Tag: ಸಿಎಂ ಅಶೋಕ್ ಗೆಹ್ಲೋಟ್

  • ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ಕೊರೊನಾಗೆ ಬಲಿ

    ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ಕೊರೊನಾಗೆ ಬಲಿ

    ಜೈಪುರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ(89) ಅವರು ಕೊರೊನಾಗೆ ಬಲಿಯಾಗಿದ್ದಾರೆ.

    1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಹಾಗೂ ಹರಿಯಾಣ ಮತ್ತು ಬಿಹಾರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಜಗನ್ನಾಥ್ ಪಹಾಡಿಯಾರವರು ಬುಧವಾರ ನಿಧನರಾಗಿದ್ದಾರೆ.

    ಈ ಕುರಿತಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ರವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ರಾಜ್ಯ ಸರ್ಕಾರ ಗುರುವಾರ ಒಂದು ದಿನ ಶೋಕಾಚರಣೆಯನ್ನು ಘೋಷಿಸಿದೆ. ಅಲ್ಲದೇ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧದಷ್ಟು ಹಾರಿಸಲಾಗುತ್ತದೆ.

    ಪಹಾಡಿಯಾರವರಿಗೆ ಸಂತಾಪ ಸೂಚಿಸಲು ಗುರುವಾರ ಮಧ್ಯಾಹ್ನ 12 ಗಂಟೆಗೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಂದೇ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುತ್ತದೆ.

  • ಇನ್ಮುಂದೆ ರಾಜಸ್ಥಾನದಲ್ಲಿ ವಾರಾಂತ್ಯಕ್ಕೆ ನೈಟ್ ಕರ್ಫ್ಯೂ ಜಾರಿ

    ಇನ್ಮುಂದೆ ರಾಜಸ್ಥಾನದಲ್ಲಿ ವಾರಾಂತ್ಯಕ್ಕೆ ನೈಟ್ ಕರ್ಫ್ಯೂ ಜಾರಿ

    ಜೈಪುರ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಗುರುವಾರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಏಪ್ರಿಲ್ 16ರಿಂದ, 19ರವರೆಗೂ ಸಂಜೆ 6ರಿಂದ ಬೆಳಗ್ಗೆ 5ರವರೆಗೂ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಘೋಷಿಸಿದ್ದಾರೆ.

    ಈ ಕುರಿತಂತೆ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಕೋವಿಡ್-19 ಹೊಸ ನಿರ್ಬಂಧನೆಗಳನ್ನು ಪಾಲಿಸುವಂತೆ ಹಾಗೂ ಅವುಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

    ರಾಜಸ್ಥಾನದಲ್ಲಿ ಕೊರೊನಾಗೆ ನಿನ್ನೆ 33 ಮಂದಿ ಸಾವನ್ನಪ್ಪಿದ್ದು, 6,658 ಹೊಸ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ, ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ನೈಟ್ ಕರ್ಫ್ಯೂ ವೇಳೆ ಬ್ಯಾಂಕಿಂಗ್, ಎಲ್‍ಪಿಜಿ ಸೇವೆಗಳು, ಹಣ್ಣು, ತರಕಾರಿ ಮತ್ತು ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

    ಈ ಸಮಯದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳದಿದ್ದರೆ, ಸೋಂಕಿನ ಪ್ರಮಾಣ ಹೆಚ್ಚಾಗಲಿದ್ದು, ಇತರ ರಾಜ್ಯಗಳಂತೆ ಇಲ್ಲಿನ ಪರಿಸ್ಥಿತಿ ಕೂಡ ಹದಗೆಡಬಹುದು ಎಂದು ಸಿಎಂ ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.

  • ಪಟಾಕಿ ಮಾರಾಟ ನಿಷೇಧಿಸಿದ ರಾಜಸ್ಥಾನ ಸರ್ಕಾರ

    ಪಟಾಕಿ ಮಾರಾಟ ನಿಷೇಧಿಸಿದ ರಾಜಸ್ಥಾನ ಸರ್ಕಾರ

    ಜೈಪುರ: ಕೊರೊನಾ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾಳಿಯ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟದ ಮೇಲೆ ನಿಷೇಧ ವಿಧಿಸಿದೆ.

    ದೀಪಾವಳಿ ಹತ್ತಿರವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರವನ್ನು ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಪಟಾಕಿ ಮಾರಾಟ ಮಾಡದಂತೆ ಸೂಚಿಸಿದೆ. ಪಟಾಕಿಯಿಂದ ವಾಯು ಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ.

    ಸಿಎಂ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಫಿಟ್ನೆಸ್ ಪ್ರಮಾಣ ಪತ್ರವಿಲ್ಲದೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ಶಾಲಾ ಕಾಲೇಜುಗಳನ್ನು ನವೆಂಬರ್ 16ರ ವರೆಗೂ ಮುಚ್ಚಲು ಇದೇ ವೇಳೆ ಗೆಹ್ಲೋಟ್ ಸರ್ಕಾರ ತೀರ್ಮಾನ ಮಾಡಿದೆ.

    ಕೊರೊನಾ ವೈರಸ್ ನಿಂದ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ನೋ ಮಾಸ್ಕ್ ನೋ ಎಂಟ್ರಿ, ವಾರ್ ಫಾರ್ ಪ್ಯೂರ್ ಎಂಬ ಅಭಿಯಾನವನ್ನು ಅಲ್ಲಿನ ರಾಜ್ಯ ಸರ್ಕಾರ ಆರಂಭ ಮಾಡುತ್ತಿದೆ. ಇದೇ ವೇಳೆ ಅನ್‍ಲಾಕ್ 6ರ ಮಾರ್ಗಸೂಚಿಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕಿತ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಮಾರಾಟ ನಿಷೇಧ ನಿರ್ಧಾರವನ್ನು ಮಾಡಿದ್ದಾರೆ.

    ಕೊರೊನಾದಂತಹ ಸಂದರ್ಭದಲ್ಲಿ ಜನರು ದೀಪಾಳಿಯಂದು ಪಟಾಕಿ ಬಳಕೆ ಮಾಡುವುದನ್ನು ತಪ್ಪಿಸಬೇಕು ಎಂದು ಸಿಎಂ ಗೆಹ್ಲೋಟ್ ಮನವಿ ಮಾಡಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವಾಯು ಮಾಲಿನ್ಯ ಹೆಚ್ಚಾಗಿದ್ದು, ದೆಹಲಿ ಸರ್ಕಾರವೂ ಕೂಡ ಪಟಾಕಿ ನಿಷೇಧ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆಯೂ ದೆಹಲಿಯಲ್ಲಿ ಪಟಾಕಿಗಳ ಮೇಲೆ ಹಬ್ಬದ ಸಂದರ್ಭಗಳಲ್ಲಿ ನಿಷೇಧ ವಿಧಿಸಲಾಗಿತ್ತು.

  • ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಅಶೋಕ್ ಗೆಹ್ಲೋಟ್- ರಾಜಭವನದಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್ ಶಾಸಕರು

    ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಅಶೋಕ್ ಗೆಹ್ಲೋಟ್- ರಾಜಭವನದಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್ ಶಾಸಕರು

    ಜೈಪುರ: ರಾಜಸ್ಥಾನ ಕಾಂಗ್ರೆಸ್ ಪಕ್ಷದ ಬಂಡಾಯದ ಮುನಿಸು ಮುಂದುವರಿದಿದ್ದು, ಇಂದು ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಪಕ್ಷದ ಶಾಸಕರೊಂದಿಗೆ ರಾಜಭವನಕ್ಕೆ ಭೇಟಿ ನೀಡಿ ಶಕ್ತಿ ಪ್ರದರ್ಶನ ನಡೆಸಿದರು.

    ಗವರ್ನರ್ ಭೇಟಿ ಮಾಡಿದ ಅಶೋಕ್ ಗೆಹ್ಲೋಟ್ ವಿಶೇಷ ಶಾಸನ ಸಭೆಯನ್ನು ಸಮಾವೇಶ ನಡೆಸಲು ಮನವಿ ಮಾಡಿದರು. ಇದಕ್ಕೂ ಮುನ್ನ ಫೈರ್ ಮೊಂಟ್ ಹೋಟೆಲ್ ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಹೋಟೆಲ್‍ನಿಂದ ಬಸ್ ಮೂಲಕ ರಾಜಭವನಕ್ಕೆ ಆಗಮಿಸಿದ್ದರು. ರಾಜಭವನದಲ್ಲಿ ರಾಜ್ಯಪಾಲ ಕಲ್‍ರಾಜ್ ಮಿಶ್ರಾ ಅವರ ಎದುರು ಹಾಜರಾದ ಶಾಸಕರು ವಿಧಾನಸಭಾ ಅಧಿವೇಶನ ನಡೆಸುವಂತೆ ಷೋಷಣೆ ಕೂಗಿದರು.

    ರಾಜ್ಯಪಾಲರ ಭೇಟಿಗೂ ಮುನ್ನ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್, ನಮ್ಮ ಸರ್ಕಾರಕ್ಕೆ ಬಹುಮತ ಇದೆ. ಆದ್ದರಿಂದ ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಅಲ್ಲದೇ ಗವರ್ನರ್ ಮೇಲೆ ಒತ್ತಡ ಬರುತ್ತಿರುವುದರಿಂದಲೇ ಅವರು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.

    ವಿಧಾನಸಭಾ ಅಧಿವೇಶನ ಕರೆಯಬೇಕು ಎಂದು ಗುರುವಾರ ಪತ್ರ ಬರೆದಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಷ್ಟು ಸರಳ ಪ್ರಕ್ರಿಯೆಯನ್ನು ಏಕೆ ತಡ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿಲ್ಲ. ನಮಗೆ ಪೂರ್ತಿ ಬಹುಮತವಿದೆ. ಸೋಮವಾರದಿಂದ ವಿಧಾನಸಭಾ ಅಧಿವೇಶನ ನಡೆಸಬೇಕಿದೆ. ರಾಜಸ್ಥಾನ ಜನರ ಬೆಂಬಲ ನಮ್ಮೊಂದಿಗೆ ಇದೆ. ಒಂದು ವೇಳೆ ಜನರು ರಾಜಭವನ ಎದುರು ಪ್ರತಿಭಟನೆ ನಡೆಸಿದೆ ನಾವು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇತ್ತ ಸದನ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ಕಲ್‍ರಾಜ್ ಮಿಶ್ರಾ, ವಿಧಾನಸಭಾ ಅಧಿವೇಶನ ಕರೆಯುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಯಾವುದೇ ನಿರ್ಣಯ ಕೈಗೊಂಡರು ನಿಯಮಗಳ ಅನ್ವಯವೇ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

  • ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

    ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

    ಜೈಪುರ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ನಿವಾಸ ಹಾಗೂ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿನ್ ಪೈಲಟ್ ಬಂಡಾಯದ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಂದರ್ಭದಲ್ಲೇ ಇಡಿ ಅಧಿಕಾರಿಗಳು ಅಗ್ರಸೈನ್ ಗೆಹ್ಲೋಟ್ ಆಸ್ತಿಗಳ ಮೇಲೆ ದಾಳಿ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

    ಹಗರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಡಿ ದಾಳಿ ನಡೆಸಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ ಸೇರಿದಂತೆ ದೇಶದ 13 ಕಡೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    ಇಡಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಸಬ್ಸಿಡಿ ದರದಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಅಧಿಕೃತವಾಗಿ ರಸಗೊಬ್ಬರಗಳನ್ನು ಪೂರೈಸುತ್ತದೆ. ಈ ಗೊಬ್ಬರವನ್ನು ರೈತರು ಸಬ್ಸಿಡಿ ದರದಲ್ಲಿ ಖರೀದಿ ಮಾಡುತ್ತಾರೆ. ಆದರೆ ಅಗ್ರಸೈನ್ ಗೆಹ್ಲೋಟ್ ಸೇರಿದ ಅನುಪಮ್ ಕೃಷಿ ಸಂಸ್ಥೆ 2007 ರಿಂದ 2009ರ ನಡುವೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಖರೀದಿ ಮಾಡಿ ಅದನ್ನು ರೈತರಿಗೆ ಮಾರಾಟ ಮಾಡದೆ ಬೇರೆ ಕಂಪನೆಗಳಿಗೆ ಮಾರಾಟ ಮಾಡಿದೆ. ಆ ಸಂಸ್ಥೆಗಳು ಗೊಬ್ಬರವನ್ನು ಮಲೇಷಿಯಾ, ಸಿಂಗಪೂರಕ್ಕೆ ಅಕ್ರಮವಾಗಿ ರಪ್ತು ಮಾಡಿವೆ.

    2013-13 ರಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಈ ಹಗರಣವನ್ನು ಬೆಳಕಿಗೆ ತಂದಿದ್ದರು. ಆ ವೇಳೆ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಅಗ್ರಸೈನ್ ಗೆಹ್ಲೋಟ್, ತಮ್ಮಿಂದ ಕೆಲ ಮಧ್ಯವರ್ತಿಗಳು ರೈತರಿಗೆ ರಸಗೊಬ್ಬರ ನೀಡುವುದಾಗಿ ಖರೀದಿ ಮಾಡಿ ಅದನ್ನು ರಪ್ತು ಮಾಡಿದ್ದಾರೆ ಎಂದು ಹೇಳಿದ್ದರು. ಸಬ್ಸಿಡಿಯುಕ್ತ ಪೊಟ್ಯಾಷ್ ರಫ್ತು ಮಾಡುವುದರ ಮೇಲೆ ನಿಷೇಧ ವಿದ್ದರು ಅಗ್ರಸೈನ್ ಸಂಸ್ಥೆ ರಫ್ತು ಮಾಡಿದೆ ಎಂದು ಬಿಜೆಪಿ 2017ರಲ್ಲಿ ಆರೋಪ ಮಾಡಿತ್ತು.

  • ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

    ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

    -ಪೈಲಟ್ ಮನವೊಲಿಸಲು ಹಿರಿಯ ನಾಯಕರ ಯತ್ನ

    ಜೈಪುರ: ರಾಜಸ್ಥಾನದ ರಾಜಕೀಯದ ಬಿಕ್ಕಟ್ಟು ಮುಂದುವರಿದಿದ್ದು, ಸೋಮವಾರವಷ್ಟೇ ರಾಜಸ್ಥಾನ ಕಾಂಗ್ರೆಸ್ ಪಕ್ಷ ತನ್ನ ಶಾಸಕಾಂಗ ಸಭೆ ನಡೆಸಿ ಬಳಿಕ ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿತ್ತು. ಆದರೆ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಭಾವುಟ ಹರಿಸಿರುವ ಸಚಿನ್ ಪೈಲಟ್‍ಗೆ ಇನ್ನು ಪಕ್ಷದ ಬಾಗಿಲುಗಳು ತೆರೆದಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಸದ್ಯ ಲಭಿಸಿದೆ. ಇದಕ್ಕೆ ಪೂರಕ ಎಂಬಂತೇ ಅವಿನಾಶ್ ಪಾಂಡೆ ಕೂಡ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಅಹ್ಮದ್ ಪಟೇಲ್‍ರಂತಹ ನಾಯಕರು ಸಚಿನ್ ಪೈಲಟ್‍ರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

    ಇತ್ತ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ 18 ಶಾಸಕರಿಗೆ ನೋಟಿಸ್ ನೀಡಲಾಗಿದ್ದು, 2 ದಿನಗಳ ಒಳಗೆ ಶಾಸಕರು ನೋಟಿಸ್‍ಗೆ ಉತ್ತರಿಸಿಬೇಕು ಎಂದು ತಿಳಿಸಿದ್ದು, ಇಲ್ಲವಾದರೆ ಅನರ್ಹತೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕೆಲ ಶಾಸಕರು ನಿವಾಸದಲ್ಲಿ ಇಲ್ಲದ ಕಾರಣ ಅವರ ನಿವಾಸಗಳ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಸಭೆಗೆ ಗೈರಾಗಿದ್ದ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಸ್ಪೀಕರ್‍ಗೆ ಮನವಿ ಸಲ್ಲಿಸಿದೆ. ಮುಂದಿನ ಎರಡು ದಿನಗಳಲ್ಲಿ ಶಾಸಕರು ಸಭೆಗೆ ಗೈರಾದ ಬಗ್ಗೆ ವಿವರಣೆ ನೀಡದಿದ್ದರೆ ಸಿಎಲ್‍ಪಿಗೆ ರಾಜೀನಾಮೆ ನೀಡಿರುವುದಾಗಿ ಪರಿಗಣಿಸಲಾಗುತ್ತದ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಷ್ ಪಾಂಡೆ ತಿಳಿಸಿದ್ದಾರೆ.

    ಇತ್ತ ಪಕ್ಷದಲ್ಲಿ ಉಂಟಾಗಿರುವ ಬಂಡಾಯದ ಕಾರಣ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ ಪಕ್ಷದ ಹಿರಿಯ ನಾಯಕರೊಂದಿಗೆ ಜೈಪುರದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೈಲಟ್ ಬಂಡಾಯದ ಕಾರಣದ ಉಂಟಾಗಿರುವ ರಾಜಕೀಯ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೇ ಸದ್ಯದ ಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಭಾವಿಸುತ್ತಿಲ್ಲ. ಅಂತಹ ಸಂದರ್ಭ ಎದುರಾದರೆ ಬಿಜೆಪಿ ಖಂಡಿತ ಬಹುಮತ ಸಾಬೀತು ಮಾಡಲು ಡಿಮಾಂಡ್ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಹೇಳಿದ್ದಾರೆ.

  • ಪ್ಲೀಸ್.. ನನ್ನ ಮದ್ವೆ ನಿಲ್ಲಿಸಿ- ಸಿಎಂ ಮನೆ ಬಾಗಿಲು ತಟ್ಟಿದ ಬಾಲಕಿ

    ಪ್ಲೀಸ್.. ನನ್ನ ಮದ್ವೆ ನಿಲ್ಲಿಸಿ- ಸಿಎಂ ಮನೆ ಬಾಗಿಲು ತಟ್ಟಿದ ಬಾಲಕಿ

    ಜೈಪುರ: 15 ವರ್ಷದ ಬಾಲಕಿ ತನ್ನ ಮದುವೆ ನಿಲ್ಲಿಸುವಂತೆ ಸಿಎಂ ಅಶೋಕ್ ಗೆಹ್ಲೋಟ್ ಅವರ ನಿವಾಸ ಬಾಗಿಲು ತಟ್ಟಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ತಾನದ ಟೊಂಕ್ ಜಿಲ್ಲೆಯ ನಿವಾಸಿಯಾಗಿರುವ ಬಾಲಕಿ ಸೋಮವಾರ ನಡೆದ ಮುಖ್ಯಮಂತ್ರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವೇಳೆ ತನ್ನ ಮದುವೆ ನಿಲ್ಲಿಸುವಂತೆ ಸಿಎಂ ಅವರ ಎದುರು ಮನವಿ ಮಾಡಿದ್ದಾಳೆ.

    ಬಾಲಕಿ ತನ್ನ ಚಿಕ್ಕಪ್ಪನೊಂದಿಗೆ ಮುಖ್ಯಮಂತ್ರಿಗಳ ನಿವಾಸದ ಬಳಿ ಆಗಮಿಸಿದ್ದು, ಈ ವೇಳೆ ತನಗೆ ಬಲವಂತದ ಮದುವೆ ಮಾಡಲು ತಂದೆ ಮುಂದಾಗಿದ್ದಾರೆ ಎಂದು ಸಿಎಂ ಅವರಿಗೆ ತಿಳಿಸಿದ್ದಾಳೆ. ಇದೇ ವೇಳೆ ನನ್ನ ತಾಯಿ ನನಗೆ ಜನ್ಮ ನೀಡಿ ಸಾವನ್ನಪ್ಪಿದ್ದಾಳೆ. ನನಗೆ ತಾಯಿ ಇಲ್ಲ. ಆದ್ದರಿಂದ ತಂದೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವಿವರಿಸಿದ್ದಾಳೆ.

    ಬಾಲಕಿಯ ಮನವಿ ಕೇಳಿದ ಸಿಎಂ ಅವರು, ಆಕೆಗೆ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದರು. ಬಾಲಕಿ ಓದಲು ಇಷ್ಟಪಡುವವರೆಗೂ ಉಚಿತ ಶಿಕ್ಷಣ ನೀಡಲು ಶಾರದಾ ಬಾಲಿಕಾ ವಸತಿ ಶಾಲಾ ಯೋಜನೆ ಅಡಿ ಅವಕಾಶ ನೀಡಿದರು. ಬಾಲಕಿಗೆ ಧೈರ್ಯದಿಂದ ಇರುವಂತೆ ಹೇಳಿದ ಸಿಎಂ ಅವರು, ನಮ್ಮ ಸರ್ಕಾರ ನಿನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.

    ಬಾಲಕಿಯ ತಾಯಿ ಮೃತರಾದ ಬಳಿಕ ನನ್ನ ಸಹೋದರ (ತಂದೆ) ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ನಿರ್ಲಕ್ಷ ವಹಿಸಿದ್ದ. ಆದರೆ ನಾನು ಆಕೆಯನ್ನು ಸಾಕಿ ಬೆಳೆಸಿದ್ದೇನೆ. ಆದರೆ ಈಗ ಆತ ಬಂದು ಮದುವೆ ಮಾಡಲು ಮುಂದಾಗಿದ್ದಾನೆ. ಬಾಲಕಿಗೆ ಮದುವೆಯಾಗಲು ಇಷ್ಟವಿಲ್ಲ. ಹೆಚ್ಚಿನ ಶಿಕ್ಷಣ ಪಡೆಯುವ ಆಸೆ ಹೊಂದಿದ್ದಾಳೆ. ಆದ್ದರಿಂದ ಸಿಎಂ ಅವರ ಸಹಾಯ ಪಡೆಯಲು ಅವರ ಬಳಿ ಆಗಮಿಸಿದ್ದಾಗಿ ಬಾಲಕಿಯ ಚಿಕ್ಕಪ್ಪ ತಿಳಿಸಿದ್ದಾರೆ.

    ಇದೇ ವೇಳೆ ಸಿಎಂ ಅವರಿಗೆ ಧನ್ಯವಾದ ತಿಳಿಸಿದ ಅವರು, ನಮ್ಮ ಮನವಿಗೆ ಕೂಡಲೇ ಅವರು ಸ್ಪಂದಿಸಿದರು. ಅವರನ್ನು ಭೇಟಿ ಮಾಡಿದ್ದು ಸಂಸತ ತಂದಿದೆ. ಬಾಲಕಿಗೆ 18 ವರ್ಷ ಆದ ಬಳಿಕವೇ ಮದುವೆ ಮಾಡುತ್ತೇವೆ. ಆಕೆಗೆ ಇಂಜಿನಿಯರಿಂಗ್ ಓದುವ ಆಸೆ ಇದೆ ಎಂದರು.

  • ಪ್ರಧಾನಿ ಮೋದಿ ಹೆದರಿದ್ದಾರೆ: ಅಶೋಕ್ ಗೆಹ್ಲೋಟ್

    ಪ್ರಧಾನಿ ಮೋದಿ ಹೆದರಿದ್ದಾರೆ: ಅಶೋಕ್ ಗೆಹ್ಲೋಟ್

    ಜೈಪುರ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರಿಗೆ ರಾಜಸ್ಥಾನದಲ್ಲಿ ಸೋಲಿನ ಭೀತಿ ಉಂಟಾಗಿದೆ. ಹೀಗಾಗಿ ಮೂರು ಬಾರಿ ಕಾರ್ಯಕರ್ತರ ಸಭೆ ಮಾಡಿದ್ದಾರೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

    ಜೈಪುರ್ ನಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿಯಾಗಿ ಪ್ರಚಾರ ಮಾಡಿದ್ದೇವೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ರಾಜಸ್ಥಾನದ ಮೇಲೆ ಗಮನವನ್ನು ಕೇಂದ್ರಿಕರಿಸಿದ್ದರು. ಸೋಲುವ ಭೀತಿಯಿಂದಾಗಿ ಮೇಲಿಂದ ಮೇಲೆ ಪ್ರಚಾರ, ಸಮಾವೇಶಗಳನ್ನು ಕೈಗೊಂಡರು ಎಂದು ವ್ಯಂಗ್ಯವಾಡಿದರು.

    ರಾಜಸ್ಥಾನದಲ್ಲಿ ಏಪ್ರಿಲ್ 29ರಂದು ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದೆ. ಜೈಪುರ್, ಜೈಪುರ್ ಗ್ರಾಮಾಂತರ, ಗಂಗಾನಗರ್ ಸೇರಿದಂತೆ 12 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಲಿದೆ.

    ರಾಜಸ್ಥಾನದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿಸಿತ್ತು.