Tag: ಸಿಎಂ ಬಸವರಾಜ ಬೊಮ್ಮಾಯಿ

  • ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

    ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

    ಬೆಂಗಳೂರು: ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲನ್ನು ಹಾಕುವ ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಆರ್.ಟಿ.ನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡಿನಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಒಟ್ಟು 3 ಜನ ನ್ಯಾಯಮೂರ್ತಿಗಳ ಮೇಲೆ ಕೊಲೆ ಬೆದರಿಕೆ ಬಂದಿದೆ. ಈ ಸಂಬಂಧ ಮೊಕದ್ದಮೆ ದಾಖಲಾಗಿದೆ. ನ್ಯಾಯಾಂಗದ ತೀರ್ಪನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಅರ್ಜಿದಾರರಿಗೆ ತೀರ್ಪು ಸಮಂಜಸವೆನಿಸದಿದ್ದರೆ ಮೇಲ್ಮನವಿ ಸಲ್ಲಿಸಲು ಎಲ್ಲ ಅವಕಾಶಗಳಿವೆ. ಆದರೂ ಈ ವಿಚ್ಛಿದ್ರಕಾರಿ ಶಕ್ತಿಗಳು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ ಡೇಜರಸ್ ಫ್ಲೈ ಓವರ್‌ಗಳು

    ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಉಚ್ಛನ್ಯಾಯಾಲಯದ ಬಾರ್ ಕೌನ್ಸಿಲ್ ಅವರೂ ಸಹ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಈ ಬಗ್ಗೆ ಕೂಡಲೇ ತನಿಖೆ ನಡೆಸಲು ಸೂಚಿಸಲಾಗಿದೆ. ತಮಿಳುನಾಡಿನಿಂದ ರಾಜ್ಯದ ವಶಕ್ಕೆ ಆರೋಪಿಗಳನ್ನು ಪಡೆದು, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಆದೇಶ ನೀಡಲಾಗಿದೆ. ಮೂರು ನ್ಯಾಯಾಧೀಶರಿಗೆ ಈಗಿರುವ ಭದ್ರತೆಯ ಜೊತೆಗೆ ‘ವೈ’ ಕೆಟಗರಿಯ ಭದ್ರತೆಯನ್ನು ನೀಡುವ ತೀರ್ಮಾವನ್ನು ಸರ್ಕಾರ ಕೈಗೊಂಡಿದೆ ಎಂದರು.

    ಡೋಂಗಿ ಜಾತ್ಯತೀತರು ಮೌನವಹಿಸಿದ್ದಾರೆ
    ಇದೇ ವೇಳೆ ನ್ಯಾಯಮೂರ್ತಿಗಳು ನೀಡುವ ತೀರ್ಪಿಗಾಗಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣದ ಮೇಲೆ ಡೋಂಗಿ ಜಾತ್ಯತೀತರು ಮೌನ ವಹಿಸಿದ್ದಾರೆ. ಒಂದು ವರ್ಗದ ಜನರನ್ನು ಈ ರೀತಿ ಓಲೈಸುವುದು ಜಾತ್ಯತೀತತೆ ಅಲ್ಲ, ಕೋಮುವಾದ ಎಂದೆನಿಸುತ್ತದೆ. ಈ ಪ್ರಕರಣದ ಬಗ್ಗೆ ಎಲ್ಲರೂ ಒಗ್ಗಾಟ್ಟಾಗಿ ಕ್ರಮ ಕೈಗೊಂಡು ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕಿದೆ. ಈ ರೀತಿಯ ಪ್ರಕರಣಗಳು ದೇಶದ ಪ್ರಜಾಪ್ರಭುತ್ವಕ್ಕೆ ಆತಂಕವನ್ನು ಒಡ್ಡುತ್ತವೆ. ಸರ್ಕಾರದಿಂದ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕವಾಗಿ ಈ ಪ್ರಕರಣವನ್ನು ಖಂಡಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಭಿಕ್ಷುಕನ ಜೊತೆ ಪತ್ನಿ ರೊಮ್ಯಾನ್ಸ್ ನೋಡಿ ಬೆಚ್ಚಿಬಿದ್ದ ಪತಿ

    ತುಮಕೂರಿನ ಪಾವಗಡ ಬಸ್ ಅಪಘಾತ
    ಶಾಲಾ ಕಾಲೇಜುಗಳು ಇರುವ ಸಂದರ್ಭದಲ್ಲಿ ಬಸ್‍ಗಳಲ್ಲಿ ಅದರ ಮಿತಿಗಿಂತ ಹೆಚ್ಚಿನ ಜನರನ್ನು ಒಯ್ಯುವ ಬಸ್‌ಗಳನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ಆ ರೀತಿಯ ಬಸ್‍ಗಳ ಲೈಸೆನ್ಸ್‌ಗಳನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ. ಇಂತಹ ಬಸ್‍ಗಳು ಸಂಚರಿಸುವ ಮಾರ್ಗದಲ್ಲಿ ನಿರಂತರ ತಪಾಸಣೆ ಮಾಡಲೂ ಸಹ ಸೂಚಿಸಲಾಗಿದೆ. ಗಾಯಾಳುಗಳಿಗೆ ಅವಶ್ಯಕತೆ ಇದ್ದಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲು ತಿಳಿಸಲಾಗಿದೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

  • ಸಭಾಪತಿ ಮೇಲೆ FIR ಹಾಕಿದ ಅಧಿಕಾರಿಯನ್ನ ಅಮಾನತು ಮಾಡಿ – ಪಕ್ಷಾತೀತವಾಗಿ ಒತ್ತಾಯ

    ಸಭಾಪತಿ ಮೇಲೆ FIR ಹಾಕಿದ ಅಧಿಕಾರಿಯನ್ನ ಅಮಾನತು ಮಾಡಿ – ಪಕ್ಷಾತೀತವಾಗಿ ಒತ್ತಾಯ

    ಬೆಂಗಳೂರು: ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಎಫ್‍ಐಆರ್ ದಾಖಲು ಮಾಡಿರುವ ಪ್ರಕರಣದಲ್ಲಿ ನಿಯಮಾವಳಿ ಪಾಲನೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಸಭಾಪತಿಗಳ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ದೂರು ಬಂದಿರುವುದು ಸಭಾಪತಿಗಳ ವಿರುದ್ಧ. ಪೂರ್ವಾನುಮತಿ ಪಡೆಯದೇ ಎಫ್‍ಐಆರ್ ದಾಖಲು ಮಾಡಿದ್ದು ಸರಿಯಲ್ಲ. ಸಭಾಪತಿ ಅವರಿಗೇ ಈ ರೀತಿ ಆಗಿರುವುದು ಸರಿಯಲ್ಲ. ಕೂಡಲೇ ತನಿಖಾಧಿಕಾರಿ ವಿರುದ್ಧ ಕ್ರಮ ಆಗಲೇಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

    ವಿಪಕ್ಷ ನಾಯಕ ಹರಿಪ್ರಸಾದ್ ಈ ವೇಳೆ ಮಾತನಾಡಿ, ಈ ಪ್ರಕರಣದಲ್ಲಿ ದಲಿತ ಎಸ್‍ಐನ ಅಮಾನತುಗೊಳಿಸಿ, ಬಲಿಪಶು ಮಾಡಲಾಗಿದೆ. ಯಾರೋ ಒಬ್ಬ ಹರಕೆಯ ಕುರಿ ಸಿಕ್ಕ ಎಂದು ಮಾಡುವುದು ಸರಿಯಲ್ಲ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

    ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಎಫ್‍ಐಆರ್ ದಾಖಲಾದರೆ ಎಷ್ಟು ಸಮಯದಲ್ಲಿ ಎಸ್‍ಪಿ ಕಚೇರಿಗೆ ಮಾಹಿತಿ ಹೋಗಲಿದೆ. ಯಾಕೆ ಎಸ್‍ಪಿ ತನಿಖೆಗೆ ಆದೇಶಿಸಲಿಲ್ಲ. ಗೃಹ ಸಚಿವರ ಗಮನಕ್ಕಾದರೂ ತರಬಹುದಿತ್ತು. ಆದರೆ ಅವರು ಆ ಕೆಲಸವನ್ನೂ ಮಾಡಿಲ್ಲ. ಎಸ್‍ಪಿ ಜವಾಬ್ದಾರಿ ಕೂಡ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಅವರು, ಸಭಾಪತಿ ಸ್ಥಾನ ಬಹಳ ಮುಖ್ಯ. ರಾಜ್ಯಪಾಲರ ನಂತರದ ಸ್ಥಾನ ಅದು. ಸಾಂವಿಧಾನಿಕ ಹುದ್ದೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ನಿಯಮ ಪಾಲಿಸಬೇಕು. ಅದಕ್ಕಾಗಿಯೇ ಪೆÇ್ರೀಟೋಕಾಲ್ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ 

    ಈ ಕೇಸ್‍ನಲ್ಲಿ ಪ್ರೊಸೀಜರ್ ಫಾಲೋ ಆಗಿಲ್ಲ. ಹಾಗಾಗಿ ಎಫ್‍ಐಆರ್ ದಾಖಲಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಐಒ, ಡಿವೈಎಸ್‍ಪಿ ಇರುತ್ತಾರೆ ಹಾಗಾಗಿ ಎಲ್ಲ ಪರಿಶೀಲಿಸಲಾಗುತ್ತಿದೆ. ಸಭಾಪತಿ ಹುದ್ದೆ ಘನತೆ ಎತ್ತಿಹಿಡಿದು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

  • ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಏನೇ ಮಾತಾಡಲಿ. ರಾಜ್ಯದಲ್ಲಿ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ಎಸ್.ನಾರಾಯಣ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಈ ಹಿಂದೆ ನಾನು ಒಂದು ದಿನಾಂಕ ನೀಡಿದ್ದೆ. ನಾರಾಯಣ್ ಇಂದೇ ಶುಭದಿನ ಎಂದು ನಿರ್ಧಾರ ಮಾಡಿ ಇಂದೇ ಪಕ್ಷ ಸೇರ್ಪಡೆ ಆಗ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ವಾಣಿಜ್ಯ ಮಂಡಲಿ ಸೇರಿದಂತೆ ಸಮುದಾಯದ ಸಂಘಟನೆ ಮಾಡಲಿದ್ದಾರೆ ಎಂದು ವಿವರಿಸಿದರು.

    ನಮ್ಮ ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಅರ್ಜಿ ಹಾಕಿಕೊಂಡಿದ್ದಾರೆ. ಟೈಮ್ ಫಿಕ್ಸ್ ಮಾಡಬೇಕಿದೆ. ಸಿಎಂ ಯಾರ ಜೊತೆ ಮಾತಾಡ್ತಿದ್ದಾರೆ ಗೊತ್ತಿದೆ. ಉಡುಪಿ ಶಾಸಕರ ಜೊತೆ ಏನ್ ಮಾತನಾಡಿದ್ದಾರೆ ಗೊತ್ತಿದೆ. ಬಿಜೆಪಿ ಅಧ್ಯಕ್ಷರು ತಡ ಮಾಡೋದು ಬೇಡ, ಯಾವ ಶಾಸಕರು ಸಂಪರ್ಕದಲ್ಲಿದ್ದಾರೋ ಬೇಗ ಸೇರ್ಪಡೆ ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಕ್ರಮ ಗೋ ಸಾಗಾಟ – 6 ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿದ RSS ಕಾರ್ಯಕರ್ತರು

    ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮುಗಿದೇ ಹೋಯ್ತು. ಧೂಳೀಪಟ ಅಂತ ಬರೆದ್ರು. ಪ್ರಿಯಾಂಕಾ ಗಾಂಧಿ 200ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಮುಂದಕ್ಕೆ ಸ್ಟೆಪ್ಪಿಂಗ್ ಸ್ಟೋನ್ ಆಗಿದ್ದಾರೆ. ಪಂಜಾಬ್‍ನಲ್ಲಿ ನಮ್ಮ ಆಂತರಿಕ ಕಲಹದಿಂದ ಕೈ ತಪ್ಪಿದೆ. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿಗಳು ಏನೇ ಮಾತಾಡಲಿ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಮ್ಮ ಕಾಲ ಮೇಲೆ ನಾವು ನಿಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಸಚಿವ ಸಂಪುಟದ ಉಪಸಮಿತಿಯ ತೀರ್ಮಾನವನ್ನು ವಾಪಸ್ ಪಡೆಯಿರಿ: ಪ್ರಿಯಾಂಕ್ ಖರ್ಗೆ

    ಸಚಿವ ಸಂಪುಟದ ಉಪಸಮಿತಿಯ ತೀರ್ಮಾನವನ್ನು ವಾಪಸ್ ಪಡೆಯಿರಿ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಮಾರ್ಚ್ 3ರ ಸಚಿವ ಸಂಪುಟದ ಉಪಸಮಿತಿಯ ತೀರ್ಮಾನವನ್ನು ವಾಪಸ್ ಪಡೆಯುವಂತೆ ಮಾಜಿ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

    ಇದೇ ಮಾರ್ಚ್ 3 ರಂದು ಕಲ್ಯಾಣ ಕರ್ನಾಟಕ ಪ್ರಗತಿ ಪರಿಶೀಲನಾ ಸಚಿವ ಸಂಪುಟದ ಸಭೆ ನಡೆಯಿತು. ಈ ವೇಳೆ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅರ್ಹ ಹೈದರಾಬಾದ್ ಕರ್ನಾಟಕದ ಅಧಿಕಾರಿ ಅಥವಾ ನೌಕರರು ಲಭ್ಯವಿಲ್ಲದಿದ್ದಾಗ, ಖಾಲಿ ವೃಂದದ ಹುದ್ದೆಗಳನ್ನು ಸ್ಥಳೀಯ ವೃಂದದ ಹುದ್ದೆಗಳನ್ನು ಹೈಕ ವೃಂದಕ್ಕೆ ಸೇರದವರಿಂದ(ಉಳಿಕೆ ಮೂಲ ವೃಂದದ) ಭರ್ತಿಮಾಡಬಹುದಾಗಿದೆ ಎಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಲಾಗಿದೆ. ಇದರಂತೆ ಹುದ್ದೆಗಳ ಭರ್ತಿ ಮಾಡಿದರೆ ಸ್ಥಳೀಯ ವೃಂದದ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ. ಅದಕ್ಕೆ ಈ ಕೂಡಲೇ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಹಿಂಪಡೆದು ಸ್ಥಳೀಯ ವೃಂದದ ನೌಕರರಿಗೆ ನ್ಯಾಯ ಒದಗಿಸುವಂತೆ ಪ್ರಿಯಾಂಕ್ ಖರ್ಗೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿ ಆಡಳಿತಕ್ಕೆ ಸಿಕ್ಕ ಜನಮನ್ನಣೆ: ಜಗದೀಶ್ ಶೆಟ್ಟರ್ 

    ಈ ಕುರಿತು ಸಿಎಂ ಅವರಿಗೆ ಸುದೀರ್ಘ ಪತ್ರ ಬರೆದು ಮನವಿ ಸಲಿಸಿರುವ ಅವರು, ಹೈಕ ಭಾಗದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಗಾಗಿ ಕಲಂ 371(ಜೆ) ಜಾರಿಗೊಳಿಸಲಾಗಿದೆ. ಈ ಭಾಗದ ಅಭಿವೃದ್ದಿಗೆ ಅಗತ್ಯ ಅನುದಾನ ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ 2013ರ ಪ್ರಕಾರ ಈ ಪ್ರದೇಶದ ನೌಕರರಿಗೆ ಮುಂಬಡ್ತಿ/ ನೇರ ನೇಮಕಾತಿ ಅಡಿ ಮೀಸಲಾತಿ ಕಲ್ಪಿಸಲಾಗಿದೆ. ಅದರಂತೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಪ್ರಾದೇಶಿಕ ಸ್ಥಳೀಯ ವೃಂದದಲ್ಲಿ ಕ್ರಮವಾಗಿ ಶೇ.75, ಶೇ.80 ಹಾಗೂ ಶೇ.85 ರಷ್ಟು ಹಾಗೂ ರಾಜ್ಯ ಮಟ್ಟದ ವೃಂದದಲ್ಲಿ ಶೇ.8 ರಷ್ಟು ಹುದ್ದೆಗಳನ್ನು ನೇರ ಹಾಗೂ ಮುಂಬಡ್ತಿ ನೇಮಕಾತಿಗೆ ಮೀಸಲಾತಿ ನೀಡಲಾಗಿದೆ ಎಂದು ವಿವರಿಸಿದರು.

    ಕರ್ನಾಟಕ ಸರ್ಕಾರ ಸಚಿವಾಲಯ ರಾಜ್ಯ ಮಟ್ಟದ ಸಂಸ್ಥೆಯಾಗಿರುವುದರಿಂದ ಶೇ.8ರಷ್ಟು ಹುದ್ದೆಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗಿದೆ. ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ 2013ರ ಕಂಡಿಕೆ 8, ಉಪಕಂಡಿಕೆ 5, ಉದೃತ ಭಾಗದಲ್ಲಿ, ಯಾವುದೇ ಸಮಯದಲ್ಲಿ ಯಾವುದೇ ಹುದ್ದೆಗಾಗಿ ಲಭ್ಯ ಸ್ಥಳೀಯ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ಖಾಲಿ ಹುದ್ದೆಗಳನ್ನು ಬ್ಯಾಕ್ ಲಾಗ್ ಎಂದು ತೆಗೆದುಕೊಳ್ಳಬೇಕು. ಮುಂದಿನ ನೇಮಕಾತಿವರೆಗೆ ಅದನ್ನ ಮುಂದುವರೆಸತಕ್ಕದ್ದು. ನಂತರ ಅದನ್ನು ಮೀಸಲಾತಿಯಲ್ಲವೆಂದು ಭಾವಿಸಬಹುದು ಹಾಗೂ ಅದಕ್ಕನುಗುಣವಾಗಿ ಭರ್ತಿ ಮಾಡತಕ್ಕದ್ದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

    ಈ ಹಿಂದೆ ಹೈಕ ಕಾಯಿದೆ 2013 ರ ವಿರುದ್ಧ ಕೆ.ಎ.ಟಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆ ಅರ್ಜಿಯನ್ನು ವಜಾಗೊಳಿಸಿದ ಕೆಎಟಿ ಹೈದರಾಬಾದ್ ಕರ್ನಾಟಕ ಪ್ರದೇಶದ ನೌಕರರಿಗೆ ನೀಡಿರುವ ಮೀಸಲಾತಿಯನ್ನು ಎತ್ತಿಹಿಡಿದಿತ್ತು. ಇದಲ್ಲದೇ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಕೂಡಾ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಷೇಪಣೆ ಬಂದಾಗಿ ಪಾಟೀಲರು ತಿರಸ್ಕಾರಗೊಳಿಸಿದ್ದರು. ಈ ಕುರಿತು ದಾಖಲೆಗಳು ಹೈಕ ಕೋಶದಲ್ಲಿ ಲಭ್ಯವಿದೆ ಎಂದು ವಿವರಿಸಿದರು. ಇದನ್ನೂ ಓದಿ: ಜನರು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನ ಗೆಲ್ಲಿಸಿದ್ದಾರೆ: ಯೋಗಿ 

    ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ 03-03-2022 ರಂದು ನಡೆದ ಸಂಪುಟದ ಉಪಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಈ ಕೂಡಲೇ ಹಿಂದೆಪಡೆದು ಸ್ಥಳೀಯ ವೃಂದದ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶಾಸಕರು ತಾವು ಬರೆದ ಪತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೋರಿದ್ದಾರೆ.

  • ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್

    ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್

    ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ಟೀಕಿಸಿದರು.

    ಪಂಚರಾಜ್ಯಗಳಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಗೆಲುವು ಸಾಧಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇದರಿಂದ ಬಿಜೆಪಿ ಎಷ್ಟು ಬಲಿಷ್ಠಶಾಲಿ ಎಂದು ತಿಳಿಯಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇಲ್ಲದಂತೆ ಹೋಗುತ್ತೆ ಎಂದರು. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್

    ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ. ಬಸವರಾಜ ಬೊಮ್ಮಾಯಿ ಅವಧಿ ಪೂರ್ಣ ಮಾಡುತ್ತಾರೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎಂದು ಅಮಿತ್ ಶಾ ಕೂಡಾ ಹೇಳಿದ್ದಾರೆ. ರಾಜ್ಯಾಧ್ಯಕ್ಷರ ವಿಚಾರದಲ್ಲಿ ಇವತ್ತಿನವರೆಗೆ ಯಾವುದೇ ಬದಲಾವಣೆ ಇಲ್ಲ. ಪಕ್ಷದ ನಾಯಕತ್ವ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

    ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ. ಕಾಂಗ್ರೆಸ್ ಪಕ್ಷ ವರ್ತಮಾನ ಮತ್ತು ಭವಿಷ್ಯದಲ್ಲಿ ಇಲ್ಲ. ಕಾಂಗ್ರೆಸ್ ಭೂತಕಾಲದ ಪಕ್ಷ, ಇತಿಹಾಸ ಸೇರಿಯಾಯ್ತು. ಎಲ್ಲ ಚುನಾವಣೆಗಳನ್ನು ನಾವು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಡಿ.ಕೆ.ಶಿವಕುಮಾರ್ ಗೋವಾದಲ್ಲಿ ಕಸರತ್ತು ಮಾಡಲು ಹೋಗಿದ್ದರು. ಮೇಕೆದಾಟು ಮತ್ತು ರಾಜ್ಯ ಕಾಂಗ್ರೆಸ್ ಮುನ್ನಡೆಸುವಲ್ಲಿ ಡಿಕೆಶಿ ವಿಫಲ ಆಗಿದ್ದಾರೆ. ಡಿಕೆಶಿ ವಿಮಾನವನ್ನು ಪಂಜಾಬ್ ಕಡೆ ತಿರುಗಿಸುವುದು ಒಳ್ಳೆಯದು. ಕಾಂಗ್ರೆಸ್, ಪಂಜಾಬ್ ರಾಜ್ಯದಲ್ಲೂ ವಿಫಲವಾಗಿದೆ. ಡಿಕೆಶಿ ವಿಮಾನ ಎಲ್ಲೂ ಲ್ಯಾಂಡ್ ಆಗಲು ಸಾಧ್ಯವಿಲ್ಲ. ಡಿಕೆಶಿ ಆಕಾಶದಲ್ಲಿ ಹಾರುತ್ತಿರಲಿ, ಎಲ್ಲೂ ಇಳಿಯುವ ಅವರಿಗೆ ಅವಕಾಶ ಇಲ್ಲ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬೇಗುದಿ ಆರಂಭವಾಗಿದೆ. ಮುಂದಿನ ಒಂದು ವರ್ಷ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ಪಂಜಾಬ್‍ನಲ್ಲಿ ಆಪ್ ಗೆ ಅಭಿನಂದನೆ, ಒಳ್ಳೆಯ ಆಡಳಿತ ಮಾಡಲಿ. ಪಂಜಾಬ್‍ನಲ್ಲಿ ಲೋಕಸಭೆಗೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ. ನಮ್ಮಲ್ಲಿ ಎಬಿಸಿ ಟೀಂ ಇಲ್ಲ, ಮೋದಿ ಟೀಂ, ಬಿಜೆಪಿ ಟೀಂ ಮಾತ್ರ ಇದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ

    ರಾಮಮಂದಿರ ನಿರ್ಮಾಣ ಮತ್ತು ಕಾಶಿ ವಿಶ್ವನಾಥನ ಕಾರಿಡಾರ್ ಯೋಜನೆಯ ನಂತರ ಇಡೀ ದೇಶದಲ್ಲಿ ವಾತಾವರಣ ಬದಲಾಗಿತ್ತು. ಯೋಗಿ ಆಡಳಿತ ಉತ್ತರಪ್ರದೇಶದ ವಾತಾವರಣವನ್ನು ಬದಲು ಮಾಡಿದೆ. ಈ ಚುನಾವಣೆ ಇಡೀ ದೇಶಕ್ಕೆ ದಿಕ್ಸೂಚಿ ಚುನಾವಣೆಯಾಗಿದೆ. ಇಡೀ ದೇಶದಲ್ಲಿ ಕಾರ್ಯಕರ್ತರ ಉತ್ಸಾಹ ಜಾಸ್ತಿಯಾಗಿದೆ. ಉತ್ತರಪ್ರದೇಶದಲ್ಲಿ ಒಂದೇ ಪಕ್ಷ ಎರಡು ಬಾರಿ ಗೆದ್ದ ಉದಾಹರಣೆ ಇಲ್ಲ. ಕರ್ನಾಟಕದಲ್ಲಿ ನಮ್ಮಂತಹ ಎಲ್ಲ ಕಾರ್ಯಕರ್ತರು ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು.

  • ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ

    ಮೃತ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್ ಕೊಟ್ಟ ಸಿಎಂ

    ಹಾವೇರಿ: ಉಕ್ರೇನ್-ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿ 25 ಲಕ್ಷ ರೂ. ಪರಿಹಾರದ ಚೆಕ್ ಕೊಟ್ಟಿದ್ದಾರೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಕೇರಿ ಗ್ರಾಮದಲ್ಲಿರುವ ನವೀನ್ ಕುಟುಂಬವನ್ನು ಬೊಮ್ಮಾಯಿ ಮತ್ತು ಬಿಜೆಪಿ ಮುಖಂಡರು ಭೇಟಿ ಮಾಡಿ ಅವರಿಗೆ ಸಾಂತ್ವದ ಮಾತುಗಳನ್ನಾಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ನವೀನ್ ಭಾವಚಿತ್ರಕ್ಕೆ ಹೂವು ಹಾಕಿ ನಮನ ಸಲ್ಲಿಸಿದರು.

    ತಂದೆ ಶೇಖರ್ ಗೌಡ ಅವರ ಕೈಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ ವೇಳೆ ನವೀನ್ ಮೃತ ದೇಹ ಚಳಗೇರಿಗೆ ತರುವಂತೆ ಪೋಷಕರು ಮತ್ತು ಗ್ರಾಮಸ್ಥರು ಲಿಖಿತ ಮನವಿ ನೀಡಿದರು.

    ಈ ವೇಳೆ ಮಾತನಾಡಿದ ಸಿಎಂ, ಬಾಂಬಿಂಗ್ ಪರಿಣಾಮ ನವೀನ ಸಾವನ್ನಪ್ಪಿದ್ದಾನೆ. ವಿದ್ಯಾರ್ಜನೆಗೆ ತೆರಳಿದ್ದ ನವೀನ್‍ಗೆ ಈ ರೀತಿ ಆಗುತ್ತೆ ಅಂತಾ ಯಾರೂ ಊಹಿಸಿರಲಿಲ್ಲ. ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ನವೀನ್ ಪಾರ್ಥೀವ ಶರೀರವನ್ನು ತಾಯ್ನಾಡಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

    ಉಕ್ರೇನ್ ನಲ್ಲಿ ಸುತ್ತಲೂ ಬಾಂಬಿಂಗ್ ಅಗ್ತಿದೆ. ಹೀಗಾಗಿ ತರಲು ಆಗುತ್ತಿಲ್ಲ. ಇವತ್ತು ಯುದ್ದ ವಿರಾಮ ಆಗಿದೆ. ಆದಷ್ಟು ಬೇಗ ಪಾರ್ಥೀವ ಶರೀರವನ್ನ ತರೋ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಯುದ್ಧ ನಿಲ್ಲಲಿ ಎಂದು ವಿನಂತಿ. ಕೆಲವರು ನಡೆದುಕೊಂಡು ಬಂದಿದ್ದಾರೆ. ಕೆಲವರು ಬಂಕರ್ ಗಳಲ್ಲಿದ್ದಾರೆ. ನಮ್ಮ ಜಿಲ್ಲೆಯಿಂದ ಹತ್ತು ಜನರು ಹೋಗಿದ್ದರು ಎಂದು ವಿವರಿಸಿದರು.

    ಐವರು ಬಂದಿದ್ದಾರೆ, ಉಳಿದ ಐವರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಇಪ್ಪತ್ತೈದು ಲಕ್ಷ ರುಪಾಯಿ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಹಿರಿಯ ಮಗನಿಗೆ ಸೂಕ್ತ ಉದ್ಯೋಗದ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ವ್ಯವಸ್ಥೆ ಪರಿಶೀಲನೆ ಬಗ್ಗೆ ಕೇಂದ್ರ ಮಟ್ಟದಲ್ಲೂ ದೊಡ್ಡ ಚರ್ಚೆ ಆಗಿದೆ. ಸೆಲೆಕ್ಷನ್ ಪ್ರಕ್ರಿಯೆ, ಸೀಟು ಹಂಚಿಕೆ ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪಾರ್ಥೀವ ಶರೀರ ಹಾಗೂ ಅಲ್ಲಿ ಸಿಲುಕಿಕೊಂಡಿರೋರನ್ನು ಕರೆತರುವುದು ನಮ್ಮ ಮುಂದಿರುವ ಎರಡು ದೊಡ್ಡ ಕೆಲಸಗಳು ಎಂದು ಹೇಳಿದರು.

    ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

  • ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ ರಾಜ್ಯ ಬಜೆಟ್: ಕೆ.ಗೋಪಾಲಯ್ಯ

    ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ ರಾಜ್ಯ ಬಜೆಟ್: ಕೆ.ಗೋಪಾಲಯ್ಯ

    ಮಂಡ್ಯ: ನಾಡಿನ ರೈತರು ಮತ್ತು ಮಹಿಳೆಯರ ಪರವಾಗಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಅವರು ಹೆಚ್ಚಿನ ಒತ್ತು ನೀಡಿ ಬಜೆಟ್ ಮಂಡಿಸಿದ್ದಾರೆ ಎಂದು ಅಬಕಾರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

    ಜಿಲ್ಲೆಯ ಕೃಷ್ಣರಾಜಪೇಟೆಯ ಇಂಜಿನಿಯರಿಂಗ್ ಕಾಲೇಜಿನ ಆವರಣದಿಂದ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರವನ್ನು ಗೋಪಾಲಯ್ಯ ಅವರು ಉದ್ಘಾಟಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾಡನಾಡಿದ ಅವರು, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಡಾ.ಕೆ.ಸಿ.ನಾರಾಯಣಗೌಡರು ಮತ್ತು ನಾನು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಇದೇ ತಿಂಗಳ 19 ರಂದು ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಡಾ.ಕೆ.ನಾರಾಯಣಗೌಡರು ಮಂಡ್ಯದ ಮಣ್ಣಿನ ಮಗ. ಜಿಲ್ಲೆಯ ಎಲ್ಲ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದೇವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುವುದು ಎಂದಿದ್ದಾರೆ.

    ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವತಿ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ದಿವ್ಯಪ್ರಭು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

  • ಉಪ್ಪು ಹುಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ಬಜೆಟ್: ಕುಮಾರಸ್ವಾಮಿ

    ಉಪ್ಪು ಹುಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ಬಜೆಟ್: ಕುಮಾರಸ್ವಾಮಿ

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದು ಉಪ್ಪು ಉಳಿ ಖಾರ ಇಲ್ಲದ, ಯಾರದ್ದೋ ಒತ್ತಡದಿಂದ ಓದಿದ ನೀರಸ ಬಜೆಟ್ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

    ಬಜೆಟ್ ಬಗ್ಗೆ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇವಲ ಅಂಕಿ ಅಂಶಗಳನ್ನು ಅಲಂಕರಿಸಿ ಮಂಡಿಸಿದ ಬಜೆಟ್ ಇದಾಗಿದೆಯಷ್ಟೇ. ಇದು ಕೇವಲ ಅಲಂಕಾರಿಕ ಮುಂಗಡ ಪತ್ರ ಎಂದು ಅಭಿಪ್ರಾಯಪಟ್ಟರು. ಮುಖ್ಯಮಂತ್ರಿಗಳು ಅನುಭವಿಗಳು. ಐದು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದರು. ಎರಡೂವರೆ ವರ್ಷ ಗೃಹ ಸಚಿವರಾಗಿದ್ದರು. ಆದರೂ ಅವರು ಸ್ವತಂತ್ರವಾಗಿ ಮುಂಗಡ ಪತ್ರ ಮಂಡಿಸಿರುವ ಬಗ್ಗೆ ನನಗೆ ಸಂಶಯವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಯಾರದ್ದೋ ಒತ್ತಡಕ್ಕೆ ಸಿಲುಕಿ ಮಂಡಿಸಿದಂತಿದೆ. ತಮ್ಮ ಚೊಚ್ಚಲ ಮುಂಗಡ ಪತ್ರವನ್ನೇ ಎರಡು ಗಂಟೆಗಳ ಕಾಲ ಶ್ರಮಪಟ್ಟು ಓದಿದ್ದರಾ ಅನ್ನುವುದು ನನ್ನ ಅಭಿಪ್ರಾಯ. ಅವರಿಗೆ ವಿಶ್ವಾಸದ ಕೊರತೆ ಇದ್ದಂತೆ ಇತ್ತು ಎಂದು ನನಗೆ ಅನಿಸಿತು. ಕೋವಿಡ್ ನಂತರ ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಅಸಂಖ್ಯಾತ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸದಾಗಿ ಉದ್ಯೋಗಾವಕಾಶ ಆಗುತ್ತಿಲ್ಲ. ಯುವಜನರು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ. ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕೊರೊನಾದಿಂದ ಆಗಿದ್ದ ಅನಾಹುತವನ್ನು ಸುಧಾರಿಸುವ ಬಗ್ಗೆ ಬಜೆಟ್‍ನಲ್ಲಿ ಮಾತೇ ಇಲ್ಲ. ಸಂಕಷ್ಟ ಕಾಲದಲ್ಲೂ ಆದಾಯ ನಿರೀಕ್ಷೆ ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಟೀಕಿಸಿದರು.

    ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಬಜೆಟ್ ನಲ್ಲಿ ಪರಿಹಾರ ಇರುತ್ತದೆ ಎನ್ನುವುದು ನನ್ನ ಮತ್ತು ಜನರ ನಿರೀಕ್ಷೆ ಆಗಿತ್ತು. ಆದರೂ ಉದ್ಯೋಗ ಮತ್ತು ಜೀವನೋಪಾಯದ ಬಗ್ಗೆ ಏನನ್ನೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕೃಷಿ, ನೀರಾವರಿ ಸೇರಿ ಐದು ವಲಯಗಳು ಎಂದು ಹೊಸ ಪ್ರಯೋಗ ಮಾಡಲು ಹೋಗಿದ್ದೇವೆ ಎಂದು ಪ್ರದರ್ಶನ ಮಾಡಿದ್ದಾರೆ. ಎಲ್ಲ ವಲಯಗಳನ್ನೂ ಮಿಕ್ಸ್ ಮಾಡಿ ಗ್ರೈಂಡರ್ ನಲ್ಲಿ ಹಾಕಿ ರುಬ್ಬಿದ ಹಾಗೆ ಮಾಡಿದ್ದಾರೆ. ಯಾರಿಗೂ ಏನೂ ಕಾಣಬಾರದು ಎನ್ನುವ ಹಾಗೆ ಮಾಡಿದ್ದಾರೆ ಎಂದು ಮುಂಗಡ ಪತ್ರವನ್ನು ವಿಶ್ಲೇಷಣೆ ಮಾಡಿದರು.

    ಮೀಸಲು ಅರಣ್ಯ ಪ್ರದೇಶ ಜಾರಕು ಬಂಡೆ ಅರಣ್ಯದಲ್ಲಿ ಪಾರ್ಕ್ ಮಾಡುವ ಬಗ್ಗೆ ಹೇಳುವುದಾದರೆ, ಈಗಾಗಲೇ ನಗರದಲ್ಲಿ ಅನೇಕ ಉದ್ಯಾನವನಗಳು ಇವೆ. ಅನೇಕ ಪಾರ್ಕ್‍ಗಳಲ್ಲಿ ಈಗಾಗಲೇ ಜನರು ವಾಯುವಿಹಾರ ಮಾಡುತ್ತಿದ್ದಾರೆ. ಲಾಲ್ ಬಾಗ್ ನಂಥಹ ಬೊಟಾನಿಕಲ್ ಗಾರ್ಡನ್ ನಗರದಲ್ಲಿದೆ. ದೇಶದ 12 ಬೊಟಾನಿಕಲ್ ಗಾರ್ಡೆನ್ ಗಳಲ್ಲಿ ಅದೂ ಒಂದು. ಅಲ್ಲಿ ಸಂಶೋಧನೆಯನ್ನು ಕೂಡ ನಡೆಸಬಹುದು. ದೇಶ-ವಿದೇಶಗಳ ಸಾವಿರಾರು ತಳಿಯ ಸಸ್ಯಗಳಿವೆ. ಆದರೆ ಮೀಸಲು ಅರಣ್ಯದ 350 ಎಕರೆಯಲ್ಲಿ ಉದ್ಯಾನವನ ಮಾಡುವ ಅಗತ್ಯವೇನು? ಇದು ಅತ್ಯಂತ ಬಾಲಿಷ ಪ್ರಸ್ತಾವನೆ ಎಂದು ತರಾಟೆಗೆ ತೆಗೆದುಕೊಂಡರು.

    ಕಳೆದ ಕಲಾಪದಲ್ಲಿ ನಡೆದ ರಾಜ್ಯಪಾಲರ ಭಾಷಣವೇ ಕಳಪೆ. ಬಜೆಟ್ ಕೂಡ ಹಾಗೆಯೇ ಇದೆ. ಇನ್ನು ಮೇಕೆದಾಟು ಯೋಜನೆಗೆ 1000 ಕೋಟಿ ಘೋಷಣೆ ಮಾಡಿದ್ದಾರೆ. ನಿನ್ನೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ ಅವರು ಈ ಯೋಜನೆಗೆ 5000 ಕೋಟಿ ನೀಡಬೇಕು ಎಂದು ಹೇಳಿದ್ದರು. ಬಹುಶಃ ಅವರಿಗೆ ಗೌರವ ಕೊಡೋದಿಕ್ಕೆ 1000 ಕೋಟಿ ಇಟ್ಟಿದ್ದಾರೇನೋ ಎಂದು ಲೇವಡಿ ಮಾಡಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ 23,000 ಕೋಟಿ ರೂ. ಬೇಕು. ಆದರೆ ಇವರು ಕೊಟ್ಟಿರುವುದು ಕೇವಲ 3000 ಕೋಟಿ ರೂ. ಮಾತ್ರ. ಹತ್ತು ವರ್ಷವಾದರೂ ಒಂದು ಹನಿ ನೀರನ್ನೂ ಕೊಡದ ಎತ್ತಿನಹೊಳೆಗೆ ಮತ್ತೆ 3000 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಅದಕ್ಕೆ ನಾನು ಹೇಳಿದ್ದು, ಇದು ಅಂಕಿ ಅಂಶಗಳ ಅಲಂಕಾರಿಕ ಬಜೆಟ್ ಎಂದು ತಿಳಿಸಿದರು.

  • ಕಾಮನ್ ಮ್ಯಾನ್ ಸಿಎಂ ರಿಂದ ಕಾಮನ್ ಮ್ಯಾನ್ ಬಜೆಟ್ – ಜನಸಾಮಾನ್ಯರ ಬದುಕು ಸುಗಮಗೊಳಿಸುವ ಬಜೆಟ್: ಸುಧಾಕರ್

    ಕಾಮನ್ ಮ್ಯಾನ್ ಸಿಎಂ ರಿಂದ ಕಾಮನ್ ಮ್ಯಾನ್ ಬಜೆಟ್ – ಜನಸಾಮಾನ್ಯರ ಬದುಕು ಸುಗಮಗೊಳಿಸುವ ಬಜೆಟ್: ಸುಧಾಕರ್

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿದ 2022-2023ರ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ. ಬಜೆಟ್ ಕೇವಲ ಘೋಷಣೆಯಾಗದೆ ಜನಸಾಮಾನ್ಯರ ಬಜೆಟ್ ಆಗಿದೆ. ತಮ್ಮ ಚೊಚ್ಚಲ ಬಜೆಟ್ ಮಂಡನೆಯಲ್ಲಿ ಸಿಎಂ ರಿಂದ ಕಾಮನ್ ಮ್ಯಾನ್ ಬಜೆಟ್ ಸಿಕ್ಕಿದೆ, ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಬೆಂಗಳೂರಿನಲ್ಲಿ ಬಜೆಟ್ ಕುರಿತು ಮಾತನಾಡಿದ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ನವ ಭಾರತಕ್ಕಾಗಿ ನವ ಕರ್ನಾಟಕ ಎನ್ನುವ ಕಲ್ಪನೆಯೊಂದಿಗೆ ಈ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸಮಾಜದ ಎಲ್ಲ ವರ್ಗಗಳನ್ನು, ಎಲ್ಲ ಕ್ಷೇತ್ರಗಳನ್ನು, ರಾಜ್ಯದ ಎಲ್ಲ ಪ್ರಾದೇಶಿಕ ಭಾಗಗಳ ಜನರ ಆಶೋತ್ತರಗಳನ್ನು ಮುಟ್ಟುವಂತಹ ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಬಜೆಟ್ ಇದಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಮೂಲಕ ಸೌಕರ್ಯಗಳಿಗೆ ಒತ್ತುಕೊಟ್ಟು ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್‍ಗೆ ರಾಜಮೌಳಿ ಮೆಚ್ಚುಗೆ

    2,53,165 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು, ಸರ್ವಸ್ಪರ್ಶಿ ಬಜೆಟ್ ಇದಾಗಿದೆ. ರಾಜ್ಯದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣವೊಂದೇ ದಾರಿ ಅನ್ನುವುದನ್ನ ಬಜೆಟ್ ಹೇಳಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಬಜೆಟ್‍ನಲ್ಲಿ ಬರಪೂರ ಅನುದಾನ ಸಿಕ್ಕಿದೆ. ಮೇಕೆದಾಟು ಯೋಜನೆಗೆ 1000 ಸಾವಿರ ಕೋಟಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ಹಾಗೂ ಎತ್ತಿನ ಹೊಳೆ ಯೋಜನೆಗೆ 3,000 ಕೋಟಿ ನೀಡುವ ಮೂಲಕ ನೀರಾವರಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

    ಎತ್ತಿನ ಹೊಳೆ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಜನರ ನೀರಿನ ಬವಣೆ ತೀರಿಸಲು ಸರ್ಕಾರ ಯೋಜನೆ ರೂಪಿಸಿ ಅನುದಾನ ನೀಡಿದೆ ಎಂದರು.

    ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ ‘ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮ. ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ’ ಪಾಲುದಾರಿಕೆಯೊಂದಿಗೆ ಅಭಿವೃದ್ಧಿ, ನವಭಾರತಕ್ಕಾಗಿ ನವ ಕರ್ನಾಟಕ ಹೊಸ ಚಿಂತನೆ ಹಾಗೂ ಹೊಸ ಚೈತನ್ಯದ ಜೊತೆ ಹೊಸ ಮುನ್ನೋಟಕ್ಕೆ ಬಜೆಟ್ ನಾಂದಿ ಹಾಡಿದೆ ಎಂದು ಹೇಳಿದರು.

    ರಸ್ತೆಗಳ ಅಭಿವೃದ್ಧಿ, ಹಲವು ಆರೋಗ್ಯ ಯೋಜನೆಗಳು, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ, ಆಶಾ ಕಾರ್ಯಕರ್ತೆರ ಗೌರವ ಧನ ಹೆಚ್ಚಳ ಮಾಡಿ ಆರೋಗ್ಯ ಕರ್ನಾಟಕದ ಕಡೆಯೂ ಗಮನ ಕೊಡಲಾಗಿದೆ. ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮೂಲಕ ಉತ್ತರ ಕರ್ನಾಟಕ ಭಾಗದ ಹೃದ್ರೋಗ ಸಂಬಂಧ ಕಾಯಿಲೆಗಳಿಗೆ ಅಲ್ಲೇ ಚಿಕಿತ್ಸೆ ಸಿಗುವಂತೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.

    ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವೂ ಸ್ಥಾಪನೆಯಾಗಲಿದೆ. ರಾಜ್ಯದಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆ ಮಾಡಿ, ಸಾಂಕ್ರಾಮಿಕವಲ್ಲದ ರೋಗಗಳಿಗೆ ನಮ್ಮ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಕೊಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಪಡಿಸಿರುವ ದಿವ್ಯ, ಭವ್ಯ ಕಾಶಿಗೆ ಭೇಟಿ ನೀಡಿ, ವಿಶ್ವನಾಥನ ಕೃಪೆಗೆ ಪಾತ್ರವಾಗಬೇಕು ಎನ್ನುವವರಿಗೂ ಬಜೆಟ್ ಮೂಲಕ ನೆರವು ಸಿಕ್ಕಿದೆ. ಕಾಶಿ ಯಾತ್ರೆ ಮಾಡುವ 30 ಸಾವಿರ ಯಾತ್ರಾರ್ಥಿಗಳಿಗೆ 5 ಸಾವಿರ ರೂಪಾಯಿಗಳ ಸಹಾಯಧನ ಸಿಗಲಿದೆ. ಪರ್ವತಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಮತ್ತು ದತ್ತಪೀಠದಲ್ಲಿ ರೋಪ್ ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಾಗಿಡುವುದು. ನಂದಿ ಬೆಟ್ಟದಲ್ಲಿ 93 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣದಂತಹ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

    ರೈತರಿಗೂ ಬಜೆಟ್‍ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ರೈತಶಕ್ತಿ ಯೋಜನೆ ಮೂಲಕ ಯಂತ್ರೋಪಕರಣಗಳ ಖರೀದಿಗೆ ಉತ್ತೇಜನ ನೀಡಲಾಗುತ್ತದೆ. ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನಿರ್ವಹಣೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆಯಂತಹ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ ಹಾಗೂ ಶಿಕ್ಷಣಕ್ಕೂ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದರು. ಇದನ್ನೂ ಓದಿ: ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ – ರೈತರಿಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ದುರ್ಬಲ ವರ್ಗಗಳ ಸಬಲೀಕರಣಕ್ಕೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ.ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸ್ವತಂತ್ರ ಬದುಕಿನ ಕನಸು ಕಟ್ಟಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ಗಳ ಮೂಲಕ ಕಲಿಕೆ ಪ್ರೋತ್ಸಾಹ ನೀಡಲು ಕೂಡ ಬಜೆಟ್ ನಲ್ಲಿ ಯೋಜನೆ ಹಾಗೂ ಅನುದಾನ ನೀಡಲಾಗಿದೆ ಎಂದು ಹೇಳಿದರು.

    ಚುನಾವಣೆ ಹತ್ತಿರದಲ್ಲೇ ಇದ್ದರೂ ಇದು ಒಲೈಕೆ ಬಜೆಟ್ ಆಗಿಲ್ಲ. ಅಷ್ಟೇ ಅಲ್ಲದೆ ಯಾವುದೋ ಒಂದು ವರ್ಗಕ್ಕೆ ಅನುಕೂಲ ಮಾಡಿಕೊಡುವ ಬಜೆಟ್ ಕೂಡ ಅಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ, ಸರ್ತೋಮುಖ ವಿಕಾಸದ ಕನಸು ಹೊತ್ತ ಬಜೆಟ್ ಇದು ಎಂದು ವಿವರಿಸಿದರು.

  • ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – ಗಿರೀಶ್ ಕಾಸರವಳ್ಳಿ ಕುರಿತ ಪುಸ್ತಕ ಬಿಡುಗಡೆ

    ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – ಗಿರೀಶ್ ಕಾಸರವಳ್ಳಿ ಕುರಿತ ಪುಸ್ತಕ ಬಿಡುಗಡೆ

    ಬೆಂಗಳೂರು: ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೊದಲನೇ ದಿನ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದರು. ಇಂದು ಚಲನಚಿತ್ರೋತ್ಸವದ ಅಂಗವಾಗಿ ಹೆಸರಾಂತ ಸಾಹಿತಿ ಗಿರೀಶ್ ಕಾಸರವಳ್ಳಿ ಕುರಿತು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

    NFAI (National Film Archives of India) ವತಿಯಿಂದ ಗಿರೀಶ್ ಕಾಸರವಳ್ಳಿಯ ಕುರಿತಾಗಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನೀಲ್ ಪುರಾಣಿಕ್, ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವು ಗಣ್ಯರು ಪುಸ್ತಕವನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    11th edition of Bengaluru International Film Festival (BIFFes) from February 7 to 14

    ಸುನೀಲ್ ಪುರಾಣಿಕ್ ಅವರು ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಈ ಬಾರಿಯ ಚಿತ್ರೋತ್ಸವನ್ನು ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಪರಿಚಯಿಸಿದ್ದಾರೆ. ಇದು ಭಾರತದಾದ್ಯಂತ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ವಿನೂತನ ಮಾದರಿ. ಈ ರೀತಿಯ ಮಾದರಿ ಎಲ್ಲ ವರ್ಗದವರಿಗೂ ಅದರಲ್ಲೂ ಹಿರಿಯ ಪ್ರೇಕ್ಷಕರಿಗೆ ಸಹಾಯಕವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮುಂದುವರೆಸಬೇಕೆಂದು ಶ್ರೀರಾವ್ ಬಯಸಿದ್ದಾರೆ ಎಂದು ತಿಳಿಸಿದರು. ಡಿಜಿಟಲ್ ಪೈರಸಿ ಕಾಟ ಹೆಚ್ಚಾಗಿರುವ ಕಾರಣ ಈ ವರ್ಷದ ಡಿಜಿಟಲ್ ಫ್ಲಾಟ್ ಫಾರಂ ಪೈರಸಿ ವಿರುದ್ಧ ಹೋರಾಡಿ, ಅದಕ್ಕೆ ಭದ್ರತೆ ಒದಗಿಸಲಾಗುತ್ತದೆ ಎಂದು ವಿವರಿಸಿದರು.

    ತುಳು ಸಿನಿಮಾ 50 ವರ್ಷಗಳನ್ನು ಪೂರೈಸಿ, ಇಂದಿಗೆ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ವೇಳೆ ತುಳು ಚಲನಚಿತ್ರರಂಗದ ಬಗ್ಗೆ ಚರ್ಚಾಗೋಷ್ಠಿ ಸಂವಾದ ಏರ್ಪಡಿಸಲಾಗಿತ್ತು. ಈ ಗೋಷ್ಠಿಯಲ್ಲಿ ತುಳು ಚಿತ್ರರಂಗದ ಖ್ಯಾತನಾಮರಾದ ರಿಚರ್ಡ್ ಕ್ಯಾಸಲಿನೋ, ವಿಜಯ್ ಕುಮಾರ್ ಕೊಡಿಯಾಲಾ ಬೈಲು, ತಮ್ಮ ಲಕ್ಷ್ಮಣ್, ನಟ ಶಿವಧ್ವಜ್ ಭಾಗವಹಿಸಿದ್ದರು.

    ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ನರಹರಿ ರಾವ್, ಈ ಉತ್ಸವವನ್ನು ಯಶಸ್ವಿಗೊಳಿಸಲು ಕೋರ್ ಟೀಮ್ ಎದುರಿಸಬೇಕಾದ ಅನೇಕ ಅಡೆತಡೆಗಳನ್ನು ಬೆಳಕಿಗೆ ತಂದರು. ಇಷ್ಟು ಕಡಿಮೆ ಅವಧಿಯಲ್ಲಿ ಚಿತ್ರೋತ್ಸವು ಸಾಕಾರಗೊಂಡಿರುವುದು ಒಂದು ಪವಾಡದ ಸಾಧನೆ ಎಂದು ಬಣ್ಣಿಸಿದರು.

    ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ದಿ.ಪುಟ್ಟಣ್ಣ ಕಣಗಾಲ್ ಅವರ ಶಿಥಿಲಾವಸ್ಥೆಯಲ್ಲಿರುವ ಮನೆಯನ್ನು ಸ್ಮಾರಕವಾಗಿ ನಿರ್ಮಿಸುವ ಬಗೆಗೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಆವರಣದಲ್ಲಿ ಸುಸಜ್ಜಿತ ಪ್ರದರ್ಶನ ಮಂದಿರ ನಿರ್ಮಿಸುವ ಕುರಿತಾಗಿ ಮನವಿಯನ್ನು ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಾರಂಭದಲ್ಲಿಯೇ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅವಶ್ಯಕತೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಕ್ಕೆ ಸಂತೋಷವಾಗಿ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಇಂದು ಚಾಲನೆ