Tag: ಸಿಎಂ ಬಸವರಾಜ ಬೊಮ್ಮಾಯಿ

  • 2 ಡೋಸ್ ಪಡೆದವರಿಗೆ ಚಿಕಿತ್ಸೆ – ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸಿ

    2 ಡೋಸ್ ಪಡೆದವರಿಗೆ ಚಿಕಿತ್ಸೆ – ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸಿ

    – ಓಮಿಕ್ರಾನ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು
    – ಸಾರ್ವಜನಿಕ ಸ್ಥಳಗಳ ಬಳಕೆಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಿ

    ಬೆಂಗಳೂರು: ಓಮಿಕ್ರಾನ್ ವೈರಸ್ ಭೀತಿ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಿದೆ. ಡೆಲ್ಟಾ ಅಬ್ಬರಕ್ಕೆ ಮರಣಮೃದಂಗ ಬಾರಿಸಬಾರದು ಎಂದು ಎಲ್ಲ ದೇಶಗಳು, ಎಲ್ಲ ರಾಜ್ಯಗಳು ಕಟ್ಟೆಚ್ಚರ ವಹಿಸುತ್ತಿದ್ದು, ಹತ್ತು ಹಲವು ರೀತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ.

    ಓಮಿಕ್ರಾನ್ ಕುರಿತು ರಾಜ್ಯದಲ್ಲಿಯೂ ಈಗಾಗಲೇ ಹಲವು ಮಾರ್ಗಸೂಚಿ ಜಾರಿಯಾಗಿವೆ. ಆದರೂ ಎರಡನೇ ಡೋಸ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕಿದ್ದಾರೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯುವಂತೆ ಮಾಡಲು ಕಠಿಣ ನಿಯಮಗಳನ್ನು ಜಾರಿ ಮಾಡಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಲಸಿಕೆ ಪಡೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಡಿ. ಸಿಂಗಾಪುರ ಮಾದರಿಯಲ್ಲಿ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕೊಡ್ಬೇಡಿ. ಅಷ್ಟೇ ಅಲ್ಲ, ಲಸಿಕೆ ಪಡೆಯದವರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಸಹ ಹಾಕದಿರುವ ರೀತಿಯ ಟಫ್ ರೂಲ್ಸ್ ತನ್ನಿ. ಆಗ ಮಾತ್ರ ಶೇಕಡಾ 100ರಷ್ಟು ವ್ಯಾಕ್ಸಿನೇಷನ್ ಟಾರ್ಗೆಟ್ ಮುಟ್ಟಲು ಸಾಧ್ಯ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಫೇಮಸ್ ಆಯ್ತು ಅಗರವಾಲ್ ಮೀಮ್ಸ್

    ಸರ್ಕಾರಿ ಸೌಲಭ್ಯಗಳನ್ನು ಕಡಿತ ಮಾಡಲು ಕಷ್ಟಸಾಧ್ಯ ಎಂದು ಆರೋಗ್ಯ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನುಳಿದಂತೆ, ಮಾಲ್‍ಗಳು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟಕ್ಕೆ ತಡೆಯಾಕುವ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸೋದಾಗಿಯೂ ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಆರೋಗ್ಯ ಮಂತ್ರಿಗಳು ಎರಡೆರೆಡು ಸಭೆ ನಡೆಸಿದ್ರು. ಮುಂಬೈನಲ್ಲಿಯೂ ಇದೇ ಮಾದರಿಯ ರೂಲ್ಸ್ ಜಾರಿಗೆ ಚಿಂತನೆ ನಡೆದಿದೆ.

    ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಏನು?
    * ಎಲ್ಲರಿಗೂ ಡಬಲ್ ಡೋಸ್ ಲಸಿಕೆ ಕಡ್ಡಾಯ ಮಾಡಬೇಕು.
    * ಸರ್ಕಾರಿ ಸೌಲಭ್ಯ ಪಡೆಯಲು ಲಸಿಕೆ ಕಡ್ಡಾಯ ಮಾಡಿ.
    * ಲಸಿಕೆ ಪಡೆಯದಿದ್ರೆ ಪಡಿತರ, ಅಡುಗೆ ಅನಿಲ ವಿತರಣೆ ಬೇಡ.
    * ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಬೇಡಿ/ವೆಚ್ಚ ಭರಿಸಬೇಡಿ.
    * ನೀರು, ವಿದ್ಯುತ್‍ನಂತಹ ಮೂಲ ಸೌಲಭ್ಯ ಕಡಿತಗೊಳಿಸಿ.
    * ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಮೆಟ್ರೋ ಬಳಕೆಗೆ ಲಸಿಕೆ ಕಡ್ಡಾಯ ಮಾಡಿ.
    * ವೇತನ, ಪಿಂಚಣಿ ಪಡೆಯಲು 2 ಡೋಸ್ ಕಡ್ಡಾಯ ಮಾಡಿ.
    * ವ್ಯಾಕ್ಸಿನ್ ಪಡೆದಿಲ್ಲ ಅಂದ್ರೆ ಬಂಕ್‍ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕಲು ಬಿಡಬೇಡಿ
    * ಸಾರ್ವಜನಿಕ ಸ್ಥಳಗಳ ಬಳಕೆಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಿ.
    * ಲಸಿಕೆ ಪಡೆದಿಲ್ಲ ಅಂದ್ರೆ ಹೊಟೇಲ್, ಮಾಲ್‍ಗಳಲ್ಲಿ ಓಡಾಡಲು ಬಿಡಬೇಡಿ.

    ಈ ಸಲಹೆಗಳಿಗೆ ಸರ್ಕಾರದ ಒಪ್ಪಿಗೆ!
    * ವಿದೇಶದಿಂದ ಬರುವ ಎಲ್ಲರಿಗೂ ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯ.
    * ನೆಗೆಟಿವ್ ಬಂದಲ್ಲಿ ಮನೆಯಲ್ಲಿ ಒಂದು ವಾರ ಕ್ವಾರಂಟೇನ್ ಕಡ್ಡಾಯ.
    * ರೋಗ ಲಕ್ಷಣ ಇದ್ದಲ್ಲಿ 5ನೇ ದಿನ, ಇಲ್ಲದಿದ್ದಲ್ಲಿ 7ನೇ ದಿನ ಕೋವಿಡ್ ಟೆಸ್ಟ್.
    * ವಿದೇಶದಿಂದ ಬಂದವರು ಏಳು ದಿನಗಳವರೆಗೂ ಹೊರಗೆ ಓಡಾಡುವಂತಿಲ್ಲ.
    * ಕ್ವಾರಂಟೇನ್‍ನಲ್ಲಿರುವವರ ಮೇಲೆ ನಿಗಾ ಇಡಲು ಕ್ವಾರಂಟೇನ್ ಆ್ಯಪ್.
    * ಕ್ವಾರಂಟೇನ್‍ನಲ್ಲಿರುವವರ ಆರೋಗ್ಯ ಗಮನಿಸಲು ಟೆಲಿ ಕೌನ್ಸೆಲಿಂಗ್ ವ್ಯವಸ್ಥೆ.
    * 14 ದಿನದ ಹಿಂದೆ ಬಂದವರಿಗೆ ಮತ್ತೆ ಆರ್‍ಟಿಪಿಸಿಆರ್ ಟೆಸ್ಟ್‍ಗೆ ಶಿಫಾರಸ್ಸು.
    * ಬಿಎಂಸಿ ವೈದ್ಯ ಡಾ.ರವಿ ನೇತೃತ್ವದಲ್ಲಿ ಕೋವಿಡ್ ಚಿಕಿತ್ಸೆ ಪ್ರೊಟೋಕಾಲ್ ಸಮಿತಿ.

  • ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ: ಸಿಎಂ

    ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ: ಸಿಎಂ

    ಬೆಂಗಳೂರು: ಓಮಿಕ್ರಾನ್ ಕಾಣಿಸಿಕೊಂಡಿರುವ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕೋವಿಡ್‍ನ ಓಮಿಕ್ರಾನ್ ತಳಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ತಳಿ ಓಮಿಕ್ರಾನ್ ಬಹಳ ವೇಗವಾಗಿ ಹರಡುತ್ತೆ. ಈ ಹಿನ್ನೆಲೆ ಭಾರತದಾದ್ಯಂತ ಕಟ್ಟೆಚ್ಚರ ವಹಿಸಲಾಗ್ತಿದೆ. ನಮ್ಮಲ್ಲಿಯೂ ಸಹ ಬಹಳ ಎಚ್ಚರವನ್ನು ವಹಿಸಿದ್ದೇವೆ. ನಮ್ಮಲ್ಲಿ ಈ ಸೋಂಕು ಕಂಡುಬಂದಿಲ್ಲ. ಮೈಸೂರಿನಲ್ಲಿ ಕಂಟೈನ್ಮೆಂಟ್ ಝೋನ್ ಮಾಡಿ ನಿಗಾ ಇಡಲಾಗಿದೆ. ಹೊಸ ತಳಿಯ ಮೇಲೆ ಗಮನ ಇಟ್ಟಿದ್ದೇವೆ ಎಂದು ಹೇಳಿದರು.

    ರಾಜ್ಯದಲ್ಲಿ ಸೋಂಕಿಗೆ ಸಂಬಂಧಿಸಿದಂತೆ ಟೆಸ್ಟ್ ಗಳನ್ನು ಹೆಚ್ಚು ಮಾಡಲು ಸೂಚಿಸಲಾಗಿದೆ. ಏರ್‌ಪೋರ್ಟ್ ಗಳಲ್ಲಿ ಹಲವು ಕಟ್ಟೆಚ್ಚರವನ್ನು ವಹಿಸಲಾಗಿದೆ. ವಿದೇಶಿ ಪ್ರಜೆಗಳಿಗೆ ನೆಗೆಟಿವ್ ಬಂದ್ರೆ ಮಾತ್ರ ದೇಶದ ಒಳಗೆ ಬಿಡ್ತೇವೆ. ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಋಣ ತೀರಿಸಲು ಮುಂದಾದ್ರಾ ಸುಮಲತಾ?

    ಸಂಭ್ರಮಕ್ಕೆ ನಿರ್ಬಂಧ?: ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆ ಸಂಭ್ರಮಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಕೋವಿಡ್ ಬೆಳವಣಿಗೆ ಹೇಗಿರುತ್ತೆ ಎಂಬುದನ್ನು ನೋಡಿಕೊಂಡು ನಿರ್ಧಾರ ಮಾಡ್ತೇವೆ ಎಂದರು.

    ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ ಅನೋ ಸಂದರ್ಭದಲ್ಲಿ ಓಮಿಕ್ರಾನ್ ಬೆಳವಣಿಗೆ ಆಗಿದೆ. ಸೌತ್ ಆಫ್ರಿಕಾ, ಹಾಂಕಾಂಗ್ ದೇಶಗಳಲ್ಲಿ ಈ ವೈರಸ್ ಕಂಡುಬಂದಿದೆ. ಇದು ಯಾವ ರೀತಿ ಪರಿಣಾಮ ಆಗುತ್ತೆ ಅಂತ ಗೊತ್ತಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತೆ. ಭಾರತದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ನಿನ್ನೆ ಸಭೆಯನ್ನ ಮಾಡಿದ್ದಾರೆ. ನಮ್ಮಲ್ಲಿ ಧಾರವಾಡ, ಬೆಂಗಳೂರು ಹಾಸ್ಟೆಲ್ ಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಹಾಸ್ಟೆಲ್ ಗಳನ್ನ ಕಂಟೈನ್ಮೆಂಟ್ ಝೋನ್ ಆಗಿ ಮಾಡಲಾಗಿದೆ. ಪಾಸಿಟಿವ್ ಬಂದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ನಮ್ಮಲ್ಲಿ 80 ಲಕ್ಷ ಡೋಸ್ ಲಸಿಕೆ ಲಭ್ಯ ಇದೆ. ನಮ್ಮ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ರಾಜ್ಯದಲ್ಲಿ ಫಸ್ಟ್ ಡೋಸ್ ವ್ಯಾಕ್ಸಿನೇಷನ್ ಶೇ.91 ರಷ್ಟಾಗಿದೆ. ಸೆಕೆಂಡ್ ಡೋಸ್ ಶೇ.58 ಆಗಿದೆ. ಸೆಕೆಂಡ್ ಡೋಸ್ ಹೆಚ್ಚಿಸಲು ಸೂಚಿಸಲಾಗಿದೆ. ಡಿಸೆಂಬರ್ ಒಳಗೆ ಸೆಕೆಂಡ್ ಡೋಸ್ ಶೇ.70ರ ಗುರಿ ತಲುಪಲು ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್‍ಮೇಲ್ – ನಕಲಿ ಎಸಿಬಿ ಅಧಿಕಾರಿ ಅರೆಸ್ಟ್

    ಹೆಲ್ತ್ ವರ್ಕರ್ಸ್‍ಗೆ ಬೂಸ್ಟರ್ ಡೋಸ್ ಕೊಡಲು ಕೇಂದ್ರದಿಂದ ಅನುಮತಿ ಕೇಳಿದ್ದೇವೆ. ಕೇರಳದಿಂದ ಬಂದವರಿಗೆ ಮರು ಪರೀಕ್ಷೆಗೆ ಸೂಚನೆ ಮಾಡಲಾಗಿದೆ ಎಂದರು.

  • ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ

    ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ

    ಬೆಂಗಳೂರು: ಚಂದನವನದ ಹಿರಿಯ ನಟ ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

    ಇಂದು ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ನಿ ಸುಮಲತಾ ಅಂಬರೀಶ್ ಅವರು, ಅಂಬರೀಶ್ ಇಲ್ಲವಾಗಿ 3 ವರ್ಷವಾಗಿದೆ. ಅವರ ಹೆಸರಲ್ಲಿ ಏನೂ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಶ್ ಅವರ ಹೆಸರು ಕೇಳಿಬಂದಿಲ್ಲ ಎಂದು ಅಭಿಮಾನಿಗಳ ಬೇಸರದ ಬಗ್ಗೆ ಹೇಳಿದರು. ಇದನ್ನೂ ಓದಿ: ಕಾವೇರಿದ ಮಂಡ್ಯ ಎಂಎಲ್‍ಸಿ ಚುನಾವಣೆ – ಯಾರಿಗೆ ಸಿಗುತ್ತೆ ಸುಮಲತಾ ಬೆಂಬಲ?

    ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಅದಕ್ಕೆ ಹೋರಾಟ ಮಾಡ್ತೀವಿ ಅಂತಿದ್ದಾರೆ. ಆದರೆ ಹೋರಾಟದ ಸಮಯ ಇದಲ್ಲ ಎಂದು ಹೇಳಿದ್ದೀನಿ. ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡಿದೆ. ಈ ಸಮಯದಲ್ಲಿ ಹೋರಾಟ ಮಾಡಬಾರದು ಎಂದಿದ್ದೇನೆ ಎಂದು ತಿಳಿಸಿದರು.

    ಅಂಬರೀಶ್ ಅವರು ಯಾವ ಪ್ರಶಸ್ತಿ, ಹೆಸರನ್ನು ಕೇಳಿ ಪಡೆದಿರಲಿಲ್ಲ. ನಾವೂ ಸಹ ಅಂಬರೀಶ್ ಅವರಿಗೆ ಪ್ರಶಸ್ತಿ ಕೊಡಿ, ಅದು ಮಾಡಿ, ಇದು ಮಾಡಿ ಎಂದು ಕೇಳಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಂಬಿ ತುಂಬಾ ಒಳ್ಳೇಯ ಸ್ನೇಹಿತರಾಗಿದ್ದರು. ಈಗ ಅವರೇ ಸಿಎಂ ಆಗಿರೋದ್ರಿಂದ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಸಾಧ್ಯತೆ ಕಡಿಮೆ: ಗುಲೇರಿಯಾ

    ಮಗ ಅಭಿಷೇಕ್ ಹಾಗೂ ಸುಮಲತಾ ಅಂಬರೀಶ್ ಅಂಬರೀಶ್ 3ನೇ ಪುಣ್ಯತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ.

  • ಅಕಾಲಿಕ ಮಳೆ – ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಕರೆದ ಸಿಎಂ

    ಬೆಂಗಳೂರು: ಅಕಾಲಿಕ ಮಳೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳು ಅಷ್ಟಿಷ್ಟಲ್ಲ. ಈ ಮಳೆಯಿಂದ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಈ ಕುರಿತು ಚರ್ಚೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆಯನ್ನು ಕರೆದಿದ್ದಾರೆ.

    ಈ ಅಕಾಲಿಕ ಮಳೆಯಿಂದ ರಾಜಕಾಲುವೆ ಒತ್ತುವರಿ ಹೊಡೆತಕ್ಕೆ ಅಪಾರ್ಟ್‍ಮೆಂಟ್‍ಗಳು, ಮನೆ, ರಸ್ತೆಗಳಿಗೆ ನೀರು ನುಗ್ಗಿತ್ತು. ರಾಜಧಾನಿಯಲ್ಲಿ ಆಗಿರುವ ಮಳೆ ಅವಾಂತರ ಸಂಬಂಧ ಇವತ್ತು ಮಧ್ಯಾಹ್ನ 12 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.

    ಮಂಗಳವಾರ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್‍ಗೆ ಬೊಮ್ಮಾಯಿ ಅವರು ಭೇಟಿ ನೀಡಿದ್ದರು. ಈ ವೇಳೆ ರಾಜಕಾಲುವೆ ಒತ್ತುವರಿ ಮಾಡ್ಕೊಂಡು ಅಪಾರ್ಟ್‍ಮೆಂಟ್ ಕಟ್ಟಿರುವ ಬಗ್ಗೆ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಲಾಯಿತು. ಇದನ್ನೂ ಓದಿ: ಆರ್ ಆ್ಯಂಡ್ ಡಿ ಕಾರ್ಯಪಡೆಗೆ ಅಶೋಕ್ ಶೆಟ್ಟರ್ ನೇಮಕ

    ಅದು ಅಲ್ಲದೇ ಇಂದು ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಮಳೆಯಿಂದ ರಾಜಧಾನಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ. ಕಂದಾಯ ಸಚಿವ ಆರ್ ಅಶೋಕ್, ಉಸ್ತುವಾರಿ ಸಚಿವ ಗೋಪಾಲಯ್ಯ ಇಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

  • ಯಲಹಂಕದಲ್ಲಿ ಹಾನಿಗೊಳಗಾದ ಮನೆಗಳಿಗೆ 10 ಸಾವಿರ ಪರಿಹಾರ: ಸಿಎಂ ಬೊಮ್ಮಾಯಿ

    ಯಲಹಂಕದಲ್ಲಿ ಹಾನಿಗೊಳಗಾದ ಮನೆಗಳಿಗೆ 10 ಸಾವಿರ ಪರಿಹಾರ: ಸಿಎಂ ಬೊಮ್ಮಾಯಿ

    ಬೆಂಗಳೂರು: ಅಮಾನಿಕೆರೆ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ 10 ಸಾವಿರ, ಪೂರ್ಣ ಪ್ರಮಾಣದಲ್ಲಿ ಮನೆಗೆ ಹಾನಿಯಾಗಿದ್ದರೆ 5 ಲಕ್ಷ ಮತ್ತು ಸಣ್ಣ ಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ 1 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

    ಅಮಾನಿಕೆರೆ ಪ್ರವಾಹದಿಂದ ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್‍ಮೆಂಟ್ ಜಲಾವೃತಗೊಂಡಿರುವ ಹಿನ್ನೆಲೆ ಇಂದು ಬಸವರಾಜ ಬೊಮ್ಮಾಯಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಯಲಹಂಕ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿ ಕೆರೆಯ ಕೋಡಿ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. 603 ಜನ ಇರುವ ಅಪಾರ್ಟ್‍ಮೆಂಟ್‍ನಲ್ಲಿ ನೀರು ನಿಂತು ತೊಂದರೆಯಾಗಿದೆ. ಸದ್ಯ ಶಾಸಕರು ತಕ್ಷಣ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಜನರಿಗೆ ಸಹಾಯ ಮಾಡಿದ್ದಾರೆ. ಇದಕ್ಕೆ ವ್ಯವಸ್ಥಿತವಾದ ಪರಿಹಾರ ಕೊಡುವ ಚಿಂತನೆ ನಡೆಸುತ್ತೇವೆ ಎಂದರು. ಇದನ್ನೂ ಓದಿ: ಮೋದಿ ನಂಗೆ ಫೋನ್ ಮಾಡಿದ್ರು: ಸಿಎಂ ಬೊಮ್ಮಾಯಿ

    ಇಲ್ಲಿ ಮುಖ್ಯವಾಗಿ 11 ಕೆರೆ ಇದೆ. ಈ ಬಾರಿ ಕರ್ನಾಟಕದ ಎಲ್ಲಾ ಕಡೆ ಮಳೆಯಾಗಿದ್ದು, ಯಲಹಂಕ ಭಾಗದಲ್ಲಿಯೂ ಮಳೆಯಾಗಿದೆ. ಹೀಗಾಗಿ ಎಲ್ಲಾ ಕೆರೆ ತುಂಬಿ ಯಹಲಹಂಕ ಕೆರೆಗೆ ಬಂದಿದೆ. ಇಲ್ಲಿ ಎರಡು ಕೋಡಿಗಳಿದ್ದು, ಅವೆರಡು ತುಂಬಿ ಹರಿದಿವೆ. ರಾಜಕಾಲುವೆ ಕೂಡ ಸಾಕಾಗುತ್ತಿಲ್ಲ. ರಾಜಕಾಲುವೆ ಅಳತೆ ಕಡಿಮೆ ಇದ್ದು, ಹೊರ ಹರಿವು ಜಾಸ್ತಿ ಇದೆ. ಹೀಗಾಗಿ ರಾಜಕಾಲುವೆ ಅತಿಕ್ರಮಣ ಆಗಿರುವುದರಿಂದ ಸಮಸ್ಯೆ ಆಗಿದೆ. ರಾಜಕಾಲುವೆ 30 ಫೀಟ್ ಆದರೂ ಇರಬೇಕಿತ್ತು. ಎರಡು ರಾಜಕಾಲುವೆಯನ್ನು ಅಡಚಣೆ ಇಲ್ಲದಂತೆ ಸರಿಪಡಿಸಲು ಹೇಳಿದ್ದೇನೆ. ಇಲ್ಲಿಂದಲೂ ಒಳ ಚರಂಡಿ ವ್ಯವಸ್ಥೆ ಮಾಡುತ್ತೇವೆ. 30 ಅಡಿಗೆ ಹೆಚ್ಚಿಸಲು ಹೇಳಿದ್ದೇನೆ. ಇಡೀ ಬೆಂಗಳೂರಿನಲ್ಲಿ ಈ ಸಮಸ್ಯೆ ಇದೆ. ಈ ವರ್ಷ 50 ಕೀ.ಮೀ ರಾಜಕಾಲುವೆ ಕೆಲಸವಾಗುತ್ತದೆ. ಯಲಹಂಕ ಭಾಗದಲ್ಲಿ 400 ಮನೆಗಳಿಗೆ ಹಾನಿಯಾಗಿದ್ದು, 10 ಕಿ.ಮೀ ರಸ್ತೆ ಒಡೆದಿದೆ. ಅದನ್ನು 100 ಕಿ.ಮೀ ಹೆಚ್ಚಿಸಲು ಚಿಂತನೆ ಮಾಡಿದ್ದೇವೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 30 ವರ್ಷಗಳ ಬಳಿಕ ತುಂಬಿದ ಕೆರೆ – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    ನೀರು ನುಗ್ಗಿ ಹಾನಿಯಾದ ಮನೆಗಳಿಗೆ 10 ಸಾವಿರ ಪರಿಹಾರ ಮತ್ತು ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದಿದ್ದರೆ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೊದಲ ಕಂತು ಒಂದು ಲಕ್ಷ ಬಿಡುಗಡೆ ಮಾಡುತ್ತೇವೆ. ಮೂಲಭೂತ ಸೌಕರ್ಯಕ್ಕೂ ಪರಿಹಾರ ನೀಡಲಾಗುತ್ತದೆ ಎಂದಿದ್ದಾರೆ. ಬ್ಯಾಟರಾಯನಪುರದಲ್ಲೂ ಮನೆಗಳಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದ್ದರೂ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

  • ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ: ಸಿದ್ದರಾಮಯ್ಯ

    ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ: ಸಿದ್ದರಾಮಯ್ಯ

    – ಜನ ಶಕ್ತಿ ಮುಂದೆ ರಾಜ ಶಕ್ತಿ ಏನು ಮಾಡಲು ಆಗಲ್ಲ

    ತುಮಕೂರು: ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

    ಬಿಜೆಪಿ ಸರ್ಕಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಇವತ್ತು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ರೈತರು ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. 700 ಜನ ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಈಗ ಪ್ರಧಾನಿ ಮೋದಿ ಅವರಿಗೆ ಜ್ಞಾನೋದಯ ಆಗಿದೆ. ಅದಕ್ಕೆ ಕೃಷಿ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಹೇಳಿದ್ದಾರೆ. ಮುಂಚಿತವಾಗಿ ತಗೊಂಡ್ರೆ ರೈತರ ಪ್ರಾಣ ಉಳಿಯುತಿತ್ತು ಎಂದು ಆರೋಪಿಸಿದರು.

    ಪ್ರಾಣ ಹೋಗಲು ನೇರವಾಗಿ ಮೋದಿ ಮತ್ತು ಅವರ ಸರ್ಕಾರವೇ ಕಾರಣ. ರೈತ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಕ್ರೋಶಕ್ಕೆ ಸರ್ಕಾರ ಮಣಿಯಬೇಕಾಗುತ್ತದೆ. ಜನ ಶಕ್ತಿ ಮುಂದೆ ರಾಜ ಶಕ್ತಿ ಏನೂ ಮಾಡಲು ಆಗಲ್ಲ. ಜನ ಶಕ್ತಿ ಅಂಕುಶದಲ್ಲಿ ರಾಜ ಶಕ್ತಿ ಇರಬೇಕು. ರೈತರಿಗೆ ದೊಡ್ಡ ನಮಸ್ಕಾರ, ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೋದಿ ಜೀ ನೀವು ರೈತರ ವಿರುದ್ಧ ಇರಲು ಸಾಧ್ಯವಿಲ್ಲ. ಇದನ್ನು ಅನ್ನದಾತರು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:  70 ವರ್ಷದ ದೇಶದ ಸಾಧನೆಯನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಭೂಪೇಶ್ ಬಘೇಲ್

    ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ಯಡಿಯೂರಪ್ಪ ಜೀ, ನಿಮಗೆ ನಾಚಿಕೆ ಆಗಲ್ವಾ. ಸಿಲಿಂಡರ್ ಬೆಲೆ ಜಾಸ್ತಿ ಆದಾಗ ಶೊಭಾ ಕರಂದ್ಲಾಜೆ ಅವರು ತಲೆ ಮೇಲೆ ಹೊತ್ತು ಹೋರಾಟ ಮಾಡಿದ್ರು. ಈಗ ಶೋಭಾ ಜೀ ಆಪ್ ಕಂಹಾ ಹೈ(ಎಲ್ಲಿದ್ದೀರಾ ನೀವು?) ಎಂದು ಹಾಸ್ಯ ಮಾಡಿದರು.

    ಮೋದಿ ಅವರು ಒಳ್ಳೆ ದಿನ ಬರುತ್ತೆ ಅಂದರು. ಎಲ್ಲಿ ಮೋದಿ ಜೀ ಒಳ್ಳೆ ದಿನ. ಬಿಜೆಪಿ ಜನ ಸ್ವರಾಜ್ ಎಂದು ಶಂಖ, ಕೊಂಬು ಊದಿಕೊಂಡು ಹೊರಟಿದ್ದಾರೆ. ಶಂಖಕ್ಕೆ ಕೊಂಬುಗೆ ಮರ್ಯಾದೆ ಇದೆ. ಅದರ ಮರ್ಯಾದೆ ತೆಗೆಯಲು ಇವರು ಹೊರಟಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ, ಲಜ್ಜೆಗೆಟ್ಟವರು. ಗ್ರಾಮ ಸ್ವರಾಜ್ ಯಾತ್ರೆ ಮಾಡಲು ಹೊರಟಿದ್ದಾರೆ. ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧ ಬಿಜೆಪಿ ಅಂಥವರು ಗ್ರಾಮ ಸ್ವರಾಜ್ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಚಿವ ಈಶ್ವರಪ್ಪ ಒಬ್ಬ ಪೆದ್ದ. ಜನರಿಗೆ ನೀವು ಮತ ಕೊಟ್ಟರೆ ನಾವು ಗ್ಯಾರಂಟಿ ಕೊಡ್ತೀವಿ ಅಂದಿದ್ದಾರೆ. ಜನರ ದುಡ್ಡು ಜನರಿಗೆ ಕೊಡಲು ಈ ರೀತಿ ಹೇಳುತ್ತಾರೆ. ಕಳೆದ ಬಾರಿ ಪರಿಷತ್ ನಲ್ಲಿ ತುಮಕೂರಿನಲ್ಲಿ ಸೋತಿದ್ದಿವಿ. ಆದರೆ ಈ ಬಾರಿ ಗೆಲ್ತೀವಿ, ಆರ್. ರಾಜೇಂದ್ರ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ನೂರಕ್ಕೆ ನೂರು ಈ ಬಾರಿ ರಾಜೇಂದ್ರ ಗೆಲ್ಲುತ್ತಾರೆ. ಮಳೆಯಿಂದಾಗಿ 1 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆ ಸಿಎಂ ಬೊಮ್ಮಾಯಿ ಚಲನಚಿತ್ರ ಬಿಡುಗಡೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಬೊಮ್ಮಾಯಿ ಅವರಿಗೆ ರೈತರ ಬಗ್ಗೆ ಕನಿಕರ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಡುಗಡ್ಡೆಯಲ್ಲಿ ಸಿಲುಕಿದ 500 ದನಕರುಗಳು – ಹಸುಗಳನ್ನು ಕಾಪಾಡುವಂತೆ ಡಿಸಿಗೆ ಮನವಿ

    BJP - CONGRESS

    5 ಟ್ರಿಲಿಯನ್ ಆದಾಯ ಮಾಡ್ತೀನಿ ಅಂದರು. ಇನ್ನೂ ಮೋದಿ ಅವರ ಹೆಸರಲ್ಲಿ ಬದುಕುತ್ತಿದ್ದಾರೆ. ಬಿಜೆಪಿಗೆ ಅವರಿಗೆ ಧಮ್ ಇಲ್ಲ. ಹಾಗಾಗಿ ಮೋದಿ ಅವರ ಹೆಸರಲ್ಲೇ ಬದುಕುತಿದ್ದಾರೆ. ಕಾಂಗ್ರೆಸ್ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಮೋದಿ ಹೇಳಿದ್ರು. ಈಗ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಮೋದಿ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಶೇಕಡಾವಾರು ತಿಳಿಸಿದ್ದಾರೆ. ಬೊಮ್ಮಾಯಿ ನಿಮಗೆ ಮಾನ ಮರ್ಯಾದೆ ಇದ್ರೆ, ಶೇ.30-40 ಲಂಚ ಪಡೀತಿದ್ದಾರೆ. ಇಂಥಹ ಸರ್ಕಾರ ಕಿತ್ತೊಗೆಯಬೇಕು. ಭ್ರಷ್ಟಾಚಾರ, ಕಪಟತನ ಬಯಲಿಗೆ ತಂದು ಅವರನ್ನು ಬೆತ್ತಲೆ ಮಾಡುವ ಕೆಲಸ ಮಾಡುತ್ತೇವೆ. ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.

  • ಮಾತು ತಪ್ಪಿದ ಸಿಎಂ – ಝೀರೋ ಟ್ರಾಫಿಕ್‍ನಲ್ಲಿ ಬೊಮ್ಮಾಯಿ ಸಂಚಾರ

    ಮಾತು ತಪ್ಪಿದ ಸಿಎಂ – ಝೀರೋ ಟ್ರಾಫಿಕ್‍ನಲ್ಲಿ ಬೊಮ್ಮಾಯಿ ಸಂಚಾರ

    ಕೊಪ್ಪಳ: ತಮಗೆ ಝೀರೋ ಟ್ರಾಪಿಕ್ ಬೇಡ ಎಂದು ಈ ಹಿಂದೆ ಹೇಳಿದ್ದ ಬವಸರಾಜ ಬೊಮ್ಮಾಯಿ ಅವರು ಇಂದು ಕೊಪ್ಪಳದಲ್ಲಿ ಝೀರೋ ಟ್ರಾಪಿಕ್ ನಲ್ಲಿ ಸಂಚರಿಸುವ ಮೂಲಕ ಕೊಟ್ಟ ಮಾತು ತಪ್ಪಿದ್ದಾರೆ.

    ಹೌದು, ಇಂದು ಜನಸ್ವರಾಜ್ ಸಮಾವೇಶ ಹಿನ್ನೆಲೆಯಲ್ಲಿ ಕೊಪ್ಪಳಕ್ಕೆ ಸಿಎಂ ಅವರು ಆಗಮಿಸಿದ್ದಾರೆ. ನಗರದಲ್ಲಿ ಸಿಎಂ ಅವರು ಝೀರೋ ಟ್ರಾಫಿಕ್‍ನಲ್ಲಿ ಆಗಮಿಸಿದ ಪರಿಣಾಮ ಟ್ರಾಫಿಕ್ ಜಾಮ್‍ನಿಂದ ಪ್ರಯಾಣಿಕರು ಪರದಾಟ ಅನುಭವಿಸಬೇಕಾಯಿತು. ಇದನ್ನೂ ಓದಿ: ಲೂಟಿಗೊಳಗಾದ ವೃದ್ಧನ ರಕ್ಷಣೆಗೆ ನಿಂತ ಹಿರಿಯ ಪೊಲೀಸ್ ಅಧಿಕಾರಿ

    basavaraj bommai

    ನಗರದಲ್ಲಿ ಒಂದು ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿ ನಿಂತವು. ನಗರದ ಸರ್ಕಾರಿ ಆಸ್ಪತ್ರೆ ಬಳಿಯೂ ಟ್ರಾಫಿಕ್ ಜಾಮ್ ಆಯಿತು. ಇದರಿಂದ ರೋಗಿಗಳು ಆಸ್ಪತ್ರೆಗೆ ತೆರಳಲು ಸಮಸ್ಯೆ ಎದುರಾಯಿತು. ಟ್ರಾಫಿಕ್ ಜಾಮ್‍ನಿಂದ ಕ್ಷಣಾರ್ಧದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ಪ್ರಯಾಣಿಕರು ಪರದಾಡಿದರು. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

    ನಾನು ಸಿಎಂ ಅಲ್ಲ. ಕಾಮನ್ ಮ್ಯಾನ್, ಸಾಮಾನ್ಯ ರಾಜಕಾರಣಿ ಎಂದು ಎಲ್ಲೆಡೆ ಕಾರ್ಯಕ್ರಮಗಳಲ್ಲಿ ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ಸಂದರ್ಭದಲ್ಲಿ ಝೀರೋ ಟ್ರಾಫಿಕ್‍ನಲ್ಲಿ ಓಡಾಡುವ ಅಗತ್ಯವಾದರೂ ಏನಿತ್ತು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

  • ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ: ಬಿಎಸ್‍ವೈ

    ಹುಬ್ಬಳ್ಳಿ: ಕಾಂಗ್ರೆಸ್‍ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಜನಸ್ವರಾಜ ಯಾತ್ರೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಸ್ವರಾಜ ಯಾತ್ರೆ ಹಿನ್ನೆಲೆಯಲ್ಲಿ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿರುವೆ. ಒಟ್ಟು ನಾಲ್ಕು ಭಾಗಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ನಳಿನ್ ಕುಮಾರ್ ಕಟೀಲ್, ಮತ್ತೊಂದು ಕಡೆ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ

    ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು, ಬಹುಮತ ಪಡೆಯಬೇಕು ಎಂಬ ಅಪೇಕ್ಷೆ ಇದೆ. ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತೇವೆ. ನಾವು ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ನಾನು ಉತ್ತರ ಕನ್ನಡ ಮುಗಿಸಿ ಮತ್ತೆ ಹಾವೇರಿಗೆ ಹೋಗುತ್ತೇನೆ. ನಂತರ ಗದಗ, ಬಾಗಲಕೋಟೆ, ಬಿಜಾಪುರ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

    ಕಾಂಗ್ರೆಸ್ ಎರಡು ಬಣವಾಗಿರುವ ಕುರಿತು ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ಯಾವ ಪಕ್ಷದ ಬಗ್ಗೆಯೂ ಟೀಕೆ,ಟಿಪ್ಪಣಿಗಳನ್ನು ಮಾಡುವುದಿಲ್ಲ. ಕಾಂಗ್ರೆಸ್ ನಲ್ಲಿ ಬಡಿದಾಟ ಶುರುವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮುಂದೆ ನೋಡೋಣ ಎಂದು ತಿಳಿಸಿದರು.

    ಬಿಟ್ ಕಾಯಿನ್ ಮುಚ್ಚಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪ ಕುರಿತು ಮಾತನಾಡಿದ ಅವರು, ಅದೆಲ್ಲ ಸುಳ್ಳು. ಈ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಪಕ್ಷದಲ್ಲಿ ಈ ಕುರಿತು ಯಾವುದೇ ದಾಖಲೆಗಳಿದ್ದರೂ ನಮಗೆ ಕೊಟ್ಟರೆ ಅವರ ವಿರುದ್ಧ ನಾವು ಕ್ರಮಕೈಗೊಳ್ಳುತ್ತೇವೆ. ಯಾವುದನ್ನು ಮುಚ್ಚಿಡುವುದಿಲ್ಲ, ಯಾರನ್ನು ರಕ್ಷಣೆಯನ್ನು ಸಹ ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಕ್ರಿಪ್ಟೋಕರೆನ್ಸಿ ವಿಚಾರದಲ್ಲಿ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ ಕರೆ 

    mandya rain

    ರಾಜ್ಯದ ಪ್ರವಾಹ ಕುರಿತು ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಈಗಾಗಲೇ ಸರ್ವೇ ಮಾಡಿಸುತ್ತಿದ್ದಾರೆ. ಈ ಕುರಿತು ಪರಿಹಾರ ಕೊಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಭೆಗಳನ್ನು ಮಾಡುತ್ತಿದ್ದಾರೆ. ಎಲ್ಲೆಲ್ಲಿ ಬೆಳೆ ನಾಶವಾಗಿದೆ ಅವರಿಗೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

  • ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

    ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನದ ಫೋಷಣೆಯನ್ನು ನಿನ್ನೆ ಮಾಡಲಾಗಿದ್ದು, ಈ ಹಿಂದೆಯೇ ಇವರಿಗೆ ಪದ್ಮಶ್ರೀಗೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ.

    ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಮುಂದಿನ ವಾರ ನವೆಂಬರ್ 26 ರಂದು ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಬಗ್ಗೆ ಮಹತ್ವದ ಚರ್ಚೆ ಮಾಡಲಾಗುವುದು. ಇದರ ಜೊತೆಗೆ ಪದ್ಮಶ್ರೀ ನೀಡಲು ಸಹ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗುತ್ತೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ

    ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಸಹೋದ್ಯೋಗಿಗಳ ಜತೆ ಚರ್ಚಿಸಿ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಪಡೆಸುತ್ತಾರೆ. ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನಕ್ಕೆ ಅರ್ಥವತ್ತಾದ, ಅಚ್ಚುಕಟ್ಟು ಕಾರ್ಯಕ್ರಮ ಆಯೋಜಿಸಲೂ ಚರ್ಚಿಸಲಿದ್ದಾರೆ. ಅದು ಅಲ್ಲದೇ ನವೆಂಬರ್ 17 ರ ಸಂಪುಟ ಸಭೆಯಲ್ಲಿ ಅಪ್ಪುಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಅಭಿಮಾನಿಗಳಿಂದ ಪದ್ಮಶ್ರೀ ಪ್ರಶಸ್ತಿಗೂ ಒತ್ತಾಯ ಬರುತ್ತಿರುವ ಹಿನ್ನೆಲೆ ಕೇಂದ್ರಕ್ಕೆ ಪದ್ಮಶ್ರೀ ಶಿಫಾರಸ್ಸು ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಸಾಧ್ಯತೆ ಇದೆ. ಇದರ ಜೊತೆಗೆ ಪುನೀತ್ ಸ್ಮರಣಾರ್ಥಕ್ಕೆ ಮತ್ತೊಂದಷ್ಟು ಕಾರ್ಯಕ್ರಮ, ಯೋಜನೆಗಳ ಬಗ್ಗೆಯೂ ಬೊಮ್ಮಾಯಿ ಅವರು ಚರ್ಚಿಸಲಿದ್ದಾರೆ.

    ಪ್ರಸ್ತುತ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ತಾತ್ಕಾಲಿಕವಾಗಿ ಮೂರು ಮುಹೂರ್ತಗಳನ್ನು ನಿಗದಿ ಮಾಡಿಕೊಂಡಿದೆ ಎನ್ನಲಾಗಿದೆ. ಚಳಿಗಾಲದ ಅಧಿವೇಶನದ ಬಳಿಕ ಪ್ರಶಸ್ತಿ ಪ್ರದಾನಕ್ಕೆ ಮುಹೂರ್ತ ನಿಗದಿ ಮಾಡುವ ಚಿಂತನೆ ಇದೆ. ಹೊಸ ವರ್ಷದ ಜನವರಿಯಲ್ಲಿ ಪ್ರಶಸ್ತಿ ಕೊಡುವ ಬಗ್ಗೆಯೂ ಚಿಂತನೆ ಇದೆ. ಪುನೀತ್ ಜನ್ಮದಿನವಾದ ಮಾರ್ಚ್ 17 ರಂದು ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆಯೂ ಇದೆ. ಈ ಮೂರು ಸಂದರ್ಭಗಳ ಪೈಕಿ ಸರ್ಕಾರ ಒಂದು ದಿನಾಂಕ ನಿಗದಿ ಮಾಡಲಿದೆ. ಇದನ್ನೂ ಓದಿ: ʼಅಪ್ಪುʼಗೆ ನನ್ನ ದೃಷ್ಟಿಯೇ ತಾಗಿತೇನೊ ಅನಿಸುತ್ತೆ: ತಮ್ಮನ ನೆನೆದು ಶಿವಣ್ಣ ಕಣ್ಣೀರು

  • ಸಿಎಂ ರಾಜೀನಾಮೆ ನೀಡ್ಬೇಕು, ಕಂಗನಾ ಪದ್ಮಶ್ರೀ ವಾಪಸ್ ಪಡೀಬೇಕು: ಎಸ್.ಮನೋಹರ್

    ಸಿಎಂ ರಾಜೀನಾಮೆ ನೀಡ್ಬೇಕು, ಕಂಗನಾ ಪದ್ಮಶ್ರೀ ವಾಪಸ್ ಪಡೀಬೇಕು: ಎಸ್.ಮನೋಹರ್

    ಬೆಂಗಳೂರು: ನಗರ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಚಲನಚಿತ್ರ ನಟಿ ಕಂಗನಾ ರಣಾವತ್ ಅವರ ವಿರುದ್ಧ ಕಾಂಗ್ರೆಸ್ಸಿನ ರೇಸ್ ಕೋರ್ಸ್ ಭವನದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಕ.ವಿ.ಕಾ.ಮಾಜಿ ಅಧ್ಯಕ್ಷ ಎಸ್.ಮನೋಹರ್ ಈ ಕುರಿತು ಮಾತನಾಡಿದ್ದು, ಬಿಟ್ ಕಾಯಿನ್ ಸಾವಿರಾರು ಕೋಟಿಗಳ ಹಗರಣವಾಗಿದೆ. ಬಿಜೆಪಿ ನಾಯಕರು ಈ ಹಗರಣದಲ್ಲಿ ಭಾಗಿಯಾದ ಹಿನ್ನೆಲೆ ಸಿಎಂ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಚಾರದ ವಿರುದ್ಧ ನಮ್ಮ ಹೋರಾಟ ಎನ್ನುತ್ತಾರೆ. ಹಗರಣದಲ್ಲಿ ಶಾಮೀಲಾಗಿರುವ ಮುಖ್ಯಮಂತ್ರಿಯನ್ನು ಈ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ: ಅಕುಲ್ ಬಾಲಾಜಿ

    ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಆದರೆ ಕಂಗನಾ ರಣಾವತ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನಿಸುವಂತಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಕಂಗನಾ ಅವರ ಮೇಲೆ ದೇಶದ್ರೋಹದ ಕೇಸ್ ದಾಖಲಿಸಬೇಕು ಮತ್ತು ಅವರ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಪ್ರತಿಭಟನೆಯಲ್ಲಿ ಕ.ವಿ.ಕಾ.ಮಾಜಿ ಅಧ್ಯಕ್ಷರಾದ ಎಸ್.ಮನೋಹರ್, ನಗರ ಜಿಲ್ಲೆ ಪ್ರಚಾರ ಸಮಿತಿ ಅಧ್ಯಕ್ಷರುಗಳಾದ ಜಯಸಿಂಹ, ಆನಂದ್, ಜಿ.ಜನಾರ್ಧನ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಕಾಶ್, ಪುಟ್ಟರಾಜು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್