Tag: ಸಿಎಂ

  • ಯುಪಿ ಹೊಸ ಸಿಎಂ ನೋಡಿ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ ನೆನಪಿಸಿಕೊಂಡ ಜನ!

    ಯುಪಿ ಹೊಸ ಸಿಎಂ ನೋಡಿ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್ ನೆನಪಿಸಿಕೊಂಡ ಜನ!

    ನವದೆಹಲಿ: ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದ್ರು. ಸಿಎಂ ಆಗಿ ಆದಿತ್ಯನಾಥ್ ಅವರು ಆಯ್ಕೆಯಾಗಿದ್ದು ಬಹುತೇಕ ಮಂದಿಗೆ ಶಾಕ್ ಆದ್ರೆ ಇನ್ನೂ ಕೆಲವರಿಗೆ ಇದೊಂದು ಖುಷಿಯ ವಿಚಾರವಾಗಿತ್ತು. ಸಿಎಂ ಆಗಿ ಆಯ್ಕೆಯಾದ ಕೆಲವೇ ನಿಮಿಷಗಳಲ್ಲಿ ಆದಿತ್ಯನಾಥ್ ಅವರ ಹೆಸರು ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್ ಆಗಿತ್ತು. ಅದರ ಜೊತೆಗೆ ಹಲಿವುಡ್ ಸ್ಟಾರ್ ವಿನ್ ಡೀಸೆಲ್ ಹೆಸರು ಕೂಡ ಟ್ರೆಂಡಿಂಗ್ ಆಯ್ತು. ಹಾಲಿವುಡ್‍ಗೂ ಉತ್ತರಪ್ರದೇಶಕ್ಕೂ ಏನಪ್ಪಾ ಸಂಬಂಧ ಅಂತೀರಾ? ಇಂಟರ್ನೆಟ್ ಬಳಕೆದಾರರು ಯೋಗಿ ಆದಿತ್ಯನಾಥ್ ಅವರು ನೋಡೋಕೆ ವಿನ್ ಡೀಸೆಲ್ ಥರ ಇದ್ದಾರೆ ಅಂತ ಹೇಳ್ತಿದ್ದಾರೆ.

    ವಿನ್ ಡೀಸೆಲ್ ಹಾಗೂ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನ ಹಾಕಿ ಅನೇಕ ಮೀಮ್‍ಗಳನ್ನ ಮಾಡಲಾಗಿದೆ. ಅಲ್ಲದೆ ಉತ್ತರಪ್ರದೇಶದ ಸಿಎಂ ಆಗಿದ್ದಕ್ಕೆ ನಿಮಗೆ ಅಭಿನಂದನೆ ಅಂತ ವಿನ್ ಡೀಸೆಲ್ ಅವರ ಟ್ವಿಟ್ಟರ್ ಅಕೌಂಟಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ತಮಾಷೆ ಮಾಡಿದ್ದಾರೆ. ಈ ಮೀಮ್‍ಗಳು ಈಗ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.

    https://twitter.com/hvgoenka/status/843104263425339392?ref_src=twsrc%5Etfw

    ಇದನ್ನೂ ಓದಿ: ಆದಿತ್ಯನಾಥ್‍ಗೆ ಮೋದಿ ಸಿಎಂ ಪಟ್ಟ ಕಟ್ಟಿದ್ದು ಯಾಕೆ?

    ಭಾನುವಾರದಂದು ಉತ್ತರಪ್ರದೇಶದ 21ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಯೋಗಿ ಆಧಿತ್ಯನಾಥ್ ಗೋರಖ್‍ಪುರದವರಾಗಿದ್ದು ಸತತ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ನಂತರ 44 ವರ್ಷದ ಯೋಗಿ ಆದಿತ್ಯನಾಥ್ ಎರಡನೇ ಅತ್ಯಂತ ಕಿರಿಯ ಸಿಎಂ ಎನಿಸಿಕೊಂಡಿದ್ದಾರೆ.

     

  • ಆಸ್ತಿ ಘೋಷಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್‍ರಿಂದ ಸಚಿವರಿಗೆ ಖಡಕ್ ಆದೇಶ- 15 ದಿನ ಗಡುವು

    ಆಸ್ತಿ ಘೋಷಿಸಿಕೊಳ್ಳಲು ಉತ್ತರಪ್ರದೇಶ ಸಿಎಂ ಆದಿತ್ಯನಾಥ್‍ರಿಂದ ಸಚಿವರಿಗೆ ಖಡಕ್ ಆದೇಶ- 15 ದಿನ ಗಡುವು

    ಲಕ್ನೋ: ಉತ್ತರಪ್ರದೇಶ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಯೋಗಿ ಆದಿತ್ಯನಾಥ್, ಆಡಳಿತದ ಮೇಲೆ ಪಟ್ಟು ಸಾಧಿಸಲು ಮುಂದಾಗಿದ್ದಾರೆ. ಆಸ್ತಿ ವಿವರ ಬಹಿರಂಗಪಡಿಸುವಂತೆ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆಸ್ತಿ ವಿವರ ಘೋಷಿಸಿಕೊಳ್ಳಲು 15 ದಿನಗಳ ಕಾಲಾವಕಾಶವನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದಾರೆ. ಜೊತೆಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಬೇಡಿ ಎಂದು ಸಚಿವರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

    ಭಾನುವಾರದಂದು ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ 19ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ರು. 44 ವರ್ಷದ ಆದಿತ್ಯನಾಥ್, ಅಖಿಲೇಶ್ ಯಾದವ್ ನಂತರ ಉತ್ತರಪ್ರದೇಶದ ಎರಡನೇ ಅತ್ಯಂತ ಕಿರಿಯ ಸಿಎಂ ಆಗಿದ್ದಾರೆ.

  • ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    – ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ

    ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.

    ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.

    ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.

    ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

    ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.

  • ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ

    ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ

    ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇದೆ. ಇಲ್ಲಿ ನಾವು ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದರು.

    ಇಂದು ಪಂಚರಾಜ್ಯಗಳ ಚುನಾವಣಾ ರಿಸಲ್ಟ್ ಹೊರಬೀಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದಕ್ಕೆ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್ ಅವರಿಬ್ಬರ ಮಧ್ಯೆ ನಡೆದ ಜಗಳವೂ ಕಾರಣವಾಗಿರಬಹುದು. ಏನೇ ಆಗ್ಲಿ ಇಲ್ಲಿ ನಾವು ಜನ ಕೊಟ್ಟಿರೋ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಯಾವುದೇ ರಾಜ್ಯದಲ್ಲಿ ಏನೇ ಕಾರಣಗಳಿದ್ದರೂ ಕೂಡ ಜನ ಕೊಟ್ಟಿರೋ ತೀರ್ಪಿಗೆ ಬದ್ಧರಾಗಬೇಕು ಅಂತಾ ತಿಳಿಸಿದ್ರು.

    ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್‍ನ ಗೆಲುವನ್ನು ನಿರೀಕ್ಷಿಸಿದ್ದೇವೆ. ಪಂಜಾಬ್‍ನಲ್ಲಿ ಮೋದಿ ಬಹಳ ಸರಿ ಭಾಷಣ ಮಾಡಿದ್ದಾರೆ. ಆದ್ರೆ ಯಾಕೆ ಅಲ್ಲಿ ಮೋದಿ ಅಲೆ ಫಲಫ್ರದವಾಗಿಲ್ಲ. ಉತ್ತರ ಪ್ರದೇಶಕ್ಕೆ ಮಾತ್ರ ಮೋದಿ ಅಲೆ ಸೀಮಿತವಾಗಿದೆಯಾ ಅಂತಾ ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ಅಲೆಯಿಂದ ಗೆಲುವು ಅನ್ನೋದು ಸುಳ್ಳು ಅಂತಾ ಹೇಳಿದ್ರು.

  • ನನ್ನ ಮಠಕ್ಕೆ 2 ಕೋಟಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ- ಸಿಎಂಗೆ ಸ್ವಾಮೀಜಿ ಅವಾಜ್

    ನನ್ನ ಮಠಕ್ಕೆ 2 ಕೋಟಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ- ಸಿಎಂಗೆ ಸ್ವಾಮೀಜಿ ಅವಾಜ್

    ಬೆಂಗಳೂರು: ಮಠಕ್ಕೆ 2 ಕೋಟಿ ರೂಪಾಯಿ ಅನುದಾನ ಕೊಡಿ, ಇಲ್ಲಾಂದ್ರೆ ಪ್ರೊಟೆಸ್ಟ್ ಮಾಡ್ತೀನಿ ಅಂತ ಅಖಿಲ ಕರ್ನಾಟಕ ಹಡಪದ ಅಪ್ಪಣ ಮಠದ ಅನ್ನದಾನ ಭಾರತಿ ಸ್ವಾಮಿಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವಾಜ್ ಹಾಕಿದ ಘಟನೆ ನಡೆದಿದೆ.

    ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಗೂ ಮುನ್ನ ಸ್ವಾಮೀಜಿ ಹಾಗೂ ಸಿಎಂ ನಡುವೆ ವಾಗ್ವಾದ ನಡೆಯಿತು. ತಂಗಡಿಗೆಯ ಮಠಕ್ಕೆ ಎರಡು ಕೋಟಿ ರೂ. ಅನುದಾನ ಕೊಡುವಂತೆ ಸ್ವಾಮೀಜಿ ಬೇಡಿಕೆ ಇಟ್ರು. ರೀ ಕೊಡ್ರಿ ಸ್ವಾಮಿ ಎರಡು ಕೋಟಿ, ಇಲ್ಲದಿದ್ದರೆ ಪ್ರತಿಭಟನೆ ಮಾಡ್ತೀನಿ ಅಂತ ಸಿಎಂಗೆ ಎಚ್ಚರಿಕೆ ನೀಡಿದ್ರು.

    ಸ್ವಾಮೀಜಿ ಮಾತಿಗೆ ಸಿಟ್ಟಿಗೆದ್ದು ರೇಗಿದ ಸಿಎಂ, ರೀ ಏನ್ರೀ.. ಕೇಳ್ರಿ ಮೊದಲು ಇಲ್ಲಿ, ಸ್ಟ್ರೈಕ್ ಗೀಕ್ ಗೆ ಎಲ್ಲ ಹೆದರಲ್ಲ ನಾವು ಅಂದ್ರು. ಇದಕ್ಕೆ ಪ್ರತಿಯಾಗಿ ಸ್ವಾಮೀಜಿ, ಕಳೆದ ಬಾರಿ ಕೊಡ್ತೀನಿ ಅಂತ ಹೇಳಿ ಕೊಟ್ಟಿಲ್ಲ. ಏನ್ ತಿಳ್ಕೊಂಡಿದ್ದೀರಿ ನೀವು? ಕೊಡಲಿಲ್ಲ ಅಂದ್ರೆ ಪ್ರೊಟೆಸ್ಟ್ ಮಾಡ್ತೀನಿ. ಇಲ್ಲೇ ಈಗಲೇ ಬರೆಯಿರಿ, ಬರೆದು ನನ್ನ ಕೈಯಲ್ಲೇ ಕೊಡ್ರಿ ಅಂತ ಏರು ಧ್ವನಿಯಲ್ಲಿ ಸಿಎಂಗೆ ಕೇಳಿದ್ರು.

    ನಂತರ ಮಾತನಾಡಿದ ಸ್ವಾಮೀಜಿ, ಮಠದ ಅಭಿವೃದ್ಧಿಗೆ 2 ಕೋಟಿ ರೂ. ಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ. ಅವರ ಮೇಲೆ ಭರವಸೆಯೂ ಇದೆ. ಕೊಟ್ಟೇ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಗಟ್ಟಿಯಾಗೇ ಹೇಳಬೇಕಾದ ಪ್ರಸಂಗ ಬಂತು. ಅದಕ್ಕೆ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಕೊಡ್ತೀನಿ ಎಂದು ಹೇಳಿದ್ದಾರೆ. ಆ ಭರವಸೆ ಮೇಲೆ ಹೋಗ್ತಾ ಇದ್ದೇನೆ ಅಂದ್ರು.

  • ಪಿಣರಾಯಿ ಆಗಮನ ಖಂಡಿಸಿ ಮಂಗಳೂರು ಬಂದ್- ಕೇರಳ ಬಸ್ ಮೇಲೆ ಕಲ್ಲು ತೂರಾಟ

    ಪಿಣರಾಯಿ ಆಗಮನ ಖಂಡಿಸಿ ಮಂಗಳೂರು ಬಂದ್- ಕೇರಳ ಬಸ್ ಮೇಲೆ ಕಲ್ಲು ತೂರಾಟ

    – ಆತಂಕದ ನಡುವೆ ಸೌಹಾರ್ದ ಜಾಥಾಕ್ಕೆ ಕ್ಷಣಗಣನೆ

    ಮಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿದೆ. ಸಂಘ ಪರಿವಾರ ಪಿಣರಾಯಿ ಬರದಂತೆ ತಡೆಯಲು ಹರತಾಳಕ್ಕೆ ಕರೆ ನೀಡಿದ್ದರೆ, ರಾಜ್ಯ ಸರ್ಕಾರ ಕೇರಳ ಸಿಎಂ ಕಾರ್ಯಕ್ರಮಕ್ಕೆ ಸರ್ವ ರೀತಿಯ ಭದ್ರತೆ ನೀಡಲು ಸಜ್ಜಾಗಿದೆ.

    ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, 5ಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಕಂಡುಬಂದರೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದೆಂದು ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ 3 ಸಾವಿರಕ್ಕಿಂತಲೂ ಹೆಚ್ಚು ಕೆಎಸ್‍ಆರ್‍ಪಿ ಪೊಲೀಸರನ್ನು ಮಂಗಳೂರು ನಗರದ ಆಯಕಟ್ಟಿನ ಭಾಗದಲ್ಲಿ ನಿಯೋಜಿಸಲಾಗಿದೆ. ಮಾತ್ರವಲ್ಲದೇ 600 ಸಿಸಿ ಕ್ಯಾಮೆರಾಗಳು ಹಾಗೂ 60 ಡ್ರೋನ್ ಕ್ಯಾಮೆರಾಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಡಲಾಗಿದೆ. ಆದರೂ, ಸಂಘಪರಿವಾರ ಕರೆ ನೀಡಿರುವ ಬಂದ್ ರಾತ್ರಿಯಿಂದಲೇ ಶುರುವಾಗಿದೆ.

    ಮಂಗಳೂರಿನ ಕೋಟೆಕಾರು ಬಳಿ ಮಂಗಳೂರು -ಕಾಸರಗೋಡು ಕೆಎಸ್‍ಆರ್‍ಟಿಸಿ ಬಸ್ ಹಾಗು ಕೇರಳದ ಕಾಸರಗೋಡು ಜಿಲ್ಲೆಯ ಕುಂಜತ್ತೂರು ಬಳಿ ಕೇರಳ ಸಾರಿಗೆ ಬಸ್‍ಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿ ಬಸ್ ಮುಂಭಾಗದ ಗಾಜನ್ನು ಪುಡಿ ಮಾಡಿದ್ದಾರೆ. ಜೊತೆಗೆ ಅಲ್ಲಲ್ಲಿ ಕಲ್ಲುಗಳನ್ನಿಟ್ಟು ರಸ್ತೆ ಸಂಚಾರಕ್ಕೆ ರಾತ್ರಿಯೇ ಅಡ್ಡಿ ಉಂಟು ಮಾಡಿದ್ದಾರೆ.

    ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾರಂಭಿಸಲಿವೆ. ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಬದಲಾವಣೆಯಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಪಪಡಿಸಿದೆ. ಇಂದು ಬೆಳಗ್ಗೆ ಖಾಸಗಿ ಬಸ್ ಬಿಟ್ರೆ ಕೆಎಸ್ ಆರ್ ಟಿಸಿ ಬಸ್‍ಗಳು ಎಂದಿನಂತೆ ಓಡಾಟ ನಡೆಸುತ್ತಿವೆ.

  • ಡೈರಿ ವಿಚಾರ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹೀಗಂದ್ರು

    ಡೈರಿ ವಿಚಾರ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹೀಗಂದ್ರು

    ಬೆಂಗಳೂರು: ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಯಲಾದ ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಲಿ ಅಂತಾ ಹೇಳಿದ್ದಾರೆ.

    ಸಿಎಂ ಸರ್ಕಾರ ವಿಸರ್ಜಿಸಿ, ಡೈರಿ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿ. ಸಚಿವರು ಮತ್ತು ಗೋವಿಂದ ರಾಜು ಹೇಳುತ್ತಿರೋದೆಲ್ಲಾ ಸುಳ್ಳು. ಸಚಿವರು ಮೂರ್ಖರ ರೀತಿಯಲ್ಲಿ ವರ್ತನೆ ಮಾಡ್ತಾ ಇದ್ದಾರೆ. ಈ ಕುರಿತಾಗಿ ಜನಾತಾ ನ್ಯಾಯಾಲಯದ ಮುಂದೆ ಹೋಗಿ ಹೋರಾಟ ಮಾಡೋಣ. ಅಂಗೈಯಲ್ಲಿರೋ ಹುಣ್ಣಿಗೆ ತನಿಖೆಯ ಅವಶ್ಯಕತೆ ಇಲ್ಲ. ಹೀಗಾಗಿ ಈ ಕ್ಷಣವೇ ರಾಜೀನಾಮೆ ಪತ್ರವನ್ನು ಬಿಸಾಡಲಿ ಅಂತಾ ಬಿಎಸ್ ವೈ ಕಿಡಿಕಾರಿದ್ದಾರೆ.

  • ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ವಿಧಾನಸಭೆಯಲ್ಲಿ ಇಂದೇ ವಿಶ್ವಾಸಮತ ಯಾಚನೆ – ರೆಸಾರ್ಟ್‍ನಲ್ಲೇ ಬೀಡುಬಿಟ್ಟ ಸಿಎಂ ಪಳನಿಸ್ವಾಮಿ

    ಚೆನ್ನೈ: ತಮಿಳುನಾಡು ರಾಜಕೀಯ ಬೆಳವಣಿಗೆಯಲ್ಲಿ ಗುರುವಾರ ಸಿಎಂ ಪಟ್ಟಕ್ಕೇರಿರೋ ಪಳನಿಸ್ವಾಮಿಗೆ ಇಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸಬೇಕಿದೆ. ಹೀಗಾಗಿ ಪಳನಿಸ್ವಾಮಿ ಬಣದ ಶಾಸಕರು ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದಾರೆ.

    ಸಂಖ್ಯಾ ಬಲ ಈಗ ಅತಿಮುಖ್ಯವಾಗಿರುವ ಕಾರಣ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪಳನಿಸ್ವಾಮಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪಳನಿಸ್ವಾಮಿ ಬಳಿ 123 ಶಾಸಕರ ಬೆಂಬಲ ಇದೆ ಅಂತ ಹೇಳಲಾಗ್ತಿದೆ. ನಿನ್ನೆಯಷ್ಟೇ ಶಾಸಕ ಮೈಲಾಪುರ ಶಾಸಕ ನಟರಾಜನ್, ಸಿಎಂ ಪಳನಿಸ್ವಾಮಿ ಕ್ಯಾಂಪ್ ತೊರೆದು ಸೆಲ್ವಂ ಬಣ ಸೇರಿದ್ದಾರೆ. ಇನ್ನೂ 30 ಮಂದಿ ಸೆಲ್ವಂಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

    ಇದೇ ಏನಾದ್ರೂ ನಿಜವಾದಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಪಳನಿಸ್ವಾಮಿಗೆ ಸೋಲುಂಟಾಗೋದು ಖಚಿತ. ಈ ನಡುವೆ, ವಿಶ್ವಾಸಯಾಚನೆ ವಿರುದ್ಧ ಮತ ಚಲಾಯಿಸಿ ಅಮ್ಮನಿಗೆ ನಿಷ್ಠೆ ತೋರಿಸಬೇಕೆಂದು ಪನ್ನೀರ್ ಸೆಲ್ವಂ ಶಾಸಕರಿಗೆ ಕರೆ ನೀಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಜಯಾ ವಿರೋಧಿ.. ಈಗ ನೀವೂ ವಿರೋಧಿಸಿ ಎನ್ನುತ್ತಿದ್ದಾರೆ. ಈ ನಡುವೆ, ಪಳನಿಸ್ವಾಮಿಗೆ ವಿರುದ್ಧ ಮತ ಹಾಕಲು ಡಿಎಂಕೆ ನಿರ್ಧರಿಸಿದೆ. ಆದ್ರೆ, ಕಾಂಗ್ರೆಸ್ ಮಾತ್ರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೈಕಮಾಂಡ್ ಆದೇಶಕ್ಕೆ ಬದ್ಧ ಎಂದಿದೆ.

    ಇಂದು ಬಹುಮತ ಸಾಬೀತು ಮಾಡಬೇಕಿರುವ ಬೆನ್ನಲ್ಲೇ ಅಣ್ಣಾ ಡಿಎಂಕೆಯಿಂದ ಸಿಎಂ ಪಳನಿಸ್ವಾಮಿ, ಶಶಿಕಲಾ ಸಂಬಂಧಿಗಳಾದ ದಿನಕರನ್, ವೆಂಕಟೇಶನ್ ಸೇರಿದಂತೆ 16 ಮಂದಿಯನ್ನು ಪನ್ನೀರ್ ಸೆಲ್ವಂ ಬಣ ಪಕ್ಷದಿಂದ ಉಚ್ಛಾಟಿಸಿದೆ. ಅಲ್ಲದೆ, ಸೆಲ್ವಂ ಬಣದ ಕೆಲ ಶಾಸಕರು ಸ್ಪೀಕರ್ ಭೇಟಿಯಾಗಿ ಮಾತುಕತೆ ನಡೆಸಿ ರಹಸ್ಯ ಮತದಾನಕ್ಕೆ ಒತ್ತಾಯಿಸಿದ್ದಾರೆ. ಇನ್ನು ನಿನ್ನೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮತ್ತು ಸಚಿವರ ತಂಡ ಇವತ್ತು ಪರಪ್ಪನ ಅಗ್ರಹಾರಕ್ಕೆ ಭೇಟಿಕೊಟ್ಟು ಶಶಿಕಲಾರನ್ನ ಭೇಟಿಯಾಗ್ಬೇಕಿತ್ತು. ಆದ್ರೆ ಯಾವ ಸಚಿವರು ಜೈಲಿಗೆ ಭೇಟಿ ಕೊಡ್ಲಿಲ್ಲ. ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಿ, ಸಿಹಿಸುದ್ದಿ ಜೊತೆ ಬರೋದಕ್ಕೆ ಪಳಿನಿಸ್ವಾಮಿ ಕಾಯ್ತಿದ್ದಾರೆ. ಈ ಮಧ್ಯೆ ಜೈಲಲ್ಲಿರೋ ಶಶಿಕಲಾ ಪಳಿನಿಸ್ವಾಮಿಯವ್ರು ಬಂದಾಗ ಚರ್ಚೆ ಮಾಡೋದಕ್ಕೆ ವಿಶೇಷವಾದ ಕೊಠಡಿ ನೀಡಿ ಅಂತ ಮನವಿ ಮಾಡಿದ್ದಾರೆ. ಆದ್ರೆ ಪೊಲೀಸರು ಇನ್ನು ನಿರ್ಧಾರ ಮಾಡಿಲ್ಲ.

  • ಉಕ್ಕಿನ ಸೇತುವೆಗಾಗಿ 65 ಕೋಟಿ ರೂ. ಕಪ್ಪ – ಸಿಎಂ ವಿರುದ್ಧ ಬಿಎಸ್‍ವೈ ಹೊಸ ಬಾಂಬ್

    – ಬಿಜೆಪಿಯವ್ರೂ ಕೊಟ್ಟಿದ್ರು ಎಂದ ಹೆಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಹೈಕಮಾಂಡ್‍ಗೆ 1 ಸಾವಿರ ಕೋಟಿ ರೂಪಾಯಿ ಕಪ್ಪ ನೀಡಿದ್ದಾರೆ ಎಂದು ಆರೋಪಿಸಿರುವ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ವಿವಾದಿತ ಉಕ್ಕಿನ ಸೇತುವೆಗಾಗಿ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬಿಎಸ್‍ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಉಕ್ಕಿನ ಸೇತುವೆ ಕಾಮಗಾರಿಯ ಆರಂಭಿಕ ಲೆಕ್ಕಾಚಾರ 1,350 ಕೋಟಿ ರೂಪಾಯಿ. ಆದ್ರೆ ನಂತರ 2,400 ಕೋಟಿ ರೂಪಾಯಿಗೆ ಏರಿಸಲಾಗಿತ್ತು. ಇದಕ್ಕಾಗಿ ಸಿಎಂ ಮತ್ತವರ ಶಿಷ್ಯರಿಗೆ 150 ಕೋಟಿ ರೂಪಾಯಿ ಕಮಿಷನ್ ಕೊಡುವುದಾಗಿ ಮಧ್ಯವರ್ತಿಗಳು ಮಾತುಕೊಟ್ಟಿದ್ದರು. ಅದರಲ್ಲಿ ಸಿಎಂಗೆ 65 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಬೆಂಗಳೂರಲ್ಲಿ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಎಸ್‍ವೈ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಕೋರ್ಟ್‍ನಲ್ಲಿ ದಾಖಲೆ ಕೇಳ್ತಾರೆಯೇ ಹೊರತು ಆಣೆ-ಪ್ರಮಾಣವನಲ್ಲ ಎಂದಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ 150 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಪಾಸ್ತಿ ಸಿಕ್ಕಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದ್ರೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಬರೆದಿರುವ ಪತ್ರಕ್ಕೆ ತನಿಖೆ ಇನ್ನೂ ನಡೆಯುತ್ತಿದೆ ಅನ್ನೋ ಉತ್ತರವಷ್ಟೇ ಸಿಕ್ಕಿದೆ ಅಂತಾ ಸಿದ್ದರಾಮಯ್ಯ ಮೈಸೂರಲ್ಲಿ ತಿರುಗೇಟು ನೀಡಿದ್ದಾರೆ.

    ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಿಎಂ ಹೆಚ್‍ಡಿಕೆ ಬಿಜೆಪಿ ವಿರುದ್ಧವೇ ಹೈಕಮಾಂಡ್‍ಗೆ ಕಪ್ಪ ನೀಡಿದ ಆರೋಪ ಮಾಡಿದ್ದಾರೆ. ಹೈಕಮಾಂಡಿಗೆ ಕಪ್ಪ ಕೊಡುವುದು ಬಿಜೆಪಿ ಸರಕಾರ ಇದ್ದಾಗಲೂ ನಡೆಯುತ್ತಿತ್ತು. ಯಾವುದೋ ಯೋಜನೆ ಹೆಸರಲ್ಲಿ ಗುತ್ತಿಗೆದಾರರಿಂದ ಹಣ ಪಡೆದು ಚೆಕ್ ಮೂಲಕ ದೆಹಲಿಯಲ್ಲಿರುವ ನಾಯಕರಿಗೆ ಹಣ ಪಾವತಿಯಾಗ್ತಿತ್ತು ಅಂತಾ ಮಂಗಳೂರಲ್ಲಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

  • ರಾಜ್ಯಪಾಲರ ಜೊತೆ ಸೆಲ್ವಂ, ಶಶಿಕಲಾ ಚರ್ಚೆ- ಕೇಂದ್ರಕ್ಕೆ ವರದಿ ರವಾನಿಸಿದ ವಿದ್ಯಾಸಾಗರ್ ರಾವ್

    ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕಟ್ಟು ಒಂದು ರೀತಿಯಲ್ಲಿ ರೋಚಕ ಘಟ್ಟ ತಲುಪಿದೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಹಾಗೂ ಹೊಸ ಸರ್ಕಾರ ರಚನೆಗೆ ಅವಕಾಶ ಕೇಳ್ತಿರೋ ಶಶಿಕಲಾ ನಟರಾಜನ್ ಗುರುವಾರದಂದು ಚೆನ್ನೈನಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನ ಭೇಟಿಯಾಗಿದ್ರು. ಇಬ್ಬರ ಭೇಟಿ ಬಳಿಕ ತಮಿಳುನಾಡಿನ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ರಾಜ್ಯಪಾಲರು ವರದಿ ರವಾನಿಸಿದ್ದಾರೆ.

    ಜೊತೆಗೆ ಸಾಂವಿಧಾನಿಕ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ರೆ ಮತ್ತಷ್ಟು ಬಿಕ್ಕಟ್ಟು ಉಂಟಾಗಬಹುದು ಅಂತ ತಜ್ಞರು ಹೇಳಿದ್ದಾರೆ. ಹೀಗಾಗಿ ತಕ್ಷಣ ಸರ್ಕಾರ ರಚನೆಗೆ ಅವಕಾಶ ನೀಡದೇ ಕಾದು ನೋಡುವ ತಂತ್ರಕ್ಕೆ ಮೊರೆಹೋಗೋ ಸಾಧ್ಯತೆಯಿದೆ. ತೀರ್ಪು ಶಶಿಕಲಾ ವಿರುದ್ಧ ಬಂದ್ರೆ ಕೇಂದ್ರ ಸರ್ಕಾರನೂ ಪನ್ನೀರ್ ಸೆಲ್ವಂ ಪರ ನಿಲ್ಲುತ್ತೆ ಅಂತ ಮೂಲಗಳು ತಿಳಿಸಿವೆ.

    ಗುರುವಾರದಂದು ರಾಜ್ಯಪಾಲರನ್ನು ಭೇಟಿಯಾಗಿದ್ದ ಸೆಲ್ವಂ, ರಾಜೀನಾಮೆ ಹಿಂಪಡೀತಿನಿ. ಬಹುಮತ ಸಾಬೀತಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಧರ್ಮ ಗೆಲ್ಲುತ್ತೆ ಅಂತ ಮಾಧ್ಯಮಗಳ ಮುಂದೆನೂ ಹೇಳಿದ್ದಾರೆ. ಇನ್ನು ಶಶಿಕಲಾ ತನಗೆ 130 ಶಾಸಕರ ಬೆಂಬಲ ಇದೆ ಅಂತ ಸಹಿ ಇರೋ ಪತ್ರವನ್ನ ರಾಜ್ಯಪಾಲರಿಗೆ ನೀಡಿದ್ದಾರೆ. ಈ ಮಧ್ಯೆ, ಶಶಿಕಲಾ ಪರ ರೆಸಾರ್ಟ್ ಸೇರಿರೋ ಶಾಸಕರಲ್ಲಿ ಸುಮಾರು 30ರಷ್ಟು ಮಂದಿ ಸೆಲ್ವಂ ಪರವಾಗಿದ್ದಾರೆ ಅಂತ ತಿಳಿದುಬಂದಿದೆ.