Tag: ಸಿಎಎ

  • ಸಿಎಎ ವಿರೋಧಿ ಸಭೆ ಉದ್ಘಾಟನೆಗೆ ಪದ್ಮಶ್ರೀ ಹಾಜಬ್ಬರಿಗೆ ಆಹ್ವಾನ

    ಸಿಎಎ ವಿರೋಧಿ ಸಭೆ ಉದ್ಘಾಟನೆಗೆ ಪದ್ಮಶ್ರೀ ಹಾಜಬ್ಬರಿಗೆ ಆಹ್ವಾನ

    – ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

    ಉಡುಪಿ: ಕರ್ನಾಟಕ ಮುಸ್ಲಿಂ ಜಮಾತ್ ಗುರುವಾರ ನಗರದಲ್ಲಿ ಆಯೋಜಿಸಿರುವ ಪೌರತ್ವ ಕಾಯ್ದೆ ವಿರುದ್ಧದ ಪ್ರಜಾ ಭಾರತ ಸಭೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹಾಜಬ್ಬ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

    ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅನ್ಸಾರ್ ಈ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಹರೇಕಳ ಹಾಜಬ್ಬ ಜಾತ್ಯಾತೀತವಾಗಿ ರಾಜಕೀಯವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿಯಾಗಿದ್ದಾರೆ. ಅವರನ್ನು ರಾಜಕೀಯ ಹೋರಾಟಗಳಿಗೆ ಬಳಸಿಕೊಳ್ಳಬಾರದು ಎಂದು ಅನ್ಸಾರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಕಾರ್ಯಕ್ರಮದ ಉದ್ಘಾಟನೆಗೆ ಶಿಕ್ಷಣ ಸಂತ ಹರೇಕಳ ಹಾಜಬ್ಬ ಅವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದ್ದಕ್ಕೆ ವಿವಾದ ಹುಟ್ಟಿಕೊಂಡಿದೆ. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

    ಕಾರ್ಯಕ್ರಮದ ಬಗ್ಗೆ ಹಾಜಬ್ಬರಿಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಜಾ ಭಾರತ ಕಾರ್ಯಕ್ರಮ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ, ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವ ಕಾರ್ಯಕ್ರಮ ಆಗಿದೆ. ಇದರಲ್ಲಿ ಹರೇಕಳ ಹಾಜಬ್ಬ ಅವರು ಭಾಗವಹಿಸಿದರೆ ಅವರ ವಿರುದ್ಧ ಪೌರತ್ವ ಕಾಯ್ದೆ ಪರವಾಗಿರುವ ಜನರು ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಅನ್ಸಾರ್ ಹೇಳಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ನಡೆದಾಡುವ ಅರಣ್ಯದ ವಿಶ್ವಕೋಶ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ

    ಜಾತ್ಯಾತೀತ- ಧರ್ಮಾತೀತ ಹಾಜಬ್ಬರು ನಾಳೆಯಿಂದ ಹಿಂದೂ ಧರ್ಮದ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಈವರೆಗೆ ಯಾವುದೇ ವಿವಾದಗಳಿಗೆ ಸಿಕ್ಕಿಕೊಳ್ಳದ ಹರೇಕಳ ಹಾಜಬ್ಬರನ್ನು ಇದೀಗ ಯಾವುದೋ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗುತ್ತದೆ. ಹರೇಕಳ ಹಾಜಬ್ಬ ಅವರು ಶಿಕ್ಷಣರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಅವರ ಮೂಲಕವೇ ಸಿಎಎ ವಿರುದ್ಧ ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಕರ್ನಾಟಕ ಮುಸ್ಲಿಂ ಜಮಾತ್ ಮುಂದಾಗಿದೆ ಎಂದು ಅನ್ಸಾರ್ ಆರೋಪಿಸಿದ್ದಾರೆ. ಅಲ್ಲದೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

  • ಶಹೀನ್ ಬಾಗ್ ಸಿಎಎ ಪ್ರತಿಭಟನೆಯಲ್ಲಿ ಇರ್ಫಾನ್ ಪಠಾಣ್?- ವೈರಲ್ ವಿಡಿಯೋ ಹಿಂದಿನ ರಹಸ್ಯ ರಿವೀಲ್

    ಶಹೀನ್ ಬಾಗ್ ಸಿಎಎ ಪ್ರತಿಭಟನೆಯಲ್ಲಿ ಇರ್ಫಾನ್ ಪಠಾಣ್?- ವೈರಲ್ ವಿಡಿಯೋ ಹಿಂದಿನ ರಹಸ್ಯ ರಿವೀಲ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ದೆಹಲಿಯ ಶಹೀನ್ ಬಾಗ್‍ನಲ್ಲಿ ನಡೆದ ಸಿಎಎ ಹಾಗೂ ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂಬ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಹಿಂದಿನ ಅಸಲಿ ಸತ್ಯಾಂಶವೇ ಬೇರೆಯಾಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ,”ಸಿಎಎ, ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಗೆ ಮತ್ತೊಂದು ಸಿಂಹ ಎಂಟ್ರಿಯಾಗಿದೆ. ಆದರ ಹೆಸರು ಇರ್ಫಾನ್ ಪಠಾಣ್” ಎಂಬ ಮಾಹಿತಿ ಇರುವುದನ್ನು ಕಾಣಬಹುದಾಗಿದೆ. ಇರ್ಫಾನ್ ತೆರೆದ ವಾಹನದಲ್ಲಿ ಅಭಿಮಾನಿಗಳತ್ತ ಕೈಬೀಸುತ್ತಾ ಘಟನಾ ಸ್ಥಳಕ್ಕೆ ಆಗಮಿಸುತ್ತಾರೆ. ಕೇವಲ 17 ಸೆಕೆಂಡ್ ಇರುವ ಈ ವಿಡಿಯೋವನ್ನು ‘ಲ್ಯಾಬ್ ಅಜಾದ್ ಹೈ ತೇರೆ’ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಜ.24ರಂದು ಪೋಸ್ಟ್ ಮಾಡಲಾಗಿದೆ. ಅಲ್ಲದೇ ವಿಡಿಯೋದಲ್ಲಿ ಲೊಕೇಶನ್ ಟ್ಯಾಗ್ ಮಾಡಿ ಶಹೀನ್ ಬಾಗ್ ಎಂದು ನೀಡಿದ್ದಾರೆ.

    ಇದುವರೆಗೂ ಈ ವಿಡಿಯೋ 80 ಸಾವಿರ ವ್ಯೂ, 300 ಶೇರ್, 666 ಲೈಕ್ ಪಡೆದುಕೊಂಡಿದೆ. ಆದರೆ ವಿಡಿಯೋದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಮದನ್ ಮಿಶ್ರಾರನ್ನು ಕಾಣಬಹುದಾಗಿದೆ. ಈ ಕುರಿತು ಇರ್ಫಾನ್ ಫಠಾಣ್ ಅವರ ಫೇಸ್‍ಬುಕ್, ಇನ್‍ಸ್ಟಾ, ಟಿಕ್‍ಟಾಕ್ ಅಧಿಕೃತ ಖಾತೆ ಪರಿಶೀಲನೆ ನಡೆಸಿದರೆ ಜನವರಿ 14ರಂದು ಪಠಾಣ್ ಈ ವಿಡಿಯೋ ಶೇರ್ ಮಾಡಿರುವುದು ತಿಳಿದು ಬರುತ್ತದೆ.

    ಜ.14 ರಂದು ಮದನ್ ಮಿಶ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇರ್ಫಾನ್‍ರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇರ್ಫಾನ್ ಪಠಾಣ್ ಪೋಸ್ಟ್ ಮಾಡಿದ್ದ ವಿಡಿಯೋ ಹಾಗೂ ಮದಾನ್ ಅವರ ಟ್ವೀಟ್ ಪ್ರಕಾರ ಜನವರಿ 14 ರಂದು ಪಶ್ಚಿಮ ಬಂಗಾಳದ ಕಮರ್ಹಟಿ ಪ್ರದೇಶದಲ್ಲಿ ನಡೆದ ಪ್ರೀಮಿಯರ್ ನಾಕೌಟ್ ಕ್ರಿಕೆಟ್ ಟೂರ್ನಿಗೆ ಇರ್ಫಾನ್ ಆಗಮಿಸಿದ್ದರು. ಆ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

  • ನುಸುಳುಕೋರರು ಪಾಕಿಸ್ತಾನ, ಬಾಂಗ್ಲಾಕ್ಕೆ ತೊಲಗಿ- ಕಲ್ಲಡ್ಕ ಪ್ರಭಾಕರ ಭಟ್

    ನುಸುಳುಕೋರರು ಪಾಕಿಸ್ತಾನ, ಬಾಂಗ್ಲಾಕ್ಕೆ ತೊಲಗಿ- ಕಲ್ಲಡ್ಕ ಪ್ರಭಾಕರ ಭಟ್

    – ಭಾರತೀಯರಿಗೆ ಸಿಎಎಯಿಂದ ಸಮಸ್ಯೆಯಿಲ್ಲ

    ಉಡುಪಿ: ಪೌರತ್ವ ಕಾನೂನು ಬಂದಿರುವುದು ಪಾಕಿಸ್ತಾನದ ನುಸುಳುಕೋರರ ವಿರುದ್ಧ. ಭಾರತೀಯ ಮುಸಲ್ಮಾನರಿಗೆ ಪೌರತ್ವ ಕಾನೂನಿನಿಂದ ಸಮಸ್ಯೆಯಾಗಲ್ಲ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

    ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆ ಕುರಿತು ಸಮರ್ಥನಾ ಸಮಾವೇಶದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತಾಡಿದ ಅವರು, ನುಸುಳುಕೋರರಾಗಿ ಬಾಂಗ್ಲಾ, ಅಫ್ಘಾನ್, ಪಾಕ್‍ನಿಂದ ಕೆಲ ಪಾಪಿ ಮುಸಲ್ಮಾನರು ಬಂದಿದ್ದಾರೆ. ದೇಶದ ಅರಾಜಕತೆಗೆ ಅವರೇ ಕಾರಣವಾಗಿದ್ದಾರೆ. ನಾವು ಈಗಾಗಲೇ ದೇಶದ್ರೋಹಿಗಳಿಗೆ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಅದನ್ನು ಹಿಂಪಡೆದು ನಮ್ಮಲ್ಲಿ ಹುಟ್ಟಿ, ಸಂಕಷ್ಟದಲ್ಲಿದ್ದವರಿಗೆ ನಾವು ಪೌರತ್ವ ಕೊಡುತ್ತೇವೆ ಹೊರತು, ಇಲ್ಲಿನವರ ಪೌರತ್ವ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್ ನಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ಇಲ್ಲ. ದಾಖಲೆ ಇಲ್ಲದವರು ಪಾಕ್‍ನಲ್ಲಿ ಜಮೀನು ಖರೀದಿಸಿ ಎಂದು ಸಲಹೆ ನೀಡಿದರು. ಎಲ್ಲರ ಜೊತೆ ಎಲ್ಲರಂತೆ ಬದುಕುವುದಾದರೆ ಬದುಕಿ. ಆಗದಿದ್ದರೆ ನಿಮ್ಮ ನೆಲ ನಿಮಗಿದೆ. ದಾಖಲೆ ಕೇಳುವಾಗ ಹೆಸರು ಹೇಳುವುದಿಲ್ವಾ? ಅಪ್ಪ ಯಾರೆಂದು ನಿಮಗೆ ಗೊತ್ತಿಲ್ವಾ? ಭಾರತ ಅಂದ್ರೆ ಛತ್ರ ಅಲ್ಲ. ಭಾರತ ಪವಿತ್ರ ನೆಲ ಇಲ್ಲಿ ನೆಲೆಸಲು ಪೌರತ್ವ ಬೇಕು ಎಂದು ಗುಡುಗಿದರು.

    ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಭಯೋತ್ಪಾದಕರು ಪ್ರಾಣ ಕಳೆದುಕೊಂಡರು. ಕಮಿಷನರ್ ಡಾ. ಹರ್ಷಗೆ ಅಭಿನಂದನೆ. ಪರಿಸ್ಥಿತಿ ಕೈಮೀರಿತ್ತು. ಗೋಲಿಬಾರ್ ಮಾಡದಿದ್ದರೆ ದೇಶದಲ್ಲಿ ಮುಸ್ಲಿಂ ಅಟ್ಟಹಾಸ ನಡೆಯುತ್ತಿತ್ತು. ಪೌರತ್ವ ಕಾಯ್ದೆಗೆ ಎಲ್ಲರೂ ಒಳಗಾಗಬೇಕು. ದಾಖಲೆ ಇಲ್ಲದವರು ಹೊರಗೆ ನಡೆಯಿರಿ. ಪಾಕಿಸ್ತಾನ, ಬಾಂಗ್ಲಾ ಮತ್ತಿತರ ದೇಶದಲ್ಲಿ ಐದು ಸೈಟ್ ತೆಗೆದುಕೊಳ್ಳಿ ಎಂದರು.

    ಭಾರತ ಮೃತ್ಯುಂಜಯ ದೇಶ. ಮೋದಿ, ಅಮಿತ್ ಶಾ ರಂತಹ ಜನ ಹುಟ್ಟಿ ಬರುತ್ತಲೇ ಇರುತ್ತಾರೆ. ಭಾರತ ಸೂಪರ್ ಪವರ್ ಆಗೋದು ಬೇಡ. ಭಾರತ ವಿಶ್ವ ಗುರು ಆದರೆ ಸಾಕು. ನಮ್ಮ ಸಂಸ್ಕೃತಿ, ವಿಚಾರ, ಆಚರಣೆಗಳ ಪಾಲನೆಯಿಂದ ತನ್ನಿಂದ ತಾನೇ ಭಾರತ ವಿಶ್ವಗುರು ಆಗುತ್ತದೆ ಎಂದರು. ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನ, ಪಾರಸಿ, ಸಿಖ್ ಹೀಗೆ ದೇಶದ ಪ್ರತಿಯೊಬ್ಬ ನೋಂದಣಿ ಮಾಡಲೇಬೇಕು. ದೇಶದ ನುಸುಳುಕೋರರು ಭಾರತದೊಳಗೆ ಉಳಿಯಲು ಸಾಧ್ಯವಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

  • ‘ಹೌದು ಹುಲಿಯಾ’ ಎಂದು ಸಿದ್ದರಾಮಯ್ಯರನ್ನ ಸ್ವಾಗತಿಸಿದ ಕಾಫಿನಾಡಿಗರು

    ‘ಹೌದು ಹುಲಿಯಾ’ ಎಂದು ಸಿದ್ದರಾಮಯ್ಯರನ್ನ ಸ್ವಾಗತಿಸಿದ ಕಾಫಿನಾಡಿಗರು

    ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ವೇದಿಕೆ ಮೇಲೆ ಕೂರಿಸಿ, ಸ್ವಾಗತ ಕೋರುವ ಮುನ್ನ ‘ಹೌದು ಹುಲಿಯಾ’ ಎನ್ನುವ ಮೂಲಕ ಚಿಕ್ಕಮಗಳೂರಿಗರು ಸ್ವಾಗತ ಕೋರಿದ್ದಾರೆ.

    ಗುರುವಾರ ಜಿಲ್ಲೆಯ ತರೀಕೆರೆ ತಾಲೂಕಿನ ಚಿಕ್ಕೆರೆ ಸಮೀಪದ ಜಾಮೀಯಾ ಮಸೀದಿಯಲ್ಲಿ ನಡೆದ ಹಜ್ರತ್ ಸೈಯದ್ ಸಲಾಹುದ್ದಿನ್ ಷಾ ಖಾದ್ರಿ ಸಂಘಟನೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ‘ಹೌದು ಹುಲಿಯಾ’ ಎಂದು ಫೋಷಣೆ ಕೂಗುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಸಿದ್ದರಾಮಯ್ಯ ಕೂಡ ನಸು ನಕ್ಕಿದರು.

    ಮಸೀದಿ ಆವರಣದಲ್ಲಿ ನಡೆದ ಧಾರ್ಮಿಕ ಸೌಹಾರ್ದ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಅವರು, ದೇಶ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ದೇಶವನ್ನ ಪ್ರೀತಿಸುವ ಪ್ರತಿಯೊಬ್ಬರು ಇವತ್ತು ದೇಶ ಹಾಗೂ ಸಂವಿಧಾನ ಉಳಿವಿಗೆ ಮುಂದಾಗಬೇಕು. ಅದಕ್ಕೆ ಜಾತಿ-ಧರ್ಮ ಅಡ್ಡ ಬರಬಾರದು ಎಂದರು.

    ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನವನ್ನ ಹತ್ತಿಕ್ಕುವ ಕೆಲಸ ಆಗುತ್ತಿದೆ. ಇತ್ತೀಚೆಗೆ ಸಿಎಎ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎಂಪಿಆರ್ ಈ ಮೂರು ಕಾಯ್ದೆಗಳು ಬಿಡಿಬಿಡಿಯಾದಂತ ಕಾಯ್ದೆಗಳಲ್ಲ. ಒಂದಕ್ಕೊಂದು ಸಂಬಂಧ ಇರುವಂತಹ ಕಾಯ್ದೆಗಳು. ಒಂದು ಧರ್ಮದ ಜನರನ್ನ ಗುರಿಯಾಗಿಟ್ಟುಕೊಂಡು ಈ ಕಾನೂನನ್ನ ಜಾರಿ ಮಾಡುವ ಮೂಲಕ ಈ ದೇಶದ ಮೂಲ ನಿವಾಸಿಗಳಿಗೂ ತೊಂದರೆಯಾಗ್ತಿದೆ ಎಂದು ಕಿಡಿಕಾರಿದರು.

    ಕಾರ್ಯಕ್ರಮದಲ್ಲಿ ತರೀಕೆರೆ ಮಾಜಿ ಶಾಸಕರಾದ ಜಿ.ಎಚ್ ಶ್ರೀನಿವಾಸ್, ಎಸ್.ಎಂ ನಾಗರಾಜು, ಟಿ.ಎಚ್ ಶಿವಶಂಕರಪ್ಪ, ಎಐಸಿಸಿ ಕಾರ್ಯದರ್ಶಿ ಸಂದೀಪ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.

  • ಮುಸ್ಲಿಮರು ಭಾರತ ಮಾತೆಯ ಮಕ್ಕಳು: ರಮೇಶ್ ಕುಮಾರ್

    ಮುಸ್ಲಿಮರು ಭಾರತ ಮಾತೆಯ ಮಕ್ಕಳು: ರಮೇಶ್ ಕುಮಾರ್

    ಉಡುಪಿ: ನಗರದಲ್ಲಿ ಪೌರತ್ವ ಕಿಚ್ಚು ಸದ್ದುಮಾಡಿದೆ. ಸಹಬಾಳ್ವೆ ಸಂಘಟನೆ ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ ವಿರುದ್ಧ ಸಮಾವೇಶ ನಡೆಯಿತು. ಪ್ರಗತಿಪರ, ದಲಿತ ಮುಸಲ್ಮಾನ ಮತ್ತು ಕಾಂಗ್ರೆಸ್ ಜಂಟಿಯಾಗಿ ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಸಮಾವೇಶ ಆಯೋಜಿಸಿತು.

    ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಯ್ದೆ ತಂದ ಮೋದಿ ಸರ್ಕಾರಕ್ಕೆ ವ್ಯಂಗ್ಯವಾಗಿ ಧನ್ಯವಾದ ಹೇಳಿದರು. ಸ್ವಾತಂತ್ರ್ಯ ಹೋರಾಟ ನೋಡಿಲ್ಲ, ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶವಾಗಿದೆ. ಕೇಸರಿ ಬಟ್ಟೆ ಧ್ವಜ ನೋಡಿ ಸಾಕಾಗಿತ್ತು ಎಂದು ಕುಟುಕಿದರು.

    ಮುಸ್ಲಿಮರನ್ನು ಅನುಮಾನದಿಂದ ನೋಡಬೇಡಿ, ಭಾರತ ಮಾತೆ ಕಣ್ಣೀರು ಹಾಕುತ್ತಾಳೆ. ಮುಸ್ಲಿಮರು ಭಾರತ ಮಾತೆಯ ಮಕ್ಕಳು ಎಂದು ಭಾವನಾತ್ಮಕವಾಗಿ ಮಾತನಾಡಿದರು.

    ಬಿಜೆಪಿಯವರಿಗೆ ಭಾರತದ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿಗರಿಗೆ ಬೇಕಾಗಿಯೂ ಇಲ್ಲ, ನಾಥುರಾಮ ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವು ಬಿಡಲ್ಲ ಎಂದು ಗುಡುಗಿದರು.

    ಅಮೆರಿಕದಲ್ಲಿ ಜನಿಸಿದ್ರೆ ಪೌರತ್ವ ಸಿಗುತ್ತದೆ. ನಮ್ಮ ದೇಶದ ಜನಕ್ಕೆ ಪೌರತ್ವ ಗಗನ ಕುಸುಮವಾಗುತ್ತಿದೆ. 1955ರಲ್ಲಿ ಜಾತಿ ಧರ್ಮದ ವಿಚಾರದಲ್ಲಿ ಪೌರತ್ವ ಕಾಯ್ದೆ ಮಾಡಿಲ್ಲ, ನಿರಾಶ್ರಿತರು ನುಸುಳುಕೋರರು ಎಂಬ ಎರಡು ವಿಧ ಇದೆ. ಪೌರತ್ವ ಕಾಯ್ದೆಯನ್ನು ಧರ್ಮಾಧಾರಿತ ಮಾಡಿದ್ದಾರೆ. ಮೋದಿ ಸರ್ಕಾರ ಸಂವಿಧಾನ ವಿರೋಧಿ ಎಂದು ಟೀಕಿಸಿದರು.

    ಸ್ವಾತಂತ್ರ್ಯ ನಂತರ ಸಂವಿಧಾನ ಮತ್ತು ಜನರ ನಡುವೆ ತಿಕ್ಕಾಟ ಶುರುವಾಗಿದೆ. ಇದೇ ತರ ಮುಂದುವರಿದರೆ ದೇಶದ ಜಾತಕವನ್ನು ಜನರೇ ಬದಲು ಮಾಡುತ್ತಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ಪ್ರಥಮ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಪೊಲೀಸ್ ಪರ್ಮಿಷನ್ ಇರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

  • ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ – ಓರ್ವನಿಗೆ ಗಾಯ

    ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ – ಓರ್ವನಿಗೆ ಗಾಯ

    ನವದೆಹಲಿ: ಸಿಎಎ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದ ವೇಳೆ ಅಪರಚಿತ ವ್ಯಕ್ತಿಯೋರ್ವ ಗುಂಡಿನ ದಾಳಿ ಮಾಡಿದ್ದು, ಪ್ರತಿಭಟನಾ ನಿರತ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ.

    ಇಂದು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪೌರತ್ವ ಕಾಯ್ದೆಯನ್ನು ವಿರೋಧಿಸಿ ಜಾಮಿಯಾ ಯುನಿವರ್ಸಿಟಿಯಿಂದ ರಾಜ್‍ಘಾಟ್‍ನಲ್ಲಿ ಇರುವ ಮಹಾತ್ಮ ಗಾಂಧಿ ಸ್ಮಾರಕದವರೆಗೂ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಅಲ್ಲಿ ಕಾಣಿಸಿಕೊಂಡ ಅಪರಿಚಿತ ವ್ಯಕ್ತಿಯೋರ್ವ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ.

    ಈ ಘಟನೆಯಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿ ಶಾದಾಬ್ ಅಲಂಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶಾದಾಬ್ ಅಲಂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನ ಸಮುಹ ಸಂವಹನ ವಿಭಾಗದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ಗುಂಡಿನ ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ‘ನಿಮಗೆ ಅಜಾದಿ ಬೇಕೇ’ ನಾನು ಕೊಡುತ್ತೇನೆ ಎಂದು ಹೇಳಿ ಗುಂಡಿನ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ಗುಂಡಿನ ದಾಳಿ ಮಾಡುವಾಗ ಆ ಅಪರಿಚಿತ ವ್ಯಕ್ತಿ “ದೆಹಲಿ ಪೊಲೀಸ್ ಜಿಂದಾಬಾದ್ ಜಾಮಿಯಾ ವಿವಿ ಮುರ್ದಾಬಾದ್” ಎಂದು ಘೋಷಣೆ ಕೂಗುತ್ತಿದ್ದ. ಈಗ ಪೊಲೀಸರು ಆತನನ್ನು ಬಂಧಿಸಿದ್ದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

  • ಕೃಷ್ಣನ ಊರಿನಲ್ಲಿ ಇಂದು ‘ರಾವಣ್’ನ ಆರ್ಭಟ

    ಕೃಷ್ಣನ ಊರಿನಲ್ಲಿ ಇಂದು ‘ರಾವಣ್’ನ ಆರ್ಭಟ

    ಉಡುಪಿ: ಕರಾವಳಿಯಲ್ಲಿ ಪೌರತ್ವದ ಕಿಚ್ಚು ಆರುವ ಲಕ್ಷಣಗಳೇ ಕಾಣುತ್ತಿಲ್ಲ. ಎನ್ಆರ್​ಸಿ, ಸಿಎಎ ವಿರುದ್ಧ ಮತ್ತು ಪರ ಪ್ರತಿಭಟನಾ ಸಭೆಗಳು ಖಾಯಾಂ ಆಗಿವೆ. ಈ ನಡುವೆ ಉಡುಪಿಯಲ್ಲಿ ಎನ್ಆರ್​ಸಿ, ಸಿಎಎ ಹೋರಾಟಕ್ಕೆ ಇಂದು ಭೀಮ್ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಅಲಿಯಾಸ್ ರಾವಣ್ ಎಂಟ್ರಿ ಕೊಡುತ್ತಿದ್ದಾರೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಹುಚರ್ಚಿತ ಕಾಯ್ದೆ ಸಿಎಎ. ಕಾಯ್ದೆ ಜಾರಿಯಾದ ದಿನದಿಂದ ದೇಶಾದ್ಯಂತ ಪೌರತ್ವದ ಕಿಚ್ಚು ಹತ್ತಿಕೊಂಡಿದೆ. ಮುಸಲ್ಮಾನ ಸಂಘಟನೆಗಳು , ಪ್ರಗತಿಪರರು, ದಲಿತ ಸಮಿತಿಗಳ ಹಿಂದೆ ಕಾಂಗ್ರೆಸ್ ನಿಂತು ಪ್ರತಿಭಟಿಸುತ್ತಿದೆ. ರಾಜ್ಯದಲ್ಲಿ ಈ ಬಗ್ಗೆ ಅತಿ ಹೆಚ್ಚು ಪ್ರತಿಭಟನೆ ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದೀಗ ಮತ್ತೆ ಉಡುಪಿಯಲ್ಲಿ ಸಿಎಎ ವಿರುದ್ಧ ಇಂದು ಜನಾಕ್ರೋಶ ವ್ಯಕ್ತವಾಗಲಿದೆ. ಭೀಮ್ ಆರ್ಮಿ ಹೋರಾಟದ ನಾಯಕ ಚಂದ್ರಶೇಖರ್ ಆಜಾದ್ ಅಲಿಯಾಸ್ ರಾವಣ್ ಉಡುಪಿಗೆ ಬರುತ್ತಿದ್ದಾರೆ. ಉಡುಪಿ ನಗರದ ಕ್ರಿಶ್ಚನ್ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಮುಸ್ಲಿಂ ಒಕ್ಕೂಟ ಮುಖಂಡ ಯಾಸಿನ್ ಮಲ್ಪೆ ಮಾತನಾಡಿ, ದೇಶದ ಜನರ ಭಾವನೆಯನ್ನು ನುಚ್ಚುನೂರು ಮಾಡಿರುವ ಸಿಎಎ ನಮಗೆ ಬೇಡ ಎಂದು ಒತ್ತಾಯಿಸುವ ಸಮಾವೇಶ ಇದು. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನ ಪಕ್ಷ ಬೇಧ ಬದಿಗಿಟ್ಟು ಬರಲಿದ್ದಾರೆ ಎಂದರು.

    ಸಿಐಎ ಕಾನೂನನ್ನು ವಿರೋಧಿಸಿ ಸುಮಾರು ಇಪ್ಪತ್ತೈದು ಸಾವಿರ ಮಂದಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಸಹಬಾಳ್ವೆ ಸಂಘಟನೆ ಪ್ರತಿಭಟನಾ ಸಭೆಯ ಜವಾಬ್ದಾರಿ ಹೊತ್ತಿದ್ದು, ಸಮಾನ ಮನಸ್ಕ ಸಂಘಟನೆಗಳು ಕೈ ಜೋಡಿಸಿದೆ. ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡು ಎಸ್‍ಪಿ, ಎರಡು ಕೆಎಸ್‌ಆರ್‌ಪಿ, ನಾಲ್ಕು ಡಿಎಆರ್ ಸೇರಿದಂತೆ ಉಡುಪಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೆರವಣಿಗೆಗೆ ಪೊಲೀಸರು ಪರವಾನಗಿ ಕೊಟ್ಟಿಲ್ಲ.

    ಪಬ್ಲಿಕ್ ಟಿವಿ ಜೊತೆ ಎಎಸ್‍ಪಿ ಕುಮಾರ ಚಂದ್ರ ಮಾತನಾಡಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ. ಹೊರ ಜಿಲ್ಲೆಯ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುತ್ತೇವೆ. ಮೆರವಣಿಗೆ ಮಾಡಲು ಪರವಾನಗಿ ಕೊಟ್ಟಿಲ್ಲ ಎಂದು ತಿಳಿಸಿದರು.

    ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ವಿವಾದಾತ್ಮಕ ಭಾಷಣಕ್ಕೆ ಪ್ರಸಿದ್ಧಿ ಹೊಂದಿದವರು. ನೂರಾರು ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡು ಜೈಲಿಗೆ ಹೋದವರು. ಆಜಾದ್ ಮಾತು ಕೇಳಲು ಪ್ರತಿಭಟನಾಕಾರರು ಕಾತರರಾಗಿದ್ದರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಧಾನ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಸಮಾವೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಅವಕಾಶ ಕೊಟ್ಟಿಲ್ಲ ಎಂಬುದು ಬಹುಚರ್ಚೆಗೀಡಾಗಿತ್ತು. ಹೀಗಾಗಿ ಉಡುಪಿಯ ಸಮಾವೇಶಕ್ಕೆ ಮುಸ್ಲಿಂ ಮಹಿಳೆಯರನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಹಲವಾರು ವಿಚಾರಗಳಿಂದ ಉಡುಪಿಯ ಸಿಎಎ ವಿರುದ್ಧದ ಹೋರಾಟ ಕುತೂಹಲದ ಕೇಂದ್ರ ಬಿಂದುವಾಗಿದೆ.

  • ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

    ದೆಹಲಿ ಎಲೆಕ್ಷನ್ ಮತ್ತು ಶಹೀನ್ ಬಾಗ್ – ಯಾಕೆ ಸುದ್ದಿಯಾಗುತ್ತಿದೆ? ಯಾರು ಏನು ಹೇಳಿದ್ದಾರೆ?

    ದೇಶಾದ್ಯಂತ ಜೆಎನ್‍ಯು ಬಳಿಕ ಈಗ ಭಾರೀ ಚರ್ಚೆಯಲ್ಲಿರೋದು ಶಹೀನ್ ಬಾಗ್. ಪೌರತ್ವ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಜೆಎನ್‍ಯು ಅಂದ್ರೆ ಜವಹಾರಲಾಲ್ ನೆಹರು ವಿಶ್ವವಿದ್ಯಾಲಯ ಎಷ್ಟು ಸುದ್ದಿಯಾಗಿತ್ತೋ? ಅದರಷ್ಟೇ ಮಟ್ಟಿಗೆ ಈಗ ಸುದ್ದಿಯಾಗ್ತಿರೋದು ಶಹೀನ್ ಬಾಗ್. ಕಳೆದ ಎರಡು ತಿಂಗಳಿಂದ ಶಹೀನ್ ಬಾಗ್‍ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ನಡೀತಿವೆ. ಈ ಮೂಲಕ ಸಿಎಎ, ಎನ್​ಆರ್​ಸಿ ವಿರೋಧಿ ಹೋರಾಟದ ವೇದಿಕೆಯಾಗಿ ಮಾರ್ಪಟ್ಟಿದೆ. ಮಹಿಳೆಯರು ಸೇರಿದಂತೆ ಸಾವಿರಾರು ಜನ ಹೋರಾಟ ಮಾಡ್ತಿದ್ದಾರೆ.

    ಶಹೀನ್‍ಬಾಗ್ ಹೋರಾಟಗಾರರು ರೇಪಿಸ್ಟ್‌ಗಳು
    ಫೆಬ್ರವರಿ 8ರ ದೆಹಲಿ ವಿಧಾನಸಭೆ ಎಲೆಕ್ಷನ್‍ಗೆ ದಿನಗಣನೆ ಇರುವಾಗಲೇ ಶಹೀನ್ ಬಾಗ್ ಈಗ ರಾಜಕೀಯ ವಸ್ತುವಾಗಿದೆ. ಹೀಗಾಗಿ, ಬಿಜೆಪಿ ನಾಯಕರು ಈ ಶಹೀನ್ ಬಾಗ್ ಅನ್ನು ದೇಶದ್ರೋಹಿ, ಪ್ರಚೋದನಕಾರಿ ಹೇಳಿಕೆಗೆ ಅಡ್ಡೆ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ, ಶಹೀನ್ ಬಾಗ್‍ನ ಪ್ರತಿಭಟನಾಕಾರರನ್ನು ಅತ್ಯಾಚಾರಿಗಳು, ಕೊಲೆಗಡುಕರು. ಈ ಪ್ರತಿಭಟನಾಕಾರರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಸಹೋದರಿಯರು, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ಅಂತ ಪಶ್ಚಿಮ ದೆಹಲಿಯ ಬಿಜೆಪಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನಿಮಗೆ ಯೋಚನೆ ಮಾಡಲು ಸಕಾಲ. ಈಗಲೇ ಎಚ್ಚರಗೊಳ್ಳಬೇಕಿದೆ. ನೀವು ಎಚ್ಚರಗೊಂಡರೆ ಮಾತ್ರ ಪ್ರಧಾನಿ ಮತ್ತು ಗೃಹ ಸಚಿವರು ನಿಮ್ಮ ನೆರವಿಗೆ ಬರ್ತಾರೆ. ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ನೆರವಿಗೆ ಬರಲ್ಲ ಅಂತ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ಬಂದ ಒಂದೇ ಗಂಟೆಯಲ್ಲಿ ಶಬೀನ್ ಬಾಗ್ ಧ್ವಂಸ ಮಾಡ್ತೇವೆ ಅಂದಿದ್ದಾರೆ.

    ಆಪ್-ಬಿಜೆಪಿ ಕೋಮು ಸಂಘರ್ಷ
    ದೆಹಲಿಯ ಎಲೆಕ್ಷನ್‍ನ ರಾಜಕೀಯ ವಿಷಯವಾಗಿರೋ ಶಹೀನ್ ಬಾಗ್‍ಗೆ ಹೋರಾಟಗಾರರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕಾನೂನು ಸಚಿವರಾದ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು. ಇದಕ್ಕೆ ಸಿಎಂ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಶ್ ಸಿಸೋಡಿಯಾ ತಿರುಗೇಟು ಕೊಟ್ಟಿದ್ದರು. ಚುನಾವಣೆಯಲ್ಲಿ ಸೋಲಿನ ಸುಳಿವು ಅರಿತು ಈ ರೀತ್ಯಾಗಿ ಆಧಾರ ರಹಿತ ಆರೋಪಗಳನ್ನು ಮಾಡ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಚುನಾವಣೆಯ ಪ್ರಚಾರಕ್ಕೆ ಸರಕು ಇಲ್ಲ. ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಲಿದೆ ಅನ್ನೋದನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಹಾಗಾಗಿ, ಪ್ರತಿ ಚುನಾವಣೆಯ ಅಸ್ತ್ರ ಎಂಬಂತೆ ಪ್ರಚಾರದಲ್ಲಿ ಕೋಮುವಾದವನ್ನು ತುಂಬಲು ಆರಂಭಿಸಿದೆ. ಸಿಎಎ ವಿರೋಧಿಸುತ್ತಿರುವವರೆಲ್ಲಾ ಮುಸಲ್ಮಾನರು ಎಂಬ ಭಾವನೆ ಬರುವ ರೀತಿಯಲ್ಲಿ ಬಿಂಬಿಸಿ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಅಂತ ವಾಗ್ದಾಳಿ ನಡೆಸಿದೆ.

    ಗೋಲಿ ಮಾರೋ.. ಗೋಲಿ ಮಾರೋ
    ಸಂಸದ ಪರ್ವೇಶ್ ವರ್ಮಾ ರೀತಿಯಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಮಂತ್ರಿ ಅಮಿತ್ ಶಾ ಪಾಲ್ಗೊಂಡಿದ್ದ ಚುನಾವಣಾ ಸಮಾವೇಶದಲ್ಲಿ `ದೇಶ್ ದ್ರೋಹಿಯೋಂಕೋ ಗೋಲಿ ಮಾರ್.. ಗೋಲಿಮಾರ್’ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು) ಅಂತ ಘೋಷಣೆ ಕೂಗಿದ್ದಾರೆ. ಕೇಂದ್ರ ಸಚಿವರು ಅನ್ನೋ ತಮ್ಮ ಸ್ಥಾನದ ಮಹತ್ವ-ಜವಾಬ್ದಾರಿಯನ್ನು ಅರಿತು ಅನುರಾಗ್ ಘೋಷಣೆ ಕೂಗಿದ್ದು ಎಷ್ಟು ಸರಿ ಅಂತ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ, ಅನುರಾಗ್ ಠಾಕೂರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ನೊಟೀಸ್ ಕೊಟ್ಟಿದ್ದು, ಜನವರಿ 30ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.

    ಶಹೀನ್ ಬಾಗ್ ಅಂತಾರಾಷ್ಟ್ರೀಯ ಸುದ್ದಿ
    ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಪಿಸ್ತೂಲ್ ಸಮೇತ ನುಗ್ಗಿ, ಪ್ರತಿಭಟನಾಕಾರರು ಈ ಕ್ಷಣವೇ ಜಾಗ ಖಾಲಿ ಮಾಡ್ಬೇಕು ಅಂತಲೂ ಬೆದರಿಸಿದ್ದ. ಈ ಎಲ್ಲಾ ವಿದ್ಯಮಾನಗಳಿಂದಾಗಿ ಸಿಎಎ ವಿರೋಧಿ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಶಹೀನ್ ಬಾಗ್ ಪ್ರದೇಶ ಕೇವಲ ಹೆಸರಾಗಿ ಉಳಿದಿಲ್ಲ. ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟ್, ಈಜಿಪ್ಟ್ ತಹ್ರೀರ್ ಸ್ಕ್ವೇರ್, ಟರ್ಕಿಯ ತಕ್ಸಿಂ ಸ್ಕ್ವೇರ್ ನಷ್ಟೇ ಪ್ರಸಿದ್ಧವಾಗಿದೆ. ಅಲ್ಲದೆ, ಕೋಲ್ಕತ್ತಾದ ಪಾರ್ಕ್ ಸರ್ಕಸ್, ಲಖನೌದ ಘಂಟಾ ಘರ್, ಬೆಂಗಳೂರಿನ ಮಸೀದ್ ರೋಡ್‍ಗಳು ಕೂಡ ಶಹೀನ್ ಬಾಗ್‍ಗಳಾಗಿ ಮಾರ್ಪಟ್ಟಿವೆ ಅಂತ ಜೆಎನ್‍ಯು ವಿದ್ಯಾರ್ಥಿ ಹೋರಾಟಗಾರ ಖಾಲಿದ್ ಉಮರ್ ಹೇಳಿದ್ದಾರೆ.

    ಎಲ್ಲಿದೆ ಶಹೀನ್ ಬಾಗ್?
    ದಕ್ಷಿಣ ದೆಹಲಿಯ ಓಕ್ಲಾ ಪ್ರದೇಶದಲ್ಲಿದೆ ಶಹೀನ್ ಬಾಗ್. ಯಮುನಾ ನದಿಯ ದಡದಲ್ಲಿದೆ. ಪೌರತ್ವ ವಿರೋಧಿ ಹೋರಾಟದ ಸದ್ಯದ ಕೇಂದ್ರ ಸ್ಥಾನ.

    ಶಹೀನ್ ಬಾಗ್‍ಗೂ ಪಿಎಫ್‍ಐ ನಂಟು:
    ದೇಶಾದ್ಯಂತ ಪೌರತ್ವ ವಿರೋಧಿ ಹೋರಾಟದ ವೇಳೆ ಹಿಂಸಾಚಾರ ಸೃಷ್ಟಿಗೆ ಕೇರಳ ಮೂಲದ ಪಿಎಫ್‍ಐಗೆ 120 ಕೋಟಿ ಫಂಡ್ ಬಂದಿರೋ ಸಂಬಂಧ ಪಿಎಫ್‍ಐ ಮತ್ತದರ ಜೊತೆ ನಂಟು ಹೊಂದಿರೋ ಎನ್‍ಜಿಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ. ಈ ಹೊತ್ತಲ್ಲೇ, ಪಿಎಫ್‍ಐನ ಪ್ರಮುಖ ಅಧಿಕಾರಿಗಳು ಶಹೀನ್ ಬಾಗ್ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಹೇಳಿದೆ.

    ಪ್ರಚೋದನಕಾರಿ ಭಾಷಣದ ಮಾಸ್ಟರ್ ಮೈಂಡ್
    ಜೆಎನ್‍ಯು ವಿದ್ಯಾರ್ಥಿ ಶರ್ಜಿಲ್ ಇಮಾಮ್ ಶಹೀನ್ ಬಾಗ್ ಹೋರಾಟದ ಮಾಸ್ಟರ್ ಮೈಂಡ್ ಎಂಬ ಆರೋಪ ಕೇಳಿ ಬಂದಿದೆ. ಈತನ ಪ್ರಚೋದನಕಾರಿ ಹೇಳಿಕೆಯಿಂದಲೇ ಶಹೀನ್ ಬಾಗ್‍ನಲ್ಲಿ ಹೋರಾಟ ಭಾವೋದ್ವೇಗ ಪಡೆದುಕೊಂಡಿದೆ ಎನ್ನಲಾಗಿದೆ. ಸಿಎಎ ವಿರೋಧಿಸಿ ಕಿಚ್ಚೆಬ್ಬಿಸೋ ನೆಪದಲ್ಲಿ ಕೋಮು ಭಾವನೆ ಕೆರಳಿಸೋ ಭಾಷಣ ಮಾಡಿರೋ ಶರ್ಜಿಲ್ ಇಮಾಮ್ ವೀಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಹೀಗಾಗಿ, ಶರ್ಜಿಲ್ ಇಮಾಮ್ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿತ್ತು. ಈಗ ಅರೆಸ್ಟ್ ಮಾಡಲಾಗಿದೆ. ಆದರೆ, ರಾಷ್ಟ್ರ ಬಿಜೆಪಿಯ ಜೋಡೆತ್ತುಗಳಂತಿರೋ ಮೋದಿ-ಅಮಿತ್ ಶಾ ಏನು ಬೇಕಾದರೂ ಹೇಳಬಹುದು. ಆ ಹೇಳಿಕೆಗಳಿಂದ ಸಮಾಜದಲ್ಲಿ ಎಂಥಹ ಅನಾಹುತಗಳು ನಡೆಯಬಹುದು. ಆದರೆ, ಇವರನ್ನು ಟೀಕಿಸಿದರೆ, ಇವರ ವಿರುದ್ಧ ದನಿ ಎತ್ತಿದರೆ ಸುಳ್ಳು ಕೇಸ್‍ಗಳನ್ನು ಹಾಕಿ ಆ ದನಿಯನ್ನು ಅಡಗಿಸೋ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಅಂತ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.
    – ಆನಂದ ಪಿಎನ್

  • ಸಿಎಎ ಜಾರಿಗೆ ತಂದು ಬಿಜೆಪಿ ಅನ್ಯಾಯ ಮಾಡ್ತಿದೆ – ಕಮಲ ನಾಯಕ ಎಡವಟ್ಟು

    ಸಿಎಎ ಜಾರಿಗೆ ತಂದು ಬಿಜೆಪಿ ಅನ್ಯಾಯ ಮಾಡ್ತಿದೆ – ಕಮಲ ನಾಯಕ ಎಡವಟ್ಟು

    ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅಂಬೇಡ್ಕರ್ ಹಾಗೂ ದಲಿತ ಸಮುದಾಯಕ್ಕೆ ಭಾರತೀಯ ಜನತಾ ಪಾರ್ಟಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ ಹೇಳಿದ್ದಾರೆ.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಅತ್ಯಂತ ಭಾವನಾತ್ಮಕ ಅಭಿಪ್ರಾಯವನ್ನು ಹೊಂದಿರುವ ದಲಿತ ಸಮುದಾಯ ಹಾಗೂ ಅಂಬೇಡ್ಕರ್ ಅವರ ಬಗ್ಗೆ ತಪ್ಪು ಸಂದೇಶವನ್ನು ರವಾನೆ ಮಾಡಲಾಗುತ್ತಿದೆ ಎಂದು ಮಾತು ಆರಂಭಿಸಿದರು. ಆಗ ಮಾತಿನ ಭರಾಟೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅಂಬೇಡ್ಕರ್ ಹಾಗೂ ದಲಿತ ಸಮುದಾಯಕ್ಕೆ ಭಾರತೀಯ ಜನತಾ ಪಾರ್ಟಿ ಅನ್ಯಾಯ ಮಾಡುತ್ತಿದ್ದಾರೆ ಎಂದರು.

    ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವವನ್ನು ತಿರುಚುವಂತ ಹಾಗೂ ದೇಶದಲ್ಲಿ ಕೋಮುವಾದ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅಲ್ಲದೇ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮಂಗಳವಾರ ಪ್ರತಿಭಟನೆಗೆ ಕರೆ ನೀಡಿರುವ ಕಾಂಗ್ರೆಸ್ ಶಾಸಕರ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವದ ಕಾಯಿದೆ ಕುರಿತು ಜನಜಾಗೃತಿಯಿಂದ ಜನರು ಅರ್ಥಮಾಡಿಕೊಂಡು ಸುಮ್ಮನಾಗಿದ್ದರು. ಆದರೇ ಪೌರತ್ವ ಕಾಯ್ದೆಯ ತೀವ್ರತೆ ಕಡಿಮೆಯಾದಾಗ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಕೋಮುವಾದದ ಬೀಜ ಬಿತ್ತಿ ದೇಶದಲ್ಲಿರುವ ಏಕತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಹೇಂದ್ರ ಕೌತಾಳ, ರಂಗನಾಯಕ ತಪೆಲಾ, ಅರುಣ ಹುದ್ದಲಿ, ಸಂತೋಶ ಅರಕೇರಿ, ಚಂದ್ರಶೇಖರ ಗೋಕಾಕ, ಹನಮಂತಪ್ಪ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

  • ಪೌರತ್ವ ಪರ ಜನ ಜಾಗೃತಿ ಸಭೆ – ಹರಿದು ಬಂದ ಕೇಸರಿ ಸಾಗರ

    ಪೌರತ್ವ ಪರ ಜನ ಜಾಗೃತಿ ಸಭೆ – ಹರಿದು ಬಂದ ಕೇಸರಿ ಸಾಗರ

    ಮಂಗಳೂರು: ಪೌರತ್ವ ವಿಚಾರ ಮಂಗಳೂರಿನಲ್ಲಿ ಮತ್ತೆ ಕಿಚ್ಚು ಹಚ್ಚಿದೆ. ಪೌರತ್ವ ಕಾಯ್ದೆ ಬೆಂಬಲಿಸಿ ಕಡಲನಗರಿಯಲ್ಲಿ ಲಕ್ಷಾಂತರ ಜನ ಒಂದಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೌರತ್ವ ಕಾಯ್ದೆಯ ಬಗ್ಗೆ ಮಂಗಳೂರಿನಲ್ಲಿ ಘಂಟಾಘೋಷ ಮೊಳಗಿಸಿದ್ದು ಭಾರತದ ಯಾವುದೇ ಮುಸ್ಲಿಮರಿಗೂ ಇದರಿಂದ ತೊಂದರೆಯಾಗಲ್ಲ ಎಂದು ಸಾರಿದ್ದಾರೆ. ಮುಸ್ಲಿಮರನ್ನು ಎತ್ತಿಕಟ್ಟುವ ಪ್ರತಿಪಕ್ಷಗಳದ್ದು ದೊಡ್ಡ ಪಿತೂರಿ ಎಂದು ಕಿಡಿಕಾರಿದ್ದಾರೆ.

    ಕರಾವಳಿ ಕೇಸರಿ ಪಾಳಯದ ಪ್ರಭಾವಿ ನೆಲ ಅನ್ನುವುದನ್ನು ಬಿಜೆಪಿ ನಾಯಕರು ಮತ್ತೆ ಸಾಬೀತು ಪಡಿಸಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ಲಕ್ಷಾಂತರ ಜನ ಸೇರಿದ್ದ ಮಂಗಳೂರಿನಲ್ಲಿಯೇ ಕಾಯ್ದೆ ಬೆಂಬಲಿಸಿ ಲಕ್ಷಾಂತರ ಜನರನ್ನು ಒಗ್ಗೂಡಿಸಿದ್ದಾರೆ. ಮಂಗಳೂರು ಹೊರವಲಯದ ಬಂಗ್ರಕುಳೂರಿನಲ್ಲಿ ನಡೆದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಕೇಸರಿ ಪಾಳಯ ಅಬ್ಬರಿಸಿದ್ದು ವಿರೋಧ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ.

    ಪೌರತ್ವ ಕಾಯಿದೆ, ಎನ್.ಆರ್.ಸಿ, ಎನ್.ಪಿ.ಆರ್ ಬಗ್ಗೆ ಹೆಚ್ಚು ಕಿಚ್ಚು ಕಾಣಿಸಿಕೊಂಡಿದ್ದು ಉತ್ತರ ಪ್ರದೇಶ ಬಿಟ್ಟರೆ, ಕರಾವಳಿಯ ಮಂಗಳೂರಿನಲ್ಲಿ. ಹೀಗಾಗಿ ಕಾಯ್ದೆ ಬಗ್ಗೆ ಸಮರ್ಥನಾ ಸಮಾವೇಶ ಬಿಜೆಪಿಗೆ ಅನಿವಾರ್ಯ ಆಗಿತ್ತು. ಆರಂಭದಲ್ಲಿ ಬಿಜೆಪಿ ಗೃಹ ಸಚಿವ ಅಮಿತ್ ಶಾರನ್ನು ಕರೆಸಲು ಯೋಜನೆ ಹಾಕಿತ್ತು. ಕೊನೆ ಕ್ಷಣದಲ್ಲಿ ಅಮಿತ್ ಶಾ ಬಿಟ್ಟು ಬಿಜೆಪಿ ಮಾಜಿ ಅಧ್ಯಕ್ಷ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರನ್ನು ಕರೆಸಿ ಕಾಯ್ದೆ ಬಗ್ಗೆ ಜನರಿಗೆ ವಾಗ್ದಾನ ನೀಡುವಂತೆ ಮಾಡಿದೆ. ಒಂದು ಲಕ್ಷಕ್ಕೂ ಹೆಚ್ಚು ಸೇರಿದ್ದ ಜನರನ್ನು ನೋಡಿದ ರಾಜನಾಥ್ ಸಿಂಗ್, ಇಷ್ಟು ದೊಡ್ಡ ಸಮಾವೇಶ ಉದ್ದೇಶಿಸಿ ಇದೇ ಮೊದಲ ಬಾರಿಗೆ ಮಾತಾಡುತ್ತಿದ್ದೇನೆಂದು ಹರ್ಷ ವ್ಯಕ್ತಪಡಿಸಿದರು.

    ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು 1949ರಲ್ಲಿ ಕಾಂಗ್ರೆಸ್ ನಾಯಕರೇ ಹೇಳಿದ್ದರು. 2004ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಲೋಕಸಭೆಯಲ್ಲಿ ಈ ಬಗ್ಗೆ ಮತ್ತೆ ಪ್ರಸ್ತಾಪ ಮಾಡಿದ್ದರು. ಆದರೆ, ಕಾಯ್ದೆಗೆ ತಿದ್ದುಪಡಿ ಆಗಲಿಲ್ಲ. ಈಗ ಮೋದಿ ಸರ್ಕಾರ ಆ ಕೆಲಸ ಮಾಡಿದಾಗ, ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಈ ಕಾಯ್ದೆಯಿಂದ ಯಾವುದೇ ಭಾರತೀಯ ಮುಸ್ಲಿಮರಿಗೆ ತೊಂದರೆಯಾಗಲ್ಲ. ಎನ್.ಪಿ.ಆರ್ ಜನಗಣತಿ ಅಷ್ಟೇ. ಅದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದರು.

    ಇದಲ್ಲದೆ, ತ್ರಿವಳಿ ತಲಾಖ್, ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370 ವಿಧಿ ರದ್ದತಿ ಬಗ್ಗೆಯೂ ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಮುಂದಿನ ಗುರಿ ಪಿಓಕೆಯಾಗಿದ್ದು ಅದನ್ನೂ ಪಡೆದೇ ತೀರುವುದಾಗಿ ಶಪಥ ಮಾಡಿದರು. ಅಲ್ಲದೆ ಕಾಶ್ಮೀರದಿಂದ ಹೊರಹಾಕಲ್ಪಟ್ಟಿದ್ದ ಕಾಶ್ಮೀರಿ ಪಂಡಿತರನ್ನೇ ಮತ್ತೆ ಅದೇ ಜಾಗದಲ್ಲಿ ಕೂರಿಸುತ್ತೇವೆ ಅಂತ ಹೇಳಿದರು.

    ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸಿದ್ದರು. ಸುಮಾರು 800 ಕ್ಕೂ ಹೆಚ್ಚು ಬಸ್, ಕಾರು ಸೇರಿ ಸಾವಿರಾರು ವಾಹನಗಳಲ್ಲಿ ಜನ ಆಗಮಿಸಿದ್ದು ಸಿಎಎ ಪರವಾಗಿ ಘಂಟಾಘೋಷ ಮೊಳಗಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿದರು. ಕರಾವಳಿಯ ನೆಲ ಸಿಎಎ ವಿಚಾರದಲ್ಲಿ ಪರ-ವಿರೋಧಿ ಕಿಚ್ಚಿನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು, ಉಭಯ ಬಣಗಳ ಮುಂದಿನ ನಡೆ ಕುತೂಹಲ ಸೃಷ್ಟಿಸಿದೆ.