ಬೆಂಗಳೂರು: ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿರುವ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿರುವ ಹಿನ್ನೆಲೆ ರಾಯಚೂರಿನಲ್ಲಿ ಇಂದು ಬಂದ್‍ಗೆ ಕರೆ ಕೊಡಲಾಗಿದೆ. ಈ ಕುರಿತು ಮಾತನಾಡಿದ ಸಿಎಂ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಸಂಪೂರ್ಣ ವರದಿ ತರಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡ್ತೇವೆ ಎಂದು ಘೋಷಿಸಿದರು. ಇದನ್ನೂ ಓದಿ: ಕಲುಷಿತ ನೀರಿಗೆ ಮೂರನೇ ಬಲಿ – ರಾಯಚೂರು ಬಂದ್‌ಗೆ ಕರೆ
ರಾಯಚೂರಿನಲ್ಲಿ ಕಲುಷಿತ ನೀರಿನ ಹಿನ್ನೆಲೆ ಡಿಸಿಗೆ ರಾಯಚೂರಿನ ಎಲ್ಲ ವಾರ್ಡ್‍ಗಳ ನೀರು ಪರಿಶೀಲಿಸಲು ಸೂಚಿಸಿದ್ದೇನೆ. ಡಿವೈಎಸ್‍ಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದೇನೆ. ಅಧಿಕಾರಿಗಳ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಮೃತರಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಲಾಗುವುದು. ಸಿಎಂ ರಿಲೀಫ್ ಫಂಡ್ ನಿಂದ ಪರಿಹಾರ ನೀಡಲಾಗುತ್ತೆ ಎಂದರು.
ಎರಡನೇ ಅಲೆಯ ಕೋವಿಡ್ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಎರಡನೇ ಅಲೆಯಲ್ಲಿ ಕೋವಿಡ್‍ನಿಂದ ಮೃತರಾದವರ ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. ವಿಶೇಷ ಪ್ರಕರಣಗಳಲ್ಲಿ ಕೆಲವರಿಗೆ ಪರಿಹಾರ ಬಿಟ್ಟು ಹೋಗಿದ್ರೆ ಅದನ್ನು ಕೊಡಲು ಕ್ರಮ ತಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಎನ್‍ಟಿಆರ್ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ ರಮೇಶ್ ಕುಮಾರ್
ಬೆಂಗಳೂರು: ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಪಠ್ಯಪುಸ್ತಕ ಪುಸ್ತಕ ಪರಿಶೀಲನಾ ಸಮಿತಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಠ್ಯ ಸಂಘರ್ಷಕ್ಕಿಂತ ಇದು ಜಾತಿ ಸಂಘರ್ಷವಾಗಿ ಮಾರ್ಪಡುತ್ತಿತ್ತು. ಈ ಹಿನ್ನೆಲೆ ಎಚ್ಚೆತ್ತ ಸಿಎಂ ಬೊಮ್ಮಾಯಿ ನಿನ್ನೆ ಸಮಿತಿಯನ್ನು ವಿಸರ್ಜಿಸಿದ್ದೇವೆ ಎಂದು ತಿಳಿಸಿದ್ದರು.
ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು @BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು, ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು.
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 4, 2022
ಈ ಹಿನ್ನೆಲೆ ಟ್ವೀಟ್ ಮಾಡಿದ ನಾರಾಯಣಗೌಡ ಅವರು, ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು@BSBommai ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು. ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಉಡುಪಿ: ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಸರ್ಕಾರದ 8 ವರ್ಷದ ಸಾಧನೆಗಳ ಬಗ್ಗೆ ಹೇಳಿದರು. ಈ ವೇಳೆ ಅವರು, ಲವ್ ಜಿಹಾದ್ ಪ್ರಕರಣಗಳು ಈಗ ಶುರುವಾದದ್ದು ಅಲ್ಲ. ಇದು ಹಿಂದಿನಿಂದಲೂ ಇತ್ತು. ಸರ್ಕಾರ ಈಗಾಗಲೇ ಇವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ತಪ್ಪಿತಸ್ಥರನ್ನು ಹಾಗೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರು ಅಂತಹವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪ್ರೇಮ ನಿವೇದನೆಯನ್ನ ಒಪ್ಪದ್ದಕ್ಕೆ 14 ಬಾರಿ ಇರಿದು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ
ಬಿ.ಆರ್.ಶೆಟ್ಟಿ ಆಸ್ಪತ್ರೆ ಉದ್ಯೋಗಿಗಳ ಸಂಬಳ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿದೆ. ಉದ್ಯೋಗಿಗಳ ಸಂಬಳವನ್ನು ಶೀಘ್ರ ಬಿಡುಗಡೆ ಮಾಡಿ ಅವರಿಗೆ ಪಾವತಿ ಮಾಡಲಾಗುವುದು ಎಂದು ಭರವಸೆ ಕೊಟ್ಟರು.
ಬಿಜೆಪಿ ಸರ್ಕಾರ ಬಂದರೆ ಲೋಕಾಯುಕ್ತವನ್ನು ಬಲಪಡಿಸುತ್ತವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಆ ಕಾರ್ಯ ಇನ್ನೂ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಾತ್ಮಕವಾಗಿ ಎಸಿಬಿಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಿದ್ದೇವೆ. ಲೋಕಾಯುಕ್ತ ಕೂಡ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಆನೇಕಲ್: ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬ ಮಕ್ಕಳಲ್ಲೂ ಯೋಗದ ಅರಿವು ಮೂಡಿಸುವ ಕೆಲಸ ಮಾಡಬೇಕು. ಭಾರತವನ್ನು ಭವ್ಯ ಭಾರತವನ್ನಾಗಿ ಮಾಡುವ ಕನಸು ನನಸಾಗಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೊಮ್ಮಾಯಿ ಅವರು ಇಂದು ಬೆಂಗಳೂರು ಹೊರವಲಯದ ಜಿಗಿಣಿ ಸಮೀಪದ ಪ್ರಶಾಂತಿ ಕುಟೀರ ಎಸ್.ವ್ಯಾಸ ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿರುವ 24th International Conference of Frontiers and Yoga Research and Its Application(INCOFYRA) ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜಗ್ಗೇಶ್, ನಿರ್ಮಲಾ ಸೀತರಾಮನ್‍ಗೆ ಸಿಕ್ತು ಬಿಜೆಪಿ ಟಿಕೆಟ್
ಮನಸ್ಸಿನ ಏಕಾಗ್ರತೆಗೆ ಯೋಗ ಮತ್ತು ಧ್ಯಾನ ಪೂರಕವಾಗಿವೆ. ಯೋಗದಿಂದ ಮನಸ್ಸಿನ ಸಮಚಿತ್ತತೆಯನ್ನು ಪಡೆಯುವವರು ಸೃಷ್ಟಿಯ ಭಾಗವಾಗಿ ಮೋಕ್ಷವನ್ನು ಪಡೆಯುತ್ತಾರೆ. ಈಗ ಮನುಷ್ಯ ಸಂಪತ್ತು ಹಾಗೂ ಹಣ ಗಳಿಕೆಯನ್ನು ಗುರಿಯಾಗಿಸಿಕೊಂಡಿದ್ದಾನೆ. ಈ ರೀತಿಯ ಚಿಂತನೆ ಬದಲಾಗಿ ಮಾನವನ ಒಳಿತನ್ನು ಗುರಿಯಾಗಿಸಿಕೊಂಡರೆ, ವಿಶ್ವವೇ ಒಂದು ಸುಂದರ ತಾಣವಾಗುತ್ತದೆ ಎಂದರು.
ಮನುಷ್ಯನಿಗೆ ಯೋಚನಾಶಕ್ತಿ ಅಭೂತಪೂರ್ವವಾಗಿದೆ. ಮನುಕುಲಕ್ಕೆ ಒಗ್ಗಿಕೊಳ್ಳುವಿಕೆಯ ಗುಣವಿದೆ. ಮನುಷ್ಯನೊಳಗೆ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆ. ನಮ್ಮ ದೇಹದೊಳಗಿನ ಎಲ್ಲ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಮನಸ್ಸು ಹಾಗೂ ದೇಹವನ್ನು ಸದೃಢಗೊಳಿಸಲು ಯೋಗ ಸಹಕರಿಸುತ್ತದೆ. ತನ್ನ ಮೇಲೆ ನಿಯಂತ್ರಣಹೊಂದಿರುವವನೇ ನಿಜವಾದ ಯೋಗಿ. ಯೋಗಿಯಾದವರು ಮಾತ್ರ ಯುಗಪುರುಷರಾಗಲು ಸಾಧ್ಯ ಎಂದು ತಿಳಿಸಿದರು.
ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಆತ್ಮ ಶಾಶ್ವತವಾಗಿರುವಂಥದ್ದು, ತೃಪ್ತಿಕರವಾದ ಜೀವನವನ್ನು ನಡೆಸಲು ಆರೋಗ್ಯಕರ ದೇಹ ಮತ್ತು ಮನಸ್ಸು ಅಗತ್ಯ. ಮನುಷ್ಯ ತನ್ನ ಬಾಲ್ಯದಲ್ಲಿರುವ ಮುಗ್ಧತೆಯನ್ನು ಕೊನೆಯವರೆಗೆ ಇರಿಸಿಕೊಳ್ಳಬೇಕು. ಯೋಗಗುರುಗಳ ಕಣ್ಣುಗಳಲ್ಲಿ ಕಾಂತಿಯಿರುತ್ತದೆ. ಯೋಗದಿಂದ ಜೀವನದಲ್ಲಿ ಪರಿಪೂರ್ಣತೆ ಸಾಧಿಸುವ ಮುಗ್ಧತೆಯನ್ನು ಕಾಯ್ದುಕೊಳ್ಳಬಹುದು. ದೇವರು ನೀಡಿದ್ದನ್ನು ಯೋಗದಿಂದ ನಿರಂತರವಾಗಿ ಕಾಪಾಡಿಕೊಳ್ಳಬಹುದು ಎಂದು ವಿವರಿಸಿದರು.
ದೇಹದ ಮೆಟಬಾಲಿಸಂಗಾಗಿ ಯೋಗ ಅವಶ್ಯಕ. ಯಾರ ಬದುಕಿನಲ್ಲಿ ನಗುವಿರುತ್ತದೋ, ಅಂತಹವರು ಆನಂದದಿಂದ ಅರ್ಥಪೂರ್ಣವಾಗಿ ಬದುಕುತ್ತಾರೆ. ಜೀವನದ ಸಣ್ಣ-ಸಣ್ಣ ಖುಷಿಗಳ ಆನಂದವನ್ನು ಪಡೆಯಬೇಕು. ಮನಸ್ಸನ್ನು ನಿಗ್ರಹಿಸಿ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಳ್ಳಬೇಕು. ಎಸ್.ವ್ಯಾಸ ವಿಶ್ವವಿದ್ಯಾಲಯ ಭವಿಷ್ಯದ ನಾಸವನ್ನು ನಿರ್ಮಿಸುತ್ತಿದೆ. ಆರೋಗ್ಯಕರ ಮನಸ್ಸು ಮತ್ತು ದೇಹ ಮಾತ್ರ ವೈಜ್ಞಾನಿಕ ಚಿಂತನೆ ಮಾಡಲು ಸಾಧ್ಯ. ಆಧ್ಯಾತ್ಮ, ವೈಜ್ಞಾನಿಕ ಚಿಂತನೆಗೆ ದಾರಿಮಾಡಿಕೊಡುತ್ತದೆ. ಯೋಗ ಒಂದು ವಿಜ್ಞಾನ. ಈ ವಿಜ್ಞಾನವನ್ನು ಅಧ್ಯಯನ ಮಾಡಿ, ಅರ್ಥೈಸಿಕೊಂಡು, ದಾಖಲಿಸಿ, ಬೋಧಿಸುವ ಕೆಲಸವನ್ನು ವಿಶ್ವವಿದ್ಯಾಲಯದ ಮುಖ್ಯಸ್ಥರು ಮಾಡುತ್ತಿರುವುದು ಶ್ಲಾಘನೀಯ. ಯೋಗದ ಮೂಲಕ ನಮ್ಮನ್ನು ನಾವೇ ಮರೆತು ಸಾತ್ವಿಕತೆ ಅರಿವು ಮೂಡಿಸುವ ಕೇಂದ್ರವಾಗಿದೆ. ಈ ಕೇಂದ್ರದ ಎಲ್ಲ ಯೋಜನೆಗಳಿಗೆ ಸರ್ಕಾರದ ಸಹಕಾರ ಇರಲಿದೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ಅಂಡರ್‌ವೇರ್‌ನಲ್ಲಿ ಬಂದು ಮತ ಚಲಾಯಿಸಿದ್ರೆ, ಒಳ ಉಡುಪು ಫ್ರೀ
ಭಾರತ ದೇಶದ ಮೌಲ್ಯ, ಸಂಸ್ಕೃತಿ, ಪರಂಪರೆಗಳು ಅಮೂಲ್ಯವಾದವು. ಭಾರತದ ಅಂತರ್ಗತ ಶಕ್ತಿಯನ್ನು ಇಡೀ ಜಗತ್ತಿಗೆ ತಿಳಿಹೇಳಲು ಚಿಂತನೆಯಿಂದ ಪ್ರಧಾನಿ ಮೋದಿ ಅವರು ಯೋಗವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ್ದಾರೆ. ಆಯುಷ್ ಇಲಾಖೆ ಸ್ಥಾಪಿಸಿ ಯೋಗದ ಅರಿವು ಮೂಡಿಸುತ್ತಿರುವ ಪ್ರಧಾನಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ನಾಯಕನ ನೇತೃತ್ವದಲ್ಲಿ ಯೋಗವನ್ನು ಮುಂದುವರೆಸೋಣ. ಬರುವ ವರ್ಷದಿಂದ ಶಾಲೆಗಳಲ್ಲಿ ಯೋಗಶಿಕ್ಷಣವನ್ನು ನೀಡಲು ವಿಶೇಷ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿದೆ ಎಂದರು.
ಬೆಂಗಳೂರು: ಕನ್ನಡಿಗರು ಪ್ರಗತಿಪರ ಚಿಂತಕರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶಕ್ಕೆ ಕನ್ನಡಿಗರ ಕೊಡುಗೆ ಬಹಳಷ್ಟಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಬೊಮ್ಮಾಯಿ ಅವರು ಇಂದು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ’ವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಪರಂಪರೆಯ ಮೂಲಕ ಭಾರತ ಪರಂಪರೆಗೆ ನಾಂದಿ ಹಾಡಬೇಕಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣದ ಚಿಂತನೆಯನ್ನು ಸರ್ಕಾರ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯಾದ ಭಾರತದ 5 ಟ್ರಿಲಿಯನ್ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ದೂರದೃಷ್ಟಿಯ ಚಿಂತನೆಯಿಂದ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಜನರಿಗೆ ಸಿದ್ದರಾಮಯ್ಯ ಅವಶ್ಯಕತೆ ಇದೆ, ಅವರೇ ಸಿಎಂ ಆಗಬೇಕು: ಬೈರತಿ ಸುರೇಶ್
ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ನಾಡಿನ ಅಪೂರ್ವ ಕೊಡುಗೆ
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ 75 ವರ್ಷ ಮಹತ್ವದ ಕಾಲಘಟ್ಟ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಮಡಿದವರಿದ್ದಾರೆ. ರಾಜರಿಂದ ಪ್ರಾರಂಭವಾದ ಸ್ವಾತಂತ್ರ್ಯ ಹೋರಾಟ ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯ ರೂಪ ಪಡೆಯಿತು.
ಇಂದು ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ "ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ"ವನ್ನು ಉದ್ಘಾಟಿಸಿ ಮಾತನಾಡಿದೆನು.#ಅಮೃತಭಾರತಿಗೆಕನ್ನಡದಾರತಿpic.twitter.com/bR7RfDz2nk
1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಎದೆಗಾರಿಕೆ ಇದೆಯೆಂಬುದನ್ನು ನಿರೂಪಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ನಾಡು ಅಪೂರ್ವ ಕೊಡುಗೆ ನೀಡಿದೆ. ಮೈಲಾರ ಮಾಹದೇವಪ್ಪ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.
ತ್ಯಾಗಬಲಿದಾನಗಳ ನಂತರ ದೊರೆತ ಸ್ವತಂತ್ರ ದೇಶದ ಏಕತೆ, ಅಖಂಡತೆ ಕಾಯ್ದುಕೊಂಡು ಪ್ರಬಲ ಹಾಗೂ ಸಶಕ್ತ ರಾಷ್ಟ್ರ ನಿರ್ಮಾಣದ ಚಿಂತನೆ ಎಲ್ಲ ಭಾರತೀಯರಲ್ಲಿ ಇರಬೇಕು ಎಂದು ಕರೆ ಕೊಟ್ಟರು.
ಎಲ್ಲರಿಗೂ ಸ್ವಾಭಿಮಾನ, ಸಮಾನತೆಯ ಬದುಕು ನೀಡುವ ಸ್ವತಂತ್ರ ಭಾರತ ವಿಶ್ವಮಾನ್ಯ ರಾಷ್ಟ್ರವಾಗಿದೆ. ಸಾವಿರ ವರ್ಷಗಳಿಂದ ಮೊಘಲರು, ಬ್ರಿಟೀಷರ ಆಕ್ರಮಣದಲ್ಲಿ ಸ್ವಾಭಿಮಾನವನ್ನು ಅದುಮಿಟ್ಟು ಬದುಕುವ ಪರಿಸ್ಥಿತಿಯಿಂದ ಸ್ವಾತಂತ್ರ್ಯ ದೊರಕಿದೆ. ದೇಶದ ಜನರೆಲ್ಲರೂ ಒಗ್ಗಟ್ಟಾಗಬೇಕು. ಮೋದಿ ಅವರು ಬಲಿಷ್ಟ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ ಎಂದರು.
ಜನರ ಏಳಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 25 ವರ್ಷಗಳ ಅಮೃತ ಕಾಲ ಮಾಡಬೇಕೆಂದು ಕರೆ ನೀಡಿದರು. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ನಾವು ಹುಟ್ಟಿದ ಜನ್ಮಭೂಮಿ ಶ್ರೇಷ್ಠ ಭಾರತವಾಗಬೇಕೆಂಬ ಗುರಿಯನ್ನು ಹೊಂದಿರುವ ನಾಯಕ ಮೋದಿ ಅವರು ಎಂದು ಪ್ರಶಂಸಿದರು.
ವೀರ್ ಸಾವರ್ಕರ್ ದಿಟ್ಟ, ಧೀಮಂತ ನಾಯಕ
ಮೊದಲನೇ ಸ್ವಾತಂತ್ರ್ಯ ಹೋರಾಟವನ್ನು ಲೋಕಮಾನ್ಯ ತಿಲಕ, ವೀರಸಾವರ್ಕರ್ ಅವರಿಂದ ಪ್ರಾರಂಭವಾಯಿತು. ವೀರ್ ಸಾವರ್ಕರ್ 1883ರ ಜೂನ್ 28 ರಲ್ಲಿ ಜನಿಸಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಕಾರಾಗೃಹದಲ್ಲಿ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ್ದರು.
ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದ ವೀರ್ ಸಾವರ್ಕರ್ ಅವರು ದಿಟ್ಟ, ಧೀಮಂತ ನಾಯಕರಾಗಿದ್ದರು. ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂದ ಲೋಕಮಾನ್ಯ ತಿಲಕರ ಚಿಂತನೆ, ಯೋಚನಾಶಕ್ತಿ ವಿಶಿಷ್ಟವಾದುದಾಗಿತ್ತು. ಸ್ವಾತಂತ್ರ್ಯ ಹೊರತುಪಡಿಸಿ, ಮಿಕ್ಕೆಲ್ಲವೂ ನಗಣ್ಯ ಎಂದ ಈ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಪ್ರಥಮ ನಮಸ್ಕಾರಗಳು ಎಂದು ನಮಿಸಿದರು. ಇದನ್ನೂ ಓದಿ: ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ? – ಡಿಕೆಶಿಗೆ ಪತ್ರ ಬರೆದ ಸ್ಥಾನ ವಂಚಿತರು
ಮಹನೀಯರ ಚಿಂತನೆ, ತ್ಯಾಗದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ
ಲಾಹೋರ್‌ನಲ್ಲಿ ಲಾಲ್ ಲಜಪತ್ ರಾಯ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ವೇಗ ದೊರಕಿತು. ಇದೇ ಹಾದಿಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್ ನಡೆದರು. ಈ ಹೋರಾಟಕ್ಕೆ ಅಂತರರಾಷ್ಟ್ರೀಯ ಸ್ವರೂಪವನ್ನು ಸುಭಾಷ್ ಚಂದ್ರ ಬೋಸರು ನೀಡಿದರು. ಈ ಎಲ್ಲ ಹೋರಾಟಕ್ಕೆ ಆಧ್ಯಾತ್ಮಿಕ ಶಕ್ತಿಯನ್ನು ಸ್ವಾಮಿ ವಿವೇಕಾನಂದರು ತುಂಬಿದರು ಎಂದು ಸ್ಪೂರ್ತಿ ತುಂಬಿ ಮಾತನಾಡಿದರು.
ಹಲವಾರು ಮಹನೀಯರ ಚಿಂತನೆ, ಹೋರಾಟ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಮಹಾತ್ಮಾ ಗಾಂಧಿ ಅವರಿಂದ ಸ್ಪೂರ್ತಿ ಹೊಂದಿ ಸಹಸ್ರಾರು ದೇಶಭಕ್ತರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಸರ್ವಸ್ವವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಇಂತಹ ಅನೇಕ ಮಹನೀಯರು ದೇಶಕ್ಕಾಗಿ ತ್ಯಾಗ ಮಾಡಿದವರಿಗೆ ನನ್ನ ನಮಸ್ಕಾರಗಳು ಎಂದರು.
ಬ್ರಿಟಿಷರು ವಿರುದ್ಧ ದುಡಿಯುವ ವರ್ಗದ ಹೋರಾಟ
ಮಹಾತ್ಮಾಗಾಂಧಿ ಅವರ ಸ್ವದೇಶಿ ಚಳುವಳಿಯಲ್ಲಿ ಮಹಿಳೆಯರೂ ಪಾಲ್ಗೊಂಡರು. ಕ್ವಿಟ್ ಇಂಡಿಯಾ ಚಳುವಳಿ, ಬಾರ್ಡೋಲಿಯಲ್ಲಿ ರೈತರ ಸತ್ಯಾಗ್ರಹ, ಪಶ್ಚಿಮ ಬಂಗಾಳದಲ್ಲಿ ಇಂಡಿಗೋ ಚಳವಳಿಗಳ ಮೂಲಕ ದುಡಿಯುವ ವರ್ಗ ಬ್ರಿಟಿಷರು ವಿರುದ್ಧ ನಡೆಸಿದ ಹೋರಾಟವನ್ನು ಸಿಎಂ ಸ್ಮರಿಸಿದರು.
ಬರ್ನ್: ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಕರ್ನಾಟಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಥಮ ಬಾರಿಗೆ 2 ಮಹತ್ವದ ಕಂಪನಿಗಳ ಜೊತೆ ಒಟ್ಟು 52 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.
ಇದು ಕರ್ನಾಟಕ ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿ. ಇತ್ತೀಚಿನ ದಿನಗಳ ರಾಜ್ಯಕ್ಕೆ ಹರಿದು ಬರುತ್ತಿರುವ ಬಹುದೊಡ್ಡ ಮೊತ್ತದ ಬಂಡವಾಳ ಇದಾಗಿದೆ. ಹಲವಾರು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಂಪನಿಗಳು ಹೂಡಿಕೆ ಮಾಡಲಿರುವ ಬಂಡವಾಳದಿಂದ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಠಿ ಆಗಲಿವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಆಸಕ್ತಿಯಿಂದ ಸರ್ಕಾರ ಬೃಹತ್ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಪಿಎಸ್‍ಐ ಪರೀಕ್ಷೆ ಅಕ್ರಮ: ಕಿಂಗ್‍ಪಿನ್ ಆರ್.ಡಿ.ಪಾಟೀಲ್ ಮತ್ತೆ ಸಿಐಡಿ ವಶಕ್ಕೆ!
ನವೀಕರಿಸಬಹುದಾದ ಇಂಧನ ವಲಯದಲ್ಲಿ ರೆನ್ಯೂ ಪವರ್ ಕಂಪನಿ 50,000 ಕೋಟಿ ರೂ.ಗಳ ಬಂಡವಾಳ ಹೂಡಲು ಕರ್ನಾಟಕ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕರ್ನಾಟಕದ ಇಂಧನ ಕ್ಷೇತ್ರದಲ್ಲಿ ಈ ಒಪ್ಪಂದ ಪ್ರಮುಖ ಮೈಲಿಗಲ್ಲಾಗಿದೆ. ಮೆ.ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆಯು ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಯಿತು. ಇವೆರಡೂ ಒಪ್ಪಂದಗಳು ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ.
ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಎರಡು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಸಂಶೋಧನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡುವ ಆರ್ ಎಂಡ್ ಡಿ ಪಾಲಿಸಿ, ಹೆಚ್ಚು ಉದ್ಯೋಗವನ್ನು ಒದಗಿಸುವ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹಕ ನೀತಿಗಳನ್ನು ಜಾರಿಗೆ ತರಲಾಗಿದೆ. ಈ ಎರಡೂ ನೀತಿಗಳ ಲಾಭಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದ ನವೆಂಬರ್‍ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಪಾಲ್ಗೊಳ್ಳುವಂತೆ ಹೂಡಿಕೆದಾರರಿಗೆ ಆಹ್ವಾನ ನೀಡಲಾಯಿತು.
I am blessed to be born & educated in Karnataka. Blessed that I represent my state & lead it. We have a rich culture & heritage. God has endowed Karnataka with nature’s bounty. We are blessed with rich bio-diversity, having 10 Agro-climatic zones & 300 days of sunshine. #Davos22pic.twitter.com/ThRp4aOCtq
ಮೆ. ಲುಲು ಗ್ರೂಪ್ ಇಂಟರ್ನ್ಯಾಷನಲ್:
ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ. 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ರೆನ್ಯೂ ಪವರ್ ಪ್ರೈ.ಲಿ:
ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು ರಾಜ್ಯ ಸರ್ಕಾರದೊಂದಿಗೆ 50,000 ಕೋಟಿ ರೂ. ಹೂಡಿಕೆಯ ಒಪ್ಪಂದಕ್ಕೆ ಸಹಿ ಮಾಡಿತು. ಈ ಕಂಪೆನಿಯು ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು 2 ಹಂತಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.
ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ 11,900 ಕೋಟಿ ರೂ.ಗಳ ಬಂಡವಾಳ ಹೂಡಿ, ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಾಗುತ್ತದೆ.
ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು 37,500 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ. ಈ ಎರಡು ಹಂತದ ಯೋಜನೆಗಳಿಂದ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.
ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ ಸಂಸ್ಥೆಗಳು:
ಸೀಮೆನ್ಸ್ ಸಂಸ್ಥೆ:
ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿತು.
ದಸ್ಸಾಲ್ಸ್ ಸಿಸ್ಟಮ್ಸ್:
ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ , ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ ,ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಉತ್ಸುಕತೆ ತೋರಿದರು. ಇದನ್ನೂ ಓದಿ: ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರ ಅರೆಸ್ಟ್
ನೆಸ್ಟ್ಲೆ ಸಂಸ್ಥೆ:
ನಂಜನಗೂಡಿನಲ್ಲಿ ನೆಸ್ಟ್ಲೆ ಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಟ್ಲೆ ಸಂಸ್ಥೆ ಮುಂದಾಗಿದ್ದಾರೆ.
ಮೆಗಾ ಡಾಟಾ ಸೆಂಟರ್:
ಭಾರ್ತಿ ಎಂಟರ್ ಪ್ರೈಸಸ್ ನ ಅಧ್ಯಕ್ಷ ಹಾಗೂ ಸಿಇಓ ಸುನಿಲ್ ಭಾರ್ತಿ ಮಿತ್ತಲ್ ಅವರು ರಾಜ್ಯದಲ್ಲಿ ಇನ್ನೊಂದು ಮೆಗಾ ಡಾಟಾ ಸೆಂಟರ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಎಲ್ಲ ಅಗತ್ಯ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬೆಂಗಳೂರಿನಲ್ಲಿ ಐಕಿಯ ಸ್ಟೋರ್:
ಇಂಗ್ಕಾ ಗ್ರೂಪ್ (ಐಕಿಯ) ಸಿ.ಇ.ಓ. ಜೆಸ್ಪರ್ ಬ್ರಾಡಿನ್ ಅವರು ರಾಜ್ಯದಲ್ಲಿ ಐಕಿಯ ಸ್ಟೋರ್ ತೆರೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಜೂನ್‍ನಲ್ಲಿ ನಾಗಸಂದ್ರದಲ್ಲಿ ಐಕಿಯ ಸ್ಟೋರ್ ತೆರೆಯಲಿದ್ದು, ಜೆಸ್ಪರ್ ಬ್ರಾಡಿನ್ ಅವರು ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಐಕಿಯದ ಭಾರತೀಯ ಕೇಂದ್ರ ಕಚೇರಿಯೂ ಬೆಂಗಳೂರಿನಲ್ಲಿದ್ದು ಪೀಠೋಪಕರಣಗಳ ತಯಾರಿಕೆಯ ಸಂದರ್ಭದಲ್ಲಿ ಬಿದಿರು ಮತ್ತಿತರ ಸ್ಥಳೀಯ ವಸ್ತುಗಳ ವ್ಯಾಪಕ ಬಳಕೆಯ ಕುರಿತೂ ಸಹ ಚರ್ಚಿಸಲಾಯಿತು.
ಆಕ್ಸಿಸ್ ಬ್ಯಾಂಕ್:
ಆಕ್ಸಿಸ್ ಬ್ಯಾಂಕ್ ಸಂಸ್ಥೆಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳಲು ಸಲಹೆ ನೀಡಲಾಯಿತು.
ನೋಕಿಯಾ ಸಂಸ್ಥೆ:
ಕರ್ನಾಟಕದಲ್ಲಿ ಟೆಲಿಕಾಂ ಉತ್ಪನ್ನಗಳ ಉತ್ಪಾದನೆಯ ಅವಕಾಶಗಳನ್ನು ಬಳಸಿಕೊಳ್ಳಲು ನೋಕಿಯಾ ಸಂಸ್ಥೆಯ ಮುಖ್ಯಸ್ಥರಿಗೆ ಸಲಹೆ ನೀಡಲಾಯಿತು.
ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ಪೆವಿಲಿಯನ್‍ನಲ್ಲಿ ಹೀರೋ ಮೋಟೋಕಾರ್ಪ್, ಎಬಿಇನ್‍ಬೇವ್ ಸಂಸ್ಥೆ, ಅರ್ಸೆಲರ್ ಮಿತ್ತಲ್, ಅದಾನಿ ಗ್ರೂಪ್, ಜಾನ್ಸನ್ ಕಂಟ್ರೋಲ್ಸ್‍ನ ಸಿಇಓ ಜಾರ್ಜ್ ಒಲಿವರ್, ಹನಿವೆಲ್ ಕಂಪೆನಿ, ಐಬಿಎಂ, ಬೈಜೂಸ್, ಮೀಶೋ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕರ್ನಾಟಕದಲ್ಲಿ ಹೂಡಿಕೆಗಳ ಅವಕಾಶಗಳ ಬಗ್ಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಈಶ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಚರ್ಚೆ ನಡೆಸಲಾಯಿತು. ಈ ವೇಳೆ, ರಾಜ್ಯದಲ್ಲಿ ಪರಿಸರ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ, ಬಿಟಿ, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮೊದಲಾದ ಹಿರಿಯ ಅಧಿಕಾರಿಗಳು ರಾಜ್ಯದ ತಂಡದಲ್ಲಿದ್ದರು.
ಧಾರವಾಡ: ಬಾಡಾ ಗ್ರಾಮದ ಬಳಿ ಶನಿವಾರ ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡು ಬರುವಾಗ ನಿಗದಿ ಗ್ರಾಮದ 9 ಜನ ಮದುಮಗನ ಕಡೆಯವರು ಸಾವನ್ನಪ್ಪಿದ್ದರು. ಈ ಹಿನ್ನೆಲೆ 5 ಲಕ್ಷ ರೂ. ಪರಿಹಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮೃತ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಈ ಹಿನ್ನೆಲೆ ಬೊಮ್ಮಾಯಿ ಅವರು ಟ್ವೀಟ್ ಮಾಡುವ ಮೂಲಕ ಪರಿಹಾರವನ್ನು ಘೋಷಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿರುವ ಬೊಮ್ಮಾಯಿ ಅವರು, ಧಾರವಾಡದ ಬಾಡಾ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಯ ಮೆರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಸುತ್ತೇನೆ ಎಂದು ಬರೆದುಕೊಂಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಶೀಲ ಶಂಕಿಸಿ ತಲೆ ಹಿಡಿದು ನೆಲಕ್ಕೆ ಜಜ್ಜಿದ ಪತಿ – ಸ್ಥಳದಲ್ಲೇ ಪತ್ನಿ ಸಾವು
ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವರಾದ @JoshiPralhad ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನಸೂರ ಗ್ರಾಮದಿಂದ ಬೆನಕನಟ್ಟಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಮೃತರನ್ನು ಮಹೇಶ್ವರಯ್ಯ(11), ಅನನ್ಯ(14), ಹರೀಶ್ (12), ಶಿಲ್ಪಾ (34), ನೀಲವ್ವ(60), ಮಧುಶ್ರೀ (20) ಹಾಗೂ ಶಂಭುಲಿಂಗಯ್ಯ(35) ಎಂದು ಗುರುತಿಸಲಾಗಿದೆ.
ನವದೆಹಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಯಲ್ಲಿ ಹೇಳಿದ್ದಾರೆ.
ಬೊಮ್ಮಾಯಿ ಅವರು ಶುಕ್ರವಾರ ದೆಹಲಿಗೆ ದಿಢೀರ್ ಎಂದು ಭೇಟಿ ನೀಡಿದ್ದು, ಯಾವ ಉದ್ದೇಶಕ್ಕೆ ಎಂದು ಭೇಟಿಯಾಗಿದ್ದಾರೆ ಎಂಬುದನ್ನು ತಿಳಿಸಿರಲಿಲ್ಲ. ಆದರೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ಆಗಮಿಸಿದ್ದೆ. ತುರ್ತು ಕೆಲಸ ಇದ್ದ ಹಿನ್ನೆಲೆ ಅವರನ್ನು ಭೇಟಿಯಾಗಿಲ್ಲ. ಆದರೆ ಫೋನ್‍ನಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಜೊತೆಗೆ ಚರ್ಚೆ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಪರಿಷತ್ ಟಿಕೆಟ್ ಗಲಾಟೆ
ಈ ಚರ್ಚೆಯಲ್ಲಿ ನಾಲ್ಕು ವಿಧಾನಪರಿಷತ್ ಸ್ಥಾನಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಕೋರ್ ಕಮಿಟಿ ಪಟ್ಟಿ ನೀಡಲಾಗಿದೆ. ಈ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ. ಸಂಪುಟ ವಿಸ್ತರಣೆ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.
ಮಳೆ ಅವಾಂತರ ಕುರಿತು ಮಾತನಾಡಿದ ಅವರು, ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎನ್‍ಡಿಆರ್‌ಎಫ್ ನಿಧಿಯಲ್ಲಿ ಪರಿಹಾರ ಬಿಡುಗಡೆ ಮಾಡಲಾಗುವುದು. ಪರಿಸ್ಥಿತಿ ಅವಲೋಕಿಸಿ ದಾವೋಸ್ ಪ್ರವಾಸದ ಬಗ್ಗೆ ನಿರ್ಧಾರ ಮಾಡ್ತಿನಿ ಎಂದು ವಿವರಿಸಿದರು.
ಬೊಮ್ಮಾಯಿ ಅವರು ಶುಕ್ರವಾರ ತಡರಾತ್ರಿ ಒಂದು ಗಂಟೆಗೆ ದೆಹಲಿಯ ಕರ್ನಾಟಕ ಭವನಕ್ಕೆ ಆಗಮಿಸಿದರು. ಬೆಂಗಳೂರಿನಿಂದ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯಲ್ಲಿ ಬೊಮ್ಮಾಯಿ ಅವರು ಉಳಿದುಕೊಂಡಿದ್ದರು. ತಡ ರಾತ್ರಿವರೆಗೂ ಬೊಮ್ಮಾಯಿ ಅವರು ಅಮಿತ್ ಶಾ ಭೇಟಿಗಾಗಿ ಕಾದಿದ್ದಾರೆ. ಆದರೆ ಭೇಟಿಗೆ ಸಮಯ ನಿಗಧಿಯಾಗದ ಹಿನ್ನೆಲೆ ಕರ್ನಾಟಕ ಭವನಕ್ಕೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿರುವ ನದಿಗಳ ಮರಳನ್ನು ಮಾರುವಂತಿಲ್ಲ: ಎನ್‌ಜಿಟಿ
ನಿಗದಿ ಪ್ರಕಾರ ಬೊಮ್ಮಾಯಿ ಅವರು ಶನಿವಾರ ಬೆಳಗ್ಗೆ 6:30ಕ್ಕೆ ಬೆಂಗಳೂರಿಗೆ ತೆರಳಬೇಕಿತ್ತು.
ಬೆಂಗಳೂರು: ಮಳೆಯಿಂದ ಹಾನಿಯಾದ ಪ್ರದೇಶಗಳನ್ನು ನೋಡಲು ಸಮಯ ನಿಗದಿಪಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ.
ಪೈ ಲೇಔಟ್‍ನಿಂದ ಬೊಮ್ಮಾಯಿ ಅವರು ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನೇರವಾಗಿ ಕಗ್ಗಲಿಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಈ ದಿಢೀರ್ ನಿರ್ಧಾರದಿಂದ ಮಳೆ ರೌಂಡ್ಸ್‌ಗೆ ಬಂದ ಕೆಲ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಕೆಲ ಅಧಿಕಾರಿಗಳು ಮೈಸೂರು ರೋಡ್‍ನಿಂದ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಮಳೆ ಅವಾಂತರ – ನೀರಿನಲ್ಲಿ ಕೊಚ್ಚಿ ಹೋದ ಹಸುಗಳು, ಕೆರೆಯಲ್ಲಿ ಸಿಲುಕಿದ ಕುದುರೆ
ಬೊಮ್ಮಾಯಿ ಅವರನ್ನು ಕೆಲವು ಅಧಿಕಾರಿಗಳು ಫಾಲೋ ಮಾಡುತ್ತಿದ್ದರು. ಆದರೆ ಅವರು ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ಗೊತ್ತಾಗಿ ಫಾಲೋ ಮಾಡೋದನ್ನ ಬಿಟ್ಟು ಮನೆಗೆ ವಾಪಸ್ ಆಗಿದ್ದಾರೆ.
ಬೆಂಗಳೂರು: ಮಳೆಯ ಅವಾಂತರದಿಂದ ಬೆಂಗಳೂರಿನ ರಸ್ತೆ, ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದರು.
ಜೆ.ಸಿ.ನಗರ 60 ಅಡಿ ರಸ್ತೆಯ ಬಳಿ ಕಲ್ವರ್ಟ್, ಜೆ.ಸಿ.ನಗರ 19ನೇ ಮುಖ್ಯ ರಸ್ತೆ, ನಾಗವಾರ ಮೆಟ್ರೋ ಸ್ಟೇಷನ್ ಕಾಮಗಾರಿ, ಹೆಚ್.ಬಿ.ಆರ್.ಲೇಔಟ್ ನೀರುಗಾಲುವೆ, ಹೆಬ್ಬಾಳ ಎಸ್.ಟಿ.ಪಿ ಯನ್ನು ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿಯಲ್ಲಿ ಔಟ್ ಆಫ್ ಔಟ್ ತೆಗೆದ ಬೆಂಗಳೂರಿನ ವಿದ್ಯಾರ್ಥಿಗಳು
ಈ ವೇಳೆ ಸಚಿವರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ, ಆರ್.ಅಶೋಕ್, ಬಿ.ಡಿ.ಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಂಸದ ಪಿ.ಸಿ.ಮೋಹನ್, ಶಾಸಕ ಭೈರತಿ ಸುರೇಶ್, ಕೆ.ಜೆ.ಜಾರ್ಜ್.
ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಎನ್.ಮಂಜುನಾಥ್ ಪ್ರಸಾದ್, ಪಾಲಿಕೆಯ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೆಸ್, ಜಲಮಂಡಳಿ ಅಧ್ಯಕ್ಷರಾದ ಜಯರಾಮ್, ಬಿಡಿಎ ಆಯುಕ್ತರಾದ ರಾಜೇಶ್ ಗೌಡ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಶಿಲ್ಪಾ ಪತಿಗೆ ಮತ್ತೆ ಕಾನೂನು ಸಂಕಟ – ಕುಂದ್ರಾ ವಿರುದ್ಧ ಕೇಸ್ ದಾಖಲಿಸಿದ ಇಡಿ