರದಿ ಸಲ್ಲಿಸಲಿದೆ.
ರಾಸಲೀಲೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಗುವ ಹಿನ್ನಲೆಯಲ್ಲಿ ಮತ್ತೆ ಸಚಿವ ಸ್ಥಾನ ಪಡೆಯಲು ಹೆಚ್‍ವೈ ಮೇಟಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಹೆಚ್‍ವೈ ಮೇಟಿ ಕಾಣಿಸಿಕೊಂಡಿದ್ದು, ಕ್ಲೀನ್ ಚಿಟ್ ವರದಿ ತೋರಿಸಿ ಮತ್ತೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಕೇಳುವ ಸಾಧ್ಯತೆಯಿದೆ.
ಏನಿದು ಪ್ರಕರಣ: ಅಬಕಾರಿ ಸಚಿವರಾಗಿದ್ದ ಹೆಚ್‍ವೈ ಮೇಟಿ ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂರ್ಪಕದಲ್ಲಿ ತೊಡಗಿದ್ದ ಸಿಡಿಯನ್ನ ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಕಳೆದ ಡಿಸೆಂಬರ್‍ನಲ್ಲಿ ಬಿಡುಗಡೆ ಮಾಡಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆಯಾದ ಬಳಿಕ ಹೆಚ್‍ವೈ ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮಡಿಕೇರಿ: ಓರ್ವ ಸಚಿವರು ಹಾಗು ಇಬ್ಬರು ಅಧಿಕಾರಿಗಳು ತಮಗೆ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದೆ.
ಸಿಐಡಿಯಿಂದ ಬಿ ರಿಪೋರ್ಟ್, ಹೈಕೋರ್ಟ್ ನಲ್ಲಿಯೂ ಖಾಸಗಿ ದೂರು ವಜಾ, ಮಡಿಕೇರಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಗಣಪತಿ ಪುತ್ರ ನೇಹಲ್ ಕೇಸ್ ಮುಂದುವರೆಸಲು ನಿರಾಸಕ್ತಿಯಿಂದ ಇನ್ನೇನು ಈ ಪ್ರಕರಣ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮಡಿಕೇರಿ ಜೆಎಂಎಫ್ ಸಿ ಕೋರ್ಟ್ ಕುಟುಂಬ ಸದಸ್ಯರನ್ನು ದೂರುದಾರರನ್ನಾಗಿ ಪರಿಗಣಿಸುವಂತೆ ಇಂದು ಅದೇಶ ನೀಡಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅನ್ನಪೂರ್ಣಶ್ವರಿ ಕುಟುಂಬ ಸದಸ್ಯರನ್ನು ಈ ಪ್ರಕರಣದಲ್ಲಿ ದೂರುದಾರರನ್ನಾಗಿ ಪರಿಗಣಿಸುವಂತೆ ಇಂದು ಅದೇಶ ನೀಡಿದ್ದಾರೆ.
ಮಾಚ್ಚಯ್ಯ (ಗಣಪತಿಯವರ ಸಹೋದರ)
ಮೊದಲ ಜಯ: ಏಪ್ರಿಲ್ 10ರ ಒಳಗಡೆ ನಮಗೆ ಆಕ್ಷೇಪಣೆ ಸಲ್ಲಿಸಲು ಆದೇಶ ಸಿಕ್ಕಿದೆ. ವಿಶೇಷ ಏನೆಂದರೆ ಪ್ರಕರಣದ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಇಂದು ಸಿಐಡಿಯವರು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‍ಎಸ್‍ಎಲ್) ವರದಿಯನ್ನು ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಸುಮ್ಮನಿದ್ದ ಇವರು ಇಂದು ವರದಿ ಸಲ್ಲಿಸಿದ್ದನ್ನು ನೋಡುವಾಗ ನಮ್ಮ ಅನುಮಾನಗಳು ಮತ್ತಷ್ಟು ಹೆಚ್ಚಾಗಿದ್ದು, ತನಿಖೆ ಹೇಗೆ ನಡೆದಿದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಕರಣದಲ್ಲಿ ನಮಗೆ ಈಗ ಮೊದಲ ಜಯ ಸಿಕ್ಕಿದೆ ಎಂದು ಗಣಪತಿ ಸಹೋದರ ಮಾಚಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏನಿದು ಪ್ರಕರಣ?:
2016 ಜುಲೈ 7 ರಂದು ಡಿವೈಎಸ್ಪಿ ಗಣಪತಿ ಮಡಿಕೇರಿಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬಿ ರಿಪೋರ್ಟ್ ಸಲ್ಲಿಸಿ ಕ್ಲೀನ್ ಚೀಟ್ ನೀಡಿತ್ತು.
ಸಬೀತಾ (ಗಣಪತಿಯವರ ಸಹೋದರಿ)
ಸುಪ್ರೀಂನಲ್ಲಿದೆ ಮತ್ತೊಂದು ಅರ್ಜಿ: ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲಿನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆಗಣಪತಿ ತಂದೆ ಕುಶಾಲಪ್ಪ ಈ ಹಿಂದೆ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು, ನ್ಯಾ. ಆನಂದಕುನಾರ್ ಗೊಯೇಲ್ ಮತ್ತು ಉದಯ್ ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ತಕರಾರು ಅರ್ಜಿ ಸಲ್ಲಿಸಿರಲಿಲ್ಲ: ಸಚಿವ ಜಾರ್ಜ್ ಅವರಿಗೆ ಸಿಐಡಿ ನೀಡಿರುವ ಬಿ ರಿಪೋರ್ಟ್ ಅನ್ನು ಗಣಪತಿ ಅವರ ಪುತ್ರ ನೇಹಾಲ್ ಒಪ್ಪಿಕೊಂಡಿದ್ದರು. ಸಿಐಡಿ ಸಲ್ಲಿಸಿದ ಬಿ ರಿಪೋರ್ಟ್ ಗೆ ಗಣಪತಿ ಪುತ್ರ ಯಾವುದೇ ತಕರಾರು ಅರ್ಜಿ ಸಲ್ಲಿಸಿರಲಿಲ್ಲ.
ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಂದು ಆಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದಿದ್ದ ಪ್ರಕರಣದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಅಧಿಕಾರಿಗಳು ಕ್ಲೀನ್‍ಚಿಟ್ ನೀಡಿದ್ದಾರೆ.
ನವೆಂಬರ್ 10 2016 ರಂದು ರಾಯಚೂರಿನಲ್ಲಿ ಸರ್ಕಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಫೋಟೋ ನೋಡಿ ಸುದ್ದಿಯಾಗಿದ್ರು. ಬಳಿಕ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು. ಈಗ ಸಿಐಡಿ ವರದಿ ಕೊಟ್ಟಿದ್ದು ಸಚಿವರಿಗೆ ಕ್ಲೀನ್‍ಚಿಟ್ ನೀಡಿದೆ. ಸಚಿವರ ಸ್ನೇಹಿತ ಅರಸು ಅನ್ನೋರು ಈ ಫೋಟೋ ಕಳಿಸಿದ್ದು, ಕೇವಲ ಸಚಿವರಿಗೆ ಮಾತ್ರವಲ್ಲದೇ ಇತರೆ ವಾಟ್ಸಪ್‍ನ 8 ರಿಂದ 10 ಗ್ರೂಪ್‍ಗಳಿಗೆ ಫೋಟೋವನ್ನು ಕಳುಹಿಸಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವರು, ವಾಟ್ಸಪ್‍ಗೆ ಫೋಟೋ ಬಂದಿರೋದು ನಿಜ. ಆದ್ರೆ ಡೌನ್‍ಲೋಡ್ ಮಾಡಿಲ್ಲ ಅಂತ ಹೇಳಿದ್ದರು. ಮಾತ್ರವಲ್ಲದೇ ತಾವಾಗಿಯೇ ಸರ್ಚ್ ಮಾಡಿ ಅಶ್ಲೀಲ ಫೋಟೋವನ್ನೂ ನೋಡಿಲ್ಲ. ಇದ್ರಲ್ಲಿ ಮಂತ್ರಿಗಳ ತಪ್ಪಿಲ್ಲ. ಅಪರಾಧನೂ ಅಲ್ಲ ಅಂತ ತನಿಖಾಧಿಕಾರಿಗಳು 30 ಪುಟಗಳ ವರದಿಯನ್ನು ಸಿಐಡಿ ಡಿಜಿಪಿ ಕಿಶೋರ್ ಚಂದ್ರರಿಗೆ ಕೊಟ್ಟಿದ್ದರು.
ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿಗಳಿಗೆ ಸಿಹಿ ಸುದ್ದಿ. 362 ಮಂದಿ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶವನ್ನು ಪ್ರಶ್ನಿಸದಿರಲು ಸರ್ಕಾರ ನಿರ್ಧಾರಿಸುವ ಮೂಲಕ ನಾಲ್ಕು ವರ್ಷಗಳ ಕಾನೂನು ಸಮರ ಅಂತ್ಯವಾಗಿದೆ.
ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕಾನೂನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಟಿಬಿ ಜಯಚಂದ್ರ ಸದ್ದಿಗೋಷ್ಠಿ ನಡೆಸಿ, ಕೆಎಟಿ ಆದೇಶದ ಬಗ್ಗೆ ಕಾನೂನು ತಜ್ಞರ ಜತೆ ಮಾತುಕತೆ ನಡೆಸಿದ್ದೇವೆ. ಆಡಳಿತದ ದೃಷ್ಟಿಯಿಂದ ರಾಜ್ಯ ಸರ್ಕಾರ ಆದೇಶವನ್ನು ಪ್ರಶ್ನಿಸದೇ ಇರಲು ನಿರ್ಧರಿಸಿದೆ. ಹೀಗಾಗಿ ಎಲ್ಲಾ 362 ಗೆಜೆಟೆಡ್ ಪ್ರೊಬೇಷನರಿ ಅಭ್ಯರ್ಥಿಗಳ ನೇಮಕಾತಿಗೆ ಒಪ್ಪಿಗೆ ನೀಡಿದ್ದೇವೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ಎಲ್ಲಾ ದೃಷ್ಟಿಕೋನಗಳಿಂದ ನೋಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದು ಎಚ್‍ಡಿ ಕುಮಾರಸ್ವಾಮಿ ಗೆಲುವು ಅಲ್ಲ, ಇದು ಯಾರ ಗೆಲುವು ಅಲ್ಲ ಎಂದು ಹೇಳಿದರು.
ಸಿಐಡಿ ತನಿಖೆಯಲ್ಲಿ ಯಾವ ಆರೋಪಗಳು ಸಾಬೀತಾಗಿರಲಿಲ್ಲ. ಕೇವಲ ಫೋನ್ ಕಾಲ್ ಮಾಡಿರುವುದು ಸಾಕ್ಷಿ ಆಗುವುದಿಲ್ಲ. ಹೀಗಾಗಿ ಕೆಎಟಿ ಆದೇಶವನ್ನು ಪಾಲಿಸುತ್ತಿದ್ದೇವೆ ಅಷ್ಟೇ ಅಲ್ಲದೇ ಮತ್ತೆ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಎಲ್ಲರಿಗೂ ಸ್ವಾಂತಂತ್ರ್ಯ ಇದೆ ಎಂದು ಹೇಳಿದರು.
ಏನಿದು ಪ್ರಕರಣ?
2011ರಲ್ಲಿ ಕೆಪಿಎಸ್‍ಸಿ ನೇಮಕಾತಿಯಲ್ಲಿ ಅಕ್ರಮ ನಡೆದ ಕಾರಣ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಆದೇಶದ ವಿರುದ್ಧ ಕೆಲ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು.
ಚಿಕ್ಕಮಗಳೂರು: ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಗೌಡ ಕಿಡ್ನಾಪ್ ಪ್ರಕರಣ ಸಂಬಂಧ ಪ್ರವೀಣ್ ಖಾಂಡ್ಯ ಸಿಗೋವರ್ಗೂ ಅವನೇ ಪ್ರಕರಣದ ಕಿಂಗ್‍ಪಿನ್ ಎಂದು ಹೇಳಲಾಗ್ತಿತ್ತು. ಆದ್ರೆ, ಸಿಐಡಿ ಅಧಿಕಾರಿಗಳ ಮುಂದೆ ಪ್ರವೀಣ್ ಖಾಂಡ್ಯ ಬಾಯ್ಬಿಟ್ಟಿರೋ ಸತ್ಯ ನೋಡಿದ್ರೆ ಪ್ರಕರಣದ ದಿಕ್ಕೇ ಬದಲಾಗುವಂತಿದೆ.
ಜುಲೈ 5ರಂದು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಇಲ್ಲೀತನಕ ಪ್ರಕರಣದ ಕಿಂಗ್‍ಪಿನ್ ಪ್ರವೀಣ್ ಖಾಂಡ್ಯನ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಪೊಲೀಸರು ಕೂಡ ನ್ಯಾಯ ಕೊಡಿಸಬೇಕೆಂದು ಖಾಂಡ್ಯನಿಗಾಗಿ ಊರೂರು ಅಲೆದ್ರು. ಆದ್ರೀಗ, ಪ್ರವೀಣ್ ಖಾಂಡ್ಯ ಸಿಐಡಿ ಮುಂದೆ ಉಲ್ಟಾ ಹೊಡೆದಿದ್ದಾನೆ. ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಇನ್ನು ತೇಜಸ್‍ಗೌಡ ಅಪಹರಣ ಪ್ರಕರಣದಲ್ಲೂ ನನ್ನ ಹಾಗೂ ಕಲ್ಲಪ್ಪನ ಪಾತ್ರವಿಲ್ಲ. ಅಸಲಿಗೆ ತೇಜಸ್‍ಗೌಡ ಕಿಡ್ನಾಪ್ ಆಗಿರಲಿಲ್ಲ. ಇದೆಲ್ಲಾ ಕಟ್ಟು ಕಥೆ ಎಂದು ಹೇಳಿದ್ದಾನೆ.
ಕಲ್ಮನೆ ನಟರಾಜ್‍ಗೆ ತೇಜಸ್‍ಗೌಡ ಕೊಡ್ಬೇಕಿದ್ದ ಹಣವನ್ನ ಕೊಡಿಸೋಕೆ ಮಧ್ಯಸ್ಥಿಕೆ ವಹಿಸಿದ್ದು ಸತ್ಯ. ಉಳಿದ ಯಾವ ಘಟನೆಯಲ್ಲೂ ನನ್ನ ಹಾಗೂ ಕಲ್ಲಪ್ಪರ ಪಾತ್ರ ಇರಲಿಲ್ಲ ಎಂದು ಹೇಳಿದ್ದಾನೆ ಖಾಂಡ್ಯ.
ಒಟ್ಟಾರೆ ಪ್ರಕರಣದಲ್ಲಿ ಕೇಳಿ ಬಂದ ಎಲ್ಲರನ್ನೂ ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದ್ರೀಗ, ಅಂತಿಮವಾಗಿ ಅವ್ರ ವರದಿ ಏನಿರುತ್ತೆ ಅನ್ನೋದು ಮತ್ತಷ್ಟು ಕುತೂಹಲ ಮೂಡಿಸಿದೆ.