ಬೆಂಗಳೂರು: ದೋಸ್ತಿ ಸರ್ಕಾರವನ್ನು ಸೇಫ್ ಮಾಡಲು ಹೋಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
`ಜೋಡೆತ್ತು’ಗಳ ರೀತಿ ಇದ್ದ ಸಿಎಂ ಮತ್ತು ಸಚಿವ ಡಿಕೆ ಶಿವಕುಮಾರ್ ನಡುವೆ ಸಂಧಾನಕ್ಕೆ ಸಂಬಂಧಿಸಿದಂತೆ ಇದೀಗ ವೈಮನಸ್ಸು ಎದ್ದಿದೆ. ಈ ಮೂಲಕ ಸಂಕಷ್ಟದ ಸಮಯದಲ್ಲಿ ಜೊತೆಯಾಗಿದ್ದ ಡಿಕೆಶಿ ಅವರು ಸಿಎಂ ಮೇಲೆ ಗರಂ ಆದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಸರ್ಕಾರ ಸೇಫ್ ಮಾಡಿಕೊಳ್ಳುವ ಸಲುವಾಗಿ ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಒಂದು ಮಾಡಲು ಸಿಎಂ ಮುಂದಾಗಿದ್ದಾರೆ. ಆದರೆ ಮುಖ್ಯಮಂತ್ರಿ ಈ ಪ್ರಯತ್ನ ಒಂದು ಹಂತದಲ್ಲಿ ಫಲ ಕೊಟ್ಟರೂ ಆ ಬಳಿಕ ಅದು ಫಲಪ್ರದವಾಗಲಿಲ್ಲ.
ವೈಮನಸ್ಸು ಎದ್ದಿದು ಯಾಕೆ?
ರೆಬೆಲ್ ರಮೇಶ್ ಜಾರಕಿಹೊಳಿಯನ್ನು ಜೆಡಿಎಸ್‍ಗೆ ಸೆಳೆಯಲು ಸಿಎಂ ಮುಂದಾಗಿದ್ದರು. ಕಾಂಗ್ರೆಸ್‍ನಲ್ಲಿ ಇರುಸು ಮುರುಸಾದ್ರೆ ನಮ್ಮ ಜೊತೆ ಬನ್ನಿ ಎಂದು ರಮೇಶ್‍ಗೆ ಹೇಳಲು ಸಿಎಂ ಪ್ಲಾನ್ ಮಾಡಿದ್ದರು. ಆದರೆ ಸಿಎಂ ನಡೆಯನ್ನು ಒಪ್ಪಿಕೊಳ್ಳಲು ಬಿಲ್‍ಕುಲ್ ಸಾಧ್ಯವಿಲ್ಲ ಎಂದು ಸಚಿವ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಇದ್ದರೆ ಕಾಂಗ್ರೆಸ್‍ನಲ್ಲೇ ಇರಲಿ. ಅವರು ಬಯಸಿದರೆ ಸ್ನೇಹಕ್ಕೂ ಸೈ, ಅಂತರ ಕಾಯ್ದುಕೊಳ್ಳಲು ಸೈ. ರಮೇಶ್ ಹೋಗೋದಾದ್ರೆ ಬಿಜೆಪಿಗೆ ಹೋಗಲಿ. ಆದರೆ ಜೆಡಿಎಸ್ ಜೊತೆ ಗುರುತಿಸಿಕೊಂಡರೆ ಇದನ್ನ ನಾನು ಒಪ್ಪಲ್ಲ. ಜೆಡಿಎಸ್ ರಮೇಶ್‍ಗೆ ಆಶ್ರಯ ಕೊಟ್ಟರೆ ಅದು ಮೈತ್ರಿಗೆ ಮಾಡುವ ದ್ರೋಹವಾಗುತ್ತದೆ. ನನಗೆ ಪಕ್ಷ ಮೊದಲು ಸರ್ಕಾರ ನಂತರ. ನಾವು ಎಷ್ಟೇ ಆತ್ಮೀಯರಾದರೂ ನನಗೆ ಖಾಸಗಿ ಗೆಳೆತನಕ್ಕಿಂತ ಪಕ್ಷವೆ ಮುಖ್ಯ. ಆಮೇಲೆ ನಿಮ್ಮ ಸಂಪುಟದ ಸಚಿವ ಸ್ಥಾನ ಎಂದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಒಟ್ಟಿನಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಸಿಎಂ ಕುಮಾರಸ್ವಾಮಿಯ ಈ `ಡಬಲ್’ ತಂತ್ರವನ್ನು ನೇರವಾಗಿ ವಿರೋಧಿಸಿದ್ದು, ಇದೀಗ ಸಿಎಂ ಮತ್ತೆ ಟೆನ್ಶನ್ ಆರಂಭವಾಗಿದೆ ಎನ್ನಲಾಗುತ್ತಿದೆ.
ಚಿಕ್ಕಬಳ್ಳಾಪುರ: ಸಿಎಂ ಕುಮಾರಸ್ವಾಮಿ ಎರಡು ದಿನ ಪ್ರವಾಸ ಕೈಗೊಂಡರೆ ಅದೇನು ದೊಡ್ಡ ಅಪರಾಧವಲ್ಲ, ಆರೋಗ್ಯ ದೃಷ್ಟಿ ಹಾಗೂ ಬೇರೆ ಬೇರೆ ಕಾರಣಕ್ಕೆ ಹೋಗಿರಬಹುದು. ಆದರೆ ಇದಕ್ಕೆ ವಿರೋಧ ಪಕ್ಷಗಳು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ದಿಬ್ಬೂರು ಗ್ರಾಮದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ನಿರ್ವಹಣೆ ಸಂಬಂಧ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದೆ. ಆದರೆ ವಿಪಕ್ಷದವರು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಕೆಲ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಸಾಮಾನ್ಯ, ಪಕ್ಷದ ನಾಯಕರೇ ಆಗಲಿ, ಮಂತ್ರಿಗಳೇ ಆಗಲಿ ಕೂತು ಬಗೆ ಹರಿಸಿಕೊಳ್ಳಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಹತ್ತಿಕ್ಕಲು ನಾವು ದೇಶ-ರಾಜ್ಯದ ಹಿತದೃಷ್ಟಿಯಿಂದ ಒಂದಾಗಿ ಹೋಗಬೇಕಿದೆ. ಹೀಗಾಗಿ ಯಾರೂ ಕೂಡ ಯಾವುದೇ ಭಿನ್ನಾಭಿಪ್ರಾಯಗಳು ಬಂದಾಗ ಮಿತಿ ಮೀರಿ ಮಾತನಾಡುವುದು ಸರಿಯಲ್ಲ ಎಂದರು.
ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಡಾ ಕೆ. ಸುಧಾಕರ್‍ಗೆ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ ಎನ್ನಲಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಮಾನದಂಡಗಳಿವೆ, ಈ ವಿಷಯವನ್ನು ನಾನು ಸಹ ಮಾಧ್ಯಮದಲ್ಲಿ ಗಮನಿಸಿದೆ, ಪಿಸಿಬಿ ಅಧ್ಯಕ್ಷರಾಗಲು ಅದರದ್ದೇ ಆದ ವಿದ್ಯಾಭ್ಯಾಸದ ಅರ್ಹತೆ ಇರಬೇಕು ಜೊತೆಗೆ ಪರಿಸರದ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು ಅಂತಿದೆ. ಹೀಗಾಗಿ ಪಿಸಿಬಿ ಸ್ಥಾನ ತಪ್ಪಿರಬೇಕೇ ಹೊರತು ಬೇರೆ ಯಾವ ಉದ್ದೇಶಗಳಿಂದಲ್ಲ ಎಂಬುದು ನನ್ನ ಭಾವನೆ ಅಂತ ಸ್ಪಷ್ಟಪಡಿಸಿದರು.
ಬೆಂಗಳೂರು: ಮೈತ್ರಿ ಸರ್ಕಾರದ ಬುಡದಲ್ಲೀಗ ಕೆಪಿಎಸ್‍ಸಿ ಆಯುಕ್ತರ ಹುದ್ದೆಗಾಗಿ ಪ್ರಭಾವಿಗಳ ಮಧ್ಯೆ ಟಫ್ ಫೈಟ್ ಆರಂಭವಾಗಿದೆ.
ಶ್ಯಾಂ ಭಟ್‍ರಿಂದ ತೆರವಾಗಿರುವ ಕೆಪಿಎಸ್‍ಸಿ ಆಯುಕ್ತರ ಸ್ಥಾನವನ್ನು ತಮ್ಮ ಆಪ್ತರಿಗೆ ಕೊಡಲು ನಾಯಕರ ಮಧ್ಯೆ ಸದ್ದಿಲ್ಲದ ಸಮರ ಶುರುವಾಗಿದೆ. ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಕೆಪಿಎಸ್‍ಸಿ ಆಯುಕ್ತರ ಹುದ್ದೆ ಫೈಟ್‍ಗೆ ಮಹೂರ್ತ ಇಡಲಾಗಿದೆ.
ಡಾ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಕೆಪಿಎಸ್‍ಸಿ ಆಯುಕ್ತರ ಹುದ್ದೆ ಕೊಡಲು ಸಿಎಂ ಪ್ರಯತ್ನ ಮಾಡುತ್ತಿದ್ದಾರೆ. ಡಿಕೆಶಿ ಕೂಡ ತಮ್ಮ ಆಪ್ತ ವಿನಯ್ ಸಂಬಂಧಿ ರಘುನಂದನ್ ರಾಜಣ್ಣಗೆ ಈ ಹುದ್ದೆ ಕೊಡಿಸಲು ಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಆಯುಕ್ತ ಸ್ಥಾನ ಕೊಡೋದಕ್ಕೆ ಸಿಎಂ ಟೊಂಕ ಕಟ್ಟಿ ನಿಂತಿದ್ಯಾಕೆ ಅನ್ನೋದು ಇದೀಗ ಪ್ರಶ್ನೆಯಾಗಿದೆ.
ಐಆರ್‍ಎಸ್ ಹುದ್ದೆಗೆ 2018 ಫೆಬ್ರವರಿಯಲ್ಲಿ ರಾಜೀನಾಮೆ ಕೊಟ್ಟು ಲಕ್ಷ್ಮಿ ರಾಜಕೀಯ ಅಖಾಡಕ್ಕೆ ಧುಮುಕಿದ್ದರು. ಆದ್ರೆ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ವಿಧಾನಸಭೆ, ಮಂಡ್ಯ ಲೋಕಸಭಾ ಚುನಾವಣೆಗೆ ಟಿಕೆಟ್ ಮಿಸ್ ಆಗಿತ್ತು. ಇದೆಲ್ಲವೂ ನಿಖಿಲ್ ಕುಮಾರ್ ಸ್ವಾಮಿಗಾಗಿ ಸಿಎಂ ಕಸರತ್ತು ಮಾಡುತ್ತಿದ್ದಾರೆ. ಮಗನ ರಾಜಕೀಯ ನೆಲೆಗಾಗಿ “ಲಕ್ಷ್ಮಿ”ಗೆ ಬೇರಡೆ ಶಾಶ್ವತ ನೆಲೆ ಕೊಟ್ರಾ ಸಿಎಂ ಅಥವಾ ನಾಗಮಂಗಲದ ರಾಜಕೀಯ ದಾರಿ ಮಗನಿಗಾಗಿ ಸುಲಭವಾಗಿ ಮಾಡಲು ಸಿಎಂ ಪ್ಲಾನ್ ಮಾಡಿದ್ರಾ ಅನ್ನೋ ಚರ್ಚೆಗಳು ಈಗ ಎದ್ದಿವೆ.
ರಾಮನಗರ: ಸಿಎಂ ಎಚ್.ಡಿ ಕುಮಾರಸ್ವಾಮಿ ಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರ ಮಧ್ಯೆ ಭಿನ್ನಮತ ಸ್ಫೋಟಗೊಂಡಿದ್ದು, ಎರಡು ಗುಂಪುಗಳ ನಾಯಕರು ಹಾಗೂ ಕಾರ್ಯಕರ್ತರು ಕೈ ಕೈ ಮಿಲಾಯಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ತಾಲೂಕು ಅಧ್ಯಕ್ಷ ಜಯಮುತ್ತು ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದು ಕೆಲವು ಕಾರ್ಯಕರ್ತರು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಮಾತಿಗೆ ಮಾತು ಬೆಳೆದು ಸ್ಥಳೀಯ ಜೆಡಿಎಸ್ ಮುಖಂಡರಾದ ಲಿಂಗೇಶ್ ಕುಮಾರ್ ಮತ್ತು ಜಯಮುತ್ತು ಬಣಗಳ ನಡುವೆ ಜಗಳವಾಗಿದೆ.
ಕಾರ್ಯಕರ್ತರು ಚೇರ್ ಎತ್ತಿಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಕೆಲವರಿಗೆ ಗಾಯವಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಚೇರ್ ಹಾಗೂ ಪೀಠೋಪಕರಣಗಳು ಪುಡಿಪುಡಿಯಾಗಿವೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಾತಾವರಣ ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು. ಆದರೂ ಕಾರ್ಯಕರ್ತರು ಪರಸ್ಪರ ಜಗಳವಾಡಿಕೊಂಡಿದ್ದಾರೆ.
ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಮುಂದೆ ಕೆಲವರು ಚಾಡಿ ಹೇಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಮಧ್ಯಪ್ರವೇಶ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಯಾರೊಬ್ಬರೂ ಗಲಾಟೆಯನ್ನು ನಿಲ್ಲಿಸಲು ಮುಂದಾಗುತ್ತಿಲ್ಲ ಎಂದು ಕಾರ್ಯಕರ್ತರೊಬ್ಬರು ದೂರಿದ್ದಾರೆ.
ಅಧ್ಯಕ್ಷರಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ಹೆಸರಿಗೆ ಮಾತ್ರ ಅಧಿಕಾರದಲ್ಲಿ ಇದ್ದಾರೆ. ಹೈಕಮಾಂಡ್ ಆದೇಶದಂತೆ ಎಲ್ಲವೂ ನಡೆಯುತ್ತದೆ. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ನಾಯಕತ್ವ ವಹಿಸುತ್ತಿದ್ದಾರೆ. ಇದರಿಂದಾಗಿ ಮುಖಂಡರು ಪರಸ್ಪರ ಜಗಳಕ್ಕೆ ಇಳಿದಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ಸಿಂಗ್ರಿಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ನಾವು ಜಗಳ ಮಾಡಿಲ್ಲ. ಕಚೇರಿಯಲ್ಲಿ ಯಾವುದೇ ಗಲಾಟೆಯಾಗಿಲ್ಲ. ನನಗೂ ಗಾಯವಾಗಿಲ್ಲ. ಚೇರ್ ಪುಡಿಪುಡಿಯಾಗಿಲ್ಲ ಎಂದು ಘಟನೆಯನ್ನು ಮುಚ್ಚಿಹಾಕಲು ಜಯರಾಂ ಯತ್ನಿಸಿದ್ದಾರೆ.
ತುಮಕೂರು: ಸಿಎಂ ಅವರದ್ದು ಕಣ್ಣೀರಿನ ರಾಜಕಾರಣವಾದರೆ ಡಿಸಿಎಂ ಅವರದ್ದು ಬಿಲ್ಡಪ್ ರಾಜಕಾರಣ ಎಂದು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಬರ ಅಧ್ಯಯನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಅವರು, ಈ ಭಾಗದ ಎತ್ತಿನ ಹೊಳೆ ಯೋಜನೆಗೆ ನಿಗದಿಯಾದ ಹಣವೆಷ್ಟು? ವಿಳಂಬದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ಎಷ್ಟು? ಸಮರೋಪಾದಿಯಲ್ಲಿ ಈ ನೀರಾವರಿ ಯೋಜನೆಗಳನ್ನ ಬರಪೀಡಿತ ಪ್ರದೇಶಗಳಲ್ಲಿ, ಮಳೆಯಿಲ್ಲದ ಪ್ರದೇಶದಲ್ಲಿ ಸರ್ಕಾರ ಯಾಕೆ ಮಾಡೋದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಸಿಎಂ ಮೊದಲು ಕಣ್ಣೀರಿನ ರಾಜಕಾರಣ, ಜಾತಿ ರಾಜಕಾರಣ, ಎತ್ತಿಕಟ್ಟುವ ರಾಜಕಾರಣ ಮಾಡ್ತಾರೆ. ಡಿಸಿಎಂ ಪರಮೇಶ್ವರ್ ಸಾಲು ಸಾಲು ವಾಹನಗಳನ್ನ ತಂದು ಬಿಲ್ಡಪ್ ರಾಜಕಾರಣ ಮಾಡ್ತಾರೆ. ಇದನ್ನೆಲ್ಲ ಬಿಟ್ಟು ಮೊದಲು ಜನರ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ. ಇನ್ನು ಎಷ್ಟು ಸಚಿವರು ಬರ ಪ್ರವಾಸ ಮಾಡಿದ್ದಾರೆ? ಕೃಷಿ ಸಚಿವರು ಎಲ್ಲಿದ್ದಾರೆ? ಬರಪೀಡಿತ 100 ತಾಲೂಕುಗಳಲ್ಲಿ ಹಸುಗಳೆಷ್ಟಿವೆ? ಮೇವು ಬ್ಯಾಂಕ್ ಎಲ್ಲಿ ಸ್ಥಾಪನೆ ಮಾಡಿದ್ದೀರಾ? ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎಲ್ಲಿ ಮಾಡುತ್ತೀರಿ ಎಂದು ಪ್ರಶ್ನಿಸಿ ಸಿಎಂ ಹಾಗೂ ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಜನರ ಸಮಸ್ಯೆಯನ್ನು ಕಾರ್ಯಕ್ರಮಕ್ಕೆ ಆಗಮಿಸಿರುವ ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ಅವರ ಬಳಿ ಹೇಳಿಕೊಳ್ಳಿ. ಕೇಂದ್ರದಿಂದ ಸಹಾಯ ಮಾಡಲು ನಾವು ಬದ್ಧರಿದ್ದೇವೆ ಎಂದು ಈ ವೇಳೆ ಜನರಿಗೆ ಭರವಸೆ ನೀಡಿದರು.
ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮುಂದಿಟ್ಟ 50:50 ಸೂತ್ರಕ್ಕೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಬ್ಬು ಬೆಳೆದು ಕಣ್ಣೀರು ಸುರಿಸಿದ್ದ ರೈತರ ಕಣ್ಣೀರನ್ನು ಒರೆಸಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.
ಸಂಧಾನ ಸಭೆಯ ನಿರ್ಣಯ:
ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.
ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.
ಬರೀ ರೈತರ ವಾದ ಕೇಳಿದರೆ ನಮ್ಮದೂ ಸಮಸ್ಯೆ ಇದೆ. ಅದನ್ನು ಸ್ವಲ್ಪ ಕೇಳಿ ಎಂದು ಮಾಲೀಕರು ತಮ್ಮ ವಾದವನ್ನು ಸಿಎಂ ಕುಮಾರಸ್ವಾಮಿ ಅವರ ಮುಂದೆ ಮಂಡಿಸಿದ್ದಾರೆ.
ಸಕ್ಕರೆ ಸಾಹುಕಾರರ ವಾದವೇನು?: ಎಫ್.ಆರ್.ಪಿ ದರದಲ್ಲಿ ಒಪ್ಪಂದ ಮಾಡಿಕೊಂಡಾಗ ಸಕ್ಕರೆ ದರ ಕೆಜಿಗೆ 35 ರಷ್ಟಿತ್ತು, ಈಗ 27ಕ್ಕೆ ಇಳಿದಿದೆ. ಟನ್‍ಗೆ 2,900 ರೂ. ಒಪ್ಪಂದ ಆಗಿದ್ದೂ ಲಾಭ ಬಂದ ಸಂದರ್ಭದಲ್ಲಿ 3,400 ರೂ. ನೀಡಿದ್ದೇವೆ. ಕಂಪೆನಿಗಳಿಂದ ವಿದ್ಯುತ್ ಖರೀದಿಯಲ್ಲಿ ಸರ್ಕಾರ ಮೋಸ ಮಾಡಿದೆ. ಪ್ರತಿ ಯೂನಿಟ್‍ಗೆ 5.87 ರೂ. ಒಪ್ಪಂದ ಮಾಡಿಕೊಂಡಿತ್ತು, ಈಗ 3.87 ರೂ. ನೀಡುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಕಾರ್ಖಾನೆಗಳು ಉತ್ತಮ ದರದಲ್ಲಿ ವಿದ್ಯುತ್ ಖರೀದಿಸುತ್ತಿವೆ ಎಂದು ಹೇಳಿದ್ದಾರೆ.
ಬರಗಾಲದಿಂದ ಕೇವಲ 8ರಿಂದ 10 ಲಕ್ಷ ಟನ್ ಕಬ್ಬು ಅರೆಯುತ್ತಿದ್ದೇವೆ. ಇದಕ್ಕೂ ಮೊದಲು 30 ರಿಂದ 40 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿತ್ತು. ಇಥೆನಾಲ್‍ಗೆ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟಿದೆ. ರಾಜ್ಯದಿಂದ ಯಾವುದೇ ಪ್ರೋತ್ಸಾಹ ಇಲ್ಲ. ನೆರೆ ರಾಜ್ಯಗಳು ಬಡ್ಡಿ ರಹಿತ ಸಾಲ ನೀಡಿ ಸಹಾಯಕ್ಕೆ ಬಂದಿವೆ, ರಾಜ್ಯದಲ್ಲಿ ಏನೂ ಆಗಿಲ್ಲ. 6-8 ತಿಂಗಳಾದ್ರೂ ಕಾರ್ಖಾನೆ ಖರೀದಿಸಿದ ವಿದ್ಯುತ್‍ಗೆ ಸರ್ಕಾರ ಹಣ ಪಾವತಿಸಿಲ್ಲ. 15 ದಿನದೊಳಗೆ ಪಾವತಿಸಿ ಅಂದರೆ ಹೇಗೆ? ಸರ್ಕಾರವೂ ಬಾಕಿಯನ್ನು 15 ದಿನದಲ್ಲಿ ಪಾವತಿಸಲಿ. 10 ತಿಂಗಳಾದರೂ ಹೈಲೆವೆಲ್ ಕಮಿಟಿ ಸಭೆ ನಡೆಸಿಲ್ಲ. ಕಾರ್ಖಾನೆಗಳಿಗೆ ಬೇಕಾದ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ಮಾಲೀಕರು ಸಿಎಂಗೆ ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕ ಬಾಲಚಂದ್ರ ಜಾರಕಿಹೊಳಿ, ಮೇಜರ್ ಸಮಸ್ಯೆ ಬಾಗಲಕೋಟೆಯದ್ದು. ನಾವು ಎಫ್.ಆರ್.ಪಿಗಿಂತ ಹೆಚ್ಚು ದರ ಕೊಟ್ಟಿದ್ದೇವೆ. ನಮ್ಮದು ಸಮಸ್ಯೆ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೆಲವರು ಬಾಕಿ ಪಾವತಿಗೆ ಸಮಯ ಕೇಳಿದ್ದಾರೆ. ಎಲ್ಲ ಸರಿ ಹೋಗುತ್ತೆ ಅಂದ್ರು. ಆದರೆ ಸಭೆಯಲ್ಲಿ ನಡೆದ ಚರ್ಚೆ ವಿಷಯದಲ್ಲಿ ಗೊಂದಲವಿದೆ. ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ, ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಬೆಳಗಾವಿಯಲ್ಲಿ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಶಾಸಕರಾಗಿರುವ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಆರ್.ಪಾಟೀಲ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಆನಂದ ನ್ಯಾಮಗೌಡ ಹಾಜರಿದ್ದರು.
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವ ಮೈತ್ರಿ ಸರ್ಕಾರದ ಮಹತ್ವದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದು ಚಾಲನೆ ನೀಡಲಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಮುಖ್ಯಮಂತ್ರಿಗಳು ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಮೊದಲ ದಿನವೇ 53 ಸಾವಿರ ವರ್ತಕರಿಗೆ ನೆರವು ನೀಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಬಡವರ ಬಂಧು ಯೋಜನೆಯಡಿ ಸಾಲಕ್ಕಾಗಿ ಭಾರಿ ಬೇಡಿಕೆ ಬಂದಿದೆ. ಈ ಯೋಜನೆಯಿಂದ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ದಂಧೆಯ ಮೇಲೆ ಕಡಿವಾಣ ಬೀಳುತ್ತದೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಗೆ ಒಂದೊಂದು ನೋಡಲ್ ಬ್ಯಾಂಕ್ ಗುರುತಿಸಲಾಗುತ್ತದೆ. ಈ ಬ್ಯಾಂಕುಗಳು ಆಯಾ ಜಿಲ್ಲೆಗಳಲ್ಲಿನ ಸಾಲ ಸೌಲಭ್ಯದ ಬ್ಯಾಂಕ್‍ಗಳನ್ನು ಸೂಚಿಸುತ್ತವೆ. ಬೆಂಗಳೂರಿನಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಜನತಾ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬೆಂಗಳೂರು ಡಿಸಿಸಿ ಬ್ಯಾಂಕ್‍ಗಳನ್ನು ನೋಡಲ್ ಬ್ಯಾಂಕ್‍ಗಳಾಗಿ ಗುರುತಿಸಲಾಗಿದೆ. ಈ ಬ್ಯಾಂಕ್‍ಗಳು ಮೊಬೈಲ್ ಸರ್ವಿಸ್ ವ್ಯಾನ್‍ಗಳನ್ನು ಹೊಂದಲಿವೆ. ಸಣ್ಣ ವರ್ತಕರು ಬೆಳಗ್ಗೆ ಸಾಲ ಪಡೆದು ಸಂಜೆ ವಾಪಸ್ ಮಾಡಬಹುದಾಗಿದೆ.
ಏನಿದು ಬಡವರ ಬಂಧು ಯೋಜನೆ?
ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ‘ಬಡವರ ಬಂಧು’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?
ಮಡಿಕೇರಿ: ಕೊಡಗು ಜಲಪ್ರಳಯಕ್ಕೆ ತತ್ತರಿಸಿ ಹೋಗಿ ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ. ದುರಂತದಲ್ಲಿ ಮನೆಯನ್ನು ಕಳೆದುಕೊಂಡವರು ಸಾವಿರಾರು ಮಂದಿ ಇದ್ದಾರೆ. ಇವರಿಗೆಲ್ಲಾ ಆದಷ್ಟು ಶೀಘ್ರವೇ ಮನೆಗಳನ್ನು ಕಟ್ಟಿಕೊಡುವ ಭರವಸೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರಿಂದಲೂ ಸಿಕ್ಕಿತ್ತು.
ಆಗಿದ್ದು ಆಗಿ ಹೋಯಿತು, ಇನ್ನೇನು ಕೆಲವೇ ತಿಂಗಳಲ್ಲಿ ನಮಗೆಲ್ಲಾ ಸೂರು ಸಿಗುತ್ತೆ ಅಂದು ಕೊಂಡಿದ್ದ ಮಂದಿಗೆ ಇದೀಗ ನಿರಾಸೆ ಆಗುತ್ತಿದೆ. ಯಾಕೆಂದರೆ ಸರ್ಕಾರ ಇನ್ನೂ ಮಾದರಿ ಮನೆಗಳನ್ನು ಫೈನಲ್ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ.
ಮನೆ ನಿರ್ಮಾಣಕ್ಕೆ ಪೂರಕವಾಗಿ ಕೆಲಸಗಳು ಕೂಡ ಮೊದ ಮೊದಲು ಭರದಿಂದಲೇ ಸಾಗಿದವು. ಈಗಾಗಲೇ ಮಾದರಿ ಮನೆಗಳ ಕೆಲಸ ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ. ಇನ್ನೇನು ಬೇಗನೆ ಮನೆಗಳನ್ನು ಕಟ್ಟುತ್ತಾರೆ ಅಂತಾ ಸಂತ್ರಸ್ತರು ಅಂದುಕೊಂಡಿದ್ದರು. ಆದರೆ ಸದ್ಯದ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ರಾಜಕೀಯದಲ್ಲೇ ಹೆಚ್ಚು ತಲೆಕೆಡಿಸಿಕೊಂಡಿರುವ ರಾಜಕೀಯ ನಾಯಕರು ನಮ್ಮ ಕಡೆ ಗಮನ ಹರಿಸಿಲ್ಲ ಅಂತಾ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಇನ್ನೂ ಆಶ್ರಯ ಕೇಂದ್ರಗಳಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಬಾಡಿಗೆ ಮನೆಗೆ ತೆರಳುವ ಜನರಿಗೆ ಜಿಲ್ಲಾಡಳಿತವೇ ಬಾಡಿಗೆ ಹಣ ಪಾವತಿಸುತ್ತದೆ ಅಂತಾ ಹೇಳಿತ್ತು. ಆದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ಜಿಲ್ಲಾಡಳಿತವು ಮೌನವಾಗಿ ಉಳಿದಿದೆ. ಇನ್ನೂ ನಾವು ಎಷ್ಟು ದಿವಸ ಇದೇ ರೀತಿಯ ಜೀವನವನ್ನು ನಡೆಸಬೇಕು? ಮೊದಮೊದಲು ತೋರಿದ ಆಸಕ್ತಿ ಈಗ ಯಾಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಜನರು ಜಲಪ್ರಳಯದಲ್ಲಿ ಸಿಕ್ಕಿದ್ದಾಗ ರಾಜ್ಯ ಸರ್ಕಾರ ಸ್ಪಂದಿಸಿದ ರೀತಿ ಎಲ್ಲರಿಗೂ ಖುಷಿ ತಂದಿತ್ತು. ಕೊನೆಪಕ್ಷ ನಮ್ಮ ಕಷ್ಟಕ್ಕೆ ಮಿಡಿಯುವ ಮಂದಿ ಇದ್ದಾರೆ ಎನ್ನುವ ಸಮಾಧಾನ, ಸೂರುಗಳನ್ನು ಕಳೆದುಕೊಂಡ ಜನರಲ್ಲಿತ್ತು. ಆದರೆ ಎರಡೂವರೆ ತಿಂಗಳು ಕಳೆದರೂ ನಮಗೆ ಸೂರು ಸಿಗುತ್ತಿಲ್ಲ ಎಂದು ಸಂತ್ರಸ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಉಡುಪಿ: ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ. ಹಿಂದುತ್ವದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಬೈಂದೂರು ತಾಲೂಕು ತ್ರಾಸಿಯಲ್ಲಿ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಸರ್ಕಾರದ ಯೋಜನೆಗಳಿಗೆ ಬೇಕಾಗುವಷ್ಟು ಹಣ ನಮ್ಮಲ್ಲಿದೆ. ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ- ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತ ಬಿಜೆಪಿಯವರು ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ದೈವಪ್ರೇರಿತ ಮುಖ್ಯಮಂತ್ರಿ. ಬಿಜೆಪಿ ನಾಯಕರು ಸರ್ಕಾರ ಬೀಳುವ ಕನಸಲ್ಲಿದ್ದಾರೆ. ನಮಗೆ ದೈವ ಪ್ರೇರಣೆ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರಬೇಕಂತ ದೇವರು ತೀರ್ಮಾನಿಸ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಉಪಚುನಾವಣೆ ನಂತರ ನಾನು ಮನೆಗೆ ಹೋಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದಂತೆ ಯಾವುದೂ ಆಗಲ್ಲ. ಚುನಾವಣೆ ನಂತರ ಬಡವರ ಮನೆಗೆ ಬಂದು ಚರ್ಚೆ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಅಪ್ಪ-ಮಕ್ಕಳನ್ನು ಸೋಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.
ಬೆಂಗಳೂರು: ವಿಧಾನಸೌಧದ ಸುತ್ತಲಿನ ಗೇಟ್‍ಗಳನ್ನ ತೆಗಿಸಿಬಿಡ್ತೀನಿ. ನನ್ನ ಶರ್ಟ್ ಹಿಡಿದು ಯಾರು ಬೇಕಾದರೂ ಪ್ರಶ್ನಿಸಬಹುದು ಎಂದು ಹೇಳಿದ್ದ ಎಚ್‍ಡಿ ಕುಮಾರಸ್ವಾಮಿ ಅವರು ಈಗ ಅಧಿಕಾರ ಸಿಕ್ಕ ತಕ್ಷಣ ವರಸೆ ಬದಲಿಸಿದ್ದಾರೆ.
ಹೋದಲ್ಲಿ, ಬಂದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಕರೆಸಿಕೊಂಡಿರುವ ಮಾಧ್ಯಮಗಳ ಪದೇ ಪದೇ ವಾಗ್ದಾಳಿ ನಡೆಸ್ತಿದ್ದ ಮುಖ್ಯಮಂತ್ರಿಗಳು ಈಗ ಮಾಧ್ಯಮವನ್ನ ಶಕ್ತಿ ಕೇಂದ್ರದಿಂದ ದೂರ ಇಡಲು ಮುಂದಾಗಿದ್ದಾರೆ. ವಿಧಾನಸೌಧಕ್ಕೆ ಮಾಧ್ಯಮ ಪ್ರವೇಶವನ್ನ ನಿರ್ಬಂಧಿಸಿ ಮೌಖಿಕ ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಶಿರಸಾ ಪಾಲಿಸುತ್ತಿರುವ ಪೊಲೀಸರು ಪಾಸ್ ಇರುವ ಮಾಧ್ಯಮದವರ ವಾಹನಗಳನ್ನ ವಿಧಾನಸೌಧದ ಗೇಟ್‍ನಲ್ಲೇ ತಡೆಯುತ್ತಿದ್ದಾರೆ. ಗೇಟ್ ಬಳಿ ತಮ್ಮ ವಾಹನ ನಿಲ್ಲಿಸಬೇಕಿರುವ ಮಾಧ್ಯಮದವರು ಅಲ್ಲಿಂದ ನಡೆದುಕೊಂಡು ಹೋಗಬೇಕಿದೆ. ಈ ಆದೇಶ ಕೇವಲ ಮಾಧ್ಯಮದವರಿಗೆ ಮಾತ್ರ ಅನ್ವಯವಾಗಿದ್ದು, ವಕೀಲರು ಮತ್ತು ಸರ್ಕಾರಿ ವಾಹನಗಳಿಗೆ ವಿಧಾನಸೌಧ ಆವರಣಕ್ಕೆ ತಪಾಸಣೆ ಇಲ್ಲದೆ ಪ್ರವೇಶ ನೀಡಲಾಗಿದೆ.
ಇಷ್ಟೇ ಅಲ್ಲದೇ ಮಾಧ್ಯಮದವರು ವಿಧಾನಸೌಧದ ಒಳಗೆ ಏಕಾಏಕಿ ಓಡಾಡುವಂತಿಲ್ಲ. ನಿಮಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಲಾಗಿದೆ. ಈ ಸ್ಥಳದಲ್ಲೇ ಪ್ರತಿಕ್ರಿಯೆ ಪಡೆಯಬೇಕು ಅಂತಲೂ ಸೂಚಿಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧದ ವರದಿಗಳ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನು ಹತ್ತಿಕ್ಕುವ ಪರೋಕ್ಷ ಯತ್ನವೇ ಇದು ಅಂತ ಚರ್ಚೆಗೆ ಗ್ರಾಸವಾಗಿದೆ.