Tag: ಸಿಎಂ ಎಚ್.ಡಿ.ಕುಮಾರಸ್ವಾಮಿ

  • ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

    ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

    ನವದೆಹಲಿ: ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಟ್ಟು ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕಸಭೆಯಲ್ಲೂ ಮೋದಿಯನ್ನು ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.

    ಬಿಜೆಪಿಯನ್ನು ಸೋಲಿಸಲೇಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ನಿರ್ಧಾರಕ್ಕೆ ಬೆಂಬಲವಾಗಿರುವ ದೇವೇಗೌಡರು ಈಗ ರಾಷ್ಟ್ರ ರಾಜಕಾರಣದಲ್ಲಿ ಮುಂದೆ ನಡೆಯಬಹುದಾದ ಮೈತ್ರಿಯ ಬಗ್ಗೆ ಸುಳಿವು ನೀಡಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ವೇಳೆ ಚುನಾವಣೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಕಿರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಕಾಂಗ್ರೆಸ್ ಸಹಭಾಗಿತ್ವದಲ್ಲಿಯೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಮೈತ್ರಿಯಲ್ಲಿ ಬಿಎಸ್‍ಪಿ ಕೂಡಾ ಇರಲಿದೆ. ಹೀಗಾಗಿ ಜೆಡಿಎಸ್ ಪಾಲಿನ ಸೀಟುಗಳಲ್ಲಿ ಒಂದು ಸ್ಥಾನವನ್ನು ಬಿಎಸ್‍ಪಿಗೆ ಬಿಟ್ಟುಕೊಡುತ್ತೇವೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ತನ್ನ ಕೆಲವು ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಿದ್ದು, ಈ ಕುರಿತು ಮೈತ್ರಿ ಪಕ್ಷಗಳಲ್ಲಿ ಚಿಂತನೆ ನಡೆದಿವೆ. ಲೋಕಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಾಗುತ್ತದೆ ಎಂದು ತಮ್ಮ ತಯಾರಿಯನ್ನು ದೇವೇಗೌಡ ಅವರು ತೆರೆದಿಟ್ಟರು.

    ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹಾಗೂ ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಒಂದಾಗಲಿದ್ದಾರೆ. ಮೈತ್ರಿ ಕೂಟದಲ್ಲಿ ಬಿಎಸ್‍ಪಿಗೂ ಜವಾಬ್ದಾರಿಯುತ ಸ್ಥಾನ ಕೊಡಲಾಗಿದ್ದು, ಕರ್ನಾಟಕದಲ್ಲಿ ಬಿಎಸ್‍ಪಿ ಸ್ಪರ್ಧಿಸುವ ಆಸಕ್ತಿ ತೋರಿದರೆ ಜೆಡಿಎಸ್ ಕೋಟಾದಲ್ಲಿ ಕೆಲವು ಸ್ಥಾನ ನೀಡುವ ಯೋಜನೆ ಇದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಎಷ್ಟು ಸ್ಥಾನ ಅಂತಾ ಇನ್ನು ಚರ್ಚೆಯಾಗಿಲ್ಲ. ನಾನು ಮಂಡ್ಯದಿಂದ ಸ್ವರ್ಧಿಸುವ ಬಗ್ಗೆಯೂ ಚರ್ಚೆಯಾಗಿದೆ. ರಾಜ್ಯದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳು ಬಗೆಹರಿದ ಮೇಲೆ ಮಾತುಕತೆ ನಡೆಸಲಾಗುತ್ತೆ ಎಂದು ಎಂದು ತಮ್ಮ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು.

    ಲೋಕಸಭೆ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಭಾರೀ ಸಿದ್ಧತೆ ನಡೆಸುತ್ತಿದೆ. ಆದರೆ ಎನ್‍ಡಿಎ ಪರ್ಯಾಯ ಪಕ್ಷಗಳು ಒಡೆದು ಹೋಗಿವೆ ಎಂದು ಅರ್ಥೈಸಿಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಸುವ ತಂತ್ರವನ್ನು ಬಿಜೆಪಿ ಹೂಡುತ್ತಿದೆ. ಈಗಾಗಲೇ ಪ್ರತಿಯೊಂದು ರಾಜ್ಯಕ್ಕೂ ಚುನಾವಣೆಯ ಸೂಚನೆಯನ್ನು ಬಿಜೆಪಿ ನೀಡುತ್ತಿದೆ. ಹೀಗಾಗಿ ಮುಂಗಾರು ಅಧಿವೇಶನವೇ ಕೊನೆಯ ಅಧಿವೇಶನ ಆದರೂ ಅಚ್ಚರಿ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ನಾನು ಎನ್‍ಡಿಎ ಹೊರತಾದ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಮಾತುಕತೆ ಆಗಿರುವುದು ಕಾಂಗ್ರೆಸ್-ಜೆಡಿಎಸ್ ನಡುವೆ. ಒಪ್ಪಂದ ಪ್ರಕಾರವೇ ಸರ್ಕಾರ ನಡೆಯಲಿದ್ದು, ಈ ಬಗ್ಗೆ ರಾಹುಲ್ ಗಾಂಧಿ- ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.

    ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದ್ದ ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾರಾಯಣ ರಾವ್ ನನ್ನ ಸ್ನೇಹಿತ. ಹೀಗಾಗಿ ಮಾಧ್ಯಮದವರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಬೀಳಲ್ಲ ಸುಭದ್ರವಾಗಿರುತ್ತದೆ ಎಂದರು.

    ಪಕ್ಷದಲ್ಲಿ ಕೆಲವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದರು.

  • ಸಿದ್ದು ಹೇಳಿಕೆಯನ್ನು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ಮೇಲೆ ಸಿಎಂ, ಡಿಸಿಎಂ, ಸಚಿವ ಗರಂ

    ಸಿದ್ದು ಹೇಳಿಕೆಯನ್ನು ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ಮೇಲೆ ಸಿಎಂ, ಡಿಸಿಎಂ, ಸಚಿವ ಗರಂ

    ಚಿಕ್ಕಬಳ್ಳಾಪುರ: ಯಾವುದೇ ಸರ್ಕಾರ ಇದ್ದರೂ ಟೀಕಿಸುವ ಮೂಲಕ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳ ಮಾಡುತ್ತವೆ. ಆದರೆ ಇಂದು ಸಮ್ಮಿಶ್ರ ಸರ್ಕಾರವೇ ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದೆ.

    ಚಿಕ್ಕಬಳ್ಳಾಪುರದಲ್ಲಿ ಸಚಿವ ಶಿವಶಂಕರ್ ರೆಡ್ಡಿ, ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೊಪ್ಪಳದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಮಾಧ್ಯಗಳ ವಿರುದ್ಧವೇ ವಾಗ್ದಾಳಿ ನಡೆಸಿ, ಮಾಧ್ಯಗಳು ತಪ್ಪು ಮಾಡುತ್ತಿವೆ ಎನ್ನುವಂತೆ ಬಿಂಬಿಸಿದರು.

    ಶಾಂತಿವನದಲ್ಲಿ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಹೇಳಿಕೆಯಲ್ಲಿ ಯಾವುದೇ ವಿವಾದ ಇಲ್ಲ. ಆದರೆ ಮಾಧ್ಯಮಗಳು ಇದಕ್ಕೆ ಉಪ್ಪು-ಹುಳಿ ಹಾಕುವ ಕೆಲಸ ಮಾಡುತ್ತೀವೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

     

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಸಿದ್ದರಾಮಯ್ಯ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಬಜೆಟ್ ನಲ್ಲಿ ಕಾಂಗ್ರೆಸ್ಸಿನ ಕಾರ್ಯಕ್ರಮಗಳನ್ನು ತೆಗೆದು ಹಾಕುವುದಾಗಿ ಎಲ್ಲಿಯೂ ಕುಮಾರಸ್ವಾಮಿ ಅವರು ಹೇಳಿಲ್ಲ. ಎರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಯೋಜನೆಗಳನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರ್ಕಾರ ಬಜೆಟ್ ಮೂಲಕ ಎರಡು ಪಕ್ಷಗಳ ಹಿತಾಸಕ್ತಿಯನ್ನು ರಕ್ಷಿಸಲಿದೆ. ಇನ್ನೂ ಈ ಬಾರಿಯ ಬಜೆಟ್ ನಲ್ಲಿ ಶೇ 100 ಕ್ಕೆ 100 ರಷ್ಟು ಸಿಹಿ ಸುದ್ದಿ ಸಿಗಲಿದ್ದು, ರೈತರ ಸಾಲಮನ್ನಾ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯನ್ನು ಸರ್ಕಾರ ಮರೆತಿದೆ ಅಂತಾ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಆದರೆ ನಾವು ಎಲ್ಲ ಭಾಗಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಕೊಪ್ಪಳದ ಕಾರ್ಯಕ್ರಮದಲ್ಲಿ ಖರ್ಗೆ-ಸಿದ್ದರಾಮಯ್ಯ ಭೇಟಿ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮಗಳಿಗೆ ಏನಾಗಿದೆ ಅಂತಾ ಡಿಸಿಎಂ ಜಿ.ಪರಮೇಶ್ವರ್ ಅವರು ಗರಂ ಆದರು.

  • ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಸಚಿವ ರಮೇಶ್ ಜಾರಕಿಹೊಳಿ

    ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಸಚಿವ ರಮೇಶ್ ಜಾರಕಿಹೊಳಿ

    ಬೆಳಗಾವಿ: ಹೊಸ ಬಜೆಟ್ ಬೇಡ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಜೆಟ್ ಮಂಡನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಕ್ಕು. ಆದರೆ ಬಜೆಟ್ ಮಂಡನೆ ವಿಚಾರದಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಕಾಂಗ್ರೆಸ್ ಸರ್ಕಾರದ ಹಳೇ ಯೋಜನೆಗಳನ್ನೇ ಮುಂದುವರಿಸಬೇಕು ಎನ್ನುವ ನಿರ್ಧಾರನ್ನು ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

    ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಷಯದ ಕುರಿತು ಮಾತನಾಡಿದ ಸಚಿವರು, ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವರಾದ ದಿನೇಶ್ ಗುಡೂರಾವ್, ಸತೀಶ್ ಜಾರಕಿಹೊಳಿ ಹಾಗೂ ಎಚ್.ಕೆ.ಪಾಟೀಲ್ ಅವರು ಪೈಪೋಟಿ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇವೆ. ಅಲ್ಲದೇ ಉತ್ತರ ಕರ್ನಾಟಕಕ್ಕೆ ಇನ್ನೂ ಮೂರು ಸಚಿವ ಸ್ಥಾನ ನೀಡುವ ಸಾಧ್ಯತೆ ಇದ್ದು, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಶಾಸಕರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

    ಕಾಂಗ್ರೆಸ್ಸಿನ ಮೂವರಿಂದ ಬೆಂಬಲ:
    ಬಜೆಟ್ ವಿಚಾರವಾಗಿ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಸಚಿವ ರಮೇಶ್ ಜಾರಕಿಹೊಳಿ ಬೆನ್ನಲ್ಲೆ ಸದ್ಯ ಸಂಸದ ವೀರಪ್ಪ ಮೋಯ್ಲಿ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    https://youtu.be/RBIURxo0YIg

  • ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ ಪರ ಸಿಎಂ ಎಚ್‍ಡಿಕೆ ಬ್ಯಾಟಿಂಗ್

    ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ ಪರ ಸಿಎಂ ಎಚ್‍ಡಿಕೆ ಬ್ಯಾಟಿಂಗ್

    ಬೆಂಗಳೂರು: ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನು ಹೋರಾಟ ನಡೆಸುತ್ತಿದ್ದು ಅವರಿಗೆ ನಮ್ಮ ಬೆಂಬಲವಿದೆ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುವ ಮಾತೇ ಇಲ್ಲ. ಬಿಜೆಪಿಯ ಅನೇಕ ನಾಯಕರ ಮೇಲೆ ಆರೋಪಗಳಿವೆ, ಹಾಗಂತ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಇತ್ತ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲಿನ ಐಟಿ ದಾಳಿ ಕುರಿತು ಸಿಎಂ ಕುಮಾರಸ್ವಾಮಿ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ಇದ್ದರೂ, ಮಾರ್ಗ ಬದಲಿಸಿ ದೇವೇಗೌಡರನ್ನು ಭೇಟಿ ಮಾಡಲು ತೆರಳಿದ್ದರು ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    https://youtu.be/TENmbOhG14k

  • ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬಿಎಂಆರ್‌ಸಿಎಲ್‌ ಖಾತೆಗಾಗಿ ಸಿಎಂ ಎಚ್‍ಡಿಕೆ, ಡಿಸಿಎಂ ಪರಂ ನಡುವೆಯೇ ಹಗ್ಗಜಗ್ಗಾಟ!

    ಬೆಂಗಳೂರು: ಸಾಂದರ್ಭಿಕ ಶಿಶು ಮೈತ್ರಿ ಸರ್ಕಾರದಲ್ಲಿ ಈಗ ಮತ್ತೊಂದು ಹೊಸ ರಾಗ ಆರಂಭವಾಗಿದೆ. ಸಚಿವ ಸ್ಥಾನ ಹಂಚಿಕೆ ಸಮಸ್ಯೆ ಇನ್ನು ಬಾಕಿ ಇರುವಂತೆ ಸಿಎಂ ಹಾಗೂ ಡಿಸಿಎಂ ಮಧ್ಯೆ ಖಾತೆ ಹಂಚಿಕೆಯಲ್ಲಿ ಮನಸ್ತಾಪ ಎದುರಾಗುತ್ತಿದೆಯಂತೆ.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಡುವೆ ಖಾತೆ ಹಂಚಿಕೆಗಾಗಿ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ನನಗೆ ಅದು ಬೇಕು, ಕೊಟ್ಟುಬಿಡಿ ಎಂದು ಪರಮೇಶ್ವರ್ ಅವರು ಪಟ್ಟು ಹಿಡಿದಿದ್ದಾರಂತೆ.

    ಡಿಸಿಎಂ ಪರಮೇಶ್ವರ್ ಕೇಳಿದ್ದೇನು:
    ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವ ಪರಮೇಶ್ವರ್ ಅವರು ಸದ್ಯ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್ ಸಿಎಲ್) ಖಾತೆಯೂ ಬೇಕೆಂದು ಪಟ್ಟು ಹಿಡಿದಿದ್ದಾರೆ. ನಾನು ಈಗಾಗಲೇ ಬೆಂಗಳೂರು ಅಭಿವೃದ್ಧಿ ಖಾತೆ ಹೊಂದಿರುವೆ. ಹೀಗಾಗಿ ಬಿಎಂಆರ್ ಸಿಎಲ್ ಖಾತೆ ನನ್ನ ಬಳಿಯೇ ಇದ್ದರೆ, ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಜಿ.ಪರಮೇಶ್ವರ್ ಅವರ ಬೇಡಿಕೆಯನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ದೂರ ತಳ್ಳುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು, ಸಮಸ್ಯೆ ಮಾಜಿ ಪ್ರದಾಣಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿಗೆ ಹೋಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.