Tag: ಸಿಎಎ

  • ದೇಶದ್ರೋಹದ ಹೇಳಿಕೆಯನ್ನು ಬೇರು ಸಮೇತ ಕಿತ್ತು ಹಾಕಲು ಕ್ರಮ: ಬೊಮ್ಮಾಯಿ

    ದೇಶದ್ರೋಹದ ಹೇಳಿಕೆಯನ್ನು ಬೇರು ಸಮೇತ ಕಿತ್ತು ಹಾಕಲು ಕ್ರಮ: ಬೊಮ್ಮಾಯಿ

    – ವಿದ್ಯಾಸಂಸ್ಥೆ, ಹಾಸ್ಟೆಲ್‍ಗಳಲ್ಲಿ ನಿಗಾ ವಹಿಸಬೇಕು

    ಹಾವೇರಿ: ದೇಶ ದ್ರೋಹದ ಹೇಳಿಕೆ ನೀಡುವ ಪ್ರಕರಣಗಳ ಕುರಿತು ಸರ್ಕಾರ ನಿಗಾ ವಹಿಸಲಿದೆ. ಇಂತಹ ಪ್ರಕರಣಗಳನ್ನು ರಾಜ್ಯದಿಂದ ಬೇರು ಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಈ ಕುರಿತು ಹಾವೇರಿಯಲ್ಲಿ ಮಾತನಾಡಿದ ಅವರು, ಇಂತಹ ಪ್ರಕರಣಗಳನ್ನು ಕರ್ನಾಟಕದಿಂದ ಬೇರು ಸಮೇತ ಕಿತ್ತು ಹಾಕಲು ಕ್ರಮ ಕೈಗೊಳ್ಳುತ್ತೆವೆ. ಬೆಂಗಳೂರಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮಾತ್ರವಲ್ಲದೆ ವಿದ್ಯಾಸಂಸ್ಥೆ, ಹಾಸ್ಟೆಲ್ ಮ್ಯಾನೇಜ್ಮೆಂಟ್ ಇಂತಹ ಘಟನೆಗಳ ಬಗ್ಗೆ ನಿಗಾ ವಹಿಸಬೇಕು. ಗೊತ್ತಿದ್ದೂ ಸುಮ್ಮನಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

    ವಾಟ್ಸಪ್, ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುವ ಕುರಿತು ಸಹ ಪರಿಶೀಲಿಸಬೇಕಿದೆ. ಇಂತಹ ಪೋಸ್ಟ್‍ಗಳಿಗೆ ನಿರ್ಬಂಧ ಹಾಕಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಕೆಲ ಸಂಘಟನೆಗಳಿಗೆ ವಿದೇಶದಿಂದ ಹಣ ಬರುತ್ತಿರುವ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ದೇಶದ್ರೋಹ ಹೇಳಿಕೆ ಪ್ರಕರಣವನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಐಜಿಪಿಯವರು ಇದನ್ನು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ 20 ಜನ ವಕೀಲರು ಅವರ ಪರ ವಾದ ಮಾಡಲು ಮುಂದೆ ಬಂದಿದ್ದಾರೆ, ರಕ್ಷಣೆ ಕೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ನೈತಿಕತೆ ಕುಗ್ಗುವ ರೀತಿ ಮಾತನಾಡುವುದಿಲ್ಲ. ಮೊದಲ ಹಂತದಲ್ಲಿ ಪೊಲೀಸರ ಕ್ರಮ ಊರ್ಜಿತವಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಅಫ್ಜಲ್ ಗುರುಗೆ ಗಲ್ಲು ಹಾಕುವ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಅವನ ಪರ ನಿಂತವು. ಅದರಿಂದ ಕುಮ್ಮಕ್ಕು ಸಿಕ್ಕಿತು. ನಂತರ ಜೆಎನ್‍ಯುನಲ್ಲಿ ಗಲಭೆ ಏಳಲು ಪ್ರಾರಂಭವಾಯಿತು. ನಂತರ ಮುಸ್ಲಿಂ ವಿವಿಯಲ್ಲಿ ಗಲಭೆ ಇದೀಗ ಎಲ್ಲ ರಾಜ್ಯದಲ್ಲೂ ಇದು ಪ್ರಾರಂಭವಾಗಿದೆ. ವಿಶೇಷವಾಗಿ ಸಿಎಎ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ. ಸಿಎಎ ಪೌರತ್ವ ಕಿತ್ತುಕೊಳ್ಳುವುದಲ್ಲ. ಪೌರತ್ವ ಕೊಡುವುದು. ಇದರ ವಿರುದ್ಧ ಪ್ರತಿಭಟಿಸಲು ವಿರೋಧ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ. ಎಲ್ಲೆಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆಯೋ ಅಲ್ಲಿ ಕುಮ್ಮಕ್ಕು ನೀಡುವಂಥ ಪ್ರಕರಣಗಳು ನಡಿಯುತ್ತಿವೆ. ಇದೆಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

  • ಅಮೂಲ್ಯ ಸ್ನೇಹಿತರ ವಿಚಾರಣೆ – ಹುಟ್ಟೂರಿಗೆ ಭೇಟಿ ನೀಡಲಿದೆ ಎಸ್‍ಐಟಿ

    ಅಮೂಲ್ಯ ಸ್ನೇಹಿತರ ವಿಚಾರಣೆ – ಹುಟ್ಟೂರಿಗೆ ಭೇಟಿ ನೀಡಲಿದೆ ಎಸ್‍ಐಟಿ

    – ಅಮೂಲ್ಯಗೆ ನಕ್ಸಲ್ ನಂಟು ಶಂಕೆ
    – ಭಾಷಣದ ಹಿಂದೆ ಹಲವು ಜನರ ಶ್ರಮವಿದೆ ಎಂದಿದ್ದ ದೇಶದ್ರೋಹಿ

    ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾ ಲಿಯೋನಾ ಹುಟ್ಟುರಿಗೆ ವಿಶೇಷ ತನಿಖಾ ತಂಡ(ಎಸ್‍ಐಟಿ) ತೆರಳಲು ಸಿದ್ಧತೆ ನಡೆಸಿದೆ.

    ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಚಿಕ್ಕಪೇಟೆ ಎಸಿಪಿ ಮಾಂತಾ ರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಮಾರುಕಟ್ಟೆ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ತಂಡದಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಸದ್ಯ ಆರೋಪಿ ಅಮೂಲ್ಯಳ ನಿಕಟ ಸಂಪರ್ಕದಲ್ಲಿರುವ ಸ್ನೇಹಿತರ ವಿಚಾರಣೆ ಮಾಡಲಾಗುತ್ತಿದೆ. ಸ್ನೇಹಿತರ ವಿಚಾರಣೆ ಮಾಹಿತಿ ಕಲೆ ಹಾಕಿದ ಮೇಲೆ ಆರೋಪಿ ಅಮೂಲ್ಯಾಳ ಹುಟ್ಟೂರಿಗೆ ತೆರಳಲು ಸಜ್ಜಾಗಿದೆ.

    ಆರೋಪಿ ಅಮೂಲ್ಯಾಳಿಗೆ ನಕ್ಸಲ್ ನಂಟಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವುದರಿಂದ ತನಿಖಾ ತಂಡ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಅಮೂಲ್ಯಾಳ ಹುಟ್ಟೂರು ಚಿಕ್ಕಮಗಳೂರಿನ ಕೊಪ್ಪಕ್ಕೆ ಭೇಟಿ ನೀಡಿ ತಂದೆ ತಾಯಿಯರನ್ನು ತನಿಖಾ ತಂಡ ವಿಚಾರಣೆ ಮಾಡಲಿದೆ.

    ಆರೋಪಿ ಬಂಧನವಾದ ಬಳಿಕ ಪೊಲೀಸರ ಮುಂದೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದು, ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಮಾತನಾಡಲು ಹೇಳಿಕೊಡಲು ಗಾಡ್ ಫಾದರ್ ಗಳು ಇದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಆರೋಪಿಯ ಹಿಂದೆ ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ವಿಡಿಯೋದಲ್ಲಿ ಮಾತನಾಡಿದ್ದ ಅಮೂಲ್ಯ, ನನ್ನ ಭಾಷಣದ ಹಿಂದೆ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನನ್ನ ಬೆನ್ನ ಹಿಂದಿದ್ದಾರೆ. ಅವರೆಲ್ಲ ನಿಜವಾದ ಹೀರೋಗಳು. ಅವರ ಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಳು.

    ಆರೋಪಿ ಅಮೂಲ್ಯ ಬಂಧನವಾದ ಬಳಿಕ ಅವರ ತಂದೆ ಪ್ರತಿಕ್ರಿಯಿಸಿ, ನನ್ನ ಮಗಳು ಕೆಲ ಮುಸ್ಲಿಮರೊಂದಿಗೆ ನಂಟು ಹೊಂದಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡ, ಕೊಪ್ಪಕ್ಕೆ ಹೋಗಿ ತಂದೆ ತಾಯಿಯನ್ನು ವಿಚಾರಣೆ ನಡೆಸಿ, ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲಿದ್ದಾರೆ ಏನ್ನಲಾಗಿದೆ.

    ನಡೆದಿದ್ದೇನು?
    ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯಳನ್ನು ತಡೆದಿದ್ದರು. ಕೋರ್ಟ್ ಈಕೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಸೇರಿದ್ದಾಳೆ.

  • ಸಿಎಎ, ಎನ್​ಆರ್​ಸಿ, 370 ರದ್ದು ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ – ಆರ್ದ್ರಾ

    ಸಿಎಎ, ಎನ್​ಆರ್​ಸಿ, 370 ರದ್ದು ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ – ಆರ್ದ್ರಾ

    ಬೆಂಗಳೂರು: ಸಿಎಎ, ಎನ್​ಆರ್​ಸಿ ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದು ವಿರೋಧವಾಗಿ ನಡೆಯುತ್ತಿದ್ದ ಪ್ರತಿಭಟನೆಯಿಂದ ನಾನು ಪ್ರಚೋದನೆಗೆ ಒಳಗಾಗಿದ್ದೆ. ಎಲ್ಲೆಲ್ಲಿ ಸಿಎಎ, ಎನ್​ಆರ್​ಸಿ ವಿರುದ್ಧವಾಗಿ ನಡೆಯುವ ಎಲ್ಲಾ ಪ್ರತಿಭಟನೆಯಲ್ಲೂ ನಾನು ಭಾಗಿಯಾಗುತ್ತಿದ್ದೆ ಎಂದು ಆರ್ದ್ರಾ ಅಲಿಯಾಸ್ ಅನ್ನಪೂರ್ಣೇಶ್ವರಿ ಸ್ವಇಚ್ಚಾ ಹೇಳಿಕೆ ನೀಡಿದ್ದಾಳೆ.

    ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ತಿಳಿಸಿರುವ ಈಕೆ, ಎಲ್ಲೆಲ್ಲಿ ಕಾರ್ಯಕ್ರಮಗಳು ನಿಗದಿಯಾಗುತ್ತಿತ್ತೋ ಆ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿ ಕಾರ್ಯಕ್ರಮಗಳಿಗೆ ತಾನೇ ಮುಂದಾಗಿ ಹೋಗುತ್ತಿದ್ದೆ ಎಂದಿದ್ದಾಳೆ.

     

    ಗುರುವಾರ ಸಂಜೆ ಫ್ರೀಡಂ ಪಾರ್ಕಿನಲ್ಲಿ ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದೆ. ಈ ವೇಳೆ ಅಮೂಲ್ಯಳ ‘ಪಾಕಿಸ್ತಾನ್ ಜಿಂದಾಬಾದ್’ ಹೇಳಿಕೆಗೆ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಶುಕ್ರವಾರ ಅಮೂಲ್ಯ ವಿರುದ್ಧವಾಗಿ ಹಿಂದೂಪರ ಸಂಘಟನೆಗಳು ಇಂದು ಟೌನ್ ಹಾಲ್ ಬಳಿ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎನ್ನುವ ವಿಚಾರ ತಿಳಿಯಿತು. ಹೀಗಾಗಿ ಗುರುವಾರವೇ ನಾನು ಮುಸಲ್ಮಾನ್ ಹಾಗೂ ದಲಿತರನ್ನ ಮುಕ್ತಗೊಳಿಸಿ, ಫ್ರೀ ಕಾಶ್ಮೀರ್ ಎಂಬ ಇಂಗ್ಲೀಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನ ಬರೆದು ಇಟ್ಟುಕೊಂಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.

    ಪಿಜಿ ಬಳಿಯಿದ್ದ ಅಂಗಡಿಯಿಂದ ಪೇಂಟ್ ತಗೆದುಕೊಂಡು ಬಂದು ಖಾಕಿ ಬಾಕ್ಸ್ ಗೆ ಮುಸಲ್ಮಾನ್, ಕಾಶ್ಮೀರ, ದಲಿತ್, ಟ್ರಾನ್ಸ್, ಆದಿವಾಸಿ ಮುಕ್ತಿ ಎಂದು ಬರೆದಿದ್ದೆ ಎಂಬುದಾಗಿ ತಿಳಿಸಿದ್ದಾಳೆ.

    ಸ್ನೇಹಿತರು ಹೇಳೋದು ಏನು?
    ಪಿಜಿಯಲ್ಲಿ ತೀರ್ಮಾನ ಮಾಡಿಕೊಂಡು ಬೆಳಗ್ಗೆ ಪ್ಲಕಾರ್ಡ್ ತಯಾರು ಮಾಡಿಕೊಂಡು ಬಂದಿದ್ದಳು. ಆಕೆಯ ಹೋರಾಟ ಮತ್ತು ಹೇಳಿಕೆ ಬಗ್ಗೆ ಗೊತ್ತಿಲ್ಲ. ಆಕೆಯ ಹೇಳಿಕೆಗೂ ನಮಗು ಯಾವುದೇ ಸಂಬಂಧ ಇಲ್ಲ. ನಾವು ಸ್ನೇಹಿತರಾದ ಕಾರಣ ಬಂದಿದ್ದೇವೆ ಅಷ್ಟೇ. ನಾವು ಯಾವ ಹೋರಾಟದಲ್ಲೂ ಭಾಗಿಯಾಗಿಲ್ಲ. ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಅಮೂಲ್ಯ ಮತ್ತು ಆರ್ದ್ರಾ ಸ್ನೇಹಿತರಾದ ಪರನ್ ಅಮಿತವ್, ನಾಜಿಬುಲ್ಲ ತಿಳಿಸಿದ್ದಾರೆ.

  • ಪ್ರಚೋದನಕಾರಿ ಹೇಳಿಕೆ- ಎಐಎಂಐಎಂ ವಕ್ತಾರನ ವಿರುದ್ಧ ಕೇಸ್

    ಪ್ರಚೋದನಕಾರಿ ಹೇಳಿಕೆ- ಎಐಎಂಐಎಂ ವಕ್ತಾರನ ವಿರುದ್ಧ ಕೇಸ್

    ಕಲಬುರಗಿ: ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕಾರಿ ಹೇಳಿಕೆ ನೀಡಿದ, ಮಹಾರಾಷ್ಟ್ರ ಮಾಜಿ ಶಾಸಕ ಹಾಗೂ ಎಐಎಂಐಎಂ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಕಲಬುರಗಿ ಪೀರ್ ಬಂಗಾಲಿ ಮೈದಾನದಲ್ಲಿ ಸಿಎಎ ಖಂಡಿಸಿ ನಡೆದ ಸಮಾವೇಶದಲ್ಲಿ ವಾರಿಸ್ ಪಠಾಣ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಪಠಾಣ್ ಹೇಳಿಕೆ ವಿರುದ್ಧ ನ್ಯಾಯವಾದಿ ಶ್ವೇತಾಸಿಂಗ್ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ದೂರಿನ ಪ್ರತಿಯಲ್ಲಿ ಏನಿದೆ?
    ಫೆಬ್ರವರಿ 15ರಂದು ನಡೆದ ಈ ಕಾರ್ಯಕ್ರಮದಲ್ಲಿ ವಾರಿಸ್ ತಮ್ಮ ಭಾಷಣದ ವೇಳೆ, ಕೇಳಿದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿಲ್ಲ, ಹೀಗಾಗಿ ನಾವು ಅದನ್ನು ಕಸಿದು ಪಡೆಯಬೇಕಾಗುತ್ತದೆ. ಆ ಸಮಯ ಇದೀಗ ಬಂದಿದೆ. ಈಗಾಗಲೇ ನಮ್ಮ ಹೆಣ್ಣು ಸಿಂಹಳಿಯರು ಮಾತ್ರ ಬೀದಿಗಿಳಿದಿದ್ದಾರೆ. ಕೇವಲ ನಮ್ಮ ತಾಯಂದಿರು ಸಹೋದರಿಯರು ಬೀದಿಗೆ ಇಳಿದಿರುವದನ್ನು ನೋಡಿಯೇ ನಿಮಗೆ ಎಲ್ಲೆಂದರಲ್ಲಿ ಬಿಸಿ ಆಗಲಾರಂಭಿಸಿದೆ. ಇನ್ನು ನಾವು ಗಂಡಸರು ಬಂದರೆ ನಿಮ್ಮ ಸ್ಥಿತಿ ಏನಾಗಬಹುದು ಕಲ್ಪಿಸಿಕೊಳ್ಳಿ, ಈ ದೇಶದ 15 ಕೋಟಿ ಮುಸ್ಲಿಮರು ಒಂದಾಗಿ ಬಂದರೆ 100ಕೋಟಿ ಹಿಂದುಗಳು ಯಾವುದೇ ಲೆಕ್ಕಕ್ಕೆ ಸಿಗದೆ ಹೋಗುತ್ತಾರೆ ಎಂದು ಭಾಷಣ ಮಾಡಿದ್ದರು. ಈ ವೇಳೆ ಪಕ್ಷದ ಸಂಸ್ಥಾಪಕ ಅಸಾದುದ್ದಿನ್ ಓವೈಸಿ ಸಹ ಭಾಗವಹಿಸಿದ್ದರು.

    ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕತೆಗೆ ಧಕ್ಕೆ ತರುವ ಪ್ರಚೋದನಾತ್ಮಕಾರಿ ಭಾಷಣ ಮಾಡಿದ್ದರು. ಹೀಗಾಗಿ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕೂಡಲೇ ಎಫ್‍ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದ ಹಿನ್ನೆಲೆ ಮಧ್ಯರಾತ್ರಿಯಲ್ಲೇ ಪ್ರಕರಣ ದಾಖಲಾಗಿದೆ.

  • ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

    ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

    ಉಡುಪಿ: ಪಾಕ್ ಪರ ಪ್ರಗತಿಪರ ಹೋರಾಟಗಾರ್ತಿ ಅಮೂಲ್ಯ ಲಿಯೋನಾ ಘೋಷಣೆ ಕೂಗಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಅಮೂಲ್ಯ ಪರ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ ಅವರ ತನಿಖೆ ಕೂಡ ಆಗಬೇಕು. ಡಿಕೆ ಶಿವಕುಮಾರ್ ಅವರಿಗೂ ಅಮೂಲ್ಯಗೂ ಇರುವ ಸಂಬಂಧ ಏನು? ಅಮೂಲ್ಯ ಭಾಷಣ ಕಾಂಗ್ರೆಸಿಗರಿಗೆ ಗೊತ್ತಿತ್ತಾ ಎಂದು ಪ್ರಶ್ನಿಸಿದರು. ಸಿಎಎ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಏನು? ಸ್ಪಷ್ಟಪಡಿಸಿ ಎಂದರು.

    ಅಮೂಲ್ಯ ತಂದೆಗೆ ನಕ್ಸಲ್ ನಂಟು ಇದೆ. ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ವಾಜಿ ನಕ್ಸಲ್ ಮುಖಂಡ ಸಿರಿಮನೆ ನಾಗರಾಜ್ ಆಪ್ತ ಎಂದರು. ಬೆಂಗಳೂರಲ್ಲಿ ಎರೆಡೆರಡು ಘೋಷಣೆಗಳು ಪೂರ್ವನಿಯೋಜಿತವಾಗಿಯೇ ಬಂದಿದೆ. ಆಹ್ವಾನಿಸದೆ ಅಮೂಲ್ಯ ವೇದಿಕೆಗೆ ಹೇಗೆ ಬಂದಳು? ಮೈಕಿನಲ್ಲಿ ಹೇಗೆ ಮಾತನಾಡಿದಳು? ಆಯೋಜಕರೂ ಇದರಲ್ಲಿ ಶಾಮೀಲಿದ್ದಾರೆ. ಅವರನ್ನೂ ತನಿಖೆ ಮಾಡಬೇಕು ಎಂದರು.

    ಕಾಂಗ್ರೆಸ್ ದೇಶ ವಿರೋಧಿ ನಿಲುವು ತಾಳುತ್ತಿದ್ಯಾ? ಮೋದಿ ವಿರೋಧಿಸುವ ಬರದಲ್ಲಿ ಕಾಂಗ್ರೆಸ್ ದೇಶದ ವಿರುದ್ಧ ಮಾತನಾಡುತ್ತಿದ್ಯಾ? ವೇದಿಕೆಯಲ್ಲಿ ಗುರುವಾರ ಸಂಸದ ಓವೈಸಿ ಕೂಡ ಇದ್ದರು. ಭಾರತದ ಜೊತೆ ಅವರು ಯಾವತ್ತೂ ಗುರುತಿಸಿಕೊಂಡೇ ಇಲ್ಲ. ಇದೀಗ ದೇಶ ಪ್ರೇಮದ ಮಾತುಗಳನ್ನಾಡಿದ್ರೆ ಜನ ನಂಬಲ್ಲ ಎಂದರು.

  • ನಾವು ಬೆಂಗ್ಳೂರು ಪೊಲೀಸರು, ಆಟವಾಡಿದ್ರೆ ಸುಮ್ಮನಿರಲ್ಲ: ಭಾಸ್ಕರ್ ರಾವ್ ವಾರ್ನಿಂಗ್

    ನಾವು ಬೆಂಗ್ಳೂರು ಪೊಲೀಸರು, ಆಟವಾಡಿದ್ರೆ ಸುಮ್ಮನಿರಲ್ಲ: ಭಾಸ್ಕರ್ ರಾವ್ ವಾರ್ನಿಂಗ್

    ಬೆಂಗಳೂರು: ನಾವು ಬೆಂಗಳೂರು ಪೊಲೀಸರು. ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ರೆ ಸಹಿಸಲ್ಲ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ನಾವು ಬೇರೆ ಕಡೆಯಂತೆ ಲಾಠಿಚಾರ್ಜ್ ಮಾಡಿಲ್ಲ. ಹಾಗಾಂತ ನಮ್ಮ ಮುಂದೆ ನಾಟಕ ಮಾಡಿದ್ರೆ ಹುಷಾರ್ ಅಂತ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಪ್ರಕರಣ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಭಾಸ್ಕರ್ ರಾವ್ ಇಂದು ಮಾಹಿತಿ ನೀಡಿದ್ರು. ಗೃಹ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ನಾವು ಪ್ರತಿಭಟನೆಗಳಿಗೆ ಅವಕಾಶ ಕೊಡುತ್ತಾನೇ ಇದ್ದೇವೆ. ಯಾವುದೇ ಪ್ರತಿಭಟನೆಯಲ್ಲಿ ಹೀಗೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಇಂತಹ ಕಾರ್ಯಕ್ರಮ ಸಹಿಸೋಕೆ ಸಾಧ್ಯವೇ ಇಲ್ಲ. ಮಾಡೋದೆಲ್ಲ ಮಾಡಿ ಏನು ಮಾಡಿಲ್ಲ ಅಂತ ನಾಟಕ ಮಾಡೋದು ಬೇಡ ಅಂತ ಕಾರ್ಯಕ್ರಮ ಆಯೋಜಕರಿಗೆ ತರಾಟೆಗೆ ತೆಗೆದುಕೊಂಡ್ರು.

    ಪ್ರಕರಣಕ್ಕೆ ಸಂಬಂಧಿಸಿಂತೆ ಅಮೂಲ್ಯಳ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿದೆ. ಮಾತ್ರವಲ್ಲ ಆಯೋಜಕರ ಮೇಲೆ ಕೇಸ್ ಹಾಕಿ ಅಗತ್ಯ ತನಿಖೆ ಮಾಡ್ತೀವಿ. ಯಾರನ್ನು ಕೂಡ ಸುಮ್ಮನೆ ಬಿಡೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕೃತ್ಯ ಮಾಡಿದ್ರೆ ನಾವು ಸಹಿಸಲ್ಲ ಅಂತ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ.

    ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡೋವಾಗ ಹುಷಾರಾಗಿ ಇರಬೇಕು. ಜನರು ಇದ್ದಾರೆ ಎಂದು ಉದ್ರೇಕದ ಮಾತು ಆಡೋದು ಸರಿಯಲ್ಲ. ಅದನ್ನ ನೋಡಿ ಕಣ್ಣುಮುಚ್ಚಿ ಕುಳಿತಿಕೊಳ್ಳಲು ಆಗಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಬೇರೆ ಬೇರೆ ಕಡೆ ಪ್ರತಿಭಟನೆ ಆದಾಗ ಲಾಠಿ ಚಾರ್ಜ್ ಆಗಿದೆ. ಬೆಂಗಳೂರಿನಲ್ಲಿ ಅಂತಹ ಒಂದು ಘಟನೆ ಸಹ ಆಗಿಲ್ಲ. ನಿಮ್ಮ ಸ್ವಾರ್ಥಕ್ಕೆ ವೇದಿಕೆ ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹಾಳು ಮಾಡಬೇಡಿ ಅಂತ ಸಂದೇಶ ರವಾನೆ ಮಾಡಿದ್ದಾರೆ.

  • ಅಮೂಲ್ಯ ಲಿಯೋನಾಗೆ ಪೂರ್ತಿ ಮಾತನಾಡಲು ಅವಕಾಶ ಕೊಡಬೇಕಿತ್ತು: ಡಿಕೆಶಿ

    ಅಮೂಲ್ಯ ಲಿಯೋನಾಗೆ ಪೂರ್ತಿ ಮಾತನಾಡಲು ಅವಕಾಶ ಕೊಡಬೇಕಿತ್ತು: ಡಿಕೆಶಿ

    ಬೆಂಗಳೂರು: ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಫೋಷಣೆ ಕೂಗಿದ ಬಳಿಕ ಏನು ಹೇಳುತ್ತಿದ್ದಳು ಅದನ್ನ ಪೂರ್ತಿ ಹೇಳಲು ಅವಕಾಶ ಕೊಡಬೇಕಿತ್ತು ಅಂತ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಆಕೆಯ ಭಾಷಣಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಆಕೆ ಈಗ ಹೇಳಿದ ಮಾತನ್ನು ಕೇಳಿರಲಿಲ್ಲ. ಅಮೂಲ್ಯಗೆ ಪೂರ್ತಿ ಮಾತನಾಡಲು ಅವಕಾಶ ನೀಡಬೇಕಿತ್ತು. ಆದರೆ ಮಧ್ಯದಲ್ಲಿ ಏನೋ ಸಮಸ್ಯೆಯಾಗಿದೆ. ಇದರ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿದೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚಾಗಿ ಕಮೆಂಟ್ ಮಾಡುವುದಿಲ್ಲ ಎಂದು ತಿಳಿಸಿದರು.

    ಏನಿದು ಪ್ರಕರಣ?
    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲೇ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಳು.

    ವೇದಿಕೆ ಮೇಲೆ ಬಂದ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದರು, ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದರು.

    ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಅಮೂಲ್ಯಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 5ನೇ ಎಸಿಎಂಎಂ ಜಡ್ಜ್ ಆದೇಶಿಸಿದ್ದಾರೆ. ಇಷ್ಟಾದರೂ ಕೂಡ ಅಮೂಲ್ಯಳಿಗೆ ಭಯವಾಗಲಿ, ಪಶ್ಚಾತಾಪವಾಗಿ ಆಗಿಲ್ಲ. ಬದಲಿಗೆ ವಿಕ್ಟರಿ ಸಿಂಬಲ್ ತೋರಿಸಿ ಭಂಡತನ ಮೆರೆದಿದ್ದಾಳೆ.

    ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿ ಏಕಾಏಕಿ ಕುಖ್ಯಾತಿ ಗಳಿಸಿದ ಆರೋಪಿ ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಅಮೂಲ್ಯ ಹೇಳಿಕೆ ವಿಡಿಯೋ ಆಧಾರದ ಮೇಲೆ ಅವರನ್ನು ಅರೆಸ್ಟ್ ಮಾಡಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಸುಮೋಟೋ ಕೇಸ್ ದಾಖಲಿಸಿ ಎಫ್‍ಐಆರ್ ದಾಖಲಿಸಿಕೊಂಡರು. ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124ಎ(ದೇಶದ್ರೋಹ ಆರೋಪ), 153ಎ(ಶತೃತ್ವ ಬಿತ್ತುವುದು), 153ಬಿ(ಭಾವೈಕ್ಯತೆ ಹಾಗೂ ರಾಷ್ಟೀಯ ಏಕೀಕರಣಕ್ಕೆ ಧಕ್ಕೆ ತರುವುದು) ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.

  • ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧ ಆಕ್ರೋಶ

    ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧ ಆಕ್ರೋಶ

    ಯಾದಗಿರಿ: ದೇಶದ್ರೋಹಿ ಅಮೂಲ್ಯ ಲಿಯೋನಾ ವಿರುದ್ಧ ಯೋಧರೊಬ್ಬರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

    ಸದ್ಯ ನಾಗಲ್ಯಾಂಡ್ ಗಡಿಯಲ್ಲಿ ದೇಶ ಸೇವೆ ಮಾಡುತ್ತಿರುವ, ಸಿಆರ್‌ಪಿಎಫ್‌ ಯೋಧ ದೇವೆಂದ್ರಪ್ಪ ಅವರು ಅಮೂಲ್ಯ ಲಿಯೋನಾ ವಿರುದ್ಧ ಹೋರಾಟ ಮಾಡುವಂತೆ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸಗರ ಗ್ರಾಮದ ಯೋಧ ದೇವೆಂದ್ರಪ್ಪ 8 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್

    ತಮ್ಮ ಕಾರ್ಯಸ್ಥಾನದಿಂದ ವಿಡಿಯೋ ಮಾಡಿ ತಮ್ಮ ಆಕ್ರೋಶ ಹಂಚಿಕೊಂಡಿರುವ ದೇವೆಂದ್ರಪ್ಪ, ನಾವು ಗಡಿಯಲ್ಲಿ ನಿಂತು ಭಾರತಾಂಬೆಯ ಸೇವೆ ಮಾಡುತ್ತೇವೆ. ಆದರೆ ದೇಶದ ಒಳಗಡೆ ಅಮೂಲ್ಯನಂತಹ ವಿಕೃತ ಮನಸ್ಸಿನವರು ಇದ್ದಾರೆ. ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ಆಳ್ವಿಕೆ ನಡೆಸಲು ಅಮೂಲ್ಯನಂತ ವಿಕೃತ ಮನಸ್ಸಿನವರು ಕಾರಣ ಎಂದರು. ಇದನ್ನೂ ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ

    ಅಲ್ಲದೆ ಮೀರ್ ಜಾಫರ್ ನಂತಹ ಮನಸ್ಥಿತಿವುಳ್ಳ ಅಮೂಲ್ಯ ಅಂತವರು ಸ್ವಪ್ರತಿಷ್ಠೆಗೋಸ್ಕರ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇಂಥವರನ್ನು ದೇಶದಲ್ಲಿ, ಸಮಾಜದಲ್ಲಿ ಬೆಳೆಯಲು ಬಿಡಬಾರದು. ಎಲ್ಲಿಯವರೆಗೂ ಸಮಾಜ ಬಲಿಷ್ಠವಾಗಿ ಒಗ್ಗಟ್ಟಾಗಿ ಇಂಥವರ ವಿರುದ್ಧ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಇಂಥವರು ಇರುತ್ತಾರೆ. ತಮ್ಮ ಪ್ರಚಾರಕ್ಕಾಗಿ ದೇಶದ ವಿರುದ್ಧ ಇಂತಹ ಹೇಳಿಕೆಯನ್ನು ಕೊಡುತ್ತಿರುತ್ತಾರೆ. ಇಂತವರ ವಿರುದ್ಧ ಜನ ಹೋರಾಟ ನಡೆಸಬೇಕು. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಂದೇನು ಮಾತನಾಡುತ್ತಿದ್ದಳು ಎಂದು ಕಾದು ನೋಡಬೇಕಿತ್ತು: ಅಮೂಲ್ಯ ತಾಯಿ

    ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದರು. ಅಮೂಲ್ಯ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡರು. ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದಾರೆ.

  • ಬೆಂಗ್ಳೂರಿನ ಓವೈಸಿ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ

    ಬೆಂಗ್ಳೂರಿನ ಓವೈಸಿ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ

    ಬೆಂಗಳೂರು: ಸಿಎಎ ಹಾಗೂ ಎನ್‍ಸಿಆರ್ ವಿರೋಧಿಸಿ ಇಂದು ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ  ವೇದಿಕೆಯಲ್ಲೇ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದಾಳೆ.

    ವೇದಿಕೆ ಮೇಲೆ ಬಂದ ಚಿಕ್ಕಮಗಳೂರಿನ ಕೊಪ್ಪ ಮೂಲದ ಯುವತಿ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗಿದ್ದಾಳೆ. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಆಕೆಯನ್ನು ತಡೆದಿದ್ದಾರೆ. ಬಳಿಕ ಪೊಲೀಸರು ಕೂಡಲೇ ಅಮೂಲ್ಯಳನ್ನು ವೇದಿಕೆಯಿಂದ ಕರೆದುಕೊಂಡು ವಶಕ್ಕೆ ಪಡೆದ್ದಾರೆ. ಅಮೂಲ್ಯ ಪಾಕಿಸ್ತಾನಕ್ಕೆ ಜೈಕಾರ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡರು. ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯ ಅವರನ್ನು ತಡೆದಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಬಳಿಕ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿ ಆಗಿದೆ. ಇದೇ ವೇಳೆ ಮಾತನಾಡಿದ ಓವೈಸಿ ನಾವೂ ಭಾರತೀಯರು, ನಾವೂ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವುದಿಲ್ಲ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ. ಪಾಕಿಸ್ತಾನಕ್ಕೆ ನಾವೂ ಜೈಕಾರ ಹಾಕಲ್ಲ. ನಾವು ಆಕೆಯನ್ನು ಕರೆದಿರಲಿಲ್ಲ. ಆಕೆ ಯಾಕೆ ಈ ರೀತಿ ಹೇಳಿದರು ಎಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಾಕ್ ಪರ ಜೈಕಾರ ಕೂಗಿದ ಅಮೂಲ್ಯಳನ್ನು ಉಪ್ಪಾರ್‌ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಆಕೆಯ ವಿರುದ್ಧ ದೇಶದ್ರೋಹ ಪ್ರಕರಣದಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ 124ಎ, 153(ಎ) (ಬಿ) (ಸಿ), 505(2) ಅಡಿ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ. ಅಮೂಲ್ಯಳ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಡಿಯೋ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದಾರೆ.

     

  • ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ: ಪದ್ಮಶ್ರೀ ಹಾಜಬ್ಬ

    ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ: ಪದ್ಮಶ್ರೀ ಹಾಜಬ್ಬ

    ಮಂಗಳೂರು: ಉಡುಪಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಗುರುವಾರ ಆಯೋಜಿಸಿರುವ ಪೌರತ್ವ ಕಾಯ್ದೆ ವಿರುದ್ಧದ ಪ್ರಜಾ ಭಾರತ ಸಭೆಗೆ ನಾನು ಹಾಜರಾಗುವುದಿಲ್ಲ ಎಂದು ಪದ್ಮಶ್ರೀ ಹರೇಕಳ ಹಾಜಬ್ಬ ಸ್ಪಷ್ಟನೆ ನೀಡಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಹಾಜಬ್ಬ ಅವರು, ಉಡುಪಿಯಲ್ಲಿ ಸನ್ಮಾನ ಕಾರ್ಯಕ್ರಮ ಇದೆ ಅಂತ ಸ್ನೇಹಿತರು ಹೇಳಿದ್ದರು. ಹೀಗಾಗಿ ಕಾರ್ಯಕ್ರಮಕ್ಕೆ ಬರುತ್ತೇನೆಂದು ಒಪ್ಪಿಕೊಂಡಿದ್ದೆ. ಆದರೆ ನಾಳೆಯ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ತೆರಳಲು ಅನಾನುಕೂಲ ಆಗಿರುವುದರಿಂದ ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

    ನನ್ನ ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ ನಡೆಯುತ್ತಿದೆ. ನನಗೆ ಲಕ್ಷಾಂತರ ಜನ ಸಹಾಯ ಮಾಡಿದ್ದಾರೆ. ನನಗೆ ಎಲ್ಲರೂ ಒಂದೇ, ಯಾವುದೇ ಭೇದ ಭಾವ ಇಲ್ಲ. ಆಯೋಜಕರಿಗೆ ಕರೆ ಮಾಡಿ ಬರುವುದಿಲ್ಲ ಎಂದು ಹೇಳಿದ್ದೇನೆ ಎಂದರು. ಇದನ್ನೂ ಓದಿ: ನಡೆದಾಡುವ ಅರಣ್ಯದ ವಿಶ್ವಕೋಶ ತುಳಸಿ ಗೌಡರಿಗೆ ಪದ್ಮಶ್ರೀ ಗೌರವ

    ಉಡುಪಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಆಯೋಜಿಸಿರುವ ಸಿಎಎ ವಿರುದ್ಧದ ಪ್ರಜಾ ಭಾರತ ಸಭೆಗೆ ಹಾಜಬ್ಬ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅನ್ಸಾರ್ ಈ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಹರೇಕಳ ಹಾಜಬ್ಬ ಅವರು ಜಾತ್ಯಾತೀತವಾಗಿ, ರಾಜಕೀಯವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿಯಾಗಿದ್ದಾರೆ. ಅವರನ್ನು ರಾಜಕೀಯ ಹೋರಾಟಗಳಿಗೆ ಬಳಸಿಕೊಳ್ಳಬಾರದು ಎಂದು ಅನ್ಸಾರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಹೀಗಾಗಿ ಕಾರ್ಯಕ್ರಮದ ಉದ್ಘಾಟನೆಗೆ ಶಿಕ್ಷಣ ಸಂತ ಹರೇಕಳ ಹಾಜಬ್ಬ ಅವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದ್ದಕ್ಕೆ ವಿವಾದ ಹುಟ್ಟಿಕೊಂಡಿತ್ತು.

    ಕಾರ್ಯಕ್ರಮದ ಬಗ್ಗೆ ಹಾಜಬ್ಬರಿಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಜಾ ಭಾರತ ಕಾರ್ಯಕ್ರಮ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ, ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವ ಕಾರ್ಯಕ್ರಮ ಆಗಿದೆ. ಇದರಲ್ಲಿ ಹರೇಕಳ ಹಾಜಬ್ಬ ಅವರು ಭಾಗವಹಿಸಿದರೆ ಅವರ ವಿರುದ್ಧ ಪೌರತ್ವ ಕಾಯ್ದೆ ಪರವಾಗಿರುವ ಜನರು ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಅನ್ಸಾರ್ ಹೇಳಿದ್ದರು.

    ಜಾತ್ಯಾತೀತ- ಧರ್ಮಾತೀತ ಹಾಜಬ್ಬರು ನಾಳೆಯಿಂದ ಹಿಂದೂ ಧರ್ಮದ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಈವರೆಗೆ ಯಾವುದೇ ವಿವಾದಗಳಿಗೆ ಸಿಕ್ಕಿಕೊಳ್ಳದ ಹರೇಕಳ ಹಾಜಬ್ಬರನ್ನು ಇದೀಗ ಯಾವುದೋ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಲಾಗುತ್ತಿದೆ. ಹರೇಕಳ ಹಾಜಬ್ಬ ಅವರು ಶಿಕ್ಷಣರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಅವರ ಮೂಲಕವೇ ಸಿಎಎ ವಿರುದ್ಧ ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಕರ್ನಾಟಕ ಮುಸ್ಲಿಂ ಜಮಾತ್ ಮುಂದಾಗಿದೆ ಎಂದು ಅನ್ಸಾರ್ ಆರೋಪಿಸಿದ್ದರು. ಅಲ್ಲದೆ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆದಿತ್ತು.