Tag: ಸಿಆರ್ ಪಿಎಫ್

  • ಉಗ್ರರಿಂದ ಗ್ರೆನೇಡ್ ದಾಳಿ- ಮೂವರು ಯೋಧರು ಗಾಯ

    ಉಗ್ರರಿಂದ ಗ್ರೆನೇಡ್ ದಾಳಿ- ಮೂವರು ಯೋಧರು ಗಾಯ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸೈನಿಕರನ್ನ ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ.

    ಗಾಂದರ್ಬಲ್ ನಲ್ಲಿರುವ ಸಿಆರ್ ಪಿಎಫ್ 115ನೇ ಬಟಾಲಿಯನ್ ಗುರಿಯಾಗಿಸಿ ಆತಂಕವಾದಿಗಳು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಸೈನಿಕರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ದಾಳಿ ನಡೆದ ವ್ಯಾಪ್ತಿಯಲ್ಲಿ ಸರ್ಚಿಂಗ್ ಆಪರೇಷನ್ ಆರಂಭಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಸ್‍ಎಸ್‍ಪಿ ಖಲೀಲ್ ಪೊಸ್ವಾಲ್ ಹೇಳಿದ್ದಾರೆ.

  • ರಜೆ ಸಿಗ್ತಿಲ್ಲ ಊರಿಗೆ ಬರಲ್ಲ-ಆತ್ಮಹತ್ಯೆಗೆ ಶರಣಾದ ಪತ್ನಿ

    ರಜೆ ಸಿಗ್ತಿಲ್ಲ ಊರಿಗೆ ಬರಲ್ಲ-ಆತ್ಮಹತ್ಯೆಗೆ ಶರಣಾದ ಪತ್ನಿ

    -ಸಿಆರ್ ಪಿಎಫ್ ನಲ್ಲಿದ್ದ ಪತಿ

    ಚೆನ್ನೈ: ಪತಿ ಊರಿಗೆ ಬರದಕ್ಕೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರನಲ್ಲಿ ನಡೆದಿದೆ. ಮಹಿಳೆಯ ಸಿಆರ್ ಪಿಎಫ್ ನಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದು, ರಜೆ ಸಿಗದ ಹಿನ್ನೆಲೆ ಊರಿಗೆ ಆಗಮಿಸಿರಲಿಲ್ಲ.

    ಸಂಗೀತಾ (34) ಆತ್ಮಹತ್ಯೆಗೆ ಶರಣಾದ ಮಹಿಳೆ. ಸಿಆರ್‍ಪಿಎಫ್ ಕಾನ್‍ಸ್ಟೇಬಲ್ ರಾಜೇಶ್ ಕುಮಾರ್ 2017ರಲ್ಲಿ ಚೆನ್ನೈನಲ್ಲಿದ್ದಾಗ ಸಂಗೀತಾರ ಪರಿಚಯವಾಗಿತ್ತು. ಅದೇ ವರ್ಷ ಆಗಸ್ಟ್ ನಲ್ಲಿ ಇಬ್ಬರು ಮದುವೆಯಾಗಿ ಸುಲುರು ಪಟ್ಟಣದ ಮುಥುಗೌಂಡೆನ್ಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳ ಬಳಿಕ ನಾಗಾಲ್ಯಾಂಡ್ ಗೆ ರಾಜೇಶ್ ಅವರ ವರ್ಗಾವಣೆಯಾಗಿತ್ತು. ಪತ್ನಿಯನ್ನ ಮುಥುಗೌಂಡೆನ್ಪುರದಲ್ಲಿ ಬಿಟ್ಟ ರಾಜೇಶ್ ನಾಗಾಲ್ಯಾಂಡ್ ಗೆ ತೆರಳಿದ್ದರು.

    ರಾಜೇಶ್ ಜನವರಿಯಲ್ಲಿ 20 ದಿನ ಪಡೆದು ಪತ್ನಿ ಬಳಿ ಬಂದಿದ್ದರು. ಜನವರಿ ರಜೆ ಬಳಿಕ ಹಿಂದಿರುಗಿದ್ದ ರಾಜೇಶ್ ವಾಪಸ್ ಬಂದಿರಲಿಲ್ಲ. ಪ್ರತಿದಿನ ವಿಡಿಯೋ ಕಾಲ್, ಫೋನ್ ನಲ್ಲಿ ಇಬ್ಬರು ಸಂಪರ್ಕದಲ್ಲಿದ್ದರು. ಲಾಕ್‍ಡೌನ್ ಆರಂಭವಾದಗಿನಿಂದ ರಜೆ ಪಡೆದು ಊರಿಗೆ ಬಂದು ಹೋಗುವಂತೆ ಹಲವು ಬಾರಿ ಸಂಗೀತಾ ಪತಿಗೆ ಹೇಳಿದ್ದರು. ರಜೆ ಸಿಗದ ಹಿನ್ನೆಲೆ ರಾಜೇಶ್ ತಮಿಳುನಾಡಿಗೆ ಬಂದಿರಲಿಲ್ಲ.

    ಮನೆಯಲ್ಲಿ ಒಂಟಿಯಾಗಿದ್ದ ಸಂಗೀತ ಮಾನಸಿಕ ಖಿನ್ನತೆಗೊಳಗಾಗಿ ಮನೆಯಲ್ಲಿ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕೆಲ ದಿನಗಳ ಮುಂಚೆ ಸಂಗೀತಾ ಪತಿಗೆ ಊರಿಗೆ ಬರುವಂತೆ ಹೇಳಿಕೊಂಡಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.

  • ಉಗ್ರರ ಬಹುದೊಡ್ಡ ಸಂಚು ವಿಫಲ- 8 ಕೆಜಿ ತೂಕದ 2 ಐಇಡಿ ನಿಷ್ಕ್ರಿಯ

    ಉಗ್ರರ ಬಹುದೊಡ್ಡ ಸಂಚು ವಿಫಲ- 8 ಕೆಜಿ ತೂಕದ 2 ಐಇಡಿ ನಿಷ್ಕ್ರಿಯ

    ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಉಗ್ರರ ಬಹುದೊಡ್ಡ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಶ್ಮೀರ ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ 4 ಗ್ರೆನೆಡ್ ಲಾಂಚರ್, 3 ಚೀನಿ ಗ್ರೆನೆಡ್, ಎಕೆ-47 ಮತ್ತು ಒಂದು ಬಾಂಬ್ ವಶ ಪಡಿಸಿಕೊಂಡಿದ್ದಾರೆ.

    ಪೂಂಛ್ ಜಿಲ್ಲೆಯ ಲೊರ್ನಾ ಇಲಾಖೆಯಲ್ಲಿ ಉಗ್ರರು ಬಚ್ಚಿಟ್ಟಿದ್ದ 8 ಕೆಜಿ ತೂಕದ ಎರಡು ಐಇಡಿ ಮತ್ತು ಎರಡು ಹ್ಯಾಂಡ್ ಗ್ರೆನೆಡ್ ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಭಾನುವಾರ ಬೆಳಗ್ಗೆ ಲೊರ್ನಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಸರ್ಚ್ ಆಪರೇಷನ್ ಆರಂಭಿಸಿದ್ದರು. ಈ ವೇಳೆ ಸಿಬ್ಬಂದಿಗೆ ಉಗ್ರರು ಬಚ್ಚಿಟ್ಟಿದ್ದ ಸ್ಫೋಟಕ ವಸ್ತುಗಳು ಲಭ್ಯವಾಗಿವೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ಈ ಆಪರೇಷನ್ ನಲ್ಲಿ ಭಾಗವಹಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಲೊರ್ನಾ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

    ಜಮ್ಮು-ಕಾಶ್ಮೀರದಲ್ಲಿ ಸೇನಾ ಉಗ್ರರ ವಿರುದ್ಧ ನಿರಂತರ ಕಾರ್ಯಚರಣೆ ನಡೆಸುತ್ತಿದೆ. ಈ ಕಾರ್ಯಚರಣೆಯಲ್ಲಿ 138 ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ರನ್ಬೀರಗಢದಲ್ಲಿ ಕೆಲ ಉಗ್ರರು ಅಡಗಿಕೊಂಡಿದ್ದು, ದೊಡ್ಡ ಮಟ್ಟದ ಸಂಚು ರೂಪಿಸಿರುವ ಮಾಹಿತಿ ಸೇನೆಗೆ ಲಭ್ಯವಾಗಿತ್ತು. ಈ ಮಾಹಿತಿ ಆಧಾರದ ಮೇಲೆ ಸಿಆರ್‍ಪಿಎಫ್ ಮತ್ತು ಪೊಲೀಸರ ತಂಡ ಜಂಟಿ ಕಾರ್ಯಚರಣೆಗೆ ಇಳಿದಿತ್ತು. ರನ್ಬೀರಗಢದಲ್ಲಿಯ ಪ್ರತಿ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಈ ವೇಳೆ ಒಂದು ಮನೆಯಲ್ಲಿ ಅಡಗಿದ್ದ ಉಗ್ರರ ತಂಡ ಗುಂಡಿನ ದಾಳಿ ನಡೆಸಿದೆ. ಸೇನೆಯ ಸಹ ಪ್ರತ್ಯತ್ತುರವಾಗಿ ಗುಂಡಿನ ಉತ್ತರ ನೀಡಿದೆ.

  • ಬಸ್ ನಿಲ್ದಾಣದ ಮೇಲೆ ಉಗ್ರರ ಗ್ರೆನೇಡ್ ದಾಳಿ

    ಬಸ್ ನಿಲ್ದಾಣದ ಮೇಲೆ ಉಗ್ರರ ಗ್ರೆನೇಡ್ ದಾಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೋಪೋರೆನಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಸುಮಾರು 20 ಜನರು ಗಾಯಗೊಂಡಿದ್ದಾರೆ. 20ರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಸ್ಥಳೀಯ ನಿವಾಸಿಗಳನ್ನು ಗುರಿಯಾಗಿಸಿಕೊಂಡ ಉಗ್ರರು ಸೋಪೋರೆ ಬಸ್ ನಿಲ್ದಾಣದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 20 ಜನರು ಗಾಯಗೊಂಡಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

    ದಾಳಿ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 179 ಬಟಾಲಿಯನ್ ಸಿಆರ್ ಪಿಎಫ್ ಯೋಧರು ಆಗಮಿಸಿ, ಇಲಾಖೆಯನ್ನು ಸಂಪೂರ್ಣ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ರಕ್ಷಣಾ ಸಿಬ್ಬಂದಿ ತಲೆ ಮರೆಸಿಕೊಂಡಿರುವ ಉಗ್ರರರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

  • ಹೃದಯಾಘಾತದಿಂದ ಬಾಗಲಕೋಟೆ ಯೋಧ ನಿಧನ

    ಹೃದಯಾಘಾತದಿಂದ ಬಾಗಲಕೋಟೆ ಯೋಧ ನಿಧನ

    ಬಾಗಲಕೋಟೆ: ಹೃದಯಾಘಾತದಿಂದ ಬಾಗಲಕೋಟೆ ಮೂಲದ ಯೋಧ ಬೆಂಗಳೂರಿನ ಯಲಹಂಕದಲ್ಲಿ ನಿಧನರಾಗಿದ್ದಾರೆ.

    ಗುರುರಾಜ್ ಬಡಿಗೇರ್(52) ನಿಧನರಾದ ಸಿಆರ್ ಪಿಎಫ್ ಯೋಧ. ಗುರುರಾಜ್ ಬಡಿಗೇರ್ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬಿಂಜವಾಡಗಿ ಗ್ರಾಮದವರಾಗಿದ್ದು, ಸಿಪ್ಟ್ ಬಟಾಲಿಯನ್ ನ್ಯೂದಿಲ್ಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಗುರುರಾಜ್ ಕಳೆದ ಹದಿನೈದು ದಿನಗಳ ಹಿಂದೆ ಹೈದರಾಬಾದ್‍ನಿಂದ ಯಲಹಂಕಕ್ಕೆ ಬಂದಿದ್ದರು. ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ರಾತ್ರಿ ಹತ್ತು ಗಂಟೆಗೆ ಬಿಂಜವಾಡಗಿ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರಲಿದ್ದು, ರಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    ಸದ್ಯ ಯೋಧ ಗುರುರಾಜ್ ಅವರ ಮನೆಗೆ ಹುನಗುಂದ ತಹಶೀಲ್ದಾರ ಆನಂದ್ ಕೋಲಾರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ನಿಧನರಾದ ಯೋಧ ಗುರುರಾಜ್ ಅವರಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳು ಇದ್ದಾರೆ. ಗುರುರಾಜ್ 1989-90 ರಲ್ಲಿ ಸಿಆರ್ ಪಿಎಫ್ ಸೇರ್ಪಡೆ ಆಗಿದ್ದರು.

  • ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – 5 ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – 5 ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, ಪ್ರತಿದಾಳಿಯಲ್ಲಿ ಒಬ್ಬ ಉಗ್ರನನ್ನು ಸೈನಿಕರು ಹತ್ಯೆ ಮಾಡಿದ್ದಾರೆ.

    ಅನಂತ್ ನಾಗ್ ಜಿಲ್ಲೆಯ ಕೆಪಿ ರೋಡ್ ಬಳಿ ಘಟನೆ ನಡೆದಿದ್ದು, ಸ್ಥಳೀಯ ಮಾಧ್ಯಮಗಳ ವರದಿಯ ಅನ್ವಯ ಇಬ್ಬರು ಉಗ್ರರು ಯೋಧರನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನ ನಡೆಸಿದ್ದರು. ಆಟೋಮ್ಯಾಟಿಕ್ ರೈಫಲ್ಸ್ ದಾಳಿ ನಡೆಸಿ, ಗ್ರೆನೇಡ್ ಗಳನ್ನು ಏಕಾಏಕಿ ಯೋಧರ ಮೇಲೆ ಎಸೆದಿದ್ದಾರೆ. ಈ ವೇಳೆ ಪ್ರತಿ ದಾಳಿಯಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.

    ಘಟನೆಯಲ್ಲಿ ಅನಂತ್ ನಾಗ್ ಪೊಲೀಸ್ ಠಾಣೆಯ ಅಧಿಕಾರಿ ಹರ್ಷದ್ ಅಹ್ಮದ್ ಗಾಯಗೊಂಡಿದ್ದು, ಅಲ್ಲದೇ ನಾಗರಿಕರೊಬ್ಬರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಯನ್ನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆ ಕೊಂಡ್ಯೊಯಲಾಗಿದೆ. ಪುಲ್ವಾಮಾ ದಾಳಿ ನಡೆದ ಬಳಿಕ ಉಗ್ರರು ಮತ್ತೆ ಸಿಆರ್ ಪಿಎಫ್ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

  • ಬಾಗಲಕೋಟೆಯ ಯೋಧ ಬಿಹಾರದಲ್ಲಿ ನಿಧನ

    ಬಾಗಲಕೋಟೆಯ ಯೋಧ ಬಿಹಾರದಲ್ಲಿ ನಿಧನ

    ಬಾಗಲಕೋಟೆ: ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಸಿಆರ್ ಪಿಎಫ್ ಯೋಧ ನಿಧನರಾದ ಘಟನೆ ಬಿಹಾರದಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಗಿರಿಯಪ್ಪ ರಾಮಣ್ಣ ಕಿರಸೂರ(29) ಎಂಬವರೇ ನಿಧನರಾದ ಯೋಧ. ಇವರು 2012ರಲ್ಲಿ ಸಿಆರ್ ಪಿಎಫ್ ನಲ್ಲಿ ಕಾನ್ಸ್ ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಸದ್ಯ ಬಿಹಾರದಲ್ಲಿ ಬಟಾಲಿಯನ್ 224 ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಬಿಹಾರದ ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಗಿರಿಯಪ್ಪ, ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ನಿಧನರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಗಿರಿಯಪ್ಪ ಅವರಿಗೆ ವಿವಾಹವಾಗಿತ್ತು. ಅಲ್ಲದೆ ಕಳೆದ ತಿಂಗಳಷ್ಟೇ ಯೋಧ ಗಿರಿಯಪ್ಪ ಸ್ವಗ್ರಾಮ ಕಮತಗಿಗೆ ಬಂದು ಹೋಗಿದ್ದರು.

    ಯೋಧನ ಸಾವಿನ ಸುದ್ದಿಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಐಇಡಿ ಸ್ಫೋಟಿಸಿ ನಕ್ಸಲರ ದಾಳಿ- ಬಿಜೆಪಿ ಶಾಸಕ ಸೇರಿ ಐವರು ಪೊಲೀಸರ ಸಾವು

    ಐಇಡಿ ಸ್ಫೋಟಿಸಿ ನಕ್ಸಲರ ದಾಳಿ- ಬಿಜೆಪಿ ಶಾಸಕ ಸೇರಿ ಐವರು ಪೊಲೀಸರ ಸಾವು

    ರಾಯ್ಪುರ: ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ದಾಳಿ ನಡೆಸಿದ್ದು, ಘಟನೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿದಂತೆ ಐವರು ಪೊಲೀಸರು ಸಾವನ್ನಪ್ಪಿದ್ದಾರೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಭೀಮಾ ಅವರು ಪ್ರಚಾರ ಕಾರ್ಯವನ್ನು ನಡೆಸಲು ತೆರಳುತ್ತಿದ್ದ ವೇಳೆ ನಕ್ಸಲರ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಪೊಲೀಸರು ಮೃತಪಟ್ಟಿದ್ದಾರೆ.

    ಬೆಂಗಾವಲು ವಾಹನದ ಜೊತೆ ತೆರಳುತ್ತಿದ್ದ ಕಾರುಗಳ ಕೊನೆ ವಾಹನದಲ್ಲಿ ಶಾಸಕರು ಕುಳಿತ್ತಿದ್ದರು ಎನ್ನಲಾಗಿದ್ದು, ಈ ವಾಹನವನ್ನೇ ನಕ್ಸಲರು ಸ್ಫೋಟಿಸಿದ್ದಾರೆ. ಪರಿಣಾಮ ವಾಹನದಲ್ಲಿದ್ದವರ ದೇಹಗಳು ಛಿದ್ರಗಳು ಸುಮಾರು ದೂರ ಹಾರಿ ಬಿದ್ದಿವೆ. ಸ್ಫೋಟದ ಬಳಿಕ ನಕ್ಸಲರು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಘಟನೆಯಲ್ಲಿ ಶಾಸಕರು ಸಾವನ್ನಪ್ಪಿದ ಬಗ್ಗೆ ನಕ್ಸಲ್ ನಿಗ್ರಹ ದಳದ ಡಿಐಜಿ ಪಿ ಸುಂದರ್ ರಾಜ್ ಖಚಿತ ಪಡಿಸಿ ಮಾಹಿತಿ ನೀಡಿದ್ದಾರೆ.

    ನಕ್ಸಲರ ದಾಳಿಯ ಕುರಿತು ಮಾಹಿತಿ ಲಭಿಸುತ್ತಿದಂತೆ ಸಿಆರ್‍ಪಿಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಛತ್ತೀಸ್‍ಗಢ ಸಿಎಂ ಭೂಪೇಶ್ ಬಾಗೇಲ್ ಕಠಿಣ ಕ್ರಮಕೈಗೊಳ್ಳುವಂತೆ ಡಿಐಜಿಗೆ ಸೂಚನೆ ನೀಡಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಗುರುವಾರ ಚುನಾವಣೆಯ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 80 ಸಾವಿರ ರಕ್ಷಣಾ ಸಿಬ್ಬಂದಿ, ಡ್ರೋಣ್ ಕ್ಯಾಮೆರಾಗಳನ್ನು ಸರ್ಕಾರ ನಿಯೋಜನೆ ಮಾಡಿದೆ.

  • CRPF ವಾಹನ ಸ್ಫೋಟಿಸಲು ಸಂಚು – ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    CRPF ವಾಹನ ಸ್ಫೋಟಿಸಲು ಸಂಚು – ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    – ಸ್ವರ್ಗದಲ್ಲಿ ಮಜಾ ಮಾಡುತ್ತೇನೆ
    – ಸ್ಫೋಟಗೊಳ್ಳುವ ಮುನ್ನವೇ ಓಡಿ ಹೋದ ಉಗ್ರ
    – ಭಾರತದ ಮೇಲೆ ಪ್ರತೀಕಾರಕ್ಕೆ ಪ್ಲಾನ್

    ಶ್ರೀನಗರ: ಶನಿವಾರ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸಿಆರ್ ಪಿಎಫ್ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಲು ಸಂಚು ರೂಪಿಸಲಾಗಿತ್ತು. ಸಿಆರ್ ಪಿಎಫ್ ವಾಹನದ ಅನತಿ ದೂರದಲ್ಲಿ ಕಾರ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಇತ್ತ ಸ್ಫೋಟಕ್ಕೂ ಮುನ್ನ ಸ್ಯಾಂಟ್ರೋ ಕಾರು ಚಾಲಕನಾಗಿದ್ದ ಉಗ್ರ ಓಡಿ ಹೋಗಿದ್ದನು. ಕಾರು ಚಾಲಕ ಓರ್ವ ಆತ್ಮಾಹುತಿ ದಾಳಿಕೋರ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಪೊಲೀಸರಿಗೆ ಉಗ್ರನ ಬರೆದಿದ್ದ ಪತ್ರ(ಸೂಸೈಡ್ ನೋಟ್)ವೊಂದು ಲಭ್ಯವಾಗಿದೆ.

    ಆತ್ಮಾಹುತಿ ದಾಳಿಕೋರನನ್ನು ಓವೈಸ್ ಅಮೀನ್ ಎಂದು ಗುರುತಿಸಲಾಗಿದೆ. ಓವೈಸ್ ದಾಳಿಗೂ ಮುನ್ನವೇ ಸ್ಫೋಟಕಗಳಿಂದ ಕಾರ್ ಬಿಟ್ಟು ಓಡಿ ಹೋಗಿದ್ದಾನೆ. ಜಮ್ಮು-ಕಾಶ್ಮೀರ ಪೊಲೀಸರಿಗೆ ಎರಡು ಪುಟಗಳ ಪತ್ರ ದೊರೆತಿದ್ದು, ಉಗ್ರ ಭಾರತದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದನು ಎಂಬುವುದು ಬಯಲಾಗಿದೆ. ಹೀಗಾಗಿ ಸೈನಿಕರ ವಾಹನಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಆತ್ಮಾಹುತಿ ದಾಳಿ ನಡೆಸಲು ಉಗ್ರ ಓವೈಸ್ ಪ್ಲಾನ್ ಮಾಡಿದ್ದ. ಕೊನೆ ಕ್ಷಣದಲ್ಲಿ ತನ್ನ ಸಾವಿಗೆ ಹೆದರಿದ ಓವೈಸ್, ಸೈನಿಕರ ವಾಹನದ ಕೂಗಳತೆಯ ದೂರದಲ್ಲಿ ಕಾರ್ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಇದನ್ನೂ ಓದಿ: ಏರ್ ಸರ್ಜಿಕಲ್ ಸ್ಟ್ರೈಕ್-ಪಾಕ್ ಉಗ್ರ ನೆಲೆಯ ಮೇಲೆ ಸಾವಿರ ಕೆಜಿಯ ಬಾಂಬ್ ಸಿಡಿಸಿದ ಐಎಎಫ್

    ಪತ್ರದಲ್ಲಿ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ವಿರುದ್ಧ ಪ್ರಯೋಗಿಸುವ ಪೆಲೆಟ್ ಗನ್ ಬಗ್ಗೆ ಉಲ್ಲೇಖಿಸಲಾಗಿದೆ. ಪೆಲೆಟ್ ಗನ್ ಬಳಕೆಯಿಂದಾಗಿ 18 ತಿಂಗಳ ಹಿಬಾ ನಿಸಾರ್ ಎಂಬ ಕಂದಮ್ಮ ತನ್ನ ಎಡಗಣ್ಣು ಕಳೆದುಕೊಂಡಳು. ಹಿಬಾ ಮನೆಯ ಹತ್ತಿರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಪ್ರಯೋಗಿಸಿದ ಪೆಲೆಟ್ ಗನ್ ನಿಂದ ಅಮಾಯಕ ಬಾಲಕಿ ತನ್ನ ಕಣ್ಣು ಕಳೆದುಕೊಂಡಳು. ಕಾಶ್ಮೀರದ ಶಿಕ್ಷಕ ರಿಜ್ವಾನ್ ಅಸದ್ ಎಂಬವರನ್ನು ಪೊಲೀಸರು ತಮ್ಮ ಕಸ್ಟಡಿಯಲ್ಲಿಯೇ ಹೊಡೆದು ಕೊಲೆ ಮಾಡಿದರು. ಹೀಗಾಗಿ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಓವೈಸ್ ತನ್ನ ಸೂಸೈಡ್ ಪತ್ರದಲ್ಲಿ ಬರೆದುಕೊಂಡಿದ್ದ. ಇದನ್ನೂ ಓದಿ: ಏರ್ ಸ್ಟ್ರೈಕ್ ನಡೆದ ಸ್ಥಳದಲ್ಲಿ 300 ಮೊಬೈಲ್!

    ಸ್ವರ್ಗದಲ್ಲಿ ಮಜಾ ಮಾಡ್ತೇನೆ:
    ಈ ಪತ್ರ ಸಿಗುವ ವೇಳೆಗೆ ನಾನು ಸ್ವರ್ಗ ತಲುಪಿರುತ್ತೇನೆ. ಈ ಎಲ್ಲ ದೃಶ್ಯಗಳನ್ನು ನೋಡಿ ನಾನು ಸ್ವರ್ಗದಲ್ಲಿ ಮಜಾ ಮಾಡುತ್ತಿರುತ್ತೇನೆ. ಈ ಮೊದಲು ಕಾಶ್ಮೀರವನ್ನು ಸ್ವತಂತ್ರ ಮಾಡಿದ್ದರೆ, ಭಾರತ ಈ ದಿನವನ್ನು ನೋಡುತ್ತಿರಲಿಲ್ಲ. ನಮ್ಮ ಸ್ವತಂತ್ರಕ್ಕಾಗಿ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಧುಮುಕಿದ್ದೇವೆ ಎಂದು ಪತ್ರ ಬರೆದಿದ್ದ.

    ಓವೈಸ್ ಅಮಿನ್ ಯಾರು?
    ಅರ್ವಾನಿ ನಿವಾಸಿ ಯೂಸೂಫ್ ಮಲೀಕ್ ಎಂಬವರ ಪುತ್ರನಾಗಿರುವ ಓವೈಸ್ ಅಹ್ಮದ್ ಮಲೀಕ್ ಅಮೀನ್ ಸಿ ಕೆಟಗರಿಯ ಉಗ್ರನಾಗಿದ್ದನು. 2018ರ ಏಪ್ರಿಲ್ 5 ರಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಸೇರಿಕೊಂಡು ಭಯೋತ್ಪಾನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು. ಈತ ಜಬ್ಲಿಪೋರಾ, ಅರ್ವಾನಿ ಮತ್ತು ಬಿಜ್ಬೇಹರಾ ಪ್ರದೇಶಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

    ಶನಿವಾರ ಸ್ಫೋಟಕ್ಕಾಗಿ ಓವೈಸ್ ಹುಂಡೈ ಸ್ಯಾಂಟ್ರೋ ಕಾರು ಬಳಸಿದ್ದನು. ಕಾರಿನ ಇಂಜಿನ್ ಮತ್ತು ಚಾಸಿ ನಂಬರ್ ಒಂದಕ್ಕೊಂದು ಹೋಲಿಕೆ ಆಗುತ್ತಿಲ್ಲ. ದಾಳಿಗಾಗಿ ಕಾರನ್ನು ಕದ್ದಿದ್ದ ಓವೈಸ್ ಬಿಡಿ ಭಾಗಗಳನ್ನು ಬದಲಿಸಿದ್ದನು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‍ಐಎ ತಿಳಿಸಿದೆ. ಇದನ್ನೂ ಓದಿ: ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಇಂದು ಪುಲ್ವಾಮಾದ ಲಸ್ಸಿಪುರದ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಲಷ್ಕರ್-ಎ-ತೊಯ್ಬಾದ ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ. 2 ಎಕೆ ರೈಫಲ್ಸ್, 1 ಎಸ್‍ಎಲ್ ಆರ್ ಹಾಗೂ ಪಿಸ್ತೂಲನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.

    ಪುಲ್ವಾಮಾ ದಾಳಿ:
    ಫೆ. 14ರಂದು ಗುರುವಾರ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಮಾರುತಿ ಇಕೋ ಕಾರನ್ನು ಉಗ್ರ ಅದಿಲ್ ದಾರ್ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು. ಆ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣವೇ ಏರ್ಪಟ್ಟಿತ್ತು. ಬಳಿಕ ಭಾರತೀಯ ವಾಯುಸೇನೆ ಪಾಕ್ ಗಡಿಯೊಳಗೆ ನುಗಿ ಉಗ್ರರ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ: ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

  • ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    – ಕೃತ್ಯ ನಡೆಯುವ 10 ದಿನದ ಮೊದಲು ಕಾರು ಖರೀದಿ
    – ಕೀ, ಚಾಸಿ ನಂಬರಿನಿಂದ ಮಾಲೀಕ ಪತ್ತೆ
    – 7 ಜನರಿಗೆ ಮಾರಾಟವಾಗಿ ಉಗ್ರನ ಕೈ ಸೇರಿತ್ತು ಕಾರು

    ನವದೆಹಲಿ: ಪುಲ್ವಾಮಾದಲ್ಲಿ ಸಿಆರ್‌ಪಿಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಕಾರು ಯಾವುದು ಮತ್ತು ಆ ಕಾರಿನ ಮಾಲೀಕ ಯಾರು ಎನ್ನುವ ತನಿಖೆ ಒಂದು ‘ಕೀ’ ಯಿಂದ ಆರಂಭವಾಗಿದೆ.

    ಹೌದು. ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳು ಸ್ಫೋಟಗೊಂಡ ಸ್ಥಳದಲ್ಲಿ ಸಿಕ್ಕಿದ ಒಂದು ‘ಕೀ’ ಇಟ್ಟುಕೊಂಡು ಕೃತ್ಯಕ್ಕೆ ಬಳಸಿದ ಕಾರು ಯಾವುದು ಮತ್ತು ಕಾರಿನ ಮಾಲೀಕ ಯಾರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಕೀ ಸಿಕ್ಕಿದ್ದು ಹೇಗೆ?
    ಫೆ.14 ರಂದು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಲೇಥ್‍ಪುರಕ್ಕೆ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಅಟೋಮೊಬೈಲ್ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಫೋಟದ ರಭಸಕ್ಕೆ ಸಿಆರ್‌ಪಿಫ್ ಬಸ್ ಸಂಪೂರ್ಣವಾಗಿ ಮುದ್ದೆಯಾಗಿ ಬಿದ್ದಿದ್ದರೆ ಕೃತ್ಯಕ್ಕೆ ಬಳಸಿದ ಕಾರು ಸಂಪೂರ್ಣವಾಗಿ ನಾಶವಾಗಿತ್ತು. ಭಾಗಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಹೀಗಾಗಿ ತನಿಖೆಯ ಆರಂಭದ ದಿನದಲ್ಲಿ ಕಾರಿನ ಭಾಗಗಳನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೊನೆಗೆ ಕಾರಿನ ಬಂಪರ್ ಮತ್ತು ನಂಬರ್ ಇರುವ ಶಾಕ್ ಅಬ್ಸರ್ಬರ್ ಸಿಕ್ಕಿದೆ. ಇದರ ಜೊತೆಯಲ್ಲಿ 25 ಲೀಟರಿನ ಕ್ಯಾನ್ ಸಿಕ್ಕಿದೆ. ತನಿಖಾಧಿಕಾರಿಗಳು ಈ ಕ್ಯಾನಿನಲ್ಲಿ 30 ಕೆಜಿ ಆರ್ ಡಿಎಕ್ಸ್ ಇಟ್ಟಿರಬಹುದು ಎಂದು ಶಂಕಿಸಿದ್ದಾರೆ.

    ಸಿಕ್ಕಿದ ಭಾಗಗಳನ್ನು ಚೆಕ್ ಮಾಡಿದಾಗ ಕೊನೆಗೆ ಕೃತ್ಯಕ್ಕೆ ಬಳಸಿದ್ದು ಮಾರುತಿ ಕಂಪನಿಯ ಕಾರು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಎನ್‍ಐಎ ಅಧಿಕಾರಿಗಳು ಮಾರುತಿ ಎಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ಸಿಕ್ಕಿದ ಭಾಗಗಳ ಮಾಹಿತಿಯನ್ನು ಕಲೆ ಹಾಕಿದಾಗ ಕಾರು 2011ರಲ್ಲಿ ಉತ್ಪಾದನೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬರುತ್ತದೆ.

    2011ರಲ್ಲಿ ಉತ್ಪಾದನೆಯಾದ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹಳ ದೀರ್ಘ ಕೆಲಸ. ತನಿಖೆಗೆ ಬಹಳ ದಿನಗಳು ನಡೆಯಬಹುದು ಎನ್ನುವುದನ್ನು ಅರಿತ ಎನ್‍ಐಎ ತಂಡ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಮೆಟಲ್ ಡಿಟೆಕ್ಟರ್ ಸಾಧನ. ಸ್ಫೋಟದ ತೀವ್ರತೆಗೆ ಸೈನಿಕರ ದೇಹದ ಭಾಗಗಳೇ ಸುಮಾರು 100 ಮೀಟರ್ ದೂರಕ್ಕೆ ಚಿಮ್ಮಿತ್ತು. ಹೀಗಾಗಿ ಕಾರಿನ ಭಾಗಗಳು ಹಲವು ಕಡೆ ಚಿಮ್ಮಿರಬಹುದು ಎನ್ನುವ ಬಲವಾದ ನಂಬಿಕೆಯೊಂದಿಗೆ ಎನ್‍ಐಎ ಮೆಟಲ್ ಡಿಟೆಕ್ಟರ್ ಮೊರೆ ಹೋಯ್ತು.

    ಮೆಟಲ್ ಡಿಟೆಕ್ಟರ್ ತಂದು 200 ಮೀಟರ್ ವ್ಯಾಪ್ತಿಯಲ್ಲಿ ಸ್ಕ್ಯಾನ್ ಮಾಡಲು ಮುಂದಾದಾಗ ಕಾರಿನ ಕೀ ಸಿಕ್ಕಿತು. ಇದಾದ ಬಳಿಕ ಕಾರಿನ ಚಾಸಿ ಪತ್ತೆಯಾಯಿತು. ಯಾವುದೇ ಚಾಸಿಯಲ್ಲಿ 19 ಸಂಖ್ಯೆಗಳು ಇರುತ್ತದೆ. ಈ ಚಾಸಿ ನಂಬರ್ ಮೂಲಕ ವೆಹಿಕಲ್ ಐಡಿಂಟಿಫಿಕೇಶನ್ ನಂಬರ್(ವಿಪಿಎನ್) ಪತ್ತೆ ಮಾಡಬಹುದು. ವಿಪಿಎನ್ 19 ಅಕ್ಷರಗಳಿಂದ ಕೂಡಿದ್ದು ಎಲ್ಲಾ ಕಾರುಗಳಿಗೆ ವಿಶಿಷ್ಟವಾಗಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದಕ್ಕೊಂದು ತಾಳೆ ಹಾಕಿದಾಗ ಈ ಕೃತ್ಯಕ್ಕೆ ಬಳಕೆ ಮಾಡಿದ್ದು ಇಕೋ ಕಾರು ಎನ್ನುವುದು ಖಚಿತವಾಗಿದೆ.

    ಕಾರು ಪತ್ತೆಯಾದ ನಂತರ ಮಾಲೀಕನನ್ನು ಪತ್ತೆ ಹಚ್ಚಲು ಎನ್‍ಐಎ ಮತ್ತಷ್ಟು ಶ್ರಮ ಪಟ್ಟಿದೆ. ಕಾರು ಎಲ್ಲಿಂದ ಮಾರಾಟವಾಗಿ ಇದರ ಮೊದಲ ಮಾಲೀಕರ ಮಾಹಿತಿಯನ್ನು ಕಲೆ ಹಾಕಿದಾಗ 2011 ರಲ್ಲಿ ಅನಂತ್‍ನಾಗ್‍ನಿಂದ ಜಲೀಲ್ ಅಹ್ಮದ್ ಹಕ್ಕಾನಿ ಅವರು ಈ ಕಾರನ್ನು ಮೊದಲು ಖರೀದಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿಳಾಸದ ಆಧಾರದಲ್ಲಿ ಅವರನ್ನು ವಿಚಾರಿಸಿದಾಗ ನಾನು ಕಾರನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಈ ಕಾರು 7 ಜನರಿಗೆ ಮಾರಾಟವಾಗಿ ಕೊನೆಯ ಬಾರಿ ಈ ವರ್ಷದ ಫೆ.4 ರಂದು ಅನಂತ್‍ನಾಗ್ ಜಿಲ್ಲೆಯ ಮುಕ್ಬುಲ್ ಬಟ್ ಮಗ ಸಜ್ಜದ್ ಬಟ್ ಖರೀದಿಸಿದ್ದ ವಿಚಾರ ಬೆಳಕಿಗೆ ಬರುತ್ತದೆ.

    ಈ ಮಾಹಿತಿ ಸಿಕ್ಕಿದ ಕೂಡಲೇ ಎನ್‍ಐಎ ತಂಡ ಜಮ್ಮು ಕಾಶ್ಮೀರ  ಪೊಲೀಸರ ಸಹಾಯದಿಂದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹ್ರಾಕ್ಕೆ ತೆರಳಿ ಸಜ್ಜದ್ ಬಟ್‍ಗಾಗಿ ಶೋಧಿಸಿದೆ. ಈ ವೇಳೆ ಆತ ನಾಪತ್ತೆಯಾಗಿದ್ದ. ಅಲ್ಲಿಗೆ ಈ ಉಗ್ರರಿಗೆ ಈ ಕಾರು ಸೇರಿದ್ದು ಎನ್ನುವುದು ಖಚಿತವಾಗುತ್ತದೆ. ಶೋಪಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸಜ್ಜದ್ ಸದ್ಯಕ್ಕೆ ಜೈಷ್-ಇ-ಮೊಹಮ್ಮದ್ ಸಂಘಟನೆಯ ಸೇರಿದ್ದಾನೆ. ಸಜ್ಜದ್ ಕೈಯಲ್ಲಿ ಬಂದೂಕು ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕೃತ್ಯ ನಡೆಸಲೆಂದೇ 10 ದಿನದ ಹಿಂದೆ ಕಾರನ್ನು ಉಗ್ರರು ಖರೀದಿಸಿದ್ದಾರೆ ಎನ್ನುವ ಬಲವಾದ ಶಂಕೆಯನ್ನು ಎನ್‍ಐಎ ಹೊಂದಿದೆ.

     

    ಫೆ.24 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ ಮಾರುತಿ ಇಕೋ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv