Tag: ಸಿಎಂ ಬಸವರಾಜ ಬೊಮ್ಮಾಯಿ

  • ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

    ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

    ರಾಮನಗರ: ಮುಖ್ಯಮಂತ್ರಿಗಳ ಎದುರೇ ಕಾರ್ಯಕ್ರಮದಲ್ಲೇ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹಾಗೂ ಬಿಜೆಪಿಯ ಸಚಿವರ ನಡುವೆ ಜಟಾಪಟಿಯಾಗಿದೆ. ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಸ್ಥಳೀಯರ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ವೇದಿಕೆಯಲ್ಲೇ ಗಲಾಟೆ ಮಾಡಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಮನಗರ-ಮಾಗಡಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮಾಗಡಿ ಒಂದೇ ಕ್ಷೇತ್ರಕ್ಕೆ 195 ಕೋಟಿ ರೂಪಾಯಿ ಹಣದ ಅಭಿವೃದ್ಧಿ ಕಾಮಗಾರಿ ಹಾಗೂ ರಾಮನಗರ, ಕನಕಪುರ, ಚನ್ನಪಟ್ಟಣಕ್ಕೆ 95 ಕೋಟಿ ರೂಪಾಯಿ ಹಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಕೆಂಪೇಗೌಡ – ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿದರು. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ

    ರಾಮನಗರ ಡಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌, ಎಂಎಲ್‌ಸಿ ಎಸ್.ರವಿ ಬರುವ ಪಾಲ್ಗೊಳ್ಳುವ ಮುನ್ನವೇ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಳಿಸಿದ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ತೆಗೆದರು.

    ಸ್ಥಳೀಯ ಪ್ರತಿನಿಧಿಗಳು ಬರುವ ಮೊದಲೇ ಪ್ರತಿಮೆ ಅನಾವರಣಗೊಳಿಸಿದ ಸಿಎಂ ನಡೆಯನ್ನು ಸಂಸದ ಡಿ.ಕೆ.ಸುರೇಶ್‌ ವಿರೋಧಿಸಿದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು, ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಿಎಂ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್‌ ಪರ ಜೈಕಾರ ಕೂಗುವ ಮೂಲಕ ಗದ್ದಲ ಸೃಷ್ಟಿಸಲಾಯಿತು. ಅಲ್ಲದೇ ಕಾಂಗ್ರೆಸ್‌ ಕಾರ್ಯಕರ್ತರು ಸಿಎಂಗೆ ಧಿಕ್ಕಾರ ಕೂಗಿದರು. ಇದನ್ನೂ ಓದಿ: ಪಾದಯಾತ್ರೆ ಕಾಂಗ್ರೆಸ್ಸಿನ ಅತ್ಯಂತ ಹೀನಾಯ ರಾಜಕಾರಣ: ಕಟೀಲ್

    ಸಿಎಂ ವೇದಿಕೆಗೆ ಬರುತ್ತಿದಂತೆ ಕಪ್ಪು ಪಟ್ಟಿ ಪ್ರದರ್ಶಿಸಿ, ಅಂಬೇಡ್ಕರ್ ಪ್ರತಿಮೆಗೆ ಸಂಸದ ಡಿ.ಕೆ.ಸುರೇಶ್ ಅವರಿಂದ ಪುಷ್ಪಾರ್ಚನೆ ಮಾಡಿಸಿಲ್ಲ ಎಂದು ಧಿಕ್ಕಾರ ಕೂಗಿದರು. ಇದು ಸರ್ಕಾರಿ ಕಾರ್ಯಕ್ರಮವಲ್ಲ ಆರ್‌ಎಸ್‌ಎಸ್‌ ಕಾರ್ಯಕ್ರಮ ಎಂದು ಆಕ್ರೋಶ ಹೊರಹಾಕಿದರು. ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ಕಾರ್ಯಕರ್ತರ ಮನವೊಲಿಸಲು ಪೊಲೀಸರು ಮುಂದಾದರು. ಪೊಲೀಸರ ಮಾತಿಗೂ ಜಗ್ಗದೇ ದಲಿತ ಸಂಘಟನೆಗಳ ಮುಖಂಡರು ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆ ನಡೆಸಿದರನ್ನು ಸಮಾಧಾನ ಪಡಿಸಿದ ಸಂಸದ ಡಿ.ಕೆ.ಸುರೇಶ್‌, ಯಾರು ಕೂಡ ಸಭೆಗೆ ಅಗೌರವ ತರಬೇಡಿ. ನಿಮ್ಮ ನೋವನ್ನು ಮುಖ್ಯಮಂತ್ರಿಗಳಿಗೆ ತಿಳಿಸುತ್ತೇನೆ. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ ಎಂದು ಗೊಂದಲ ಸೃಷ್ಟಿಸಬೇಡಿ ಎಂದು ಮನವಿ ಮಾಡಿದರು. ನಂತರ ಸಿಎಂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಿಎಂಗೆ ಸಚಿವರಾದ ಡಾ.ಕೆ.ಸುಧಾಕರ್, ಅಶ್ವಥ್‌ ನಾರಾಯಣ, ಬೈರತಿ ಬಸವರಾಜ್, ಸಂಸದ ಡಿ.ಕೆ.ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್ ನೀಡಿದರು.

    ಈ ವೇಳೆ ಮತ್ತೆ ಮಹಿಳಾ ದಲಿತ ಸಂಘಟನೆಗಳ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಮಾತನಾಡಿದ ಅಶ್ವಥ್‌ ನಾರಾಯಣ, ಏಯ್ ಯಜಮಾನ ಯಾಕ್ರೋ ಜಿಲ್ಲೆಯ ಗೌರವ ತೆಗೀತಿರಾ. ನಾವೆಲ್ಲಾ ನಿಮ್ಮ ಜೊತೆಗೆ ಇದ್ದೇವೆ. ಯಾರೂ ಮಾತನಾಡಬೇಡಿ ಎಂದು ಮನವಿ ಮಾಡಿದರು. ಸಿಎಂ ಸಮ್ಮುಖದಲ್ಲೇ ಕೆಲಕಾಲ ಗಲಾಟೆ ನಡೆಯಿತು. ನಂತರ ಎಲ್ಲರ ಮನವೊಲಿಸಿ ವಾತಾವರಣ ತಿಳಿಗೊಳಿಸಿ ಕಾರ್ಯಕ್ರಮ ನಡೆಸಲಾಯಿತು.

  • ಜ.14ಕ್ಕೆ ಪಂಚಮಸಾಲಿ ಹೋರಾಟ ವರ್ಷಾಚರಣೆ: ಜಯಮೃತ್ಯುಂಜಯ ಸ್ವಾಮಿ

    ಜ.14ಕ್ಕೆ ಪಂಚಮಸಾಲಿ ಹೋರಾಟ ವರ್ಷಾಚರಣೆ: ಜಯಮೃತ್ಯುಂಜಯ ಸ್ವಾಮಿ

    ರಾಯಚೂರು: ಜನವರಿ 14 ರಂದು ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಪಂಚಮಸಾಲಿ ಹೋರಾಟ ವರ್ಷಾಚರಣೆ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಹೇಳಿದರು.

    ಲಿಂಗಸುಗೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 2020-21ರ ಅವಧಿಯಲ್ಲಿ ಪಂಚಮಸಾಲಿ ಬಂಧುಗಳಿಂದ ಹೋರಾಟ ನಡೆದಿತ್ತು. 2021 ಜನವರಿ 14 ರಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಮೇರೆಗೆ ಅನಿರ್ದಿಷ್ಟ ಧರಣಿ ಮುಕ್ತಾಯವಾಗಿತ್ತು. 2(ಎ) ಮೀಸಲಾತಿ ಸಂಬಂಧಿಸಿ ಹತ್ತು ಹಲವು ರೀತಿಯ ಹೋರಾಟ ಮಾಡಲಾಗಿತ್ತು. ಪರಿಣಾಮ ಜನವರಿ 14 ರಂದು ಈ ಹೋರಾಟಕ್ಕೆ ಒಂದು ವರ್ಷ ತುಂಬುತ್ತೆ ಎಂದು ವಿವರಿಸಿದರು. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಹೋರಾಟದ ವರ್ಷಾಚರಣೆಯನ್ನು ಪೀಠದಲ್ಲಿ ಆಯೋಜಿಸಿದ್ದೇವೆ. ಕಾರ್ಯಕ್ರಮಕ್ಕೆ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಮಾರ್ಚ್ ಅಂತ್ಯದೊಳಗೆ ಮೀಸಲಾತಿ ಆದೇಶ ಹೊರಬೀಳುವ ಲಕ್ಷಣಗಳು ಸ್ಪಷ್ಟವಾಗಿವೆ. ಅದು ಅಲ್ಲದೇ ಈ ಕುರಿತು ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ಜನವರಿ 14ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಲು ಮನವಿ ಮಾಡಿದ್ದಾರೆ. ಈ ವೇಳೆ ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರಲು ಕೋರಿದ್ದಾರೆ. ಕಲ್ಯಾಣ ಕರ್ನಾಟಕದಲ್ಲೂ ಕೆಲವೇ ದಿನಗಳಲ್ಲಿ ಆಯೋಗದಿಂದ ಸರ್ವೇ ಕಾರ್ಯ ಆರಂಭವಾಗುತ್ತದೆ ಎಂದು ಹೇಳಿದರು.

  • ಡಿಕೆಶಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ: ಅಶ್ವಥ್ ನಾರಾಯಣ

    ಡಿಕೆಶಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ: ಅಶ್ವಥ್ ನಾರಾಯಣ

    ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೇವರು ಆರೋಗ್ಯ, ಆಯಸ್ಸು ಕೊಡಲಿ. ಅವರು ನೂರು ಕಾಲ ಬದುಕಿ ಬಾಳಲಿ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನ ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಿಸಲು ಸರ್ಕಾರ ಮುಂಬೈ ಮಾದರಿ ಲಾಕ್‍ಡೌನ್ ಜಾರಿಗೊಳಿಸಲಿದೆ ಎಂಬುವುದರ ಬಗ್ಗೆ ಇಂದು ರಾಮನಗರದ ಮಾಗಡಿಯ ಚಿಕ್ಕಕಲ್ಯಾ ಗ್ರಾಮದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರತಿನಿತ್ಯ ಸಭೆ ನಡೆಯುತ್ತಿದೆ. ಪ್ರತಿದಿನದ ಸ್ಥಿತಿ-ಗತಿ ಗಮನದಲ್ಲಿಟ್ಟುಕೊಂಡು ಸಿಎಂ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ಮೇಕೆದಾಟು ವಿಚಾರವಾಗಿ ಹೋರಾಟ ಮಾಡಲು ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ನಲ್ಲಿ ವಾಕಿಂಗ್ ಅಭ್ಯಾಸ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ವಾಕ್ ಮಾಡುತ್ತಿದ್ದಾರೆ, ಅದು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾರ್ಕ್‍ನಲ್ಲಿ ವಾಕಿಂಗ್ ಮಾಡುತ್ತಿದ್ದಾರೆ. ಅವರ ಆರೋಗ್ಯ ಸದಾ ಚೆನ್ನಾಗಿರಲಿ. ಭಗವಂತ ಅವರಿಗೆ ಆರೋಗ್ಯ, ಆಯಸ್ಸು ನೀಡಲಿ. ಅವರು ನೂರುಕಾಲ ಬದುಕಿ ಬಾಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

    ಮೇಕೆದಾಟು ಯೋಜನೆ ಕುರಿತಂತೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ರಾಜ್ಯ – ಕೇಂದ್ರದಲ್ಲಿ ಈ ಯೋಜನೆಗೆ ಬದ್ಧವಾಗಿದೆ. ಈ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಆಗಲಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೂ ಹೇಳಿದ್ದರೂ, ಈಗಿನ ಸಿಎಂ ಬಸವರಾಜ್ ಬೊಮ್ಮಾಯಿಯವರು ಯೋಜನೆ ಬಗ್ಗೆ ಹೇಳಿದ್ದಾರೆ. ಈಗಾಗಲೇ ಐದು ಬಾರಿ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೆ ಈಗ ಕಾಂಗ್ರೆಸ್‍ನವರು ಪಾದಯಾತ್ರೆ ಮಾಡುವುದು ಸರಿಯಲ್ಲ. ಸರ್ಕಾರ ಯೋಜನೆಯ ಬಗ್ಗೆ ಕ್ರಮವಹಿಸದಿದ್ದರೆ ಪಾದಯಾತ್ರೆ ಮಾಡಲಿ. ಆದರೆ ನಮ್ಮ ಸರ್ಕಾರ ಪ್ರತಿ ಹಂತದಲ್ಲಿಯೂ ಕ್ರಮವಹಿಸುತ್ತಿದೆ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಕೋವಿಡ್-19 ಪ್ರಕರಣಗಳು ಏರಿಕೆಯಾಗಿದೆ, ಆದ್ರೆ ಆತಂಕ ಪಡಬೇಡಿ: ಅರವಿಂದ್ ಕೇಜ್ರಿವಾಲ್

    ಸಿಎಂ ಬಸವರಾಜ್ ಬೊಮ್ಮಾಯಿಯವರು ನಾಳೆ ಜಿಲ್ಲೆಗೆ ಬರುತ್ತಿದ್ದಾರೆ. ಮೊದಲಿಗೆ ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಬೇಡ್ಕರ್ – ಕೆಂಪೇಗೌಡರ ಪುತ್ಥಳಿ ಉದ್ಘಾಟಿಸಿ ನಂತರ ಗವರ್ನಮೆಂಟ್ ಟೂಲ್ಸ್ ಟ್ರೈನಿಂಗ್ ಸೆಂಟರ್ – 54 ಕೋಟಿ ವೆಚ್ಚದ ಯೋಜನೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಿದ್ದಾರೆ ಮತ್ತು ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳ ಕೆಂಪಾಪುರಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ 300 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

  • ಹೋಂ ಮಿನಿಸ್ಟರ್ ವಯಸ್ಸಲ್ಲಿ ದೊಡ್ಡವರಿರಬಹುದು, ಆದ್ರೆ ರಾಜಕೀಯದಲ್ಲಿ ಇನ್ನೂ ಎಳಸು: ಡಿಕೆಶಿ

    ಹೋಂ ಮಿನಿಸ್ಟರ್ ವಯಸ್ಸಲ್ಲಿ ದೊಡ್ಡವರಿರಬಹುದು, ಆದ್ರೆ ರಾಜಕೀಯದಲ್ಲಿ ಇನ್ನೂ ಎಳಸು: ಡಿಕೆಶಿ

    ಬೆಂಗಳೂರು: ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಅವರು ವಯಸ್ಸಲ್ಲಿ ದೊಡ್ಡವರಿರಬಹುದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು ಎಂದು ಕೆಪಿಸಿಸಿ ಅಧ್ಯಕ್ಷ್ಯ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

    ಮೇಕೆದಾಟು ಪಾದಯಾತ್ರೆಗೆ ಇಂದಿನಿಂದ ಸಿದ್ಧತೆ ನಡೆಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರು ಸ್ಯಾಂಕಿ ಕೆರೆ ದಂಡೆಯಲ್ಲಿ ಇಂದಿನಿಂದ 8 ದಿನಗಳವರೆಗೂ ವಾಕಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಇಂದು 6 ಕಿಮೀವರೆಗೂ ನಡೆದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಹೋಂ ಮಿನಿಸ್ಟರ್‌ಗೆ ಅನುಭವ ಇಲ್ಲ. ರೋಡ್‌ನಲ್ಲಿ ನಾನು ನಡೆಯುವುದಕ್ಕೆ ಇವರ ಅನುಮತಿ ಬೇಕಾ? ಹೋಂ ಮಿನಿಸ್ಟರ್ ಅವರು ವಯಸ್ಸಲ್ಲಿ ದೊಡ್ಡವರಿರಬಹುದು, ಆದರೆ ರಾಜಕೀಯದಲ್ಲಿ ಇನ್ನೂ ಎಳಸು. ಹೋರಾಟ ಮಾಡುವುದಕ್ಕೆ ಇವರ ಅನುಮತಿ ಕೇಳಬೇಕಾ? ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಂದೂಗಳ ಧಾರ್ಮಿಕ ಕೇಂದ್ರ ರಕ್ಷಣೆಗೂ ಬೋರ್ಡ್ ಬೇಕು: ಶಾಸಕ ರಾಮದಾಸ್

    ಮೇಕೆದಾಟು ಹೋರಾಟದ ಮೂಲಕ ಡಿ.ಕೆ.ಶಿವಕುಮಾರ್‌ ಅವರು ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವ ವೈಯಕ್ತಿಕ ಏನೂ ಇಲ್ಲ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ತಾನೇ ದೇವೇಗೌಡರ ಎದುರು ಅವತ್ತು ಚುನಾವಣೆಗೆ ನಿಲ್ಲಿಸಿದ್ದು. ಚುನಾವಣೆಯಲ್ಲಿ ಸೋತಿರಬಹುದು ಆದರೆ ಅಂಥ ಹೋರಾಟಗಾರರ ವಿರುದ್ಧ ನನ್ನ ನಿಲ್ಲಿಸಬೇಕು ಅಂದರೆ ನನ್ನ ಹೋರಾಟದ ಗುಣ ಕೂಡ ಕಾರಣ ಅಲ್ವಾ ಎಂದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ಹೊಸ ವರ್ಷ ರಾಜ್ಯದ ಜನತೆಗೆ ಆರೋಗ್ಯ, ಶಕ್ತಿ ನೀಡಲಿ. ಮಾನಸಿಕವಾಗಿ ಜನ ಕುಗ್ಗಿ ಹೋಗಿದ್ದಾರೆ. ಸಾಮಾಜಿಕವಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸದ ಮೇಲೆ ಬಹಳ ಪರಿಣಾಮ ಬೀರಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು. ಏರ್‌ಪೋರ್ಟ್‌ನಲ್ಲಿ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೆ ಪಾಸಿಟಿವ್ ಕೊಡುತ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು. ಹೊರಗಡೆಯಿಂದ ಬಂದವರಿಗೆ ನೆಗೆಟಿವ್‌ ಇದ್ದರೂ, ಇಲ್ಲಿ ಪಾಸಿಟಿವ್‌ ವರದಿ ಕೊಟ್ಟು ಪ್ರತಿಯೊಬ್ಬರಿಂದ ಮೂರು ಸಾವಿರ ವಸೂಲಿ ಮಾಡುತ್ತಿದ್ದಾರೆ. ಅದನ್ನು ಸಿಎಂ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

  • ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

    ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

    ಬೆಂಗಳೂರು: ಪ್ರವಾಹದಿಂದ ಹಾನಿಯಾದ ಜನರಿಗೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಗಮನಕ್ಕೆ ತಂದರು.

    ಬೆಳಗಾವಿ, ಬಾಗಲಕೋಟೆ ಮತ್ತು ಕಾರವಾರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿ ಬೆಳೆ ಸೇರಿ ಮನೆಗಳಿಗೂ ಹಾನಿಯಾಗಿದೆ. ಈ ಪರಿಣಾಮ ಅಲ್ಲಿನ ಜನರು ಬಸ್ ಶೆಲ್ಟರ್ ಮತ್ತು ಸಮುದಾಯ ಭವನಗಳಲ್ಲಿ ಇನ್ನೂ ಜನ ವಾಸಿಸುತ್ತಿದ್ದಾರೆ. ಅಂಥವರಿಗೆ ಪರಿಹಾರ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಗಮನಕ್ಕೆ ತಂದರು. ಇದನ್ನೂ ಓದಿ: ಬಸ್ ಮೇಲೆ ದಾಳಿಗೈದ ಮೂವರು ಉಗ್ರರ ಹತ್ಯೆ

    ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣ ಈ ಕುರಿತು ಪ್ರತಿಕ್ರಿಯಿಸಿದ್ದು, ಇಂಥ ಪ್ರಕರಣಗಳಿಗೆ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಬೆಳಗಾವಿ ಪ್ರಕರಣಗಳ ಬಗ್ಗೆ ಕಾರಜೋಳ ಅವರು ಪ್ರಸ್ತಾಪಿಸಿದರು.

    ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ವಿವರಗಳನ್ನು ಒದಗಿಸಿದ್ದು, 7600 ಪ್ರಕರಣಗಳ ಪುನರ್ ಪರಿಶೀಲನೆ ಮತ್ತು 4 ರಿಂದ 5 ಸಾವಿರ ಪ್ರಕರಣಗಳಲ್ಲಿ ಮೇಲ್ವಿಚಾರಣೆ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ:  RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

  • ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ರಾಯಚೂರು: ಸರ್ಕಾರಿ ನಿಯಂತ್ರಣದಿಂದ ಹಿಂದೂ ಧಾರ್ಮಿಕ ದೇವಾಲಯಗಳಿಗೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿಲುವನ್ನು ರಾಯಚೂರಿನಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸ್ವಾಗತಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಸರ್ಕಾರದ ಅಧೀನದಲ್ಲಿನ ದೇವಸ್ಥಾನ ಬೇರ್ಪಡಿಸುವ ವಿಚಾರ ಸೂಕ್ತ ನಿರ್ಧಾರವಾಗಿದೆ. ಆಸಕ್ತಿ ಇರುವವರು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ದೇವಾಲಯಗಳ ನಿರ್ವಹಣೆ ಮಾಡುವುದು ಒಳ್ಳೆಯದು. ಅಲ್ಲದೇ ದೇಗುಲಗಳ ಅಭಿವೃದ್ಧಿ, ಉತ್ಸವ ಉಸ್ತುವಾರಿ ನೀಡುವುದು ಸೂಕ್ತ. ಸಿಎಂ ಅವರ ಈ ನಿರ್ಧಾರ ಕೂಡಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸಿದರು. ಇದನ್ನೂ ಓದಿ: ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ

    ಹಿಂದೂ ದೇವಸ್ಥಾನಗಳಿಗೆ ವಿಶೇಷ ಕಾನೂನು ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಅಧಿವೇಶನದಲ್ಲಿ, ಹಿಂದೂ ದೇವಸ್ಥಾನಗಳಿಗೆ ಒಂದು ಕಾನೂನು ತರುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆ ಸುಬುಧೇಂದ್ರ ತೀರ್ಥರು ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಬೇರೆ ಸಮುದಾಯಗಳ ಪ್ರಾರ್ಥನಾ ಸ್ಥಳಗಳು ಸ್ವಾತಂತ್ರ್ಯವಾಗಿವೆ. ಹಿಂದೂಗಳ ದೇವಾಲಯಗಳು ಹಲವು ನಿಯಮಗಳ ನಿಯಂತ್ರಣದಲ್ಲಿ ಇವೆ. ದೇವಸ್ಥಾನಗಳನ್ನು ಸರ್ಕಾರದ ಕಟ್ಟುಪಾಡುಗಳಿಗೆ ಒಳಪಡಿಸಲಾಗಿದ್ದು, ಬಜೆಟ್ ಅಧಿವೇಶನದಲ್ಲಿ ಹಿಂದೂ ದೇವಸ್ಥಾನಗಳಿಗೆ ಒಂದು ಕಾನೂನು ತರುತ್ತೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾರಿಗೆ ಬೇಕು?: ಹೆಚ್.ಡಿ.ದೇವೇಗೌಡ

  • ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ

    ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ

    ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಇಂದು ಪರಿಹಾರ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಜನ ಬಸ್‍ಗಳ ಮೂಲಕ ಗುಂಪು, ಗುಂಪಾಗಿ ಆಗಮಿಸಿದ್ದು, ಕೊರೊನಾ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ.

    ಬಸವಗುಡಿ ಮೈದಾನದಲ್ಲಿ ಇಂದು ಬೆಳಗ್ಗೆ 11:30ಕ್ಕೆ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ನೂರಾರು ಮಂದಿ ಬಸ್ ಏರಿ ಬಂದಿದ್ದರು. ಅಲ್ಲದೇ ಈ ವೇಳೆ ಎಲ್ಲರೂ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮವನ್ನು ಉಲ್ಲಂಘಿಸಿದ್ದಾರೆ.

    ಪಬ್, ಬಾರ್‌ಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವೇ ಪಾಲನೆ ಆಗುತ್ತಿಲ್ಲ. ಜನರ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಮಾತ್ರ ಸರ್ಕಾರದ ನಿಯಮ ಪಾಲನೆಯಾಗಬೇಕು. ಸರ್ಕಾರಿ ಕಾರ್ಯಕ್ರಮಗಳಿಗೆ ನಿಮಯ ಪಾಲನೆ ಯಾಕಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

    ಸದ್ಯ ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರದಿಂದ ತಲಾ 50 ಸಾವಿರ ರೂ. ಪರಿಹಾರ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 1 ಲಕ್ಷ ರೂ. ಪರಿಹಾರ ನೀಡುವ ಮೂಲಕ ಒಟ್ಟು 1.50 ಲಕ್ಷ ರೂ. ವಿತರಣೆ ಮಾಡಲಾಗಿದೆ.

    ಈ ಯೋಜನೆಯನ್ನು ಕೊರೊನಾ ಎರಡನೇ ಅಲೆ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಅವರು ಘೋಷಿಸಿದ್ದರು. ಆದರೆ ಈ ಯೋಜನೆ ತಡವಾಗಿದ್ದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಳೆಗಾಲ ಅಧಿವೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿಎತ್ತಿದ್ದರು. ಇದೀಗ ಏಳು ತಿಂಗಳ ಬಳಿಕ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ 23,733 ಸಾವಿರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 50 ಸಾವಿರ ರೂ. ಪರಿಹಾರ ನೀಡಿದ್ದು, ರಾಜ್ಯ ಸರ್ಕಾರ 12,276 ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ ಪರಿಹಾರ ನೀಡಿದೆ.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ಜನರ ಆರೋಗ್ಯ ಆರೋಗ್ಯ ದೃಷ್ಟಿಯಿಂದ ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಜನ ತಮ್ಮ ದುಡಿಮೆಯ ಮೇಲೆ ಹೊಡೆತ ಬಿದ್ದಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಮಧ್ಯೆ ಸಿಎಂ ಕಾರ್ಯಕ್ರಮದಲ್ಲಿಯೇ ಕೊರೊನಾ ನಿಯಮ ಪಾಲನೆ ಉಲ್ಲಂಘನೆ ಆಗಿರುವ ಬಗ್ಗೆ ಇದೀಗ ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

  • ಸಿಎಂ ಸೂಚನೆ ಪಾಲನೆ – ಆಂಜನೇಯ ದೇವಾಲಯಕ್ಕೆ ಉಡುಗೊರೆ ಸಮರ್ಪಣೆ

    ಸಿಎಂ ಸೂಚನೆ ಪಾಲನೆ – ಆಂಜನೇಯ ದೇವಾಲಯಕ್ಕೆ ಉಡುಗೊರೆ ಸಮರ್ಪಣೆ

    ವಿಜಯಪುರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಬೆಳ್ಳಿ ಗದೆಯನ್ನು ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ನಿಗಮ ಅಧ್ಯಕ್ಷ ವಿಜ್ಜುಗೌಡಾ ಪಾಟೀಲ್ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ.

    ಜಿಲ್ಲೆಯ ವಿಜಯಪುರ, ಬಬಲೇಶ್ವರ, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಇದೇ ವೇಳೆ ಬೊಮ್ಮಾಯಿ ಅವರಿಗೆ ವಿಜ್ಜುಗೌಡಾ ಪಾಟೀಲ್ ಅವರು ಬೆಳ್ಳಿಯ ಗದೆ ಉಡುಗೊರೆ ನೀಡಿದ್ದರು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

    ಬೊಮ್ಮಾಯಿ ಅವರು, ನಾನು ಯಾವುದೇ ಕಾರ್ಯಕ್ರಮದಲ್ಲಿ ನೀಡಿದ ಬೆಳ್ಳಿಯ ಉಡುಗೊರೆಯನ್ನು ಕೊಂಡೊಯ್ಯೋಲ್ಲ. ಅದಕ್ಕೆ ಇದನ್ನು ಯಾವುದಾದರು ಆಂಜನೇಯ ದೇವಸ್ಥಾನಕ್ಕೆ ನೀಡಿ ಎಂದು ಸೂಚಿಸಿದ್ದರು.

    ಸಿಎಂ ಸೂಚನೆಯನ್ನ ಚಾಚು ತಪ್ಪದೆ ವಿಜ್ಜುಗೌಡಾ ಪಾಟೀಲ್ ಅವರು ಪಾಲಿಸಿದ್ದು, ಆ ಗದೆಯನ್ನು ವಿಜಯಪುರ ನಗರದ ಮದಲಾ ಮಾರುತಿ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಇದನ್ನೂ ಓದಿ: ಹಾಡಿನ ಚಿತ್ರೀಕರಣದ ವೇಳೆ ಗಾಯಕಿಯ ಮುಖಕ್ಕೆ ಕಚ್ಚಿದ ಹಾವು!

    ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಭೀಮಾಶಂಕರ ಹದನೂರ, ವಿಜಯ ಜೋಶಿ, ವಿನಾಯಕ್ ದಹಿಂದೆ, ಶಾಶ್ವತಗೌಡ ಪಾಟೀಲ್ ಉಪಸ್ಥಿತರಿದ್ದರು.

  • ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ

    ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ

    ಬೆಳಗಾವಿ: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ವಿಚಾರವಾಗಿ, ಬಂದ್ ಬೆಂಬಲಿಸದಿರಲು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಿರ್ಧರಿಸಿದೆ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ತಿಳಿಸಿದರು.

    ಬಂದ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಮಂಗಳವಾರದಂದು ಬೆಳಗಾವಿ ಜಿಲ್ಲಾ ಕನ್ನಡಪರ ಸಂಘಟನೆಗಳು ಸಭೆ ನಡೆಸಲಿವೆ ಎಂದು ತಿಳಿಸಿ ವಾಟಾಳ್ ನಾಗರಾಜ್ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಎಂಇಎಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಠೋರ ಮತ್ತು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ದೇಶದ್ರೋಹ, ಗೂಂಡಾ ಕಾಯ್ದೆ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಸಾಮಾನ್ಯ ಐಪಿಸಿ ಸೆಕ್ಷನ್ ಅಡಿ ಕೇಸ್ ಹಾಕ್ತಿದ್ರು. ಅವರು ಜಾಮೀನು ಪಡೀತಿದ್ರು, ಈಗ ಎಷ್ಟೋ ಎಂಇಎಸ್ ಗೂಂಡಾಗಳು ಹೆದರಿ ಊರು ಬಿಟ್ಟಿದ್ದಾರೆ ಎಂದು ತಿಳಿಸಿದರು.


    ಎಂಇಎಸ್ ನಿಷೇಧಿಸಲು ಕಾನೂನು ರೀತಿ ಕ್ರಮ ಕೈಗೊಳ್ಳಬೇಕಿದೆ. ವಾಟಾಳ್ ನಾಗರಾಜ್ ಅವರು ಬೆಂಗಳೂರಿನಲ್ಲಿ ಕುಳಿತು ಕರ್ನಾಟಕ ಬಂದ್ ಅಂದರೆ ಹೇಗೆ? ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ. ಕೋವಿಡ್‍ನಿಂದ ಜನ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನಾವು ಕರ್ನಾಟಕ ಬಂದ್ ಒಪೋದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ:  ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

    ರಾಜ್ಯದ 38 ಸಂಸದರು ಎಂಇಎಸ್ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಸಂಸದರ ಮನೆ, ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವೆ: ಸಿಎಂ

    ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವೆ: ಸಿಎಂ

    ಹುಬ್ಬಳ್ಳಿ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಶತಮಾನೋತ್ಸವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.

    ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಆಯೋಜಿಸಲಾಗಿದ್ದ ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವನ್ನು ಬೊಮ್ಮಾಯಿ ಅವರು ಉದ್ಘಾಟಿಸಿ ಮಾತನಾಡಿದರು. ಈ ವೇಳೆ, ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಗತವೈಭವ ಮರುಕಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ವಾಜಪೇಯಿ ಜನ್ಮ ದಿನಾಚರಣೆ ಆಚರಿಸಿದ ರಮೇಶ್ ಜಾರಕಿಹೊಳಿ

    ಶತಮಾನದಿಂದ ಈ ಸಂಸ್ಥೆಯನ್ನು ಉಳಿಸಿಕೊಂಡು ಬಂದಿದ್ದು, ರೈತರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿ ಮಾಡುವಂತೆ ತಿಳಿಸಿದರು. ಈ ಪ್ರತಿಷ್ಠಿತ ಸಂಸ್ಥೆ ರೈತರ ಆಸ್ತಿ. ಆ ಪ್ರತಿಷ್ಠೆಯನ್ನು ಮತ್ತು ರೈತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ ಮತ್ತು ಮುತುವರ್ಜಿ ವಹಿಸಬೇಕು. ಇದರೊಂದಿಗೆ ನಾನು ಸಹ ಈ ಸಂಸ್ಥೆಯ ಜೊತೆ ಇರುವುದಾಗಿ ಹೇಳಿದರು.

    ಒಬ್ಬ ವ್ಯಕ್ತಿ 100 ವರ್ಷ ಉಳಿಯಬಹುದು. ಆದರೆ ಒಂದು ಸಂಸ್ಥೆಯನ್ನು 100 ವರ್ಷ ಉಳಿಸಿಕೊಂಡು ಬರುವುದು ಬಹಳ ಕಷ್ಟ. ಇಂದಿನ ಖಾಸಗೀಕರಣ, ಜಾಗತೀಕರಣ ಹಾಗೂ ಆಧುನೀಕರಣದ ನಡುವೆಯೂ ಸಹಕಾರಿ ಸಂಸ್ಥೆಯನ್ನು ಉಳಿಸಿಕೊಂಡು ಬಂದಿರುವುದು ಪರಿಶ್ರಮದ ಪರಿಣಾಮ ಎಂದು ಪ್ರಶಂಸಿದರು.

    ರೈತರ ವಿಷಯ ಬಂದಾಗ, ರೈತರ ಸಮಸ್ಯೆ ವಿಷಯ ಬಂದಾಗ ಬೇರೆಲ್ಲವನ್ನು ಮರೆತು ನಾವು ಒಗ್ಗಟಾಗಿ ಕೆಲಸ ಮಾಡೋಣ. ಸಂಸ್ಥೆ ಬೆಳೆದರೆ ರೈತರಿಗೆ ಅನುಕೂಲವಾಗುವುದು. ಸಂಸ್ಥೆಯಿಂದ ನಾವು-ನೀವೆಲ್ಲರೂ ಬೆಳೆದಿದ್ದೇವೆ. ರಾಜಕೀಯವಾಗಿಯೂ ಬೆಳೆದಿದ್ದೇವೆ. ಈ ಸಂಸ್ಥೆಯನ್ನು ಬೆಳೆಸಲು ನಾವು-ನೀವು ಮರಳಿ ಏನನ್ನಾದರೂ ನೀಡುವ ಚಿಂತನೆಯನ್ನು ಮಾಡಬೇಕಿದೆ ಎಂದರು. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

    ಇದು ನನ್ನ ಸಂಸ್ಥೆ. ಈ ಸಂಸ್ಥೆಗೆ ಸರ್ಕಾರದಿಂದ ನೀಡಬೇಕಾಗಿರುವ ಸಹಾಯ-ಸಹಕಾರವನ್ನು ನೀಡುತ್ತೇನೆ. ಈ ಕುರಿತು ಮುಂದಿನ ದಿನಗಳಲ್ಲಿ ಸಂಸ್ಥೆಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.