Tag: ಸಾಲ

  • 2100 ರೈತರ ಸಾಲ ತೀರಿಸಿದ  ಬಿಗ್-ಬಿ

    2100 ರೈತರ ಸಾಲ ತೀರಿಸಿದ ಬಿಗ್-ಬಿ

    ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಸುಮಾರು 2,100 ಬಡ ರೈತರ ಸಾಲ ತೀರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಬಿಗ್-ಬಿ ಅಮಿತಾಬ್ ಬಚ್ಚನ್ ಬಿಹಾರ ರಾಜ್ಯದ ಸುಮಾರು 2,100 ಬಡ ರೈತರ ಸಾಲ ತೀರಿಸಿದ್ದಾರೆ. ಈ ಬಗ್ಗೆ ಅಮಿತಾಬ್ ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಜೊತೆಗೆ ಮಗ ಅಭಿಷೇಕ್ ಹಾಗೂ ಮಗಳು ಶ್ವೇತಾ ಜೊತೆಯಿರುವ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಅಮಿತಾಬ್ ತಮ್ಮ ಬ್ಲಾಗ್‍ನಲ್ಲಿ, ಮಾತು ನೀಡಿದ್ದನ್ನು ಪೂರ್ಣಗೊಳಿಸಿದ್ದೇನೆ. ಸಾಲ ಹೊಂದಿದ 2,100 ರೈತರ ಸಾಲವನ್ನು ಮರು ಪಾವತಿಸಲಾಗಿದೆ. ಇನ್ನು ಕೆಲವರಿಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್ ಅವರ ಮೂಲಕ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಅಂದರೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಮಿತಾಬ್ ಬಚ್ಚನ್ ಉತ್ತರ ಪ್ರದೇಶದ 1,398 ರೈತರ 3.99 ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಿದ್ದರು. ಅದಕ್ಕೂ ಮೊದಲು 350 ರೈತರ ಸಾಲವನ್ನು ಪಾವತಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅಮಿತಾಬ್ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದರು.

  • ಬಿರುಗಾಳಿ ಸಹಿತ ಮಳೆ – ಮಣ್ಣುಪಾಲಾಯ್ತು ಸಾವಿರಾರು ಎಕರೆ ದ್ರಾಕ್ಷಿ ಬೆಳೆ

    ಬಿರುಗಾಳಿ ಸಹಿತ ಮಳೆ – ಮಣ್ಣುಪಾಲಾಯ್ತು ಸಾವಿರಾರು ಎಕರೆ ದ್ರಾಕ್ಷಿ ಬೆಳೆ

    ಚಿಕ್ಕಬಳ್ಳಾಪುರ: ಭಾನುವಾರ ರಾತ್ರಿ ಸುರಿದ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಗೆ ರೈತರ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಬೆಳೆ ಮಣ್ಣು ಪಾಲಾಗಿದೆ.

    ಚಿಕ್ಕಬಳ್ಳಾಪುರದ ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ದ್ರಾಕ್ಷಿಯನ್ನು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ ತಡರಾತ್ರಿ ಸುರಿದ ಮಳೆರಾಯನ ಅಬ್ಬರಕ್ಕೆ ಕಟಾವಿಗೆ ಬಂದಿದ್ದ ಬೆಳೆ ಎಲ್ಲಾ ಮಣ್ಣುಪಾಲಾಗಿದೆ.

    ಬರಗಾಲದಲ್ಲೂ ಸಾವಿರ ಎರಡು ಸಾವಿರ ಆಳದಿಂದ ನೀರು ತೆಗೆದು, ಟ್ಯಾಂಕರ್‍ಗಳಿಂದ ನೀರು ಹಾರಿಸಿ ಬಹಳ ಕಷ್ಟ ಪಟ್ಟು ಇಳುವರಿ ಪಡೆಯಲಾಗಿತ್ತು. ಆದರೆ ಭಾನುವಾರ ರಾತ್ರಿ ಬಂದ ಮಳೆ ಕೈಗೆ ಬಂದ ತುತ್ತನ್ನು ಬಾಯಿಗೆ ಬಾರದ ರೀತಿ ಮಾಡಿದೆ.

    ಬಿರುಗಾಳಿ ಸಮೇತ ಮಳೆ ಬಂದ ಕಾರಣ ಕಟಾವಿಗೆ ಬಂದಿದ್ದ ದ್ರಾಕ್ಷಿ ಗೊನೆಗಳೆಲ್ಲಾ ಮುರಿದು ಹೋಗಿ ಮಾರಾಟ ಮಾಡಲು ಆಗದಂತೆ ಆಗಿದೆ. ಇದರ ಜೊತೆ ಆಲಿಕಲ್ಲು ಬಿದ್ದ ಪರಿಣಾಮ ದ್ರಾಕ್ಷಿ ಗೊಂಚಲುಗಳಿಗೆ ಪೆಟ್ಟು ಬಿದ್ದಿದೆ.

    ದ್ರಾಕ್ಷಿ ಬೆಳೆಯನ್ನೇ ನಂಬಿಕೊಂಡು ಔಷಧಿ ಆಗಂಡಿಗಳಲ್ಲಿ, ಗೊಬ್ಬರ ಅಂಗಂಡಿಯಲ್ಲಿ ಮತ್ತು ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದ ರೈತನಿಗೆ ಬೆಳೆ ನಾಶ ಆಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಉಳಿದ ದ್ರಾಕ್ಷಿಯನ್ನು ಮಾರಿ ಜೀವನ ಸಾಗಿಸೋಣ ಎಂದರೆ ಮಧ್ಯವರ್ತಿಗಳು ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ. ಅದ್ದರಿಂದ ಈ ಭಾಗದ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ.

  • 3 ವರ್ಷದ ಹಿಂದೆ ಮದ್ವೆಯಾಗಿದ್ದ ಜೋಡಿ ನೇಣಿಗೆ ಶರಣು

    3 ವರ್ಷದ ಹಿಂದೆ ಮದ್ವೆಯಾಗಿದ್ದ ಜೋಡಿ ನೇಣಿಗೆ ಶರಣು

    ಮಂಡ್ಯ: ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಾಗರಾಜು(28) ಮತ್ತು ಮಂಜುಳ(24) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೂರು ವರ್ಷಗಳ ಹಿಂದೆ ನಾಗರಾಜು ಮತ್ತು ಮಂಜುಳ ಮದುವೆಯಾಗಿತ್ತು. ಈ ದಂಪತಿಗೆ ಒಂದು ಗಂಡು ಮಗು ಕೂಡ ಇದೆ. ಆದರೆ ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.

    ದಂಪತಿಗೆ ಸುಮಾರು 1.5 ಲಕ್ಷ ರೂ. ಸಾಲ ಇತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಸಾಲಗಾರರ ಕಿರುಕುಳದಿಂದ ಬೇಸತ್ತು ನಾಗರಾಜು ಮತ್ತು ಮಂಜುಳ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಜೆಟ್ ಏರ್‍ವೇಸ್ ಸಿಬ್ಬಂದಿಯ ಕಣ್ಣೀರು – ಮಕ್ಕಳೊಂದಿಗೆ ಸಮಯ ವ್ಯಯಿಸಿ ಸಲಹೆ ನೀಡಿದ ಅಧಿಕಾರಿಗಳು

    ಜೆಟ್ ಏರ್‍ವೇಸ್ ಸಿಬ್ಬಂದಿಯ ಕಣ್ಣೀರು – ಮಕ್ಕಳೊಂದಿಗೆ ಸಮಯ ವ್ಯಯಿಸಿ ಸಲಹೆ ನೀಡಿದ ಅಧಿಕಾರಿಗಳು

    ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‍ವೇಸ್ ತನ್ನ ಹಾರಾಟವನ್ನು ನಿಲ್ಲಿಸಿದೆ. ಈ ಸಂಬಂಧ ಸುಮಾರು 20 ಸಾವಿರ ಸಿಬ್ಬಂದಿ ಬೀದಿಗೆ ಬಂದಿದ್ದು, ಪೈಲಟ್ ಸೇರಿದಂತೆ ಗಗನಸಖಿಯರು ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದಾರೆ.

    ಗುರುವಾರ ಜೆಟ್ ಏರ್‍ವೇಸ್ ಸಿಬ್ಬಂದಿ ದೆಹಲಿಯಲ್ಲಿ ಒಂದೆಡೆ ಸೇರಿ ಶಾಂತಿಯುತವಾಗಿ ಪ್ರಧಾನಿಗಳು ನಮ್ಮ ಸಹಾಯಕ್ಕೆ ಮುಂದಾಗಬೇಕೆಂದು ಮನವಿ ಸಲ್ಲಿಸಿದರು. ಇಂದಿನ ನಮ್ಮ ಪರಿಸ್ಥಿತಿಗೆ ಸರ್ಕಾರ ಮತ್ತು ಬ್ಯಾಂಕ್‍ಗಳೇ ಹೊಣೆಯಂದು ಪ್ರತಿಭಟನಾ ನಿರತ ಸಿಬ್ಬಂದಿ ಆರೋಪಿಸಿದರು.

    ಗುರುವಾರ ವಿಮಾನಗಳು ಯಾವುದೇ ಹಾರಾಟ ನಡೆಸದ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗುತ್ತಿದೆ. ಎರಡು ತಿಂಗಳಿನಿಂದ ಸಂಬಳ ಸಹ ನೀಡಿಲ್ಲ. ಕೆಲವರು ಮಕ್ಕಳ ಶಾಲೆಯ ಹಣ, ಸಾಲದ ಕಂತುಗಳನ್ನು ತುಂಬಲು ವಾಹನಗಳನ್ನು ಮಾರುತ್ತಿದ್ದಾರೆ. ಮತ್ತೆ ಕೆಲವರು ಆರ್ಥಿಕ ಪರಿಸ್ಥಿತಿ ಸರಿದೂಗಿಸಿಕೊಳ್ಳಲು ಚಿನ್ನಾಭರಣಗಳನ್ನು ಒತ್ತೆಇಟ್ಟು ಹಣ ಪಡೆಯುತ್ತಿದ್ದಾರೆ. ಮಕ್ಕಳೊಂದಿಗೆ ಸಮಯವನ್ನು ಕಳೆಯಿರಿ, ನಿಮ್ಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳು ಸಲಹೆ ನೀಡುತ್ತಾರೆಂದು ಹೆಸರು ಹೇಳಲು ಇಚ್ಛಿಸದ ಉದ್ಯೋಗಿ ಹೇಳುತ್ತಾರೆ. ಇದನ್ನೂ ಓದಿ: ನನ್ನ ಹಣದಿಂದ ಜೆಟ್ ಏರ್‍ವೇಸ್ ಉಳಿಸಿ: ಮಲ್ಯ ಸಾಲು ಸಾಲು ಟ್ವೀಟ್

    20 ಸಾವಿರ ಉದ್ಯೋಗಿಗಳ ಭವಿಷ್ಯ ಸಾಲ ನೀಡುವವರ ಮೇಲೆ ನಿಂತಿದೆ. ಸಿಬ್ಬಂದಿಗೆ ಒಂದು ದಿನದ ಸಂಬಳ ನೀಡಲು ನಮ್ಮಲ್ಲಿ ಹಣವಿಲ್ಲ. ಅಂತರರಾಷ್ಟ್ರೀಯ ವಿಮಾನಯಾನ ಸಂಘಟನೆ ಸಹ ನಮ್ಮ ಸದಸ್ಯತ್ವವನ್ನು ರದ್ದುಗೊಳಿಸಿದೆ. ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರಿಗೆ ಮರುಪಾವತಿಸಲು ಹಣವಿಲ್ಲ ಎಂದು ಜೆಟ್ ಏರ್‍ವೇಸ್ ಬೋರ್ಡ್ ಮೆಂಬರ್ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ:  ಹಾರಾಟ ನಿಲ್ಲಿಸಿದ ಜೆಟ್ ಏರ್‍ವೇಸ್?

    ಜೆಟ್ ಏರ್‍ವೇಸ್ ವಿಮಾನಯಾನ ಸೇವೆ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೆಟ್ ಏರ್‍ವೇಸ್ ಲಂಡನಿಗೆ ತೆರಳಲು 18 ಸಾವಿರ ರೂ. ನೀಡುತ್ತಿದ್ದ ಪ್ರಯಾಣಿಕರು ಇದೀಗ 42 ಸಾವಿರ ರೂ. ನೀಡುವಂತಾಗಿದೆ.

    ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಜೆಟ್ ಏರ್‍ವೇಸ್ ಬುಧವಾರ ರಾತ್ರಿ ತನ್ನ ಕೊನೆಯ ಸೇವೆಯನ್ನು ನೀಡಿತ್ತು. ಜೆಟ್ ಏರ್‍ವೇಸ್ ಕಂಪನಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ಸಾಲವನ್ನು ನೀಡುವಂತೆ ಮನವಿ ಮಾಡಿಕೊಂಡಿತ್ತು.

  • ಹಣ ಕೊಡ್ತೀನಿ ಬಾ ಎಂದು ಹೇಳಿ ಕಾರಿನಲ್ಲಿ ಮಹಿಳೆಯನ್ನು ಕೊಲೆಗೈದವರು ಅರೆಸ್ಟ್!

    ಹಣ ಕೊಡ್ತೀನಿ ಬಾ ಎಂದು ಹೇಳಿ ಕಾರಿನಲ್ಲಿ ಮಹಿಳೆಯನ್ನು ಕೊಲೆಗೈದವರು ಅರೆಸ್ಟ್!

    ಚಿಕ್ಕಬಳ್ಳಾಪುರ: ಸಾಲ ಕೊಟ್ಟ ಹಣವನ್ನು ಮರಳಿಸುವಂತೆ ಹೇಳಿದ ಮಹಿಳೆಗೆ ಹಣ ಕೊಡ್ತೀನಿ ಬಾ ಎಂದು ನಂಬಿಸಿ ಕಾರಿನಲ್ಲಿ ಕರೆದೊಯ್ದ ಆಕೆಯನ್ನು ಕೊಲೆ ಮಾಡಿದ್ದ ಕೊಲೆಗಡುಕರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕು ಕಾಡತಿಪ್ಪೂರು ಗ್ರಾಮದ ರಾಮಾಂಜಿನಪ್ಪ ಮತ್ತು ನರಸಿಂಹಮೂರ್ತಿ ಬಂಧಿತ ಆರೋಪಿಗಳು. ಕಾರಿನಲ್ಲಿ ಆರೋಪಿಗಳು ನೆಲಮಂಗಲ ತಾಲೂಕಿನ ತಾವರೆಕೆರೆ ಗ್ರಾಮದ ಶಾಂತಮ್ಮ ಅವರನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

    ಏನಿದು ಪ್ರಕರಣ?
    ಜನವರಿ 21ರಂದು ಗೌರಿಬಿದನೂರು ತಾಲೂಕು ಸೋಮಶೆಟ್ಟಿಹಳ್ಳಿ ಬಳಿ ನರಸಿಂಹಯ್ಯ ಎಂಬವರ ಜಮೀನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗೌರಿಬಿದನೂರು ಪೊಲೀಸರಿಗೆ ಮೃತಳ ಮಗ ಹಾಗೂ ಮಗಳು ಮೃತದೇಹವನ್ನು ಕಂಡು ಇದು ತನ್ನ ತಾಯಿ ಶಾಂತಮ್ಮಳದ್ದೇ ಎಂದು ಪತ್ತೆ ಹಚ್ಚಿದರು. ಹೀಗಾಗಿ ಶಾಂತಮ್ಮಳ ಕೊಲೆ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು ಮೊಬೈಲ್ ಕರೆಗಳನ್ನು ಆಧರಿಸಿ ರಾಮಾಂಜಿನಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ರಾಮಾಂಜಿನಪ್ಪ ಸತ್ಯ ಬಾಯ್ಬಿಟ್ಟಿದ್ದಾನೆ. ಮೃತ ಶಾಂತಮ್ಮ ಗಾರ್ಮೆಂಟ್ಸ್ ನೌಕರಳಾಗಿದ್ದು, ಕೊಲೆ ಮಾಡಿದ ರಾಮಾಂಜಿನಪ್ಪ ಗಾರ್ಮೆಂಟ್ಸ್ ಗೆ ಮಹಿಳಾ ಕಾರ್ಮಿಕರನ್ನು ಕರೆದೊಯ್ಯವ ವಾಹನದ ಚಾಲಕ ಕಂ ಮಾಲೀಕನಾಗಿದ್ದ. ಹೀಗಾಗಿ ಗಂಡ ತೀರಿಕೊಂಡಿದ್ದ ಶಾಂತಮ್ಮ ತನ್ನ ಬಳಿ ಇದ್ದ ಹಣವನ್ನು ಪರಿಚಯಸ್ಥ ರಾಮಾಂಜಿನಪ್ಪನಿಗೆ ನೀಡಿದ್ದಳು. ಶಾಂತಮ್ಮಳ ಮಗಳ ಮದುವೆ ಫಿಕ್ಸ್ ಆಗಿದ್ದು ಮದುವೆಗೆ ಹಣ ಬೇಕು ಕೊಡು ಎಂದು ರಾಮಾಂಜಿನಪ್ಪನ ಬಳಿ ಪಟ್ಟು ಹಿಡಿದದ್ದಾಳೆ.

    ಮೊದಲೇ ಮೈ ತುಂಬಾ ಸಾಲ ಮಾಡಿಕೊಂಡಿದ್ದ ರಾಮಾಂಜಿನಪ್ಪ ಪ್ಲಾನ್ ಮಾಡಿ ಶಾಂತಮ್ಮಳನ್ನು ಜನವರಿ 19ರಂದು ಕಾರಿನಲ್ಲಿ ಕರೆದುಕೊಂಡು ಬಂದು ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಆಕೆಯ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. ಈ ಕೃತ್ಯಕ್ಕೆ ರಾಮಾಂಜಿನಪ್ಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಸಹಕರಿಸಿದ್ದು, ಸದ್ಯ ರಾಮಾಂಜಿನಪ್ಪ ಹಾಗೂ ನರಸಿಂಹಮೂರ್ತಿ ಇಬ್ಬರನ್ನು ಗೌರಿಬಿದನುರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ!

    ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ!

    ಲಂಡನ್: ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೇ ಲಂಡನ್‍ನಲ್ಲಿ ತಲೆಮರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಆಂತರಿಕ ಸಂಸತ್ತು ಒಪ್ಪಿಗೆ ನೀಡಿದೆ.

    ಉದ್ಯಮಿ ಮಲ್ಯರನ್ನು ಗಡಿಪಾರು ಮಾಡಲು ಭಾರತ ಸರ್ಕಾರ ಮಾಡಿದ್ದ ಮನವಿಗೆ ಬ್ರಿಟನ್ ಸಚಿವಾಲಯ ಸಮ್ಮತಿಸಿದೆ. ಭಾರತದ ಮನವಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಸಜೀದ್ ಜಾವಿದ್ ಫೆಬ್ರವರಿ 3 ರಂದು ಸಹಿ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬ್ರಿಟನ್ ಸರ್ಕಾರದ ಈ ನಿರ್ಣಯದಿಂದ ಮಲ್ಯಗೆ ಭಾರೀ ಹಿನ್ನಡೆ ಆಗಿದೆ.

    ಕಳೆದ ವರ್ಷದ ಡಿಸೆಂಬರಿನಲ್ಲಿ ಈ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮಲ್ಯ ಗಡಿಪಾರಿಗೆ ಅನುಮತಿ ನೀಡಿತ್ತು. ಅಲ್ಲದೇ ಗಡಿಪಾರು ಆದೇಶ ನೀಡುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ನ್ಯಾಯಾಲಯದ ತೀರ್ಪಿಗೆ ಸಂಸತ್ ಒಪ್ಪಿಗೆ ಮಾತ್ರ ಬಾಕಿ ಇತ್ತು. ಆದರೆ ಮಲ್ಯ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ ಬ್ಯಾಂಕ್ ಸಾಲ ಮರು ಪಾವತಿ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.

    ಮುಂದಿನ ನಡೆ ಏನು?
    ಮಲ್ಯ ಗಡಿಪಾರಿನ ಕುರಿತು ಲಂಡನ್ ಸಂಸತ್ ಕೈಗೊಂಡಿರುವ ನಿರ್ಣಯದಿಂದ ಭಾರತ ಸರ್ಕಾರಕ್ಕೆ ಮತ್ತೊಂದು ಗೆಲುವು ಸಿಕ್ಕಂತಾಗಿದೆ. ಸದ್ಯ ಲಂಡನ್ ಆಂತರಿಕ ಸಂಸತ್ತಿನ ನಿರ್ಣಯವನ್ನು ಪ್ರಶ್ನಿಸಿ 14 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಲು ವಿಜಯ್ ಮಲ್ಯಗೆ ಅವಕಾಶ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲದ ಹಣದಿಂದ ಸೀರೆ ಕೊಂಡು ಹಬ್ಬ ಮಾಡ್ತಾರೆ ಎಂದ ಮೇಲ್ವಿಚಾರಕನಿಗೆ ಶಾಸಕರಿಂದ ಕ್ಲಾಸ್

    ಸಾಲದ ಹಣದಿಂದ ಸೀರೆ ಕೊಂಡು ಹಬ್ಬ ಮಾಡ್ತಾರೆ ಎಂದ ಮೇಲ್ವಿಚಾರಕನಿಗೆ ಶಾಸಕರಿಂದ ಕ್ಲಾಸ್

    ಮಂಡ್ಯ: ಸರ್ಕಾರ ನೀಡುವ ಎಮ್ಮೆ ಸಾಲ ಪಡೆದ ಮಹಿಳೆಯರು ಸೀರೆ ಉಟ್ಟು, ಮಾರ್ನಾಮಿ ಹಬ್ಬ ಮಾಡಿ ಸಾಲ ತೀರಿಸುತ್ತಿಲ್ಲ ಎಂದು ಮಾತಾಡಿದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೇಲ್ವಿಚಾರಕನಿಗೆ ಬಹಿರಂಗ ಸಭೆಯಲ್ಲೇ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

    ಕೃಷ್ಣರಾಜಪೇಟೆ ತಾಲ್ಲೂಕಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ, ಸಂಜೀವಿನಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಹಾಯ ಧನದ ಚೆಕ್ ವಿತರಣಾ ಸಮಾರಂಭವನ್ನು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ತಾಲೂಕು ಮೇಲ್ವಿಚಾರಕ ನಂಜುಂಡಯ್ಯ ಎಂಬುವವರು, ಸರ್ಕಾರ ನೀಡುವ ಸಾಲ ಸೌಲಭ್ಯದ ಸಹಾಯ ಧನ ಯೋಜನೆ ದುರ್ಬಳಕೆಯಾಗುತ್ತಿದೆ. ಈ ಹಣವನ್ನು ಹಬ್ಬ ಹುಣ್ಣಿಮೆ ಮಾಡಲು, ಸೀರೆಕೊಳ್ಳಲು ಹೆಣ್ಣು ಮಕ್ಕಳು ಬಳಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು.

    ಮೇಲ್ವಿಚಾರಕರ ಆರೋಪಕ್ಕೆ ಗರಂ ವೇದಿಕೆ ಮೇಲಿದ್ದ ಶಾಸಕ ನಾರಾಯಣಗೌಡ, ನನ್ನ ಸಹೋದರಿಯರನ್ನು ಅಪಮಾನ ಮಾಡುತ್ತೀದ್ದಿಯಾ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇನೆ ಲೋ…..ಎಂದು ಅವಾಚ್ಯ ಶಬ್ದ ಪ್ರಯೋಗಿಸಿದರು. ಅಲ್ಲದೇ ನಮ್ಮ ತಾಲ್ಲೂಕಿನ ಹೆಸರು ಹಾಳು ಮಾಡಲು ನೀನು ಬಂದಿದ್ದೀಯಾ. ನಮ್ಮಹೆಣ್ಣು ಮಕ್ಕಳು ನಿನ್ನ ದುಡ್ಡಲ್ಲಿ ಸೀರೆ ಉಡುತ್ತಿದ್ದಾರಾ? ನಿನ್ನ ನಂಬಿಕೊಂಡು ಹೆಣ್ಣು ಮಕ್ಕಳು ಜೀವನ ನಡೆಸುತ್ತಿಲ್ಲ. ಅವರನ್ನು ಕ್ಷಮೆ ಕೇಳು ಎಂದು ಆಕ್ರೋಶ ಹೊರಹಾಕಿದರು. ಶಾಸಕರ ಮಾತಿಗೆ ಮಣಿದು ನಂಜುಂಡಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಫಲಾನುಭವಿ ಮಹಿಳೆಯರ ಬಳಿ ಕ್ಷಮೆಯಾಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ದಿಢೀರ್ ಶ್ರೀಮಂತೆಯಾಗಲು ಹೋಗಿ ಮೋಸದ ಬಲೆಗೆ ಮಹಿಳೆ ಬಲಿ!

    ದಿಢೀರ್ ಶ್ರೀಮಂತೆಯಾಗಲು ಹೋಗಿ ಮೋಸದ ಬಲೆಗೆ ಮಹಿಳೆ ಬಲಿ!

    – ಕಿಡ್ನಿ ದಂಧೆಗೆ ಮಂಡ್ಯದ ಮಹಿಳೆ ಬಲಿ
    – ಮಧ್ಯವರ್ತಿಯಿಂದ ಮೋಸ ಹೋದ ಮಹಿಳೆ

    ಮಂಡ್ಯ: ಕಿಡ್ನಿ ದಂಧೆ ರಾಜ್ಯದ ಕೆಲ ಆಸ್ಪತ್ರೆಗಳಲ್ಲಿ ನಡೆಸುತ್ತಿರುವುದನ್ನು ನೀವು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಕಿಡ್ನಿ ಮಾರಿ ಮನೆ ಸಮಸ್ಯೆ ಬಗೆಹರಿಸಲು ಸಾಲ ಮಾಡಿ ಮಧ್ಯವರ್ತಿಯಿಂದ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯ ಮಲ್ಲಯ್ಯ ಪತ್ನಿ ವೆಂಕಟಮ್ಮ (48) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೃತ ವೆಂಕಟಮ್ಮ ಮಳವಳ್ಳಿ ಪಟ್ಟಣದಲ್ಲಿ ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ತಾನು ಎಷ್ಟು ದಿನ ಕಷ್ಟ ಪಡುವುದು, ಶ್ರೀಮಂತೆಯಾಗಬೇಕು ಎಂದು ಕನಸು ಕಾಣುತ್ತಿದ್ದಾಗ ಅದೇ ಬೀದಿಯ ತಾರಾ ಎಂಬಾಕೆಯ ಪರಿಚಯವಾಗಿದೆ.

    ವೆಂಕಟಮ್ಮಳಿಗೆ ತಾರಾ ಹಣದಾಸೆ ತೋರಿಸಿ ನಿನ್ನ ಕಿಡ್ನಿ ಮಾರಿದರೆ 30 ಲಕ್ಷ ರೂ. ಕೊಡುತ್ತಾರೆ. ನನಗೆ 3 ಲಕ್ಷ ರೂ. ಕಮಿಷನ್ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾಳೆ. ಬಳಿಕ ಮುಂಗಡವಾಗಿ 2 ಲಕ್ಷ ರೂ. ಕೊಡು ಎಂದು ಕೇಳಿದ್ದಾಳೆ. ಆಗ ಮೃತ ವೆಂಕಟಮ್ಮ ಸಾಲ ಮಾಡಿ ಹಣವನ್ನು ನೀಡಿದ್ದಳು ಎನ್ನಲಾಗಿದೆ. ವೆಂಕಟಮ್ಮ ಸಾಲಭಾದೆ ತಾಳಲಾರದೇ ಮತ್ತೆ ವಂಚಕಿ ಬಳಿ ಹೋಗಿ ನನ್ನ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದಾರೆ. ಆದರೆ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾಳೆ.

    ಈ ಮಧ್ಯೆ ಮೃತ ವೆಂಕಟಮ್ಮ ತನ್ನ ನೋವನ್ನು ಬೆಂಗಳೂರಿನಲ್ಲಿರುವ ಸಹೋದರಿನಿಗೆ ಹೇಳಿಕೊಂಡಿದ್ದು, ಆ ಸಮಯದಲ್ಲಿ ಅವರು ಸ್ಪಲ್ಪ ಹಣವನ್ನು ನೀಡಿ ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ. ಆದರೂ ಕಳೆದ ಎರಡು ದಿನಗಳ ಹಿಂದೆ ಮನಸ್ಸಿಗೆ ನೋವಾಗಿ ಮಳವಳ್ಳಿ ಪಟ್ಟಣ ದೊಡ್ಡಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ವೆಂಕಟಮ್ಮ ರೀತಿಯೇ ಮತ್ತೋರ್ವ ಮಹಿಳೆಯೂ ಈ ವಂಚಕಿಗೆ 1.50 ಲಕ್ಷ ರೂ. ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಪತಿಯಂದಿರು ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ದಂಧೆಯನ್ನು ನಿಲ್ಲಿಸುವಂತೆ ದೂರು ನೀಡಿದ್ದಾರೆ.

    ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಈ ಕಳ್ಳ ಆಸಾಮಿ 50 ಬಾರಿ ಬಂದಿದ್ದು, ಈಗಲೂ ಮತ್ತೊಮ್ಮೆ ಬಂದಿದ್ದಾನೆ’

    `ಈ ಕಳ್ಳ ಆಸಾಮಿ 50 ಬಾರಿ ಬಂದಿದ್ದು, ಈಗಲೂ ಮತ್ತೊಮ್ಮೆ ಬಂದಿದ್ದಾನೆ’

    – ವಿಜಯಪುರದಲ್ಲಿ ಸಿಎಂ ಎಚ್‍ಡಿಕೆಯನ್ನು ಬೇತಾಳನಂತೆ ಕಾಡಿದ ವ್ಯಕ್ತಿ
    – ಹಣ ಕೊಡಿ ಇಲ್ಲವೇ ಬ್ಯಾಂಕಿನಿಂದ ಸಾಲ ಕೊಡಿಸಿ
    – ಪ್ರತಿ ಬಾರಿ ಬಂದಾಗಲೂ ಹಣ ಕೊಟ್ಟಿದ್ದೇನೆ ಎಂದ ಸಿಎಂ

    ವಿಜಯಪುರ: ಸಿಎಂ ಕುಮಾರಸ್ವಾಮಿ ಅವರನ್ನು ಬಹಳ ದಿನಗಳಿಂದ ಕಾಡುತ್ತಿದ್ದ ವ್ಯಕ್ತಿಯೊಬ್ಬ ವಿಜಯಪುರದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲೂ ಗಂಟು ಬಿದ್ದಿದ್ದಾನೆ.

    ಜಿಲ್ಲೆಯ ಹಾವಿನಾಳ ಗ್ರಾಮದ ನಿವಾಸಿ ಕಾಶಿನಾಥ್ ಬನಸೋಡೆ ಸಿಎಂ ಗೆ ಬೆನ್ನಿಗೆ ಬಿದ್ದ ಬೇತಾಳನಂತೆ ಕಾಡುತ್ತಿದ್ದಾನೆ. ಹಣ ಕೊಡಿ ಇಲ್ಲವೇ ಬ್ಯಾಂಕ್‍ನಿಂದ ಸಾಲ ಕೊಡಿಸಿ ಎಂದು ಸಿಎಂ ಅವರನ್ನು ಬಹಳ ದಿನಗಳಿಂದ ಪೀಡಿಸುತ್ತಿದ್ದಾನೆ.

    ಹಲವು ಬಾರಿ ಸಿಎಂ ಅವರಿಂದಲೇ ಹಣವನ್ನು ಕೂಡ ಪಡೆದಿದ್ದ ಕಾಶಿನಾಥ್ ಇಂದು ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲೂ ಕಾಶಿನಾಥ್ ಸಿಎಂ ಬಳಿ ಬಂದು ಸಾಲ ಕೊಡಿಸಿ ಎಂದು ಪೀಡಿಸಿದ್ದಾನೆ.

    ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಿಎಂ ಹಾಗೂ ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ಕಾಶಿನಾಥ್, ನಾನೊಬ್ಬ ಅನಾಥ ನನ್ನ ಬಳಿ ಹಣವಿಲ್ಲ, 63 ಸಾವಿರ ರೂ. ಕಬ್ಬಿನ ಹಣ ಹಾಗೂ ಸ್ವಲ್ಪ ಹಣ ಆಸ್ಪತ್ರೆಗೆ ಬೇಕು. ಅದಕ್ಕೆ ನನಗೆ 1 ಲಕ್ಷ ರೂ. ಸಾಲ ಕೊಡಿಸಿ ಅದನ್ನು ಹಾಳುಮಾಡಲ್ಲ ಎಂದು ಕೇಳಿಕೊಂಡಿದ್ದಾರೆ. ಈ ವೇಳೆ ಸಿಎಂ, ಈತ ಕಳ್ಳ ಆಸಾಮಿ, 50 ಬಾರಿ ನನ್ನ ಬಳಿ ಬಂದಿದ್ದಾನೆ. ಪ್ರತಿ ಸಾರಿ ಹಣ ಕೊಟ್ಟು ಕಳುಹಿಸಿದ್ದೇನೆ. ಅಲ್ಲದೆ ಮತ್ತೆ ಈಗ ಬಂದಿದ್ದಾನೆ ಎಂದು ಹೇಳಿದರು.

    ಕಾಶಿನಾಥ್ ಬೆನ್ನಿಗೆ ಬಿದ್ದರೆ ಸುಮ್ಮನೆ ಹೋಗೋ ಆಸಾಮಿಯಲ್ಲ. ಹಣ ಕೊಡಿ ಅಂತ ಈ ಹಿಂದೆ ಹಲವರನ್ನು ಕಾಡಿದ್ದಾನೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಕೊನೆಗೆ ಈ ವಿಚಾರದ ಕುರಿತು ನೋಡುತ್ತೇವೆ ಎಂದು ಅಧಿಕಾರಿಗಳು ಕಾಶಿನಾಥ್ ನನ್ನು ಸಮಾಧಾನಪಡಿಸಿ ಸಭೆಯಿಂದ ಕಳುಹಿಸಿಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv