Tag: ಸಾಲ

  • ಗಣಪತಿಗೆ ಪೂಜೆ ಸಲ್ಲಿಸಿ ಮಂಡ್ಯದಲ್ಲಿ ಮಹಿಳೆ ಆತ್ಮಹತ್ಯೆ!

    ಗಣಪತಿಗೆ ಪೂಜೆ ಸಲ್ಲಿಸಿ ಮಂಡ್ಯದಲ್ಲಿ ಮಹಿಳೆ ಆತ್ಮಹತ್ಯೆ!

    ಮಂಡ್ಯ: ನಾಡಿನಾದ್ಯಂತ ಗುರುವಾರ ಗಣೇಶ ಹಬ್ಬ ಆಚರಿಸುತ್ತಿದ್ದು, ಮಂಡ್ಯದಲ್ಲಿ ಮಹಿಳೆಯೊಬ್ಬರು ಗಣಪತಿಗೆ ಪೂಜೆ ಸಲ್ಲಿಸಿ ಬಳಿಕ ನೇಣಿಗೆ ಶರಣಾದ ಘಟನೆ ನಡೆದಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ದೇವಿರಹಳ್ಳಿ ಗ್ರಾಮದ ಗೌರಮ್ಮ (55) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಇವರು ಗುರುವಾರ ಹಬ್ಬವಾದ ಕಾರಣ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಾಲಬಾಧೆಯಿಂದ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೌರಮ್ಮ ಪತಿ ಈಗಾಗಲೇ ನಿಧನ ಹೊಂದಿದ್ದರು. ಹೀಗಾಗಿ ಕುಟುಂಬದ ಜವಬ್ದಾರಿ ಗೌರಮ್ಮ ಮೇಲಿತ್ತು. ಗೌರಮ್ಮ ಅವರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಹೆಣ್ಣು ಮಕ್ಕಳ ಮದುವೆಯಾಗಿತ್ತು. ಆದರೆ ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು ಒಂಬತ್ತು ಲಕ್ಷ ಸಾಲವಿತ್ತು. ಹೀಗಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಎಚ್‍ಡಿಕೆ, ಡಿಕೆಶಿ, ಅಂಬರೀಶ್ ಅಣ್ಣ ನನ್ನ ಅಂತ್ಯಕ್ರಿಯೆಗೆ ಬರಬೇಕು: ಡೆತ್‍ನೋಟ್ ಬರೆದು ರೈತ ಆತ್ಮಹತ್ಯೆ

    ಸಿಎಂ ಎಚ್‍ಡಿಕೆ, ಡಿಕೆಶಿ, ಅಂಬರೀಶ್ ಅಣ್ಣ ನನ್ನ ಅಂತ್ಯಕ್ರಿಯೆಗೆ ಬರಬೇಕು: ಡೆತ್‍ನೋಟ್ ಬರೆದು ರೈತ ಆತ್ಮಹತ್ಯೆ

    ಮಂಡ್ಯ: ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಮ್ಮೆಲ್ಲ ಕಷ್ಟ ಬಗೆಹರಿಯುತ್ತೆ ಎಂಬ ನಂಬಿಕೆಯಿಂದ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನು ಗೆಲ್ಲಿಸಿದ್ದ ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರಿದಿದ್ದು, ಕಳೆದ 5 ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಾಲಬಾಧೆಗೆ ಹೆದರಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ತಡರಾತ್ರಿ ಜಿಲ್ಲೆಯ ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ಗ್ರಾಮದ ರೈತ ರಾಜೇಶ್(45) ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಿಗೆ 5 ಎಕರೆ ಜಮೀನಿದ್ದು, ಬ್ಯಾಂಕ್ ಮತ್ತು ಕೈಸಾಲ ಸೇರಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದರು.

    ಸೋಮವಾರ ಬೆಳಗ್ಗೆಯಿಂದ ಗದ್ದೆ ನಾಟಿ ಕೆಲಸದಲ್ಲಿ ಪಾಲ್ಗೊಂಡಿದ್ದ ರಾಜೇಶ್ ರಾತ್ರಿ ಜಮೀನಿನ ಬಳಿ ನೇಣಿಗೆ ಶರಣಾಗಿದ್ದಾರೆ. ಅಂಬರೀಶ್ ಅವರ ಅಭಿಮಾನಿಯಾಗಿದ್ದ ರೈತ ರಾಜೇಶ್ ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ.

    ಡೆತ್‍ನೋಟ್‍ನಲ್ಲಿ ನನ್ನ ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆ.ಶಿವಕುಮಾರ್, ಮಾಜಿ ಸಚಿವ ಅಂಬರೀಷ್, ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಬರಬೇಕು. ನನ್ನ ಅಂತ್ಯಕ್ರಿಯೆಯನ್ನು ನಗರಕೆರೆ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷರಾದ ನೆಲ್ಲಿಕೃಷ್ಣಣ್ಣ ಮುಂದೆ ನಿಂತು ಮಾಡಿಸಬೇಕು ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಆದರೆ ನಾವು ಪೊಲೀಸರಿಗೆ ಮಾಹಿತಿ ನೀಡಿ ಬರುವಷ್ಟರಲ್ಲಿ ಡೆತ್ ನೋಟ್ ನಾಪತ್ತೆಯಾಗಿದೆ. ಯಾರನ್ನು ಕೇಳಿದರೂ ಡೆತ್ ನೋಟ್ ಕೊಡುತ್ತಿಲ್ಲ ಎಂದು ರಾಜೇಶ್ ಸ್ನೇಹಿತ ಶಿವಲಿಂಗ ಹೇಳಿದ್ದಾರೆ.

    ಕಳೆದ 5 ದಿನಗಳಲ್ಲಿ ಮಂಡ್ಯದಲ್ಲಿ ರೈತ ಆತ್ಮಹತ್ಯೆಗೆ ಶರಣಾದ ಮೂರನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್ 7 ರಂದು ಮಂಡ್ಯ ತಾಲೂಕಿನ ಹೆಮ್ಮಿಗೆ ಗ್ರಾಮದ ರೈತ ಮಹದೇವು ಸಾಲಬಾಧೆ ತಾಳಲಾರದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ರೀತಿ ಸೆಪ್ಟೆಂಬರ್ 10 ರಂದು ಹೊನ್ನೇನಹಳ್ಳಿ ಗ್ರಾಮದ ಜವರೇಗೌಡ ಸಾಲಬಾಧೆಗೆ ಹೆದರಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ದೇಶಕ ಎಸ್ ನಾರಾಯಣ್‍ಗೆ 43 ಲಕ್ಷ ರೂ. ದೋಖಾ

    ನಿರ್ದೇಶಕ ಎಸ್ ನಾರಾಯಣ್‍ಗೆ 43 ಲಕ್ಷ ರೂ. ದೋಖಾ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಸಾಲ ಕೊಡಿಸುವುದಾಗಿ ನಂಬಿಸಿ 43 ಲಕ್ಷ ರೂ. ಗಳನ್ನು ವಂಚನೆ ಮಾಡಲಾಗಿದೆ.

    ಸಿನಿಮಾ ಒಂದರ ಕುರಿತು ಬ್ಯಾಂಕ್‍ನಲ್ಲಿ ಸಾಲ ಪಡೆಯಲು ತೆರಳಿದ್ದ ವೇಳೆ ಪರಿಚಯವಾಗಿದ್ದ ವ್ಯಕ್ತಿಗಳು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಹೇಳಿ ಎಸ್ ನಾರಾಯಣ್ ಅವರಿಗೆ 43 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ನಾರಾಯಣ್ ಅವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್, ವಿಜಯಕುಮಾರ್ ಮತ್ತು ಸಾಮೀಜಿ ಸಂತಾನ ಕೃಷ್ಣ ಎಂಬವರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಸಿನಿಮಾಗಾಗಿ ಸುಮಾರು 50 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಿದ್ದ ನಿರ್ದೇಶಕರು ಬ್ಯಾಂಕ್ ಗಳಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದರು. ಈ ವೇಳೆ ತಮಿಳುನಾಡಿನ ಮಂದಾರ ಮೂರ್ತಿ ಎಂಬಾತನ ಪರಿಚಯವಾಗಿದ್ದು, ಕಡಿಮೆ ಬಡ್ಡಿಗೆ ಸುಮಾರು 70 ಲಕ್ಷ ರೂ. ಸಾಲ ಕೊಡಿಸುವ ಆಶ್ವಾಸನೆ ನೀಡಿದ್ದಾನೆ. ಈ ವೇಳೆ ಕಡಿಮೆ ಬಡ್ಡಿ ದರದ ಆಸೆಗೆ ಬಿದ್ದ ಎಸ್ ನಾರಾಯಣ್ ಅವರು ಆರೋಪಿಯ ಮಾತು ನಂಬಿದ್ದಾರೆ. ಬಳಿಕ ಸಾಲ ಪಡೆಯಲು ಪ್ರೊಸೆಸಿಂಗ್ ಶುಲ್ಕವಾಗಿ ಆರೋಪಿ ಮಂದಾರ ಮೂರ್ತಿ 43 ಲಕ್ಷ ರೂ. ಹಣ ಪಡೆದಿದ್ದಾನೆ.

    ಮೊದಲು ಆರೋಪಿ ಮಾತು ನಂಬಿದ್ದ ಎಸ್ ನಾರಾಯಣ್ ಅವರು, ತಮಿಳುನಾಡಿನ ಕೊಯಮುತ್ತೂರು ವೀರಭದ್ರ ಸ್ವಾಮಿ ಮಠದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಮಠದ ಸ್ವಾಮೀಜಿ ಸಂತಾನ ಕೃಷ್ಣ ಎಂಬವರು 43 ಲಕ್ಷ ರೂ. ನೀಡಿದರೆ 70 ಕೋಟಿ ರೂ. ಸಾಲ ನೀಡುವುದಾಗಿ ಹೇಳಿದ್ದರು. ಈ ವೇಳೆ ಎಸ್ ನಾರಾಯಣ್ 43 ಲಕ್ಷ ರೂ. ಹಣ ನೀಡಿ 70 ಕೋಟಿ ರೂ. ಸಾಲಕ್ಕಾಗಿ ಆಸ್ತಿ ಪತ್ರ ಅಡಮಾನ ಇಡಲು ಮುಂದಾಗಿದ್ದರು.

    ಅಂದಹಾಗೇ ಎಸ್ ನಾರಾಯಣ್ ಅವರಿಗೆ ವಂಚನೆ ಮಾಡಿರುವ ಮಂದಾರ ಮೂರ್ತಿ ತಮಿಳುನಾಡಿನ ಪ್ರಖ್ಯಾತ ಜನಾಂಗ ಒಂದರ ನಾಯಕರಾಗಿದ್ದು, ತಮಿಳುನಾಡಿನ ಕೊಯಮುತ್ತೂರು ವೀರಭದ್ರ ಸ್ವಾಮಿ ಮಠದ ಸ್ವಾಮೀಜಿ ಸಂತಾನ ಕೃಷ್ಣ ಜೊತೆ ಸೇರಿಕೊಂಡು ವಂಚನೆ ಮಾಡಿದ್ದಾರೆ. ಮುಂಗಡವಾಗಿ 40 ಲಕ್ಷ ರೂ. ಪಡೆದ ಆರೋಪಿಗಳು ಸಾಲ ನೀಡದೇ ಮುಂಗಡ ಹಣವನ್ನೂ ನೀಡದೇ ಸತಾಯಿಸಿದ್ದಾರೆ. ಬಳಿಕ ಆರೋಪಿಗಳ ವಂಚನೆ ಜಾಲ ತಿಳಿದ ಎಸ್ ನಾರಾಯಣ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣದ ಕುರಿತು ಇಂದು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಆಗಮಿಸಿದ್ದ ನಿರ್ದೇಶಕ ಎಸ್ ನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕೆಲವೊಂದು ಸಿನಿಮಾ ಪ್ರಾಜೆಕ್ಟ್‍ಗಾಗಿ 50 ಕೋಟಿ ರೂ. ಸಾಲ ಪಡೆಯಲು ಯತ್ನಿಸಿದ್ದೆ. 2016 ರಲ್ಲಿ ಸಾಲಕ್ಕಾಗಿ ತೆರಳಿದ್ದ ವೇಳೆ ಆರೋಪಿ ಪರಿಚಯವಾಗಿತ್ತು. ಪರಿಚಯದ ಬಳಿಕ ತಮಿಳುನಾಡಿಗೆ ಕರೆದುಕೊಂಡು ಹೋಗಿ ಮಂದಾರ ಮೂರ್ತಿ ಎಂಬಾತನನ್ನು ಪರಿಚಯಿಸಿದ್ದರು. ಈ ವೇಳೆ ಬೇರೆಡೆ ಸಾಲ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಮುಂಗಡ ಹಣ 43 ಲಕ್ಷ ರೂ. ಪಡೆದಿದ್ದ. ಅಲ್ಲದೇ ಸಾಲ ನೀಡುವ ನೆಪದಲ್ಲಿ 50 ಕೋಟಿ ರೂ. ಮೌಲ್ಯದ ಡಿಡಿ ಯನ್ನು ನನ್ನ ಹೆಸರಿಗೆ ನೀಡಿದ್ದ. ಆದರೆ ದಿನ ಕಳೆದ ನಂತರ ಬ್ಯಾಂಕ್ ನಲ್ಲಿ ಹಣ ಸಿಗಲಿಲ್ಲ. ಈ ವೇಳೆ ಆರೋಪಿಗಳು ನೀಡಿದ್ದ ಡಿಡಿ ನಕಲಿ ಎಂದು ತಿಳಿಯಿತು. ಬಳಿಕ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಯಿತು. ಆದರೆ ಆರೋಪಿಗಳು ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ- ಹೊಸ ಯೋಜನೆ ಜಾರಿಗೊಳಿಸ್ತೀನಿ ಅಂದ್ರು ಸಿಎಂ

    ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ- ಹೊಸ ಯೋಜನೆ ಜಾರಿಗೊಳಿಸ್ತೀನಿ ಅಂದ್ರು ಸಿಎಂ

    ಬೆಂಗಳೂರು: ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ. ಅಂತಹದ್ದೊಂದು ಹೊಸ ಯೋಜನೆ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದ ಉತ್ತರ ಹಳ್ಳಿಯಲ್ಲಿ ಸಮಾಜ ಸಂಪರ್ಕ ವೇದಿಕೆ ನಿರ್ಮಾಣ ಮಾಡಿರೋ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮ ವೇಳೆ ಮಾತನಾಡಿದ ಅವರು, ಮೊಬೈಲ್ ಬ್ಯಾಂಕಿಂಗ್ ಯೋಜನೆ ಜಾರಿಗೆ ತರುತ್ತೇನೆ. ಅದರಿಂದ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ದಿನದ ಮಟ್ಟಿಗೆ ಸಾಲ ನೀಡೋ ಯೋಜನೆ ಜಾರಿ ತರುತ್ತೇನೆ. ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ ಹೊಸ ಯೋಜನೆ ಜಾರಿಗೆ ತರುತ್ತೇನೆ. ಇದಕ್ಕೆ ಯಾವುದೇ ರೀತಿಯ ಬಡ್ಡಿ ಹಾಕುವುದಿಲ್ಲ ಎಂದು ಹೇಳಿದರು.

    ಕೆಲವೇ ದಿನಗಳಲ್ಲಿ ಹಲವು ಬದಲಾವಣೆ ಮಾಡಲಿದ್ದೇನೆ. ಸಹಕಾರ ನೀಡಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡರು. ನನ್ನ ವಿರುದ್ಧ ಹಲವು ಟೀಕೆಗಳು ಬರುತ್ತಿದೆ. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ ಎಂದು ತಿಳಿಸಿದರು.

    ಜೈಲು ಶಿಕ್ಷೆ:
    ರೈತರು ಲೇವಾದೇವಿದಾರರ ಹತ್ತಿರ ಸಾಲ ಪಡೆದುಕೊಂಡಿದ್ರೆ, ಅವರ ಜೀವನವೆಲ್ಲಾ ಬಡ್ಡಿ ಕಟ್ಟೋದರಲ್ಲಿ ಅಂತ್ಯವಾಗುತ್ತಿದೆ. ರಾಜ್ಯದಲ್ಲಿ ಬಡ್ಡಿ ಕಟ್ಟುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. ವರ್ಷಕ್ಕೆ 1 ಲಕ್ಷ 20 ಸಾವಿರಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ರೈತರಿಗೆ ಲೇವಾದೇವಿವಾರರು ಸಾಲ ಹಿಂದಿರುಗಿ ಕೊಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ರೈತರಿಗೆ ಒತ್ತಡ ಹಾಕಿದರೆ, ಆತನನ್ನು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.

    ಈ ನಿರ್ಧಾರದಿಂದ ಸಾಲ ನೀಡಿದ ಕೆಲವರಿಗೆ ತೊಂದರೆ ಆಗಬಹುದು. ಆದರೆ ರೈತರು ತಾವು ಪಡೆದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದರೂ ಶೇ. 80 ರಷ್ಟು ಅಸಲು ಹಣವನ್ನು ರೈತ ಬಾಂಧವರು ಪಾವತಿಸಿದ್ದಾರೆ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ ಎಂದು ಇದೇ ವೇಳೆ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ರೈತರು ಅಡವಿಟ್ಟ ಒಡವೆ ಹರಾಜು – ಕೆನರಾ ಬ್ಯಾಂಕ್‍ನಿಂದ ಬಹಿರಂಗ ನೋಟಿಸ್

    ಮಂಡ್ಯ: ಜಿಲ್ಲೆಯ ತಳಗವಾದಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ನಿಂದ ರೈತರಿಗೆ ಅಡವಿಟ್ಟ ಒಡವೆಗಳನ್ನು ಹರಾಜು ಹಾಕಲಾಗುವುದು ಎಂದು ನೋಟಿಸ್ ಕಳುಹಿಸಲಾಗಿದೆ.

    2011 ರಿಂದ 2016 ರವರೆಗೆ ಒಡವೆ ಅಡವಿಟ್ಟ ಗ್ರಾಹಕರು ಅಸಲು, ಬಡ್ಡಿ ಪಾವತಿಸದೆ ಸುಸ್ತಿದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 28-08-18 ರಂದು ಒಡವೆಗಳನ್ನು ಹರಾಜು ಹಾಕಲಾಗುತ್ತದೆ ಎಂದು ಕೆನರಾ ಬ್ಯಾಂಕ್ ತನ್ನ ನೋಟಿಸ್ ನಲ್ಲಿ ತಿಳಿಸಿದೆ. ಈ ಸಂಬಂಧ ತಳಗವಾದಿ ಗ್ರಾಮದ ಹಲವೆಡೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.

    ಸತತ ಬರಗಾಲದಿಂದ ಬಿತ್ತನೆ ಕಾರ್ಯಕ್ಕಾಗಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯಲಾಗಿತ್ತು. ಈ ವರ್ಷ ಚೆನ್ನಾಗಿ ಮಳೆಯಾಗಿದ್ದು, ಸಾಲ ತೀರಿಸಿ ಒಡವೆ ಬಿಡಿಸಿಕೊಳ್ಳೋಣ ಎಂದು ಯೋಚಿಸಲಾಗಿತ್ತು. ಒಂದು ಬ್ಯಾಂಕ್ ನಮ್ಮ ಒಡವೆಗಳನ್ನು ಹರಾಜು ಹಾಕಿದ್ರೆ ವಿಷ ಕುಡಿಯದೇ ಬೇರೆ ಮಾರ್ಗ ನಮ್ಮ ಮುಂದಿಲ್ಲ ಎಂದು ನೋಟಿಸ್ ಪಡೆದಿರುವ ರೈತರು ಅಳಲು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ ಬಿ ಶ್ರೀರಾಮುಲು

    ಗದಗ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯೂ ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಿ ಶ್ರೀರಾಮುಲು ಮತ್ತೊಮ್ಮೆ ಆರೋಪಿಸಿದ್ದಾರೆ.

    ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನಲೆ ಕುರಿತು ಮಾತನಾಡಿದ ಅವರು ಸರ್ಕಾರ ಮುಂಜಾಗ್ರತ ಕ್ರಮವನ್ನು ಕೈಗೊಳ್ಳಲಿಲ್ಲ. ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿಯನ್ನು ತಡೆಯಬಹುದಿತ್ತು. ಆದರೆ ಸರ್ಕಾರದ ನಿರ್ಲಕ್ಷ್ಯ ದಿಂದ ಪ್ರಾಣ ಹಾನಿ, ಪ್ರಾಣಿಗಳ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಮಕ್ಕಳಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಇರಬೇಕಿತ್ತು. ಸರ್ಕಾರ ಮತ್ತು ಸಚಿವ ಸ್ಥಾನ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಇದು ಅಧಿಕಾರ ಅಹಂ ಬಹಳ ದಿನ ಉಳಿಯುವುದಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದ್ದು, ಪ್ರಧಾನಿಗಳು ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂದರು.

    ಸರ್ಕಾರ ಮನಸ್ಸು ಮಾಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬಹುದು. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಲಿ. ರೈತರ ಸಾಲಮನ್ನಾ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲ ಪಡೆದ ಹಣವನ್ನು ವಾಪಸ್ ಕೇಳಿದ್ದಕ್ಕೆ ಆತನನ್ನೇ ಕೊಂದ!

    ಸಾಲ ಪಡೆದ ಹಣವನ್ನು ವಾಪಸ್ ಕೇಳಿದ್ದಕ್ಕೆ ಆತನನ್ನೇ ಕೊಂದ!

    ಯಾದಗಿರಿ: 2.5 ಲಕ್ಷ ರೂ. ಸಾಲ ಪಡೆದ ಹಣವನ್ನು ವಾಪಸ್ ಕೇಳಿದಕ್ಕೆ ಸಾಲ ಕೊಟ್ಟ ವ್ಯಕ್ತಿಯನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಹೊರಭಾಗದಲ್ಲಿ ನಡೆದಿದೆ. ದುಂಡಪ್ಪ ಹೂಗಾರ (24) ಕೊಲೆಯಾದ ವ್ಯಕ್ತಿ. ಇದೇ ತಿಂಗಳು 19ಕ್ಕೆ ಮರೆಪ್ಪ ಎಂಬವನು ದುಂಡಪ್ಪ ಅವರಿಗೆ ಪಡೆದು ಸಾಲದ ಹಣವನ್ನು ಕೊಡುತ್ತೇನೆಂದು ನಂಬಿಸಿ, ಅವರನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು ಮರೆಪ್ಪ, ದುಂಡಪ್ಪ ಅವರನ್ನು ಕೊಲೆ ಮಾಡುತ್ತಾನೆ. ಬಳಿಕ ಶವವನ್ನು ಕಾಲುವೆಯಲ್ಲಿ ಬಿಸಾಕಿದ್ದಾನೆ.

    ಘಟನೆ ಬಳಿಕ ದುಂಡಪ್ಪ ಅವರ ತಂದೆ ಸಾಹೇಬ್ ಅವರು ನಾಪತ್ತೆಯಾಗಿದ್ದಾರೆ ಎಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಆರೋಪಿ ಮರೇಪ್ಪನನ್ನು ಬಂಧಿಸಿದ್ದಾರೆ. ಸದ್ಯ ಅಗ್ನಿಶಾಮಕ ದಳದವರು ಶವಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮೀನಿನಲ್ಲೇ ರೈತ ಆತ್ಮಹತ್ಯೆಗೆ ಶರಣು!

    ಜಮೀನಿನಲ್ಲೇ ರೈತ ಆತ್ಮಹತ್ಯೆಗೆ ಶರಣು!

    ಗದಗ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸಾಲಬಾಧೆ ತಾಳಲಾರದೇ ರೈತ ತನ್ನ ಜಮೀನಿನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಫಕೀರಪ್ಪ ಕಬ್ಬೇರಹಳ್ಳಿ(45) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ವಿಜಯಾ ಬ್ಯಾಂಕ್ ನಲ್ಲಿ 3.50 ಲಕ್ಷ ರೂ. ಸಾಲಪಡೆದಿದ್ದು, ಬೀಜ ಗೊಬ್ಬರದ ಅಂಗಡಿಯಲ್ಲಿ 3 ಲಕ್ಷ ರೂ. ಹಾಗೂ ಸಹಕಾರಿ ಬ್ಯಾಂಕ್ ನಲ್ಲಿ 48 ಸಾವಿರ ರೂ., ಒಟ್ಟು 6 ಲಕ್ಷ 98 ಸಾವಿರ ರೂ. ಸಾಲ ಮಾಡಿದ್ದರು.

    ಜಮೀನಿನಲ್ಲಿ ಇಡೀ ದಿನ ಎಡೆ ಹೊಡೆದಿದ್ದ ರೈತ ಚಾಲ್ತಿ ಸಾಲಮನ್ನಾ ಮಾಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಾಟ್ಸಪ್‍ನಲ್ಲಿ ಸಾವಿನ ಸಂದೇಶದ ವಿಡಿಯೋ ಹರಿಬಿಟ್ಟು ನಾಪತ್ತೆ

    ವಾಟ್ಸಪ್‍ನಲ್ಲಿ ಸಾವಿನ ಸಂದೇಶದ ವಿಡಿಯೋ ಹರಿಬಿಟ್ಟು ನಾಪತ್ತೆ

    ರಾಯಚೂರು: ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ವಾಟ್ಸಪಿನಲ್ಲಿ ವಿಡಿಯೋ ಹರಿಬಿಟ್ಟಿದ್ದು, ಇದುವರೆಗೂ ಆತ ಪತ್ತೆಯಾಗಿಲ್ಲ.

    ರಾಯಚೂರಿನ ಮಸ್ಕಿಯ ಗುತ್ತಿಗೆದಾರ ಚನ್ನಬಸವ ಸಾಲಬಾಧೆ ಹಾಗೂ ಹಣ ನೀಡಬೇಕಾದವರು ಕೊಡದೆ ಕಿರುಕುಳ ಕೊಡುತ್ತಿದ್ದಾರೆ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ವಾಟ್ಸಪ್ ನಲ್ಲಿ ಭಾನುವಾರ ವಿಡಿಯೋ ಹರಿಬಿಟ್ಟಿದ್ದಾರೆ. ಅಲ್ಲದೆ ತುಂಗಭದ್ರಾ ಎಡದಂಡೆ ನಾಲೆ ಗುಡುದೂರು ಬಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

    ಕಾಲುವೆ ಬಳಿ ಚನ್ನಬಸವನ ಬಟ್ಟೆ ಹಾಗೂ ಡೆತ್ ನೋಟ್ ಸಿಕ್ಕಿವೆ. ಆದರೆ ಚನ್ನಬಸವ ಇದುವರೆಗೂ ಪತ್ತೆಯಾಗಿಲ್ಲ. ಅಂದಾನಪ್ಪ, ದೊಡ್ಡಪ್ಪ ಸಗರದ, ಸಣ್ಣಮೌನೇಶಗೌಡ, ಡಾ.ನಾಗನಗೌಡ ಎಂಬವರು ಒಟ್ಟು 12 ಲಕ್ಷ 74 ಸಾವಿರ ಕೊಡಬೇಕಿತ್ತು. ಆದರೆ ಹಣ ಕೊಡದೆ ಕಿರುಕುಳ ನೀಡಿದ್ದಾರೆ. ಇದರಿಂದ ಸಾಲ ಹೆಚ್ಚಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

    ಭಾನುವಾರ ರಾತ್ರಿವರೆಗೂ ಕಾಲುವೆಯಲ್ಲಿ ಚನ್ನಬಸವರಿಗಾಗಿ ಹುಡುಕಾಟ ನಡೆದಿದೆ. ಆದರೆ ಚನ್ನಬಸವನ ಕುರಿತು ಬದುಕಿರುವ ಅಥವಾ ಸತ್ತಿರುವ ಸುಳಿವು ಸಿಕ್ಕಿಲ್ಲ. ಸಿಂಧನೂರಿನ ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪೈಸೆ ಪೈಸೆ ಕೂಡಿಟ್ಟು ಕಟ್ಟಿದ ಮನೆ ಅನ್ಯರ ಪಾಲು

    ಪೈಸೆ ಪೈಸೆ ಕೂಡಿಟ್ಟು ಕಟ್ಟಿದ ಮನೆ ಅನ್ಯರ ಪಾಲು

    -ಮನನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ

    ತುಮಕೂರು: ಬಡ ಕುಂಟುಂಬವೊಂದು ಪೈಸೆ ಪೈಸೆ ಕೂಡಿಟ್ಟು ಮನೆ ಕಟ್ಟಿದ್ದು, ಈಗ ಆ ಮನೆಯಲ್ಲಿ ವಾಸ ಮಾಡುವ ಭಾಗ್ಯ ಆ ಕುಟುಂಬಕ್ಕೆ ಬಂದಿಲ್ಲ. ಬದಲಾಗಿ ಇಡೀ ಮನೆ ಅನ್ಯ ವ್ಯಕ್ತಿಯ ಪಾಲಾಗಿದೆ. ಬಡ್ಡಿ ದಂಧೆಕೋರರ ಜೊತೆ ಸೇರಿಕೊಂಡು ಪೊಲೀಸರು ದೌರ್ಜನ್ಯ ಎಸಗಿ ಮನೆ ಖಾಲಿ ಮಾಡಿಸಿದ್ದಾರಂತೆ. ಬೀದಿಪಾಲಾದ ಈ ಕುಟುಂಬ ಪೊಲೀಸರು ಪದೇ ಪದೇ ನೀಡುತ್ತಿರುವ ಹಿಂಸೆಯಿಂದ ಬೇಸತ್ತು ದಯಾಮರಣದ ಮೊರೆ ಹೋಗಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದ ಬಳಿ ಇರುವ ಮಾರನಾಯಕನಪಾಳ್ಯದ ಕುಟುಂಬ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಬರೆದಿರುವ ದಯಾಮರಣದ ಅರ್ಜಿ ಸಲ್ಲಿಸಿದೆ. ವೃದ್ಧೆ ಸುಶೀಲ ಕುಟುಂಬ ದಯಾಮರಣದ ಮೊರೆ ಹೋಗಲು ಕ್ಯಾತಸಂದ್ರ ಪೊಲೀಸರಿಂದ ಆಗುತ್ತಿರುವ ನಿರಂತರ ದೌರ್ಜನ್ಯ ಕಾರಣವಂತೆ. ಸುಶೀಲಮ್ಮ ಸಿದ್ದಂಗ ಮಠದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿ, ಪೈಸೆ ಪೈಸೆ ಕೂಡಿಟ್ಟು ಮನೆ ಕಟ್ಟಿದ್ದರು. ಮನೆ ಕಟ್ಟುವಾಗ ಸುಶೀಲಮ್ಮಗೆ ಗೊತ್ತಿಲ್ಲದೆ ಅವರ ಮಗಳು ವೀಣಾ, ಎಮ್. ಎಲ್. ಗಂಗಾಧರ್ ಎನ್ನುವವರಿಂದ ಸಾಲ ತಂದಿದ್ದಳು ಎನ್ನಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ವೀಣಾ ಕಾಣೆಯಾಗಿದ್ದಾಳೆ.

    ತನ್ನ ಹಣ ವಾಪಸ್ ಕೊಡುವಂತೆ ಗಂಗಾಧರ್ ವೃದ್ಧೆ ಸುಶೀಲಮ್ಮಗೆ ದಿನನಿತ್ಯ ಕಾಟ ಕೊಡುತಿದ್ದ. ಮಗಳು ಸಾಲ ತಂದಿರುವ ಬಗ್ಗೆ ತನಗೆ ಗೊತ್ತಿಲ್ಲ ಎಂದು ಸುಶೀಲಮ್ಮ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಗಂಗಾಧರ್ ಕ್ಯಾತಸಂದ್ರ ಪೊಲೀಸರ ಮೂಲಕ ನಿರಂತರ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸುಶೀಲಮ್ಮ ಕುಟುಂಬ ಆರೋಪಿಸಿದೆ. ಗಂಗಾಧರ್ ಜೊತೆ ಸೇರಿಕೊಂಡು ಕ್ಯಾತಸಂದ್ರ ಪಿಎಸೈ ರಾಜು, ಸುಶೀಲಮ್ಮರನ್ನು ಮನೆಯಿಂದ ಖಾಲಿ ಮಾಡಿಸಿ, ಮನೆಯನ್ನು ಗಂಗಾಧರ್ ಸುಪರ್ದಿಗೆ ಕೊಡಿಸಿದ್ದಾರೆ. ಹಾಗಾಗಿ ಸುಶೀಲಮ್ಮ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಸಿದ್ದಗಂಗಾ ಮಠದ ಅಂಗಡಿಯಲ್ಲೆ ವಾಸವಿದ್ದಾರೆ.

    ಸುಶೀಲಮ್ಮರ ಹೊಸ ಮನೆಗೆ ಗಂಗಾಧರ್ ಬೀಗ ಜಡಿದಿದ್ದಾನೆ. ಇಷ್ಟಕ್ಕೆಲ್ಲಾ ಕ್ಯಾತಸಂದ್ರ ಪೊಲೀಸರ ಕುಮ್ಮಕ್ಕೆ ಕಾರಣ ಅನ್ನೊದು ಸುಶೀಲಮ್ಮರ ಆರೋಪ. ಇಷ್ಟಕ್ಕೆ ಸುಮ್ಮನಾಗದ ಕ್ಯಾತಸಂದ್ರ ಪೊಲೀಸರು ಪದೇ ಪದೇ ಈ ಕುಟುಂಬದವರನ್ನು ಠಾಣೆಗೆ ಕರೆಯಿಸಿ ಗಂಗಾಧರ್ ಕುಟುಂಬಕ್ಕೆ 10 ಲಕ್ಷ ರೂ ಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಮೇಲಿಂದ ಮೇಲೆ ವಿಚಾರಣೆಗೆ ಕರೆದು ವಶಕ್ಕೆ ಪಡೆಯುವುದು, ಸುಶೀಲಮ್ಮರ ಮಕ್ಕಳಾದ ಪ್ರದೀಪ್ ಮತ್ತು ಸಂದೀಪ್ ರ ಮೇಲೆ ಸರಗಳ್ಳತನ, ರೇಪ್ ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರಂತೆ. ಪೊಲೀಸರ ಈ ದೌರ್ಜನ್ಯದಿಂದ ಬೇಸತ್ತ ಈ ಕುಟುಂಬ ಈಗ ದಯಾಮರಣದ ಮೊರೆ ಹೋಗಿದೆ.

    ಸಾಲ ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಗಂಗಾಧರನಿಗಿಂತ ಪೊಲೀಸರ ಕಾಟವೇ ಸುಶೀಲಮ್ಮ ಕುಟುಂಬಕ್ಕೆ ಹೆಚ್ಚಾಗಿದೆ. ಹಾಗಾಗಿ ಅವರು ದಯಾಮರಣದ ಮೊರೆ ಹೋಗಿದ್ದಾರೆ. ದಯಾಮರಣಕ್ಕೆ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಂದ ಅನುಮತಿ ಸಿಗದೇ ಇದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಜೀವ ತೊರೆಯಲು ಈ ಕುಟುಂಬ ಮುಂದಾಗಿದೆ.