Tag: ಸಿಎಂ ಯೋಗಿ

  • ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಸಿಎಂ ಯೋಗಿ, ಉಮಾ ಭಾರತಿ ಗೈರಾಗಿದ್ದು ಯಾಕೆ?

    ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಸಿಎಂ ಯೋಗಿ, ಉಮಾ ಭಾರತಿ ಗೈರಾಗಿದ್ದು ಯಾಕೆ?

    ಬೆಂಗಳೂರು: ಉಡುಪಿಯಲ್ಲಿ ಆಯೋಜನೆಗೊಂಡಿದ್ದ ಧರ್ಮ ಸಂಸದ್ ಸಮಾರೋಪ ಸಮಾರಂಭಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವೆ ಉಮಾ ಭಾರತಿ ಗೈರಾಗಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಭಾಷಣ ಮಾಡಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿತ್ತು. ಆದರೆ ಭಾನುವಾರ ನಡೆದ ಸಮಾರೋಪ ಸಮಾರಂಭಕ್ಕೆ ಬಿಜೆಪಿಯ ಇಬ್ಬರು ಫೈರ್ ಬ್ರಾಂಡ್ ನಾಯಕರು ಗೈರಾಗಿದ್ದಾರೆ.

    ಯೋಗಿ ಮತ್ತು ಉಮಾ ಭಾರತಿ ಗುಜರಾತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎನ್ನು ಮಾಹಿತಿ ಸಿಕ್ಕಿದೆ. ಆದರೆ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಧರ್ಮ ಸಂಸದ್ ನಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಕ್ಕೆ ಅಸಮಾಧಾನಗೊಂಡು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕನಾಗಿ ಭಾಗವಹಿಸದೇ ಗೋರಖ್‍ಪುರದ ಪೀಠಾಧಿಪತಿಯಾಗಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಈ ಮೊದಲು ಪ್ರಕಟವಾಗಿತ್ತು.

    1992ರ ನವೆಂಬರ್ 17ರಂದು ಉಮಾ ಭಾರತಿ ಅವರಿಗೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆ ಕೊಟ್ಟಿದ್ದರು. ಹೀಗಾಗಿ ಪೇಜಾವರ ಶ್ರೀಗಳ ಪರ್ಯಾಯದ ಅವಧಿಯಲ್ಲಿ ಉಡುಪಿಯಲ್ಲೇ ಆಯೋಜನೆಗೊಂಡಿದ್ದ ಎರಡನೇ ಧರ್ಮ ಸಂಸದ್ ನಲ್ಲಿ ಉಮಾಭಾರತಿ ಭಾಗವಹಿಸುವ ನಿರೀಕ್ಷೆಯನ್ನು ಹಿಂದೂ ಮುಖಂಡರು ಇಟ್ಟುಕೊಂಡಿದ್ದರು.

    ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಈ ಕಾರ್ಯಕ್ರಮಕ್ಕೆ ಗೈರು ಹಾಜರಿ ಹಾಕಿದ್ದಾರೆ ಎನ್ನಲಾಗಿದೆ. ಕೇರಳದ ಪ್ರಸಿದ್ಧ ಮಾತಾ ಅಮೃತಾನಂದಮಯಿ ಅವರು ಈ ಕಾರ್ಯಕ್ರಮಕ್ಕೆ ಗೈರು ಹಾಜರಿಹಾಕಿದ್ದಾರೆ.