Tag: ಸಿಎಎ

  • ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿರೋ ನೋಟಿಸ್‌ ಹಿಂತೆಗೆದುಕೊಳ್ಳಿ – ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

    ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿರೋ ನೋಟಿಸ್‌ ಹಿಂತೆಗೆದುಕೊಳ್ಳಿ – ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ನಾಶಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

    ಸಾರ್ವಜನಿಕ ಆಸ್ತಿ ನಾಶದ ನಷ್ಟ ವಸೂಲಾತಿಗಾಗಿ ಪ್ರತಿಭಟನಾಕಾರರಿಗೆ ನೀಡಿರುವ ನೋಟಿಸ್‌ನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು. ಇಲ್ಲವೇ ನಾವೇ ರದ್ದುಗೊಳಿಸುತ್ತೇವೆ ಎಂದು ಯೋಗಿ ನೇತೃತ್ವದ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಹಿಜಬ್‌ ನಿಷೇಧ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ: ಅಮೆರಿಕ

    ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಸೂರ್ಯ ಕಾಂತ ಅವರಿದ್ದ ನ್ಯಾಯಪೀಠ, ವಸೂಲಾತಿಗೆ ಸಂಬಂಧಿಸಿದಂತೆ ನೀಡಿರುವ ನೋಟಿಸ್‌ ಅನ್ನು ಸರ್ಕಾರ ಹಿಂತೆಗೆದುಕೊಳ್ಳಲು ಕೊನೆಯ ಅವಕಾಶ ನೀಡಲಾಗಿದೆ. ಇಲ್ಲವಾದಲ್ಲಿ ಕಾನೂನು ಉಲ್ಲಂಘನೆ ಎಂದು ನಾವೇ ರದ್ದುಗೊಳಿಸುತ್ತೇವೆ ಎಂದು ತಿಳಿಸಿದೆ.

    ಉತ್ತರ ಪ್ರದೇಶ ಸರ್ಕಾರವು ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ನಡೆಸುವಲ್ಲಿ ಸ್ವತಃ ದೂರುದಾರ, ತೀರ್ಪುಗಾರ ಮತ್ತು ಪ್ರಾಸಿಕ್ಯೂಟರ್‌ನಂತೆ ವರ್ತಿಸಿದೆ ಎಂದು ಪೀಠವು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಜೈಪುರಕ್ಕೆ ಕಾಲಿಟ್ಟ ಹಿಜಬ್ ವಿವಾದ – ಬುರ್ಕಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋ ಎಂಟ್ರಿ ಎಂದ ಕಾಲೇಜ್

    ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ತಿಗಳಿಗೆ ಉಂಟಾದ ಹಾನಿಯನ್ನು ವಸೂಲಿ ಮಾಡಲು ಉತ್ತರ ಪ್ರದೇಶ ಸರ್ಕಾರವು ಹೊರಡಿಸಿದ ವಸೂಲಾತಿ ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

    ಉತ್ತರ ಪ್ರದೇಶದಲ್ಲಿ ಸಿಎಎ-ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ನ್ಯಾಯಾಂಗ ತನಿಖೆಯನ್ನು ಸ್ಥಾಪಿಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಪರ್ವೇಜ್‌ ಆರಿಫ್‌ ಟಿಟು ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಬ್ಲಿಕ್ ಟಿವಿಯ ತೇರು ʼದಶʼರಥ

    ಯುಪಿ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಗರಿಮಾ ಪ್ರಸಾದ್‌ ಅವರು, ರಾಜ್ಯದಲ್ಲಿ 833 ಗಲಭೆಕೋರರ ವಿರುದ್ಧ 106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 274 ವಸೂಲಾತಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

  • 20 ತಿಂಗಳಾದ್ರೂ ಜಾರಿಗೆ ಬರದ ಸಿಎಎ – ಇನ್ನೂ 6 ತಿಂಗಳು ಸಮಯ ಕೇಳಿದ ಕೇಂದ್ರ

    20 ತಿಂಗಳಾದ್ರೂ ಜಾರಿಗೆ ಬರದ ಸಿಎಎ – ಇನ್ನೂ 6 ತಿಂಗಳು ಸಮಯ ಕೇಳಿದ ಕೇಂದ್ರ

    ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೆ ತರಲು ಇನ್ನೂ ಆರು ತಿಂಗಳ ಸಮಯಾವಕಾಶ ಕೇಳಿದೆ.

    ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಶ್ನೆ ಕೇಳಿದ್ದರು. ಕೇಂದ್ರ ಸರ್ಕಾರ ಸಿಎಎ ನಿಯಮಗಳನ್ನು ನೋಟಿಫೈ ಮಾಡಲು ದಿನಾಂಕವನ್ನು ಅಂತಿಮಗೊಳಿಸಿದೆಯೇ? ಒಂದು ನಿಗದಿಯಾಗಿದ್ರೆ ದಿನಾಂಕ ತಿಳಿಸಿ? ಇಲ್ಲ ಅಂದ್ರೆ ಯಾಕೆ ಎಂದು ಪ್ರಶ್ನೆ ಮಾಡಿದ್ದರು.

    ಗೌರವ್ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಸಚಿವಾಲಯ, ಡಿಸೆಂಬರ್ 12, 2019ರಂದು ಸಿಎಎ ನೋಟಿಫೈ ಮಾಡಲಾಗಿತ್ತು. 2020ರಲ್ಲಿ ಸಿಎಎ ಕಾನೂನಿನ ರೂಪ ಪಡೆದುಕೊಂಡಿತ್ತು. ಆದ್ರೆ ಲೋಕಸಭೆ ಮತ್ತು ರಾಜ್ಯಸಭೆಯ ಸಮಿತಿ ಈ ಕಾನೂನಿನ ನಿಯಮಗಳನ್ನು ಸಿದ್ಧಪಡಿಸಲು ಜನವರಿ 2022ರವರೆಗೆ ಸಮಯ ಕೇಳಿದೆ ಎಂದು ಉತ್ತರ ನೀಡಿದೆ.

    ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಬರುವ ಹಿಂದೂ, ಸಿಖ್, ಜೈನ್, ಕ್ರೈಸ್ತ ಮತ್ತು ಬೌದ್ಧ ಸಮುದಾಯದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಇದನ್ನೂ ಓದಿ: ಸಿಎಎ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಶೋಭಾ ಕರಂದ್ಲಾಜೆ

    ಕೇಂದ್ರ ಸರ್ಕಾರದ ಈ ಕಾನೂನು ವಿರೋಧಿಸಿ ದೇಶದ ಹಲವೆಡೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು ಜೊತೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಲೋಕಸಭೆಯಲ್ಲಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸರ್ಕಾರ 2020ರಲ್ಲಿ ದೆಹಲಿ ಪೊಲೀಸರು ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ) ಅಡಿ 9 ಪ್ರಕರಣ ದಾಖಲಿಸಿದ್ದು, 34 ಜನರನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಸಿಎಎ ಕಾಯ್ದೆ ಭಾರತೀಯರಿಗೆ ಸಮಸ್ಯೆಯೆಂದು ಸಾಬೀತು ಪಡಿಸಿದ್ರೆ 1 ಕೋಟಿ ಬಹುಮಾನ

  • ಅಸ್ಸಾಂನಲ್ಲಿ ಇಂದು ಮೊದಲ ಹಂತದ ಚುನಾವಣೆ – ಕಾಂಗ್ರೆಸ್, ಬಿಜೆಪಿ ನಡುವೆ ಸಮಬಲದ ಹೋರಾಟ

    ಅಸ್ಸಾಂನಲ್ಲಿ ಇಂದು ಮೊದಲ ಹಂತದ ಚುನಾವಣೆ – ಕಾಂಗ್ರೆಸ್, ಬಿಜೆಪಿ ನಡುವೆ ಸಮಬಲದ ಹೋರಾಟ

    ನವದೆಹಲಿ: ಪಂಚ ರಾಜ್ಯಗಳ ಪೈಕಿ ಇಂದು ಅಸ್ಸಾಂ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಅಸ್ಸಾಂನ 12 ಜಿಲ್ಲೆಗಳ 47 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಮೇಲ್ ಅಸ್ಸಾಂ, ಉತ್ತರ ಅಸ್ಸಾಂ ಪ್ರದೇಶದ 11 ಜಿಲ್ಲೆಗಳಿಂದ 42 ಕ್ಷೇತ್ರಗಳು ಹಾಗೂ ಮಧ್ಯ ಅಸ್ಸಾಂನ ನಾಗನ್ ಜಿಲ್ಲೆಯ 5 ಕ್ಷೇತ್ರಗಳು ಮೊದಲ ಹಂತದ ಮತದಾನದಲ್ಲಿ ಒಳಗೊಂಡಿದೆ.

    47 ಕ್ಷೇತ್ರಗಳ ಪೈಕಿ 264 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಮೊದಲ ಹಂತದಲ್ಲಿ 11,537 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು 40,77,210 ಪುರುಷರು, 40,32,481 ಮಹಿಳೆಯರು ಸೇರಿದಂತೆ ಒಟ್ಟು 81,09,815 ಮತದಾರರಿಂದ ಮತ ಚಲಾವಣೆ ಮಾಡಲಿದ್ದಾರೆ.

    ಸದ್ಯ ಚುನಾವಣೆ ನಡೆಯುತ್ತಿರುವ 47 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. 2016ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 35 ಸ್ಥಾನಗಳ ಮುನ್ನಡೆ ಪಡೆದಿತ್ತು. ಈಬಾರಿಯೂ ಇದೇ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ.

    ಕಾಂಗ್ರೆಸ್ ಮಹಾಮೈತ್ರಿ – ಇಕ್ಕಟ್ಟಿನಲ್ಲಿ ಬಿಜೆಪಿ
    ಇತ್ತ ಕಾಂಗ್ರೆಸ್ ಗೆಲುವಿಗಾಗಿ ಅಸ್ಸಾಂನಲ್ಲಿ ಪ್ರಾದೇಶಿಕ ಪಕ್ಷಗಳಾದ ಬೋಡೋ ಪೀಪಲ್ಸ್ ಫ್ರೆಂಟ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರೆಂಟ್ ಜೊತೆಗೆ ಮಹಾಮೈತ್ರಿ ಮಾಡಿಕೊಂಡಿದೆ.

    ಬೋಡೋ ಬುಡಕಟ್ಟು ಸಮುದಾಯದ ಜನರಿಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಯೊಂದಿಗೆ ಹುಟ್ಟಿಕೊಂಡ ಬೋಡೋ ಪೀಪಲ್ಸ್ ಫ್ರೆಂಟ್, ಕೊಖ್ರಾಜರ್, ಚಿರಾಂಗ್, ಉದಲ್ ಗುರಿ ಮತ್ತು ಬಕ್ಸಾ ಪ್ರದೇಶಗಳಲ್ಲಿ ಬಲಿಷ್ಠವಾಗಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ಬಿಪಿಎಫ್ ಈ ಬಾರಿಯೂ ಬಿಜೆಪಿಗೆ ಮಕಾಡೆ ಮಲಗಿಸುವ ಶಪಥ ಮಾಡಿದೆ.

    ಮೌಲಾನಾ ಬದ್ರುದ್ದಿನ್ ಅಜ್ಮಲ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರೆಂಟ್ ಈ ಬಾರಿ ಮುಸ್ಲಿಂ ಮತಗಳ ಕ್ರೋಡಿಕರಣಕ್ಕೆ ಮುಂದಾಗಿದೆ. ಈ ಪಕ್ಷ ಸಿಎಎ, ಎನ್‍ಆರ್‍ಸಿ ವಿರೋಧಿ ಮತಗಳನ್ನು ಸೆಳೆಯುವ ಸಾಧ್ಯತೆಗಳಿದ್ದು ಕಾಂಗ್ರೆಸ್ ಗೆ ಇದು ಲಾಭವಾಗುವ ನಿರೀಕ್ಷೆಗಳಿವೆ. ಇವೆರಡು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‍ಗೆ ಬೆಂಬಲಿಸಿರುವ ಹಿನ್ನಲೆ ಬಿಜೆಪಿಗೆ ಹಿನ್ನಡೆಯಾಗಲೂಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    ಬಿಜೆಪಿಗೆ ಡ್ಯಾಮೇಜ್ ಮಾಡಲಿದೆ ತೃತೀಯ ದಳ
    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಖಿಲ್ ಗೋಗಯ್ ಮತ್ತು ಯುವ ನಾಯಕ ಲುರಿಂ ಜ್ಯೋತಿ ತೃತಿಯ ದಳದ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಸಿಎಎ ಹೋರಾಟದಲ್ಲಿ ಜೈಲು ಸೇರಿರುವ ಅಖಿಲ್ ಗೋಗಯ್ ಜೈಲಿನಿಂದಲೇ ಚುನಾವಣೆ ಸ್ಪರ್ಧಿಸಿದ್ದಾರೆ. ಇವರ ಪರ ತಾಯಿ ಪ್ರಚಾರ ನಡೆಸುತ್ತಿದ್ದು ಅಖೀಲ್ ಜೈಲಿನಿಂದಲೇ ಬಿಜೆಪಿ ಸೋಲಿಸುವ ಅಭ್ಯರ್ಥಿಗೆ ಮತ ನೀಡಿ ಅಸ್ಸಾಂ ಉಳಿಸಿ ಎಂದು ಪತ್ರ ಬರೆದಿದ್ದಾರೆ

    ಈ ತೃತೀಯ ದಳ ಬಿಜೆಪಿಗೆ ಡ್ಯಾಮೇಜ್ ಮಾಡಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ ಹೀಗಾಗಿ ಈ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆಗೆ ಒಳ ಮೈತ್ರಿ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ತನ್ನ ಐದು ವರ್ಷಗಳ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು, ಅನೇಕ ಸವಾಲುಗಳ ನಡುವೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದೆ.

    ಶಬ್ಬೀರ್ ನಿಡಗುಂದಿ

  • 2020ರ ಪ್ರಮುಖ 20 ಘಟನಾವಳಿಗಳ ಝಲಕ್

    2020ರ ಪ್ರಮುಖ 20 ಘಟನಾವಳಿಗಳ ಝಲಕ್

    ರಾಮಮಂದಿರ ಶಂಕು ಸ್ಥಾಪನೆಯ ಧಾರ್ಮಿಕ ಸಂಭ್ರಮದಿಂದ ಹಿಡಿದು ಕೊರೊನಾ ನಡುವೆ ಈ 2020ಕ್ಕೆ ಅಂತ್ಯವಾಗ್ತಿದೆ. ಹಿಂದೆಂದೂ ಕಾಣದ ಕಷ್ಟಗಳನ್ನ ಭಾರತ ಕಂಡಿದೆ. ಲಕ್ಷ ಲಕ್ಷ ಕಾರ್ಮಿಕರು ಸಾವಿರಾರು ಕಿಲೋ ಮೀಟರ್ ನಡೆದ ಕಣ್ಣೀರು ಕಥೆಗಳು ಇಂದು ನಮ್ಮನ್ನ ಭಾವುಕರನ್ನಾಗಿಸುತ್ತೆ. ನೋವು, ಕಷ್ಟ, ಸಮಸೆಗಳನ್ನೇ ಈ 2020 ಹೊತ್ತು ತಂದಿತ್ತು. ಈ ವರ್ಷದ ಒಂದೊಂದು ದಿನ ಪ್ರತಿಯೊಬ್ಬರಿಗೂ ಒಂದೊಂದು ಪಾಠವನ್ನ ಕಲಿಸಿವೆ. ಈ ವರ್ಷ ನಡೆದ ಪ್ರಮುಖ 20 ಘಟನಾವಳಿಗಳು ಇಲ್ಲಿವೆ.

    1. ಸಿಎಎ ಮತ್ತು ಎನ್‍ಆರ್ ಸಿ
    2020 ಸಿಎಎ ಮತ್ತು ಎನ್‍ಆರ್ ಸಿ ವಿರುದ್ಧದ ಪ್ರತಿಭಟನೆಯೊಂದಿಗೆ ಆರಂಭವಾಯ್ತು. ಫೆಬ್ರವರಿ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡ ಈ ಹೋರಾಟ ಹಲವು ದೊಂಬಿ, ಗಲಾಟೆ, ರಾಜಕೀಯ ಪಕ್ಷಗಳ ಕೆಸರರಾಚಾಟಕ್ಕೆ ನಾಂದಿಯಾಯ್ತು. ಫೆಬ್ರವರಿ 23ರಿಂದ 29ರವರೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಘರ್ಷಣೆಯಲ್ಲಿ 53 ಜನ ಪ್ರಾಣ ಕಳೆದುಕೊಂಡರು. ಎಷ್ಟೋ ಮನೆ, ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಧಗ ಧಗಿಸಿದವು. ಇನ್ನು ಶಾಹೀನಾಭಾಗ್ ನಲ್ಲಿ ಸೇರಿದ ಮಹಿಳೆಯರು ರಸ್ತೆ ತಡೆ ನಡೆಸಿ ಸಿಎಎ ಮತ್ತು ಎನ್‍ಆರ್ ಸಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಇಡೀ ಜಗತ್ತಿನಾದ್ಯಂತ ಸದ್ದು ಮಾಡಿತ್ತು.

    2. ನಮಸ್ತೆ ಟ್ರಂಪ್
    ಫೆಬ್ರವರಿ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ನಮಸ್ತೆ ಟ್ರಂಪ್ ಹೆಸರಿನಲ್ಲಿ ಕಾರ್ಯಕ್ರಮವನ್ನ ಕೇಂದ್ರ ಸರ್ಕಾರ ಆಯೋಜಿಸಿತ್ತು. ಟ್ರಂಪ್ ದಂಪತಿ ಸಾಬರಮತಿ ಆಶ್ರಮ ಮತ್ತು ತಾಜ್‍ಮಹಲ್ ಗೂ ಭೇಟಿ ನೀಡಿದ್ದರು. ಮೊಟೆರಾ ಮೈದಾನದ ವೇದಿಕೆಯಲ್ಲಿ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ವೇದಿಕೆ ಹಂಚಿಕೊಂಡಿದ್ದರು.

    3. ಕೊರೊನಾ ಎಂಟ್ರಿ
    ದೆಹಲಿಯ ಬೆಂಕಿ ಕಾಳಗದ ಗೋಲಿ ಮಾರೋ ಪ್ರತಿಭಟನೆ ಬಳಿಕ ದೇಶ ಹೋಳಿಯ ಬಣ್ಣದ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿಯೇ ಚೀನಿಯ ಕೊರೊನಾ ವೈರಸ್ ಇಡೀ ಜಗತ್ತನ್ನ ಆಕ್ರಮಿಸತೊಡಗಿತ್ತು. ಅಸಲಿಗೆ ಭಾರತದೊಳಗೆ ಜನವರಿಗೆ ಈ ಕೊರೊನಾ ಎಂಟ್ರಿ ಕೊಟ್ಟಿತ್ತು. ಆದ್ರೆ ಮಾರ್ಚ್ 17ರಂದು ಕರ್ನಾಟಕದ ಕಲಬುರಗಿಯ ಓರ್ವ ವೃದ್ಧನನ್ನ ಕೊರೊನಾ ಮೊದಲ ಬಲಿ ಪಡೆದ ಬಳಿಕ ಇಡೀ ದೇಶ ಅಕ್ಷರಶ: ಸಹ ನಡುಗಿತ್ತು. ಇದುವರೆಗೂ ಒಂದು ಕೋಟಿಗೂ ಅಧಿಕ ಜನ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸುಮಾರು ಒಂದೂವರೆ ಲಕ್ಷದಷ್ಟು ಜನ ಪ್ರಾಣ ಕಳದುಕೊಂಡಿದ್ದಾರೆ.

    4. ಯೆಸ್ ಬ್ಯಾಂಕ್
    ಈ ವರ್ಷ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಹಣಕ್ಕಾಗಿಯೇ ಕ್ಯೂ ನಿಲ್ಲುವಂತೆ ಮಾಡ್ತು. ದೇಶದ ದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾಗಿರೋ ಯೆಸ್ ಬ್ಯಾಂಕ್ ವ್ಯವಹಾರಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಬಂಧನೆಗಳನ್ನ ಹೇರಿತು. ಪರಿಣಾಮ ಯೆಸ್ ಬ್ಯಾಂಕ್ ಗ್ರಾಹಕರು ಖಾತೆಯಲ್ಲಿ ಹಣವಿದ್ರೂ ತಿಂಗಳಿಗೆ ಕೇವಲ 50 ಸಾವಿರ ರೂ. ಪಡೆದುಕೊಳ್ಳುವಂತಾಗಿರತ್ತು. ಆರ್‍ಬಿಐ ನಿಬಂಧನೆ ಪರಿಣಾಮ ಯೆಸ್ ಬ್ಯಾಂಕ್ ಶೇರುಗಳ ಮುಖಬೆಲೆ 5 ರೂಪಾಯಿಗೆ ಬಂದು ತಲುಪಿತ್ತು.

    5. ಪ್ರವಾಸಿ ಕಾರ್ಮಿಕರು
    ಕೊರೊನಾ ತಡೆಗಾಗಿ ಮಾರ್ಚ್ 25ರಿಂದ 21 ದಿನಗಳ ಕಾಲ ಇಡೀ ದೇಶ ಸಂಪೂರ್ಣ ಲಾಕ್‍ಡೌನ್ ಗೆ ಒಳಪಟ್ಟಿತ್ತು. ದಿಢೀರ್ ಲಾಕ್‍ಡೌನ್ ಹೇರಿದ ನಿರ್ಧಾರದಿಂದ ಪ್ರವಾಸಿ/ವಲಸೆ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಯ್ತು. ಬಸ್, ರೈಲು ಸಿಗದೇ ತಲೆ ಮೇಲೆ ಗಂಟು ಮೂಟೆ ಹೊತ್ತುಕೊಂಡು ಕಂಕುಳಲ್ಲಿ ಪುಟ್ಟ ಕಂದಮ್ಮಗಳನ್ನ ಹೊತ್ತ ಕಾರ್ಮಿಕ ವರ್ಗ ನಡೆದುಕೊಂಡು ಊರು ತಲುಪಲು ಮುಂದಾಯ್ತು. ಈ ಕಷ್ಟದ ದೃಶ್ಯಗಳು ಭಾರತ ಮತ್ತು ಪಾಕಿಸ್ತಾನ ವಿಭಜನೆ ಸಂದರ್ಭವನ್ನ ನೆನಪಿಸಿದ್ದವು ಅಂತ ಹಿರಿಯರು ಕಣ್ಣೀರು ಹಾಕಿದ್ದರು. ದೆಹಲಿ-ಮುಂಬೈ- ಚೆನ್ನೈ-ಬೆಂಗಳೂರು ಸೇರಿದಂತೆ ಮಹಾನಗರಗಳಿಂದ ಹೊರಟ ಕಾರ್ಮಿಕರು ಸಾವಿರಾರು ಕಿಲೋ ಮೀಟರ್ ನಡೆದುಕೊಂಡೇ ಊರು ತಲುಪಿದ್ರು. ಇನ್ನು ಮೇ 8ರಂದು ಮಹಾರಾಷ್ಟ್ರದ ಔರಾಂಗಬಾದ್ ಊರು ಸೇರಲು ರೈಲ್ವೇ ಮಾರ್ಗ ಬಳಸಿ ಹೋಗ್ತಿದ್ದ 16 ಜನ ಸಾವಿನ ಮನೆ ಸೇರಿದ್ದರು. ರೈಲು ಹಳಿಗಳ ಮೇಲೆ ಬಿದ್ದಿದ್ದ ರೊಟ್ಟಿಗಳು ನೋಡುಗರ ಕರುಳು ಕಿತ್ತು ಬರುವಂತೆ ಮಾಡಿತ್ತು.

    6. ನಿರ್ಭಯಾ ಹಂತಕರಿಗೆ ಗಲ್ಲು
    ಮಾರ್ಚ್ 20, 2020 ನ್ಯಾಯದ ದಿನ ಅಂತ ಸೋಶಿಯಲ್ ಮೀಡಿಯಾದಲ್ಲಿ ಕರೆಲಾಯ್ತು. ಕಾರಣ ಡಿಸೆಂಬರ್ 16, 2012ರಂದು ನಡೆದ ಗ್ಯಾಂಗ್‍ರೇಪ್, ಕೊಲೆ ನಿರ್ಭಯಾ ಕೇಸ್ ನ ಅಪರಾಧಿಗಳಾದ ಪವನ್, ಮುಖೇಶ್, ಅಕ್ಷಯ್ ಮತ್ತು ವಿನಯ್ ನಾಲ್ವರನ್ನ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯ್ತು.

    7. ಮಧ್ಯ ಪ್ರದೇಶದಲ್ಲಿ ಅರಳಿದ ಕಮಲ
    ಈ ವರ್ಷ ರಾಜಕೀಯ ಮೇಲಾಟಗಳಿಗೂ ಸಾಕ್ಷಿಯಾಯ್ತು. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಕಮಲ್‍ನಾಥ್ ಸರ್ಕಾರ ಬೀಳಿಸಿ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿ ಮಧ್ಯಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದರು. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಮಾರ್ಚ್ 20ರಂದು ಕಮಲ್‍ನಾಥ್ ಸರ್ಕಾರ ಪತನವಾಯ್ತು. ಮಾರ್ಚ್ 23ರಂದು ಶಿವರಾಜ್ ಸಿಂಗ್ ಚೌಹಣ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

    8. ಅಂಫಾನ್ ಸೈಕ್ಲೋನ್ ಮತ್ತು ಮಿಡತೆ ದಾಳಿ
    ಕೊರೊನಾ ಕಾಲಘಟ್ಟದಲ್ಲಿ ಪಶ್ಚಿಮ ಬಂಗಾಳ ಅಂಫಾನ್ ಚಂಡಮಾರುತಕ್ಕೆ ಸಿಲುಕಿತ್ತು. ದೇಶದ ಪೂರ್ವ ಭಾಗ ಸಂಕಷ್ಟಕ್ಕೆ ಸಿಲುಕಿತ್ತು. ಇದು ಕೊರೊನಾಗಿಂತ ಭಯಾನಕ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಅಂಫಾನ್ ನಿಂದ ಪಶ್ಚಿಮ ಬಂಗಾಳದಲ್ಲಿ 13.9 ಬಿಲಿಯನ್ ಡಾಲರ್ ನಷ್ಟು ನಷ್ಟವಾಗಿತ್ತು. ಸುಮಾರು 30 ಸಾವಿರ ಮನೆಗಳು ಮತ್ತು 88 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ನಾಶವಾಗಿತ್ತು.

    ಚಂಡಮಾರುತದ ಬಳಿಕ ದೇಶಕ್ಕೆ ಪೂರ್ವ ಭಾಗದ ಪಾಕಿಸ್ತಾನದಿಂದ ಬಂದ ಮಿಡತೆಗಳು ಅನ್ನದಾತನಿಗೆ ಪೆಟ್ಟು ನೀಡಿದ್ದವು. ಮಿಡತೆ ದಾಳಿಯಿಂದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿತ್ತು.

    9. ಗಲ್ವಾನ್ ಸಂಘರ್ಷ
    ಜೂನ್ 15-16ರಂದು ಲಡಾಕ್ ಗಡಿಯ ಗಲ್ವಾನ್ ಬಳಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ರೆ, ಚೀನಾದ 40 ಸೈನಿಕರು ಸಾವನ್ನಪ್ಪಿದ್ದರು. ಆದ್ರೆ ಚೀನಾ ಸಾವು-ನೋವು ಸಂಭವಿಸಿಲ್ಲ ಎಂದು ಹೇಳಿತ್ತು. ಮೇ 5 ಮತ್ತು 6ರಿಂದಲೇ ಆರಂಭಗೊಂಡಿದ್ದ ಈ ಸಂಘರ್ಷ ಜೂನ್ 15-16ಕ್ಕೆ ಹಿಂಸೆಯ ರೂಪ ಪಡೆದುಕೊಂಡಿತ್ತು. ಈ ಸಂಘರ್ಷ ಬೆನ್ನಲ್ಲೇ ಕೇಂದ್ರ ಸರ್ಕಾರ ಚೀನಾದ 100ಕ್ಕೂ ಹೆಚ್ಚು ಆ್ಯಪ್‍ಗಳನ್ನ ಬ್ಯಾನ್ ಮಾಡಿದೆ. ಚೀನಾ ವಸ್ತುಗಳ ಬಳಕೆ ವಿರೋಧಿಸಿ ಭಾರತದಲ್ಲಿ ಕ್ಯಾಂಪೇನ್ ಆರಂಭಗೊಂಡಿದೆ. ಆದ್ರೆ ಇಂದು ಸಹ ಭಾರತ- ಚೀನಾ ಗಡಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

    10. ಯುಎನ್‍ಎಸ್‍ಸಿಯಲ್ಲಿ ಭಾರತ
    ಕೊರೊನಾ, ಅಂಫಾನ್ ಮತ್ತು ಚೀನಾ ವಿವಾದದ ನಡುವೆಗೆ ಭಾರತಕ್ಕೆ ಸಿಹಿ ಸುದ್ದಿ ಸಿಕ್ಕಿತು, ಜೂನ್ 2020ರಂದು ಸಂಯುಕ್ತ ರಾಷ್ಟ್ರ ಸುರಕ್ಷೆ ಅಸೋಸಿಯೇಷನ್ ನಲ್ಲಿ ಭಾರತ ಎಂಟನೇ ಬಾರಿ ಸದಸ್ಯ ಸ್ಥಾನ ಪಡೆಯಿತು. ಚಲಾವಣೆಯಾದ 192 ಮತಗಳಲ್ಲಿ ಭಾರತಕ್ಕೆ 184 ವೋಟ್ ಪಡೆದಿತ್ತು.

    11. ಸುಶಾಂತ್ ಸಿಂಗ್ ರಜಪೂತ್ ಸಾವು
    2020 ಬಾಲಿವುಡ್ ಈ ಬಾರಿ ಹೊಸ ವಿಷಯ ಮತ್ತು ಚರ್ಚೆಗಳಿಗೆ ಕಾರಣವಾಯ್ತು. ಬಿಟೌನ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇದಕ್ಕೆಲ್ಲ ಮುನ್ನುಡಿ ಬರೆಯಿತು. ಇದೇ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡ ಪರಿಣಾಮ ನಟಿ ರಿಯಾ ಚಕ್ರವರ್ತಿ ಜೈಲು ವಾಸ ಅನುಭವಿಸಿ ಸದ್ಯ ಜಾಮೀನಿನ ಮೇಲೆ ಹೊರ ಇದ್ದಾರೆ. ಹಾಸ್ಯ ನಟಿ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನು ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಕರಣ್ ಜೋಹರ್, ಅರ್ಜುನ್ ರಾಂಪಾಲ್ ಸೇರಿದಂತೆ ಬಾಲಿವುಡ್ ಅಂಗಳದ ದೊಡ್ಡ ತಾರೆಯರು ವಿಚಾರಣೆ ಎದುರಿಸಿದ್ದಾರೆ. ಜೂನ್ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಶವ ಸಿಕ್ಕಿತ್ತು. ಸದ್ಯ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ.

    12. ಭಾರತಕ್ಕೆ ಬಂದ ರಫೇಲ್
    ಚೀನಾ ಜೊತೆಗಿನ ಗಡಿ ವಿವಾದ ಬಳಿಕ ಕೋತಿ ಪಾಕ್ ಸಹ ತನ್ನ ಬಾಲ ಬಿಚ್ಚಲಾರಂಭಿಸಿತ್ತು. ಈ ನಡುವೆ ಜುಲೈ 27ರಂದು ಐದು ರಫೇಲ್ ಯುದ್ಧ ವಿಮಾನಗಳು ಭಾರತ ತಲುಪಿದವು. ಸೆಪ್ಟೆಂಬರ್ 10ರಂದು ಈ ರಫೇಲ್ ಗಳು ಅಧಿಕೃತವಾಗಿ ವಾಯು ಸೇನೆ ಸೇರಿಕೊಂಡವು. ಇದಾದ ಬಳಿಕ ನವೆಂಬರ್ 4ರಂದು ಮತ್ತೆ ಮೂರು ರಫೇಲ್ ವಾಯುಸೇನೆ ಸೇರ್ಪಡೆಗೊಂಡಿವೆ. ಫ್ರಾನ್ಸ್ ನಿಂದ ಭಾರತ ಒಟ್ಟು 36 ರಫೇಲ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

    13. ಕಾನ್ಪುರ ವಿಕಾಸ್ ದುಬೆ ಹತ್ಯಾಕಾಂಡ
    ಜುಲೈ ತಿಂಗಳಿನಲ್ಲಿ ಮುನ್ನಲೆಗೆ ಬಂದವನೇ ಬಿಕೂರು ಗ್ರಾಮದ ಕುಖ್ಯಾತ ವಿಕಾಸ್ ದುಬೆ. ಈತ ತನ್ನ ಟೀಂ ಜೊತೆ ಸೇರಿ ಬಂಧನಕ್ಕೆ ಆಗಮಿಸಿದ್ದ ಪೊಲೀಸರ ಮೇಲೆ ದಾಳಿ ನಡೆಸಿದ್ದನು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಓ ಸೇರಿದಂತೆ ಎಂಟು ಜನ ಪೊಲೀಸರು ಹುತಾತ್ಮರಾಗಿದ್ದರು. ಮಧ್ಯ ಪ್ರದೇಶದ ಉಜ್ಜೈನ್ ನಲ್ಲಿ ವಿಕಾಸ್ ದುಬೆಯ ಬಂಧನವಾಗಿತ್ತು. ಮಧ್ಯಪ್ರದೇಶದಿಂದ ಉತ್ತರ ಪ್ರದೇಶಕ್ಕೆ ಕರೆದೊಯ್ಯುವ ಮಾರ್ಗ ಮಧ್ಯೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ದುಬೆಯನ್ನ ಎನ್‍ಕೌಂಟರ್ ಮಾಡಲಾಗಿತ್ತು. ಇದಾದ ಎಂಟು ದಿನದಲ್ಲಿ ಯುಪಿ ಪೊಲೀಸರು ವಿಕಾಸ್ ದುಬೆಯ ತಂಡವನ್ನ ಇಲ್ಲದಂತೆ ಮಾಡಿದರು.

    14. ರಾಮಮಂದಿರದ ಶಿಲಾನ್ಯಾಸ
    ನವೆಂಬರ್ 9, 2019ರಂದು ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಮತ್ತು ಬಾಬರಿ ಮಸೀದಿ ವಿವಾದ ಅಂತ್ಯವಾಗಿತ್ತು. ಆದ್ರೆ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಆಗಸ್ಟ್ 5ರಂದು ನಡೆಯಿತು. ಅಯೋಧ್ಯೆಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮಮಂದಿರದ ಶಿಲಾನ್ಯಾಸ ನೆರೆವೇರಿಸಿದರು.

    15. ಕೊರೊನಾ ಕಾಲಘಟ್ಟದಲ್ಲಿ ಬಿಹಾರದ ಚುನಾವಣೆ
    ಕೊರೊನಾ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆಯಾದ ಬಿಹಾರ ವಿಧಾನಸಭೆ ಚುನಾವಣೆ ಯಶಸ್ವಿಯಾಗಿ ನಡೆಯಿತು. ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ತೇಜಸ್ವಿ ಯಾದವ್ ಆರ್‍ಜೆಡಿ ಅಧಿಕಾರದಿಂದ ವಂಚಿವಾಯ್ತು. ಬಿಜೆಪಿ ಬೆಂಬಲದೊಂದಿಗೆ ಜೆಡಿಯು ನಾಲ್ಕನೇ ಬಾರಿ ಬಿಹಾರದಲ್ಲಿ ಸರ್ಕಾರ ರಚನೆ ಮಾಡಿತು.

    16. ಐಪಿಎಲ್-13
    ಕೊರೊನಾದಿಂದ ಮುಂದೂಡುತ್ತಾ ಬಂದಿದ್ದ ಐಪಿಎಲ್ ಪಂದ್ಯಗಳನ್ನ ಈ ಬಾರಿ ಬಿಸಿಸಿಐ ಯುಎಇಯಲ್ಲಿ ಆಯೋಜಿಸಿ ಯಶಸ್ವಿಯಾಯ್ತು. ಸೆಪ್ಟೆಂಬರ್ 19ರಂದು ಆರಂಭವಾದ ಪಂದ್ಯಗಳು ನವೆಂಬರ್ 10ಕ್ಕೆ ಅಂತ್ಯವಾದವು. ಮುಂಬೈ ಇಂಡಿಯನ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವ ಮೂಲಕ 13ನೇ ಆವೃತ್ತಿಯನ್ನ ತನ್ನದಾಗಿಸಿಕೊಂಡಿತು. ಕೊರೊನಾದಿಂದಾಗಿ ಭಾರತೀಯರು ಐಪಿಎಲ್ ಪಂದ್ಯಗಳನ್ನ ಕಣ್ತುಂಬಿಕೊಂಡ್ರು. ಈ ಬಾರಿ ಐಪಿಎಲ್ ನೋಡುಗರ ಸಂಖ್ಯೆ ಶೇ.23ರಷ್ಟು ಏರಿಕೆ ಕಂಡಿತು.

    17. ಪಾತಾಳಕ್ಕೆ ಕುಸಿದ ಜಿಡಿಪಿ
    ಕೊರೊನಾ, ಲಾಕ್‍ಡೌನ್ ಪರಿಣಾಮ ಭಾರತದ ಜಿಡಿಪಿ ಪಾತಾಳಕ್ಕೆ ಕುಸಿಯುವ ಮೂಲಕ ಕೆಟ್ಟ ದಾಖಲೆ ಬರೆದಿತ್ತು. ಏಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕ ಜಿಡಿಪಿ ಮೈನಸ್ ಶೇ.23.9ರಷ್ಟು ಕುಸಿತಕಂಡಿತ್ತು. ಇದು 1996ರ ಜಿಡಿಪಿಗಿಂತ ಕಡಿಮೆ ಇತ್ತು. ಈ ಬಗ್ಗೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಇದೆಲ್ಲಾ ದೈವ ಇಚ್ಛೆ ಅನ್ನೋ ಹೇಳಿಕೆ ಚಚೆಗೆ ಗ್ರಾಸವಾಗಿತ್ತು.

    18. ದೆಹಲಿ ಗಡಿಯಲ್ಲಿ ಅನ್ನದಾತರ ಧರಣಿ
    2020ರ ಆರಂಭದಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ಹೋರಾಟಗಳಿಗೆ ದೆಹಲಿ ವೇದಿಕೆಯಾಗಿತ್ತು. ಈಗ ದೆಹಲಿ ಗಡಿಭಾಗದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಿರೋಧಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಕೆಲ ಬದಲಾವಣೆಗೆ ಮುಂದಾಗಿದ್ದರೂ ರೈತರು ಮೂರು ಕಾಯ್ದೆಗಳನ್ನ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಈ ಸಂಬಂಧ ರೈತರು ಭಾರತ್ ಬಂದ್ ಗೆ ಕರೆ ನೀಡಿದ್ದರು.

    19. ದಾಖಲೆ ಬರೆದ ಶೇರು ಮಾರುಕಟ್ಟೆ
    ಕೊರೊನಾ ಮತ್ತು ಅರ್ಥಿಕ ಹಿಂಜರಿತದ ಸುಳಿಗೆ ಸಿಲುಕಿದ್ದು ಶೇರು ಪೇಟೆ ದಾಖಲೆ ಬರೆದಿದೆ. ಸೆನ್ಸಕ್ಸ್ 46,890 ಗಡಿ ತಲುಪಿದ್ರೆ, ನಿಫ್ಟಿ 13,740 ತಲುಪವಲ್ಲಿ ಯಶಸ್ವಿಯಾಗಿತ್ತು. ಕೊರೊನಾ, ಜಿಡಿಪಿ ಕುಸಿತ ಕಂಡಿದ್ದರೂ ಚಿನ್ನದ ಬೆಲೆ ಮಾತ್ರ ಏರಿಕೆ ಕಾಣಿಸುತ್ತಿದೆ. ಈ ವರ್ಷ ಹಳದಿ ಲೋಹ 10 ಗ್ರಾಂಗೆ 56,191 ರೂ.ವರೆಗೂ ತಲುಪಿತ್ತು. ಬೆಳ್ಳಿ ಪ್ರತಿ ಕೆಜಿಗೆ 77,949 ರೂ.ವರೆಗೂ ಏರಿಕೆ ಕಂಡು ದಾಖಲೆ ಬರೆದಿದೆ.

    20. ಗುರು – ಶನಿ ಸಂಯೋಗ
    ಸೂರ್ಯ- ಚಂದ್ರ ಗ್ರಹಣಗಳ ನಡುವೆ ನಭೋಮಂಡಲ ಈ ವರ್ಷ ಮತ್ತೊಂದು ಕೌತುಕಕ್ಕೆ ಸಾಕ್ಷಿಯಾಗಿತ್ತು. ಡಿಸೆಂಬರ್ 21ರ ಸಂಜೆ ಗುರು ಮತ್ತು ಶನಿ ಸಂಯೋಗವಾಗಿತ್ತು. ಈ ಸಮ್ಮಿಲನ 800 ವರ್ಷಗಳ ಬಳಿಕ ನಡೆದಿದ್ದರಿಂದ ಇಡೀ ಜಗತ್ಯು ಅತ್ಯುತ್ಸಾಹದಿಂದ ಈ ಕೌತುಕವನ್ನ ನೋಡಿತ್ತು. ಮತ್ತೆ ಈ ವಿಸ್ಮಯ 2080ರಲ್ಲಿ ಘಟಿಸಲಿದೆ.

  • ಶಾಹೀನ್ ಭಾಗ್‍ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತಿಲ್ಲ- ಸುಪ್ರೀಂ

    ಶಾಹೀನ್ ಭಾಗ್‍ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತಿಲ್ಲ- ಸುಪ್ರೀಂ

    ನವದೆಹಲಿ: ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

    ಶಾಹೀನ್ ಬಾಗ್‍ನಲ್ಲಿ ನಡೆದ ಪೌರತ್ವ ತಿದ್ದು ಪಡಿ ಕಾಯ್ದೆ(ಸಿಎಎ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕಾ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಕೋರ್ಟ್ ಇಂದು ಆದೇಶ ಪ್ರಕಟಿಸಿದೆ.

    ಆದೇಶದಲ್ಲಿ ಏನಿದೆ?
    ಅನಿರ್ದಿಷ್ಟಾವಧಿಗೆ ಯಾವುದೇ ವ್ಯಕ್ತಿ ಅಥವಾ ಗುಂಪು ಸಾರ್ವಜನಿಕಾ ಸ್ಥಳಗಳನ್ನು ಬಂದ್ ಮಾಡುವಂತಿಲ್ಲ. ಈ ರೀತಿ ಮಾಡಿದ್ದಲ್ಲಿ ಅಧಿಕಾರಿಗಳು ಪ್ರತಿಭಟನೆಯನ್ನು ತೆರವು ಮಾಡಬೇಕು. ಪ್ರತಿಭಟನೆಗಳು ನಿರ್ಧಿಷ್ಟ ಜಾಗದಲ್ಲಿ ನಡೆಯಬೇಕು.

    ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕಾ ಸ್ಥಳ ಅಥವಾ ರಸ್ತೆಯನ್ನು ಬಂದ್ ಮಾಡಿದ್ದಲ್ಲಿ ಭಾರೀ ಸಂಖ್ಯೆಯ ಜನರಿಗೆ ಸಮಸ್ಯೆಯಾಗುತ್ತದೆ. ಇದು ಆ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಶಾಂತ ರೀತಿಯ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೆ ಇದೆ. ಸಂವಿಧಾನವೇ ಈ ಹಕ್ಕನ್ನು ನೀಡಿದೆ.

    ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಹೀನ್ ಬಾಗ್ ಮಾರುಕಟ್ಟೆ ಸಂಘಟನೆಯ ಅಧ್ಯಕ್ಷ ಡಾ. ನಾಸೀರ್, ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಭಟನೆಯಿಂದ 200ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಬೇಕಾಯಿತು. 2 ಸಾವಿರ ಕೆಲಸಗಾರರು ಕೆಲಸ ಕಳೆದುಕೊಳ್ಳಬೇಕಾಯಿತು. ಈ ಅಂಗಡಿಗಳಲ್ಲಿ ಬ್ರಾಂಡ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರತಿಭಟನೆಯಿಂದ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಿಎಎ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಶಾಹೀನ್ ಬಾಗ್‍ನಲ್ಲಿ 2019ರ ಡಿಸೆಂಬರ್ 14 ರಿಂದ ಪ್ರತಿಭಟನೆ ಆರಂಭವಾಗಿತ್ತು. ಈ ನಡುವೆ ಕೊರೊನಾ ಬಂದ ಕಾರಣ ದೇಶವ್ಯಾಪಿ ಮಾ.22 ರಿಂದ ಲಾಕ್‍ಡೌನ್ ಘೋಷಣೆಯಾಗಿತ್ತು. ಲಾಕ್‍ಡೌನ್ ಘೋಷಣೆಯಾಗಿದ್ದರೂ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿದಿತ್ತು.

    ಮಾ.24ರಂದು ದೆಹಲಿ ಪೊಲೀಸರು ಜೆಸಿಬಿ ಮೂಲಕ ಸ್ಥಳವನ್ನು ತೆರವುಗೊಳಿಸಿದ್ದರು. ಪೊಲೀಸರು ಸೆಕ್ಷನ್ 144 ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 6 ಮಹಿಳೆಯರು ಮತ್ತು 3 ಪುರುಷರನ್ನು ಶಾಹೀನ್ ಬಾಗ್‍ನಿಂದ ವಶಕ್ಕೆ ಪಡೆದಿದ್ದರು. ಈ ಮೂಲಕ 101 ದಿನಗಳ ಪ್ರತಿಭಟನೆ ಮುಕ್ತಾಯಗೊಂಡಿತ್ತು. ಸಾರ್ವಜನಿಕಾ ಸ್ಥಳವನ್ನು ಪ್ರತಿಭಟನಾ ಹೋರಾಟಕ್ಕೆ ಬಳಸಿದ್ದನ್ನು ಪ್ರಶ್ನಿಸಿ ಹಲವು ಮಂದಿ ಪಿಐಎಲ್ ಸಲ್ಲಿಸಿದ್ದರು.

  • ದೆಹಲಿ ಗಲಭೆ- ಜೆಎನ್‍ಯು ಹಳೆ ವಿದ್ಯಾರ್ಥಿ ಉಮರ್ ಖಲೀದ್ ಬಂಧನ

    ದೆಹಲಿ ಗಲಭೆ- ಜೆಎನ್‍ಯು ಹಳೆ ವಿದ್ಯಾರ್ಥಿ ಉಮರ್ ಖಲೀದ್ ಬಂಧನ

    ನವದೆಹಲಿ: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ, ಹಳೆ ವಿದ್ಯಾರ್ಥಿ ಉಮರ್ ಖಲೀದ್‍ನನ್ನು  ಪೊಲೀಸರು ತಡರಾತ್ರಿ ಬಂಧಿಸಿದ್ದು, ಇಂದು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

    ದೆಹಲಿ ಗಲಭೆ ಪ್ರಕರಣದಲ್ಲಿ ಪಾತ್ರವಹಿಸಿರುವ ಹಿನ್ನೆಲೆ ದೆಹಲಿಯ ವಿಶೇಷ ಪೊಲೀಸ್ ವಿಭಾಗ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಅಡಿ ಬಂಧಿಸಿದೆ. ಭಾನುವಾರ ತಡರಾತ್ರಿ ಬಂಧನದ ಬಳಿಕ ಸುಮಾರು 9 ಗಂಟೆಗಳ ಕಾಲ ಖಲೀದ್‍ನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇಂದು ದೆಹಲಿ ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಸೆಪ್ಟೆಂಬರ್ 2 ರಂದು ಸಹ ಜೆಎನ್‍ಯುನ ಹಳೆ ವಿದ್ಯಾರ್ಥಿಯನ್ನು ವಿಶೇಷ ಪೊಲೀಸ್ ತಂಡ ವಿಚಾರಣೆ ನಡೆಸಿತ್ತು.

    ಫೆಬ್ರವರಿ 24ರಿಂದ 26ರ ವರೆಗೆ ಜಫರಾಬಾದ್ ಶಾಕುರ್ ಬಸ್ತಿ, ಶಿವ ವಿಹಾರ, ಸಲೀಮ್‍ಪುರ ಸೇರಿದಂತೆ ಈಶಾನ್ಯ ದೆಹಲಿಯ ವಿವಿಧ ಭಾಗಗಳಲ್ಲಿ ತೀವ್ರ ತರವಾದ ಗಲಭೆ ನಡೆದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರೋಧಿ ಗ್ಯಾಂಗ್‍ಗಳ ನಡುವೆ ದೊಡ್ಡ ಮಾರಾಮಾರಿ ನಡೆದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ಸಾವು ನೋವು, ಆಸ್ತಿ ಪಾಸ್ತಿ ಹಾನಿ ಸಂಭವಿಸಿತ್ತು.

    ಗಲಭೆಯಲ್ಲಿ ಕನಿಷ್ಟ 53 ಜನ ಜೀವ ಕಳೆದುಕೊಂಡಿದ್ದರು. 581 ಜನರಿಗೆ ತೀವ್ರ ಗಾಯಗಳಾಗಿದ್ದವು. ಇದರಲ್ಲಿ 97ಜನ ಕೇವಲ ಗುಂಡಿನಿಂದ ಗಾಯಗೊಂಡಿದ್ದರು. ಖಲೀದ್ ಜೊತೆಗೆ ಜಾಮಿಯಾ ವಿದ್ಯಾರ್ಥಿ ಹಾಗೂ ಆರ್‍ಜೆಡಿ ಯುವ ಮೋರ್ಚಾ ಅಧ್ಯಕ್ಷ ಮೀರನ್ ಹೈದರ್, ಜೆಸಿಸಿ ಮೀಡಿಯಾ ಕೋಆರ್ಡಿನೇಟರ್ ಸಫೂರಾ ಝರ್ಗರ್ ಹಾಗೂ ಡ್ಯಾನಿಶ್ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿತ್ತು.

    ಇದೀಗ ಖಲೀದ್‍ನನ್ನು ಬಂಧಿಸಿರುವುದಾಗಿ ಅವರ ತಂದೆ ಖಚಿತಪಡಿಸಿದ್ದಾರೆ. ನನ್ನ ಮಗ ಖಲೀದ್‍ನನ್ನು ರಾತ್ರಿ 11ರ ಸುಮಾರಿಗೆ ವಿಶೇಷ ಪೊಲೀಸ್ ವಿಭಾಗದಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    ದೆಹಲಿ ಗಲಭೆಗೆ ಸಂಬಂಧಿಸಿದಂತೆ ಈ ವರೆಗೆ ದೆಹಲಿ ವಿಶೇಷ ವಿಭಾಗದ ಪೊಲೀಸರು 1,575 ಜನರನ್ನು ಬಂಧಿಸಿದ್ದು, ಒಟ್ಟು 751 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೆ 250 ಚಾರ್ಜ್ ಶೀಟ್‍ಗಳನ್ನು ಸಲ್ಲಿಸಿದ್ದಾರೆ. ಒಟ್ಟು 1,153 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

    ಇನ್ನೂ ವಿಶೇಷವೆಂಬಂತೆ ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೆಂದ್ರ ಯಾದವ್, ಅರ್ಥಶಾಸ್ತ್ರಜ್ಞ ಜಯತಿ ಘೋಷ್ ಹಾಗೂ ದೆಹಲಿ ವಿವಿ ಪ್ರಾಧ್ಯಾಪಕ ಅಪೂರ್ವನಂದನ್ ವಿರುದ್ಧ ಪ್ರಚೋದನೆ ಹಾಗೂ ಘಟನೆಗೆ ಸಿದ್ಧಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

  • ದೆಹಲಿಯ ಸಿಎಎ ಪ್ರತಿಭಟನೆ ಆಯೋಜಕರ ಸೋದರಿಗೆ ಕೊರೊನಾ

    ದೆಹಲಿಯ ಸಿಎಎ ಪ್ರತಿಭಟನೆ ಆಯೋಜಕರ ಸೋದರಿಗೆ ಕೊರೊನಾ

    – ತಂಗಿ ಭೇಟಿ ಮಾಡಿ ಪ್ರತಿಭಟನಾ ಸ್ಥಳಕ್ಕೆ 2 ಬಾರಿ ಭೇಟಿ

    ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸಿಎಎ ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರು ತಮ್ಮ ಸಹೋದರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ನಂತರ ತಾವೂ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ.

    ಆಯೋಜಕರ ಸೋದರಿ ಮಾರ್ಚ್ 11 ರಂದು ಸೌದಿ ಅರೇಬಿಯಾದಿಂದ ವಾಪಸ್ ಬಂದಿದ್ದಾರೆ. ನಂತರ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಆಕೆ ಉಮ್ರಾ ಯಾತ್ರೆ ಸಂಬಂಧ ಸೌದಿ ಅರೇಬಿಯಾ ದೇಶಕ್ಕೆ ಭೇಟಿ ನೀಡಿದ್ದರು.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಸೌದಿ ಅರೇಬಿಯಾ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಆದರೆ ಪ್ರವೇಶ ನಿಷೇಧ ಮಾಡುವ ಮೊದಲೇ ಅವರು ಸೌದಿ ಅರೇಬಿಯಾಕ್ಕೆ ಹೋಗಿದ್ದರು.

    ನನ್ನ ಸಹೋದರಿ ಮರಳಿದ ಎರಡು ದಿನಗಳ ನಂತರ ಅಂದರೆ ಮಾರ್ಚ್ 13 ರಂದು ಭೇಟಿ ಮಾಡಿದ್ದೆ. ಅಲ್ಲಿಂದ ಒಂದೆರಡು ಬಾರಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ಆ ಸಮಯದಲ್ಲಿ ನನಗೆ ರೋಗದ ಯಾವುದೇ ಲಕ್ಷಣಗಳನ್ನು ಕಂಡು ಬಂದಿಲ್ಲ. ಆದ್ದರಿಂದ ನಾನು ಎಂದಿನಂತೆ ಪ್ರತಿಭಟನೆಗೆ ಹೋಗಿದ್ದೆ ಎಂದು 35 ವರ್ಷದ ಆಯೋಜಕ ತಿಳಿಸಿದ್ದಾರೆ.

    ನಾನು ಭೇಟಿಯಾದ ಎರಡು ದಿನಗಳ ನಂತರ ಸಹೋದರಿ ಕೊರೊನಾ ಪರೀಕ್ಷೆ ಮಾಡಿಸಿದ್ದಾಳೆ. ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಸದ್ಯಕ್ಕೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    “ಸಹೋದರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ನಾನು ಕೊರೊನಾ ವೈರಸ್ ಸೋಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಹೀಗಾಗಿ ಈ ವಿಚಾರವನ್ನು ವೈದ್ಯರಿಗೆ ತಿಳಿಸುವುದು ಜಾಗೃತ ನಾಗರಿಕನಾಗಿ ನನ್ನ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ” ಎಂದು ಅವರು ಹೇಳಿದರು.

    ನನಗೆ ಕೊರೊನಾ ವೈರಸ್‍ನ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆದರೆ ಮಾರ್ಚ್ 16 ರಂದು ಕೆಮ್ಮು ಬಂದಿತ್ತು. ಹೀಗಾಗಿ ನಾನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎನಿಸಿತು ಎಂದರು. ಸದ್ಯಕ್ಕೆ ಆಯೋಜಕ ದೆಹಲಿಯ ಲೋಕ ನಾಯಕ್ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ವೈದ್ಯರು ಅವರ ರಿಪೋರ್ಟ್‍ಗಾಗಿ ಕಾಯುತ್ತಿದ್ದಾರೆ.

    ದೆಹಲಿಯಲ್ಲಿ ಈವರೆಗೆ 11 ಜನರು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ 169ಕ್ಕೆ ಏರಿಕೆಯಾಗಿದೆ.

  • ಕೊರೊನಾ ಭೀತಿ ನಡುವೆಯೂ ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಭಟನೆ

    ಕೊರೊನಾ ಭೀತಿ ನಡುವೆಯೂ ಸಿಎಎ, ಎನ್​ಆರ್​ಸಿ ವಿರುದ್ಧ ಪ್ರತಿಭಟನೆ

    – ಮದ್ರಾಸ್ ಕೋರ್ಟ್ ಮುಂದೆ ಜನ ಜಂಗುಳಿ

    ಚೆನ್ನೈ: ಕೊರೊನಾ ಭೀತಿಗೆ ಈಡಿ ಜಗತ್ತೆ ಬೆಚ್ಚಿಬಿದ್ದಿದೆ. ಹೀಗಾಗಿ ಒಂದು ಜಾಗದಲ್ಲಿ ನೂರಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿನ ಚೆನ್ನೈನಲ್ಲಿ ಸಾವಿರಾರು ಜನರು ಸಿಎಎ, ಎನ್​ಆರ್​ಸಿ ಮತ್ತು ಎನ್‍ಪಿಆರ್ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

    ಮದ್ರಾಸ್ ಹೈಕೋರ್ಟ್ ಬಳಿ ತಮಿಳುನಾಡು ಥೌಹೀದ್ ಜಮಾತ್ ಸದಸ್ಯರು ಸೇರಿದಂತೆ ಅನೇಕ ಜನರು ಸಿಎಎ, ಎನ್​ಆರ್​ಸಿ ಮತ್ತು ಎನ್‍ಪಿಆರ್ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆ ಹಾಗೂ ವಿರೋಧ ವ್ಯಕ್ತವಾಗಿದೆ.

    ಮಹಾಮಾರಿ ಕೊರೊನಾ ವೈರಸ್‍ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಅದಕ್ಕೆ ಪರಿಹಾರ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಅಗತ್ಯವಿತ್ತೇ? ಇದೊಂದು ಉದ್ದೇಶಪೂರ್ವಕ ಹಾಗೂ ಪ್ರೇರಣೆಯಿಂದ ನಡೆಯುತ್ತಿರುವ ಪ್ರತಿಭಟನೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಬುಧವಾರ ಮಧ್ಯಾಹ್ನ 2 ಗಂಟೆವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 147 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 14 ಜನರು ಚೇತರಿಸಿಕೊಂಡರೆ ಮೂರು ಮೃತಪಟ್ಟಿದ್ದಾರೆ. ಉಳಿದಂತೆ 130 ಜನರಿಗೆ ಚಿಕಿತ್ಸೆ ಕೊಡಲಾಗುತ್ತದೆ. ತಮಿಳುನಾಡಿನಲ್ಲಿ ಓರ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  • ಅಸಾಂವಿಧಾನಿಕ ಪದ ಬಳಸಿ ಪೇಚಿಗೆ ಸಿಲುಕಿದ ಸರವಣ

    ಅಸಾಂವಿಧಾನಿಕ ಪದ ಬಳಸಿ ಪೇಚಿಗೆ ಸಿಲುಕಿದ ಸರವಣ

    ಬೆಂಗಳೂರು: ಜೆಡಿಎಸ್ ಸದಸ್ಯ ಸರವಣ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿರುದ್ಧ ಅಸಾಂವಿಧಾನಿಕ ಪದ ಬಳಸಿ ಬಳಿಕ ಅ ಹೇಳಿಕೆಯನ್ನು ವಾಪಸ್ ಪಡೆದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ನಡೆಯಿತು. ಬಳಿಕ ಸರವಣ ಬಳಸಿದ ಪದವನ್ನು ಸಭಾಪತಿಗಳು ಕಡತದಿಂದಲೇ ತೆಗೆಯುವಂತೆ ಆಯಿತು.

    ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸರವಣ ಸಿಎಎ ತರುವ ಮೊದಲು ಜನರನ್ನು ವಿಶ್ವಾಸಕ್ಕೆ ಪಡೆಯದೇ ತುರ್ತುಪರಿಸ್ಥಿತಿ ತರುವ ರೀತಿ ಜಾರಿಗೆ ತರಲಾಗಿದೆ. ಪ್ರತಿಭಟಿಸುವ ಹಕ್ಕು ಮೊಟಕುಗೊಳಿಸಲಾಗಿದೆ. ಸಿಎಎ ವಿರುದ್ಧ ಹೋರಾಟ ನಡೆಸುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಭಟನೆಗೆ ವಿರೋಧವಿಲ್ಲ. ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿದರೆ, ಭಾರತ ವಿರುದ್ಧ ದಿಕ್ಕಾರ ಎನ್ನುವ ಘೋಷಣೆ ಕೂಗಿದರೆ ಸರ್ಕಾರ ಸಹಿಸಲ್ಲ. ಯಾರೇ ಆದರೂ ಅವರನ್ನು ಜೈಲಿಗೆ ಕಳಿಸುತ್ತೇವೆ. ಅವರ ವಿರುದ್ಧ ಕೇಸು ಹಾಕುತ್ತೇವೆ. ಇದು ಹೇಡಿ ಸರ್ಕಾರ ಅಲ್ಲ. ವೋಟಿಗೋಸ್ಕರ ಏನನ್ನು ಬೇಕಾದರೂ ಸಹಿಸುವ ಧೋರಣೆ ನಮ್ಮದ್ದಲ್ಲ ಎಂದು ಎಚ್ಚರಿಕೆ ಕೊಟ್ಟರು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದರು.

    ಬಳಿಕ ಮಾತು ಮುಂದುವರಿಸಿದ ಸರವಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಮುಸ್ಲಿಂ ಜನರಿಗೆ ಅಭಿವೃದ್ಧಿ ಕೆಲಸ ಮಾಡಲ್ಲ ಎನ್ನುತ್ತಾರೆ. ಅವರೇನು ಹಣವನ್ನು ಅವರ ಅಪ್ಪನ ಮನೆಯಿಂದ ತರುತ್ತಾರಾ ಎಂದು ಅಸಾಂವಿಧಾನಿಕ ಪದ ಬಳಕೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪದ ಬಳಕೆ ಬಗ್ಗೆ ಹಿಡಿತವಿರಲಿ ಏನು ಮಾತನಾಡುತ್ತಿದ್ದೀರಾ? ನಾವೂ ನಿಮಗೆ ಹಾಗೇ ಅಂದರೆ ಸಹಿಸುತ್ತೀರಾ ಎಂದು ಸರವಣ ವಿರುದ್ಧ ವಾಗ್ದಾಳಿ ನಡೆಸಿದರು.

    ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಸರವಣ ಬಳಸಿದ ಪದ ತಪ್ಪು. ಹಾಗೆ ಮಾತನಾಡಿದ್ದು ಸರಿಯಲ್ಲ. ಪದ ವಾಪಸ್ ಪಡೆಯಿರಿ ಎಂದು ಸಲಹೆ ನೀಡಿದರು. ಹೊರಟ್ಟಿ ಮಾತಿನ ನಂತರ ನನ್ನ ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ ಎಂದು ಸರವಣ ಹೇಳಿದರು. ವಾಪಸ್ ಪಡೆದ ನಂತರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅಸಾಂವಿಧಾನಿಕ ಪದವನ್ನು ಕಡತದಿಂದ ತೆಗೆಯುವಂತೆ ರೂಲಿಂಗ್ ನೀಡಿದರು.

    ಇಷ್ಟಾದರೂ ಸದನದಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಿನಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಸರವಣ ಬಿಜೆಪಿಯ ಪ್ರಾಣೇಶ್ ವಿರುದ್ಧ ಹರಿಹಾಯ್ದರು. ನನ್ನ ಬಗ್ಗೆ ಮಾತಾಡುವ ನೈತಿಕತೆ ನಿನಗೂ ಇಲ್ಲ, ನಿನಗೆ ಮಾತನಾಡಲು ಬರಲ್ಲ ಎಂದು ಏಕವಚನದಲ್ಲಿ ಬೈದಾಡಿಕೊಂಡರು. ನಂತರ ಸಭಾಪತಿ ಸೂಚನೆಯಂತೆ ಮಾತು ಮುಂದುವರಿಸಿದ ಸರವಣ, ನೊಂದು ಅಂತಹ ಪದ ಬಳಸಿದೆ, ಯಾವುದೇ ಬೇರೆ ಉದ್ದೇಶವಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.