Tag: ಸಿಎಂ ಕುಮಾರಸ್ವಾಮಿ

  • ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರ ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

    ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರ ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ

    ಬೆಂಗಳೂರು: ಬಿಜೆಪಿ ಸರ್ಕಾರ ಪಾಪದ ಹಣದಿಂದಲೇ ಈ ದಿನ ಅಧಿಕಾರಕ್ಕೆ ಬಂದು ರಾಜಕಾರಣ ಮಾಡುತ್ತಿದೆ. ವಿಧಾನಸಭೆಯಿಂದ ಪಂಚಾಯಿತಿ ಮೆಂಬರ್ ವರೆಗೆ ಖರೀದಿ ಮಾಡುವ ನಡವಳಿಕೆ ಇಟ್ಟುಕೊಂಡಿರುವ ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.

    ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಿ.ಕೆ ಪಾಳ್ಯದಲ್ಲಿ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಹಾಗೂ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ನೇತೃತ್ವದಲ್ಲಿ 40 ಸಾವಿರ ದಿನಸಿ ಕಿಟ್ ಗಳನ್ನು ಹಂಚುವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಪಾಪದ ಹಣವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಸೂಸೈಡ್ ಮಾಡಿಕೊಳ್ಳೋಕೆ ಯಾಕೆ ಹೋದರು ಎನ್ನುವುದು ತಿಳಿದಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಈತನೇ ಕಿಂಗ್ ಪಿನ್ ಆಗಿ ಕೆಲಸ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಅರಸಿಕೇರೆಯಲ್ಲಿ ಸ್ಪರ್ಧೆ ಮಾಡಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಂಪಾದನೆ ಆದ ಕಳ್ಳಹಣದಲ್ಲಿ ಜನಪ್ರತಿನಿಧಿಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ. ನಾಯಕರನ್ನು ಕೊಂಡುಕೊಳ್ಳುವ ಕೆಲಸ ವಿಧಾನಸಭೆಯಲ್ಲಿ ಶುರುವಾಗಿ ಇದೀಗ ಸ್ಥಳೀಯ ಮಟ್ಟಕ್ಕೆ ವಿಸ್ತರಣೆ ಮಾಡಲಾಗಿದೆ.

    ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ನಡವಳಿಕೆಯನ್ನು ಬಿಡಬೇಕು. ತುರ್ತು ಪರಿಸ್ಥಿತಿ ಘೋಷಣೆ ಮಾಡದೆ ಇದ್ದರು ಸಹ ಈಗ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಬದ್ದವಾಗಿ ಸಂವಿಧಾನದ ಪ್ರಕಾರ ಯಾವುದೇ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ. ಕೇವಲ ಸರ್ಕಾರದ ಆದೇಶದ ಮೇಲೆ ಮಾಡುತ್ತಿದ್ದು, ಜನಸಾಮಾನ್ಯರು ಜಾಗೃತರಾಗಬೇಕು ಇಲ್ಲದಿದ್ದರೆ, ಮುಂದಿನ ದಿನಗಳು ಇನ್ನಷ್ಟು ದುಸ್ಥರವಾಗುತ್ತೆ. ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಫುಡ್ ಕಿಟ್‍ಗಳ ಮೇಲೆ ಬಿಜೆಪಿಯವರು ತಮ್ಮ ಫೋಟೋ ಹಾಕಿಸಿ ಪ್ರಚಾರ ಪಡೆಯುತ್ತಿದ್ದು, ಮಹಾದಾನಿಗಳು ಎಂದು ಪ್ರಚಾರ ಪಡೆದು ಅದರಲ್ಲೂ ಸಹ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಸರ್ಕಾರದ ವಿರುದ್ಧ ಹಾರಿಹಾಯ್ದರು. ಇದನ್ನೂ ಓದಿ:ಹತ್ತು ಲಕ್ಷ ಹಣದೊಂದಿಗೆ ಸುದ್ದಿಗೋಷ್ಠಿ ನಡೆಸಿದ ಹೆಚ್‍ಡಿ.ರೇವಣ್ಣ, ಶಿವಲಿಂಗೇಗೌಡ

  • ವಿನಾಕಾರಣ ಸದನದಲ್ಲಿ ಕಾಲಹರಣ ಮಾಡಲಾಗುತ್ತಿದೆ: ಬಿಎಸ್‍ವೈ

    ವಿನಾಕಾರಣ ಸದನದಲ್ಲಿ ಕಾಲಹರಣ ಮಾಡಲಾಗುತ್ತಿದೆ: ಬಿಎಸ್‍ವೈ

    – ವಿಧಾನಸೌಧದಿಂದ ಮತ್ತೆ ರೆಸಾರ್ಟಿಗೆ ಶಾಸಕರು ಶಿಫ್ಟ್

    ಬೆಂಗಳೂರು: ಸದನದಲ್ಲಿ ವಿನಾಕಾರಣ ಸದಸ್ಯರಿಗೆ ಚರ್ಚೆ ನಡೆಸಲು ಹೆಚ್ಚು ಸಮಯ ಕೊಟ್ಟು ಕಾಲಹರಣ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

    ವಿಧಾನಸಭಾ ಕಲಾಪ ಮುಂದೂಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‍ವೈ, ಸ್ಪೀಕರ್ ರಮೇಶ್ ಕುಮಾರ್ ಅವರು ಶುಕ್ರವಾರ ಸಂಜೆ 8.15ರ ವೇಳೆಗೆ ಬಂದು ಸದನದಲ್ಲಿ ಸೋಮವಾರ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಎಲ್ಲಾ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಮುಂದೇ ಏನಾಗಲಿದೆ ಎಂದು ಕಾದು ನೋಡುತ್ತೇವೆ ಎಂದರು.

    ಇಡೀ ದೇಶನದ ಜನರು ಸದನವನ್ನು ಗಮನಿಸುತ್ತಿದ್ದಾರೆ. ಮುಂಬೈನಲ್ಲಿರುವ ಶಾಸಕರಿಗೆ ಸದನಕ್ಕೆ ಬರಲು ಒತ್ತಾಯಿಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅವರು 98 ಹಾಗೂ ನಾವು 106 ಶಾಸಕರು ಇದ್ದೇವೆ. ಸೋಮವಾರ ಏನಾಗುತ್ತೆ ಎನ್ನುವುದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಇತ್ತ ಸೋಮವಾರ ಸದನ ಮುಂದೂಡಿಕೆ ಆಗಿರುವುದರಿಂದ ಬಿಜೆಪಿ ಶಾಸಕರು ರೆಸಾರ್ಟಿಗೆ ತೆರಳಲು ಸಿದ್ಧತೆ ನಡೆಸಿದರು. ನಿನ್ನೆ ಬೆಳಗ್ಗೆಯಿಂದಲೂ ವಿಧಾನಸೌಧದಲ್ಲೇ ಇರುವ ಶಾಸಕರು ಸೋಮವಾರದವರೆಗೂ ರೆಸಾರ್ಟ್ ವಾಸ್ತವ್ಯ ಮುಂದೂವರಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಮೈತ್ರಿ ಸರ್ಕಾರದ ನಡೆಯಿಂದ ಬಿಎಸ್‍ವೈ ಶಾಸಕರಿಗೆ ಒಗ್ಗಟ್ಟಿನಿಂದ ಇರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ನಾಳೆ ಮತ್ತೆ ರೆಸಾರ್ಟಿನಲ್ಲಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಜೆಡಿಎಸ್ ಶಾಸಕರು ಕೂಡ ರೆಸಾರ್ಟ್ ಕಡೆ ನಡೆದಿದ್ದು, ಸೋಮವಾರದವರೆಗೂ ಅಲ್ಲಿಯೇ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಕೂಡ ಡಿಸಿಎಂ ಪರಮೇಶ್ವರ್ ಅವರ ನೇತೃತ್ವದಲ್ಲಿ ನಗರದ ತಾಜ್ ವಿವಾಂತ ಹೋಟೆಲ್‍ಗೆ ತೆರಳಿದ್ದಾರೆ.

  • ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ: ರೇವಣ್ಣ

    ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ: ರೇವಣ್ಣ

    ಬೆಂಗಳೂರು: ವಿಶ್ವಾಸಮತಯಾಚನೆಯ ಸಂದರ್ಭದ ಚರ್ಚೆಯ ವೇಳೆ ಲೋಕೋಪಯೋಗಿ ಸಚಿವ ರೇವಣ್ಣನವರನ್ನು ಸ್ಪೀಕರ್ ಕಾಲೆಳೆದ ಪ್ರಸಂಗ ನಡೆಯಿತು.

    ಮೈತ್ರಿ ಸರ್ಕಾರ ರಚನೆಯಾದ ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ. ಹೀಗಾಗಿ ಸದನದಲ್ಲಿ ಮಾತನಾಡಲು ನನಗೆ ಕನಿಷ್ಠ 2 ಗಂಟೆ ಸಮಯದ ಅಗತ್ಯವಿದೆ. ಈ ಬಗ್ಗೆ ಸದನದ ಗಮನಕ್ಕೆ ತರಬೇಕಿದೆ ಸ್ಪೀಕರ್ ಅವರಲ್ಲಿ ಕೈ ಮುಗಿದು ಮನವಿ ಮಾಡಿದರು.

    ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸ್ಪೀಕರ್ ಅವರು, ನಮ್ಮ ಜ್ಯೋತಿಷಿಗಳನ್ನು ಕೇಳಿ ಸಮಯವನ್ನು ನಿಗದಿ ಮಾಡುತ್ತೇನೆ. ಅಲ್ಲಿಯವರೆಗೂ ಶಿವಲಿಂಗೇಗೌಡರು ಮಾತನಾಡುತ್ತಾರೆ ಹಾಸ್ಯ ಚಟಾಕಿ ಸಿಡಿಸಿದರು.

    ಇದಕ್ಕೂ ಮುನ್ನ ಮಾತನಾಡಿದ್ದ ಸಿಎಂ ಅವರು ರೇವಣ್ಣ ಅವರ ಟೆಂಪಲ್ ರನ್ ಬಗ್ಗೆ ಟೀಕೆ ಮಾಡಿದ್ದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೇವಣ್ಣ ಅವರು ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿ ದೇವರ ಬಳಿ ಪ್ರಾರ್ಥನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಅರ್ಚಕರು ಏಲಕ್ಕಿ ಹಾರ ಅಥವಾ ನಿಂಬೆ ಹಣ್ಣು ನೀಡುತ್ತಾರೆ. ಇವುಗಳನ್ನು ಕೈಯಲ್ಲಿ ಹಿಡಿದು ರೇವಣ್ಣ ಅವರು ತಮ್ಮ ಮುಂದಿನ ಕೆಲಸಕ್ಕೆ ತೆರಳುತ್ತಾರೆ. ಆದರೆ ಇದನ್ನೇ ಟೀಕೆ ಮಾಡಿದ್ದಾರೆ. ನಮ್ಮದು ಮಾಟ ಮಂತ್ರ ಮಾಡುವ ಕುಟುಂಬ ಅಲ್ಲ. ಇಂದು ರಾಮನ ಸಂಸ್ಕೃತಿ ಬಗ್ಗೆ ಮಾತನಾಡುವ ನೀವು ಈ ಬಗ್ಗೆ ಟೀಕೆ ಮಾಡುತ್ತಾರೆ. ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳುವುದಾದರೆ ನಾವು ಜನರ ಬಳಿ ಹೋಗುವ ಸಂದರ್ಭವೇ ಬರುತ್ತಿರಲಿಲ್ಲ. ನಾವು ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ ಅಷ್ಟೇ ಎಂದರು.

  • ಧರಂ ಸಿಂಗ್ ಸಾವಿಗೆ ನಾನು ಕಾರಣ ಅಲ್ಲ: ಸಿಎಂ

    ಧರಂ ಸಿಂಗ್ ಸಾವಿಗೆ ನಾನು ಕಾರಣ ಅಲ್ಲ: ಸಿಎಂ

    ಬೆಂಗಳೂರು: ವಿಶ್ವಾಸಮತಯಾಚನೆಯನ್ನು ಸದನದಲ್ಲಿ ಮಂಡನೆ ಮಾಡಿ ಚರ್ಚೆ ಆರಂಭಿಸಿರುವ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಈ ಹಿಂದಿನ ರಾಜಕೀಯ ನಡೆಗಳ ಬಗ್ಗೆಯೂ ಮಾತನಾಡಿದ್ದು, ತಾವು ಮಾಜಿ ಸಿಎಂ ಧರಂ ಸಿಂಗ್ ಅವರ ಸಾವಿಗೆ ಕಾರಣವಲ್ಲ ಎಂದು ಹೇಳಿದ್ದಾರೆ.

    ಸದನದಲ್ಲಿ ಮಾತನಾಡಿದ ಸಿಎಂ ಅವರು, ನಾನು ನನ್ನ ಜೀವನದಲ್ಲಿ ನಮ್ಮ ತಂದೆ ದೇವೇಗೌಡರ ಅಭಿಪ್ರಾಯದ ವಿರುದ್ಧವಾಗಿ ಮೊದಲ ಬಾರಿಗೆ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ತಪ್ಪು ಮಾಡಿದ್ದೆ ಎಂದರು. ಇದೇ ವೇಳೆ ಧರಂ ಸಿಂಗ್ ಅವರ ಸಾವಿಗೆ ನಾನು ಕಾರಣವಲ್ಲ ಎಂದರು.

    ಧರಂ ಸಿಂಗ್ ಹಾಗೂ ನಾನು 5 ವರ್ಷ ಪಾರ್ಲಿಮೆಂಟಿನಲ್ಲಿ ಪಕ್ಕದಲ್ಲಿ ಕುಳಿತು ಅವರೊಂದಿಗೆ ಇದ್ದೆ. ಅವರು ನನ್ನ ತಂದೆಗೆ ಸಾಮಾನರಾಗಿದ್ದರು. ಅಂದು ಸಿಎಂ ಸ್ಥಾನಕ್ಕಾಗಿ ಅಧಿಕಾರ ಹಿಡಿಯಲಿಲ್ಲ. ಆ ಕನಸು ನನಗೆ ಇರಲಿಲ್ಲ, ನಾವು ದೇವರ ಮೇಲೆ ಭಯ ಇಟ್ಟು ಬಂದಿದ್ದೇನೆ. ಎಲ್ಲಾ ವಿಧಿಯಂತೆ ನಡೆದಿದೆಯಷ್ಟೇ ಎಂದರು.

    ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಆದರೆ ಪಕ್ಷದ, ಶಾಸಕರಿಗಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ ಎಂದರು. ಇದೇ ವೇಳೆ ನಾವು ಮಾಟಮಂತ್ರ ಮಾಡಿಸುವ ಕುಟುಂಬ ಅಲ್ಲ ಎಂದು ತಿರುಗೇಟು ನೀಡಿದ ಸಿಎಂ, ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಅರ್ಚಕರು ನೀಡಿರುವ ಏಲಕ್ಕಿ ಹಾರ, ನಿಂಬೆ ಹಣ್ಣು ತರುವುದು ತಪ್ಪೇ ಎಂದು ಪ್ರಶ್ನೆ ಮಾಡಿದರು.

    ಎಷ್ಟು ದಿನ ಇರುತ್ತೀರಿ ನೋಡುತ್ತೇನೆ: ಹೊಸದಾಗಿ ಮಾಡಲು ನೀವು ಮಾಡಿರುವ ಸಾಹಸದಿಂದ ಎಷ್ಟು ದಿನ ಸುಭದ್ರ ಸರ್ಕಾರ ನೀಡುತ್ತೀರಿ ಎಂಬುವುದನ್ನ ನಾನು ಕುಳಿತು ನೋಡುತ್ತೇನೆ. ಸರ್ಕಾರ ರಚನೆ ಆಗಿದ್ದ ಕ್ಷಣದಿಂದ ಏನೆಲ್ಲಾ ಮಾಡಿದ್ದೀರಿ ಎಂಬುವುದು ನನಗೆ ತಿಳಿದಿದೆ. ಅಲ್ಲದೇ ಇಂದು ನಡೆಯುತ್ತಿರುವ ಎಲ್ಲಾ ರಾಜಕೀಯ ನಡೆಗಳ ಬಗ್ಗೆಯೂ ಸಾಕಷ್ಟು ಫೋಟೋಗಳಿವೆ. ಆದರೆ ನೀವು ತಾತ್ಕಾಲಿಕವಾಗಿ ಸಂತಸ ಪಡೆಯುತ್ತಿದ್ದು, ಮುಂದೇ ನಿಮಗೂ ಕಾದಿದೆ ಎಂದರು.

  • ಸಿಎಂಗೆ ರಾಜ್ಯಪಾಲರ 2ನೇ ಡೆಡ್ ಲೈನ್

    ಸಿಎಂಗೆ ರಾಜ್ಯಪಾಲರ 2ನೇ ಡೆಡ್ ಲೈನ್

    ಬೆಂಗಳೂರು: ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ವಿಶ್ವಾಸಮತ ಸಾಬೀತು ಪಡಿಸಲು ಮತ್ತೊಮ್ಮೆ ಸಮಯಾವಕಾಶವನ್ನು ನಿಗದಿ ಮಾಡಿದ್ದು, ಇಂದು ವಿಧಾನಸಭೆಯ ಕಲಾಪ ಪೂರ್ಣಗೊಳ್ಳುವ ಮುನ್ನ ವಿಶ್ವಾಸ ಮತಸಾಬೀತು ಪಡಿಸುವಂತೆ ಆದೇಶ ನೀಡಿದ್ದಾರೆ.

    ರಾಜ್ಯಪಾಲರು ಸಿಎಂ ಅವರಿಗೆ ನೀಡುತ್ತಿರುವ 2ನೇ ಆದೇಶ ಇದಾಗಿದ್ದು, ಇಂದು ಮಧ್ಯಾಹ್ನ 1.30ರ ಒಳಗಡೆ ವಿಶ್ವಾಸ ಮತ ಸಾಬೀತು ಪಡಿಸಲು ನಿನ್ನೆ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನು ಸರ್ಕಾರ ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸಿಎಂ ಪತ್ರವನ್ನು ಬರೆದು ವಿವರಣೆ ನೀಡಿದ್ದರು.

    ಸಿಎಂ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಮತ್ತೊಂದು ಡೆಡ್‍ಲೈನ್ ನೀಡಿರುವ ರಾಜ್ಯಪಾಲರು 2ನೇ ಬಾರಿಗೆ ಸಮಯಾವಕಾಶವನ್ನು ನೀಡಿದ್ದಾರೆ. ಈ ಬಾರಿಯೂ ನಿಯಮಗಳ ಕಾರಣ ಹೇಳಿ ಸಿಎಂ ಅವರು ಇದನ್ನು ನಿರಾಕರಿಸುತ್ತರಾ ಅಥವಾ ಪಾಲನೆ ಮಾಡುತ್ತರಾ ಎಂಬ ಕುತೂಹಲ ಮೂಡಿದೆ.

    ಈಗಾಗಲೇ ಸದನದ ಮಧ್ಯಂತರ ವರದಿಯನ್ನು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಈ ಬಾರಿಯೂ ಆದೇಶ ಉಲ್ಲಂಘನೆ ಆದರೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚಿದೆ.

    ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ವಿಪ್ ಜಾರಿ ಕುರಿತು ಸ್ಪಷ್ಟನೆ ಕೇಳಿದ್ದಾರೆ.

    ಬುಧವಾರ ನೀಡಿದ ಆದೇಶದಲ್ಲಿ ಸದನಕ್ಕೆ ಬರಬೇಕೋ? ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರನ್ನು ಬಲವಂತವಾಗಿ ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂ ಹೇಳಿತ್ತು.

    ದೋಸ್ತಿ ನಾಯಕರು ವಿಪ್ ಜಾರಿಗೊಳಿಸುವ ಮೂಲಕ ಶಾಸಕರನ್ನು ಸದನಕ್ಕೆ ಬರುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ವಿಪ್ ಬಗ್ಗೆ ಯಾವುದೇ ಸ್ಪಷ್ಟವಾದ ಅಂಶವನ್ನು ತಿಳಿಸದ ಕಾರಣ ಈಗ ಕಾಂಗ್ರೆಸ್ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಸಲ್ಲಿಸಿದೆ.

    ವಿಪ್ ಜಾರಿ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಅತೃಪ್ತರು ಸದನಕ್ಕೆ ಹಾಜರಾಗಬೇಕಿಲ್ಲ ಎಂಬ ಆದೇಶದಿಂದ ನಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಈ ಆದೇಶ 10ನೇ ಷೆಡ್ಯೂಲ್ ಅಡಿಯಲ್ಲಿ ಪಕ್ಷಕ್ಕೆ ನೀಡಲಾದ ಅಧಿಕಾರವನ್ನು ಕಿತ್ತುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೋರಿ ಅರ್ಜಿಯಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿಕೊಂಡಿದ್ದಾರೆ.

  • ಶುಕ್ರವಾರವೇ ದೋಸ್ತಿ ಸರ್ಕಾರ ಭವಿಷ್ಯ – ಸಿಎಂಗೆ ರಾಜ್ಯಪಾಲರ ಖಡಕ್ ಆದೇಶ

    ಶುಕ್ರವಾರವೇ ದೋಸ್ತಿ ಸರ್ಕಾರ ಭವಿಷ್ಯ – ಸಿಎಂಗೆ ರಾಜ್ಯಪಾಲರ ಖಡಕ್ ಆದೇಶ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸುವ ಬಗ್ಗೆ ಸದನದಲ್ಲಿ ಚರ್ಚೆ ಆರಂಭಿಸಿದ್ದು, ಈ ನಡುವೆಯೇ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ವಿಶ್ವಾಸ ಮತ ಸಾಬೀತು ಪಡಿಸುವಂತೆ ಆದೇಶ ನೀಡಿದ್ದಾರೆ.

    ರಾಜ್ಯಪಾಲ ವಾಜೂಬಾಯ್ ವಾಲಾ ಅವರು 175 (2) ವಿಧಿಯ ಅನ್ವಯ ರಾಜ್ಯಪಾಲರು ಆದೇಶವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸುವುದು ಅನಿವಾರ್ಯವಾಗಿದೆ. ಇಂದು ಸದನದ ಸಮಯದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಂದೇಶ ನೀಡಿದ್ದ ರಾಜ್ಯಪಾಲರು ಇಂದೇ ಬಹುಮತ ಸಾಬೀತು ಪರಿಶೀಲನೆ ನಡೆಸಿ ಎಂದು ತಿಳಿಸಿದ್ದರು. ಆದರೆ ಇದನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದ ಸ್ಪೀಕರ್ ಇದನ್ನು ಕಾನೂನಿನ ತಜ್ಞರ ಮೊರೆ ಹೋಗಿದ್ದರು.

    ಸ್ಪೀಕರ್ ಅವರ ನಡೆಯ ಬೆನ್ನಲ್ಲೇ ರಾಜ್ಯಪಾಲರು ಖಡಕ್ ಆದೇಶ ನೀಡಿದ್ದು, ಒಂದೊಮ್ಮೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿದರೆ ರಾಜ್ಯಪಾಲರು ರಾಷ್ಟ್ರಪತಿಗಳ ಆಡಳಿತ ಹೇರಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶ ಮಹತ್ವವನ್ನು ಪಡೆದುಕೊಂಡಿದೆ.

    ಸ್ಪೀಕರ್ ಅವರ ವಿಳಂಬ ದೋರಣೆ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಆದೇಶ ನೀಡಿದ್ದಾರೆ. ಮುಂದಿನ 17 ಗಂಟೆಗಳ ಅವಧಿಯಲ್ಲಿ ಮೈತ್ರಿ ಸರ್ಕಾರ ಭವಿಷ್ಯ ನಿರ್ಧಾರ ಆಗುವುದು ಬಹುತೇಕ ಖಚಿತ ಎಂಬ ಅಭಿಪ್ರಾಯ ಕಾನೂನು ತಜ್ಞರ ವಲಯದಿಂದ ಕೇಳಿ ಬಂದಿದೆ. ಇತ್ತ ಮೈತ್ರಿ ಸರ್ಕಾರ ರಾಜ್ಯಪಾಲರ ಆದೇಶದ ವಿರುದ್ಧ ನ್ಯಾಯಾಲಯಕ್ಕೂ ಮೊರೆ ಹೋಗುವ ಸಾಧ್ಯತೆ ಇದೆ.

  • ರಾಜ್ಯ ಸರ್ಕಾರ ತನ್ನ ಕೊನೆಯ ದಿನದ ಕ್ಷಣಗಳನ್ನು ಎಣಿಸುತ್ತಿದೆ: ಕರಂದ್ಲಾಜೆ

    ರಾಜ್ಯ ಸರ್ಕಾರ ತನ್ನ ಕೊನೆಯ ದಿನದ ಕ್ಷಣಗಳನ್ನು ಎಣಿಸುತ್ತಿದೆ: ಕರಂದ್ಲಾಜೆ

    – ಶಾಸಕರು ಬಯಸಿದರೆ ಹೈಕಮಾಂಡ್ ಪರಗಣಿಸಲಿದೆ

    ನವದೆಹಲಿ: ರಾಜ್ಯದ ಸಮ್ಮಿಶ್ರ ಸರ್ಕಾರ ತನ್ನ ಕೊನೆಯ ದಿನ, ಕ್ಷಣಗಳನ್ನು ಎಣಿಸುತ್ತಿದೆ. ನಾಳೆ ಸಿಎಂ ಬಹುಮತ ಸಾಬೀತು ಮಾಡುತ್ತೇವೆ ಎಂದು ಬಹುಮತ ಇಲ್ಲದೇ ನಾಟಕ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ನಾಳೆಯ ಸದನಕ್ಕೆ 15 ಮಂದಿ ಶಾಸಕರು ಗೈರಾಗುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಾದ ಬಳಿಕವೂ ಬಹುಮತ ಸಾಬೀತು ಮಾಡುವ ಪ್ರಹಸನವನ್ನು ಸಿಎಂ ಅವರು ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ನಿಂದ ಶಾಸಕರಿಗೆ ಜಯ ಸಿಕ್ಕಿದ್ದು, ಈ ತೀರ್ಪು ದೇಶಕ್ಕೆ ಅನ್ವಯವಾಗಲಿದೆ ಎಂದು ವಿಶ್ಲೇಷಿಸಿದರು.

    ಸದನಕ್ಕೆ ಹೋಗವುದು ಶಾಸಕರ ಅಭಿಪ್ರಾಯಕ್ಕೆ ಬಿಡಲಾಗಿದ್ದು, ರಾಜೀನಾಮೆ ನೀಡಲು ಅವರಿಗೆ ಸ್ವಾತಂತ್ರ್ಯ ಇದೆ. ಇದು ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಅನ್ವಯವಾಗಲಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯದಲ್ಲಿ ಸ್ಪೀಕರ್ ಸಂವಿಧಾನ ವಿರೋಧಿ ಕೆಲಸ ಮಾಡಿದರು. ಈ ಹಿನ್ನೆಲೆ ಸುಪ್ರೀಂಕೋರ್ಟ್ ಹೊಸ ತೀರ್ಪು ನೀಡುವಂತಾಯಿತು. ಶಾಸಕರು ಸ್ವತಂತ್ರರಾಗಿದ್ದು, ರಾಜೀನಾಮೆ ಬಳಿಕ ಬಿಜೆಪಿ ಸೇರಲು ಬಯಸಿದರೆ ಬಿಜೆಪಿ ಹೈಕಮಾಂಡ್ ಅವರನ್ನು ಪರಗಣಿಸಲಿದೆ ಎಂದರು.

  • ಚದುರಂಗದಲ್ಲಿ ಯಾರು ಗೆಲ್ತಾರೋ? ಯಾರು ಸೋಲ್ತಾರೋ ಗೊತ್ತಿಲ್ಲ: ಸ್ಪೀಕರ್

    ಚದುರಂಗದಲ್ಲಿ ಯಾರು ಗೆಲ್ತಾರೋ? ಯಾರು ಸೋಲ್ತಾರೋ ಗೊತ್ತಿಲ್ಲ: ಸ್ಪೀಕರ್

    – ಗುರುವಾರಕ್ಕೆ ವಿಧಾನಸಭಾ ಕಲಾಪ ಮುಂದೂಡಿಕೆ

    ಬೆಂಗಳೂರು: ಪ್ರತಿಪಕ್ಷ ಸದಸ್ಯರು ಸದನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದು ವಿರೋಧ ಪಕ್ಷವಿಲ್ಲದೇ ಇಲ್ಲದೇ ಕಲಾಪ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ವಿಧಾನಸಭೆಯನ್ನು ಗುರವಾರಕ್ಕೆ ಮುಂದೂಡಲಾಗುತ್ತಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

    ಸದನ ಸಲಹಾ ಸಮತಿ ಸಭೆ ಬಳಿಕ ಅಧಿವೇಶನದಲ್ಲಿ ಭಾಗವಹಿಸಿ, ನಾಯಕರು ಈಗಾಗಲೇ ವಿಶ್ವಾಸಮತಯಾಚನೆ ಮನವಿ ಮಾಡಿದ್ದಾರೆ. ಈ ಬಗ್ಗೆ ನಾನು ಅವರಿಗೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಸದನ ಸದಸ್ಯರಾದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದೆ. ಈ ಸಂದರ್ಭದಲ್ಲಿ ಅವರು ನನಗೆ ಅವಿಶ್ವಾಸ ಮತಯಾಚನೆ ಮಾಡಲು ಮನವಿ ಮಾಡಿದ್ದರು. ಇಬ್ಬರ ಉದ್ದೇಶ ಒಂದೇ ಆಗಿರುವುದರಿಂದ ನನ್ನ ಅಭಿಪ್ರಾಯದೊಂದಿಗೆ ಕಾನೂನುನಿನ ಅಡಿ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಅಲ್ಲದೇ ಈ ಬಗ್ಗೆ ಎರಡು ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾಗಿ ಸ್ಪಷ್ಟಪಡಿಸಿದರು.

    ಇದರಂತೆ ಗುರುವಾರದಂದು ವಿಶ್ವಾಸಮತಯಾಚನೆ ಚರ್ಚೆ ಮಾಡಲು ಸಮಯ ನಿಗದಿ ಮಾಡಲಾಗಿದೆ. ಈ ನಡುವೆ ಸದನದಲ್ಲಿ ಭಾಗವಹಿಸಲು ವಿರೋಧ ಪಕ್ಷದ ನಾಯಕರು ಭಾಗವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದುಕೊಂಡ ರೀತಿಯನ್ನು ನಾನು ಅವಲೋಕಿಸಿಕೊಂಡಿದ್ದೇನೆ. ಆದ್ದರಿಂದ ಸಂಸದೀಯ ಕಲಾಪಗಳನ್ನು ಗುರುವಾರ 11 ಗಂಟೆಗೆ ಮುಂದೂಡಲಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಎರಡು ಪಕ್ಷಗಳಿಗೆ ಸೂಚನೆ ನೀಡಿದ ಅವರು, ಈ ಚದುರಂಗದಲ್ಲಿ ಯಾರು ಗೆಲ್ತಿರೋ ಯಾರು ಸೋಲ್ತಿರೋ ಗೊತ್ತಿಲ್ಲ. ಅದು ನನಗೆ ಮುಖ್ಯವೂ ಅಲ್ಲ. ಆದರೆ ಮಾತಿನ ಬಗ್ಗೆ ನಿಗಾ ಇರಲಿ. ನಿಮ್ಮ ಮಾತುಗಳೆಲ್ಲವೂ ದಾಖಲೆಯಾಗಲಿದೆ. ಅನೇಕ ಜನ ಬದುಕು ಮುಡುಪಿಟ್ಟು ಈ ಅವಕಾಶ ನೀಡಿದ್ದಾರೆ. ನಾನು ಯಾರನ್ನ ಮೆಚ್ಚಿಸಲು ಇಲ್ಲಿ ಕುಳಿತಿಲ್ಲ. ನಾನು ಅಸಹಾಯಕ ಸ್ಥಾನದಲ್ಲಿ ಇದ್ದು, ನೀವು ನನ್ನ ಮೇಲೆ ವಾಕ್ಬಾಣಗಳನ್ನು ಪ್ರಯೋಗಿಸಿದರೂ ನಾನು ಈ ಸ್ಥಾನದಲ್ಲಿ ಇರುವುದರಿಂದ ಏನು ಮಾತನಾಡಲಾರೆ ಆದರೆ ನಾನು ಉತ್ತರಿಸಲು ಸಾಧ್ಯವಾಗದೇ ಕುಳಿತಿಲ್ಲ ಎಂದು ಹೇಳಿದರು.

  • ಬಹುಮತವಿಲ್ಲದ ಸಿಎಂ ವಿಶ್ವಾಸ ಮತಯಾಚಿಸೋದ್ರಲ್ಲಿ ಅರ್ಥವೇ ಇಲ್ಲ: ಬಿಎಸ್‍ವೈ

    ಬಹುಮತವಿಲ್ಲದ ಸಿಎಂ ವಿಶ್ವಾಸ ಮತಯಾಚಿಸೋದ್ರಲ್ಲಿ ಅರ್ಥವೇ ಇಲ್ಲ: ಬಿಎಸ್‍ವೈ

    ಬೆಂಗಳೂರು: ಸದನದ ಆರಂಭದ ಮೊದಲ ದಿನವೇ ಸಿಎಂ ಅವರು ವಿಶ್ವಾಸ ಮತಯಾಚನೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಆದರೆ ಬಹುಮತ ಇಲ್ಲದ ಸಂದರ್ಭದಲ್ಲಿ ವಿಶ್ವಾಸ ಮತಯಾಚಿಸೋದ್ರದಲ್ಲಿ ಯಾವುದೇ ಅರ್ಥವಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಈಗಾಗಲೇ 10 ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇಂದು 5 ಶಾಸಕರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಇಷ್ಟಾದ್ರು ಸಿಎಂ ವಿಶ್ವಾಸ ಮತಯಾಚನೆ ಮಾಡಲು ಸ್ವಯಂ ಮುಂದೇ ಬಂದಿರುವ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದ್ದರಿಂದ ಬಹುಬೇಗ ಈ ನಿರ್ಧಾರ ಮಾಡಲಿ. ನ್ಯಾಯಾಲಯದ ತೀರ್ಪು ಬರುವವರೆಗೂ ಕಾದು ನೋಡುತ್ತೇವೆ ಎಂದರು.

    ಮೈತ್ರಿ ಸರ್ಕಾರದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಟ್ಟು ಹೋಗುವುದನ್ನ ತಡೆಯಲು ಸಿಎಂ ಮಾಡಿರುವ ವ್ಯವಸ್ಥಿತ ರಾಜಕೀಯ ಷಡ್ಯಂತರಷ್ಟೇ. ಆದರೆ ಈಗಾಗಲೇ ಶಾಸಕರು ಸುಪ್ರೀಂ ಕೋರ್ಟಿಗೆ ತೆರಳಿರುವುದಿಂದ ಮತ್ತೆ ವಾಪಸ್ ಬರುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇದು ಅವರಿಗೂ ಸ್ಪಷ್ಟವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಉಳಿಯವುದಿಲ್ಲ. ಸದ್ಯದ ವಾತಾವರಣ ನಮಗೆ ಅನುಕೂಲಕರವಾಗಿದೆ ಎಂದರು.

    ಇತ್ತ ಬಿಎಸ್ ಯಡಿಯೂರಪ್ಪ ಬಿಜೆಪಿ ಶಾಸಕರೊಂದಿಗೆ ಸಭೆಗೆ ರೆಸಾರ್ಟಿಗೆ ತೆರಳಿದ್ದು, ಬುಧವಾರ ಬಹುಮತ ಸಾಬೀತಿಗೆ ಸಮಯ ಕೇಳಿರುವುದರಿಂದ ಶಾಸಕರ ಜೊತೆ ಸದ್ಯದ ಬೆಳವಣಿಗೆಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಇತ್ತ ಇದೇ ಸಂದರ್ಭದಲ್ಲಿ ಮಾತನಾಡಿದ ವಿ.ಸೋಮಣ್ಣ ಅವರು, ರಿವರ್ಸ್ ಆಪರೇಷನ್ ಭಯದಿಂದ ಶಾಸಕರು ರೆಸಾರ್ಟಿಗೆ ತೆರಳಿಲ್ಲ. ಎಲ್ಲರೂ ಒಂದೆಡೆ ಸೇರಿ ತುಂಬಾ ಸಮಯ ಆಗಿತ್ತು. ಸದನದಲ್ಲಿ ವಿಶ್ವಾಸ ಮತ ಇರುವುದರಿಂದ ಈಗ ಎಲ್ಲರೂ ಇದ್ದೇವೆ ಅಷ್ಟೇ ಎಂದರು. ಅಲ್ಲದೇ ಸಚಿವ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಒನ್ ಮ್ಯಾನ್ ಆರ್ಮಿ ಆಗಿದ್ದಾರೆ. 2-3 ದಿನಗಳಿಂದ ಏಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇದೆ. ಯಾವುದೇ ಮಾಹಿತಿ ಇಲ್ಲದೇ ನಾವು ಕೂಡ ಮಾತನಾಡಲ್ಲ. ಸಿಎಂ ಅವರು ಹಳಿ ತಪ್ಪಿ ತುಂಬಾ ದಿನವಾಗಿದೆ. ಮಂಗಳವಾರ ಅಥವಾ ಬುಧವಾರ ಎಲ್ಲಾ ರೀತಿಯ ತೀರ್ಮಾನವಾಗುತ್ತೆ ಬಿಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಿಜೆಪಿ ಶಾಸಕರು ರೆಸಾರ್ಟಿಗೆ ಶಿಫ್ಟ್ – ‘ಕೈ’ ಶಾಸಕರಿಗೆ ಸಿಗುತ್ತಿಲ್ಲ ರೆಸಾರ್ಟ್

    ಬಿಜೆಪಿ ಶಾಸಕರು ರೆಸಾರ್ಟಿಗೆ ಶಿಫ್ಟ್ – ‘ಕೈ’ ಶಾಸಕರಿಗೆ ಸಿಗುತ್ತಿಲ್ಲ ರೆಸಾರ್ಟ್

    ಬೆಂಗಳೂರು: ರಾಜ್ಯ ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ನಡುವೆಯೇ ಇಂದು ಸಿಎಂ ಅವರು ವಿಶ್ವಾಸಮತಯಾಚನೆ ಸಿದ್ಧ ಎಂದಿರುವ ಪರಿಣಾಮ ಬಿಜೆಪಿ ಶಾಸಕರು ರೆಸಾರ್ಟಿಗೆ ಶಿಫ್ಟ್ ಆಗುತ್ತಿದ್ದಾರೆ.

    ಬೆಂಗಳೂರು ಅಂತರಾಷ್ಟ್ರಿಯ ನಿಲ್ದಾಣದ ಬಳಿ ಇರುವ ಐಷಾರಾಮಿ ದಿ ರಮಡ ರೆಸಾರ್ಟಿಗೆ ಎರಡು ಬಸ್ಸಿನಲ್ಲಿ ಬಿಜೆಪಿ ಶಾಸಕರು ತೆರಳಲಿದ್ದಾರೆ.

    ಇತ್ತ ಕಾಂಗ್ರೆಸ್ ಶಾಸಕರು ಕೂಡ ದೇವನಹಳ್ಳಿ ಬಳಿಯ ಕ್ಲಾರ್ಕ್ ಎಕ್ಸಾರ್ಟಿಕಾ ರೆಸಾರ್ಟಿಗೆ ಶಿಫ್ಟ್ ಆಗುತ್ತಾರೆ ಎನ್ನಲಾಗಿತ್ತು. ಆದರೆ 70 ಶಾಸಕರಿಗೆ ರೆಸಾರ್ಟಿನಲ್ಲಿ ಕೊಠಡಿಗಳು ಸಿಗದ ಹಿನ್ನೆಲೆಯಲ್ಲಿ ಮತ್ತೊಂದು ರೆಸಾರ್ಟ್ ನೋಡಲು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿದೆ.

    ಈಗಲ್ಟನ್ ರೆಸಾರ್ಟಿನಲ್ಲಿ ಕೊಠಡಿಗಳ ನವೀಕರಣ ಆಗುತ್ತಿರುವ ಹಿನ್ನೆಲೆಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಆಗಿದ್ದು, ವೀಕೆಂಡ್ ಆಗಿರುವುದರಿಂದ 70 ಕೊಠಡಿಗಳು ಲಭ್ಯವಿಲ್ಲ ಎಂದು ಕ್ಲಾರ್ಕ್ ಎಕ್ಸಾರ್ಟಿಕಾ ರೆಸಾರ್ಟ್ ಸಿಬ್ಬಂದಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲಾ ಶಾಸಕರನ್ನು ಒಟ್ಟಿಗೆ ಇರುವಂತೆ ಸೂಚನೆ ನೀಡಿರುವುದರಿಂದ ಸದ್ಯ ಬೇರೊಂದು ರೆಸಾರ್ಟಿಗಾಗಿ ಹುಡುಕಾಟ ನಡೆಸಲಾಗಿದೆ. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರ ನೇತೃತ್ವದಲ್ಲೇ ಕಾಂಗ್ರೆಸ್ ಶಾಸಕರು ರೆಸಾರ್ಟಿಗೆ ತೆರಳಲಿದ್ದಾರೆ.

    ಇತ್ತ ಕಳೆದ 3 ದಿನಗಳಿಂದ ನಂದಿ ಬೆಟ್ಟದ ಬಳಿ ಇರುವ ರೆಸಾರ್ಟಿನಲ್ಲಿ ಜೆಡಿಎಸ್ ಶಾಸಕರು ತಂಗಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ವಿಧಾನಸಭಾ ಕಲಾಪವನ್ನು ಮುಂದೂಡಿರುವುದರಿಂದ ಅಲ್ಲಿಯವರೆಗೂ ರೆಸಾರ್ಟಿನಲ್ಲಿಯೇ ಶಾಸಕರು ಇರಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ಅತೃಪ್ತ ಶಾಸಕರು ಮುಂಬೈ ಹೋಟೆಲಿನಲ್ಲಿ ತಂಗಿರುವುದರಿಂದ ಕರ್ನಾಟಕ ಎಲ್ಲಾ ಶಾಸಕರು ಬಹುತೇಕ ರೆಸಾರ್ಟಿನಲ್ಲೇ ಮೂರು ದಿನಗಳ ಕಾಲ ಉಳಿಯಲಿದ್ದಾರೆ. ಈ ಎಲ್ಲಾ ರೆಸಾರ್ಟ್ ಗಳಲ್ಲಿ ಸ್ವಿಮ್ಮಿಂಗ್ ಪೂಲ್, ಸ್ಪಾ, ಸಭಾಂಗಣ ಸೇರಿದಂತೆ ಎಲ್ಲಾ ಐಷಾರಾಮಿ ವ್ಯವಸ್ಥೆಗಳು ಇರಲಿದೆ.

    ಜುಲೈ 7 ರಂದು ಬಿಡದಿಯ ಈಗಲ್ ಟನ್ ರೆಸಾರ್ಟ್ ಜನರಲ್ ಮ್ಯಾನೇಜರ್ ಮ್ಯಾಥ್ಯೂ ಸ್ಪಷ್ಟನೆ ನೀಡಿ, ನಮ್ಮಲ್ಲಿ ಯಾವುದೇ ರೂಂಗಳು ಖಾಲಿ ಇಲ್ಲ. ಕಾಂಗ್ರೆಸ್ ಶಾಸಕರು ಬಂದರೂ ಸಹ ನಮ್ಮಲ್ಲಿ ಯಾವುದೇ ರೂಂ ಖಾಲಿ ಇಲ್ಲ. ಎಲ್ಲಾ ಕೊಠಡಿಗಳಲ್ಲಿ ತರಬೇತಿ ಪಡೆಯುತ್ತಿರುವ ಜೂನಿಯರ್ ಕ್ರಿಕೆಟ್ ಆಟಗಾರರಿದ್ದಾರೆ. ಉಳಿದ ಶೇ.60 ರಷ್ಟು ಭಾಗ ರೆಸಾರ್ಟ್ ನವೀಕರಣ ಕಾರ್ಯ ನಡೆಯುತ್ತಿದೆ. ಇಲ್ಲಿಯವರೆಗೂ ರೂಂ ಬುಕ್ಕಿಂಗ್ ವಿಚಾರದಲ್ಲಿ ನಮಗೆ ಕರೆ ಬಂದಿಲ್ಲ. ಬಂದರೂ ಸಹ ರೂಂಗಳು ಸಿಗುವುದಿಲ್ಲ. ಇನ್ನು 10 ದಿನಗಳ ಕಾಲ ನಮ್ಮಲ್ಲಿ ಯಾರೇ ಬಂದರೂ ರೂಂ ಸಿಗುವುದಿಲ್ಲ ಎಂದು ತಿಳಿಸಿದ್ದರು.