Tag: ಸಿಎಂ ಚಂದ್ರಬಾಬು ನಾಯ್ಡು

  • ಗಂಗಮ್ಮನಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ ನಾಯ್ಡು

    ಗಂಗಮ್ಮನಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ ನಾಯ್ಡು

    – ಹರಕೆ ಸುತ್ತ ಅನುಮಾನದ ಹುತ್ತ

    ಕೋಲಾರ: ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿರುವಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗಂಗಮ್ಮನ ಹರಿಕೆ ತೀರಿಸಿದ್ದಾರೆ.

    ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಮತದಾನ ಪೂರ್ಣಗೊಂಡ ಬಳಿಕ ಸ್ವಕ್ಷೇತ್ರ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಚಂದ್ರಬಾಬು ನಾಯ್ಡು ಕಾಣಿಸಿಕೊಂಡಿದ್ದಾರೆ. ನಾಯ್ಡು ಅವರು ಪತ್ನಿ ಸಮೇತ ಇಂದು ಕುಪ್ಪಂನಲ್ಲಿರುವ ತಿರುಪತಿ ಗಂಗಮ್ಮ ದೇವಿಯ ದರ್ಶನ ಪಡೆದರು. ಬಳಿಕ ದೇವಿಗೆ ಹೊಸ ಬಟ್ಟೆ ಕೊಟ್ಟು ಹರಕೆ ತೀರಿಸಿದ್ದಾರೆ.

    ಪ್ರತಿ ಬಾರಿಯೂ ಚಂದ್ರಬಾಬು ನಾಯ್ಡು ದಂಪತಿ ಗಂಗಮ್ಮನ ದರ್ಶನ ಪಡೆದು ಹರಕೆ ತೀರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿಯ ಹರಕೆ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಚಂದ್ರಬಾಬು ನಾಯ್ಡು ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಅವರಿಗೂ ಈ ಭಯ ಶುರುವಾಗಿದೆ ಎಂದು ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕುಪ್ಪಂ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ರಾಜ್ಯದಲ್ಲಿ ಬಹುಮತ ಸಿಗದೇ ಅಧಿಕಾರ ಕಳೆದುಕೊಳ್ಳುವ ಭೀತಿ ಚಂದ್ರಬಾಬು ನಾಯ್ಡು ಅವರಿಗೆ ಎದುರಾಗಿದೆ. ಆಂಧ್ರಪ್ರದೇಶದಲ್ಲಿ 176 ವಿಧಾನಸಭಾ ಕ್ಷೇತ್ರಗಳಿದ್ದು, 2014ರ ಚುನಾವಣೆಯಲ್ಲಿ ಟಿಡಿಪಿ 103 ಹಾಗೂ ವೈಎಸ್‍ಆರ್ ಸಿಪಿ 66 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಉಳಿದಂತೆ ಬಿಜೆಪಿ 4, ನವೋದಯ ಹಾಗೂ ಪಕ್ಷೇತರ ತಲಾ 1 ಸ್ಥಾನ ಪಡೆದುಕೊಂಡಿತ್ತು.

  • ಕೊಪ್ಪಳ ಮೈತ್ರಿ ಅಭ್ಯರ್ಥಿ ಪರ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ – ಅಭ್ಯರ್ಥಿಯೇ ಸಮಾವೇಶಕ್ಕೆ ಗೈರು

    ಕೊಪ್ಪಳ ಮೈತ್ರಿ ಅಭ್ಯರ್ಥಿ ಪರ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರ – ಅಭ್ಯರ್ಥಿಯೇ ಸಮಾವೇಶಕ್ಕೆ ಗೈರು

    ಕೊಪ್ಪಳ: ಲೋಕಸಭಾ ಚುನಾವಣೆಯ ಎರಡನೇ ಹಂತದ ಕ್ಷೇತ್ರಗಳಿಗೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

    ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಚಂದ್ರಬಾಬು ನಾಯ್ಡು ಮತಯಾಚನೆ ಮಾಡಿದರು. ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಆಂಧ್ರ ಮೂಲದವರ ಮತಗಳಿವೆ. ಈ ಹಿನ್ನಲೆಯಲ್ಲಿ ಆಂಧ್ರ ಮೂಲದವರ ಮತಗಳನ್ನು ಸೆಳೆಯುವ ಉದ್ದೇಶದಿಂದ ಚಂದ್ರಬಾಬು ನಾಯ್ಡು ಅವರನ್ನು ಪ್ರಚಾರಕ್ಕೆ ಕರೆತರಲಾಗಿತ್ತು. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಆಂಧ್ರಪ್ರದೇಶದ ಮೂಲದವರು ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಪ್ರಚಾರ ಮಾಡುತ್ತಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಗೈರಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಹಂಚಿಕೊಂಡರೆ ಚುನಾವಣಾ ವೆಚ್ಚದಲ್ಲಿ ಈ ಮೊತ್ತವನ್ನು ಸೇರಿಸುತ್ತಾರೆ ಎಂಬ ಕಾರಣದಿಂದ ಅವರು ಗೈರಾಗಿದ್ದರು ಎನ್ನಲಾಗಿದೆ.

    ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಕನ್ನಡ ಭಾಷೆಯೊಂದಿಗೆ ಮಾತು ಆರಂಭಿಸಿದರು. ಆ ಬಳಿಕ ತಮ್ಮ ಭಾಷಣದ ಉದ್ದಕ್ಕೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಜೊತೆಗೆ ಮೋದಿಯನ್ನು ಸೋಲಿಸಿ ಗುಜರಾತಿಗೆ ಓಡಿಸಿ ಎಂದು ಕರೆ ನೀಡಿದರು. ಆಂಧ್ರ ಹಾಗೂ ಕರ್ನಾಟಕ ರಾಜ್ಯಗಳನ್ನು ಬಿಜೆಪಿಯಿಂದ ರಕ್ಷಿಸಬೇಕಾಗಿದೆ. ಅದಕ್ಕೆ ಇಂದು ನಾನು ಆಗಮಿಸಿದ್ದೇನೆ. ಮೋದಿ ದೇಶದ ಜನರಿಗೆ ಮಾಡಿರುವ ಮೋಸವನ್ನು ತಿಳಿಸಲು ಬಂದಿದ್ದೇನೆ. ಆಂಧ್ರಪ್ರದೇಶದಲ್ಲಿ ಅಮರಾವತಿಯನ್ನು ಅಭಿವೃದ್ಧಿ ಮಾಡಿದಂತೆ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಮಾಡಬೇಕಿದೆ. ಮಹಾತ್ಮಗಾಂಧಿ ಹುಟ್ಟಿದ ಊರಿನಲ್ಲಿ ಜನಿಸಿದ ಮೋದಿ ಸುಳ್ಳು ಹೇಳುತ್ತಿದ್ದಾರೆ. ಆದರೆ ಮಹಾತ್ಮ ಗಾಂಧಿ ಎಂದು ಸುಳ್ಳು ಹೇಳಿಲ್ಲ ಎಂದರು.

    ತುಂಗಭದ್ರಾ ನದಿ ನೀರಿನ ಸಮಸ್ಯೆ ಕುರಿತು ಕರ್ನಾಟಕ ಸರ್ಕಾರದ ಜೊತೆಗಿದ್ದು ಮಾತನಾಡುತ್ತೇವೆ. ಈ ಬಾರಿ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಅಲ್ಲದೇ ಕರ್ನಾಟಕದಲ್ಲಿಯೂ ಬಿಜೆಪಿಯನ್ನು ಹೇಳಲು ಹೆಸರಿಲ್ಲದಂತೆ ಓಡಿಸಬೇಕು ಎಂದರು.

  • ಕನ್ನಡದಲ್ಲೇ ಭಾಷಣ ಆರಂಭಿಸಿ ಮೋದಿಗೆ ಸವಾಲು ಎಸೆದ ಚಂದ್ರಬಾಬು ನಾಯ್ಡು

    ಕನ್ನಡದಲ್ಲೇ ಭಾಷಣ ಆರಂಭಿಸಿ ಮೋದಿಗೆ ಸವಾಲು ಎಸೆದ ಚಂದ್ರಬಾಬು ನಾಯ್ಡು

    – ಮೋದಿ ಗೆಲುವು ಪಡೆದರೆ ಮತ್ತೆ ಚುನಾವಣೆ ನಡೆಯಲ್ಲ
    – ಕೇಂದ್ರ ಸಂಸ್ಥೆಗಳ ದುರುಪಯೋಗ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ ಮಂಡ್ಯ ಕ್ಷೇತ್ರದಲ್ಲಿ ಇಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ನಿಖಿಲ್ ಪರ ಮತಯಾಚನೆ ಮಾಡಿದರು. ಈ ವೇಳೆ ಕನ್ನಡಲ್ಲೇ ಭಾಷಣ ಆರಂಭಿಸಿ ನೆರೆದಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

    ಲೊಕಸಭಾ ಚುನಾವಣೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರು ಸೋಲುವುದು ಖಚಿತವಾಗಿದ್ದು, ಗುಜರಾತ್‍ಗೆ ಮರಳಿ ಹಿಂದಿರುಗಲಿದ್ದಾರೆ. ದಕ್ಷಿಣ ಭಾರತ ಜನತೆಗೆ ದೇವೇಗೌಡರು ಹಿರಿಯರಾಗಿದ್ದು, ಅವರೊಂದಿಗೆ ಕೆಲಸ ಮಾಡಲು 1995ರಲ್ಲಿ ನನಗೆ ಅವಕಾಶ ಲಭಿಸಿತ್ತು. ಆ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಅವರು ದೇಶಕ್ಕಾಗಿ ಪ್ರಧಾನಿಯಾದರು. ಅಂದು ಕೂಡ ಬಿಜೆಪಿ ಅಧಿಕಾರಕ್ಕೆ ಬರದಂತೆ ಮಾಡಲು ದೇವೇಗೌಡ ಅವರಿಗೆ ಅವಕಾಶ ನೀಡಲಾಯಿತು ಎಂದು ತಿಳಿಸಿದರು.

    ಮಣ್ಣಿನ ಮಗ ಆಗಿರುವ ದೇವೇಗೌಡರು ಸತತ 24 ಗಂಟೆ ರೈತರ ಅಭಿವೃದ್ಧಿಗಾಗಿ ಕೆಲಸ ಮಾಡಲು ಚಿಂತನೆ ನಡೆಸುತ್ತಾರೆ. ಅವರ ನಾಯಕತ್ವದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟ. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಮೋದಿ ಮನೆಗೆ ಹೋಗಬೇಕು. ನೋಟು ನಿಷೇಧ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಪೆಟ್ಟು ಕೊಟ್ಟಿದ್ದಾರೆ. ನಿರುದ್ಯೋಗ, ಕೃಷಿ ವಲಯದಲ್ಲಿ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ 2 ಸಾವಿರ ನೋಟು ಜಾರಿ ಮಾಡಿ ಭ್ರಷ್ಟಾಚಾರವನ್ನು ಹೆಚ್ಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ದೇಶದ ಅತಿದೊಡ್ಡ ಭ್ರಷ್ಟರಾಗಿದ್ದು, ಅವರಿಗೆ ವಿರೋಧಿಗಳ ವಿರುದ್ಧ ಆರೋಪ ಮಾಡುವೆ ಕೆಲಸ ಆಗಿದೆ ಎಂದರು.

    ದೇಶದ ರಕ್ಷಣೆಯಲ್ಲೂ ರಾಜಿ ಮಾಡಿ ರಫೇಲ್ ಹಗರಣ ಮಾಡಿದ್ದಾರೆ. ಕೇಂದ್ರ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂಧ್ರ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಐಟಿ, ಇಡಿ ದಾಳಿ ನಡೆಸಲಾಗಿದೆ. ಚುನಾವಣಾ ಆಯೋಗ ಕೂಡ ಕೇಂದ್ರ ಸರ್ಕಾರ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿದ್ದು, ನಾವು ಇವಿಎಂ ವಿರುದ್ಧ ಹೋರಾಟ ನಡೆಸಿದ್ದೇವೆ. ನಿನ್ನೆ ಕೂಡ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮನವಿ ಮಾಡಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಶೇ. 50 ರಷ್ಟು ಇವಿಎಂಗಳನ್ನು ತಾಳೆ ನೋಡಿ ಪರೀಕ್ಷೆ ಮಾಡಲು ಮನವಿ ಮಾಡುತ್ತೇವೆ. ಈ ಬಗ್ಗೆ ನೀವು ಬೆಂಬಲ ನೀಡಬೇಕು ಎಂದರು.

    ಇದೇ ವೇಳೆ ಮೋದಿ ಅವರಿಗೆ ಉತ್ತರ ನೀಡುವಂತೆ ಕೆಲ ಸವಾಲುಗಳನ್ನು ಎಸೆದ ಅವರು, ದೇಶದಲ್ಲಿ 40 ವರ್ಷದಲ್ಲಿ ಮೊದಲ ಬಾರಿಗೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ನಿಮ್ಮ ಉತ್ತರ ಏನು? ದೇಶದಲ್ಲಿ ವಾಯಮಾಲಿನ್ಯ ಹೆಚ್ಚಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಗುಂಪು ಗಲಭೆಗಳು ಹೆಚ್ಚಾಗಿದ್ದು, ಭಾರತ ರೂಪಾಯಿ ಬೆಲೆ ಕೂಡ ನಷ್ಟಕ್ಕೆ ಕಾರಣವಾಗಿದೆ. ಪರಿಸರ ರಕ್ಷಣೆಯಲ್ಲೂ ದೇಶ ಹಿಂದುಳಿದಿದೆ. ಈ ಎಲ್ಲಾ ಅಂಶಗಳು ನನ್ನ ಆರೋಪಗಳಲ್ಲ ಕೆಲ ವರದಿಗಳ ಅಂಕಿ ಅಂಶಗಳು. ಇದುವರೆಗೂ ಒಂದು ಪತ್ರಿಕಾಗೋಷ್ಠಿ ನಡೆಸಿದ ನೀವು ಈ ಬಗ್ಗೆ ಉತ್ತರಿಸಿ ಎಂದು ಸವಾಲು ಎಸೆದರು.

    ಕುಮಾರಸ್ವಾಮಿ ಅವರು ವಿಷನ್ ಇರುವ ನಾಯಕರಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ದೇಶಕ್ಕೆ ಯುವ ನಾಯಕರ ಅಗತ್ಯ ಇದ್ದು, ನಿಖಿಲ್ ವಿರುದ್ಧ ನಿಂತಿರುವ ಅಭ್ಯರ್ಥಿಗೆ ಹಿಂಬಾಗಿಲಿನಿಂದ ಬಿಜೆಪಿ ಬೆಂಬಲ ನೀಡಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಚಿಂತನೆ ಮಾಡಿ ಮತ ನೀಡಬೇಕು. 2019ರ ಚುನಾವಣೆ ಬಹುಮುಖ್ಯವಾಗಿದ್ದು ಈ ಬಾರಿ ಮೋದಿ ಸೋಲದಿದ್ದರೆ ಮುಂದಿನ ಬಾರಿ ಚುನಾವಣೆಯೇ ನಡೆಸಲು ಅವರು ಅವಕಾಶ ನೀಡಲ್ಲ. ಸದ್ಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕ, ಆಂಧ್ರಕ್ಕೆ ಸೇರಿದಂತೆ ದಕ್ಷಿಣದ ರಾಜ್ಯಗಳು ಸೇರಿ ಹಲವು ರಾಜ್ಯಗಳಿಗೆ ಮೋದಿ ಕೊಡುಗೆ ನೀಡಿಲ್ಲ. ಆದ್ದರಿಂದ ಈ ಬಾರಿ ಮೋದಿರನ್ನು ಸೋಲಿಸಿ ಎಂದು ಕರೆ ನೀಡಿದರು.

    ವಿವಿ ಪ್ಯಾಟ್ ನಲ್ಲಿ ಮತ ಹಾಕಿದರೆ 7 ಸೆಕೆಂಡಿನಲ್ಲಿ ಮತಗಳು ಬದಲಾಗುತ್ತೆ. ಈ ಬಗ್ಗೆ ನಮಗೆ ಅನುಮಾನ ಇದ್ದು, ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ದೇಶ ದ್ರೋಹಿಗಳು ಎನ್ನುತ್ತಾರೆ. ಪಾಕ್ ಪ್ರಧಾನಿ, ಮೋದಿ ಇಬ್ಬರು ಒಂದೇ. ದೇಶಕ್ಕೆ ಮೋದಿ ಮೋಸ ಮಾಡಿದ್ದಾರೆ. ಆದ್ದರಿಂದ ನಾನು ಅಮರಾವತಿಯಿಂದ ಬಂದು ಮನವಿ ಮಾಡುತ್ತಿದ್ದು, ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿ ಎಂದರು.

  • ಪ್ರಧಾನಿ ಮೋದಿ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಣೆ: ಚಂದ್ರಬಾಬು ನಾಯ್ಡು

    ಪ್ರಧಾನಿ ಮೋದಿ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಣೆ: ಚಂದ್ರಬಾಬು ನಾಯ್ಡು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಭೀರವಾಗಿ ಆರೋಪಿಸಿದ್ದಾರೆ.

    ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಆಂಧ್ರ ಪ್ರದೇಶದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣಾ ಮತದಾನದಲ್ಲಿ ಶೇ.30ರಿಂದ 40ರಷ್ಟು ಮತ ಯಂತ್ರಗಳು (ಇವಿಎಂ) ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಈ ಸಂಬಂಧ ಚುನಾವಣಾ ಆಯೋಗ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಧರಣಿ ನಡೆಸುತ್ತೇವೆ ಎಂದು ಹೇಳಿದರು.

    ಇವಿಎಂ ಕಾರ್ಯನಿರ್ವಹಣೆಯಲ್ಲಿ ಲೋಪದೋಷ ಕಂಡುಬಂದಿದೆ. ಹೀಗಾಗಿ ಸುಮಾರು 150 ಮತ ಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಚುನಾವಣಾ ಆಯೋಗ ವಿರುದ್ಧ ಗಂಭೀರ ಆರೋಪ ಮಾಡಿದ ಚಂದ್ರಬಾಬು ನಾಯ್ಡು ಅವರು, ಚುನಾವಣಾ ಆಯೋಗವು ನಮ್ಮೊಂದಿಗೆ ಸಹಕರಿಸುತ್ತಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ತಿಳಿಸಿದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

    ಮತದಾರರಿಗೆ ಭಾರೀ ಪ್ರಮಾಣದಲ್ಲಿ ಮೋಸ ಮಾಡಲಾಗುತ್ತಿದೆ. ಗೊಂದಲ ಸೃಷ್ಟಿಸಲಾಗಿದೆ. ಅಧಿಕಾರಗಳ ಮೂಲದ ಪ್ರಕಾರ 4,583 ಇವಿಎಂ ಸಮಸ್ಯೆಯಾಗಿದ್ದು, ಇದು ದೇಶದ ದುರಂತ ಎಂದು ದೂರಿದರು.

  • ಪ್ರಧಾನಿ ಹುದ್ದೆಗೆ ಚಂದ್ರಬಾಬು ನಾಯ್ಡು ಹೆಸರು ತೇಲಿಬಿಟ್ಟ ಎಚ್‍ಡಿಡಿ

    ಪ್ರಧಾನಿ ಹುದ್ದೆಗೆ ಚಂದ್ರಬಾಬು ನಾಯ್ಡು ಹೆಸರು ತೇಲಿಬಿಟ್ಟ ಎಚ್‍ಡಿಡಿ

    – ಎಲ್ಲ ವಿಪಕ್ಷಗಳನ್ನು ನಾಯ್ಡು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ
    – ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ: ನಾಯ್ಡು

    ಅಮರಾವತಿ: ಮಹಾಘಟಬಂಧನ್ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಈ ಮಧ್ಯೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ತೇಲಿಬಿಟ್ಟಿದ್ದಾರೆ.

    ಆಂಧ್ರ ಪ್ರದೇಶದ ತಿರುವೂರಿನಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಸನ್ನಿವೇಶದಲ್ಲಿ ಮಹತ್ವದ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದಾರೆ. ಅವರು ಯಾಕೆ ದೇಶದ ಪ್ರಧಾನಿಯಾಗಬಾರದು ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಚಂದ್ರಬಾಬು ನಾಯ್ಡು ಅವರು, ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದರು.

    ಎಚ್.ಡಿ.ದೇವೇಗೌಡ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಒಡ್ಡುವ ಬಲಿಷ್ಠ ನಾಯಕ ಯಾರು ಎನ್ನುವುದೇ ಪ್ರಶ್ನೆಯಾಗಿದೆ. ಮಾಧ್ಯಮಗಳಲ್ಲಿ ಇದೇ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹೀಗಾಗಿ ಮೋದಿ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಲು ಚಂದ್ರಬಾಬು ನಾಯ್ಡು ಸಮರ್ಥ ನಾಯಕರಾಗಿದ್ದಾರೆ ಎಂದು ಹೇಳಿದರು.

    ಪ್ರಧಾನಿ ಮೋದಿ ಪ್ರಜಾಪ್ರಭುತ್ವವನ್ನು ನಾಶ ಮಡಲು ಯತ್ನಿಸುತ್ತಿದ್ದಾರೆ. ಆದರೆ ಚಂದ್ರಬಾಬು ನಾಯ್ಡು ಅವರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮೋದಿ ಅವರನ್ನು ಎದುರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಪ್ರಧಾನಿಯಾಗಲು ಸಮರ್ಥರು ಎಂದು ತಿಳಿಸಿದರು.

    ಪ್ರಾದೇಶಿಕ ಪಕ್ಷಗಳು ಸ್ವಾರ್ಥ- ಸ್ವಹಿತಾಸಕ್ತಿ ಹೊಂದಿದ್ದು, ಒಗ್ಗೂಡುವುದು ಸುಲಭವಲ್ಲ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 23 ಪಕ್ಷಗಳನ್ನು ಸೇರಿಸಿ ಎನ್‍ಡಿಎ ಮೈತ್ರಿಕೂಟ ಮುನ್ನಡೆಸಿದ್ದರು. ಆ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧವನ್ನೂ ವಾಜಪೇಯಿ ಗೆದ್ದರು. ಆದರೆ ಪ್ರಧಾನಿ ಮೋದಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಬಗ್ಗೆ ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ದೂರಿದರು.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನನ್ನು ಸೋಲಿಸಲು ಚಂದ್ರಬಾಬು ನಾಯ್ಡು ಅವರು ಅನೇಕ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದರು. ಈ ನಿಟ್ಟಿನಲ್ಲಿ ಮಹಾಘಟಬಂಧನ್ ರೂಪಿಸಲಾಗಿತ್ತು. ಆದರೆ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ನಾಯಕರು ಸ್ಪಷ್ಟಪಡಿಸಿಲ್ಲ. ಬಿಎಸ್‍ಪಿ ನಾಯಕಿ ಮಯಾವತಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರುಗಳು ಪ್ರಧಾನಿ ರೇಸ್‍ನಲ್ಲಿ ಕೇಳಿ ಬರುತ್ತಿವೆ.

    ಆಂಧ್ರ ಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಸ್ಥಾನಗಳಿದ್ದು, ಒಂದೇ ಹಂತದಲ್ಲಿ ಏಪ್ರಿಲ್ 11ರಂದು ಮತದಾನ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರ ವೈಎಸ್‍ಆರ್ ಪಕ್ಷವು 8 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು.

  • ಸಿಎಂ ಚಂದ್ರಬಾಬು ನಾಯ್ಡು ಆಸ್ತಿಗಿಂತ 3 ವರ್ಷದ ಮೊಮ್ಮಗನ ಆಸ್ತಿಯೇ 6 ಪಟ್ಟು ಹೆಚ್ಚು!

    ಸಿಎಂ ಚಂದ್ರಬಾಬು ನಾಯ್ಡು ಆಸ್ತಿಗಿಂತ 3 ವರ್ಷದ ಮೊಮ್ಮಗನ ಆಸ್ತಿಯೇ 6 ಪಟ್ಟು ಹೆಚ್ಚು!

    ಹೈದರಾಬಾದ್: ಆಂಧ್ರಪ್ರದೇಶ ಸಿಎಂ, ತೆಲುಗುದೇಶಂ (ಟಿಡಿಪಿ) ಪಕ್ಷದ ಮುಖ್ಯಸ್ಥರಾಗಿರುವ ಚಂದ್ರಬಾಬು ನಾಯ್ಡು ಸತತವಾಗಿ 8ನೇ ವರ್ಷ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದು, ಅವರಿಗಿಂತ ಮೊಮ್ಮಗ 6 ಪಟ್ಟು ಹೆಚ್ಚು ಆಸ್ತಿಯನ್ನು ಹೊಂದಿದ್ದಾನೆ.

    ಚಂದ್ರಬಾಬು ನಾಯ್ಡು ತನ್ನ ಬಳಿ 2.99 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಅವರ 3 ವರ್ಷದ ಮೊಮ್ಮದ ನಾರಾ ದೇವಾಂಶ್ 18.71 ಕೋಟಿ ಆಸ್ತಿಯನ್ನು ಹೊಂದಿದ್ದಾನೆ.

    ಕಳೆದ ವರ್ಷಕ್ಕಿಂತ ಈ ಬಾರಿ ನಾಯ್ಡು ಅವರ ಆಸ್ತಿ 46 ಲಕ್ಷ ರೂ. ಹೆಚ್ಚಾಗಿದೆ. ಆದರೆ ಕಳೆದ ಬಾರಿ ಹೂಡಿಕೆ ಮಾಡಿದ್ದ 5.64 ಕೋಟಿ ರೂ. ಮೊತ್ತ 5.31 ಕೋಟಿ ರೂ.ಗೆ ಇಳಿಕೆ ಆಗಿದೆ.

    ನಾಯ್ಡು ಅವರ ಮೊಮ್ಮಗ 16.17 ಕೋಟಿ ರೂ. ಮೌಲ್ಯದ ಮನೆಯನ್ನು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಹೊಂದಿದ್ದು, 2.49 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಹೆರಿಟೇಜ್ ಫುಡ್ಸ್ ಸಂಸ್ಥೆಯ ಮುಖ್ಯಸ್ಥರಾಗಿರುವ ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಕುಟುಂಬದಲ್ಲಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಕಳೆದ ಬಾರಿ 25.41 ಕೋಟಿ ರೂ. ಇದ್ದ ಅವರ ಆಸ್ತಿ ಈಗ 31.01 ಕೋಟಿ ರೂ.ಗೆ ಏರಿಕೆಯಾಗಿದೆ.

    ಅಂದಹಾಗೇ ದೇವಾಂಶ್, ಚಂದ್ರಬಾಬು ನಾಯ್ಡು ಮಾತ್ರವಲ್ಲದೇ ತಂದೆ ನಾರಾ ಲೋಕೇಶ್ ಅವರಗಿಂತಲೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾನೆ. ಲೋಕೇಶ್ ಟಿಡಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಈ ಬಾರಿ ಅವರ ಆಸ್ತಿಯಲ್ಲಿ 15.21 ಕೋಟಿ ರೂ. ಹೆಚ್ಚಳವಾಗಿದೆ. 2017 ರಲ್ಲಿ ಲೋಕೇಶ್ 21.40 ಕೋಟಿ ರೂ. ಆಸ್ತಿ ಹೊಂದಿದ್ದರು. ಉಳಿದಂತೆ ಲೋಕೇಶ್ ಅವರ ಪತ್ನಿ ಬ್ರಹ್ಮಣಿ ಅವರ ಆಸ್ತಿ ಕಳೆದ ಬಾರಿಗಿಂತ ಕಡಿಮೆ ಆಗಿದ್ದು, 15.01 ಕೋಟಿ ರೂ. ಆಸ್ತಿ ಹೊಂದಿದ್ದ ಅವರು ಈ ಬಾರಿ 7.72 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಂದು ಎಚ್‍ಡಿಡಿ ಭೇಟಿಗಾಗಿ ರಾಜ್ಯಕ್ಕೆ ಸಿಎಂ ಚಂದ್ರಬಾಬು ನಾಯ್ಡು ಆಗಮನ

    ಇಂದು ಎಚ್‍ಡಿಡಿ ಭೇಟಿಗಾಗಿ ರಾಜ್ಯಕ್ಕೆ ಸಿಎಂ ಚಂದ್ರಬಾಬು ನಾಯ್ಡು ಆಗಮನ

    ಬೆಂಗಳೂರು: ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿರುವ ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

    ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮಾತುಕತೆ ನಡೆಸಲು ಚಂದ್ರಬಾಬು ನಾಯ್ಡು ಆಗಮಿಸುತ್ತಿದ್ದು, ಇಬ್ಬರ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಜೆಡಿಎಎಸ್ ವರಿಷ್ಠರಿಂದ ಸಲಹೆ ಪಡೆಯಲು ಚಂದ್ರಬಾಬು ನಾಯ್ಡು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.

    ಇದೇ ವೇಳೆ ಜನಾರ್ದನ ರೆಡ್ದಿಗಾಗಿ ಸಿಸಿಬಿ ಪೊಲಿಸರು ಶೋಧ ನಡೆಸುತ್ತಿರುವುದರಿಂದ ಕರ್ನಾಟಕ ಸಿಎಂ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಉಳಿದಂತೆ ಕರ್ನಾಟಕ ಪಂಚಕ್ಷೇತ್ರಗಳ ಉಪಚುನಾವಣೆಯ ಬಳಿಕ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ ವೇಳೆಯೂ ಚಂದ್ರಬಾಬು ನಾಯ್ಡು ಮಾಜಿ ಪ್ರಧಾನಿ ದೇವೇಗೌಡ ಶುಭಾಶಾಯ ತಿಳಿಸಿದ್ದರು.  ಇದನ್ನು ಓದಿ: ದೇಶ ಉಳಿಸಲು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇವೆ: ಚಂದ್ರಬಾಬು ನಾಯ್ಡು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1 ಲಕ್ಷ ರೂ. ಬಹುಮಾನ ನೀಡಿ ನಟನನ್ನು ಆಯ್ಕೆ ಮಾಡಿದ್ರು ಆರ್‌ಜಿವಿ

    1 ಲಕ್ಷ ರೂ. ಬಹುಮಾನ ನೀಡಿ ನಟನನ್ನು ಆಯ್ಕೆ ಮಾಡಿದ್ರು ಆರ್‌ಜಿವಿ

    ಬೆಂಗಳೂರು: ಹಲವು ಬಾರಿ ವಿವಾದಗಳಿಂದಲೇ ಸುದ್ದಿಯಾಗಿರುವ ಟಾಲಿವುಡ್ ನಿರ್ದೇಶಕ ರಾಮ್‍ಗೋಪಲ್ ವರ್ಮಾ ಸದ್ಯ ತಮ್ಮ ಮುಂದಿನ ಚಿತ್ರದ ನಟನನ್ನು ಹುಡುಕಿಕೊಟ್ಟ ವ್ಯಕ್ತಿಗೆ 1 ಲಕ್ಷ ರೂ. ಬಹುಮಾನ ನೀಡಿದ್ದಾರೆ.

    ಹೌದು, ವರ್ಮಾ ಸದ್ಯ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್‍ಟಿಆರ್ ಅವರ ಪತ್ನಿ ಲಕ್ಷ್ಮೀ ಕುರಿತು ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಹಾಲಿ ಸಿಎಂ ಆಗಿರುವ ಚಂದ್ರಬಾಬು ನಾಯ್ಡು ಅವರ ಪಾತ್ರಕ್ಕೆ ಅವರಂತೆ ಕಾಣುವ ವ್ಯಕ್ತಿಯ ಹುಡುಕಾಟ ನಡೆಸಿದ ವೇಳೆ ಅವರಿಗೆ ಒಂದು ವಿಡಿಯೋ ಒಂದು ಲಭ್ಯವಾಗಿದೆ.

    ವಿಡಿಯೋ ನೋಡುತ್ತಿದಂತೆ ವ್ಯಕ್ತಿಯ ಹುಡುಕಾಟ ಆರಂಭಿಸಿದ ಆರ್‌ಜಿವಿ, ವ್ಯಕ್ತಿಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಈತನ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರಂತೆ ಸದ್ಯ ವ್ಯಕ್ತಿಯೊಬ್ಬರು ಆತನ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    Laksmisntr@gmail.com ಇಮೇಲ್ ಕ್ರಿಯೇಟ್ ಮಾಡಿದ್ದ ಆರ್‌ಜಿವಿ ಈ ಮಾಹಿತಿ ನೀಡುವಂತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಸಿನಿಮಾ ಪ್ರಚಾರವನ್ನು ಮಾಡಿದ್ದರು. ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವ್ಯಕ್ತಿ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನೋಡಲು ಚಂದ್ರ ಬಾಬು ಅವರಂತೆ ಇರುವುದೇ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣ ಎಂದು ನಿರ್ದೇಶಕ ತಿಳಿಸಿದ್ದಾರೆ.

    ಸದ್ಯ ಹೈದರಾಬಾದ್ ನ ರೋಹಿತ್ ಎಂಬವರು ವಿಡಿಯೋದಲ್ಲಿ ಇರುವ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದಕ್ಕೆ ನಿಮಗೆ ಧನ್ಯವಾದ, ನೀವು ಕೂಡ ಸಿನಿಮಾ ಬಹುದೊಡ್ಡ ಕೊಡುಗೆ ನೀಡಿ ಚಿತ್ರದ ಭಾಗವಾಗಿದ್ದೀರಿ. ನಿಮ್ಮ ಬ್ಯಾಂಕ್ ಮಾಹಿತಿ ಕಳುಹಿಸಿದರೆ ಬಹುಮಾನದ ಮೊತ್ತ 1 ಲಕ್ಷ ರೂ. ಗಳನ್ನು ಹಾಕುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರಂಟ್ ಜಾರಿ

    ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರಂಟ್ ಜಾರಿ

    ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ವಿರುದ್ಧ 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನ್ಯಾಯಾಲಯ ಬಂಧನದ ವಾರಂಟ್  ಜಾರಿ ಮಾಡಿದೆ.

    ಮಹಾರಾಷ್ಟ್ರದ ನಾಂದೇಡ್ ನಲ್ಲಿರುವ ಧರ್ಮಬಾದ್ ಕೋರ್ಟ್ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಆಂಧ್ರಪ್ರದೇಶ ಕ್ಯಾಬಿನೆಟ್ ಮಿನಿಸ್ಟರ್ ಡಿ ಉಮಾಮಹೇಶ್ವರ್ ರಾವ್ ಹಾಗೂ 14 ಮಂದಿ ವಿರುದ್ಧ ವಾರಂಟ್ ಜಾರಿ ಮಾಡಿದೆ. ಅಲ್ಲದೇ ಸೆಪ್ಟೆಂಬರ್ 21ರ ಒಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.

    ಅವಿಭಜಿತ ಆಂಧ್ರಪ್ರದೇಶ ಇದ್ದಾಗ 2010ರಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥರು ಆಗಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ಮಹಾರಾಷ್ಟ್ರದ ಬಾಬ್ಲಿ ಯೋಜನೆ ಕುರಿತು ಪ್ರತಿಭಟನೆ ನಡೆಸಿದ್ದರು. ಟಿಡಿಪಿ ತನ್ನ ಶಾಸಕರೊಂದಿಗೆ ಮಹಾರಾಷ್ಟ್ರದ ನಿಷೇಧಿತ ಪ್ರದೇಶವಾದ ಬಾಬ್ಲಿ ಯೋಜನೆ ಪ್ರದೇಶಕ್ಕೆ ಪ್ರತಿಭಟನಾ ಯಾತ್ರೆ ನಡೆಸಿತ್ತು. ಈ ವೇಳೆ ಗೋದಾವರಿ ನದಿಗೆ ಮಹಾರಾಷ್ಟ್ರ ಸರ್ಕಾರ ನಿರ್ಮಾಣ ಮಾಡುತ್ತಿರುವ ಬಾಬ್ಲಿ ಯೋಜನೆ ನಿಯಮಗಳ ವಿರುದ್ಧವಾಗಿದೆ ಎಂದು ಆರೋಪಿಸಿತ್ತು.

    ಅಂದು ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧಿ ಪಕ್ಷದ ನಾಯಕತ್ವದ ಸ್ಥಾನ ಹೊಂದಿದ್ದರು. ಯಾತ್ರೆಯ ವೇಳೆ ಭಾಗವಹಿಸಿದ್ದ 40 ಶಾಸಕರು ಹಾಗೂ ಚಂದ್ರಬಾಬು ನಾಯ್ಡುರನ್ನು ಅಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಈ ಪ್ರಕರಣವನ್ನು ಮರುವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

    ಸದ್ಯ ಕೋರ್ಟ್ ನೋಟಿಸ್ ಪಡೆದಿರುವ ಟಿಡಿಪಿ ಮುಖಂಡ ಬುದ್ಧ ವೆಂಕಣ್ಣ ಈ ಕುರಿತು ವಿಜಯವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದಲ್ಲಿ ತಮಗೆ ಸಮನ್ಸ್ ಜಾರಿಯಾಗಲು ಪ್ರಧಾನಿ ನರೇಂದ್ರಮೋದಿ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 5 ರೂ.ಗೆ ಊಟ, ತಿಂಡಿ ನೀಡುವ `ಅಣ್ಣಾ ಕ್ಯಾಂಟೀನ್’ ಆಂಧ್ರದಲ್ಲಿ ಉದ್ಘಾಟನೆ

    5 ರೂ.ಗೆ ಊಟ, ತಿಂಡಿ ನೀಡುವ `ಅಣ್ಣಾ ಕ್ಯಾಂಟೀನ್’ ಆಂಧ್ರದಲ್ಲಿ ಉದ್ಘಾಟನೆ

    ಅಮರಾವತಿ: ಕೇವಲ 5 ರೂಪಾಯಿಗೆ ಊಟ ಮತ್ತು ಉಪಹಾರ ವಿತರಿಸುವ `ಅಣ್ಣಾ ಕ್ಯಾಂಟೀನ್’ ಅನ್ನು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡುರವರು ವಿಜಯವಾಡದಲ್ಲಿ ಉದ್ಘಾಟಿಸಿದ್ದಾರೆ.

    ಚಂದ್ರಬಾಬು ನಾಯ್ಡು ಅವರು ಇಂದು ವಿಜಯವಾಡದ ಭವಾನಿಪುರದಲ್ಲಿ ಅಣ್ಣಾ ಕ್ಯಾಂಟೀನ್ ಉದ್ಘಾಟಿಸಿದರು. ಇದಲ್ಲದೇ ರಾಜ್ಯಾದ್ಯಂತ ಒಟ್ಟು 60 ಕ್ಯಾಂಟೀನ್ ಗಳು ಇಂದು ಉದ್ಘಾಟನೆಗೊಂಡಿವೆ. ಈ ವೇಳೆ ಮಾತನಾಡಿದ ಅವರು ರಾಜ್ಯಾದ್ಯಂತ ಒಟ್ಟು 203 ಕ್ಯಾಂಟೀನ್ ಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

    ಆಂಧ್ರದ ಪುರಸಭೆ ಮತ್ತು ನಗರಾಭಿವೃದ್ಧಿ ಸಚಿವರಾದ ಪಿ ನಾರಾಯಣ್ ರವರು ಮಾತನಾಡಿ, ಬಡವರು ಕೇವಲ 15 ರೂಪಾಯಿಗಳಿಗೆ ದಿನದ ಮೂರು ಹೊತ್ತಿನ ಆಹಾರ ಪಡೆಯಬೇಕೆಂಬುದು `ಅಣ್ಣಾ ಕ್ಯಾಂಟೀನ್’ನ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್ ಗಳಲ್ಲಿ ಕೇವಲ 5 ರೂಪಾಯಿಗಳಿಗೆ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ಬೆಳಿಗ್ಗೆ ಮೂರು ಇಡ್ಲಿ, ಮೂರು ಪೂರಿ, ಉಪ್ಪಿಟ್ಟು ಹಾಗೂ ಪೊಂಗಲ್ ಅನ್ನು ಉಪಹಾರವಾಗಿ ನೀಡಿದರೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನಕ್ಕೆ ಅನ್ನ ಸಾಂಬಾರ್, ದಾಲ್, ಉಪ್ಪಿನಕಾಯಿ, ಕರ್ರಿ ಮತ್ತು ಮೊಸರು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಈ ಯೋಜನೆಯ ಉಸ್ತುವಾರಿಯನ್ನು ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ ನೀಡಲಾಗಿದ್ದು, ದಿನನಿತ್ಯ 2 ಲಕ್ಷ ಮಂದಿಗೆ ಆಹಾರ ಪೂರೈಸುವ ಉದ್ದೇಶವನ್ನು `ಅಣ್ಣಾ ಕ್ಯಾಂಟೀನ್’ ಹೊಂದಿದೆ ಎಂದು ನಾರಾಯಣ್ ರವರು ಹೇಳಿದ್ದಾರೆ.

    ಆರಂಭದಲ್ಲಿ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಆರಂಭಗೊಂಡ ಬಳಿಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು.