ಬೆಂಗಳೂರು: ಬಿಜೆಪಿ ಸರ್ಕಾರ ಬರಲು ನಾನು ಸಹ ಕಾರಣ. ಸರ್ಕಾರ ಮಾಡಲು ಮಂತ್ರಿ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಮೊದಲು ಓಡೋಡಿ ಹೋದವನು ನಾನು. ಈಗ ನನಗೆ ಸಚಿವ ಸ್ಥಾನ ಕೊಡದಿದ್ರೆ ಹೇಗೆ ಅಂತ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಎಂಎಲ್‍ಸಿ ಶಂಕರ್ ಪ್ರಶ್ನೆ ಮಾಡಿದ್ದಾರೆ.
ನಾನು ಸಹ ಸಿಎಂ ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ ಅಷ್ಟರಲ್ಲಿ ಅವರು ವಾಪಾಸ್ಸಾದ್ರು. 10 ಗಂಟೆಯವರೆಗೆ ಕಾಯಿರಿ ಅಂತ ಸಿಎಂ ಹೇಳಿದ್ದಾರೆ. ಆದ್ರೆ ಎಲ್ಲರಿಗೂ ಕೊಟ್ಟು ನನಗೆ ಹಾಗೂ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ಕೊಡದಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ರು. ನನಗೆ ಮಂತ್ರಿ ಮಾಡುವ ಭರವಸೆ ಇದೆ. ಸರ್ಕಾರ ಬರಲು ಕಾರಣಕರ್ತರಾದ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು ಅಂತ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ ಅಂತ ಸಿಎಂ ಹೇಳಿದ್ರು. ನೋಡೋಣ ಕಾಯಿರಿ ಅಂತ ಹೇಳಿದ್ರು. ಸರ್ಕಾರ ಬರಲು ನಾನು ಕಾರಣ ಕೇಳೋದು ನನ್ನ ಧರ್ಮ ಕೊಡೋದು ಅವರ ಧರ್ಮ. ಯಾವ ತೀರ್ಮಾನ ತಗೋತಾರೋ ಕಾದು ನೋಡಬೇಕು ಎಂದರು.
ನಾವ್ ಹೋಗದಿದ್ರೆ ಸರ್ಕಾರ ಆಗ್ತಿರಲಿಲ್ಲ. ಸರ್ಕಾರ ಮಾಡಿದವರಿಗೆ ಎಲ್ಲರಿಗೂ ಕೊಟ್ಟು ಇಬ್ಬರಿಗೆ ಕೊಡಿದಿದ್ರೇ ಹೇಗೆ? ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ಕೊಡದಿದ್ರೆ ಹೇಗೆ? ನಮ್ಮನ್ನ ಗಣನೆಗೆ ತೆಗೆದುಕೊಂಡರೆ ಎಲ್ಲರಿಗೂ ಓಳ್ಳೆಯದು. ಸಿಎಂ ಭರವಸೆ ನೀಡಿದ್ದಾರೆ. ಸಾಕಷ್ಟು ಕಷ್ಟಪಟ್ಟು ಶಾಸಕ ಸಚಿವನಾಗಿದ್ದವ, ರಾಜೀನಾಮೆ ಕೊಟ್ಟಿದ್ದು ಹುಡುಗಾಟಿಕೆಗೆ ಅಲ್ಲ. ಪಕ್ಷೇತರನಾಗಿ ಗೆಲ್ಲಲು ಸಾಕಷ್ಟು ಶ್ರಮ ಹಾಕಿದ್ದೇನೆ. ಮಂತ್ರಿಯಾದಾಗ ಸರ್ಕಾರದಿಂದ ಕೆಲಸ ಕಾರ್ಯ ಮಾಡಲು ಆಗಲಿಲ್ಲ. ಅಭಿಮಾನಿಗಳು ನನಗೆ ಅನ್ಯಾಯ ಆಗಬಾರದು ಅಂತ ಅವಲತ್ತುಕೊಳ್ತಿದ್ದಾರೆ. ಎಲ್ಲರಿಗೂ ಮುಂಚೆ ಒಡೋಡಿ ಹೋಗಿ ಸರ್ಕಾರ ಮಾಡಿದವನು ಎಂದು ಹೇಳಿದರು. ಇದನ್ನೂ ಓದಿ: ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್
ನವದೆಹಲಿ: ಸಚಿವ ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚಿಸಲು ದೆಹಲಿಗೆ ಬಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾತ್ರಿಯಾಗುತ್ತಿದ್ದಂತೆ ನಾಪತ್ತೆಯಾಗುತ್ತಿದ್ದಾರೆ. ಹಗಲು ವರಿಷ್ಠರನ್ನು ಭೇಟಿ ಮಾಡುವ ಸಿಎಂ ರಾತ್ರಿಯಾಗುತ್ತಿದ್ದಂತೆ ಕರ್ನಾಟಕ ಭವನಕ್ಕೂ ಆಗಮಿಸದೇ ಮಾಯವಾಗುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ದೆಹಲಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಮೊದಲ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದರು. ಈ ಭೇಟಿ ಬಳಿಕ ಅವರು ರಾತ್ರಿ ನಾಪತ್ತೆಯಾಗಿದ್ದರು. ಕರ್ನಾಟಕ ಭವನದ ಮೂಲಗಳ ಪ್ರಕಾರ ಅವರು ಅಂದು ರಾತ್ರಿ ಒಂದು ಗಂಟೆಗೆ ವಾಪಸ್ ಆಗಿದರಂತೆ.
ಇನ್ನು ಎರಡನೇ ಬಾರಿ ಸಚಿವ ಸಂಪುಟ ರಚನೆಗಾಗಿ ಭಾನುವಾರ ರಾತ್ರಿ ಸಿಎಂ ದೆಹಲಿಗೆ ಬಂದಿದ್ದರು. ಸಿಎಂಗೆ ರಾತ್ರಿ 9:30 ಕ್ಕೆ ಜೆ.ಪಿ ನಡ್ಡಾ ಭೇಟಿಗೆ ಸಮಯ ನೀಡಿದ್ದರು. ಆದರೆ ಕಾರಣಾಂತರದಿಂದ ಆ ಭೇಟಿ ರದ್ದಾಗಿತ್ತು. ಭೇಟಿಯ ಸಮಯ ರದ್ದಾಗುತ್ತಿದ್ದಂತೆ ಸಿಎಂ ಬೊಮ್ಮಾಯಿ ವಿಮಾನ ನಿಲ್ದಾಣದಿಂದ ನೇರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ತೆರಳಿದ್ದರು. ಜೋಶಿ ಮತ್ತು ಬೊಮ್ಮಾಯಿ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ ಹಿನ್ನಲೆ ಜೋಶಿ ಅವರನ್ನು ತಮ್ಮ ನಿವಾಸಕ್ಕೆ ಕರೆಯ್ದೊದರು ಎನ್ನುವ ಮಾಹಿತಿ ಇದೆ.
ಪ್ರಹ್ಲಾದ್ ಜೋಶಿ ನಿವಾಸಕ್ಕೆ ತೆರಳಿದ್ದ ಸಿಎಂ ಕೆಲಹೊತ್ತಿನ ಚರ್ಚೆ ಬಳಿಕ ತಮ್ಮಗೆ ದೆಹಲಿ ಪೊಲೀಸರು ನೀಡಿದ ಭದ್ರತೆಯನ್ನು ಬಿಟ್ಟು ಕರ್ನಾಟಕ ಭವನದ ಸಾಮಾನ್ಯ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಅಂದು ರಾತ್ರಿ ಕರ್ನಾಟಕ ಭವನಕ್ಕೆ ವಾಪಸ್ ಆದಾಗ ‘ಮಧ್ಯರಾತ್ರಿ’ ಒಂದು ಗಂಟೆಯಾಗಿತ್ತು. ಇದಕ್ಕೆ ಪಬ್ಲಿಕ್ ಟಿವಿ ಬಳಿ ಸಾಕ್ಷ್ಯಗಳಿದೆ.
ಭಾನುವಾರ ತಡರಾತ್ರಿ ಕರ್ನಾಟಕ ಭವನಕ್ಕೆ ಬಂದು ತಂಗಿದ್ದ ಸಿಎಂ ಸೋಮವಾರ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ರಾತ್ರಿ 8:45 ಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾಗಿ ಸುಮಾರು ಒಂದೂವರೆ ಗಂಟೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದರು. ಚರ್ಚೆ ಬಳಿಕವೂ ಎಸ್ಕಾರ್ಟ್ ಬಿಟ್ಟ ಸಿಎಂ ಮತ್ತೆ ಗೌಪ್ಯ ಸ್ಥಳಕ್ಕೆ ತೆರಳಿದ್ದರು.
ಸೋಮವಾರ ರಾತ್ರಿ ಸಿಎಂ ಕರ್ನಾಟಕ ಭವನಕ್ಕೆ ಬಂದೇ ಇಲ್ಲ. ಭವನದಲ್ಲಿ ಐಷರಾಮಿ, ಸಕಲ ಸೌಲಭ್ಯಗಳಿರುವ ಮುಖ್ಯಮಂತ್ರಿಗಳ ಕೊಠಡಿ ಇದ್ದರು ಅದನ್ನು ಬಳಕೆ ಮಾಡದ ಸಿಎಂ ಖಾಸಗಿ ಸ್ಥಳದಲ್ಲಿ ಉಳಿದುಕೊಂಡಿದ್ದರು. ಸಿಎಂ ತಮ್ಮ ಇಡೀ ರಾತ್ರಿಯನ್ನು ಸಂಸದ ಜಿ.ಎಂ ಸಿದ್ದೇಶ್ವರ ನಿವಾಸದಲ್ಲಿ ಕಳೆದಿದ್ದರು ಎಂದು ಮೂಲಗಳು ಹೇಳಿವೆ. ನಡ್ಡಾ ನಿವಾಸದಿಂದ ತೆರಳಿದ್ದ ಸಿಎಂ ಸಿದ್ದೇಶ್ವರ ಮನೆಯಲ್ಲಿ ರಾತ್ರಿ ಮಲಗಿದರಂತೆ. ಬೆಳಗ್ಗೆ ಅಲ್ಲೆ ತಯಾರಾಗಿ ಬೊಮ್ಮಾಯಿ ಸಿದ್ದೇಶ್ವರ ನಿವಾಸದಿಂದಲೇ ಸಂಸತ್ ಭವನಕ್ಕೆ ತೆರಳಿದ್ದರು. ಇದನ್ನೂ ಓದಿ:ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್
ಮುಖ್ಯಮಂತ್ರಿಗಳಿಗೆ ಕರ್ನಾಟಕ ಭವನದಲ್ಲಿ ಸಕಲ ಸೌಲಭ್ಯಗಳಿರುವಾಗ ಬೊಮ್ಮಾಯಿ ಮಾತ್ರ ಹೀಗೆ ರಾತ್ರಿಯಾಗುತ್ತಿದ್ದಂತೆ ಗೌಪ್ಯ ಸ್ಥಳಕ್ಕೆ ತೆರಳುತ್ತಿರುವುದೇಕೆ ಎಂದು ದೆಹಲಿಯಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ನಡೆ ಕಂಡು ಕರ್ನಾಟಕ ಭವನದ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಸಿಎಂ ಭೇಟಿಯಾಗಲು ಬರುತ್ತಿರುವ ಶಾಸಕರ, ಸಂಸದರು ಮತ್ತು ದೆಹಲಿಯ ಕನ್ನಡಿಗರು ಸಿಎಂ ಭೇಟಿ ಸಾಧ್ಯವಾಗದೇ ವಾಪಸ್ ತೆರಳುತ್ತಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಷರತ್ತು – ನಾಲ್ವರ ಭವಿಷ್ಯ ಹೈಕಮಾಂಡ್ ಕೈಯಲ್ಲಿ!
ಇನ್ನು ಸಿಎಂಗೆ ಭದ್ರತೆ ನೀಡಲು ಬಂದಿರುವ ದೆಹಲಿ ಪೊಲೀಸ್ ಕಮಾಂಡೊಗಳು ಟೆನ್ಷನ್ ಆಗುತ್ತಿದ್ದಾರೆ. ಪದೇ ಪದೇ ಮುಖ್ಯಮಂತ್ರಿಗಳು ಭದ್ರತೆಯನ್ನು ನಿರಾಕರಿಸಿ ಸಾಮಾನ್ಯ ಕಾರುಗಳಲ್ಲಿ ಗೌಪ್ಯ ಸ್ಥಳಕ್ಕೆ ತೆರಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಗೃಹ ಮಂತ್ರಿಯಾಗಿದ್ದವರು ಭದ್ರತೆಯನ್ನು ಹೀಗೆ ತಾತ್ಸರ ಮಾಡುತ್ತಿದ್ದಾರೆ, ಪ್ರೊಟೊಕಾಲ್ ಉಲ್ಲಂಘಿಸಿ ಓಡಾಡುತ್ತಿದ್ದಾರೆ, ಏನಾದರೂ ಹೆಚ್ಚು ಕಡಿಮಿಯಾದರೆ ಯಾರು ಜವಾಬ್ದಾರಿ ಎಂದು ಗೊಣಗುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್‍ಸೈಡ್ ಸ್ಟೋರಿ
ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ರಾತ್ರಿ ಹೊತ್ತು ಹೋಗುತ್ತಿರುವುದು ಎಲ್ಲಿಗೆ, ಮಾಡುತ್ತಿರುವುದು ಏನು? ಎಂದು ದೆಹಲಿ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಮೂಲಗಳ ಪ್ರಕಾರ ದೆಹಲಿಯಲ್ಲಿರುವ ರಾಜ್ಯ ನಾಯಕರ ಪೈಕಿ ತಮ್ಮ ಕೆಲವು ಆಪ್ತ ಸ್ನೇಹಿತರ ಜೊತೆಗೆ ಸಂತೋಷ ಕೂಟದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಸಂಪುಟ ರಚನೆಗೆ ಬಂದಿರುವ ಸಿಎಂ ಕದ್ದು ಮುಚ್ಚಿ ಓಡಾಡುತ್ತಿರುವ ಬೆಳವಣಿಗೆ ತೀವ್ರ ಸ್ವಾರಸ್ಯಕರವಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ
ವಿಜಯಪುರ: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆದರೆ ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ನನಗೆ ಕರ್ನಾಟಕದ ಸಿಎಂ ಆಗಿ ಕೆಲಸ ಮಾಡುವ ತಾಕತ್ತು ಇದೆ. ನನ್ನನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ನನ್ನ ಸದುಪಯೋಗ ಮಾಡಿಕೊಂಡರೆ ಮುಂದಿನ ಬಾರಿ ರಾಜ್ಯದಲ್ಲಿ 150 ಸ್ಥಾನಗಳು ಬರುತ್ತದೆ. ಯಾರು ನನ್ನ ಸಿಎಂ ಸ್ಥಾನಕ್ಕೆ ಅಡತಡೆ ಮಾಡಿದ್ದರು, ಅವರ ರಾಜಕೀಯ ಭವಿಷ್ಯ ಮುಗಿದೆ. ಪಾಪ ವಿಶ್ರಾಂತಿ ತೆಗೆದುಕೊಳ್ಳಲಿ, ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿ ಇರಲಿ ಎಂದು ಪರೋಕ್ಷವಾಗಿ ಯಡ್ಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.
ವಿಜಯಪುರಕ್ಕೆ ಈ ಬಾರಿ ಅನ್ಯಾಯ ಆಗಲ್ಲ, ಯಡ್ಡಿಯೂರಪ್ಪ ಅವರ ಮನೆಯಲ್ಲಿ ಈಗಾಗಲೇ ಒಬ್ಬರು ಇದ್ದಾರೆ. ಎಷ್ಟು ಜನರಿಗೆ ಅಂತಾ ಕೊಡುವುದು. ಒಂದು ಮನೆಯಲ್ಲಿ ಎಷ್ಟು ಜನ ಎಂಎಲ್‍ಎ, ಎಂಪಿ ಆಗಬೇಕು. ಹೈಕಮಾಂಡ್‍ಗೆ ಗೊತ್ತಿದೆ. ಈ ಅನುವಂಶಿಕವನ್ನು ಮುಂದುವರೆಸಬಾರದೆಂದು ಯಡ್ಡಿಯೂರಪ್ಪ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ಅವರಿಗೂ ಬೆನ್ನಿಗೆ ಚೂರಿ ಹಾಕದೆ ಇದ್ದರೆ ಸಾಕು ಎಂದು ಹೇಳಿದ್ದಾರೆ.
ವಿಜಯಪುರದಿಂದ ಬಾಗಲಕೋಟೆವರೆಗೆ ಈಶ್ವರಪ್ಪ ಜೊತೆ ಪ್ರಯಾಣ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ವಿ, ಮುಂಬರುವ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ, ಹೆಚ್ಚಿನ ಸಂಖ್ಯೆಯಲ್ಲಿ ಸೀಟ್ ತರುವ ಬಗ್ಗೆ ಚರ್ಚೆ ಮಾಡಿದ್ವಿ. ಭ್ರಷ್ಟರಿಗೆ ಹೊಗಳ ಭಟ್ಟರಿಗೆ ಇಟ್ಟುಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಕಷ್ಟ ಆಗುತ್ತೆ ಅಂತಾ ಮಾತನಾಡದ್ವಿ ಎಂದು ತಿಳಿಸಿದ್ದಾರೆ.
ನಿನ್ನ ಹಠ ಸಾಧಿಸಿದ್ದಿಯಾ, ಇನ್ನು ಮುಂದೆ ಎಲ್ಲರು ಪಕ್ಷ ಕಟ್ಟೋಣ. ಬಹಿರಂಗವಾಗಿ ಹೇಳಿಕೆ ಕೊಡಬೇಡ ಅಂತ ನನಗೆ ಸಲಹೆ ನೀಡಿದರು. ಅವರು ಹಿರಿಯರು ಅವರ ಮಾತಿಗೆ ನಾನು ಒಪ್ಪಿದ್ದೇನೆ. ಅಲ್ಲದೇ ಯಡ್ಡಿಯೂರಪ್ಪನವರು ಗೌರವಯುತವಾಗಿ ನಿರ್ಗಮನ ಆಗಿದ್ದಾರೆ. ಹೈಕಮಾಂಡ್ ಅವರಿಗೆ ಬಹಳ ಗೌರವ ಕೊಟ್ಟು ಮೋದಿಯವರು, ನಡ್ಡಾ ಅವರು, ಅಮಿತ್ ಶಾ ಅವರು ಅವರಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ನೀವು ಸಾಕಷ್ಟು ಕಷ್ಟ ಪಟ್ಟಿದ್ದೀರಿ. ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ. ಈಗ ನೀವು ಸ್ವಂತ ಹೆಲಿಕಾಪ್ಟರ್ ನಲ್ಲಿ ತಿರುಗಾಡುವಂತಹ ಶಕ್ತಿ ಬಿಜೆಪಿಯಿಂದ ಸಿಕ್ಕಿದೆ. ಬಿಜೆಪಿ ಋಣ ಬಹಳ ಇದೆ. ಅದಕ್ಕೆ ನಿಮ್ಮ ನಿವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಅಂತ ಸಂದೇಶದೊಂದಿಗೆ ಸ್ಪಷ್ಟವಾದ ಸಂಕೇತ ಕೊಟ್ಟಿದೆ ಎಂದು ನುಡಿದಿದ್ದಾರೆ.
ಇವತ್ತು ಬೊಮ್ಮಾಯಿ ಅವರ ಆಯ್ಕೆ ಯಡ್ಡಿಯೂರಪ್ಪನವರದು. ಬೊಮ್ಮಾಯಿ ಅವರಿಗೂ ಬೆಂಬಲ ಕೊಡಲಿಲ್ಲ ಅಂದರೆ, ಇವರು ಯಾರನ್ನು ಸಹಿಸುವುದಿಲ್ಲ. ಇವರು ಮುಂದೆ ತಮ್ಮ ಮಗನನ್ನೇ ಉತ್ತರಾಧಿಕಾರಿಯಾಗಿ ಮಾಡಲು ಬೊಮ್ಮಾಯಿ ಅವರನ್ನು ತಾತ್ಕಾಲಿವಾಗಿ ತಯಾರಿ ಮಾಡಿದ್ದಾರೆ ಎಂಬ ಸಂಶಯ ಬರಲು ಪ್ರಾರಂಭವಾಗುತ್ತೆ. ನಿನ್ನೆ ದೇವೆಗೌಡರು ಬೊಮ್ಮಾಯಿ ಸರ್ಕಾರಕ್ಕೆ ಏನಾದರೂ ತೊಂದರೆ ಆದರೆ, ನಾವು ಬೆಂಬಲಕೊಡುತ್ತೇವೆ ಎಂದಿದ್ದಾರೆ. ಯಡ್ಡಿಯೂರಪ್ಪನವರ ಜೊತೆ 10-20 ಜನರು ಹೋಗುತ್ತೀವಿ ಎಂದರೆ, ಜೆಡಿಎಸ್ ಬೆಂಬಲ ಇದೆ. ಇದು ಕೇಂದ್ರದ ಸೂಚನೆಯ ಮೇರೆಗೆ ಬೊಮ್ಮಾಯಿ ದೇವೆಗೌಡರನ್ನು ಭೇಟಿ ಮಾಡಿದ್ದಾರೆ ಅಂತ ನನಗೆ ಅನಿಸುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ದೇವೇಗೌಡರು, ಯಡಿಯೂರಪ್ಪ ನನ್ನ ಮೆಚ್ಚಿನ ನಾಯಕರು: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಸಚಿವ ಸಂಪುಟ ವಿಸ್ತರಣೆಯನ್ನು ಆದಷ್ಟು ಶೀಘ್ರವಾಗಿ ಮುಗಿಸಬೇಕು ಎಂಬುದು ಕೇಂದ್ರದ ನಾಯಕರಿಗೂ ಇದೆ. ಹೀಗಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಮಂಗಳವಾರ ಅಥವಾ ಬುಧವಾರ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿ ಇದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೊಮ್ಮಾಯಿ ಅವರ ಜೊತೆ ಹೈ ಕಮಾಂಡ್ ಚರ್ಚೆ ನಡೆಸಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಾದೇಶಿಕವಾರು ಸಚಿವ ಸ್ಥಾನ ನೀಡಬೇಕು. ಹಿರಿಯರು ಹಾಗೂ ಕಿರಿಯರಿಗೂ ಸ್ಥಾನ ಕಲ್ಪಿಸಿ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಅಲ್ಲದೇ ಕೇಂದ್ರದ ನಾಯಕರು ಯಾವುದೇ ಒತ್ತಡಕ್ಕೆ ಮಣಿಯದೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ಜಾತಿ ರಾಜಕಾರಣ ಬಿಟ್ಟು ಬಿಜೆಪಿ ಸೈದ್ದಾಂತಿಕವಾಗಿ, ಸಚಿವ ಸಂಪುಟ ವಿಸ್ತರಣೆ ಮಾಡಲಿದೆ ಎಂಬ ನಂಬಿಕೆ ಇದೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸ್ವಂತ ಬಹುಮತದೊಂದಿಗೆ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಆಸಕ್ತಿ ಸಹ ಹೈಕಮಾಂಡ್ ಗೆ ಇದೆ ಎಂದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್‍ಸೈಡ್ ಸ್ಟೋರಿ
ಇನ್ನು ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನ ಅನುಭವ ಬಳಕೆ ಮಾಡಿಕೊಳ್ಳಬೇಕೋ ಅಥವಾ ಬೇಡವಾ ಎಂಬುದು ಕೇಂದ್ರದ ನಾಯಕರಿಗೆ ಬಿಟ್ಟಿದ್ದು. ಹಿರಿತನವನ್ನು ಸಚಿವ ಸಂಪುಟದಲ್ಲಿ ಇದ್ದುಕೊಂಡೇ ಬಳಕೆ ಮಾಡಿಕೊಳ್ಳಬೇಕು ಎಂಬುದು ಇಲ್ಲ. ಮುಖ್ಯಮಂತ್ರಿ ಆಯ್ಕೆಯಿಂದ ಹಿಡಿದು ಸಚಿವ ಸಂಪುಟವನ್ನು ಕೃಷ್ಣನ ತಂತ್ರಗಾರಿಕೆಯಿಂದ ಬಹಳ ಬುದ್ದಿವಂತಿಕೆಯಿಂದ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ರೂಪದಲ್ಲಿ ಸಚಿವ ಸಂಪುಟ ಹಾಗೂ ಸರ್ಕಾರ ಇರಬೇಕು ಎಂಬುದನ್ನು ಹೈಕಮಾಂಡ್ ಗಮನಿಸುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್
ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಸಂಪುಟ ಸರ್ಕಸ್ ಇಂದು ಮುಗಿಯುವ ಸಾಧ್ಯತೆ ಇದೆ. ಸಂಪುಟ ಪಟ್ಟಿ ಭಾನುವಾರ ರಾತ್ರಿಯೇ ಫೈನಲ್ ಆಗೋದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಸಂಭಾವ್ಯರ ಪಟ್ಟಿಯೊಂದಿಗೆ ಭಾನುವಾರ ಸಂಜೆ ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂಪುಟ ಪಟ್ಟಿಯನ್ನು ಬಸವರಾಜ ಬೊಮ್ಮಾಯಿ ಫೈನಲ್ ಮಾಡಿಕೊಂಡು ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಒಂದೊಮ್ಮೆ ಎಲ್ಲಾ ಸರಿ ಹೋದಲ್ಲಿ ಇಂದು ಅಥವಾ ನಾಳೆ ಸಂಜೆಯೇ ನೂತನ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಈ ಬೆಳವಣಿಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ.
ಕಳೆದ ಬಾರಿ ಸಿಕ್ಕಂತೆ ಈ ಬಾರಿ ಬೆಂಗಳೂರಿನ ಶಾಸಕರಿಗೆ ಹೆಚ್ಚು ಪ್ರಾತಿನಿಧ್ಯ ಸಿಗೋದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಬಿಎಸ್‍ವೈ ಸಂಪುಟದಲ್ಲಿ ಬೆಂಗಳೂರಿನ 8 ಸಚಿವರಿದ್ದರು. ಬೊಮ್ಮಾಯಿ ಸಂಪುಟದಲ್ಲಿ ಅಷ್ಟು ಮಂದಿಗೆ ಚಾನ್ಸ್ ಸಿಗೋದು ಕಡಿಮೆ ಎನ್ನಲಾಗ್ತಿದೆ. ಇನ್ನು ಭಾನುವಾರ ಬೊಮ್ಮಾಯಿ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡಿ ಲಾಬಿ ಮಾಡಿದ್ರು. ಇದನ್ನೂ ಓದಿ: ಸ್ವಾಮೀಜಿಗಳು ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು: ಈಶ್ವರಪ್ಪ
ಬೆಂಗಳೂರು: ಇಂದು ಅಥವಾ ನಾಳೆ ಸಂಪುಟ ರಚನೆ ಮಾಡಲಾಗುತ್ತದೆ. ಹೈಕಮಾಂಡ್ ಸಂದೇಶದ ನಿರೀಕ್ಷೆಯಲ್ಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಬಗ್ಗೆ ಸಿಎಸ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಎಲ್ಲಾ ಡಿಸಿಗಳಿಂದ ವರದಿ ತರಿಸಿಕೊಳ್ತೀನಿ. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಹಣಕಾಸು ಬಿಡುಗಡೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು. ಇತ್ತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿದರು.
ಇಂದು ಬೆಳಗ್ಗೆಯೇ ಸಚಿವ ಸ್ಥಾನದ ಆಕಾಂಕ್ಷಿಗಳಾದ ಬಿ.ಸಿ.ಪಾಟೀಲ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಅಶ್ವತ್ಥ ನಾರಾಯಣ್ ಮತ್ತು ಕೆ.ಜಿ.ಬೋಪಯ್ಯ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದರು. ಸಿಎಂ ಭೇಟಿ ಬಳಿಕ ಮಾತನಾಡಿದ ಬಿ.ಸಿ.ಪಾಟೀಲ್, ಸಿಎಂ ಪ್ರಮಾಣವಚನ ಸ್ವೀಕರಿಸಿದ ಬಳಿಕ ದೆಹಲಿಗೆ ಹೋಗಿ ಬಂದಿದ್ದಾರೆ. ನಮ್ಮ ಕ್ಷೇತ್ರದ ನೀರಾವರಿ ಯೋಜನೆ ಉದ್ಘಾಟನೆಗೆ ಆಹ್ವಾನಿಸಲು ಬಂದಿದ್ದೆ. ಸಚಿವ ಸ್ಥಾನದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಸಂಪುಟ ರಚನೆ ಆದಷ್ಟು ಬೇಗ ಆಗುತ್ತೆ ಅಂತ ಅವರೇ ಹೇಳಿದ್ದಾರೆ ಎಂದರು. ಇದನ್ನೂ ಓದಿ:ಮಹಾರಾಷ್ಟ್ರಕ್ಕೆ ಎಂಟ್ರಿ ಕೊಟ್ಟ ಜಿಕಾ ವೈರಸ್ – ಪುಣೆಯ ಮಹಿಳೆಯಲ್ಲಿ ಸೋಂಕು ಪತ್ತೆ
– ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು – ಕಾಂಗ್ರೆಸ್ ಪಕ್ಷವೇ ದೇಶದಲ್ಲಿ ನಾಶವಾಗಿದೆ
ಬಾಗಲಕೋಟೆ: ಬಿಜೆಪಿಯಲ್ಲಿ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ವಲಸಿಗರ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಸಮಾಧಾನ ಏನು ಇಲ್ಲ. ಅದನ್ನು ಕೇಂದ್ರ ನಾಯಕರು ಬಗೆಹರಿಸುತ್ತಾರೆ. ನಮ್ಮ ಪಕ್ಷ ಸ್ವಚ್ಛವಾಗಿದೆ. ನಮ್ಮಲ್ಲಿ ಮುಂಚೆ ಬಂದವರು ಆ ಮೇಲೆ ಬಂದವರು ಎಂಬ ಯಾವುದೇ ಬೇದಭಾವವಿಲ್ಲ. ಒಂದು ವೇಳೆ 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬರದಿದ್ದರೇ ನಮ್ಮ ಪಕ್ಷ ಸರ್ಕಾರಕ್ಕೆ ಬರುತ್ತಿರಲಿಲ್ಲ ಎಂದಿದ್ದಾರೆ.
ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು, ಎರಡು ಸೇರಿ ಹಾಲು ಜೇನು ಇದ್ದಂತೆ. ಹೇಗೆ ಹಾಲು-ಜೇನು ಸೇರಿದರೆ ಸವಿ ಇರುತ್ತೋ ಅದೇ ರೀತಿ ನಮ್ಮ ಪಕ್ಷ. ಅವರೆಲ್ಲರನ್ನು ತೆಗೆದುಕೊಂಡು ನಮ್ಮ ಪಕ್ಷ ಈ ಮಟ್ಟಿಗೆ ಬೆಳೆದಿದೆ. ಯಾವುದೇ ಕಾರಣಕ್ಕೂ ನಮ್ಮಲ್ಲಿ ಗೊಂದಲಗಳಿಲ್ಲ. ಎಲ್ಲರೂ ಒಟ್ಟಿಗೆ ಇದ್ದೇವೆ. ನಾವೆಲ್ಲರೂ ಪಕ್ಷವನ್ನು ಕಟ್ಟಿಕೊಂಡು ಹೋಗುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನು ಹಾಡಿದ್ದಾರೆ.
ಸಿಎಂ ಆಗಿ ಎಂದು ಬೆಂಬಲಿಸಿದವರ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಅವರ ಜೊತೆಗೆ ಬೆಳೆದಿದ್ದೀರಾ, ಅವರ ಬಳಿಕ ನೀವೇ ಸಿಎಂ ಆಗಿ ಎಂದು ಹಲವು ವಿಶ್ವಾಸಿಗಳು ಫೋನ್ ಮಾಡಿ ಕೇಳಿಕೊಂಡರು. ಪಕ್ಷದ ಹಿರಿಯರು, ಹಿಂದುಳಿದ ನಾಯಕರು, ಪಕ್ಷವನ್ನು ಕಟ್ಟಿದ್ದೀರಿ, ನಿಷ್ಠಾವಂತ ಕಾರ್ಯಕರ್ತರು ನೀವು ಮುಖ್ಯಮಂತ್ರಿ ಇಲ್ಲವೇ, ಡಿಸಿಎಂ ಆಗಿ ಎಂದು ಹಲವಾರು ಆಪ್ತರು ನನಗೆ ಫೋನ್ ಮಾಡಿ ಹೇಳುತ್ತಿದ್ದರು. ಸ್ವಾಮೀಜಿಗಳು ಸೇರಿ ಅನೇಕರು ಹೋರಾಟ ಮೆರವಣಿಗೆಗಳನ್ನು ಮಾಡಿದ್ದರು ಅದಕ್ಕೆ ನನಗೆ ಖುಷಿಯಿದೆ ಎಂದಿದ್ದಾರೆ.
ಬಿಜೆಪಿ ಶ್ರೀರಾಮನ ಆದರ್ಶ ಮತ್ತು ಶ್ರೀಕೃಷ್ಣನ ತಂತ್ರಗಾರಿಕೆಯಿಂದ ಕೂಡಿದೆ. ಇದನ್ನು ನನಗೆ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ನಾವು ನಾಲ್ಕೇ ಜನ ಎಂಎಲ್‍ಎ ಗಳಿದ್ದೇವು ನಾನು ರಾಜ್ಯಾಧ್ಯಕ್ಷನಾಗಿದ್ದೆ ಆಗ ಹೇಳಿದ್ದರು. ನಮ್ಮ ಪಕ್ಷ ಒಬ್ಬ ವ್ಯಕ್ತಿ ಮೇಲೆ ನಿಂತಿಲ್ಲ. ಇದು ಸಿದ್ಧಾಂತ, ಆದರ್ಶಗಳ ಮೇಲೆ ನಿಂತಿದೆ. ನಮ್ಮ ಪಕ್ಷದ ಸಿದ್ಧಾಂತಕ್ಕೆ ಬೆಲೆ ಸಿಗಬೇಕೇ ವಿನಃ ವ್ಯಕ್ತಿಗಲ್ಲ. ಈ ದಿಕ್ಕಿನಲ್ಲಿ ತೀರ್ಮಾನಗಳು ಆಗುತ್ತಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಸಿಎಂ ಬದಲಾವಣೆಯನ್ನು ಕುರಿತು ಮಾತನಾಡಿದ ಅವರು, 75 ವರ್ಷ ದಾಟಿದವರಿಗೆ ರಾಜಕೀಯ ಅವಕಾಶಗಳು ಕಮ್ಮಿ ಮಾಡಿ ಯುವಕರಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕೆಂದು ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಯುವಕರ ಹೊಸ ಚಿಂತನೆಗಳು ಪಕ್ಷದಲ್ಲಿರಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ. ಒಬ್ಬರ ಕೈಯಲ್ಲಿ ರಾಜ್ಯದ ಆಳ್ವಿಕೆ ಬೇಡವೆಂದು ಈ ನಿರ್ಧಾರ ಎಂದಿದ್ದಾರೆ. ಇದನ್ನೂ ಓದಿ: ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು
ಹೊಸ ರೀತಿಯ ಪ್ರಯೋಗಗಳಿಗೆ ಅವಕಾಶಕೊಡಬೇಕು ಎಂದು ನಮ್ಮ ಪಕ್ಷ ಬಂದಿದೆ. ಅದಕ್ಕೆ ನಮ್ಮ ಪಕ್ಷದ ಹಲವಾರು ಜನ ರಾಷ್ಟ್ರೀಯ ಅಧ್ಯಕ್ಷರಾದ್ದಾರೆ. ಕಾಂಗ್ರೆಸ್ ಪಕ್ಷದ ರೀತಿ ಒಂದೇ ಕುಟುಂಬದವರು ಬರಬೇಕು ಎಂಬುದು ಬಿಜೆಪಿಯಲಿಲ್ಲ. ಗಾಂಧಿ ಕುಟುಂಬವೇ ಆಳ್ವಿಕೆಗೆ ಬರುತ್ತಿದ್ದರಿಂದ ಕಾಂಗ್ರೆಸ್ ದೇಶದಲ್ಲಿ ನಾಶವಾಗಿ ಹೋಗಿದೆ. ಅವರನ್ನು ಹುಡುಕಿ ತೆಗೆಯುವ ಪರಿಸ್ಥಿತಿ ಬಂದಿದೆ. ಅದೇ ನಮ್ಮ ಪಕ್ಷದಲ್ಲಿ ವ್ಯಕ್ತಿಗೆ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗೋದು ನನಗೆ ಇಷ್ಟವಿಲ್ಲ: ಜಗದೀಶ್ ಶೆಟ್ಟರ್
ಯತ್ನಾಳ್ ಅವರ ವಿಚಾರವಾಗಿ ಮಾತನಾಡಿದ ಅವರು, ಅವರ ಅಭಿಪ್ರಾಯಗಳನ್ನು ಪಕ್ಷಕ್ಕೆ ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಮಾಧ್ಯಮಕ್ಕೆ ಹೇಳಿಕೊಂಡರೆ ಯಾವುದೇ ಪ್ರಯೋಜನಗಳಿಲ್ಲ. ಆದರೆ ಅವರು ಹಿಂದುತ್ವವಾದಿ, ಒಳ್ಳೆಯ ಕಾರ್ಯಕರ್ತನನ್ನು ಪಕ್ಷ ಕಳೆದುಕೊಳ್ಳಬಾರದು ಎಂದುಕೊಳ್ಳುತ್ತಿದೆ. ಮುಂದೆ ಅವರು ಇದನ್ನು ತಿದ್ದಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ
– ರಕ್ಕಸ ನೆರೆಯಿಂದ ಬೀದಿಗೆ ಬಂದ ಬದುಕು – ತಿನ್ನಲು ಊಟ ಇಲ್ಲ, ಮಲಗಲು ಸೂರಿಲ್ಲ – ದೆಹಲಿಯಲ್ಲಿ ಸಿಎಂ ಕಾಲಹರಣ – ಸನ್ಮಾನ ಕಾರ್ಯಕ್ರಮಗಳಲ್ಲೇ ಬೊಮ್ಮಾಯಿ ಬ್ಯುಸಿ
ಬೆಂಗಳೂರು: ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಇದೇ ಬಿಜೆಪಿ ಸರ್ಕಾರ ತುರ್ತು 10 ಸಾವಿರ ರೂ. ಪರಿಹಾರ ಘೋಷಿಸಿತ್ತು. ಆದ್ರೆ ಈ ವರ್ಷ ಏಕವ್ಯಕ್ತಿ ಬಿಜೆಪಿ ಸರ್ಕಾರ 3,800 ರೂ. ಘೋಷಣೆ ಮಾಡಿದೆ. ಆದ್ರೆ ಈ ಘೋಷಣೆ ಕೇವಲ ಪೇಪರ್ ಗಳಲ್ಲಿಯೇ ಉಳಿದಿದ್ದು, ಕೊಡೋ ಹಣವನ್ನ ಸರಿಯಾಗಿ ನೀಡಿ ಎಂದು ಪ್ರವಾಹದಲ್ಲಿ ಮನೆ, ಆಸ್ತಿ ಕಳೆದುಕೊಂಡ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.
ಈ ಕಷ್ಟಗಳ ಪರಿಹಾರಕ್ಕೆ ಮುಂದಾಗಿರಬೇಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸಂಪುಟ ರಚನೆ ಮತ್ತು ಸನ್ಮಾನ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಬ್ಯುಸಿಯಾಗಿದ್ದಾರೆ. 2019ರಲ್ಲಿ ಪ್ರವಾಹದಿಂದಾಗಿ ನೀರು ನುಗ್ಗಿದ್ದ ಮನೆಗಳಿಗೆ ಸರ್ಕಾರ 10 ಸಾವಿರ ರೂ. ಪರಿಹಾರ ನೀಡಿತ್ತು. ಈ ಬಾರಿ ಕೇವಲ 3,800 ರೂ. ಪರಿಹಾರ ನೀಡಲು ಮುಂದಾಗಿದೆ. ಹೋಗ್ಲಿ ಅದಾದ್ರೂ ಸಿಕ್ಕಿದ್ಯಾ ಅಂದ್ರೆ ಅದೂ ಇಲ್ಲ. ಅಧಿಕಾರಿಗಳು ಮಾತ್ರ ಸರ್ವೆ ಕಾರ್ಯ ನಡೆಸಿ, ಎನ್‍ಡಿಆರ್‍ಎಫ್ ತಂಡದ ಮಾರ್ಗಸೂಚಿ ಪ್ರಕಾರ ಆಹಾರ ಸಾಮಗ್ರಿ ಹಾಗೂ ಬಟ್ಟೆ ಬರೆಗಾಗಿ 3,800 ರೂ. ಪರಿಹಾರ ಕೊಡ್ತೀವಿ ಅಂತ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸಂತ್ರಸ್ತರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.
ಚಿಕ್ಕೋಡಿ ತಾಲೂಕಿನ 11 ಗ್ರಾಮ, ರಾಯಬಾಗ ತಾಲೂಕಿನ 18 ಗ್ರಾಮ, ಅಥಣಿ ತಾಲೂಕಿನ 22 ಗ್ರಾಮ, ಕಾಗವಾಡ ತಾಲೂಕಿನ 7 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಇದುವರೆಗೂ ಒಟ್ಟು 45 ಸಾವಿರಕ್ಕೂ ಹೆಚ್ಚಿನ ಜನರನ್ನ ಸ್ಥಳಾಂತರ ಮಾಡಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನು ಜಲಾವೃತವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ, ವರದಾ ನದಿ ಪ್ರವಾಹದಿಂದ ಜಿಲ್ಲೆಯ ಅಂಕೋಲ, ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹಳಿಯಾಳ ಭಾಗದಲ್ಲಿ 737.54 ಕೋಟಿಗೂ ಹೆಚ್ಚು ನಷ್ಟವಾಗಿದೆ. 123 ಗ್ರಾಮಗಳು ಸಂಪೂರ್ಣ ಜಲಾವೃತವಾಗಿ 19 ಸಾವಿರಕ್ಕೂ ಹೆಚ್ಚು ಜನ ತೊಂದರೆಗೊಳಗಾಗಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನೆಲಕ್ಕುರುಳಿದರೆ ಅಲ್ಪ ಪ್ರಮಾಣದಲ್ಲಿ ಹಾನಿಯಾದ ಮನೆಗಳು ಸಹ ಸಾವಿರದ ಸನಿಹವಿದೆ. ಸಿಎಂ ಭೇಟಿ ನಂತರ ತಕ್ಷಣದಲ್ಲಿ ಜಾರಿ ಬರುವಂತೆ 3800 ಎನ್.ಡಿ.ಆರ್.ಎಫ್ ನಿಂದ, 6200 ರಾಜ್ಯ ಸರ್ಕಾರದಿಂದ ಒಟ್ಟು -10ಸಾವಿರ ತಕ್ಷಣದ ಪರಿಹಾರ ನೀಡಬೇಕಿತ್ತು. ಆದ್ರೆ ಇದುವರೆಗೂ ಚೇತರಿಕೆಯ ಪರಿಹಾರದ ಜೊತೆ ಸರ್ವೆ ಕಾರ್ಯ ಸಹ ವಿಳಂಬವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭ ಹಾಗೂ ಘಟಪ್ರಭ ಪ್ರವಾಹಕ್ಕೆ ಸಿಕ್ಕು, 48 ಗ್ರಾಮಗಳು ಜಲಾವೃತವಾಗಿವೆ. ಕಾಳಜಿ ಕೇಂದ್ರಗಳನ್ನ ತೆರೆದು, 7061 ಜನ್ರಿಗೆ ಊಟ ಉಪಹಾರ ವ್ಯವಸ್ಥೆ ಮಾಡಲಾಗಿದೆ. 9 ಸಾವಿರದ 17 ಹೆಕ್ಟೇರ್ ಬೆಳೆ ಲಾಸ್ ಆಗಿದೆ. 84 ಮನೆಗಳು ಭಾಗಶಃ ಬಿದ್ದಿದ್ರೆ, 11 ಜಾನುವಾರುಗಳ ಸಾವಾಗಿವೆ. ಆದ್ರೆ ಈ ವರೆಗೆ ಮನೆ ಬಿದ್ದವರಿಗೆ ಹಾಗೂ ಪ್ರವಾಹಕ್ಕೆ ತುತ್ತಾದ ಗ್ರಾಮಸ್ಥರಿಗೆ ಈ ವರೆಗೂ ಯಾವುದೇ ತುರ್ತು ಪರಿಹಾರ ಸಿಕ್ಕಿಲ್ಲ. ಬಾಗಲಕೋಟೆಯಲ್ಲಿ ಘಟಪ್ರಭಾ ನದಿಯ ಪ್ರವಾಹ ಕೊಂಚ ತಗ್ಗಿದೆ. ಆದ್ರೆ ಪ್ರವಾಹಕ್ಕೆ ಡಾಂಬರ್ ರಸ್ತೆ, ವಿದ್ಯುತ್ ಕಂಬಗಳು ಕೊಚ್ಚಿ ಹೋಗಿವೆ. ಮುಧೋಳ ನಗರದ ಯಾದವಾಡ ಸೇತುವೆ ಬಳಿ ಘಟನೆ ನಡೆದಿದೆ. ಸುಮಾರು ಐದಾರು ದಿನಗಳಿಂದ ಯಾದವಾಡ ಸೇತುವೆ ಜಲಾವೃತವಾಗಿತ್ತು. ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಸೇತುವೆ ಕೊಂಚ ತೆರವಾಗಿದೆ. ಆದ್ರೆ ಪ್ರವಾಹಕ್ಕೆ ಸೇತುವೆ ಬಳಿಯ ಡಾಂಬರ್ ರಸ್ತೆ. ಸೇತುವೆ ಪಕ್ಕದ ಹೊಲಗದ್ದೆಗಳಲ್ಲಿದ್ದ ವಿದ್ಯುತ್ ಕಂಬಗಳು ಪ್ರವಾಹದಿಂದ ಮಾಯವಾಗಿವೆ.
ಕಳೆದ 2019ರಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಧಾರವಾಡದ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಇದರಲ್ಲಿ ನಗರದ ಗೌರಡ ಕಾಲೋನಿ ಕೂಡಾ ಒಂದು. ಆಗ ಜಲಾವೃತಗೊಂಡಿದ್ದ ಹಾಗೂ ಮಳೆ ನೀರು ನುಗ್ಗಿದ್ದ ಮನೆಗಳಿಗೆ ಸರ್ಕಾರ 10 ಸಾವಿರ ಪರಿಹಾರ ಕೊಟ್ಟಿತ್ತು. ಈ ಬಾರಿ ಕುಡಾ ಅದೇ ರೀತಿಯ ಮಳೆ ಬಂದು ಅದೇ ಕಾಲೋನಿ ಹಾನಿಯಾಗಿದೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಕಾಲೋನಿಗೆ ನಾಲ್ಕು ಗ್ರಾಮಗಳಿಂದ ನೀರು ಬರುತ್ತೆ. 30 ಮನೆಗಳಿಗೆ ನೀರು ನುಗ್ಗಿ ರೇಷನ್ ಸೇರಿದಂತೆ ಎಲ್ಲವೂ ಹಾಳಾಗಿದೆ. ಊಟಕ್ಕೂ ಕೂಡಾ ಏನೂ ಇಲ್ಲದೇ ಜನ ಗೊಳಾಡ್ತಿದ್ದಾರೆ.
ನಾರಾಯಣಪುರ ಜಲಾಶಯದಿಂದ 4 ಲಕ್ಷ 20 ಸಾವಿರ ಕ್ಯೂಸೆಕ್ ನೀರನ್ನ ಕೃಷ್ಣಾ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ 107 ಗ್ರಾಮಗಳು ಪ್ರವಾಹ ಭೀತಿಯನ್ನ ಎದುರಿಸುತ್ತಿವೆ. ದೇವದುರ್ಗ ತಾಲೂಕಿನ 13 ಗ್ರಾಮಗಳಲ್ಲಿ ಅಂಜಳ ಹಾಗೂ ಕೊಪ್ಪರ ಗ್ರಾಮಕ್ಕೆ ಈಗಾಗಲೇ ನೀರು ನುಗ್ಗಿದೆ. ಗ್ರಾಮಗಳ ನೂರಾರು ಎಕರೆ ಜಮೀನಿನ ಲಕ್ಷಾಂತರ ಎಕರೆ ಬೆಳೆ ಹಾಳಾಗಿದೆ. ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವ ಹಿನ್ನೆಲೆ ಗ್ರಾಮಸ್ಥರು ಆತಂಕ ಎದುರಿಸುತ್ತಿದ್ದಾರೆ. ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಮೇವು ಸಹ ನದಿಗೆ ಕೊಚ್ಚಿಕೊಂಡು ಹೋಗುತ್ತಿದೆ. ವರುಣನ ಅರ್ಭಟಕ್ಕೆ ಗಡಿ ಜಿಲ್ಲೆ ಬೆಳಗಾವಿ ಜಿಲ್ಲೆಯ ಹಲವಾರು ಸೇತುವೆಗಳು ಸಂಪರ್ಕ ಕಳೆದುಕೊಂಡಿದ್ದವು. ಮಳೆ ಕಡಿಮೆಯಾಗಿ ಒಂದು ವಾರ ಕಳೆದರೂ ಕೂಡ ಸೇತುವೆಗಳು ಸೇವೆಗೆ ಸಿದ್ಧವಾಗಿಲ್ಲ, ಕಾರಣ ನದಿ ನೀರಿನ ರಭಸಕ್ಕೆ ಕೆಲ ಸೇತುವೆಗಳು ಕೊಚ್ಚಿ ಹೋಗಿವೆ. ಇನ್ನು ಕೆಲ ಸೇತುವೆಗಳು ಸರಿ ಸುಮಾರು ಹದಿನೈದು ದಿನಗಳು ನೀರಿನಲ್ಲಿ ನಿಂತು ಶಿಥಿಲಾವಸ್ಥೆಯಲ್ಲಿವೆ.
ಹಾವೇರಿ ಜಿಲ್ಲೆಯಲ್ಲಿ ನದಿಗಳು ಜಲಪ್ರಳಯವನ್ನೆ ಸೃಷ್ಟಿಸಿವೆ. ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ, ಮನೆಗಳು ಜಲಾವೃತ ಆಗಿವೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಂತೂ ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಶೇಂಗಾ, ಭತ್ತ, ಸೋಯಾಬಿನ್, ಮೆಕ್ಕೆಜೋಳ, ಹತ್ತಿ, ಕಬ್ಬು, ಪೇರಲ ತೋಟ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಕೊಳೆತು ಹಾಳಾಗಿವೆ. ಜಮೀನುಗಳು ಮಾತ್ರವಲ್ಲ ನದಿಯ ನೀರಿನ ಆರ್ಭಟಕ್ಕೆ ಕಡಿತಗೊಂಡಿದ್ದ ಸಂಪರ್ಕ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿವೆ. ಅದ್ರಲ್ಲೂ ಹಾವೇರಿಯಿಂದ ದೇವಗಿರಿ ಮಾರ್ಗವಾಗಿ ಸವಣೂರು, ಗದಗ, ಲಕ್ಷ್ಮೇಶ್ವರ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸ್ತಿದ್ದ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ವಿಜಯಪುರದಲ್ಲಿ ಆಲಮಟ್ಟಿ ಡ್ಯಾಂನ ಒಳ ಹರಿವು ಹಾಗೂ ಹೊರ ಹರವಿನಲ್ಲಿ ಹೆಚ್ಚಳವಾಗಿದೆ. 519.60 ಮೀಟರ್ ಸಾಮಥ್ರ್ಯದ ಡ್ಯಾಂಗೆ 4.21 ಲಕ್ಷ ಕ್ಯೂಸೆಕ್ ಒಳ ಹರಿವು ಇದ್ರೆ 4.20 ಲಕ್ಷ ಕ್ಯೂ ಸೆಕ್ ನೀರು ಹೊರ ಹರಿವಿದೆ. ಆಲಮಟ್ಟಿ ಡ್ಯಾಂನಿಂದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವ ಸಾಗರಕ್ಕೆ ನೀರು ಹರಿಬಿಡಲಾಗ್ತಿದ್ದು ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಆಲಮಟ್ಟಿ ಡ್ಯಾಂ ಹೊರ ಹರಿವು ಹಾಗೂ ಬಸವ ಸಾಗರದ ಹಿನ್ನೀರಿನ ಕಾರಣ ಪ್ರವಾಹ ಭೀತಿ ಮನೆ ಮಾಡಿದೆ. ಮುದ್ದೇಬಿಹಾಳ ತಾಲೂಕಿನ ಕಮ್ಮಲದಿನ್ನಿ, ಕುಂಚಗನೂರು, ಗಂಗೂರು, ಜೇವೂರು, ತಂಗಡಗಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಇದೆ.
ವಿಜಯಪುರದಲ್ಲಿ ಪ್ರವಾಹದ ನೀರಿನಲ್ಲಿ ಶವಗಳು ತೇಲಿ ಬರ್ತಿವೆ. ಗೋಕಾಕ್ ತಾಲೂಕಿನ ಮೆಳವಂಕಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿ ಬಂದಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು, ಚಳ್ಳಕೆರೆ ತಾಲೂಕುಗಳಲ್ಲಿ ಸಾವಿರಾರು ಹೆಕ್ಟೇರ್ ಗಳಷ್ಟು ಜಮೀನಿನಲ್ಲಿ ಈರುಳ್ಳಿ ಹಾಗೂ ಶೇಂಗಾಬೆಳೆ ಬೆಳೆಯಲಾಗಿದೆ. ಆದ್ರೆ ನಿರೀಕ್ಷೆಗಿಂತ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ನೀರಲ್ಲೇ ಈರುಳ್ಳಿ ಕೊಳೆತು ಹೋಗಿದೆ. ಶೇಂಗಾ ಬೆಳೆ ಸಹ ಶೀತ ಹೆಚ್ಚಾಗಿ ಭೂಮಿಯಲ್ಲೇ ಕಮರಿ ಹೋಗಿದೆ. ಹೀಗಾಗಿ ಎಕರೆಗೆ ಅರವತ್ತು ಸಾವಿರದಂತೆ ಬಂಡವಾಳ ಹಾಕಿದ್ದ ರೈತ ತೀವ್ರ ನಷ್ಟ ಅನುಭವಿಸುತ್ತಾ ಕಂಗಾಲಾಗಿದ್ದಾರೆ. ನಿರಂತರವಾಗಿ ಸುರಿದ ವರುಣನ ಆರ್ಭಟಕ್ಕೆ ಈರುಳ್ಳಿ ಕೊಳೆತಿರೋದು ಒಂದೆಡೆಯಾದ್ರೆ, ಅಧಿಕಾರಿಗಳು ಮಾತ್ರ ಈರುಳ್ಳಿಗೆ ತಗುಲಿರುವ ರೋಗಕ್ಕೆ ಮುಕ್ತಿ ನೀಡಲು ಔಶಧಿ ಸಿಂಪಡಿಸಿಕೊಂಡು, ಬೆಳೆ ರಕ್ಷಿಸಿಕೊಳ್ಳಿ ಅಂತಿದ್ದಾರೆ. ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಕೊಡೊಸ್ತೀವಿ ಅನ್ನೊ ಬಗ್ಗೆ ದನಿ ಸಹ ಎತ್ತಿಲ್ಲ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಸಂಪುಟದ ಹಗ್ಗಜಗ್ಗಾಟದ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಳೆ ಬೆಳಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಮೊದಲ ಭೇಟಿಯಲ್ಲೇ ಸಂಪುಟ ರಚನೆಗೆ ಒಪ್ಪಿಗೆ ನೀಡೋ ಸಾಧ್ಯತೆ ಕಡಿಮೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರೋ ಸಿಎಂ ಬೊಮ್ಮಾಯಿ, 2-3 ದಿನ ಆದ ಬಳಿಕ ಮತ್ತೆ ದೆಹಲಿಗೆ ಹೋಗ್ತೇನೆ. ಆಗ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕಗ್ಗಂಟಾಗ್ತಿದೆ ಕ್ಯಾಬಿನೆಟ್ ಜೇನುಗೂಡು- ದೆಹಲಿ ಮಟ್ಟದಲ್ಲಿ ಹಿರಿಯ ನಾಯಕರ ಲಾಬಿ
ನಾಳೆ ಮಧ್ಯಾಹ್ನ 1 ಗಂಟೆಗೆ ರಾಜ್ಯದ ಸಂಸದರು, ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟು, ಸಂಪುಟ ವಿಸರ್ಜನೆ ಆಗಿ 3 ದಿನವಾದರೂ ಸಚಿವರು ಮಾತ್ರ ಮುಂದುವರಿದಿದ್ದಾರಾ..? ಅನ್ನೋದು ಈಗ ಚರ್ಚೆ. ಯಾಕಂದ್ರೆ, ಬಿಎಸ್‍ವೈ ಸರ್ಕಾರದಲ್ಲಿ ಸಚಿವರಾಗಿದ್ದ ಬಹುತೇಕ ಸಚಿವರು ಈಗಲೂ ಮಂತ್ರಿಗಿರಿ ಗುಂಗಿನಲ್ಲೇ ಇದ್ದಾರೆ. ಟ್ವಿಟರ್ ಖಾತೆಗಳ ಪ್ರೊಫೈಲ್‍ನಲ್ಲಿ ಈಗಲೂ ‘ಸಚಿವ’ ಅಂತಲೇ ಇದೆ. ಸಚಿವರಾಗಿದ್ದವರಿಗೆ ಮಾಜಿಗಳು ಅನ್ನಿಸಿಕೊಳ್ಳೋಕೆ ಇಷ್ಟ ಇಲ್ಲದಂತೆ ಕಂಡಿದೆ.
ಹುಬ್ಬಳ್ಳಿ: ನಾನು ಹುಬ್ಬಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದೇನೆ. ನನ್ನ ದೊಡ್ಡ ಬಳಗ ಇಲ್ಲಿದ್ದು ನನ್ನ ಶಿಕ್ಷಣ ಇಲ್ಲೇ ಮುಗಿದಿದೆ. ನನ್ನ ಪ್ರೀತಿಯ ಊರು ಹುಬ್ಬಳ್ಳಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಆಗಿ ನಾನು ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ನನ್ನನ್ನು ಗುರುತಿಸಿ ಸಿಎಂ ಮಾಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಹರಿಸಿದ್ದಾರೆ. ಇವರೆಲ್ಲದ ಆಶೀರ್ವಾದದಿಂದ ಇಲ್ಲಿ ಬಂದಿದ್ದೇನೆ ಎಂದರು.
ಬೆಂಗಳೂರು ಬಿಟ್ಟ ನಂತರ ಹುಬ್ಬಳ್ಳಿ- ಧಾರವಾಡ ದೊಡ್ಡ ನಗರ. ಇಲ್ಲಿ ಏನು ಅಭಿವೃದ್ಧಿ ಮಾಡಬೇಕು ಅದನ್ನು ಮಾಡುತ್ತೇನೆ. ಕೇಂದ್ರ ಸಚಿವ ಜೋಶಿ, ಜಗದೀಶ್ ಶೆಟ್ಟರ್, ಶಾಸಕರು ಇದ್ದಾರೆ. ಪಕ್ಷ ಇಲ್ಲಿ ಬಲಿಷ್ಟವಾಗಿದೆ. ಎಲ್ಲರ ಸಲಹೆ ಪಡೆದು ಕೆಲಸ ಮಾಡುತ್ತೇನೆ. ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅವರನ್ನು ಭೇಟಿ ಮಾಡುತ್ತೇನೆ. ಇದು ನನ್ನ ಮೊದಲ ಭೇಟಿ, ಶುಭ ಕೋರಿ ಆಶೀರ್ವಾದ ಪಡೆದುಕೊಳ್ಳುತ್ತೇನೆ. ದೆಹಲಿಯಲ್ಲಿ ನಾಯಕರ ಭೇಟಿ ಮಾಡಿ ಸಂಪುಟ ಬಗ್ಗೆ ಚರ್ಚೆ ಮಾಡುತ್ತೇನೆ. ಆ ಸಂದರ್ಭದಲ್ಲಿ ಸಚಿವ ಸಂಪುಟದ ಸದಸ್ಯರ ಆಯ್ಕೆಯಾಗಲಿದೆ ಎಂದು ನುಡಿದ್ದಾರೆ.
ಶೆಟ್ಟರ್ ಸಚಿವ ಸಂಪುಟದಲ್ಲಿ ಸೇರಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿಯವರು, ಅವರು ಹಿರಿಯರು, ಅವರು ತಮ್ಮ ವಿಚಾರ ಬಹಿರಂಗವಾಗಿ ಹೇಳಿದ್ದು, ನಾನು ವೈಯಕ್ತಿಕವಾಗಿ ಬಂದು ಭೇಟಿ ಮಾಡುತ್ತೇನೆ. ಅಲ್ಲದೇ ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ನಾವು ಉತ್ತಮ ಗೆಳೆಯರು. ಅವರ ಬಗ್ಗೆ ನನಗೆ ಅಭಿಮಾನ ಇದೆ, ನಾವು ಬೇರೆ ಪಕ್ಷದಲ್ಲಿ ಇದ್ದಾಗಿಂದಲೂ ಒಳ್ಳೆ ಸಂಬಂಧ ಹೊಂದಿದ್ದೆವು. ಅವರ ಮನದಾಳದ ಮಾತನ್ನು ತಿಳಿದುಕೊಂಡು ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಈ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿದೆ. ಒಂದು ತಿಂಗಳಲ್ಲಿ ಅರ್ಜಿ ವಿಚಾರಣೆಗೆ ಬರಲಿದ್ದು, ಅಲ್ಲಿ ಅನುಮತಿ ಸಿಗುವ ವಿಶ್ವಾಸ ಇದೆ. ಗೆಜೆಟ್ ನೋಟಿಫಿಕೆಷನ್ ಆದ ತಕ್ಷಣ ಕೆಲಸ ಆರಂಭ ಮಾಡುತ್ತೇವೆ, ನನಗೆ ಆ ಬಗ್ಗೆ ಮಾಹಿತಿ ಇದೆ. ನಾನು ಅದಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟಿದ್ದೇನೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ:ಮೆಟ್ಟಿಲು ಇಳಿಯುವಾಗ ಕಾಲು ಜಾರಿಬಿದ್ದು ಮಾಜಿ ಸಚಿವ ಸುಧಾಕರ್ ಸಹೋದರ ಸಾವು