Tag: ಸಿಎಂ ಯಡಿಯೂರಪ್ಪ

  • ಒಂದೆರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ: ಸಿಎಂ ಯಡಿಯೂರಪ್ಪ

    ಒಂದೆರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ: ಸಿಎಂ ಯಡಿಯೂರಪ್ಪ

    ಶಿವಮೊಗ್ಗ: ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದ್ದು, ಎಲ್ಲಾ ಜಿಲ್ಲೆಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

    ಅವರು ಶುಕ್ರವಾರ ಶಿಕಾರಿಪುರ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ರಾಜ್ಯದಲ್ಲಿ ಕೋವಿಡ್ ಮುಂದಿನ ಒಂದು ವಾರದಲ್ಲಿ ಹತೋಟಿಗೆ ಬರುವ ನಿರೀಕ್ಷೆ ಹೊಂದಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೊರೊನಾ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.

    ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದ ಹಲವು ವರ್ಗಗಳ ಜನರಿಗೆ ಸರ್ಕಾರ ಈಗಾಗಲೇ ಆರ್ಥಿಕ ನೆರವು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಫಲಾನುಭವಿಗಳ ಹಳೆ ಸಾಲ ಬಾಕಿಯನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ಈ ಹಣದಿಂದ ಮುರಿದುಕೊಳ್ಳಬಾರದು. ಈ ರೀತಿ ಹಳೆ ಸಾಲ ಚುಕ್ತಾ ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ಶಿಕಾರಿಪುರ ತಾಲೂಕಿನ ಪ್ರಮುಖ ನೀರಾವರಿ ಯೋಜನೆಗಳು ಬಹುತೇಕ ಅಂತಿಮ ಹಂತದಲ್ಲಿವೆ. ಈ ಯೋಜನೆಗಳ ಮೂಲಕ ಬರಪೀಡಿತವಾಗಿರುವ ಉಡುಗುಣಿ, ತಾಳಗುಂದ ಮತ್ತು ಹೊಸೂರು ಹೋಬಳಿಗಳ ಬಹುತೇಕ ಕೆರೆಗಳನ್ನು ಈ ಮಳೆಗಾಲದಲ್ಲಿ ತುಂಬಿಸುವ ವಿಶ್ವಾಸ ನನಗಿದೆ. ಶೇ.90ರಷ್ಟು ಕಾಮಗಾರಿಗಳು ಈಗಾಗಲೇ ಮುಗಿದಿದ್ದು, ಈ ಭಾಗದ ಹಲವು ವರ್ಷಗಳ ಕನಸು ಇದರಿಂದ ನನಸಾಗಲಿದೆ ಎಂದರು. ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಅನುದಾನ ಒದಗಿಸಲಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಹಳಿ ನಿರ್ಮಾಣ ಯೋಜನೆಯನ್ನು ತ್ವರಿತಗೊಳಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಿ ಯೋಜನೆ ಅನುಷ್ಟಾನಗೊಳಿಸಬೇಕು. ತಾಲೂಕಿನಲ್ಲಿ ಮಂಜೂರಾಗಿರುವ 10ಕೆವಿ ವಿದ್ಯುತ್ ಸ್ಟೇಷನ್‍ಗಳ ನಿರ್ಮಾಣ ಕಾರ್ಯವನ್ನು ಸಹ ಚುರುಕುಗೊಳಿಸಬೇಕು ಎಂದು ಸೂಚನೆ ನೀಡಿದರು.

    ತಾಲೂಕಿನ ಪ್ರತಿಯೊಬ್ಬರ ಅರ್ಹ ಬಡವರಿಗೂ ಮನೆ ನಿರ್ಮಿಸಿ ನೀಡಬೇಕು. ಇದಕ್ಕಾಗಿ ಆಶ್ರಯ ನಿವೇಶನ ಲಭ್ಯವಿಲ್ಲದಿದ್ದರೆ, ನಿವೇಶನ ಖರೀದಿಸಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಪ್ರತಿ ಅರ್ಹರಿಗೂ ಮನೆಯನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

    ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ: ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು. ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಸಕಾಲದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ತಾಲೂಕಿನಲ್ಲಿ ಹಲವು ನೀರಾವರಿ ಯೋಜನೆಗಳು ನಿರೀಕ್ಷೆಯಂತೆ ಅನುಷ್ಟಾನಗೊಳ್ಳುತ್ತಿದೆ. ಉಡುಗುಣಿ ತಾಳಗುಂದ ಏತ ನೀರಾವರಿ ಯೋಜನೆ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಕಸಬಾ ನೀರಾವರಿ ಯೋಜನೆ ಶೇ.50ರಷ್ಟು ಪೂರ್ಣಗೊಂಡಿದೆ. ಹೊಸಳ್ಳಿ-ಅಂಜನಾಪುರ ಯೋಜನೆಯ ಪೈಪ್‍ಲೈನ್ ಕಾರ್ಯ ನಡೆಯುತ್ತಿದೆ. ಯೋಜನೆಗೆ ಯಾವುದೇ ಆರ್ಥಿಕ ಅಡಚಣೆ ಇರುವುದಿಲ್ಲ. ತಾಲೂಕಿನಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಇದುವರೆಗೆ ತಾಲೂಕಿನಲ್ಲಿ 45ಸಾವಿರ ಮಂದಿಗೆ ಪ್ರಥಮ ಡೋಸ್ ಮತ್ತು 5ಸಾವಿರ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದರು.

    ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

    ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

    ಬೆಂಗಳೂರು: ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

    ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದಲಿಂಗಯ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ 4.45ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾರೆ.

  • 11 ಜಿಲ್ಲೆಗಳು ಲಾಕ್ – ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್

    11 ಜಿಲ್ಲೆಗಳು ಲಾಕ್ – ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್

    – ಅನ್‍ಲಾಕ್ ಜಿಲ್ಲೆಗಳಲ್ಲಿ ಷರತ್ತುಗಳು ಅನ್ವಯ

    ಬೆಂಗಳೂರು: ಕೊರೊನಾ ಸೋಂಕು ಪ್ರಮಾಣ ಕಡಿಮೆ ಇರುವ 19 ಜಿಲ್ಲೆಗಳನ್ನು ಅನ್‍ಲಾಕ್ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅನ್‍ಲಾಕ್ ಆಗಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್ ಇರಲಿದೆ.

    11 ಜಿಲ್ಲೆಗಳು ಲಾಕ್: ರಾಜ್ಯದಲ್ಲಿ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ.

    ಅನ್‍ಲಾಕ್ ಜಿಲ್ಲೆಗಳಲ್ಲಿ ಏನು ಸಡಿಲಿಕೆ:
    ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಈ ಕೆಳಕಂಡ ಸಡಿಲಿಕೆಗಳೊಂದಿಗೆ ದಿನಾಂಕ: 14-06-2021 ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ: 21-06-2021 ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

    1. ಎಲ್ಲಾ ಕಾರ್ಖಾನೆಗಳನ್ನು ಶೇ. 50 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. ಆದರೆ, ಗಾರ್ಮೆಂಟ್ ಇಂಡಸ್ಟ್ರೀಗಳು ಶೇ. 30 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ.
    2. ಎಲ್ಲಾ ಅಗತ್ಯ ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
    3. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಹಾಗೂ ನಿಮಾಣ ಚಟುವಟಿಕೆ ಸಂಬಂದಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ ನಿಡಲಾಗಿದೆ.
    4. ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
    5. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
    6. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
    7. ಕೋವಿಡ್ ಕರ್ಫ್ಯೂ ರಾತ್ರಿ 7 ಗಂಟೆಯಿಂದ ಬೆಳಿಗ್ಗ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
    8. ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

  • ಜೂನ್ 14ರಿಂದ ರಾಜ್ಯದಲ್ಲಿ ಅನ್‍ಲಾಕ್ ಪ್ರಕ್ರಿಯೆ – 11 ಜಿಲ್ಲೆಗಳು ಇನ್ನೊಂದು ವಾರ ಲಾಕ್

    ಜೂನ್ 14ರಿಂದ ರಾಜ್ಯದಲ್ಲಿ ಅನ್‍ಲಾಕ್ ಪ್ರಕ್ರಿಯೆ – 11 ಜಿಲ್ಲೆಗಳು ಇನ್ನೊಂದು ವಾರ ಲಾಕ್

    – ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಮಿನಿ ಲಾಕ್
    -BMTC, KSRTC ಬಸ್ ಸಂಚಾರ ಇಲ್ಲ

    ಬೆಂಗಳೂರು: ರಾಜ್ಯದಲ್ಲಿ ಸೋಂಕು ಇಳಿಕೆ ಕಂಡುಬಂದಿರುವ ಕಾರಣ ಜೂನ್ 14ರಿಂದ ಅನ್‍ಲಾಕ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದರು.

    ಶೇಕಡಾ 5ಕ್ಕಿಂತ ಹೆಚ್ಚು ಸೋಂಕಿರುವ 11 ಜಿಲ್ಲೆಗಳಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ವಿಸ್ತರಣೆಗೆ ಸರ್ಕಾರ ಮುಂದಾಗಿದೆ. ಸೋಂಕು ಹೆಚ್ಚಿರೋ ಕಾರಣದಿಂದಾಗಿ, ಅನ್‍ಲಾಕ್ ಪ್ರಕ್ರಿಯೆಯಿಂದ ಈ ಜಿಲ್ಲೆಗಳನ್ನು ಹೊರಗಿಡಲಾಗಿದೆ. ಅನ್‍ಲಾಕ್ ಪ್ರಕ್ರಿಯೆ ಆರಂಭವಾದ್ರೂ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ.

    ಏನಿರುತ್ತೆ? ಏನಿರಲ್ಲ?
    * ಎಲ್ಲ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಖಾನೆಗಳು ಕಾರ್ಯ ನಡೆಸಬಹುದು. ಗಾರ್ಮೆಂಟ್ಸ್ ಗಳಿಗೆ ಶೇ.30ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ
    * ಮಧ್ಯಾಹ್ನ 2 ಗಂಟೆವರೆಗೆ ದಿನಸಿ ಅಂಗಡಿಗಳು ತೆರೆಯಬಹುದು
    * ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಬೀದಿ ಬದಿ ವ್ಯಾಪಾರ
    * ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ
    * ವೀಕೆಂಡ್ ಲಾಕ್‍ಡೌನ್, ಶುಕ್ರವಾರ ರಾತ್ರಿ 7ರಿಂದ ಬೆಳಗ್ಗೆ 5 ಗಂಟೆವರೆಗೂ ಇರಲಿದೆ.
    * ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇಲ್ಲ.
    * ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು.

    ಬೆಳಗ್ಗೆ 8 ಜಿಲ್ಲೆಗಳ ಡಿಸಿಗಳು ಮತ್ತು ಉಸ್ತುವಾರಿ ಸಚಿವರ ಜೊತೆ ವರ್ಚೂವಲ್ ಸಭೆ ನಡೆಸಿದ್ದ ಸಿಎಂ ಸಂಜೆ ಸಚಿವರು ಮತ್ತು ಉನ್ನತಾಧಿಕಾರಿಗಳ ಜೊತೆ ಲಾಕ್, ಅನ್‍ಲಾಕ್ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜನ ಮೈಮರೆಯಬಾರದು. ಎಚ್ಚರಿಕೆಯಿಂದ ಇರಬೇಕು ಎಂಬ ಮಾತನ್ನು ಸಿಎಂ ಒತ್ತಿ ಹೇಳಿದರು.

  • ತಜ್ಞರ ಸಲಹೆ ಆಧರಿಸಿ ಅನ್‍ಲಾಕ್ ಸ್ವರೂಪ ನಿರ್ಧಾರ: ಡಾ.ಕೆ.ಸುಧಾಕರ್

    ತಜ್ಞರ ಸಲಹೆ ಆಧರಿಸಿ ಅನ್‍ಲಾಕ್ ಸ್ವರೂಪ ನಿರ್ಧಾರ: ಡಾ.ಕೆ.ಸುಧಾಕರ್

    ಬೆಂಗಳೂರು: ಒಂದೇ ಬಾರಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಬಹುದು. ಅನ್‍ಲಾಕ್ ಸ್ವರೂಪದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಚಟುವಟಿಕೆಗೆ ನಿಬರ್ಂಧ ಹೇರಿ, ಇನ್ನೂ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ಅನ್ ಲಾಕ್ ಯಾವ ರೀತಿ ಇರಬೇಕೆಂದು ತೀರ್ಮಾನ ಮಾಡುತ್ತಾರೆ. ಪಾಸಿಟಿವಿಟಿ ದರ ಶೇ.5 ಕ್ಕಿಂತ ಕಡಿಮೆ, 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಇದ್ದರೆ ಅನ್ ಲಾಕ್ ಮಾಡಬಹುದೆಂಬ ಅಭಿಪ್ರಾಯ ಇದೆ ಎಂದರು.

    ಅನ್ ಲಾಕ್ ಬಗ್ಗೆ ಯಾವುದೇ ಗೊಂದಲ ಇಲ್ಲ. ಮಹಾರಾಷ್ಟ್ರದಲ್ಲಿ ಪ್ರಕರಣ ಇಳಿಕೆಯಾದ ಬಳಿಕ ಅನ್ ಲಾಕ್ ಕಡೆಗೆ ಹೋಗಿದ್ದಾರೆ. ಆ ರಾಜ್ಯಕ್ಕಿಂತ ಬಹಳ ಬೇಗ ನಮ್ಮಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಚರ್ಚಿಸಲಿದ್ದಾರೆ. ಕೆಲ ದೇಶಗಳಲ್ಲಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿಲ್ಲ. ಅನೇಕ ಮಕ್ಕಳಿಗೆ ಮನೆ ಆರೈಕೆ ಮಾಡಲಾಗಿದೆ ಎಂದು ಏಮ್ಸ್ ನಿರ್ದೇಶಕರು ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಮಕ್ಕಳ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ನುಡಿದರು.

    ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 2,281 ಪ್ರಕರಣಗಳಿದ್ದು, 1,948 ಮಂದಿಗೆ ಚಿಕಿತ್ಸೆ ನೀಡುತ್ತಿದ್ದು, 102 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನು ಓದಿ: ಪಾಸಿಟಿವಿಟಿ ರೇಟ್ ಶೇ.6.68ಕ್ಕೆ ಇಳಿಕೆ, 20,246 ಡಿಸ್ಚಾರ್ಜ್- 10,959 ಹೊಸ ಕೊರೊನಾ ಕೇಸ್, 192 ಸಾವು

    ತಪ್ಪಿತಸ್ಥರ ರಕ್ಷಣೆ ಇಲ್ಲ: ಇತ್ತೀಚೆಗೆ ಹುಬ್ಬಳ್ಳಿ ಕಿಮ್ಸ್‌ಗೆ ಭೇಟಿ ನೀಡಿದ್ದಾಗ ಬೇರೆ ಸಚಿವರು ದೂರು ನೀಡಿದ್ದರು. ಆಗ ಸ್ಥಳದಲ್ಲೇ ತನಿಖೆಗೆ ಆದೇಶಿಸಿ ವರದಿ ನೀಡಲು ಸೂಚಿಸಲಾಗಿತ್ತು. ವರದಿ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನನ್ನ ಬಳಿ ವರದಿ ಬಂದ ಕೂಡಲೇ ಕ್ರಮ ವಹಿಸುತ್ತೇನೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ವೈದ್ಯರು ಆಸ್ಪತ್ರೆಯಿಂದ ಹೊರಗೆ 100 ಮೀಟರ್ ದೂರ ಹೋದ ಕೂಡಲೇ ಗೊತ್ತಾಗುವಂತೆ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ಅಳವಡಿಸಲಾಗುವುದು. ಪ್ರತಿ ಆಸ್ಪತ್ರೆಯ ವಾರ್ಡ್, ಐಸಿಯುನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಒಂದೇ ಕಡೆ ನಿರ್ವಹಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

    ಆಕ್ಸಿಜನ್ ಸಾಂದ್ರಕ ಕೊಡುಗೆ: ಹರ್ಬಲೈಫ್ ನ್ಯೂಟ್ರೀಶಿಯನ್ ಕಂಪನಿಯು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ 150 ಆಕ್ಸಿಜನ್ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ. ಸಪ್ತ ಸಚಿವರ ನಿವಾಸದಲ್ಲಿ ಸಚಿವರನ್ನು ಭೇಟಿಯಾದ ಕಂಪನಿಯ ಪ್ರತಿನಿಧಿಗಳು ಕಾನ್ಸಂಟ್ರೇಟರ್‌ಗಳನ್ನು ಹಸ್ತಾಂತರಿಸಿದರು. ಇದನ್ನು ಓದಿ: ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

  • ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ: ಬಿ.ಸಿ.ಪಾಟೀಲ್

    ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ: ಬಿ.ಸಿ.ಪಾಟೀಲ್

    ದಾವಣಗೆರೆ: ನಾವು 17 ಜನ ಯಡಿಯೂರಪ್ಪ ಅವರನ್ನು ನಂಬಿ ಬಂದಿದ್ದೇವೆ, ಬಿಜೆಪಿಯಲ್ಲಿರುವ 70% ಜನ ಬೇರೆ ಪಕ್ಷದಿಂದ ಬಂದವರು, ಪಕ್ಷಕ್ಕೆ ಸೇರಿದ ಮೇಲೆ ಮೂಲ ಹಾಗೂ ವಲಸಿಗರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್‍ರವರು ಹೇಳಿದ್ದಾರೆ.

    ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷಕ್ಕೆ ಸೇರಿದ ಮೇಲೆ ಮನೆಗೆ ಬಂದ ಸೊಸೆಯಾದಂತೆ, ಸೊಸೆಯಾಗಿ ಮನೆ ಸೇರಿದ ಮೇಲೆ ಮನೆ ಮಗಳಾಗುತ್ತಾಳೆ. ನಮಗೆ ಯಾವುದೇ ಅನಿಶ್ಚಿತತೆ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನು ಓದಿ:ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಐದೂ ಬೆರಳುಗಳೂ ಸಮನಾಗಿರಲ್ಲ, ಒಂದು ಮನೆ ಅಂದ ಮೇಲೆ ಹಲವಾರು ವ್ಯತ್ಯಾಸ ಮನಸ್ತಾಪಗಳು ಇರುತ್ತೆ. ಮಾಧ್ಯಮಗಳ ಪ್ರಶ್ನೆಗಳಿಂದ ರೋಸಿ ಹೋದ ಸಿಎಂ ಈ ರೀತಿ ಹೇಳಿಕೆ ನೀಡಿರಬಹುದು, ಅವರೇನು ತಪ್ಪು ಹೇಳಿಕೆ ನೀಡಿಲ್ಲ. ನಾವು ಪಕ್ಷದ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಿಎಂ ಪರ ಸಚಿವ ಬಿ.ಸಿ. ಪಾಟೀಲ್ ಬ್ಯಾಟಿಂಗ್ ಮಾಡಿದ್ದಾರೆ.  ಇದನ್ನು ಓದಿ:ಊರೂರು ಸುತ್ತಿ ಕೊರೊನಾ ಮುಕ್ತಿಗೆ ಪಣತೊಟ್ಟ ಕೊಡಗಿನ ಶಾಸಕರು

  • ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ: ಕೋವಿಡ್ 19 ನಿರ್ವಹಣೆಗೆ ಮೆಚ್ಚುಗೆ

    ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಸಂವಾದ: ಕೋವಿಡ್ 19 ನಿರ್ವಹಣೆಗೆ ಮೆಚ್ಚುಗೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆಶಾ ಕಾರ್ಯಕರ್ತೆಯರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್ 19 ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

    ಆಶಾ ಕಾರ್ಯಕರ್ತೆಯರ ಪರಿಶ್ರಮ ಹಾಗೂ ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವುದನ್ನು ಗಮನಿಸಿ, ಕೋವಿಡ್ 19 ಎರಡನೇ ಅಲೆಯ ಪರಿಹಾರ ಪ್ಯಾಕೇಜ್ ನಡಿ 3 ಸಾವಿರ ರೂ. ಸಹಾಯಧನ ಘೋಷಿಸಿರುವುದಾಗಿ ತಿಳಿಸಿದರು.

    ವಿವಿಧ ಜಿಲ್ಲೆಗಳ ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಅವರ ಆರೋಗ್ಯದ ಸ್ಥಿತಿ ಗತಿ, ಕಾರ್ಯ ನಿರ್ವಹಣೆ, ಅವರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ವಿವರ, ಸಾರ್ವಜನಿಕರು, ಮೇಲಾಧಿಕಾರಿಗಳ ಸಹಕಾರ ಮೊದಲಾದ ವಿಷಯಗಳ ಕುರಿತು ಚರ್ಚಿಸಿದರು.

    ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯ ಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಾಗಲು ಭಯ ಪಡುತ್ತಿದ್ದರು. ಆದರೆ ಇದೀಗ ಸಹಕರಿಸುತ್ತಿದ್ದಾರೆ ಎಂದು ಆಶಾ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.

    ಲಸಿಕೆ ಹಾಕಿಸಲು ತಮ್ಮ ಗ್ರಾಮದ ಜನರ ಮನವೊಲಿಸಿ, ಮೇಲಾಧಿಕಾರಿಗಳ ಸಹಾಯದಿಂದ ವಾಹನ ವ್ಯವಸ್ಥೆ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ದು ಲಸಿಕೆ ಹಾಕಿಸಿದ್ದನ್ನು ಸ್ಮರಿಸಿಕೊಂಡರು.

    ಕೋವಿಡ್ ಪೀಡಿತರಾಗಿದ್ದ ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ. ಕೋವಿಡ್ ಕೇರ್ ಸೆಂಟರಿನಿಂದಲೇ ಸಂವಾದದಲ್ಲಿ ಪಾಲ್ಗೊಂಡರು. ಕಳೆದ 15 ದಿನಗಳ ವರೆಗೆ ತಮ್ಮ ಗ್ರಾಮ ಕೋವಿಡ್ ಮುಕ್ತವಾಗಿತ್ತು. ಇದೀಗ ಏಳು ಪ್ರಕರಣಗಳು ಕಂಡು ಬಂದಿವೆ. ಇಬ್ಬರು ಹೋಂ ಐಸೊಲೇಷನ್ ನಲ್ಲಿದ್ದು, ಉಳಿದವರು ಕೋವಿಡ್ ಕೇರ್ ಸೆಂಟರಿನಲ್ಲಿ ದಾಖಲಾಗಿದ್ದಾರೆ ಎಂದು ವಿವರಿಸಿದರು.

    ಜನರು ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ತಮ್ಮ ಪತಿಗೇ ಮೊದಲಿಗೆ ಲಸಿಕೆ ಕೊಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ ಅನುಭವವನ್ನು ರಾಮನಗರದ ಶಿವಲಿಂಗಮ್ಮ ಹಂಚಿಕೊಂಡರು. ವಿಜಯಪುರ ಜಿಲ್ಲೆಯ ದೀಪಾ ಬಜ್ಜನವರ ಅವರು ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಲು ಜನರು ಹಿಂದೇಟು ಹಾಕಿದ ಅನುಭವವನ್ನು ವಿವರಿಸಿದರು.

    ಸಬ್ಬಮಂಗಲದ ರತ್ನಮ್ಮ ಅವರು, ಮನೆ ಮನೆಗೆ ಭೇಟಿ ನೀಡಿ, ಅರಿವು ಮೂಡಿಸುವುದರೊಂದಿಗೆ ಸೋಂಕಿತರಿಗೆ ಪೌಷ್ಟಿಕ ಆಹಾರ ಸೇವಿಸುವಂತೆ ಮನವರಿಕೆ ಮಾಡುತ್ತಿರುವುದಾಗಿ ತಿಳಿಸಿದರು. ಕೊಪ್ಪಳ ಜಿಲ್ಲೆ ನವಲಿ ಗ್ರಾಮದ ಲಕ್ಷ್ಮವ್ವ ನಾಯಕ್, ತಮ್ಮ ಗ್ರಾಮದಲ್ಲಿ 60 ವರ್ಷ ಮೇಲ್ಪಟ್ಟ 120 ಜನರಲ್ಲಿ 115 ಜನರಿಗೆ ಲಸಿಕೆ ಹಾಕಿಸಿರುವುದಾಗಿ ತಿಳಿಸಿದರು ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಬಡಜನರ ಚಿಕಿತ್ಸೆಗೆ ದಾನಿಗಳಿಂದ ನೆರವು ದೊರಕಿಸುವ ಪ್ರಯತ್ನ ಮಾಡಿರುವುದನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು.

    ಸಂವಾದದ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ಸುರಕ್ಷಿತ ಎಂಬುದನ್ನು ಮನವರಿಕೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಬೇಕು. ಜೊತೆಗೆ, ಐ ಎಲ್ ಐ, ಸಾರಿ ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಒದಗಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದರು.

    ಧಾರವಾಡ ಜಿಲ್ಲೆ ಅಮ್ಮಿನಭಾವಿಯ ಪ್ರೇಮಾ ಪ್ರಕಾಶ್ ಕಬ್ಬೂರು, ದಕ್ಷಿಣ ಕನ್ನಡ ಜಿಲ್ಲೆ ಸುಲ್ಕೇರಿಯ ಹೇಮಲತಾ, ರಾಮನಗರ ಜಿಲ್ಲೆಯ ದೊಡ್ಡಗಂಗವಾಡಿಯ ಶಿವಲಿಂಗಮ್ಮ, ವಿಜಯಪುರ ಜಿಲ್ಲೆ ಕಂಬಾಗಿಯ ದೀಪಾ ಬಜ್ಜನವರ್, ಬೆಂಗಳೂರು ನಗರ ಜಿಲ್ಲೆ ಸಬ್ಬಮಂಗಲದ ರತ್ನಮ್ಮ, ಬಳ್ಳಾರಿ ಜಿಲ್ಲೆ ದಬ್ಬೂರಿನ ಪರಿಮಳಾ, ಶಿವಮೊಗ್ಗ ಜಿಲ್ಲೆ ಮುಂಬಾರಿನ ಶಾರದಾ ಕೆ.ವಿ., ಕೊಪ್ಪಳ ಜಿಲ್ಲೆ ನವಲಿಯ ಲಕ್ಷ್ಮವ್ವ ನಾಯಕ್, ರಾಯಚೂರು ಜಿಲ್ಲೆ ಗಣಮೂರಿನ ಇಂದಿರಾ, ಬೆಳಗಾವಿ ಜಿಲ್ಲೆ ಸುರೇಬಾನದ ಶಾರದಾ ಮುದ್ದನ್ನವರ ಅವರು ಮುಖ್ಯಮಂತ್ರಿಯವರೊಂದಿಗೆ ಸಂವಾದ ನಡೆಸಿದರು.

    ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು.

  • ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್

    ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ : ಸಿ.ಪಿ.ಯೋಗೇಶ್ವರ್

    ಬೆಂಗಳೂರು: ಈ ಸರ್ಕಾರ ರಚನೆಯಾಗುವುದಕ್ಕೆ ನನ್ನದೂ ಅಳಿಲು ಸೇವೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ರವರು ಹೇಳಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಸ್ನೇಹ ಕಿತ್ತು ಹಾಕಿ ಬಿಜೆಪಿ ಸರ್ಕಾರ ತಂದಿದ್ದೇವೆ. ಸರ್ಕಾರ ರಚನೆಯಾಗಲು ನನ್ನದೂ ಅಳಿಲು ಸೇವೆ ಇದೆ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ಎರಡು ವರ್ಷ ಮುಂದುವರಿಯಬೇಕು ಎಂಬುದು ನನ್ನ ಇಚ್ಛೆ. ನನ್ನ ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳುತ್ತೇವೆ ಎಂದರು. ಇದನ್ನು ಓದಿ: ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

    ಆರ್.ಅಶೋಕ್ ಬಗ್ಗೆ ಮಾತನಾಡುತ್ತಿದ್ದಂತೆ. ಎಲ್ಲ ನನ್ನ ಸ್ನೇಹಿತರು ಅವರು ಏನು ಬೇಕಾದರೂ ಹೇಳಬಹುದು. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನುಣಿಚಿಕೊಂಡರು.

    ಯೋಗೇಶ್ವರ್‍ರವರು ಮಠಗಳಿಗೆ ಲಾಪ್ ಟ್ಯಾಪ್ ಹಿಡಿದು ಹೋಗಿದ್ದರು ಎಂಬ ಡಿ.ಕೆ ಶಿವಕುಮಾರ್ ಆರೋಪ ವಿಚಾರವಾಗಿ, ಡಿಕೆ ಶಿವಕುಮಾರ್‍ಗೆ ನನ್ನ ವಿರುದ್ಧ ಮಾತಾನಾಡುವುದು ಅನಿವಾರ್ಯ ಆಗಿದೆ. ಬಿಜೆಪಿಗೆ ಅವರು ಸಾಮಾನ್ಯ ಸದಸ್ಯನಾಗಿ ಸದಸ್ಯತ್ವ ತೆಗೆದುಕೊಳ್ಳೋದು ಒಳ್ಳೆಯದು. ಸಿಡಿ ಸಂಸ್ಕೃತಿ ಡಿಕೆ ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತು. ನಮ್ಮ ಜಿಲ್ಲೆಯ ಎಲ್ ಎನ್ ಮೂರ್ತಿ ಅನ್ನೋರು ಅವರು ಯಾರು ಯಾರಿಗೆ ಸಿಡಿ ತೋರಿಸುತ್ತಿದ್ದರು ಎಂದು ಬರೆದಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು. ಇದನ್ನು ಓದಿ: ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ

    ನನ್ನ ಬಗ್ಗೆ ಕುಚೋದ್ಯ ಮಾಡಬೇಕು, ಸಮಾಜದಲ್ಲಿ ಕಳಂಕ ತರಿಸಬೇಕು ಅಂತ ಡಿಕೆ ಶಿವಕುಮಾರ್ ಹೀಗೆಲ್ಲ ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ನನ್ನ ರಾಜಕೀಯ ವಿರೋಧಿ. ನನ್ನನ್ನ ಏನೋ ಮಾಡಿ ತಗಲು ಹಾಕಬೇಕು ಅಂತ ಹೀಗೆಲ್ಲ ಮಾತಾನಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರನ್ನು ನೋಡಿದರೆ ನನ್ನನ್ನ ನೋಡಿದರೆ ವಿಚಲಿತರಾಗುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದವರ ಬಗ್ಗೆ ನಾನೇನು ಮಾತಾನಾಡುವುದಿಲ್ಲ. ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಅವರು ಏನೇನೋ ಮಾತಾನಾಡುತ್ತಿದ್ದಾರೆ. ಅಲ್ಲದೇ ನಾನು ಆದಿಚುಂಚನಗಿರಿ ಮಠಕ್ಕೆ ಹೋಗುವುದು ಇದೇ ಮೊದಲಲ್ಲ. ಅನೇಕ ಬಾರಿ ಹೋಗಿದ್ದೇನೆ. ನಾನು ಮಠಕ್ಕೆ ಹೋಗಿ ಬಂದ ತಕ್ಷಣ ಡಿಕೆ ಶಿವಕುಮಾರ್‍ರವರು ಹೋಗುತ್ತಾರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಅದಕ್ಕೆ ನಾನು ಉತ್ತರ ಕೊಡೊಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಯೋಗೇಶ್ವರ್‍ರವರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಓದಿ:ಯಾರೂ ರಾಜಕೀಯ ಹೇಳಿಕೆಗಳನ್ನು ನೀಡಕೂಡದು: ಆಪ್ತರಿಗೆ ಸಿಎಂ ಸಂದೇಶ

  • ಯಾರೂ ರಾಜಕೀಯ ಹೇಳಿಕೆಗಳನ್ನು ನೀಡಕೂಡದು: ಆಪ್ತರಿಗೆ ಸಿಎಂ ಸಂದೇಶ

    ಯಾರೂ ರಾಜಕೀಯ ಹೇಳಿಕೆಗಳನ್ನು ನೀಡಕೂಡದು: ಆಪ್ತರಿಗೆ ಸಿಎಂ ಸಂದೇಶ

    ಬೆಂಗಳೂರು: ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಯಾರೂ ಯಾರೂ ರಾಜಕೀಯ ಹೇಳಿಕೆಗಳನ್ನು ನೀಡಕೂಡದು ಎಂದು ಸಿಎಂ ಯಡಿಯೂರಪ್ಪ ಆಪ್ತರಿಗೆ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.

    ಬಿಎಸ್‍ವೈ ಟ್ವೀಟ್:
    ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು.ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ವಿನಂತಿಸುತ್ತೇನೆ.

    ಭಾನುವಾರ ಸಿಎಂ ರಾಜೀನಾಮೆ ಮಾತುಗಳನ್ನಾಡುತ್ತಿದ್ದ ರಾಜ್ಯ ಬಿಜೆಪಿ ಅಂಗಳದಲ್ಲಿ ಹಲವು ಚರ್ಚೆಗಳು ಮುನ್ನಲೆಗೆ ಬಂದಿದ್ದವು. ಇತ್ತ ಮುಖ್ಯಮಂತ್ರಿಗಳು ಕೆಲವರ ಹೇಳಿಕೆಗಳಿಂದ ಮನನೊಂದು ಈ ಮಾತುಗಳನ್ನಾಡಿದ್ದಾರೆ ಎಂದು ಬಿಎಸ್‍ವೈ ಬಣದ ಶಾಸಕರು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

    ಸಿಎಂ ಭಾನುವಾರ ಹೇಳಿದ್ದೇನು?: ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಮಠಾಧೀಶರಿಗೆ ಬಿಜೆಪಿ ಸಚಿವರು ಲ್ಯಾಪ್‍ಟಾಪ್ ತೋರಿಸಿದ್ದಾರೆ: ಡಿಕೆಶಿ

  • ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

    ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ: ಕೇಂದ್ರ ಸಚಿವ ಜೋಶಿ

    ಧಾರವಾಡ: ನಮ್ಮಲ್ಲಿ ಯಾವುದೇ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿಲ್ಲ, ಸದ್ಯ ನಮ್ಮ ಆದ್ಯತೆ ಕೋವಿಡ್ ನಿಯಂತ್ರಣ ಮಾಡುವದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಈಗ ಯಾವುದೇ ಸಿಎಂ ಮತ್ತು ನಾಯಕತ್ವ ಬದಲಾವಣೆ ಇಲ್ಲ, ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ಚರ್ಚೆಯೂ ನಡೆದಿಲ್ಲ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಅನ್ನೋದು ವದಂತಿ ಮಾತ್ರ ಎಂದ ಅವರು, ಪ್ರಧಾನಿ ನರೇಂದ್ರ ಮೋದಿಯಂತಹ ಶ್ರೇಷ್ಠ ನಾಯಕರ ಅಡಿಯಲ್ಲಿ ಕೆಲಸ ಮಾಡುತ್ತಿರುವೆ, ಬಹಳ ಸಂತೋಷ ಮತ್ತು ಅಭಿಮಾನದಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

    ಇಲ್ಲಿ ಯಡಿಯೂರಪ್ಪವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇದೆಲ್ಲವೂ ಉಹಾಪೋಹಗಳು. ಸಿಎಂ ಹೇಳಿಕೆ ವಿಚಾರ ನಿನ್ನೆಯೇ ಮುಗಿದ ಅಧ್ಯಾಯ, ಪ್ರತಿ ವಾರದಂತೆ ಇವತ್ತು ನಾನು ದೆಹಲಿಗೆ ಹೊರಟಿರುವೆ. ನನ್ನ ಕೇಂದ್ರ ಸ್ಥಾನ ಇರುವ ಕಾರಣಕ್ಕೆ ದೆಹಲಿಗೆ ಹೊರಟಿರುವೆ. ಯಡಿಯೂರಪ್ಪ ಯಾವ ಹಿನ್ನೆಲೆಯಲ್ಲಿ ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ ಗೊತ್ತಿಲ್ಲ. ಆದರೂ ಅವರ ಹೇಳಿಕೆಯಲ್ಲಿ ಬೇರೆ ಅರ್ಥ ಏನಿಲ್ಲ ಎಂದು ಹೇಳಿದರು.

    ಸಿಎಂ ರೇಸ್‍ನಲ್ಲಿ ಬೆಲ್ಲದ್ ಹೆಸರು:
    ಸಿಎಂ ರೇಸ್‍ನಲ್ಲಿ ಅರವಿಂದ್ ಬೆಲ್ಲದ ಇದ್ದಾರೆ, ಸಹಿ ಸಂಗ್ರಹ ಮಾಡಿದ್ದಾರೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲಾರೆ. ಅದರ ಬಗ್ಗೆ ನಾನು ಏನೂ ಹೇಳಲಾರೆ ಎಂದರು. ಯಾವುದೇ ಸಹಿ ಸಂಗ್ರಹವನ್ನು ಹೈಕಮಾಂಡ್ ಸಹಿಸುವುದಿಲ್ಲ. ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಯಾವುದೇ ಸಹಿ ಸಂಗ್ರಹ ಆಗಿಯೇ ಇಲ್ಲ. ಒಂದೇ ಸಹಿ ಸಂಗ್ರಹ ನಡೆದಿತ್ತು. ಅದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು ಮಾತ್ರ. ಸದನ ಸದನ ನಡೆದಾಗ ಸಹಿ ಮಾಡಿದ್ದೇವೆ. ಅದೊಂದೆ ಸಹಿ ಸಂಗ್ರಹ ನಡೆದಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಇಲ್ಲಿ ಸಹಿ ಸಂಗ್ರಹಕ್ಕೆ ಅವಕಾಶ ಇಲ್ಲ. ಹಾಗೆ ಮಾಡಿದವರ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ. ಪಕ್ಷದ ಶಾಸಕಾಂಗ ಸಭೆಯಲ್ಲೇ ಏನೇ ಇದ್ದರೂ ಚರ್ಚೆ ನಡೆಯುತ್ತದೆ. ಗ್ರಾಮೀಣದ ರಸ್ತೆ, ಗ್ರಾಮಿಣ ಭಾಗಕ್ಕೆ ಸಂಬಂಧಿಸಿದ ಶಾಸಕರ ಸಹಿ ಅದು. ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕು ನಾನು ಮಾಡುತ್ತಿರುವೆ ಎಂದು ಉತ್ತರಿಸಿದರು. ಇದನ್ನೂ ಓದಿ: ಸಿಎಂ ರೇಸ್ ಬಗ್ಗೆ ನಾನು ಹೇಳಿಕೆ ನೀಡಲ್ಲ, 1 ಸಹಿ ಸಂಗ್ರಹ ನಡೆದಿತ್ತು: ಬೆಲ್ಲದ

    ಸಿಎಂ ಹೇಳಿದ್ದೇನು?: ನಾನು ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಬಿಜೆಪಿಗೆ ಪರ್ಯಾಯದ ವ್ಯಕ್ತಿ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯದಲ್ಲಿ ದೇಶದಲ್ಲಿ ಪರ್ಯಾಯ ನಾಯಕರು ಇದ್ದಾರೆ. ಕರ್ನಾಟಕದಲ್ಲೂ ಪರ್ಯಾಯ ವ್ಯಕ್ತಿಗಳು ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ ವಿಶ್ವಾಸ ಇರುತ್ತೋ ಅಲ್ಲಿವರೆಗೂ ನಾನು ಸಿಎಂ ಆಗಿರುತ್ತೇನೆ ಎಂದು ಹೇಳಿದ್ದರು.