Tag: ಸಿಂಘು ಗಡಿ

  • ಪ್ರತಿ ಕುಟುಂಬದಿಂದ ಒಬ್ಬರಾದರೂ ರೈತ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ 1,500 ರೂ. ದಂಡ

    ಪ್ರತಿ ಕುಟುಂಬದಿಂದ ಒಬ್ಬರಾದರೂ ರೈತ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ 1,500 ರೂ. ದಂಡ

    ನವದೆಹಲಿ: ಪ್ರತಿ ಕುಟುಂಬದಿಂದ ಒಬ್ಬರನ್ನಾದರೂ ರೈತ ಪ್ರತಿಭಟನೆಗೆ ಕಳುಹಿಸಬೇಕು ಇಲ್ಲವಾದಲ್ಲಿ 1,500 ರೂ. ದಂಡ ಪಾವತಿಸಬೇಕು ಎಂದು ರೈತರಿಗೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

    ಪಂಜಾಬ್‍ನ ಭಟಿಂಡಾದ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು, ವಿರ್ಕ್ ಖುರ್ದ್ ಗ್ರಾಮ ಪಂಚಾಯತ್‍ನ ಗ್ರಾಮವೊಂದರ ಮಹಿಳೆ ಸರ್ಪಂಚ್ ಮಂಜಿತ್ ಕೌರ್ ಈ ಕುರಿತು ಬಹಿರಂಗಪಡಿಸಿದ್ದಾರೆ. ಪ್ರತಿ ಕುಟುಂಬದಲ್ಲಿ ಕನಿಷ್ಟ ಒಬ್ಬರನ್ನಾದರೂ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಒಂದು ವಾರ ಕಳುಹಿಸಬೇಕು ಎಂದು ತಾಕೀತು ಮಾಡಲಾಗಿದೆ. ಅಲ್ಲದೆ ಯಾರು ಪ್ರತಿಭಟನೆಗೆ ತೆರಳುವುದಿಲ್ಲವೋ ಅವರಿಗೆ 1,500 ರೂ. ದಂಡ ಹಾಕಲಾಗುವುದು. ದಂಡವನ್ನೂ ಪಾವತಿಸದಿದ್ದರೆ ಬಹಿಷ್ಕಾರ ಹಾಕಲಾವುದು ಎಂದು ಬೆದರಿಕೆ ಒಡ್ಡಿರುವುದಾಗಿ ಅವರು ತಿಳಿಸಿದ್ದಾರೆ.

    ಪ್ರತಿಭಟನೆಯಲ್ಲಿ ಭಾಗವಹಿಸಲು ತಮ್ಮ ಕುಟುಂಬದ ಒಬ್ಬ ಸದಸ್ಯರನ್ನಾದರೂ ದೆಹಲಿಗೆ ಕಳುಹಿಸಿ ಎಂದು ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ ದೇಶದ ರೈತರನ್ನು ಒತ್ತಾಯಿಸಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

    ರಾಕೇಶ್ ಟಿಕಾಯಿತ್ ಅವರ ಕಣ್ಣೀರಿನ ನಾಲ್ಕು ಹನಿಗಳಿಂದ ರೈತರಿಗೆ ನೀಡಿದ್ದ ಕೆಟ್ಟ ಹೆಸರು ತೊಳೆದು ಹೋಗಿದೆ. ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇತರೆ ನಾಯಕರೇ ಎಚ್ಚರದಿಂದ ಕೇಳಿ ಅವಮಾನ ಹಾಗೂ ಅಪಖ್ಯಾತಿಗೆ ಒಳಗಾದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

    ಇದೆಲ್ಲದರ ಮಧ್ಯೆ ರೈತರು ಪ್ರತಿಭಟಿಸುತ್ತಿರುವ ದೆಹಲಿ-ಹರಿಯಾಣ ಗಡಿ ಸಿಂಘು ಪ್ರದೇಶದಲ್ಲಿ ಹೆಚ್ಚು ಭದ್ರತೆ ಒದಗಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 66ನೇ ದಿನಕ್ಕೆ ಕಾಲಿಟ್ಟಿದೆ.

    ಇಂದು ಮಹಾತ್ಮಾ ಗಾಂಧೀಜಿ ಪುಣ್ಯ ತಿಥಿಯಾಗಿದ್ದು, ಸದ್ಭಾವನಾ ದಿನವನ್ನಾಗಿ ಆಚರಿಸುತ್ತಿದ್ದಾರೆ. ಇದರ ಭಾಗವಾಗಿ ಒಂದು ದಿನ ಉಪವಾಸ ಸತ್ಯಾಗ್ರವನ್ನು ಪ್ರತಿಭಟನಾ ನಿರತ ರೈತರು ಹಮ್ಮಿಕೊಂಡಿದ್ದಾರೆ. 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಯನ್ನು ಹಾಳು ಮಾಡಲು ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಯತ್ನಿಸುತ್ತಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.