Tag: ಸಿಎಂ ಮಮತಾ ಬ್ಯಾನರ್ಜಿ

  • Darjeeling Flood | ರಣಭೀಕರ ಮಳೆಗೆ ಭೂಕುಸಿತ – ಸಾವಿನ ಸಂಖ್ಯೆ 23ಕ್ಕೆ ಏರಿಕೆ

    Darjeeling Flood | ರಣಭೀಕರ ಮಳೆಗೆ ಭೂಕುಸಿತ – ಸಾವಿನ ಸಂಖ್ಯೆ 23ಕ್ಕೆ ಏರಿಕೆ

    – ಇಂದು ಡಾರ್ಜಿಲಿಂಗ್‌ಗೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಡಾರ್ಜಿಲಿಂಗ್‌ನಲ್ಲಿ (Darjeeling) ಸುರಿಯುತ್ತಿರುವ ರಣಭೀಕರ ಮಳೆಗೆ ಹಲವೆಡೆ ಭೂಕುಸಿತ “(Landslide) ಉಂಟಾಗಿದ್ದು, ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

    ಭಾನುವಾರ (ಸೆ.6) ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 23 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸರ್ಸಾಲಿ, ಜಸ್ಬೀರ್‌ಗಾಂವ್, ನಾಗರಕಟಾ, ಮಿರಿಕ್ ಬಸ್ತಿ, ಧಾರ್‌ಗಾವ್ (ಮೆಚಿ), ಮತ್ತು ಮಿರಿಕ್ ಲೇಕ್ ಪ್ರದೇಶ ಸೇರಿದಂತೆ ಹಲವೆಡೆ ಜನ ಪ್ರಾಣಕಳೆದುಕೊಂಡಿದ್ದಾರೆ.ಇದನ್ನೂ ಓದಿ: Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

    ಕೇವಲ 12 ಗಂಟೆಯಲ್ಲಿ 300 ಮಿ.ಮೀ ಮಳೆಯಾಗಿದ್ದರಿಂದ ಪ್ರವಾಹ, ಭೂಕುಸಿತ ಉಂಟಾಗಿದೆ ಎನ್ನಲಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ. ನಾಗರಕಟಾದ ಧಾರ್‌ಗಾವ್‌ನಲ್ಲಿ ಭೂಕುಸಿತದಿಂದಾಗಿ ನೆಲಸಮವಾದ ಮನೆಗಳ ಅವಶೇಷಗಳಡಿಯಿಂದ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ.

    ಇನ್ನೂ ಬಂಗಾಳ-ಸಿಕ್ಕಿಂ ಡಾರ್ಜಿಲಿಂಗ್-ಸಿಲಿಗುರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಡಾರ್ಜಿಲಿಂಗ್‌ನ ಟೈಗರ್‌ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಿದೆ. ಜೊತೆಗೆ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸೋಮವಾರದವರೆಗೂ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಸ್ಥಳೀಯರು ಮತ್ತು ಪ್ರವಾಸಿಗರಿಗಾಗಿ 9147889078 ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.

    ಸಾರ್ವಜನಿಕರ ಸಹಾಯಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 24/7 ಕಂಟ್ರೋಲ್ ರೂಮ್ ತೆರೆದಿದ್ದಾರೆ. ಈಗಾಗಲೇ ಪರಿಸ್ಥಿತಿಯನ್ನು ಕಂಟ್ರೋಲ್ ರೂಮ್ ಮೂಲಕ ಮೇಲ್ವಿಚಾರಣೆ ಮಾಡುತ್ತಿದ್ದು, ಇಂದು (ಅ.6) ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

    ಸಿಕ್ಕಿಂ ಸಂಪರ್ಕ ಕಡಿತ:
    ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಈ ವಿಪತ್ತು ಹಿಮಾಲಯ ರಾಜ್ಯವಾದ ಸಿಕ್ಕಿಂ ಜೊತೆಗಿನ ಸಂಪರ್ಕ ಕಡಿತಗೊಳಿಸಿದೆ. ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ, ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಗಳು ರಸ್ತೆ ತಡೆಗಳಿಗೆ ಕಾರಣವಾಗಿವೆ. ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ. ಈ ವಿಪತ್ತಿನಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಳ್ಳುವ ಸಾಧ್ಯತೆಯಿದೆ.ಇದನ್ನೂ ಓದಿ: ಜೈಪುರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ – 6 ರೋಗಿಗಳು ಸಜೀವ ದಹನ

     

  • ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

    ದೆಹಲಿ ಚುನಾವಣೆಗೆ ಆಪ್‌ಗೆ ಟಿಎಂಸಿ ಬೆಂಬಲ – ಧನ್ಯವಾದ ಎಂದ ಕೇಜ್ರಿವಾಲ್

    ನವದೆಹಲಿ: ಮುಂಬರುವ ದೆಹಲಿ ಚುನಾವಣೆ ಹಿನ್ನೆಲೆ ಆಪ್‌ಗೆ ಟಿಎಂಸಿ ಬೆಂಬಲ ನೀಡಿದ್ದು, ಅರವಿಂದ್ ಕೇಜ್ರಿವಾಲ್ (Arvind Kejriwal) ಧನ್ಯವಾದ ತಿಳಿಸಿದ್ದಾರೆ.

    ಫೆ.5 ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ (Delhi Assembly Election) ಇಂದು (ಜ.08) ಆಮ್ ಆದ್ಮಿ ಪಕ್ಷಕ್ಕೆ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷ ಬೆಂಬಲ ನೀಡಿದೆ.ಇದನ್ನೂ ಓದಿ: ಡಿನ್ನರ್ ಹೊಸತೇನು ಅಲ್ಲ, ಮುಸುಕಿನ ಗುದ್ದಾಟ ಏನಿಲ್ಲ: ಸಚಿವ ಸತೀಶ್ ಜಾರಕಿಹೊಳಿ

    ಇದಕ್ಕೆ ಪ್ರತಿಕ್ರಿಯಿಸಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರವಾಲ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ವೈಯಕ್ತಿಕವಾಗಿ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ದೆಹಲಿ ಚುನಾವಣೆಯಲ್ಲಿ ಎಎಪಿ ಪಕ್ಷಕ್ಕೆ ಟಿಎಂಸಿ ಬೆಂಬಲ ಘೋಷಿಸಿದೆ. ಮಮತಾ ದೀದಿ ಅವರಿಗೆ ಧನ್ಯವಾದಗಳು. ನಾನು ನಿಮಗೆ ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದೀರಿ ಮತ್ತು ಆಶೀರ್ವದಿಸಿದ್ದೀರಿ ಎಂದು ಉಲ್ಲೇಖಿಸಿದ್ದಾರೆ.

    ಆಡಳಿತಾರೂಢ ಎಎಪಿ 2015 ಹಾಗೂ 2020ರಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್, ಆಪ್ ಹಾಗೂ ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಎಎಪಿ ಹ್ಯಾಟ್ರಿಕ್ ಗೆಲುವನ್ನು ಸಾಧಿಸುವ ಗುರಿಯನ್ನು ಹೊಂದಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆಯು ಫೆ.05 ರಂದು ನಡೆಯಲಿದ್ದು, ಫೆ.08 ರಂದು ಮತ ಎಣಿಕೆ ನಡೆಯಲಿದೆ.ಇದನ್ನೂ ಓದಿ: Naxal Surrender | ಶಸ್ತ್ರ ತ್ಯಜಿಸಿ ಶರಣಾದ ನಕ್ಸಲರ ಬದುಕು ರೋಚಕ – ಇಲ್ಲಿದೆ ಕಂಪ್ಲೀಟ್‌ ವಿವರ!

  • ಪ್ರತಿಭಟನೆ ನಿಲ್ಲಿಸಿ, ದುರ್ಗಾಪೂಜೆಗೆ ಗಮನ ಹರಿಸಿ – ದೀದಿ ಹೇಳಿಕೆಗೆ ಮೃತ ಟ್ರೈನಿ ವೈದ್ಯೆಯ ತಾಯಿ ಆಕ್ರೋಶ

    ಪ್ರತಿಭಟನೆ ನಿಲ್ಲಿಸಿ, ದುರ್ಗಾಪೂಜೆಗೆ ಗಮನ ಹರಿಸಿ – ದೀದಿ ಹೇಳಿಕೆಗೆ ಮೃತ ಟ್ರೈನಿ ವೈದ್ಯೆಯ ತಾಯಿ ಆಕ್ರೋಶ

    ಕೋಲ್ಕತ್ತಾ: ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಲ್ಲಿಸಿ, ದುರ್ಗಾ ಪೂಜೆಯ ಕಡೆಗೆ ಗಮನ ಹರಿಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಕರೆ ನೀಡಿದ್ದಾರೆ.

    ಸಿಎಂ ಹೇಳಿಕೆಗೆ ಕೋಲ್ಕತ್ತಾ ಪ್ರಕರಣದ ಮೃತ ಟ್ರೈನಿ ವೈದ್ಯೆಯ ತಾಯಿ ಮಮತಾ ಬ್ಯಾನರ್ಜಿಯವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಾವು ನಮ್ಮ ಮಗಳ ಜೊತೆ ದುರ್ಗಾಪೂಜೆಯನ್ನು ಆಚರಿಸುತ್ತಿದ್ದೆವು. ಮುಂದೆ ಇನ್ಯಾವುದೇ ಹಬ್ಬ ಅಥವಾ ದುರ್ಗಾಪೂಜೆಯನ್ನು ಆಚರಣೆ ಮಾಡುವುದಿಲ್ಲ. ಅವರು ನಮ್ಮ ಮಗಳನ್ನು ಹಿಂದಿರುಗಿಸಲಿ. ಒಂದು ವೇಳೆ ಇದೇ ರೀತಿಯ ಘಟನೆ ಅವರ ಮನೆಯಲ್ಲಿಯೇ ಆಗಿದ್ದರೆ ಇದೇ ರೀತಿಯಾಗಿ ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

    ಇತ್ತೀಗಷ್ಟೇ ಬ್ಯಾನರ್ಜಿ ಅವರು ಕುಟುಂಬಕ್ಕೆ ಹಣವನ್ನು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕಳೆದ ಒಂದು ದಿನದ ಹಿಂದೆಯಷ್ಟೇ ಸಂತ್ರಸ್ತೆ ತಾಯಿ ಕೂಡ ಹಣದ ಆಫರ್ ಬಂದಿದೆ ಎಂದು ಒಪ್ಪಿಕೊಂಡಿದ್ದರು. ಆದ್ರೆ ಮಮತಾ ಬ್ಯಾನರ್ಜಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದರು.

    ಹಣ ನೀಡಿರುವ ಆರೋಪ ಕುರಿತು ಸಿಎಂ ಹೇಳಿದ್ದೇನು?

    ಆರ್‌ಜಿಕರ್‌ ಕಾಲೇಜಿನಲ್ಲಿ ನಡೆದ ಟ್ರೈನಿ  ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನಜಿ ಸೇರಿ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಶವವನ್ನು ನೋಡಲು ನಮಗೆ ಅವಕಾಶ ನೀಡಲಿಲ್ಲ. ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಪೊಲೀಸ್ ಠಾಣೆಯಲ್ಲಿ ಕಾಯಬೇಕಾಯಿತು. ನಂತರ, ಶವವನ್ನು ನಮಗೆ ಹಸ್ತಾಂತರಿಸಿದಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಮಗೆ ಹಣವನ್ನು ನೀಡಿದರು. ಅದನ್ನು ನಾವು ತಕ್ಷಣ ನಿರಾಕರಿಸಿದ್ದೇವೆ ಎಂದು ಮೃತ ವೈದ್ಯೆಯ ತಂದೆ ಆರೋಪಿಸಿದ್ದರು.

    ಇದಕ್ಕೆ ತಿರುಗೇಟು ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಮೃತ ವೈದ್ಯೆಯ ಕುಟುಂಬಕ್ಕೆ ನಾನು ಯಾವತ್ತೂ ಹಣ ನೀಡಿಲ್ಲ. ಇದು ಅಪಪ್ರಚಾರವಲ್ಲದೆ ಬೇರೇನೂ ಅಲ್ಲ. ಹಣವು ಎಂದಿಗೂ ಜೀವನವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ನಾನು ಪೋಷಕರಿಗೆ ಈ ಹಿಂದೆ ಹೇಳಿದ್ದೆ. ತಮ್ಮ ಮಗಳ ನೆನಪಿಗಾಗಿ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ಅವರು ಬಯಸಿದರೆ ಸರ್ಕಾರವು ಅವರ ಪರವಾಗಿ ನಿಂತಿದೆ ಎಂದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.

  • ಪ.ಬಂಗಾಳ ಸರ್ಕಾರ ನೀಡಿದ್ದ ಭೂಮಿ ಹಿಂದಿರುಗಿಸಿದ ಗಂಗೂಲಿ- ಬಿಜೆಪಿಯತ್ತ ಮುಖ ಮಾಡಿದ್ರಾ ದಾದಾ?

    ಪ.ಬಂಗಾಳ ಸರ್ಕಾರ ನೀಡಿದ್ದ ಭೂಮಿ ಹಿಂದಿರುಗಿಸಿದ ಗಂಗೂಲಿ- ಬಿಜೆಪಿಯತ್ತ ಮುಖ ಮಾಡಿದ್ರಾ ದಾದಾ?

    ಕೋಲ್ಕತ್ತಾ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಇತ್ತೀಚೆಗೆ ಸೌರವ್ ಗಂಗೂಲಿ ಅವರು ತೆಗೆದುಕೊಂಡ ಒಂದು ನಿರ್ಧಾರ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಸೌರವ್ ಗಂಗೂಲಿ ನೇತೃತ್ವದ ಟ್ರಸ್ಟ್ ಕೋಲ್ಕತ್ತಾದಲ್ಲಿ ಶಾಲೆಯನ್ನು ನಡೆಸುತ್ತಿದೆ. ಈ ಶಾಲೆಗೆ ಈಶಾನ್ಯ ಕೋಲ್ಕತ್ತಾ ಪ್ರದೇಶದಲ್ಲಿ ಪಶ್ಚಿಮ ಬಂಗಾಳ ಸರ್ಕಾರ 2 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಆದರೆ ಈ ಸ್ಥಳ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರಣ ಗಂಗೂಲಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

    ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಗಂಗೂಲಿ, ಟ್ರಸ್ಟ್‍ಗೆ ನೀಡಿದ್ದ ಭೂಮಿಯನ್ನು ವಾಪಾಸ್ ನೀಡುವುದಾಗಿ ತಿಳಿಸಿದ್ದರು. ಟ್ರಸ್ಟ್ ಕೂಡ ಭೂಮಿಯನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಪತ್ರದ ಅನ್ವಯ ಸದ್ಯ ಭೂಮಿಯನ್ನು ಸರ್ಕಾರ ವಾಪಾಸ್ ಪಡೆದಿದೆ ಎಂದು ಪಶ್ಚಿಮ ಬಂಗಾಳ ಗೃಹ ಮಂಡಳಿ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯದಲ್ಲಿ ಸ್ಪರ್ಧೆ ನಿಲ್ಲುವ ಸಮಾನ ನಾಯಕರ ಹುಡುಕಾಟದಲ್ಲಿ ಬಿಜೆಪಿ ಇದೆ. ಪರಿಣಾಮ ಗಂಗೂಲಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ. ಬಿಜೆಪಿ ಗಂಗೂಲಿ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿ ಚುನಾವಣೆಗೆ ಎದುರಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

    ಇತ್ತ ಗಂಗೂಲಿ ಅವರು ಕೂಡ ಬಿಜೆಪಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, 2019ರಲ್ಲಿ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಲು ಅಂದು ಅಮಿತ್ ಶಾ ಹಾಗೂ ಮತ್ತಿಬ್ಬರು ಬಿಜೆಪಿ ಸಚಿವರು ನೆರವು ನೀಡಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಹಿಂದೆಯೇ ರಾಜಕೀಯ ಪ್ರವೇಶದ ಕುರಿತು ಸ್ಪಷ್ಟನೆ ನೀಡಿದ್ದ ಗಂಗೂಲಿ, ತಾನು ಉತ್ತಮ ಕ್ರಿಕೆಟಿಗ ಎಂದು ಹೆಸರು ಪಡೆದಿದ್ದೇನೆ. ರಾಜಕೀಯ ಪ್ರವೇಶ ಮಾಡುವ ಅಲೋಚನೆ ಇಲ್ಲ ಎಂದಿದ್ದರು. ಆದರೆ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಂಗೂಲಿ ಅವರ ಮತ್ತೆ ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

  • 40 ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿ – ದೀದಿಗೆ ಶಾಕ್ ಕೊಟ್ಟ ಮೋದಿ

    40 ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿ – ದೀದಿಗೆ ಶಾಕ್ ಕೊಟ್ಟ ಮೋದಿ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಬ್ ಸಿಡಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡಿದ್ದಾರೆ.

    ಪಶ್ಚಿಮ ಬಂಗಾಳದ ಸೆರಾಂಪುರ್ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ, ಮೇ 23ರ ಬಳಿಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬರಲಿದೆ. ಆ ಬಳಿಕ ಎಲ್ಲೆಲ್ಲೂ ಬಿಜೆಪಿ ಇರಲಿದೆ. ಟಿಎಂಸಿ ಪಕ್ಷದ ನಿಮ್ಮ ಶಾಸಕರು ಕೂಡ ನಿಮ್ಮನ್ನು ತೊರೆದು ಬರಲಿದ್ದಾರೆ. ಈಗಾಗಲೇ 40 ಮಂದಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಏಕೆಂದರೆ ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಅವರು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿಮಗೆ ಈ ಸಂಗತಿ ಕಷ್ಟವಾಗಬಹುದು ಎಂದು ಹೇಳಿದ್ದಾರೆ.

    ಕಳೆದ ಸೋಮವಾರವೂ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದ್ದ ಮೋದಿ ಅವರು, ಲೋಕಸಭಾ ಚುನಾವಣೆ 4ನೇ ಹಂತದ ಮತದಾನದ ವೇಳೆ ಉಂಟಾದ ಘರ್ಷಣೆಗಳ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಟಿಎಂಸಿ ಕಾರ್ಯಕರ್ತರನ್ನು ಗೂಂಡಾಗಳ ಗುಂಪು ಎಂದು ಕರೆದಿದ್ದರು. ಅಲ್ಲದೇ ಗೂಂಡಾಗಳು ಚುನಾವಣೆಯಲ್ಲಿ ಮತದಾನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ನಡೆಸಿದ ಟಿವಿ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಪ್ರತಿಪಕ್ಷಗಳಲ್ಲೂ ನನಗೆ ‘ಒಳ್ಳೆಯ ಸ್ನೇಹಿತರಿದ್ದಾರೆ’ ಎಂದು ಹೇಳಿದ್ದರು. ಜತೆಗೆ ಮಮತಾ ಬ್ಯಾನರ್ಜಿ ಅವರು ಖುದ್ದಾಗಿ ವರ್ಷಕ್ಕೆ ಎರಡು ಜತೆ ಕುರ್ತಾಗಳನ್ನು ಮತ್ತು ಸ್ವತಃ ತಯಾರಿಸಿದ ಸಿಹಿತಿಂಡಿಗಳನ್ನು ಕಳುಹಿಸುತ್ತಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದರು.

    ಈ ವಿಚಾರ ಬಹಿರಂಗವಾದ ಬಳಿಕ ಮಮತಾ ಬ್ಯಾನರ್ಜಿ, ಮಣ್ಣಿನಿಂದ ಸಿಹಿತಿಂಡಿ ತಯಾರಿಸಿ ಅದರೊಳಗೆ ಕಲ್ಲುಗಳನ್ನು ತುಂಬಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿ ಕೊಡುತ್ತೇನೆ. ಲಡ್ಡು ತಯಾರಿಸುವಾಗ ಗೋಡಂಬಿ ಮತ್ತು ಒಣ ದ್ರಾಕ್ಷೆಗಳನ್ನು ಹಾಕುವಂತೆ ಮಣ್ಣಿನಿಂದ ತಯಾರಿಸಿದ ಸಿಹಿತಿಂಡಿಗೆ ಕಲ್ಲುಗಳನ್ನು ತುಂಬಿಸಿ ಮೋದಿಗೆ ಕಳುಹಿಸುತ್ತೇನೆ. ಅವರು ಅದನ್ನು ತಿನ್ನುವಾಗ ಹಲ್ಲುಗಳು ಮುರಿದು ಹೋಗಲಿ ಎನ್ನುವ ಆಘಾತಕಾರಿ ಹೇಳಿಕೆ ನೀಡಿದ್ದರು.

    ಕುರ್ತಾಗಳು ಮತ್ತು ಸ್ವೀಟ್‍ಗಳನ್ನು ಕಳುಹಿಸುವುದರಲ್ಲಿ ಯಾವ ತಪ್ಪೂ ಇಲ್ಲ. ದುರ್ಗಾ ಪೂಜೆ ಸಂದರ್ಭದಲ್ಲಿ ನಾವು ಪ್ರಮುಖ ವ್ಯಕ್ತಿಗಳ ಜತೆಗೆ ಸಿಹಿ ಹಂಚಿಕೊಳ್ಳುತ್ತೇವೆ. ಈ ವಿಷಯವನ್ನು ಬಹಿರಂಗಪಡಿಸುವ ಮೂಲಕ ಮೋದಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಮತಾ ಟೀಕಿಸಿದ್ದರು.

  • ನನ್ನ ವಿದೇಶಿ ಪ್ರವಾಸಗಳಿಂದಲೇ ಭಾರತಕ್ಕೆ ಜಾಗತಿಕ ಮನ್ನಣೆ : ದೀದಿಗೆ ಮೋದಿ ತಿರುಗೇಟು

    ನನ್ನ ವಿದೇಶಿ ಪ್ರವಾಸಗಳಿಂದಲೇ ಭಾರತಕ್ಕೆ ಜಾಗತಿಕ ಮನ್ನಣೆ : ದೀದಿಗೆ ಮೋದಿ ತಿರುಗೇಟು

    ಕೋಲ್ಕತ್ತಾ: ನನ್ನ ವಿದೇಶಿ ಪ್ರವಾಸಗಳಿಂದಲೇ ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಮೂಲಕ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ಪಶ್ಚಿಮ ಬಂಗಾಳದ ಬಿರ್ ಭುಮ್ ಜಿಲ್ಲೆಯಲ್ಲಿ ಇಂದು ನಡೆದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, ಚಾಯ್‍ವಾಲಾ ತಮ್ಮ ಆಡಳಿತ ಅವಧಿಯ ಐದು ವರ್ಷಗಳನ್ನು ವಿದೇಶಿ ಪ್ರವಾಸದಲ್ಲಿಯೇ ಕಳೆದಿದ್ದಾರೆ ಎಂದು ದೀದಿ ಹೇಳಿದ್ದಾರೆ. ಇದನ್ನು ನಾನು ಎಲ್ಲಿಯೋ ಓದಿದ್ದೇನೆ. ಆದರೆ ನನ್ನ ವಿದೇಶಗಳ ಭೇಟಿಯಿಂದಾಗಿ ಭಾರತಕ್ಕೆ ಗೌರವ ಸಿಕ್ಕಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

    ದೀದಿ ಮೇಲೆ ಭರವಸೆ ಇಟ್ಟು ನೀವು ಬೆಂಬಲ ನೀಡಿದ್ದೀರಿ. ಆದರೆ ದೀದಿ ನಿಮಗೆ ಏನು ಕೊಟ್ಟಿದ್ದಾರೆ? ಅವರ ಬಳಿ ಗೂಂಡಾ ತಂತ್ರದ ತಾಕತ್ ಇದೆ. ನಮ್ಮ ಬಳಿ ಜನತಂತ್ರ ಶಕ್ತಿಯಿದೆ. ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ಗೂಂಡಾ ಸಂಸ್ಕøತಿಯನ್ನು ಮುಕ್ತಿ ಮಾಡಲು ನನಗೆ ಬೆಂಬಲ ನೀಡಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಕೇಳುವ ಮೂಲಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸ್ವಯಂ ಪ್ರೇರಣೆಯಿಂದ ದೇಶದಲ್ಲಿ ಅನೇಕ ಜನರು ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಅಂತಹ ಜನರು ಇದ್ದಾರೆ. ನಿಮಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು.

    ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಆಚರಣೆ, ಸರಸ್ವತಿ ಪೂಜೆ ಮಾಡಿದರೆ ತೊಂದರೆ. ಆದರೆ ಬಿಜೆಪಿ ಸರ್ಕಾರವು ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣ ಮಾಡಿದೆ. ಹಿಂದೂ ಧರ್ಮದ ಪಾಲನೆಯನ್ನು ನನ್ನಿಂದ ಕಲಿಯದಿದ್ದರೂ ಯುಎಇ ಜನರಿಂದ ನೋಡಿ ಕಲಿಯಿರಿ ಎಂದು ದೀದಿ ವಿರುದ್ಧ ಗುಡುಗಿದರು.

  • ದೀದಿ ಪ್ರಧಾನಿಯಾದ್ರೆ ಅವ್ರು ಹೇಳಿದ್ದ ಸೀರೆ ಉಡಬೇಕಾಗುತ್ತದೆ: ಪ್ರಭಾಕರ್ ಕೋರೆ

    ದೀದಿ ಪ್ರಧಾನಿಯಾದ್ರೆ ಅವ್ರು ಹೇಳಿದ್ದ ಸೀರೆ ಉಡಬೇಕಾಗುತ್ತದೆ: ಪ್ರಭಾಕರ್ ಕೋರೆ

    ಧಾರವಾಡ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯಾದರೆ ಅವರು ಹೇಳಿದ್ದೇ ಸೀರೆ ಉಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಪ್ರಭಾಕರ್ ಕೋರೆ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ನಡೆದ ಗಣ್ಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಪ್ರಧಾನಿಯಾದರೆ ಏನಾಗುತ್ತದೆ ಗೊತ್ತಾ? ಧಾರವಾಡಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಮೂರ್ತಿ ಹಾಗೂ ಪ್ರತಿಮೆಗಳು ಗಾಯಬ್ ಆಗಿ ಎಲ್ಲಾ ಕಡೆ ಆನೆಗಳೇ ಬರುತ್ತವೆ. ಪಶ್ಚಿಮ ಬಂಗಾಳದ ಸಿಎಂ ದೀದಿ ಅವರು ಹೆಸರಿನಂತೆ ಮಮತಾ ಅಲ್ಲವೇ ಅಲ್ಲ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್, ಎಸ್‍ಪಿ, ಬಿಎಸ್‍ಪಿ, ಟಿಎಂಸಿ, ಟಿಡಿಪಿ ನಾಯಕರು ಕೈ ಕೈ ಹಿಡಿದು ಒಂದಾದರು. ಆದರೆ ಅವರು ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುಕ್ಕಾಗಿಯೇ ಹೊರತು ದೇಶದ ಅಭಿವೃದ್ಧಿಗಾಗಿ ಅಲ್ಲ ಎಂದು ಮಹಾಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನಿಯಾಗುವೆ ಎನ್ನುವ ಯುವರಾಜನಿಗೆ ದೇಶದ ಬಗ್ಗೆ ಏನೂ ಗೊತ್ತಿಲ್ಲ. ಅವರ ಭಾಷಣವನ್ನು ನೀವು ಕೇಳಿದ್ದೀರಿ. ದೇಶದಲ್ಲಿ ಎಷ್ಟು ಜಾತಿ, ಧರ್ಮ ಇವೇ ಎನ್ನುವುದೇ ಅವರಿಗೆ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಲೇವಡಿ ಮಾಡಿದರು.

  • ದೀದಿ ಭಯಗೊಂಡು ದೇಶ ವಿರೋಧಿಗಳನ್ನು ಹಿಂಬಾಲಿಸುತ್ತಿದ್ದಾರೆ: ಪ್ರಧಾನಿ ಮೋದಿ

    ದೀದಿ ಭಯಗೊಂಡು ದೇಶ ವಿರೋಧಿಗಳನ್ನು ಹಿಂಬಾಲಿಸುತ್ತಿದ್ದಾರೆ: ಪ್ರಧಾನಿ ಮೋದಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಯಗೊಂಡು, ನಿರಾಶೆಗೆ ಒಳಗಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ಪಶ್ಚಿಮ ಬಂಗಾಳದ ಕೂಚ್ ಬೆಹರ್ ನಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಅವರು ದೇಶ ವಿರೋಧಿಗಳನ್ನು ಹಿಂಬಾಲಿಸುತ್ತಿದ್ದಾರೆ. ಅವರನ್ನು ನೀವು ತುಂಬಾ ನಂಬಿದ್ದೀರಿ. ಆದರೆ ನಿಮ್ಮ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಸಮಾವೇಶದಲ್ಲಿ ಸೇರಿದ್ದ ಜನರಿಗೆ ತಿಳಿಸಿದರು.

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಪ್ರಚಾರಕ್ಕಾಗಿ ಈ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬಂದಿದ್ದರು. ಆದರೆ ಅವರ ವಿಶೇಷ ಹೆಲಿಕಾಪ್ಟರ್ ಇಳಿಸಲು ಮಮತಾ ಬ್ಯಾನರ್ಜಿ ಸರ್ಕಾರ ಅವಕಾಶ ನೀಡಿರಲಿಲ್ಲ. ಈ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಅವರು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಜನರನ್ನು ಹೆದರಿಸುತ್ತಿದ್ದು, ರಾಜ್ಯದಲ್ಲಿ ನಾವು ಚುನಾವಣಾ ಪ್ರಚಾರ ಮಾಡದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಮಮತಾ ಬ್ಯಾನರ್ಜಿ ಅವರು ದೇಶ ವಿರೋಧಿಗಳಿಗೆ ಬೆಂಬಲ ನೀಡುವ ಮೂಲಕ ಭಾರತವನ್ನು ವಿಭಜನೆ ಮಾಡಲು ಯತ್ನಿಸುತ್ತಿದ್ದಾರೆ. ನಿಮ್ಮ ಚೌಕಿದಾರ್ ಆಗಿರುವ ನಾನು ನಾಗರಿಕತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿದ್ದೇನೆ. ಈ ಮೂಲಕ ದೇಶದ ಮೇಲೆ ಗೌರವ, ನಂಬಿಕೆ ಹೊಂದಿರುವ ಮಾತೃ ಭಾರತದ ಮಕ್ಕಳ ರಕ್ಷಣೆಗಾಗಿ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

  • ರಾಹುಲ್ ಗಾಂಧಿ ಇನ್ನೂ ಮಗು: ಮಮತಾ ಬ್ಯಾನರ್ಜಿ ತಿರುಗೇಟು

    ರಾಹುಲ್ ಗಾಂಧಿ ಇನ್ನೂ ಮಗು: ಮಮತಾ ಬ್ಯಾನರ್ಜಿ ತಿರುಗೇಟು

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಾಲ್ಕು ದಿನಗಳ ಬಳಿಕ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

    ರಾಹುಲ್ ಗಾಂಧಿ ತಮಗೆ ತೋಚಿದ್ದನ್ನು ಹೇಳಿದ್ದಾರೆ. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿನ್ನೂ ಮಗು. ಅವರ ಬಗ್ಗೆ ನಾನು ಏನು ಹೇಳಲು ಸಾಧ್ಯ ಎಂದು ಪ್ರಶ್ನಿಸುವ ಮೂಲಕ ಮಮತಾ ಬ್ಯಾನರ್ಜಿ ಟಾಂಗ್ ಕೊಟ್ಟಿದ್ದಾರೆ.

    ಈ ಹಿಂದೆ ಬಿಜೆಪಿಯ ಮುಖಂಡರು ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ವ್ಯಂಗ್ಯವಾಡಿದ್ದರು. ರಾಹುಲ್ ಗಾಂಧಿ ಅವರಿಗಿಂತ ಮಮತಾ ಬ್ಯಾನರ್ಜಿ 15 ವರ್ಷ ಹಿರಿಯರಾಗಿದ್ದಾರೆ.

    ರಾಹುಲ್ ಗಾಂಧಿ ಹೇಳಿದ್ದೇನು?:
    ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಆಯೋಜಿಸಿದ್ದ ಮೊದಲ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ರಾಜ್ಯದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಯಾವುದೇ ಅಭಿವೃದ್ಧಿ ಮಾಡಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಅಷ್ಟೇ ಅಲ್ಲದೆ ಎಡಪಕ್ಷಗಳ ಆಡಳಿತದಿಂದ ಬಂಗಾಳದ ಜನರು ರೋಸಿ ಹೋಗಿದ್ದಾರೆ. ಮಮತಾ ಆಡಳಿತದಲ್ಲೂ ಇದು ಮುಂದುವರಿದಿದೆ, ದೌರ್ಜನ್ಯಗಳು ನಡೆಯುತ್ತಿದೆ ಎಂದು ದೂರಿದ್ದರು.

  • 12 ನಿಮಿಷದಲ್ಲಿ ಯುದ್ಧ ಆಗಿದೆ ಅಂತಾರೆ, ಡೆಡ್‍ಬಾಡಿ ಎಲ್ಲಿವೆ: ಶಾಸಕ ರಾಘವೇಂದ್ರ ಹಿಟ್ನಾಳ್

    12 ನಿಮಿಷದಲ್ಲಿ ಯುದ್ಧ ಆಗಿದೆ ಅಂತಾರೆ, ಡೆಡ್‍ಬಾಡಿ ಎಲ್ಲಿವೆ: ಶಾಸಕ ರಾಘವೇಂದ್ರ ಹಿಟ್ನಾಳ್

    ಕೊಪ್ಪಳ: ಬಾಲಕೋಟ್ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಶವಗಳ ಸಾಕ್ಷಿ ಕೇಳಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ದೇಶ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆನ್ನಲ್ಲೆ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಇದೇ ಪ್ರಶ್ನೆ ಕೇಳಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

    ನಗರದಲ್ಲಿ ಮಾತನಾಡಿದ ಶಾಸಕರು, ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಯ ಮೇಲೆ 12 ನಿಮಿಷ ದಾಳಿ ಮಾಡಿವೆ. ಈ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳುತ್ತಿದೆ. ಹಾಗಾದರೆ ಶವಗಳು ಎಲ್ಲಿವೆ? ಉಗ್ರ ಮೃತ ದೇಹವನ್ನು ಯಾರೂ ತೋರಿಸಿಲ್ಲ ಎಂದು ವೈಮಾನಿಕ ಯುದ್ಧಕ್ಕೆ ಸಾಕ್ಷಿ ಕೇಳಿದರು.

    ಸೈನಿಕರ ಸಾವಿನ ಹೆಸರಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಏರ್ ಸ್ಟ್ರೈಕ್ ನಿಂದಾಗಿ ರಾಜ್ಯದಲ್ಲಿ 22 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ್ದ ದುರಂತ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಸೈನಿಕ ಕುಟುಂಬ ಸಂಕಷ್ಟದಲ್ಲಿವೆ. ಆದರೆ ನಮ್ಮ ರಕ್ಷಿಸುವ ಯೋಧರ ಮೇಲೆ ರಾಜಕೀಯ ಮಾಡುವುದು ನಾಚಿಕೆಗೇಡಿತನ. ಕೋಮುಗಲಭೆ, ಗಲಾಟೆ ಮಾಡಸೋದು ಬಿಜೆಪಿಯ ಕೆಲಸ ಎಂದು ಕಿಡಿಕಾರಿದರು.

    ದೀದಿ ಹೇಳಿದ್ದೇನು?:
    ಏರ್ ಸ್ಟ್ರೈಕ್ ನಡೆದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯನ್ನು ಕರೆದಿಲ್ಲ. ಯಾವ ಪಕ್ಷಕ್ಕೂ ಮಾಹಿತಿ ನೀಡಿಲ್ಲ. ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.

    ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್ ಸ್ಟ್ರೈಕ್ ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಒತ್ತಾಯಿಸಿದ್ದರು.

    ವಿದೇಶಿ ಮಾಧ್ಯಮಗಳಲ್ಲಿ ಏರ್‍ಸ್ಟ್ರೈಕ್ ನಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿ ಬರುತ್ತಿದೆ. ಇನ್ನೊಂದೆಡೆ ಕೆಲವು ಮಾಧ್ಯಮಗಳಲ್ಲಿ ಒಬ್ಬ ಮೃತ ಪಟ್ಟಿದ್ದಾನೆ ಎಂದು ಉಲ್ಲೇಖಿಸಲಾಗುತ್ತಿದೆ. ಇದರಲ್ಲಿ ಯಾವುದು ಸತ್ಯವೆಂದು ಕೇಂದ್ರ ಸರ್ಕಾರವೇ ತಿಳಿಸಬೇಕು. ನಮಗೆ ಈಗ ಏರ್ ಸ್ಟ್ರೈಕ್ ಬಗ್ಗೆ ಮಾಹಿತಿ ಕೊಡಿ ಎಂದು ಮಮತಾ ಬ್ಯಾನರ್ಜಿ ಕೇಳಿಕೊಂಡಿದ್ದರು.

    https://www.youtube.com/watch?v=oseIZ5XYm4o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv