Tag: ಸಾಲ

  • ಹಣ ವಾಪಸ್ ಕೊಡ್ಲಿಲ್ಲವೆಂದು ಗೆಳೆಯನ ಕೊಲೆ- ಇಬ್ಬರ ಬಂಧನ

    ಹಣ ವಾಪಸ್ ಕೊಡ್ಲಿಲ್ಲವೆಂದು ಗೆಳೆಯನ ಕೊಲೆ- ಇಬ್ಬರ ಬಂಧನ

    ಮಂಡ್ಯ: ಹಣದ ವಿಚಾರವಾಗಿ ನಡೆದ ಜಗಳಕ್ಕೆ ಗೆಳೆಯನನ್ನೇ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕೊಲೆಯಾದ ಮುಸ್ತಾಫ

    ಮುಬಾರಕ್ ಮತ್ತು ರಘು ಬಂಧಿತ ಆರೋಪಿಗಳು. ಜುಲೈ 23 ರಂದು ಮುಸ್ತಾಫ ಎಂಬವನ ಶವ ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಸಮೀಪ ಕೊಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಸ್ತಾಫನನ್ನು ಕೊಲೆ ಮಾಡಿ, ಕೈ ಕಟ್ಟಿ ಕೊಳದಲ್ಲಿ ಬಿಸಾಕಿ ಹೋಗಿದ್ರು. ಇದೀಗ ಪೊಲೀಸರು ಕೊಲೆ ಆರೋಪಿಗಳಾದ ಮುಬಾರಕ್ ಮತ್ತು ರಘುವನ್ನು ಬಂಧಿಸಿದ್ದಾರೆ.

    ಮುಬಾರಕ್ ಬಳಿ ಮುಸ್ತಾಫ ಸಾಲವಾಗಿ ಹಣ ಪಡೆದಿದ್ದ ಎನ್ನಲಾಗಿದೆ. ಗೆಳೆಯ ಎಂಬ ಕಾರಣಕ್ಕೆ ಮುಬಾರಕ್ ಹಣ ನೀಡಿರುತ್ತಾನೆ. ಆದ್ರೆ ಸಾಲದ ಹಣ ವಾಪಸ್ ಕೇಳಿದಾಗ ಮುಬಾರಕ್‍ನನ್ನು ಮುಸ್ತಾಫ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಇದ್ರಿಂದ ಆಕ್ರೋಶಗೊಂಡ ಮುಬಾರಕ್ ಗೆಳೆಯ ರಘು ಜೊತೆ ಸೇರಿ ಮುಸ್ತಾಫನ ಕೈ ಕಟ್ಟಿ, ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.

    ಸದ್ಯ ಆರೋಪಿಗಳನ್ನು ಬಂಧಿಸಿರುವ ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಬರಗಾಲದ ಕರಿನೆರಳು: ಮರೀಚಿಕೆಯಾದ ಮುಂಗಾರು, ಮಳೆಗಾಗಿ ರೈತರಿಂದ ಸಪ್ತಭಜನೆ

    ಬರಗಾಲದ ಕರಿನೆರಳು: ಮರೀಚಿಕೆಯಾದ ಮುಂಗಾರು, ಮಳೆಗಾಗಿ ರೈತರಿಂದ ಸಪ್ತಭಜನೆ

    ರಾಯಚೂರು: ಮುಂಗಾರು ಮಳೆಯ ಆರಂಭದ ಅಬ್ಬರಕ್ಕೆ ಖುಷಿಯಾಗಿದ್ದ ರಾಯಚೂರು ಜಿಲ್ಲೆಯ ರೈತರು ಈಗ ಬರೀ ಮೋಡಗಳನ್ನ ನೋಡುತ್ತ ಮಳೆಗಾಗಿ ಕಾಯುತ್ತ ಕುಳಿತಿದ್ದಾರೆ. ಈ ಬಾರಿಯು ಬರಗಾಲದ ಹೆದರಿಕೆ ಶುರುವಾಗುತ್ತಿದೆ. ಬಿತ್ತನೆ ಮಾಡಿದ ರೈತರದ್ದು ಒಂದು ಚಿಂತೆಯಾದ್ರೆ, ಬಿತ್ತನೆ ಮಾಡದೇ ಖಾಲಿ ಕುಳಿತ ರೈತರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ರೈತರೆಲ್ಲಾ ದೇವರ ಮೊರೆ ಹೋಗುತ್ತಿದ್ದು ಭಜನೆ, ಪ್ರಾರ್ಥನೆಗಳ ಮೂಲಕ ಮಳೆ ತರಿಸಲು ಮುಂದಾಗಿದ್ದಾರೆ.

    ಜೂನ್ ತಿಂಗಳ ಆರಂಭದಲ್ಲಿ ಇಡೀ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಮಳೆ ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯನ್ನ ಹುಟ್ಟಿಸಿತ್ತು. ಜಿಲ್ಲೆಯ ಶೇಕಡ 60 ರಷ್ಟು ರೈತರು ಸಹ ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ಬಿತ್ತನೆ ಮಾಡಿದ್ದಾರೆ. ಆಷಾಡ ಗಾಳಿ ಹಿನ್ನೆಲೆ ಶೇಕಡಾ 40 ರಷ್ಟು ರೈತರು ಇನ್ನೊಂದು ಮಳೆಗೆ ಕಾಯುತ್ತಿದ್ದರು.

    ಮಳೆ ಮಾತ್ರ ಒಂದು ತಿಂಗಳಾದ್ರೂ ಇನ್ನೂ ಸುಳಿದಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 80.7 ಮಿಮೀ ಇದ್ರೆ, 121.8 ಮಿಮೀ ಮಳೆ ಬಂದಿತ್ತು. ಆದ್ರೆ ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆ ಪ್ರಮಾಣ 72.4 ಮಿಮೀ ಇದ್ದರೆ, ಮಳೆಯಾಗಿರೋದು ಮಾತ್ರ ಕೇವಲ 17.6 ಮಿಮೀ. ಅಂದ್ರೆ ಶೇಕಡಾ 76 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ರೈತರು ಭಜನೆ ಮೂಲಕ ದೇವರ ಮೊರೆ ಹೋಗಿದ್ದಾರೆ.

    ಜಿಲ್ಲೆಯ ಉಡಮಗಲ್ ಖಾನಾಪುರ ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಭೀಮೇಶ್ವರ ದೇವಾಲಯದಲ್ಲಿ ರೈತರು ಸಪ್ತಭಜನೆ ಆರಂಭಿಸಿದ್ದಾರೆ. ಸತತ ಏಳು ದಿನಕಾಲ ಮಡಿ ಬಟ್ಟೆ ಒಣಗದಂತೆ 49 ಜನರ 7 ತಂಡ ನಿರಂತರ ಭಜನೆ ಆರಂಭಿಸಿದೆ. 2015 ರಿಂದ ಸಪ್ತಭಜನೆ ಆರಂಭಿಸಿದ್ದು ಈ ಹಿಂದೆ ಮಳೆ ಬಂದಿದೆ ಅನ್ನೋ ನಂಬಿಕೆಯಲ್ಲಿ ಭಜನೆ ಮುಂದುವರೆಸಿದ್ದಾರೆ.

    ಒಟ್ನಲ್ಲಿ, ಈ ಬಾರಿ ಬಹು ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ರೈತರ ಜೊತೆ ಆಟವಾಡಲು ಶುರುಮಾಡಿದೆ. ಬಿತ್ತನೆಯಾದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಬೀಜ, ಗೊಬ್ಬರ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚುಮಾಡಿದ ರೈತರು ಪುನಃ ಸಾಲಗಾರರಾಗುತ್ತಿದ್ದಾರೆ. ಈಗಲಾದ್ರೂ ವರುಣದೇವ ಕೃಪೆ ತೋರಬೇಕಿದೆ.

  • ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆಯುತ್ತಿದ್ದಂತೆ ಹೃದಯಾಘಾತವಾಗಿ ರೈತ ಸಾವು

    ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆಯುತ್ತಿದ್ದಂತೆ ಹೃದಯಾಘಾತವಾಗಿ ರೈತ ಸಾವು

    ಮೈಸೂರು: ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆದ ರೈತ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

    30 ವರ್ಷದ ಪುಟ್ಟೇಗೌಡ ಮೃತ ರೈತ. ನಂಜನಗೂಡು ತಾಲೂಕು ಕಂದೇಗಾಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆ ಮಹೇಂದ್ರ ಫೈನಾನ್ಸ್ ಸಂಸ್ಥೆಯಿಂದ ಪುಟ್ಟೇಗೌಡ ಅವರು ಟ್ರ್ಯಾಕ್ಟರ್ ಖರೀದಿಗಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ಆದ್ರೆ ಸಾಲದ ಹಣ ಹಿಂದಿರುಗಿಸಲು ವಿಳಂಬವಾದ ಹಿನ್ನಲೆಯಲ್ಲಿ ಇಂದು ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ನೊಟೀಸ್ ನೀಡಿದ್ದಾರೆ.

    ನೋಟಿಸ್ ಪಡೆಯುತ್ತಿದ್ದಂತೆಯೇ ಪುಟ್ಟೇಗೌಡ ಅವರು ಕುಸಿದು ಬಿದ್ದಿದ್ದು, ಕೆಲ ಕ್ಷಣಗಳಲ್ಲೇ ಸಾವನ್ನಪ್ಪಿದ್ದಾರೆ. ನೋಟಿಸ್ ನಿಂದ ಪುಟ್ಟೇಗೌಡ ಅವರಿಗೆ ಅಘಾತವಾಗಿ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ.

  • ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

    ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ.

    ರಾಯನಗೌಡ ಪಾಟೀಲ್(45) ಎಂಬುವರು ಆರು ಏಕರೆ ಜಮೀನು ಹೊಂದಿದ್ದರು. ಹಾಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಅಲ್ಲದೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೆಳದ ಬೆಳೆಯೂ ಬಾರದ ಕಾರಣ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾವು ಮಲ್ಯನ ಥರ ಅಲ್ಲ, ಸಾಲ ಮಾಡಿ ಓಡಿ ಹೋಗಲ್ಲ- ವಸೂಲಿಗೆ ಬಂದವರ ವಿರುದ್ಧ ರೈತರ ಆಕ್ರೋಶ

    ನಾವು ಮಲ್ಯನ ಥರ ಅಲ್ಲ, ಸಾಲ ಮಾಡಿ ಓಡಿ ಹೋಗಲ್ಲ- ವಸೂಲಿಗೆ ಬಂದವರ ವಿರುದ್ಧ ರೈತರ ಆಕ್ರೋಶ

    ಚಾಮರಾಜನಗರ: ಒಂದು ಕಡೆ ಜಿಲ್ಲಾಧಿಕಾರಿ ಬೆಳೆ ಬೆಳೆಯಿರಿ ಇಲ್ಲವಾದ್ರೆ ನೋಟಿಸ್ ಕೊಡ್ತೀನಿ ಎನ್ನುತ್ತಾರೆ. ಇನ್ನೊಂದೆಡೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಿ ಮಾಡಲು ಮನೆಗೆ ಬರುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು, ನಾವು ಸಾಲ ಮಾಡಿ ಓಡಿಹೋಗಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೊಸ ಸಾಲ ನೀಡ್ತೀವಿ, ಹಳೇ ಸಾಲ ತೀರಿಸಿ ಎಂದು ವಿಜಯ ಬ್ಯಾಂಕ್ ಅಧಿಕಾರಿಗಳು ಚಾಮರಾಜನಗರ ತಾಲೂಕಿನ ಹಾಲೂರು ಗ್ರಾಮದಲ್ಲಿ  ಬೆಳ್ಳಂಬೆಳ್ಳಿಗೆ ರೈತರ ಮನೆ ಬಾಗಿಲಿಗೆ ಹೋಗಿ ಸಾಲ ವಸೂಲಾತಿಗೆ ಮುಂದಾಗಿದ್ದಾರೆ.

    ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದು ಯಾವ ಬೆಳೆಯನ್ನು ಬೆಳೆದಿಲ್ಲ. ಹೀಗಿರುವಾಗ ನಾವು ಹಳೇ ಸಾಲ ಹೇಗೆ ತೀರಿಸುವುದು. ನಮಗೆ ಹೊಸ ಸಾಲವೇನೂ ಬೇಡ. ನಾವು ಬೆಳೆ ಬೆಳೆದು ಹಳೇ ಸಾಲವನ್ನು ತೀರಿಸುತ್ತೀವಿ. ನಮಗೇನೂ ಹೊಸ ಸಾಲದ ಅಗತ್ಯವಿಲ್ಲ. ನಮಗೂ ಸ್ವಾಭಿಮಾನ ಇದೆ. ನಾವೇನು ಮಲ್ಯ ರೀತಿ ದೇಶ ಬಿಟ್ಟು ಹೋಗಲ್ಲ. ಸಾಲ ತೀರಿಸುತ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಹಾಲೂರಿನಲ್ಲಿರುವ ವಿಜಯಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ರು.

  • ಸಾಲ ಹಿಂದಿರುಗಿಸದ್ದಕ್ಕೆ ಹೆಂಡ್ತಿ, ಮಕ್ಕಳನ್ನ ಹೊತ್ತೊಯ್ದರು- ಮನನೊಂದು ಪತಿ ಆತ್ಮಹತ್ಯೆ

    ಸಾಲ ಹಿಂದಿರುಗಿಸದ್ದಕ್ಕೆ ಹೆಂಡ್ತಿ, ಮಕ್ಕಳನ್ನ ಹೊತ್ತೊಯ್ದರು- ಮನನೊಂದು ಪತಿ ಆತ್ಮಹತ್ಯೆ

    ಹಾವೇರಿ: ಸಾಲದ ಹಣ ಹಿಂದಿರುಗಿಸದ ಹಿನ್ನಲೆಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊತ್ತುಕೊಂಡು ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ 38 ವರ್ಷ ವಯಸ್ಸಿನ ಉದಯ ಸಣ್ಣತಂಗಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಲ್ಲಿ ಉದಯ ಮತ್ತು ಪತ್ನಿ ಶೋಭಾ ಒಂದು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ರು. ಸಾಲಾಗಾರರ ಕಿರುಕುಳ ತಾಳಲಾರದೇ ಉದಯ ಮತ್ತು ಅವರ ಕುಟುಂಬ ಊರು ಬಿಟ್ಟು ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಬಾಲೇಹೂಸೂರು ಗ್ರಾಮಕ್ಕೆ ಬಂದಿದ್ರು.

    ಎರಡು ದಿನಗಳ ಹಿಂದೆ ಪವನ್ ಮತ್ತು ಆತನ ಗ್ಯಾಂಗ್ ಉದಯ್ ಅವರ ಪತ್ನಿ ಮತ್ತು ಮಕ್ಕಳನ್ನ ಹೊತ್ತುಕೊಂಡು ಹೋಗಿದ್ರು. ಇದ್ರಿಂದ ಮನನೊಂದು ಉದಯ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿರುಕುಳ ನೀಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೃತ ಉದಯ್ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಮಗಳ ಮದುವೆಯ ಹಿಂದಿನ ದಿನವೇ ರೈತ ಆತ್ಮಹತ್ಯೆ!

    ಮಗಳ ಮದುವೆಯ ಹಿಂದಿನ ದಿನವೇ ರೈತ ಆತ್ಮಹತ್ಯೆ!

    ಯಾದಗಿರಿ: ಮಗಳ ಮದುವೆಯ ಹಿಂದಿನ ದಿನವೇ ಸಾಲ ಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೀರೆವಡಗೇರಾ ಗ್ರಾಮದಲ್ಲಿ ನಡೆದಿದೆ.

    ರೈತ ಭೀಮೇಶಪ್ಪ ಕರಿಕಳ್ಳಿ (50) ಆತ್ಮಹತ್ಯೆ ಮಾಡಿಕೊಂಡ ರೈತ. ಇಂದು ಭೀಮೇಶಪ್ಪ ಅವರ ಮಗಳ ಮದುವೆ ರಾಯಚೂರು ಜಿಲ್ಲೆಯಲ್ಲಿ ನಡೆಯಬೇಕಿತ್ತು. ಆದ್ರೆ ಮಗಳ ಮದುವೆ ಮುನ್ನವೇ ಗುರುವಾರದಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಒಂದು ಎಕರೆ ಹೊಲವಿದ್ದು ಎರಡು ಲಕ್ಷ ರೂಪಾಯಿ ಕೈ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

    ಗುರುವಾರ ಬೆಳಿಗ್ಗೆ ಮನೆಯಿಂದ ಹೊರಹೋದ ಭೀಮೇಶಪ್ಪ ಮನೆಗೆ ಬಾರದೆ ಇರುವುದರಿಂದ ಕುಟುಂಬದವರು ಹುಡುಕಲು ಆರಂಭಿಸಿದ್ದು, ಹೀರೆವಡಗೇರಾ ಹೊರವಲಯದ ಹೊಲವೊಂದರಲ್ಲಿ ಶವವಾಗಿ ಸಿಕ್ಕಿದ್ದಾರೆ.

    ಭೀಮೇಶಪ್ಪ ಅವರಿಗೆ ಮೂರು ಜನ ಗಂಡು ಮಕ್ಕಳು, ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಘಟನೆ ಸಂಬಂಧ ಹಿರೇವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

    ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

    -ಬರ ಪರಿಹಾರದ ಹಣ ಸಾಲಕ್ಕೆ ವಜಾ

    ಮಂಡ್ಯ: ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡ್ಯದ ಮಳವಳ್ಳಿಯಲ್ಲಿ ಯಾವುದೇ ಬ್ಯಾಂಕ್‍ಗಳು ರೈತರಿಂದ ಸಾಲ ವಸೂಲಿಗೆ ಮುಂದಾಗಬೇಡಿ ಅಂತಾ ಖಡಕ್ ಸಂದೇಶ ನೀಡಿದ್ರು. ಆದ್ರೆ ಮಂಡ್ಯದ ಹಲವು ಬ್ಯಾಂಕ್‍ಗಳು ಈಗಾಗಲೇ ರೈತರಿಗೆ ಸಾಲ ಮರುಪಾವತಿಗೆ ನೋಟೀಸ್ ನೀಡಿವೆ. ಅದ್ರ ಜೊತೆ ಸರ್ಕಾರ ಬರ ಪರಿಹಾರಕ್ಕೆಂದು ನೀಡಿದ್ದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ಕಂಗಾಲಾಗಿರುವ ರೈತ ಸಮುದಾಯ, ಸ್ವಾಮಿ ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕೇಳದೇ ಎಲ್ಲಿದ್ದೀರಿ ಅಂತಾ ಕಣ್ಣೀರು ಹಾಕುತಿದ್ದಾರೆ.

    ಹೌದು. ಒಂದೆಡೆ ಖಾಲಿ ಕಾಲುವೆ. ಮತೊಂದೆಡೆ ಬೆಳೆ ಇಲ್ಲದೆ ಬಣಗುಡುತ್ತಿರೋ ಭೂಮಿ. ಇಂತಹ ಸಂಕಷ್ಟದಲ್ಲಿರುವ ಮಂಡ್ಯ ರೈತರಿಗೆ ಬ್ಯಾಂಕ್‍ಗಳ ನೋಟಿಸ್ ಬೇರೆ. ಇಲ್ಲಿನ ರೈತರು ಒಡವೆ ಅಡವಿಟ್ಟು ಸಾಲ-ಸೋಲ ಮಾಡಿ ಒಂದಿಷ್ಟು ಬೆಳೆ ಬೆಳೆದಿದ್ರು. ಅದು ಮಳೆಯಿಲ್ಲದೆ ಕೈಗೆ ಬರ್ಲಿಲ್ಲ. ಈ ಸಮಸ್ಯೆಗಳ ಅರಿವಿದ್ರೂ ಬ್ಯಾಂಕ್‍ಗಳು ಮಾತ್ರ ನಿಮ್ಮ ಒಡವೆ ಹರಾಜಿಗೆ ಬಂದಿದೆ ಎಂದು ನೋಟಿಸ್ ನೀಡಿವೆ. ಇದ್ರಿಂದ ಕಂಗಾಲಾಗಿರೋ ರೈತರು, ಮುಖ್ಯಮಂತ್ರಿಗಳೇ ನೀವೇ ಒಳ್ಳೇ ಬೆಲೆಗೆ ನಮ್ಮ ಒಡವೆ ತಗೊಂಡು ನಮ್ಮನ್ನ ಕಾಪಾಡಿ ಅಂತಿದ್ದಾರೆ.

    ಮಂಡ್ಯದ ಕೆಲವು ಬ್ಯಾಂಕ್‍ಗಳು ಬರ ಪರಿಹಾರಕ್ಕೆಂದು ರೈತರ ಖಾತೆಗೆ ಹಾಕಿರುವ ಹಣವನ್ನ ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ರೈತರು ಕಣ್ಣೀರು ಹಾಕ್ತಿದ್ದಾರೆ.

    ಯಾವುದೇ ಕಾರಣಕ್ಕೆ ಸಾಲಕ್ಕೆ ಇದನ್ನು ಚುಪ್ತಾ ಮಾಡಿಕೊಳ್ಳಬಾರದೆಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಗಳು ಗಮನಕ್ಕೆ ತಂದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಮಂಡ್ಯ ತಹಶೀಲ್ದಾರ್ ಮಾರುತಿ ಪ್ರಸನ್ನ ಹೇಳಿದ್ದಾರೆ.

    ಒಟ್ಟಿನಲ್ಲಿ ರೈತರ ಬದುಕು ದಿನ ದಿನಕ್ಕೂ ಮೂರಾಬಟ್ಟೆಯಾಗ್ತಿದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ರಾಜಕಾರಣ ಮಾಡ್ಕೊಂಡು ಕಾಲ ಕಳೆಯುತ್ತಿರೋದು ವಿಪರ್ಯಾಸ.

  • ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    -ಬ್ಯಾಂಕ್‍ನಿಂದ ರೈತನಿಗೆ ಸ್ಥಿರಾಸ್ಥಿ ಜಪ್ತಿ ವಾರೆಂಟ್

    -ಸಿಎಂ ಆದೇಶ ಮೀರಿ ಬಲವಂತದ ವಸೂಲಿಗೆ ಮುಂದಾಗಿರುವ ಬ್ಯಾಂಕ್

    ರಾಯಚೂರು: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ರೈತರು ಸಾಲದ ಸುಳಿಯಲ್ಲಿ ನಲುಗಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನೋಟಿಸ್ ನೀಡಬಾರದು ಎಂದು ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಬಡ್ಡಿಗೆ ಬಡ್ಡಿ ಹಾಕಿ ರೈತನ ಮನೆ, ಜಮೀನಿನ ಹರಾಜಿಗೆ ಬ್ಯಾಂಕ್ ಮುಂದಾಗಿದೆ.

    ದೇವದುರ್ಗದ ಗೂಗಲ್ ಗ್ರಾಮದ ರೈತ ದೊಡ್ಡವಿರುಪಾಕ್ಷಪ್ಪ ಬ್ಯಾಂಕ್ ನೋಟಿಸ್‍ಗಳನ್ನ ಹಿಡಿದು ಸಹಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

    ಐದು ಎಕರೆ 12 ಗುಂಟೆ ಜಮೀನು ಹೊಂದಿರುವ ದೊಡ್ಡವಿರುಪಾಕ್ಷಪ್ಪ ಕೃಷಿ ಚಟುವಟಿಕೆಗಳಿಗಾಗಿ ಇಲ್ಲಿನ ಕೊಪ್ಪರ ಶಾಖೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಆದ್ರೆ ಸಾಲದ ಮೊತ್ತವನ್ನ 10 ಲಕ್ಷ 81 ಸಾವಿರ ಅಂತ ಹೇಳುತ್ತಿರುವ ಬ್ಯಾಂಕ್ ಈಗ ಬಡ್ಡಿಗೆ ಬಡ್ಡಿ ಸೇರಿಸಿ 24 ಲಕ್ಷ 42 ಸಾವಿರ ಕಟ್ಟುವಂತೆ ನೋಟೀಸ್ ನೀಡಿದೆ. ಸಾಲ ಪಾವತಿಸದಿದ್ದರೆ ಚಿರಾಸ್ಥಿಗಳಾದ ಮನೆ, ಜಮೀನನ್ನ ಹರಾಜು ಹಾಕುವುದಾಗಿ ವಾರೆಂಟ್ ನೀಡಿದೆ. ಇದರಿಂದ ದಿಗಿಲುಗೊಂಡಿರುವ ರೈತ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತಿದ್ದಾರೆ.

    2006 ರಿಂದ 9 ಕಂತುಗಳಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದ ರೈತ ಈಗಲೂ ಸಾಲ ತೀರಿಸಲು ಸಿದ್ಧರಿದ್ದಾರೆ. ಆದ್ರೆ ನ್ಯಾಯಯುತವಾದ ಮೊತ್ತವನ್ನ ನಿಗದಿ ಪಡಿಸಿ ಕಂತುಗಳಲ್ಲಿ ಕಟ್ಟಲು ಅವಕಾಶ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನೂ ರೈತನ ಬೆಂಬಲಕ್ಕೆ ನಿಂತಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ಯಾಂಕ್‍ನ ನಡೆಯನ್ನ ಖಂಡಿಸಿದೆ. ರೈತನ ಸ್ಥಿರಾಸ್ಥಿ ಜಪ್ತಿಗೆ ಮುಂದಾದ್ರೆ ಪರಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ಎಚ್ಚರಿಸಿದ್ದಾರೆ.

    ಒಟ್ಟಿನಲ್ಲಿ, ಸತತ ಮೂರು ವರ್ಷಗಳ ಬರಗಾಲ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತ ವಿರುಪಾಕ್ಷಪ್ಪನಿಗೆ ಬ್ಯಾಂಕ್‍ನ ಸ್ಥಿರಾಸ್ಥಿ ಜಪ್ತಿ ವಾರೆಂಟ್ ದಿಕ್ಕುಕಾಣದಂತೆ ಮಾಡಿದೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಸಾಲ ತೀರಿಸಲು ಬ್ಯಾಂಕ್ ಅನುವುಮಾಡಿಕೊಡಬೇಕಿದೆ.

  • ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಮಳೆ-ಗಾಳಿ ರಭಸಕ್ಕೆ ನೆಲಕಚ್ಚಿದ ಬಾಳೆ

    ಮಂಡ್ಯ: ಇಷ್ಟು ದಿನ ಭೀಕರ ಬರಗಾಲದಿಂದ ತತ್ತರಿಸಿದ್ದ ಮಂಡ್ಯ ರೈತರು, ಇದೀಗ ಮಳೆಗಾಳಿಯ ರಭಸಕ್ಕೆ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ.

    ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹಡೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಟ ಬಹುತೇಕ ನಾಶವಾಗಿದೆ. ಗ್ರಾಮದ ಮಾಯಣ್ಣಗೌಡ ಎಂಬುವರಿಗೆ ಸೇರಿದ 8.5 ಎಕರೆ ತೋಟದಲ್ಲಿ ಬಾಳೆ ಬೆಳೆದಿದ್ದರು.

    ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದ ಬಾಳೆ ನೆಲ ಕಚ್ಚಿರೋದ್ರಿಂದ ರೈತ ಮಾಯಣ್ಣಗೌಡರಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಸೂಕ್ತ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಮಾಯಣ್ಣಗೌಡ ಮನವಿ ಮಾಡಿಕೊಂಡಿದ್ದಾರೆ.