Tag: ಸಿಎಂ ಬೊಮ್ಮಾಯಿ

  • ಪ. ಜಾತಿ, ಪಂಗಡದವರ ಮೇಲಿನ ದೌರ್ಜನ್ಯ – ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಲು ಸಿಎಂ ಸೂಚನೆ

    ಪ. ಜಾತಿ, ಪಂಗಡದವರ ಮೇಲಿನ ದೌರ್ಜನ್ಯ – ಬಾಕಿ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ ವಹಿಸಲು ಸಿಎಂ ಸೂಚನೆ

    ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಸಿಎಂ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಯಿತು.

    CM Bommai Meeting SC ST (4)

    ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಗೃಹ ಮತ್ತು ಕಾನೂನು ಇಲಾಖೆಯೊಂದಿಗೆ ಸಮನ್ವಯ ವಹಿಸಿ, ತನಿಖೆಯ ಹಂತದಲ್ಲಿ, ಚಾರ್ಜ್ ಶೀಟ್ ಸಲ್ಲಿಸುವಾಗ ಹಾಗೂ ಪ್ರಾಸಿಕ್ಯೂಷನ್ ಸಂದರ್ಭದಲ್ಲಿಯೂ ವಿಳಂಬವಾಗದಂತೆ ಕ್ರಮ ವಹಿಸಬೇಕು. ಅಪರಾಧ ಸಾಬೀತು ಪ್ರಮಾಣ ಹೆಚ್ಚಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

    ಸಭೆಯ ತೀರ್ಮಾನಗಳ ಕುರಿತು ಪ್ರತಿ ತಿಂಗಳೂ ಪರಿಶೀಲನೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು. ರಾಜ್ಯಮಟ್ಟದ ಸಮಿತಿಯು ತುರ್ತು ವಿಷಯಗಳಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು. ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ ಸಭೆಗಳು ನಿಯಮಿತವಾಗಿ ನಡೆಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಒಂದು ತಿಂಗಳ ಒಳಗೆ ಸಭೆಯ ತೀರ್ಮಾನಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿ ನೀಡಲು ಸೂಚಿಸಿದರು.

    ದೌರ್ಜನ್ಯ ಪ್ರಕರಣಗಳ ದೂರುದಾರರು ಮತ್ತು ಸಾಕ್ಷಿದಾರರ ರಕ್ಷಣೆಗೆ ಒತ್ತು ನೀಡಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರುದಾರರು ಮತ್ತು ಸಾಕ್ಷಿದಾರರನ್ನು ಪೊಲೀಸರೇ ಕರೆದೊಯ್ಯುವಂತೆ ಸೂಚಿಸಿದರು. ಜೊತೆಗೆ ಈ ಪ್ರಕರಣಗಳ ಸಂಪೂರ್ಣ ಮೇಲುಸ್ತುವಾರಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು. ಇದನ್ನೂ ಓದಿ: ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

    ಅನುಸೂಚಿತ ಬುಡಕಟ್ಟು ಹಾಗೂ ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ 2006 ರಡಿ 1.8 ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಕುರಿತಂತೆ ರಾಜ್ಯಮಟ್ಟದಲ್ಲಿಯೂ ಮರು ಪರಿಶೀಲನಾ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಕ್ಕೆ ಮೂವರು ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಇದನ್ನೂ ಓದಿ: ಸೆ. 6ರಿಂದ 6 ರಿಂದ 8ನೇ ತರಗತಿ ಶಾಲೆ ಆರಂಭ – ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಕೆ

    ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಈ ಸಮುದಾಯಗಳ ಹಕ್ಕು ಕಸಿದುಕೊಳ್ಳುವವರ ವಿರುದ್ಧ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು. ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟವರ ಅವಲಂಬಿತರಿಗೆ ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು 2 ವರ್ಷ ಅವಧಿ ಹಾಗೂ ಅಪ್ರಾಪ್ತ ವಯಸ್ಕರಿಗೆ ಅರ್ಜಿ ಸಲ್ಲಿಸಲು 3 ವರ್ಷಗಳ ಅವಧಿ ನಿಗದಿ ಪಡಿಸಿ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಸೂಚಿಸಿದರು.

    ಪರಿಶಿಷ್ಟ ಜಾತಿ, ಪಂಗಡದವರ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು, ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಎಸ್ಕಾಂಗಳು ಎಸ್ ಸಿ ಪಿ, ಟಿ ಎಸ್ ಪಿ ಅನುದಾನ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಎಸ್.ಸಿ.ಪಿ/ ಟಿಎಸ್ ಪಿ ಕಾಯ್ದೆಯನ್ವಯ ಈ ಸಮುದಾಯಗಳಿಗೆ ನಿಗದಿ ಪಡಿಸಿದ ಅನುದಾನ, ಅವರ ಕ್ಷೇಮಾಭಿವೃದ್ಧಿಗೇ ಬಳಕೆಯಾಗುವ ಕುರಿತು ಕಾಯ್ದೆಗೆ ತಿದ್ದುಪಡಿ ಮಾಡಲು ಕ್ರಮ ವಹಿಸುವಂತೆ ಕಾನೂನು ಇಲಾಖೆಗೆ ಸೂಚನೆ ನೀಡಿದರು.

    ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ. ಶ್ರೀರಾಮುಲು, ಜೆ..ಸಿ. ಮಾಧುಸ್ವಾಮಿ ಸಮಿತಿಯ ಸದಸ್ಯರಾದ ಸಂಸದರು, ಶಾಸಕರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಸೆ.5ಕ್ಕೆ ಸಭೆ: ಆರ್.ಅಶೋಕ್

    ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಸೆ.5ಕ್ಕೆ ಸಭೆ: ಆರ್.ಅಶೋಕ್

    ಬೆಂಗಳೂರು: ಗಣೇಶೋತ್ಸವಕ್ಕೆ ಯಾವ ರೀತಿ ಅನುಮತಿ ನೀಡಬೇಕೆಂದು ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಇಂದಿನ ಸಭೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

    ಸಿಎಂ ಜೊತೆಗಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಣೇಶ ಹಬ್ಬದ ಕುರಿತು ದೊಡ್ಡ ಹೆಜ್ಜೆ ಇರಿಸಬೇಕಾಗುತ್ತದೆ. ಹಲವು ಜಿಲ್ಲೆಗಳಲ್ಲಿ ದೊಡ್ಡದಾಗಿ ಹಬ್ಬವನ್ನ ಆಚರಣೆ ಮಾಡಲಾಗುತ್ತೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವ ಆಯೋಜಕರೊಂದಿಗೆ ಸಿಎಂ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

    ಸಂಕಷ್ಟ ಹರ ಗಣಪತಿ ಬಂದ ಮೇಲೆ ನಮಗೆಲ್ಲ ಒಳ್ಳೆಯದ್ದು ಅಗಿರುವುದು. ನಮ್ಮ ಸಂಕಷ್ಟಗಳು ಮುಗಿದು ಹೋಯಿತು. ಗಣಪತಿ ಹಬ್ಬಕ್ಕೆ ಇರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ನಾನು ನಿಮ್ಮೆಲ್ಲರ ಪರವಾಗಿ ವಾದವನ್ನು ಮಂಡಿಸಿದ್ದೇನೆ  ಎಂದಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿಸ್ ಎಸೆದು ಚಿನ್ನ ಪಡೆದ ಸುಮಿತ್

    ಸರ್ಕಾರ ಕೊರೊನಾವನ್ನು ಗಮನದಲ್ಲಿಟ್ಟುಕೊಂಡು ಗಣೇಶ ಹಬ್ಬಕ್ಕೆ ಯಾವ ರೀತಿ ಅನುಮತಿ ಕೊಡಬಹುದು ಎನ್ನುವುದನ್ನು ಯೋಚನೆ ಮಾಡುತ್ತೀದ್ದೇವೆ. ಗಣೇಶ ನಮ್ಮ ಆರಾಧ್ಯ ದೈವನಾಗಿದ್ದಾನೆ. ವಿಘ್ನ ವಿನಾಯಕನ ಆರಾಧನೆ ಮಾಡುವುದಕ್ಕಿ ಮುಖ್ಯಮಂತ್ರಿಗಳು ಪಾಸಿಟಿವ್ ಆಗಿ ಯೋಚನೆ ಮಾಡುತ್ತಿದ್ದಾರೆ ಎಂದಿದ್ದಾರೆ.

    ನಾವು ಸಭೆಯನ್ನು ನಡೆಸಿದ್ದೇವೆ, ನಾನು ಕೂಡಾ ಪರವಾಗಿ ಬ್ಯಾಟಿಂಗ್ ಮಾಡಿದ್ದೇನೆ. ಜನರ ಆರೋಗ್ಯ, ಕೊರೊನಾ ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ತೀರ್ಮಾನವನ್ನು ಮುಖ್ಯಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

  • ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

    ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?

    ಬೆಂಗಳೂರು: ಈಗಾಗಲೇ 9ನೇ ತರಗತಿಯಿಂದ 12ನೇ ತರಗತಿಗವರೆಗೆ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ಸದ್ಯದ ಮಟ್ಟಿಗೆ ಎಲ್ಲಾ ಕಡೆ ಸುಸೂತ್ರವಾಗಿ ತರಗತಿಗಳು ನಡೆಯುತ್ತಿವೆ. ಹೀಗಾಗಿ ಸರ್ಕಾರ ಈ ಹಿಂದೆಯೇ ಹೇಳಿದಂತೆ, 1ನೇ ತರಗತಿಯಿಂದ 8ನೇ ತರಗತಿವರೆಗೂ ಶಾಲಾರಂಭ ಮಾಡುವ ಬಗ್ಗೆ ಆಗಸ್ಟ್ 30ರಂದು ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

    ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಶಿಕ್ಷಣ ತಜ್ಞರ ಜೊತೆ ಚರ್ಚೆ ನಡೆಸಲಿರುವ ಸಿಎಂ ಬೊಮ್ಮಾಯಿ ಮತ್ತು ಶಿಕ್ಷಣ ಮಂತ್ರಿ ಬಿಸಿ ನಾಗೇಶ್, ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಒಂದು ಅಂತಿಮ ತೀರ್ಮಾನಕ್ಕೆ ನಾಳೆಯೇ ಬರುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಹಂತ ಹಂತವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲಾಗುತ್ತದೆ.

    ಇದೇ ವೇಳೆ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಹೆಚ್ಚಿದ್ದ ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿವರೆಗೂ ಶಾಲಾ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಈಗ ಆ ಐದು ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆ ಆಗಿದೆ. ಆ ಜಿಲ್ಲೆಗಳಲ್ಲಿ ಶಾಲೆ -ಕಾಲೇಜು ಆರಂಭಕ್ಕೆ ಸರ್ಕಾರ ನಾಳೆ ಹಸಿರುನಿಶಾನೆ ತೋರಬಹುದು ಎನ್ನಲಾಗುತ್ತಿದೆ. ಸಿಎಂ ಒಪ್ಪಿದ್ರೆ ಮೊದಲ ಹಂತದಲ್ಲಿ 6ರಿಂದ 8ನೇ ತರಗತಿ ಆರಂಭಿಸಲಾಗುವುದು ಎಂದು ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್ – ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್

  • ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್?-ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್

    ನಾಳೆ ಗಡಿ ಭಾಗದ 8 ಜಿಲ್ಲೆಗಳಿಗೆ ಸಿಗುತ್ತಾ ರಿಲೀಫ್?-ಗಣೇಶೋತ್ಸವ ಮಾರ್ಗಸೂಚಿ ಸಡಿಲಕ್ಕೆ ಸರ್ಕಾರ ಪ್ಲಾನ್

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಮ್ಮಾರಿ ಸದ್ಯದ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದ್ರೆ ನೆರೆಯ ಕೇರಳದಲ್ಲಿ ಸೋಂಕು ಆಸ್ಫೋಟ ಮುಂದುವರಿದಿರೋದು ರಾಜ್ಯದ ಆತಂಕಕ್ಕೂ ಕಾರಣವಾಗಿದೆ. ಜೊತೆಗೆ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಿಂದಲೂ ಕೊರೊನಾ ಮತ್ತೆ ಹೆಚ್ಚಾಗಬಹುದು ಎಂಬ ಭೀತಿ ಆವರಿಸಿದೆ. ಇದರ ಜೊತೆ ಜೊತೆಗೆ ಕೋವಿಡ್ ಮೂರನೇ ಅಲೆಯ ಭಯವೂ ಕಾಡುತ್ತಿದೆ.

    ಈ ಎಲ್ಲಾ ಆತಂಕ, ಭೀತಿ ಮಧ್ಯೆ, ರಾಜ್ಯದಲ್ಲಿ ಈಗಿರುವ ಕೊರೊನಾ ನಿಯಮಗಳನ್ನು ಹಿಂಪಡೆಯಬೇಕೇ? ಅಥವಾ ಮುಂದುವರಿಸಬೇಕೆ? ಅಥವಾ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೆ ಬೇಡವೇ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ ಇದೆ. ಇದು ಸೇರಿದಂತೆ ಒಟ್ಟು ಮೂರು ವಿಚಾರಗಳ ಬಗ್ಗೆ ಒಂದು ನಿರ್ಣಯಕ್ಕೆ ಬರಲು ನಾಳೆ ಸಂಜೆ ನಾಲ್ಕು ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸದ್ಯದ ಪರಿಸ್ಥಿತಿ, ಸಂಭಾವ್ಯ ಪರಿಸ್ಥಿತಿ, ಕೋವಿಡ್ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳು ಬಹುತೇಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಿಗೆ ಮಣೆ ಹಾಕುವ ಸಂಭವ ಇದೆ.

    ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳು ಪ್ರಮುಖವಾಗಿ ಮೂರು ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಭವ ಇದೆ.
    ನಿರ್ಧಾರ 1 – ಕೋವಿಡ್ ನಿಯಮಗಳನ್ನು ಮುಂದುವರಿಸುವುದೋ? ಬಿಡುವುದೋ?
    ನಿರ್ಧಾರ 2 – ಸಾರ್ವಜನಿಕ ಗಣೇಶೋತ್ಸವ ನಿಯಮ ಸಡಿಲಿಸಬೇಕೋ? ಬೇಡವೋ?
    ನಿರ್ಧಾರ 3 – ಪ್ರಾಥಮಿಕ, ಪ್ರೌಢ ಶಾಲೆ ಓಪನ್ ಮಾಡುವುದೋ? ಬಿಡುವುದೋ?

    ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳೇನು?: ರಾಜ್ಯದ ಮಟ್ಟಿಗೆ ಮುಂದಿನ ನಾಲ್ಕು ವಾರ ನಿರ್ಣಾಯಕವಾಗಿದ್ದು, ಸೋಂಕು ತಡೆಗೆ ರಾಜ್ಯದ್ಯಂತ ನೈಟ್ ಕರ್ಫ್ಯೂ ಬಿಗಿ ಮಾಡಬೇಕು. ಇಡೀ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಬೇಕು. ಹಬ್ಬಗಳಿರುವುದರಿಂದ ದೇಗುಲ, ಮಾರ್ಕೆಟ್‍ಗಳಲ್ಲಿ ಕಠಿಣ ರೂಲ್ಸ್ ತರಬೇಕು. ಗಡಿ ಜಿಲ್ಲೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನ್ ಹೆಚ್ಚಿಸಬೇಕು ಮತ್ತು ಕೇರಳ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೇನ್ ಕಡ್ಡಾಯ ಮಾಡಬೇಕು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.1 ರಿಂದ ದ್ವಿತೀಯ ಪಿಯುಸಿ ಆರಂಭಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

    ಕೇರಳದಲ್ಲಿ ಸೋಂಕು ಆಸ್ಫೋಟಿಸಲು ಕಾರಣ ಹಬ್ಬ ಹರಿದಿನಗಳನ್ನು ಆಚರಿಸಲು ಅಲ್ಲಿನ ಸರ್ಕಾರ ಕೊರೊನಾ ನಿಯಮಗಳನ್ನು ಸಡಿಲ ಮಾಡಿದ್ದು ಎನ್ನುವ ಮಾತಿದೆ. ರಾಜ್ಯದಲ್ಲಿ ಕೇರಳ ಮಾದರಿಯ ಪರಿಸ್ಥಿತಿ ಬರಬಾರ್ದು ಅಂದ್ರೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗಳಿಗೆ, ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಸರ್ಕಾರ ಕೂಡ ಇದಕ್ಕೆ ಪೂರಕವಾಗಿ ಈಗಾಗಲೇ ಸಾರ್ವಜನಿಕವಾಗಿ ಗಣೇಶ ಉತ್ಸವಗಳಿಗೆ ನಿಷೇಧ ಹೇರಿ ಮಾರ್ಗಸೂಚಿ ಪ್ರಕಟಿಸಿದೆ. ಆದ್ರೆ, ಇದಕ್ಕೆ ಸ್ವತಃ ಬಿಜೆಪಿಯಲ್ಲಿಯೇ ಅಪಸ್ವರ ಕೇಳಿಬಂದಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ಹಿಂದೂಪರ ಸಂಘಟನೆಗಳಂತೂ ರೂಲ್ಸ್ ಬದಲಿಸಲೇಬೇಕು. ಇಲ್ಲ ಅಂದ್ರೆ ರೂಲ್ಸ್ ಬ್ರೇಕ್ ಮಾಡ್ತೀವಿ. ಬೇಕಿದ್ರೆ ಗುಂಡಿಕ್ಕಿ ಎಂದು ಗುಡುಗ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಸ್ವಲ್ಪ ಒತ್ತಡದಲ್ಲಿ ಸಿಲುಕಿದೆ. ಏನು ಮಾಡಬೇಕು? ಮಾರ್ಗಸೂಚಿಯನ್ನು ಪರಿಷ್ಕಕರಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ. ಈ ಬಗ್ಗೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಪಬ್ಲಿಕ್ ಟಿವಿಗೆ ಲಭ್ಯವಾದ ಮಾಹಿತಿ ಪ್ರಕಾರ, ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ನಿರೀಕ್ಷೆ ಇದೆ. ಹಾಗಿದ್ರೆ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರ ಯಾವೆಲ್ಲಾ ಷರತ್ತುಗಳನ್ನು ಹಾಕಬಹುದು? ಇದನ್ನೂ ಓದಿ: ಕಾಬೂಲ್ ಏರ್ ಪೋರ್ಟ್ ಬಳಿ ಐಸಿಸ್-ಕೆ ರಾಕೆಟ್ ದಾಳಿ – ಇಬ್ಬರ ಸಾವು

    ಗಣೇಶೋತ್ಸವಕ್ಕೆ ಪರಿಷ್ಕೃತ ಮಾರ್ಗಸೂಚಿ?
    * ಹಬ್ಬವನ್ನು ಸರಳವಾಗಿ ಕನಿಷ್ಟ ಸಂಖ್ಯೆಯ ಜನರೊಂದಿಗೆ ಆಚರಣೆಗೆ ಅವಕಾಶ ಸಾಧ್ಯತೆ
    * ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ?
    * ಒಂದು ವಾರ್ಡ್/ಗ್ರಾಮದಲ್ಲಿ 1 ಅಥವಾ 2 ಗಣೇಶಗಳನ್ನು ಸಾರ್ವಜನಿಕವಾಗಿ ಕೂರಿಸಬಹುದು?
    * ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಒಮ್ಮೆ 20 ಭಕ್ತರ ಭೇಟಿಗೆ ಅವಕಾಶ?
    * ಸ್ಥಳದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಡ್ಡಾಯ
    * ಗಣೇಶೋತ್ಸವಗಳಲ್ಲಿ ಮನರಂಜನಾ ಕಾರ್ಯಕ್ರಮಗಳಿಗೆ ನೋ ಪರ್ಮಿಷನ್?
    * ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆಗಳಿಗೆ ಅವಕಾಶ ಇಲ್ಲ?
    * ಸ್ಥಳೀಯ ಆಡಳಿತಗಳು ನಿರ್ಮಿಸಿದ ಹೊಂಡ, ಮೊಬೈಲ್ ಟ್ಯಾಂಕ್‍ಗಳಲ್ಲಿ ಮೂರ್ತಿ ವಿಸರ್ಜನೆ!

  • ಕೋವಿಡ್ ಕಾಲಘಟ್ಟದಲ್ಲಿ ಹೊಸ ಮನ್ವಂತರ – ಇಂದಿನಿಂದ ರಾಜ್ಯದಲ್ಲಿ ಶಾಲೆ-ಕಾಲೇಜು ಓಪನ್

    ಕೋವಿಡ್ ಕಾಲಘಟ್ಟದಲ್ಲಿ ಹೊಸ ಮನ್ವಂತರ – ಇಂದಿನಿಂದ ರಾಜ್ಯದಲ್ಲಿ ಶಾಲೆ-ಕಾಲೇಜು ಓಪನ್

    ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 9-12ನೇ ಕ್ಲಾಸ್‍ವರೆಗೆ ಶಾಲಾ-ಕಾಲೇಜ್ ಆರಂಭವಾಗ್ತಿದೆ. ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಸ್ಕೂಲ್ ಓಪನ್‍ಗೆ ಭರ್ಜರಿ ಸಿದ್ಧತೆ ನಡೆದಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳಲ್ಲಿ 9-12ನೇ ತರಗತಿಗಳು ಆರಂಭವಾಗಲಿದೆ. 26 ಜಿಲ್ಲೆಗಳಲ್ಲೂ ಶಾಲಾ-ಕಾಲೇಜು ಆರಂಭಕ್ಕೆ ತಯಾರಿ ಆಗಿದೆ.

    ಮೊದಲ ಹಂತವಾಗಿ 9-12 ನೇ ತರಗತಿವರೆಗೆ ಇಂದಿನಿಂದ ಭೌತಿಕ ತರಗತಿಗಳು ಪ್ರಾರಂಭವಾಗ್ತಿದೆ. ಬೆಂಗಳೂರಿನ ವಿಜಯನಗರದ ಖಾಸಗಿ ಶಾಲೆಗಳಲ್ಲಿ ಸ್ವಚ್ಛತಾಕಾರ್ಯ ಭರದಿಂದ ನಡೆದಿದೆ. ಶಾಲಾ ಕೊಠಡಿಗಳಲ್ಲಿ ಸ್ಯಾನಿಟೇಸೇಷನ್ ಮಾಡಲಾಗಿದೆ. ಇದನ್ನೂ ಓದಿ: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್

    ಭಾನುವಾರ ತುಮಕೂರಿನ ಹೆಗ್ಗರೆಯ ಸಿದ್ದಾರ್ಥ ಪ್ರೌಢಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಕಡ್ಡಾಯ. ಮುಂದಿನ ಹಂತದಲ್ಲಿ 1ರಿಂದ 8ನೇ ತರಗತಿ ಆರಂಭಕ್ಕೆ ಪ್ರಯತ್ನ ಮಾಡ್ತೇವೆ ಅಂತ ಮಾಹಿತಿ ನೀಡಿದರು. ಖಾಸಗಿ ಶಾಲೆ-ಕಾಲೇಜ್‍ಗಳು ಕೂಡ ಸಿದ್ಧವಾಗಿದೆ. ಇಂದು ಮಲ್ಲೇಶ್ವರದ ಎರಡು ಶಾಲೆಗಳಿಗೆ ಸಿಎಂ ಬೊಮ್ಮಾಯಿ ಖುದ್ದು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇದನ್ನೂ ಓದಿ: ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್

    ಶಾಲೆ ಆರಂಭಕ್ಕೆ ಮಾರ್ಗಸೂಚಿ:
    * 9 ಮತ್ತು 10ನೇ ತರಗತಿಗಳಿಗೆ ಆರಂಭದಲ್ಲಿ ಅರ್ಧ ದಿನ ಭೌತಿಕ ತರಗತಿ.
    ( ಸೋಮ-ಶುಕ್ರವಾರದವರೆಗೆ ಬೆ.10ರಿಂದ ಮ.1.30ರವರೆಗೂ, ಶನಿವಾರ ಮ. 12.30ರವರೆಗೆ ಕ್ಲಾಸ್)
    * 15 ರಿಂದ 20 ಮಕ್ಕಳನ್ನು ಒಂದು ಗುಂಪಾಗಿ ವಿಂಗಡಿಸಿ ಭೌತಿಕ ತರಗತಿ ನಡೆಸಬೇಕು.
    * ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ.
    * ಪತ್ರದಲ್ಲಿ ಮಗುವಿಗೆ ಸೋಂಕು ಲಕ್ಷಣ ಇಲ್ಲ ಎಂಬುದನ್ನು ದೃಢೀಕರಿಸಿರಬೇಕು.
    * ತರಗತಿಗಳಿಗೆ ಮಕ್ಕಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಕ್ಲಾಸ್‍ಗೂ ಹಾಜರಾಗಬಹುದು.
    * ಬೆಂಚ್‍ಗಳ ಉದ್ದ ಆಧರಿಸಿ ಒಬ್ಬರು ಅಥವಾ ಇಬ್ಬರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.
    * ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರ ತರಬೇಕು.
    * 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್, ಜೊತೆಗೆ ಫೇಸ್‍ಶೀಲ್ಡ್ ಧರಿಸಬೇಕು.
    * ಶಿಕ್ಷಕರು ಕನಿಷ್ಠ 1 ಡೋಸ್ ಆದರೂ ಪಡೆದಿರಲೇಬೇಕು. ಸೋಂಕು ಲಕ್ಷಣ ಇದ್ದಲ್ಲಿ ರಜೆ ಪಡೆಯಬೇಕು.

    ಪಿಯುಸಿ ತರಗತಿಗಳಿಗೆ ಮಾರ್ಗಸೂಚಿ
    * ಆನ್‍ಲೈನ್ ಅಥವಾ ಆಫ್‍ಲೈನ್ ಕ್ಲಾಸ್‍ಗೆ ಹಾಜರಾತಿ ಕಡ್ಡಾಯ
    * ಭೌತಿಕ ತರಗತಿಗೆ ಹಾಜರಾಗೋದು ಕಡ್ಡಾಯ ಅಲ್ಲ
    * ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ
    * ಎರಡು ಬ್ಯಾಚ್‍ನಲ್ಲಿ ಕಾಲೇಜು ನಡೆಸಬೇಕು. ( 50:50)
    * ಮೊದಲ ಬ್ಯಾಚ್‍ಗೆ ವಾರದ ಮೊದಲ 3 ದಿನ.. 2ನೇ ಬ್ಯಾಚ್‍ಗೆ ವಾರದ ಕೊನೆಯ 3 ದಿನ ಕ್ಲಾಸ್
    * ವಿಶಾಲವಾದ ಕೊಠಡಿ ಇದ್ದರೆ 100 ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ತರಗತಿ
    * ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ
    * ಪತ್ರದಲ್ಲಿ ಮಗುವಿಗೆ ಸೋಂಕು ಲಕ್ಷ ಇಲ್ಲ ಎಂಬುದನ್ನು ದೃಢೀಕರಿಸಿರಬೇಕು
    * 50 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಫೇಸ್ ಶೀಲ್ಡ್ ಕಡ್ಡಾಯ
    * ಆರೋಗ್ಯ ವ್ಯತ್ಯಾಸ, ಬೇರೆ ರೋಗ ಲಕ್ಷಣ ಇದ್ರೆ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗೆ ಕಾಲೇಜಿಗೆ ನೋ ಎಂಟ್ರಿ

  • ಮೂವರ ವಿರುದ್ಧ ಹೈಕಮಾಂಡ್‍ಗೆ ಸಿಎಂ ದೂರು?

    ಮೂವರ ವಿರುದ್ಧ ಹೈಕಮಾಂಡ್‍ಗೆ ಸಿಎಂ ದೂರು?

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದ ಸಚಿವರ ಅಸಮಾಧಾನ ಮುಂದುವರಿದಿದ್ದು, ಈ ಬಗ್ಗೆ ಹೈಕಮಾಂಡ್‍ಗೆ ದೂರು ನೀಡಲು ಮುಖ್ಯಮಂತ್ರಿಗಳು ಮುಂದಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸಂಪುಟದಲ್ಲಿ ಬಯಸಿದ ಖಾತೆ ಸಿಗದ್ದಕ್ಕೆ ಮುನಿಸಿಕೊಂಡಿರುವ ಇಬ್ಬರು ಮತ್ತು ಸಚಿವ ಸ್ಥಾನ ತಪ್ಪಿದ್ದಕ್ಕೆ ಲಾಬಿಗೆ ಮುಂದಾಗಿರುವ ಒಬ್ಬರ ನಡೆಯ ಬಗ್ಗೆ ಹೈಕಮಾಂಡ್‍ಗೆ ವಿವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸುಖದ ನಿದ್ದೆಯಲ್ಲಿದ್ದ ನನಗೆ ಈಗ ಪೊಲೀಸರು ನಿದ್ದೆ ಮಾಡಲು ಬಿಡುತ್ತಿಲ್ಲ – ಅರಗ ಜ್ಞಾನೇಂದ್ರ

    ಆ ಮೂವರು, ಸಂಪುಟ ಬಿಕ್ಕಟ್ಟು:
    ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಸಿಎಂ ಮತ್ತು ಮಾಜಿ ಸಿಎಂ ಬಿಎಸ್‍ವೈ ಮನವಿ ಮೇರೆಗೆ ಆಗಸ್ಟ್ 15ರಂದು ಹೊಸ ಜಿಲ್ಲೆ ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಆನಂದ್ ಸಿಂಗ್, ಅಭೀ ಪಿಕ್ಚರ್ ಬಾಕೀ ಹೈ ಅನ್ನೋ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಆನಂದ್ ಸಿಂಗ್ ಅವರನ್ನ ಇರೋ ಖಾತೆಯಲ್ಲಿಯೇ ಮುಂದುವರಿಸಬೇಕಾ ಅಥವಾ ಬೇಡವಾ? ಒಂದು ವೇಳೆ ಖಾತೆ ಬದಲಾದ್ರೆ ಇನ್ನುಳಿದ ಸಚಿವರು ಮುನಿಸಿಕೊಂಡು ತಮಗೂ ಪ್ರಭಾವಿ ಖಾತೆ ಕೊಡುವಂತೆ ಉಳಿದ ಮಂತ್ರಿಗಳು ಬೇಡಿಕೆ ಇಡಬಹುದು. ಆದ್ರೆ ಖಾತೆ ಬದಲಿಸದೇ ಇದ್ದರೇ ಆನಂದ್ ಸಿಂಗ್ ರಾಜೀನಾಮೆ ಆತಂಕ ಸಹ ಮುಖ್ಯಮಂತ್ರಿಗಳಿಗೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಸಿಡಿ ಪ್ರಕರಣದಿಂದಾಗಿ ಸಂಪುಟದಿಂದ ದೂರ ಉಳಿದಿರುವ ಶಾಸಕ ರಮೇಶ್ ಜಾರಕಿಹೊಳಿ ಸಹ ಮಂತ್ರಿಗಿರಿಗಾಗಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಇತ್ತ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಎಂಎಲ್‍ಸಿ ಸಿ.ಪಿ.ಯೋಗೇಶ್ವರ್ ಲಾಬಿಗೆ ಮುಂದಾಗಿದ್ದಾರೆ. ಈ ಮೂವರಿಂದ ಸರ್ಕಾರಕ್ಕೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ನೀವೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಹೈಕಮಾಂಡ್‍ಗೆ ವರದಿ ಸಲ್ಲಿಸಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಾಕಿದ ಪ್ರಕರಣ- ಆರೋಪಿಗಳು 14 ದಿನ ಪೊಲೀಸ್ ಕಸ್ಟಡಿಗೆ

    ಸರ್ಕಾರದ ಮೇಲೆ ಆರ್‍ಎಸ್‍ಎಸ್ ಹಿಡಿತ?:
    ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಆರ್‍ಎಸ್‍ಎಸ್ ಹಿಡಿತ ಸಾಧಿಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಬೊಮ್ಮಾಯಿ ಆಪ್ತ ವಲಯದಲ್ಲಿ ಸಂಘ ಪರಿವಾರದ ಸೂಚಿಸಿದ ಸಚಿವರು ಇರಬೇಕು. ಆರ್‍ಎಸ್‍ಎಸ್ ಸೂಚಿಸಿದವರನ್ನೇ ಸುತ್ತಮುತ್ತ ನಿಯೋಜಿಸಿಕೊಳ್ಳುವಂತೆ ಸಿಎಂ ಬೊಮ್ಮಾಯಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಸಿಎಂ ಕಚೇರಿ, ಸಚಿವರ ಕಚೇರಿಯಲ್ಲಿ ಸಂಘ ಸೂಚಿತರಿಗೆಷ್ಟೇನಾ ಜಾಗ ಮೀಸಲಿಡುವ ಮೂಲಕ ಎಲ್ಲರ ಮೇಲೆ ನೇರ ನಿಗಾ ಇಡುವ ಸಲುವಾಗಿ ಆರ್‍ಎಸ್‍ಎಸ್ ತಂತ್ರ ರಚಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜೆಡಿಎಸ್‍ಗೆ ಬಿಗ್ ಶಾಕ್ ಕೊಡಲು ಡಿಕೆಶಿ ರಣತಂತ್ರ

  • ಯಾವ ಪಿಕ್ಚರ್, ರೀಲು ಇಲ್ಲ: ಸಚಿವ ಆನಂದ್ ಸಿಂಗ್‍ಗೆ ಎಸ್‍ಟಿಎಸ್ ಟಾಂಗ್

    ಯಾವ ಪಿಕ್ಚರ್, ರೀಲು ಇಲ್ಲ: ಸಚಿವ ಆನಂದ್ ಸಿಂಗ್‍ಗೆ ಎಸ್‍ಟಿಎಸ್ ಟಾಂಗ್

    ಚಾಮರಾಜನಗರ: ಸಚಿವ ಸ್ಥಾನದ ಬಗ್ಗೆ ಅಸಮಧಾನಗೊಂಡು ಪಿಕ್ಚರ್ ಅಬಿ ಬಾಕಿ ಹೈ ಎಂದು ಹೇಳಿರುವ ಸಚಿವ ಆನಂದ್ ಸಿಂಗ್ ಗೆ ಯಾವ ಪಿಕ್ಚರ್ರು ಇಲ್ಲ, ಯಾವ ರೀಲು ಇಲ್ಲಾ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.

    ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ಮಾತನಾಡಿದ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಿಗೆ ಇದೆ. ಏನೇ ಅಸಮಾಧಾನ ಇದ್ದರೂ ಸಿಎಂ ಜೊತೆ ಕುಳಿತು ಮಾತನಾಡಬೇಕೇ ಹೊರತು, ಹೊರಗೆ ನಿಂತು ಮಾತನಾಡಿದ್ರೆ ಪ್ರಯೋಜನವಿಲ್ಲ ಎಂದು ಅವರು ಆನಂದ್ ಸಿಂಗ್ ಗೆ ಪರೋಕ್ಷವಾಗಿ ಸಚಿವ ಎಸ್.ಟಿ ಸೋಮಶೇಖರ್ ಸಲಹೆ ನೀಡಿದರು.

    ಬೊಮ್ಮಾಯಿ ಅವರಿಗೆ ಕ್ಲೀನ್ ಇಮೇಜ್ ಸರ್ಕಾರ ಕೊಡಬೇಕಬೇಕೆಂಬ ಕನಸಿದೆ. ಕಾಂಗ್ರೆಸ್ ನವರು ಸರ್ಕಾರ ಬಿದ್ದು ಹೋಗುತ್ತೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ತಿರುಗೇಟು ನೀಡಿದ ಅವರು ಬೊಮ್ಮಾಯಿ ಸಿಎಂ ಆದ ಮೇಲೆ ಕಾಂಗ್ರೆಸ್ ನವರಿಗೆ ನಡುಕ ಉಂಟಾಗಿದೆ. ಬೊಮ್ಮಾಯಿ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಅವಧಿ ಪೂರೈಸುತ್ತೆ ಎಂದರು. ಇದನ್ನೂ ಓದಿ: ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಲಿಂಬಾವಳಿ ಬೆದರಿಕೆ ಆರೋಪ!

    ಆನಂದ್ ಸಿಂಗ್ ಹೇಳಿದ್ದೇನು?:
    ಹೊಸದಾಗಿ ರಚನೆ ಆಗಿರುವ ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಖಾತೆ ಮತ್ತು ರಾಜೀನಾಮೆ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಪಿಕ್ಚರ್ ಅಭಿ ಬಾಕಿ ಹೈ ಅಂದಿದ್ದಾರೆ. ಬೆಂಗಳೂರಿಗೆ ನಾನಿನ್ನೂ ಹೋಗಿಲ್ಲ. ಹೋದ ಮೇಲೆ ಮುಂದಿನ ಮಾತು. ಇಲಾಖೆ ಚಾರ್ಜ್ ತೆಗೆದುಕೊಳ್ಳದೇ ಇದ್ರೇ ಏನು ಅಗಲ್ಲ. ಸದ್ಯಕ್ಕೆ ಬೆಂಗಳೂರಿಗೆ ಹೋಗೋ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

  • ಪುಸ್ತಕ ನೀಡಿ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದ ಸಿಎಂ ಬೊಮ್ಮಾಯಿ

    ಪುಸ್ತಕ ನೀಡಿ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಇಂದು ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರರನ್ನ ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

    ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ ಆಗಮಿಸಿದ್ರು. ಮತ್ತೊಂದೆಡೆ ಉಪರಾಷ್ಟ್ರಪತಿಗಳ ಆಗಮನದ ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭಾರೀ ಪೊಲೀಸ್ ಬಂದೋಬಸ್ತ್ ನೊಂದಿಗೆ ಉಪರಾಷ್ಟ್ರಪತಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವ್ಯಂಗ್ಯ

  • ಮೇಕೆದಾಟು ಯೋಜನೆ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ

    ಮೇಕೆದಾಟು ಯೋಜನೆ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ

    ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಆಡಳಿತಾರೂಢ ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ತಮಿಳುನಾಡಿನ ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದೆ, ಆ ನಿಲುವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಬೆಂಬಲಿಸುತ್ತಿದ್ದಾರೆ. ಯಾಕೆ ಈ ದಂದ್ವನೀತಿ? ಈ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತಳೆದಿರುವ ಗಟ್ಟಿನಿಲುವಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಡಿಲ ನಾಲಿಗೆಯ ಮೂಲಕ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಸಿ.ಟಿ.ರವಿ ಅವರಂತಹ ಕೂಗುಮಾರಿಗಳ ಬಾಯಿ ಮುಚ್ಚಿಸದೆ ಹೋದರೆ ಅನಗತ್ಯವಾಗಿ ಇದೊಂದು ಆಂತರಿಕ ವಿವಾದವಾಗಿ ನಾವು ನಾವೇ ಕಚ್ಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ಬಿಜೆಪಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆ ಅದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ನಾವು ಕೂಡಾ ಭಾರತೀಯರು, ಇದಕ್ಕಾಗಿ ರಾಜ್ಯದ ಹಿತಾಸಕ್ತಿ ಕಡೆಗಣಿಸಲು ಸಾಧ್ಯ ಇಲ್ಲ ಎಂದರು.

    ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಪಕ್ಷ ರಾಜಕೀಯ ಮಾಡಲು ಹೋಗುವುದಿಲ್ಲ, ಯಾವ ಬಗೆಯ ರಾಜಿಯನ್ನೂ ಮಾಡುವುದಿಲ್ಲ. ಅಧಿಕಾರದಲ್ಲಿರಲಿ, ಇಲ್ಲದೆ ಇರಲಿ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿಗಳು ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ತಮ್ಮ ಪಕ್ಷದೊಳಗಿನ ಒಡಕು ಬಾಯಿಗಳನ್ನು ಮುಚ್ಚಿಸಬೇಕು ಎಂದರು.

    ಮೇಕೆದಾಟು ಯೋಜನೆಯ ವಿಚಾರದಲ್ಲಿ ಕಣ್ಣುಮುಚ್ಚಾಲೆ ಆಟ ಆಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿ ನ್ಯಾಯದ ಪರವಾದ ಗಟ್ಟಿನಿಲುವು ತೆಗೆದುಕೊಳ್ಳಬೇಕು. ಅನಗತ್ಯ ತಕರಾರು ತೆಗೆಯುತ್ತಿರುವ ತಮಿಳುನಾಡು ಸರ್ಕಾರಕ್ಕೆ ಬಿಗಿಮಾತಿನಿಂದ ಬುದ್ದಿ ಹೇಳಬೇಕು. ಮಹದಾಯಿ ಯೋಜನೆಯ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ತಳೆದ ದಂದ್ವ ನಿಲುವು ರಾಜ್ಯದ ಹಿತಾಸಕ್ತಿಗೆ ಮಾರಕವಾಯಿತು. ಕಾವೇರಿ ನ್ಯಾಯಮಂಡಳಿಯ ಐತೀರ್ಪು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾವೇರಿ ಜಲವಿವಾದ ಇತ್ಯರ್ಥವಾಗಿದೆ. ಪ್ರಕೃತಿಯ ಕೃಪೆಯಿಂದ ಕಳೆದೆರಡು ವರ್ಷಗಳಲ್ಲಿ ನದಿನೀರು ಹಂಚಿಕೆಯಲ್ಲಿ ಯಾವುದೇ ವ್ಯತ್ಯಯವಾಗದೆ ತಮಿಳುನಾಡಿಗೆ ಅದರ ಪಾಲಿನ ನೀರು ಹರಿದು ಹೋಗುತ್ತಿದೆ. ಈ ಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ ಎಂದರು.

    ಕೆ.ಆರ್.ಎಸ್ ಜಲಾಶಯದಿಂದ ಅನಿಯಂತ್ರಿತವಾಗಿ ಸಮುದ್ರಕ್ಕೆ ಹರಿದುಹೋಗುತ್ತಿರುವ ನೀರಿನಲ್ಲಿ 64 ಟಿಎಂಸಿ ನೀರನ್ನು ಬಳಸಿಕೊಂಡು ರೂಪಿಸಲಾಗಿರುವ ಮೇಕೆದಾಟು ಯೋಜನೆಯ ಮೊದಲ ಪ್ರಸ್ತಾವವವನ್ನು 2013ರಲ್ಲಿ ನಮ್ಮ ಸರ್ಕಾರ ಸಲ್ಲಿಸಿತ್ತು. 2019ರಲ್ಲಿ ನಮ್ಮದೇ ಸಂಯುಕ್ತ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ನಮ್ಮ ಪಕ್ಷ ಈ ಯೋಜನೆಗೆ ಬದ್ಧವಾಗಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವ ಹಾನಿಯೂ ಇಲ್ಲ. ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಒಬ್ಬ ಪ್ರಬುದ್ಧ ರಾಜಕಾರಣಿ. ಅವರು ಹಿಂದಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಂತೆ ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಬಾರದು. ನೆರೆ ರಾಜ್ಯಗಳ ಜೊತೆ ಸೌಹಾರ್ದಯುತ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಕಣಿವೆ ರಾಜ್ಯಗಳ ಅನುಮತಿ ಅಗತ್ಯ – ಕೇಂದ್ರದ ಉತ್ತರಕ್ಕೆ ಪ್ರಜ್ವಲ್ ಕೆಂಡಾಮಂಡಲ

    ಮೇಕೆದಾಟು ಮೂಲಭೂತವಾಗಿ ಬೆಂಗಳೂರು-ಮೈಸೂರು ನಗರಗಳಿಗಾಗಿ ರೂಪಿಸಿರುವ ಕುಡಿಯುವ ನೀರಿನ ಯೋಜನೆ. ಬೆಂಗಳೂರಿನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು ಭಾಷಿಕರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಜನರಿದ್ದಾರೆ. ಕುಡಿಯುವ ನೀರು ಪೂರೈಸುವ ಯೋಜನೆಗೆ ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುವುದು ಸರಿ ಅಲ್ಲ. ತಮಿಳುನಾಡು ಸರ್ಕಾರ ಕೂಡಾ ಕಾವೇರಿ ಜಲಾನಯನ ಪ್ರದೇಶದಲ್ಲಿ ಎರಡು ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. ಅವುಗಳನ್ನು ಕರ್ನಾಟಕ ವಿರೋಧಿಸಿಲ್ಲ. ಪ್ರಾಕೃತಿಕ ಸಂಪತ್ತನ್ನು ಹಂಚಿಕೊಂಡು ಬೆಳೆಯಬೇಕು ಎನ್ನುವುದು ನಮ್ಮ ನಿಲುವು. ತಮಿಳುನಾಡು ಹಠ ಹಿಡಿದು ಮೇಕೆದಾಟು ಯೋಜನೆಯನ್ನು ವಿರೋಧಿಸಿದರೆ ರಾಜಕೀಯ ಸಂಘರ್ಷ ಅನಿವಾರ್ಯವಾಗಬಹುದು ಎಂದೂ ಅವರು ಇದೇ ವೇಳೆ ಎಚ್ಚರಿಸಿದರು. ಇದನ್ನೂ ಓದಿ: ಮೇಕೆದಾಟು ವಿಚಾರ – ಉಪವಾಸ ಸತ್ಯಾಗ್ರಹ ಮಾಡ್ತೀವಿ ಎಂದಿರೋ ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು

  • ಶ್ರೀಕೃಷ್ಣ ಅಂದ್ರೆ ಕರಾರುರಹಿತ ಪ್ರೀತಿ, ಆಡಳಿತ ನಡೆಸಲು ದೇವರಿಂದ ಶಕ್ತಿ ಪಡೆದಿದ್ದೇನೆ: ಸಿಎಂ ಬೊಮ್ಮಾಯಿ

    ಶ್ರೀಕೃಷ್ಣ ಅಂದ್ರೆ ಕರಾರುರಹಿತ ಪ್ರೀತಿ, ಆಡಳಿತ ನಡೆಸಲು ದೇವರಿಂದ ಶಕ್ತಿ ಪಡೆದಿದ್ದೇನೆ: ಸಿಎಂ ಬೊಮ್ಮಾಯಿ

    ಉಡುಪಿ: ಶ್ರೀಕೃಷ್ಣ ಆದರ್ಶ ವ್ಯಕ್ತಿ, ಶ್ರೀಕೃಷ್ಣ ಅಂದರೆ ಕರಾರು ರಹಿತ ಪ್ರೀತಿ, ದೇವತಾಪುರುಷ, ಮಾರ್ಗದರ್ಶಕ. ಅವನ ದರ್ಶನವೆಂದರೆ ಕರಗಿ ಲೀನವಾಗುವ ಪ್ರಕ್ರಿಯೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಪೊಡವಿಗೊಡೆಯ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರಿಂದ ಹಾಗೂ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

    ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಗವದ್ಗೀತೆ ಜೀವನದ ಮಾರ್ಗದರ್ಶಕವಾಗಿದೆ. ಭಗವದ್ಗೀತೆ ನಮ್ಮೆಲ್ಲ ಜೀವನದ ಪ್ರಶ್ನೆಗಳಿಗೆ ಉತ್ತರ ಸಿಗುವ ಗ್ರಂಥ. ಶ್ರೀಕೃಷ್ಣ ಮಠಕ್ಕೆ ಬರುವುದು ಪುಣ್ಯಭಾಗ್ಯ. ಕೃಷ್ಣ ಕರೆಸಿಕೊಂಡರೆ ಮಾತ್ರ ಬರಲು ಸಾಧ್ಯ. ನಾಡಿನ ಜವಾಬ್ದಾರಿ ಹೊತ್ತ ಮೇಲೆ ದೇವರೇ ಕರೆಸಿದ್ದಾನೆ. ಕೋವಿಡ್ ಮಾರಿ ಎದುರಿಸಿ, ಕರ್ನಾಟಕ ಸುಭೀಕ್ಷ ಮಾಡಲು ದೇವರಲ್ಲಿ ಬೇಡಿದ್ದೇನೆ. ಆ ಅದಮ್ಯ ಶಕ್ತಿ ಪಡೆದಿದ್ದೇನೆ. ಅದಮಾರು ಸ್ವಾಮೀಜಿಯಲ್ಲಿ ನಿಖರತೆಯ ಜೊತೆಗೆ ನಾಡಿನ ಬಗ್ಗೆ ಹಂಬಲ ಕಂಡೆ. ಅವರ ಭೇಟಿ ನಂತರ ವಿಶೇಷ ಶಕ್ತಿ ಬಂದಿದೆ. ಪರಮಾತ್ಮನ ದಯೆಯಿಂದ ಸ್ಥಾನ ಸಿಕ್ಕಿದೆ. ದೇವರ ಆದರ್ಶ ಪಾಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್ ಮೊದಲಾದವರಿದ್ದರು. ಅದಮಾರು ಸ್ವಾಮೀಜಿ ಅವರನ್ನು ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು. ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಶಾಸಕರಿಗೆ ಪರಿಹಾರ ಮಾಡು ಮಠದಿಂದ ಗೌರವ ಸಮರ್ಪಣೆ ನಡೆಯಿತು.