Tag: ಸಿಎಎ

  • ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಸಿಎಎ ವಿರೋಧಿ ನಾಟಕ ಪ್ರದರ್ಶನ- ಎಫ್‍ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    – ಶಾಹೀನ್ ಶಾಲೆಯಲ್ಲಿ ನಾಟಕ ಪ್ರದರ್ಶನ

    ನವದೆಹಲಿ: ರಾಜಕೀಯ ಪಕ್ಷಗಳು ದೇಶದ್ರೋಹ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಆದ್ದರಿಂದ ಸೂಕ್ತ ಮಾರ್ಗಸೂಚಿಗಳನ್ನು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಬೀದರ್‍ನ ಶಾಹೀನ್ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸಲು ನಿರಾಕರಿಸಿದೆ.

    ಬೀದರ್ ನ ಶಾಲೆಯಲ್ಲಿ ಸಿಎಎ ವಿರೋಧಿ ನಾಟಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕ ವಿರುದ್ಧ ದಾಖಲಿಸಿರುವ ದೇಶದ್ರೋಹದ ಎಫ್‍ಐಆರ್ ರದ್ದುಪಡಿಸಬೇಕು. ದೇಶ ದ್ರೋಹ ಕಾಯ್ದೆಯ ದುರ್ಬಳಕೆ ಆಗುತ್ತಿರುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಅವರು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ ಖಾನ್ವಿಲ್ಕರ್ ನೇತೃತ್ವದ ದ್ವಿ ಸದಸ್ಯ ಪೀಠ, ಎಫ್‍ಐಆರ್ ರದ್ದು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಬೇಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಇದನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ದೇಶದ್ರೋಹದ ಕೇಸ್ ದಾಖಲು ಮಾಡಲು ಈಗಾಗಲೇ ನಿರ್ದೇಶನಗಳಿವೆ ಮತ್ತೆ ಅವುಗಳನ್ನು ಉಲ್ಲೇಖಿಸುವ ಅಗತ್ಯ ಇಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

    ಸಿಎಎ ವಿರೋಧಿಸಿವ ನಾಟಕವನ್ನು ವೇದಿಕೆ ಮೇಲೆ ಪ್ರದರ್ಶನ ಮಾಡಿದ ಹಿನ್ನೆಲೆ ಶಾಹೀನ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ, ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೊಬ್ಬರ ಪಾಲಕರಾದ ಅನುಜಾ ಮಿನ್ಸಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಬೀದರ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶಾಲಾ ಆಡಳಿತ ಮಂಡಳಿಯ 5 ಜನರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

  • ಮಂಗಳೂರು ಗಲಭೆ – ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ

    ಮಂಗಳೂರು ಗಲಭೆ – ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ

    ನವದೆಹಲಿ: ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದವರಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

    ಇದರೊಂದಿಗೆ 21 ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಗೊಂಡಿದೆ. ಈ ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಇದೆ ಎಂದು ರಾಜ್ಯದ ಪರ ವಾದ ಮಂಡಿಸುವ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಹೀಗೆ ವಾದ ಮಂಡಿಸುತ್ತಿದ್ದಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾ.ಗವಾಯಿ, ನ್ಯಾ.ಸೂರ್ಯಕಾಂತ್ ಅವರು ಹೈ ಕೋರ್ಟ್ ಆದೇಶಕ್ಕೆ ತಡೆ ನೀಡಿ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದರು.

    ಮಹಮ್ಮದ್ ಅಶಿಕ್, ಮಹಮ್ಮದ್ ಸುಹಾಲ್, ನಾಸಿರುದ್ದೀನ್, ಮಹಮ್ಮದ್ ಶಾಕೀರ್, ಕಲಂದರ್ ಬಾಷಾ, ಮಹಮ್ಮದ್ ಅಜರ್ ಸೇರಿದಂತೆ 21 ಆರೋಪಿಗಳಿಗೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

    ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸದ್ದಕ್ಕೆ ಇರುವ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲ 21 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಹೈ ಕೋರ್ಟ್ ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಜಾಮೀನು ಮಂಜೂರು ಮಾಡಿತ್ತು.

    ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿತ್ತು. ಮಂಗಳೂರು ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಎಫ್‍ಐಆರ್ ದಾಖಲು ಮಾಡಲು ಸಹ ಆದೇಶಿಸಿತ್ತು.

  • ಬೆಂಗಳೂರಿನಲ್ಲಿ ಗಲಭೆಗೆ ದೊಡ್ಡ ಸಂಚು – ಅಮೂಲ್ಯ ಮೂಲಕ ದಾಳ ಉದುರಿಸಿದ್ದ ಮಹಿಳೆ

    ಬೆಂಗಳೂರಿನಲ್ಲಿ ಗಲಭೆಗೆ ದೊಡ್ಡ ಸಂಚು – ಅಮೂಲ್ಯ ಮೂಲಕ ದಾಳ ಉದುರಿಸಿದ್ದ ಮಹಿಳೆ

    – ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಪ್ಲ್ಯಾನ್
    – ತನಿಖೆಯ ವೇಳೆ ಸ್ಫೋಟಕ ವಿಚಾರ ಬಯಲು
    – ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ನೋಟಿಸ್

    ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಅಮೂಲ್ಯಳ ವಿಚಾರಣೆ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಬಯಲಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಕೋಮು ಗಲಭೆ ನಡೆಸಲು ಅತಿ ದೊಡ್ಡ ಸಂಚು ರೂಪಿಸಿದ್ದ ವಿಚಾರ ಈಗ ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಅಮೂಲ್ಯ ಮೂಲಕ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬಳು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಅಮೂಲ್ಯಳ ಜೊತೆ ನಿಕಟ ಸಂಪರ್ಕದಲ್ಲಿದ್ದ ಈಕೆ ಸಿಎಎ, ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮದಲ್ಲಿ ಯಾವ ರೀತಿ ಮಾತನಾಡಬೇಕು, ಯಾವ ವಿಚಾರವನ್ನು ಪ್ರಸ್ತಾಪ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಿದ್ದಳು.

    ನಿನ್ನ ಭಾಷಣಗಳು ಈಗಾಗಲೇ ಸಾಕಷ್ಟು ಜನರನ್ನು ತಲುಪಿದೆ. ಹೀಗೆ ಮಾತನಾಡಿದರೆ ನಿನ್ನ ಮಾತಿಗೆ ಬೆಲೆ ಸಿಗುತ್ತದೆ. ವಿಡಿಯೋಗಳ ಮೂಲಕ ನೀನು ಬಹಳ ಪ್ರಸಿದ್ಧ ಭಾಷಣಕಾರ್ತಿಯಾಗಬಹುದು ಎಂದು ಆ ಮಹಿಳೆ ಅಮೂಲ್ಯಳ ಬ್ರೇನ್ ವಾಶ್ ಮಾಡಿದ್ದಳು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಈಕೆಯ ಜೊತೆ ಮತ್ತಷ್ಟು ಜನರಿದ್ದು ಈ ತಂಡಕ್ಕೆ ಅಮೂಲ್ಯ ಅಡ್ವೈಸರಿ ಕಮಿಟಿ(ಸಲಹಾ ಸಮಿತಿ) ಎಂದು ಹೆಸರನ್ನಿಟ್ಟಿದ್ದಳು. ಯಾವ ಊರಿಗೆ ಹೋದಾಗ ಏನು ಮಾತನಾಡಬೇಕು? ಏನು ಮಾತನಾಡಬಾರದು ಎನ್ನುವುದನ್ನು ಈ ಸಲಹಾ ಸಮಿತಿ ತಿಳಿಸುತ್ತಿತ್ತು.

     

    ನಾನು ಆಡಿದ ಮಾತುಗಳು ಇಷ್ಟೊಂದು ಪರಿಣಾಮ ಬೀರುತ್ತದೆ ಎಂದು ಅಮೂಲ್ಯ ಸಹ ಭಾವಿಸಿರಲಿಲ್ಲ. ಆ ಮಹಿಳೆ ತನ್ನ ಆಪ್ತ ವ್ಯಕ್ತಿ ಎಂದೇ ಅಮೂಲ್ಯ ತಿಳಿದುಕೊಂಡಿದ್ದಳು. ಆದರೆ ಈಗ ಈಕೆಯ ಷಡ್ಯಂತ್ರ ಏನು ಎನ್ನುವುದು ಅಮೂಲ್ಯಗೆ ಗೊತ್ತಾಗಿದೆ.

    ಮಹಿಳೆ ಅಮೂಲ್ಯ ಜೊತೆ ಮಾತನಾಡುವಾಗ ನಾನು ಹಿಂದೂ ಧರ್ಮದವಳು ಎಂದು ಪರಿಚಯಿಸಿಕೊಂಡಿದ್ದಳು. ಅಮೂಲ್ಯ ಹೇಳಿದ ಮಹಿಳೆ ಯಾರು? ಏನು ಮಾಡುತ್ತಿದ್ದಾಳೆ? ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ಆಕೆ ಹಿಂದೂ ಧರ್ಮದವಳು ಅಲ್ಲ ಎನ್ನುವು ವಿಚಾರ ಪೊಲೀಸರಿಗೆ ಗೊತ್ತಾಗಿದೆ.

    ಅನ್ಯಧರ್ಮದ ಈ ಮಹಿಳೆ ಅಮೂಲ್ಯಳ ಮೂಲಕ ತನ್ನ ಕೆಲಸ ಮಾಡಲು ಪ್ಲ್ಯಾನ್ ಮಾಡಿದ್ದಳು. ಈ ಮಹಿಳೆ ಬೆಂಗಳೂರಿನಲ್ಲೇ ವಾಸವಾಗಿದ್ದು ಈಗ ಆಕೆಗೆ ಉಪ್ಪಾರ ಪೇಟೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

  • ‘ಬರೀ ಮನೆಯಲ್ಲ, ಮದುವೆ ಕನಸುಗಳೂ ಸುಟ್ಟು ಹೋಗಿವೆ’

    ‘ಬರೀ ಮನೆಯಲ್ಲ, ಮದುವೆ ಕನಸುಗಳೂ ಸುಟ್ಟು ಹೋಗಿವೆ’

    ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದ ಬಳಿಕ ಕರಳು ಕಿತ್ತುವ ಕಥೆಗಳು ಒಂದೊದಾಗಿ ಕಣ್ಣ ಮುಂದೆ ಬರುತ್ತಿವೆ. ದುಷ್ಕರ್ಮಿಗಳ ಬೆಂಕಿಯಾಟಕ್ಕೆ ಬದುಕು ಸುಟ್ಟು ಹೋಗಿದೆ. ಕಂಡ ಅದೇಷ್ಟೊ ಭವಿಷ್ಯದ ಕನಸುಗಳು ಭಸ್ಮವಾಗಿವೆ.

    ಹೌದು, ದೆಹಲಿಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಬೆಂಕಿ ಹೊತ್ತುವಾಗ ಆತಂಕಕ್ಕೀಡಾಗಿ ಮನೆ ಬಿಟ್ಟಿದ್ದ ಕುಟುಂಬಗಳು ವಾಪಸ್ ಆಗುತ್ತಿವೆ. ಕನಸಿನ ಮನೆಗಳು ಸುಟ್ಟು ಕರಕಲಾಗಿದ್ದನ್ನು ಕಂಡು ಕಣ್ಣೀರಿಡುತ್ತಿದ್ದಾರೆ. ಕಜೋರಿ ಖಾಸ್‍ನ ಇಲಿಯಾಸ್ ಕುಟುಂಬದ ಕಥೆಯೂ ಇದಕ್ಕೆ ಹೊರೆತಾಗಿಲ್ಲ.

    ಇಲಿಯಾಸ್, ಕಜೋರಿ ಖಾಸ್‍ನ ನಿವಾಸಿ, ಕಳೆದ ಇಪ್ಪತ್ತು ವರ್ಷಗಳಿಂದ ವಾಸವಾಗಿರುವ ಅವರು ಬೆವರು ಹರಿಸಿ ಮನೆ ಕಟ್ಟಿಕೊಂಡಿದ್ದರು. ಕೆಳ ಅಂತಸ್ತಿನಲ್ಲಿ ಬಡಿಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ತುಂಬು ಕುಟುಂಬ ಈಗ ಬೀದಿಗೆ ಬಂದಿದೆ. ಮುಂದಿನ ತಿಂಗಳ ನಿಗದಿಯಾಗಿದ್ದ ಮಕ್ಕಳ ಮದ್ವೆಗೆ ತಂದಿದ್ದ ಎಲ್ಲಾ ವಸ್ತುಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿವೆ.

    ಇಲಿಯಾಸ್ ಅವರ ಇಬ್ಬರು ಪುತ್ರಿಯರಾದ ನಗ್ಮಾ ಮತ್ತು ಫರ್ಜಾನ್ ಮದುವೆ ಮಾರ್ಚ್ ಅಂತ್ಯಕ್ಕೆ ನಿಗದಿಯಾಗಿತ್ತು. ಮದುವೆಗೆ ಎಲ್ಲ ರೀತಿಯ ತಯಾರಿ ಅವರು ಮಾಡಿಕೊಂಡಿದ್ದರು. ಚಿನ್ನಾಭರಣ ಸೇರಿ ಸುಮಾರು 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಎರಡು ಮದುವೆಯಾಗಿ ಖರೀದಿ ಮಾಡಿದ್ದರು. ಇಡೀ ಕುಟುಂಬ ಮದುವೆ ದಿನಗಳನ್ನು ಸಂಭ್ರಮದಿಂದ ಎದುರು ನೋಡುತ್ತಿತ್ತು. ಆದರೆ ಮಂಗಳವಾರ ನಡೆದ ಘಟನೆಯಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಪ್ರಾಣ ಭೀತಿಯಲ್ಲಿ ಓಡಿ ಹೋಗಿದ್ದ ಕುಟುಂಬಗಳು ವಾಪಸ್ ಬಂದು ಮನೆಯೊಳಗೆ ತಮ್ಮ ಕನಸುಗಳು ಸುಟ್ಟಿದ್ದು ಕಂಡು ಆಕ್ರಂದಿಸುತ್ತಿದ್ದರು. ಇದನ್ನು ನೋಡುತ್ತಿದ್ದ ಎಂತವರಿಗೂ ಕರಳು ಹಿಂಡುದಂತಾಗುತ್ತಿತ್ತು.

    ಬಡಿಗೆ ಕೆಲಸ ಮಾಡುತ್ತಿದ್ದ ಹಿನ್ನೆಲೆ ಇಲಿಯಾಸ್ ಲಕ್ಷಾಂತರ ಮೌಲ್ಯದ ಕಟ್ಟಿಗೆಗಳನ್ನು ಮನೆಯ ಕೆಳ ಅಂತಸ್ತಿನಲ್ಲಿ ಸಂಗ್ರಹಿಸಿದ್ದರು. ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಕಟ್ಟಿಗೆಗಳಿಗೂ ಇದು ವ್ಯಾಪಿಸಿದ್ದು ಮೂರು ಅಂತಸ್ತಿನ ಮನೆ ಸಂಪೂರ್ಣ ಸುಟ್ಟಿದೆ. ಅಲ್ಲದೆ ಮನೆಯ ಎಲ್ಲ ದಾಖಲೆಗಳು ಕೂಡ ನಾಶವಾಗಿದೆ. ಮದುವೆ ಸಿದ್ಧತೆಯ ವಸ್ತುಗಳು ಸೇರಿ ಕೆಲಸದ ಸಾಮಗ್ರಿಗಳು, ಯಂತ್ರಗಳು ಇಡೀ ಮನೆ ಹಾನಿಯಾಗಿದ್ದು ಲಕ್ಷಾಂತರ ಮೌಲ್ಯ ಆಸ್ತಿ ಪಾಸ್ತಿ ನಷ್ಟವಾಗಿದೆ. ಘಟನೆಯಿಂದ ಆಘಾತಕ್ಕೆ ಈ ಕುಟುಂಬ ಒಳಗಾಗಿದ್ದು ಮದುವೆ ನಿಂತು ಹೋಗುವ ಭೀತಿಯಲ್ಲಿದೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ನಗ್ಮಾ, ಮದುವೆ ಮಾಡಿಕೊಂಡ ಸಿದ್ಧತೆಗಳು ಎಲ್ಲವೂ ನಾಶವಾಗಿದೆ. ಟೇಲರಿಂಗ್ ಮಾಡಿಕೊಂಡಿದ್ದೆ ಅದೇಲ್ಲವೂ ಹೊಯ್ತು. ಕಷ್ಟ ಪಟ್ಟ ಪಡೆದ ಡಿಗ್ರಿ ಸರ್ಟಿಫಿಕೇಟ್‍ಗಳು ಸುಟ್ಟು ಹೋಗಿವೆ ಎಂದು ನೋವನ್ನು ಹಂಚಿಕೊಂಡರು. ಏಕಾಏಕಿ ಬಂದ ಗುಂಪೊಂದು ಪೆಟ್ರೋಲ್ ಬಾಂಬ್ ಮೂಲಕ ದಾಳಿ ಮಾಡಿತ್ತು. ಮನೆಯಿಂದ ಓಡಿ ಪ್ರಾಣ ಉಳಿಸಿಕೊಂಡೆವು. ಮಕ್ಕಳ ಮದುವೆ ನಿಗದಿ ಮಾಡಿದೆ. ಮದುವೆ ನಿಲ್ಲುವ ಭೀತಿ ಇದೆ ತಮ್ಮ ಆತಂಕವನ್ನು ಇಲಿಯಾಸ್ ಕುಟುಂಬಸ್ಥರು ವ್ಯಕ್ತಪಡಿಸಿದರು.

  • ಸಿಎಎ, ಎನ್‌ಆರ್‌ಸಿ ವಿರೋಧಿಸಿ ಅಹೋರಾತ್ರಿ ಧರಣಿ – ಮಗು ಹಿಡಿದು ಕುಳಿತ ಸೌಮ್ಯ ರೆಡ್ಡಿ

    ಸಿಎಎ, ಎನ್‌ಆರ್‌ಸಿ ವಿರೋಧಿಸಿ ಅಹೋರಾತ್ರಿ ಧರಣಿ – ಮಗು ಹಿಡಿದು ಕುಳಿತ ಸೌಮ್ಯ ರೆಡ್ಡಿ

    ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಅದರಲ್ಲೂ ದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಯೂ ಹಿಂಸಾತ್ಮಕ ರೂಪ ಪಡೆದು ಅನೇಕ ಮಂದಿಯನ್ನು ಬಲಿಪಡೆದಿದೆ.

    ರಾಷ್ಟ್ರ ರಾಜಧಾನಿ ಮಾತ್ರವಲ್ಲ, ರಾಜ್ಯ ರಾಜಧಾನಿಯಲ್ಲೂ ಒಂದಿಲ್ಲೊಂದು ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲೂ ಶಾಹಿನ್ ಬಾಗ್ ರೀತಿಯಲ್ಲಿ ಅಹೋರಾತ್ರಿ ಧರಣಿ, ಪ್ರತಿಭಟನೆ ಕಳೆದ 20 ದಿನಗಳಿಂದ ನಡೆಯುತ್ತಿದೆ.

    ಹೌದು ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರೋ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ಪ್ರತಿದಿನ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಮತ್ತೊಂದು ಶಾಹಿನ್ ಬಾಗ್ ಎಂದು ಹೆಸರು ಕೊಟ್ಟಿದ್ದು, ಬಿಲಾಲ್ ಬಾಗ್ ಬೆಂಗಳೂರು ಎಂಬ ಹೆಸರಿನಡಿಯಲ್ಲಿ ಸೇವ್ ಇಂಡಿಯಾ, ಸಂವಿಧಾನವನ್ನ ರಕ್ಷಸಿ ಎಂದು ಬ್ಯಾನರ್ ಹಾಕಿಕೊಂಡು ನೂರಾರು ಮಹಿಳೆಯರು ಮಕ್ಕಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

    ಇವರ ಅಹೋರಾತ್ರಿ ಧರಣಿಗೆ ಬಾಲಿವುಡ್ ನಟ ನಸೀರುದ್ದೀನ್ ಶಾ, ಶಾಸಕಿ ಸೌಮ್ಯ ರೆಡ್ಡಿ ಸಹ ಸಾಥ್ ನೀಡಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆಯನ್ನ ಹಿಂಪಡೆಯುವವರೆಗೆ ಧರಣಿ ಮಾಡಲು ಇಲ್ಲಿನ ಮಹಿಳೆಯರು ಹಾಗೂ ಸಾರ್ವಜನಿಕರು ನಿರ್ಧಾರ ಮಾಡಿದ್ದಾರೆ.

  • ದೆಹಲಿ ಹಿಂಸಾಚಾರ – ಗುಪ್ತಚರ ಇಲಾಖೆ ಅಧಿಕಾರಿಯ ಶವ ಮೋರಿಯಲ್ಲಿ ಪತ್ತೆ

    ದೆಹಲಿ ಹಿಂಸಾಚಾರ – ಗುಪ್ತಚರ ಇಲಾಖೆ ಅಧಿಕಾರಿಯ ಶವ ಮೋರಿಯಲ್ಲಿ ಪತ್ತೆ

    ನವದೆಹಲಿ: ಸಿಎಎ ಹಿಂಸಾಚಾರ ತಾರಕಕ್ಕೇರಿರುವಂತೆಯೇ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ 26 ವರ್ಷದ ಅಂಕಿತ್ ಶರ್ಮಾ ಶವ ನಿಗೂಢ ರೀತಿಯಲ್ಲಿ ಚಾಂದ್‍ಬಾಗ್ ಪ್ರದೇಶದಲ್ಲಿ ಪತ್ತೆಯಾಗಿದೆ.

    ಅಂಕಿತ್ ಶರ್ಮಾ 2017ನೇ ಬ್ಯಾಚ್‍ನ ಅಧಿಕಾರಿಯಾಗಿದ್ದು, ಪ್ರೊಬೇಷನ್‍ನಲ್ಲಿದ್ದರು. ಚಾಣಕ್ಯಪುರಿಯಲ್ಲಿ ಟ್ರೈನೀ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಶಾಂತಿ ಪಾಲನೆಗೆ ದೆಹಲಿ ರಸ್ತೆಗಿಳಿದ ಜೇಮ್ಸ್ ಬಾಂಡ್ ದೋವಲ್

    ಚಾಂದ್‍ಬಾಗ್‍ನಲ್ಲೇ ಅಂಕಿತ್ ಶರ್ಮಾ ನಿವಾಸವಿದ್ದು, ಅಲ್ಲಿಯೇ ಮೋರಿಯಲ್ಲಿ ಶವ ಸಿಕ್ಕಿದೆ. ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಕಲ್ಲುತೂರಾಟದಲ್ಲಿ ಅಂಕಿತ್ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಅಂಕಿತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇನ್ನು ಘರ್ಷಣೆಯಲ್ಲಿ ಮೃತಪಟ್ಟ ಗೋಕುಲ್‍ಪುರಿಯ ಹೆಡ್ ಕಾನ್ಸ್‌ಟೇಬಲ್ ರತನ್‍ಲಾಲ್ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ. ಗುಂಡೇಟಿನಿಂದಲೇ ರತನ್‍ಲಾಲ್ ಮೃತಪಟ್ಟಿದ್ದು, ಯಾವುದೇ ಕಲ್ಲೇಟಿನಿಂದ ಸತ್ತಿಲ್ಲ ಅಂತ ವರದಿ ಹೇಳಿದೆ.

    ದೆಹಲಿ ಪೊಲೀಸರು ಅಂತಿಮ ನಮನ ಸಲ್ಲಿಸಿದ್ದು, ಹುಟ್ಟೂರು ರಾಜಸ್ಥಾನಕ್ಕೆ ಪಾಥೀವ ಶರೀರ ಕೊಂಡೊಯ್ಯಲಾಗಿದೆ. ಆದ್ರೆ, ದೆಹಲಿ ಸರ್ಕಾರ ಹುತಾತ್ಮ ಅಂತ ಘೋಷಣೆ ಮಾಡುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಅಂತ ಕುಟುಂಬಸ್ಥರು ಪಟ್ಟು ಹಿಡಿದಿದ್ದರು.

    ಸಂಜೆ ಹೊತ್ತಿಗೆ ರತನ್‍ಲಾಲ್ ಹುತಾತ್ಮ ಅಂತ ಘೋಷಿಸಿದ ಸಿಎಂ ಕೇಜ್ರಿವಾಲ್, 1 ಕೋಟಿ ಪರಿಹಾರದ ಜೊತೆಗೆ ಓರ್ವ ಸದಸ್ಯರಿಗೆ ಉದ್ಯೋಗದ ಭರವಸೆ ನೀಡಿದ್ರು. ಹಿಂಸಾಚಾರ ಸಾಮಾನ್ಯರಿಂದ ನಡೆದಿರೋದಲ್ಲ ಎಂದರು.

  • ನಾನೇನು ಕ್ರೈಂ ಮಾಡಿದ್ದೀನಾ- ದೇಶದ್ರೋಹಿ ಅಮೂಲ್ಯ ಪೊಲೀಸರಿಗೆ ಮರುಪ್ರಶ್ನೆ

    ನಾನೇನು ಕ್ರೈಂ ಮಾಡಿದ್ದೀನಾ- ದೇಶದ್ರೋಹಿ ಅಮೂಲ್ಯ ಪೊಲೀಸರಿಗೆ ಮರುಪ್ರಶ್ನೆ

    ಬೆಂಗಳೂರು: ನಾನೇನು ಕ್ರೈಂ ಮಾಡಿದ್ದೀನಾ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ದೇಶದ್ರೋಹಿ ಅಮೂಲ್ಯಾ ಲಿಯೋನಾ ಪೊಲೀಸರಿಗೆ ಮರುಪ್ರಶ್ನೆ ಮಾಡಿದ್ದಾಳೆ.

    ಪಾಕಿಸ್ತಾನ ಪರ ಘೋಷಣೆ ಕೂಗಿ ಪೊಲೀಸ್ ವಶದಲ್ಲಿರುವ ಅಮೂಲ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬುಧವಾರ ಬೆಳಗ್ಗೆಯಿಂದ ಆರೋಪಿ ಅಮೂಲ್ಯಾಳನ್ನು ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ಪೊಲೀಸರಿಗೆ ಮರುಪ್ರಶ್ನೆ ಮಾಡುತ್ತಿದ್ದು, ನಾನೇನು ಕ್ರೈಂ ಮಾಡಿದ್ದೀನಾ ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ಉತ್ತರ ನೀಡಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

    ಅಷ್ಟೇ ಅಲ್ಲ ಆರೋಪಿ ಅಮೂಲ್ಯ ಪೊಲೀಸ್ ಠಾಣೆಯನ್ನು ಅರಮನೆಯನ್ನಾಗಿ ಮಾಡಿಕೊಂಡಿದ್ದು, ಬೆಳಗ್ಗೆ ಎಂಟು ಗಂಟೆಗೆ ಎದ್ದಿದ್ದಾಳೆ. ಸದ್ಯ ಆರೋಪಿ ಅಮೂಲ್ಯ ಲಿಯೋನಾಳನ್ನು ವಿಚಾರಣೆ ನಡೆಸಲಾಗುತ್ತಿದೆ.

    ಫ್ರೀಡಂ ಪಾರ್ಕಿನಲ್ಲಿ ನಡೆದ ಸಿಎಎ, ಎನ್‍ಆರ್ ಸಿ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿ ದೇಶದ್ರೋಹದ ಆರೋಪದಡಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪರಪ್ಪನ ಅಗ್ರಹಾರ ಸೇರಿದ್ದಳು. ಅಮೂಲ್ಯ ಲಿಯೋನಾಳನ್ನು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದ್ದು, ಹೀಗಾಗಿ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಐದು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಅಲ್ಲದೆ ಆರೋಪಿ ಅಮೂಲ್ಯಾ ವಾಸವಿದ್ದ ಪಿ.ಜಿ.ಯನ್ನು ಪೊಲೀಸರು ಮಂಗಳವಾರ ರಾತ್ರಿ ಸ್ಪಾಟ್ ಮಹಜರು ಮಾಡಿದ್ದಾರೆ.

  • ದೆಹಲಿಯಲ್ಲಿ ಹಿಂಸಾಚಾರ ಮೃತರ ಸಂಖ್ಯೆ 18ಕ್ಕೆ ಏರಿಕೆ – ತಡರಾತ್ರಿ ವಿಚಾರಣೆ ನಡೆಸಿದ ಹೈಕೋರ್ಟ್ ರಕ್ಷಣೆ ನೀಡಲು ಆದೇಶ

    ದೆಹಲಿಯಲ್ಲಿ ಹಿಂಸಾಚಾರ ಮೃತರ ಸಂಖ್ಯೆ 18ಕ್ಕೆ ಏರಿಕೆ – ತಡರಾತ್ರಿ ವಿಚಾರಣೆ ನಡೆಸಿದ ಹೈಕೋರ್ಟ್ ರಕ್ಷಣೆ ನೀಡಲು ಆದೇಶ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಇಂದು ನಾಲ್ವರು ಬಲಿಯಾಗಿದ್ದು, ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಸಂತ್ರಸ್ತರಿಗೆ ನೆರವು ನೀಡುತ್ತಿರುವ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಮೂಲಗಳಿಂದ ಮಾಹಿತಿ ನೀಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

    ಈಶಾನ್ಯ ದೆಹಲಿಯ ಹತ್ತು ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜಫರಾಬಾದ್, ಗೋಕುಲ್‍ಪುರಿ, ಮೌಜ್‍ಪುರ್ ಸೀಲಂಪುರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೆಹಲಿ ಪೊಲೀಸ್ ಕಂಡಲ್ಲಿ ಗುಂಡು ಹಾರಿಸುವ ಆದೇಶ ನೀಡಿದೆ.

    ಪರಿಸ್ಥಿತಿ ನಿಯಂತ್ರಣಕ್ಕೆ ಬಂದ್ದಂತೆ ಕಂಡು ಬಂದರೂ ಈಶಾನ್ಯ ದೆಹಲಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಚ್ಚೇರಿಕೆ ಕ್ರಮವಾಗಿ ಹೆಚ್ಚುವರಿ ದೆಹಲಿ ಪೊಲೀಸ್ ಮತ್ತು ಶಸ್ತ್ರ ಸಜ್ಜಿತ ಮೀಸಲು ಪಡೆಗಳನ್ನು ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು ಸಿಬಿಎಸ್‍ಸಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

    ದೆಹಲಿ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಮಂಗಳವಾರ ಮಧ್ಯರಾತ್ರಿ ಹೈಕೋರ್ಟ್ ವಿಚಾರಣೆ ನಡೆಸಿ, ಜನರಿಗೆ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಗಲಭೆಯಲ್ಲಿ ಗಾಯಗೊಂಡವರಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಿ ಜನರಿಗೆ ರಕ್ಷಣೆ ನೀಡುವಂತೆ ಆದೇಶಿಸಿದೆ.

  • ಅಮೂಲ್ಯಳನ್ನು ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು- ವಿಮಾನ ಟಿಕೆಟ್ ರದ್ದು

    ಅಮೂಲ್ಯಳನ್ನು ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು- ವಿಮಾನ ಟಿಕೆಟ್ ರದ್ದು

    ಮಂಗಳೂರು: ನಗರದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಫೆಬ್ರವರಿ 25ರಂದು ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಪ್ರಮುಖ ಭಾಷಣಕಾರಳಾಗಿ ಭಾಗವಹಿಸಬೇಕಿದ್ದ ಅಮೂಲ್ಯ ಲಿಯೋನ ಹೆಸರನ್ನು ಕೈಬಿಡಲಾಗಿದೆ. ಅಮೂಲ್ಯಳಿಗೆ ಕಾಯ್ದಿರಿಸಿದ್ದ ವಿಮಾನ ಟಿಕೆಟ್ ಕೂಡ ರದ್ದು ಪಡಿಸಲಾಗಿದೆ ಎಂದು ಪ್ರತಿಭಟನೆಯ ಉಸ್ತುವಾರಿ ವಹಿಸಿಕೊಂಡ ಮಾಜಿ ಮೇಯರ್ ಅಶ್ರಫ್ ಅವರು ತಿಳಿಸಿದ್ದಾರೆ.

    ಮುಸ್ಲಿಂ ಐಕ್ಯತಾ ವೇದಿಕೆಯ ನೇತೃತ್ವದಲ್ಲಿ ಮಂಗಳೂರಿನ ಕುದ್ರೋಳಿ ಟಿಪ್ಪು ಸುಲ್ತಾನ್ ಗಾರ್ಡನ್‍ನಲ್ಲಿ ಈ ಪ್ರತಿಭಟನೆ ನಡೆಯಲಿದೆ. ಪ್ರತಿಭಟನಾ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಪರಪ್ಪನ ಅಗ್ರಹಾರ ಸೇರಿದ ಅಮೂಲ್ಯ ಪ್ರಮುಖ ಭಾಷಣ ಮಾಡಬೇಕಿತ್ತು. ಅದಕ್ಕಾಗಿ ಆಕೆಗೆ ಬೆಂಗಳೂರಿನಿಂದ ಮಂಗಳೂರಿಗೆ ಬರಲು ವಿಮಾನದ ಟಿಕೆಟ್ ಕೂಡ ಬುಕ್ ಮಾಡಿದ್ದೆವು ಎಂದು ಅಶ್ರಫ್ ಹೇಳಿದರು.

    ಅಮೂಲ್ಯ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶ ದ್ರೋಹ ಎಸಗಿದ್ದಾಳೆ. ಈ ಹಿನ್ನೆಲೆಯಲ್ಲಿ ಅಮೂಲ್ಯ ಹೆಸರು ನಮೂದಿಸಿದ ಮುದ್ರಿಸಿದ್ದ ಪ್ರತಿಭಟನೆಯ ಆಮಂತ್ರಣ ಪತ್ರಿಕೆಯನ್ನು ಹಂಚದೆ, ಆಕೆಯ ಹೆಸರು ಇಲ್ಲದ ಹೊಸ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ. ಜೊತೆಗೆ ವಿಮಾನ ಟಿಕೆಟ್ ಕೂಡ ರದ್ದು ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

  • ಶಾಹಿನ್‍ಬಾಗ್ ಮಾದರಿಯಲ್ಲಿಯೇ ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪೌರತ್ವ ಸತ್ಯಾಗ್ರಹ

    ಶಾಹಿನ್‍ಬಾಗ್ ಮಾದರಿಯಲ್ಲಿಯೇ ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪೌರತ್ವ ಸತ್ಯಾಗ್ರಹ

    ಉಡುಪಿ: ನಗರದಲ್ಲಿ ಶಾಹಿನ್‍ಬಾಗ್ ಮಾದರಿ ಸತ್ಯಾಗ್ರಹಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳ ನಡೆಯುತ್ತಿದ್ದು, ಉಡುಪಿ ಮಸೀದಿ ರಸ್ತೆಯಲ್ಲಿ ನಿರಂತರ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

    ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಶಾಹಿನ್‍ಬಾಗ್ ಎಂದು ಹೆಸರಿಡಲಾಗಿದೆ. ಶಾಹಿನ್‍ಬಾಗ್ ಸಂಯೋಜನಾ ಸಮಿತಿ ಸತ್ಯಾಗ್ರಹವನ್ನು ಆಯೋಜನೆ ಮಾಡಿದೆ. ಸಂವಿಧಾನ ಸಂರಕ್ಷಕಾ ಸಮಿತಿ ಬೆಂಬಲ ನೀಡಿದೆ. ಇಂದು ಸಂಜೆ 5.30 ಸುಮಾರಿಗೆ ಸತ್ಯಾಗ್ರಹಕ್ಕೆ ಚಾಲನೆ ಸಿಗಲಿದೆ.

    ಮಸೀದಿ ರಸ್ತೆಯ ಖಾಸಗಿ ಜಮೀನಿನಲ್ಲಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡಲಾಗಿದ್ದು, ತಯಾರಿ ನಡೆಯುತ್ತಿದೆ. ಸಂವಿಧಾನ ಹಾಗು ಪೌರತ್ವ ರಕ್ಷಣೆ ಉದ್ದೇಶ ಇಟ್ಟುಕೊಂಡು ಸತ್ಯಾಗ್ರಹಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೂರು ಪಾಳಿಯಲ್ಲಿ ಹಲವಾರು ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.