ತಿರುವನಂತಪುರಂ: ಒಬ್ಬರಿಂದ ಸಹಾಯ ಪಡೆದ ಮೇಲೆ, ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವುದು ಮಾನವೀಯತೆ ತತ್ವ. ಈ ತತ್ವವನ್ನು ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಪತಿ ಪಾಲಿಸಿ ಮಾನವೀಯತೆ ಮೆರೆದಿದ್ದಾರೆ.
ಕೇರಳದ ನರ್ಸ್ ಲಿನಿ ನಿಪಾ ವೈರಸ್ ದಾಳಿಗೆ ತುತ್ತಾಗಿ ಮೃತಪಟ್ಟಿದ್ದರು. ಹೀಗಾಗಿ ಅವರ ಕುಟುಂಬಕ್ಕೆ 20 ಲಕ್ಷ ರೂ. ಹಾಗೂ ಪತಿಗೆ ಉದ್ಯೋಗ ನೀಡುವ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ್ದರು.
ಸರ್ಕಾರ ತನ್ನ ಭರವಸೆ ಪ್ರಕಾರ ನರ್ಸ್ ಲಿನಿ ಪತಿ ಸಂಜೇಶ್‍ಗೆ ರಾಜ್ಯ ಆರೋಗ್ಯ ಇಲಾಖೆ ಕ್ಲರ್ಕ್ (ಗುಮಾಸ್ತ) ಕೆಲಸವನ್ನು ನೀಡಲಾಗಿದೆ. ಸೇವೆಗೆ ಸೇರಿದ ಸಂಜೇಶ್ ಅವರು ತಮ್ಮ ಮೊದಲ ತಿಂಗಳ ವೇತನವನ್ನು ಕೇರಳ ರಾಜ್ಯದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ.

ಯಾರು ಲಿನಿ ನರ್ಸ್?
ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಜಾಗತೀಕ ಮಟ್ಟದಲ್ಲಿ ಆತಂಕ ಹುಟ್ಟಿಸಿದ್ದ ನಿಪಾ ವೈರಸ್ ಗೆ ಕೇರಳದ ನರ್ಸ್ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು.
ಲಿನಿ ಡೆತ್ ನೋಟ್:
ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ.
ಕೇರಳದಲ್ಲಿ ನಿಲ್ಲದ ಮಳೆ:
ದೇವರನಾಡಲ್ಲಿ ಮಳೆ ಆರ್ಭಟ ಹೆಚ್ಚಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಂಪ್‍ಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಆಶ್ರಯ ಹಾಗೂ ಆಹಾರ ವ್ಯವಸ್ಥೆ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಒಟ್ಟು 8 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಬುಧವಾರ ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಂ.ಸುಧೇರನ್ ನಿವಾಸವು ಸಂಪೂರ್ಣ ಜಲಾವೃತವಾಗಿತ್ತು. ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv