Tag: ಸಾರ್ವತ್ರಿಕ ಚುನಾವಣೆ

  • ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ- ಮೊಬೈಲ್‌ ಸೇವೆ ಸ್ಥಗಿತ

    ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ- ಮೊಬೈಲ್‌ ಸೇವೆ ಸ್ಥಗಿತ

    ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ (Pakistan General Election) ಮತದಾನ ಆರಂಭವಾಗಿದೆ. ಭದ್ರತಾ ಕಾರಣಗಳಿಗಾಗಿ ಸರ್ಕಾರವು ದೇಶದಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಿದೆ.

    ಪಾಕಿಸ್ತಾನ ಮೂಲದ ಡಾನ್ ವರದಿಯ ಪ್ರಕಾರ, 12 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ಪಾಕಿಸ್ತಾನದಲ್ಲಿ ಬೆಳಗ್ಗೆ 8 ಗಂಟೆಗೆ (ಸ್ಥಳೀಯ ಕಾಲಮಾನ) ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಂಜೆ 5 ರವರೆಗೆ ಇರಲಿದೆ. ಸದ್ಯ ಪಾಕಿಸ್ತಾನದ ಹಾಲಿ ಆಂತರಿಕ ಸಚಿವಾಲಯವು ಪಾಕಿಸ್ತಾನದ ಒಟ್ಟಾರೆ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: Loksabha Election: ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ?

    ಭದ್ರತಾ ಕ್ರಮಗಳ ಭಾಗವಾಗಿ ಪಾಕಿಸ್ತಾನದಾದ್ಯಂತ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಇಂದು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

    ದೇಶಾದ್ಯಂತ 90,675 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶದ ಒಟ್ಟು 12 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಈ ಮತದಾನದಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲಾ ನೋಂದಾಯಿತ ಮತದಾರರು 5,121 ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳ ಪೈಕಿ 4807 ಪುರುಷರು, 570 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳಿದ್ದಾರೆ.

  • ಗುರುವಾರ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ ಪಾಕಿಸ್ತಾನ

    ಗುರುವಾರ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ ಪಾಕಿಸ್ತಾನ

    ಇಸ್ಲಮಾಬಾದ್: ಪಾಕಿಸ್ತಾನದಲ್ಲಿ (Pakistan) ಗುರುವಾರ ಸಾರ್ವತ್ರಿಕ ಚುನಾವಣೆ (General Election) ನಡೆಯಲಿದೆ. ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ನಡುವೆ ವಿಪರೀತ ಹಣದುಬ್ಬರದಿಂದ ಜನ ತತ್ತರಿಸುತ್ತಿರುವ ಹೊತ್ತಲ್ಲಿ ಪಾಕ್ ಚುನಾವಣೆಗೆ ಸಾಕ್ಷಿ ಆಗುತ್ತಿದೆ.

    ರಾಷ್ಟ್ರೀಯ ಅಸೆಂಬ್ಲಿಯ 336 ಸ್ಥಾನಗಳ ಪೈಕಿ 266 ಸ್ಥಾನಗಳಿಗೆ 12.85 ಕೋಟಿ ಮತದಾರರು ಮತ ಹಾಕಲಿದ್ದಾರೆ. 5121 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಗದ್ದುಗೆಗಾಗಿ ನವಾಜ್ ಷರೀಫರ ಪಿಎಂಎಲ್ (PML), ಬಿಲಾವಲ್ ಭುಟ್ಟೋರ ಪಿಪಿಪಿ (PPP) ಫೈಟ್ ಮಾಡುತ್ತಿವೆ. ಇದನ್ನೂ ಓದಿ: ಪಾಕ್‌ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ: 26 ಮಂದಿ ಸಾವು

    ಇಮ್ರಾನ್ ಖಾನ್ (Imran Khan) ಜೈಲಲ್ಲಿರುವ ಕಾರಣ ಅವರ ಪಕ್ಷ ಪಿಟಿಐ (PTI) ಸೈಡ್‌ಲೈನ್ ಆಗಿದೆ. ಕತ್ತೆಗಾಡಿ, ಬದನೆಕಾಯಿ, ವಾಷ್ ಬೇಸಿನ್‌ನಂತಹ ವಿಚಿತ್ರ ಗುರುತುಗಳು ಚುನಾವಣಾ ಮತಪತ್ರದಲ್ಲಿವೆ. ಚುನಾವಣೆಯ ಮುನ್ನಾ ದಿನವಾದ ಇಂದು (ಬುಧವಾರ) ಪಾಕಿಸ್ತಾನದ ವಿವಿಧೆಡೆ ಸ್ಫೋಟಗಳು ಸಂಭವಿಸಿ, ಕನಿಷ್ಠ 26 ಮಂದಿ ಬಲಿ ಆಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಸೆನೆಟರ್‌ ಆಗಿ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ವರುಣ್‌

  • ನಾವು ತುಂಬಾ ಅದೃಷ್ಟವಂತರು, ಭಾರತ ನಮ್ಮ ವಿಶ್ವಾಸಾರ್ಹ ಸ್ನೇಹಿತ: ಶೇಖ್ ಹಸೀನಾ

    ನಾವು ತುಂಬಾ ಅದೃಷ್ಟವಂತರು, ಭಾರತ ನಮ್ಮ ವಿಶ್ವಾಸಾರ್ಹ ಸ್ನೇಹಿತ: ಶೇಖ್ ಹಸೀನಾ

    ಡಾಕಾ: ಬಾಂಗ್ಲಾದೇಶದ (Bangladesh)) ಸಾರ್ವತ್ರಿಕ ಚುನಾವಣೆಯಲ್ಲಿ (General Election) ಇಂದು ಮತದಾನ ನಡೆಯುತ್ತಿದ್ದು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ನಡುವೆ ಹಸೀನಾ ಅವರು ಭಾರತವನ್ನು ಶ್ಲಾಘಿಸಿದರು.

    ಚುನಾವಣಾ ದಿನದಂದು ಭಾರತಕ್ಕೆ ನೀಡಿದ ಸಂದೇಶದ ಬಗ್ಗೆ ಮಾಧ್ಯಮದವರು ಕೇಳಿದಾಗ, ನಾವು ತುಂಬಾ ಅದೃಷ್ಟವಂತರು. ಭಾರತ ನಮ್ಮ ವಿಶ್ವಾಸಾರ್ಹ ಸ್ನೇಹಿತ. ನಮ್ಮ ವಿಮೋಚನಾ ಯುದ್ಧದ (Liberation War in 1971) ಸಮಯದಲ್ಲಿ ಅವರು ನಮ್ಮ ಬೆಂಬಲಕ್ಕೆ ನಿಂತರು. 1975ರ ನಂತರ ನಾವು ನಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಾಗ ಅವರು ನಮಗೆ ಆಶ್ರಯ ನೀಡಿದರು. ಭಾರತದ ಜನತೆಗೆ ನಮ್ಮ ಶುಭಹಾರೈಕೆಗಳು ಎಂದರು.

    ಭಾರತ ಮತ್ತು ಬಾಂಗ್ಲಾದೇಶದ ಸಂಬಂಧ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲಗೊಂಡಿದೆ. ಹಸೀನಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ್ಗೆ ವೈಯಕ್ತಿಕ ಸಂವಾದಗಳು ಮತ್ತು ಸಂಪರ್ಕ ಯೋಜನೆಗಳು, ವ್ಯಾಪಾರ ಉದಾರೀಕರಣ ಮತ್ತು ಗಡಿ ನಿರ್ವಹಣೆ ಸೇರಿದಂತೆ ಪ್ರಮುಖ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿರುತ್ತಾರೆ.

    ಸದ್ಯ ಆಡಳಿತಾರೂಢ ಅವಾಮಿ ಲೀಗ್‌ನ ನಾಯಕಿ ಹಸೀನಾ ಅವರು ಪ್ರಧಾನ ಮಂತ್ರಿಯಾಗಿ ನಾಲ್ಕನೇ ಬಾರಿಗೆ ಗೆಲ್ಲಲು ಸಿದ್ಧರಾಗಿದ್ದಾರೆ. ದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಚುನಾವಣೆಯನ್ನು ಬಹಿಷ್ಕರಿಸುತ್ತಿದೆ. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಗೋಯಲ್‌

    ಬಾಂಗ್ಲಾದೇಶ ಸಂಸತ್‌ಗೆ ಭಾನುವಾರ ಮತದಾನ ನಡೆಯುತ್ತಿದ್ದು, ಚುನಾವಣಾ ಆಯೋಗ ಹಾಗೂ ಭದ್ರತಾ ಪಡೆಗಳು ಭಾರೀ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. ಈ ನಡುವೆ ಮತದಾನದ ಹೊತ್ತಲ್ಲಿ ಅಲ್ಲಲ್ಲಿ ಗಲಭೆಗಳು ನಡೆದಿರುವ ಮಾಹಿತಿ ಕೇಳಿ ಬಂದಿದೆ.

    ಪ್ರಮುಖ ವಿರೋಧ ಪಕ್ಷವಾದ ಬಿಎನ್​ಪಿ ಇಲ್ಲದ ಕಾರಣ ಶೇಖ್ ಹಸೀನಾ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದೆ. 2009ರಿಂದ ಬಾಂಗ್ಲಾದೇಶದಲ್ಲಿ ಹಸೀನಾ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಅವರು ಇದೀಗ ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗುವುದು ಖಚಿತ ಎನ್ನಲಾಗಿದೆ.

  • ಪಾಕ್‍ನಲ್ಲಿ 2024ರ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೊದಲ ಹಿಂದೂ ಯುವತಿ

    ಪಾಕ್‍ನಲ್ಲಿ 2024ರ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೊದಲ ಹಿಂದೂ ಯುವತಿ

    ಇಸ್ಲಾಮಾಬಾದ್: ಹಿಂದೂ ಯುವತಿಯೊಬ್ಬರು ಪಾಕಿಸ್ತಾನದಲ್ಲಿ (Pakistan) ನಡೆಯುವ 2024ರ ಸಾರ್ವತ್ರಿಕ ಚುನಾವಣೆಗೆ (General Election) ನಾಮಪತ್ರ ಸಲ್ಲಿಸಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    2024ರ ಫೆಬ್ರವರಿ 8 ರಂದು 16 ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆಯಲಿವೆ. ಹೀಗಾಗಿ ಖೈಬರ್ ಪಖ್ತುಂಖ್ವಾದ ಬುನೇರ್ ಜಿಲ್ಲೆಯಲ್ಲಿ ಸವೀರಾ ಪ್ರಕಾಶ್ ಅವರು PK-25 ರ ಜನರಲ್ ಸೀಟ್‍ಗೆ ಅಧಿಕೃತವಾಗಿ ನಾಮಪತ್ರ (Nomination) ಸಲ್ಲಿಸಿದ್ದಾರೆ.

    ಹಿಂದೂ ಸಮುದಾಯದ ಸದಸ್ಯೆಯಾಗಿರುವ ಸವೀರಾ ಪ್ರಕಾಶ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಟಿಕೆಟ್‍ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಪ್ರಕಾಶ್ ಅವರ ತಂದೆ ಓಂ ಪ್ರಕಾಶ್ (ನಿವೃತ್ತ ವೈದ್ಯ) ಅವರು ಕಳೆದ 35 ವರ್ಷಗಳಿಂದ ಪಿಪಿಪಿಯ ಅಪ್ಪಟ ಸದಸ್ಯರಾಗಿದ್ದಾರೆ. ಹೀಗಾಗಿ ತಂದೆಯ ಹಾದಿಯಲ್ಲೇ ಸಾಗಲು ಮಗಳು ನಿರ್ಧಾರ ಮಾಡಿದ್ದಾರೆ.

    ಮುಂಬರುವ ಚುನಾವಣೆಗೆ ಸಾಮಾನ್ಯ ಸ್ಥಾನಕ್ಕೆ ಬುನರ್ ನಿಂದ ನಾಮಪತ್ರ ಸಲ್ಲಿಸಿರುವ ಮೊದಲ ಮಹಿಳೆ ಪ್ರಕಾಶ್ ಆಗಿದ್ದಾರೆ ಎಂದು ಸ್ಥಳೀಯ ರಾಜಕಾರಣಿ ಸಲೀಂ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ ಚುನಾವಣೆ; ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಹಫೀಜ್‌ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಿಂದ ಕಣಕ್ಕೆ

    ಸವೀರಾ ಪ್ರಕಾಶ್ (Saveera Parkash) ಅವರು, 2022 ರಲ್ಲಿ ಅಬೋಟಾಬಾದ್ ಇಂಟರ್‌ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾಗಿದ್ದು, ಬುನರ್‍ನಲ್ಲಿ PPP ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯದ ಕಲ್ಯಾಣ ಮತ್ತು ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಅಭಿವೃದ್ಧಿ ವಲಯದಲ್ಲಿ ಮಹಿಳೆಯರ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹೀಗಾಗಿ ಚುನಾವಣೆಯಲ್ಲಿ ಗೆಲುವು ಕಂಡರೆ ಈ ಸಮಸ್ಯೆಗಳನ್ನೆಲ್ಲ ಪರಿಹರಿಸುವ ಗುರಿಯನ್ನು ಸವೀರಾ ಅವರು ಹೊಂದಿದ್ದಾರೆ.

  • ಪಾಕಿಸ್ತಾನದ ಸಂಸತ್ತು ವಿಸರ್ಜನೆ – ಸಾರ್ವತ್ರಿಕ ಚುನಾವಣೆಗೆ ಸಜ್ಜು

    ಪಾಕಿಸ್ತಾನದ ಸಂಸತ್ತು ವಿಸರ್ಜನೆ – ಸಾರ್ವತ್ರಿಕ ಚುನಾವಣೆಗೆ ಸಜ್ಜು

    ಇಸ್ಲಾಮಾಬಾದ್: ರಾಷ್ಟ್ರೀಯ ಪ್ರಕ್ಷುಬ್ಧತೆ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಪಾಕಿಸ್ತಾನದಲ್ಲಿ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಶಿಫಾರಸಿನ ಮೇರೆಗೆ ಸಂಸತ್ತನ್ನು ಬುಧವಾರ ತಡರಾತ್ರಿ ವಿಸರ್ಜಿಸಲಾಗಿದೆ. ಇದೀಗ ಸಾರ್ವತ್ರಿಕ ಚುನಾವಣೆಗೆ ವೇದಿಗೆ ಸಜ್ಜಾಗಿದೆ.

    ಪಾಕ್ ಸಂಸತ್ತಿನ 5 ವರ್ಷಗಳ ಅವಧಿ ಪೂರ್ಣಗೊಳ್ಳಲು 3 ದಿನಗಳ ಮುಂಚಿತವಾಗಿ ಅದನ್ನು ವಿಸರ್ಜಿಸಲಾಗಿದೆ. ಆಗಸ್ಟ್ 12 ಸಂಸತ್ತಿನ ಅವಧಿ ಮುಕ್ತಾಯಗೊಳ್ಳುವ ದಿನವಾಗಿತ್ತು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಸರ್ಕಾರದ ಅವಧಿ ಪೂರೈಸಿದ 60 ದಿನಗಳಲ್ಲಿ ಚುನಾವಣೆ ನಡೆಯಬೇಕು. ಅವಧಿಗೂ ಮುನ್ನ ವಿಸರ್ಜನೆ ಮಾಡಿದರೆ 90 ದಿನಗಳ ಕಾಲಾವಕಾಶ ಇರಲಿದೆ. ಇದೀಗ ಸಂಸತ್ತನ್ನು ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜನೆ ಮಾಡಿರುವುದರಿಂದ ಹೊಸ ಚುನಾವಣೆ ನಡೆಸಲು 90 ದಿನಗಳ ಕಾಲಾವಕಾಶ ಸಿಗಲಿದೆ.

    ಸಂಸತ್ತನ್ನು ವಿಸರ್ಜಿಸುವಂತೆ ನಾನು ಇಂದು ರಾತ್ರಿ ಅಧ್ಯಕ್ಷರಿಗೆ ಸಲಹೆ ನೀಡುತ್ತೇನೆ ಎಂದು ಷರೀಫ್ ಈ ಹಿಂದೆ ಸಂಸತ್ತಿಗೆ ತಿಳಿಸಿದ್ದರು. ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಲು ಎರಡೂ ಕಡೆಯಿಂದ ಶಿಫಾರಸು ಮಾಡಲಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಗುರುವಾರ ವಿರೊಧ ಪಕ್ಷಗಳ ನಾಯಕರೊಂದಿಗೆ ಚರ್ಚೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 200ಕ್ಕೂ ಹೆಚ್ಚು ಮಂದಿ ಇಮ್ರಾನ್ ಖಾನ್‌ ಬೆಂಬಲಿಗರು ಅರೆಸ್ಟ್ – ಪಾಕ್‌ನಲ್ಲಿ ಭುಗಿಲೆದ್ದ ಆಕ್ರೋಶ

    ಆದರೆ ಚುನಾವಣಾ ಆಯೋಗ ಹೊಸ ಜನಗಣತಿಯ ಆಧಾರದ ಮೇಲೆ ನೂರಾರು ಕ್ಷೇತ್ರಗಳನ್ನು ಮರುವಿನ್ಯಾಸಗೊಳಿಸಲು ಪ್ರಾರಂಭಿಸುವುದರಿಂದ ಚುನಾವಣೆಗೆ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ.

    ಕಳೆದ ಬಾರಿ 2018ರ ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಪಕ್ಷ ಗೆದ್ದಿತ್ತು. ಅವರು ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ವರ್ಷ ಅವಿಶ್ವಾಸ ನಿರ್ಣಯದಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಅಂದಿನಿಂದ ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಅವರು ಜೈಲುಪಾಲಾಗಿದ್ದಾರೆ. ಇಮ್ರಾನ್ ಖಾನ್ 5 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ವ್ಯೂಹ ರಚಿಸಲು ಮುಹೂರ್ತ

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ವ್ಯೂಹ ರಚಿಸಲು ಮುಹೂರ್ತ

    ನವದೆಹಲಿ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ (Lok Sabha election) ಬಿಜೆಪಿಯನ್ನು (BJP) ಒಗ್ಗಟ್ಟಾಗಿ ಎದುರಿಸಲು ವಿಪಕ್ಷಗಳು (Opposition parties) ದ್ವಿಮುಖವಾಗಿ ಮಾತ್ರ ಪೈಪೋಟಿ ಇರುವಂತೆ ಯೋಜನೆ ರೂಪಿಸುತ್ತಿವೆ.

    ಈ ಸಂಬಧ ಚಕ್ರವ್ಯೂಹ ರಚಿಸಲು ಮಹೂರ್ತ ಫಿಕ್ಸ್ ಮಾಡಿವೆ. ಬಲ್ಲ ಮೂಲಗಳ ಮಾಹಿತಿ ಪ್ರಕಾರ 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎದುರು ಸರ್ವಸಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ನಡೆಯುತ್ತಿವೆ. ಬಿಜೆಪಿ ವಿರೋಧಿ ಮತಗಳು ಛಿದ್ರವಾಗುವುದನ್ನು ತಪ್ಪಿಸಲು ಈ ರೀತಿಯ ವ್ಯೂಹ ರಚನೆ ಮಾಡಲಾಗುತ್ತಿದೆ. ಇದು ವಾಸ್ತವದಲ್ಲಿ ಸಾಧ್ಯವಿದೆಯೇ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಇದನ್ನೂ ಓದಿ: ಸಿದ್ರಾಮಯ್ಯ ಸಾಲ ಮನ್ನಾ ಅಂದಿದ್ರು, ನಾವ್ ದುಡ್ಡು ಕಟ್ಟಲ್ಲ – ಬ್ಯಾಂಕ್ ಸಿಬ್ಬಂದಿಗೆ ಸ್ತ್ರಿಶಕ್ತಿ ಸಂಘದ ಮಹಿಳೆಯರಿಂದ ಕ್ಲಾಸ್

    ಈ ವಿಚಾರವಾಗಿ ಜೂ.23ರಂದು ಪಾಟ್ನಾದಲ್ಲಿ ವಿಪಕ್ಷಗಳೆಲ್ಲಾ ಸೇರಿ ಸಭೆ ಮಾಡಲು ನಿರ್ಧರಿಸಿವೆ. ಬಿಹಾರದ (Bihar) ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ನಡೆಯುವ ಈ ಸಭೆಗೆ ಎಐಸಿಸಿ ಅಗ್ರನಾಯಕ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಹೇಮಂತ್ ಸೋರೆನ್, ತೇಜಸ್ವಿ ಯಾದವ್, ಸಿಪಿಐ, ಸಿಪಿಎಂ ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

  • ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದವರಿಗೆ ಜನ ಉತ್ತರ ನೀಡಿದ್ದಾರೆ: ಹೆಚ್‍ಡಿಕೆ

    ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದವರಿಗೆ ಜನ ಉತ್ತರ ನೀಡಿದ್ದಾರೆ: ಹೆಚ್‍ಡಿಕೆ

    ರಾಮನಗರ: ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದರು. ಆದರೆ ಅವರಿಗೆ ಜನರು ಉತ್ತರ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು.

    ರಾಜ್ಯದ ಬಿಜಾಪುರ, ರಾಯಚೂರು, ಶಿರಾದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಈ ಹಿನ್ನೆಲೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಬಿಜಾಪುರ, ರಾಯಚೂರು, ಶಿರಾದಲ್ಲಿಯೂ ನಮ್ಮವರು ಗೆದ್ದಿದ್ದಾರೆ. ಶಿರಾದಲ್ಲಿ ಜೆಡಿಎಸ್ ಮುಳುಗಿತು ಅನ್ನುತ್ತಿದ್ದರು. ಜನ ಇವತ್ತು ಅಲ್ಲಿಯೂ ಉತ್ತರ ನೀಡಿದ್ದಾರೆ. ಉಪಚುನಾವಣೆಗಳು ಬೇರೆ, ಸಾರ್ವತ್ರಿಕ ಚುನಾವಣೆಗಳು ಬೇರೆ. 2023ರಲ್ಲಿ ಜೆಡಿಎಸ್ ಏನು ಎಂದು ಜನರೇ ಉತ್ತರ ಕೊಡುತ್ತಾರೆ. ಕಾಂಗ್ರೆಸ್ ಅವರು ಮೇಲುಗೈ ಸಾಧಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK

    ಚಿಕ್ಕಮಗಳೂರಿನಲ್ಲಿ ನಮ್ಮನ್ನು ಬಿಟ್ಟು ಬೇರೆಯವರು ಅಧಿಕಾರ ಮಾಡಲು ಆಗಲ್ಲ. ಅಲ್ಲಿನ ನಗರಸಭೆ ನಮ್ಮ ಬೆಂಬಲ ಇದ್ದವರಿಗೆ ಅಧಿಕಾರ. ರಾಜ್ಯದ ಹಲವಾರು ಕ್ಷೇತ್ರದಲ್ಲಿ ನಮ್ಮ ಬೆಂಬಲ ಬೇಕೆಬೇಕು. ನಾವು ಆರ್ಥಿಕವಾಗಿ ಶಕ್ತಿ ತುಂಬಿಲ್ಲ. ಕಾರ್ಯಕರ್ತರೇ ಹೋರಾಟ ಮಾಡಿದ್ದಾರೆ. ಕರಾವಳಿಯಲ್ಲಿಯೂ ನಮಗೆ ಒಂದು ಸ್ಥಾನ ಸಿಕ್ಕಿದೆ. ಅಲ್ಲಿ ನಮ್ಮ ಬೇಸ್ ಇರಲಿಲ್ಲ ಎಂದು ವಿವರಿಸಿದರು.

    2023 ನಮ್ಮ ಪಕ್ಷದ ಸಂಘಟನಾ ವರ್ಷವಾಗಿದೆ. ರಾಜಕೀಯ ವಿಶ್ಲೇಷಕರ ನಿರೀಕ್ಷೆ ಬದಲಾಗಲಿದೆ. ಸಂಕ್ರಾಂತಿಯಿಂದ ನಾವು ಒಂದು ದಿನವೂ ಬಿಡುವು ತೆಗೆದುಕೊಳ್ಳಲ್ಲ. 123 ಗುರಿ ತಲುಪಲು ಸಂಘಟನೆ ಮಾಡ್ತೇವೆ. ಯಾರು ಎಷ್ಟೇ ಲಘುವಾಗಿ ಮಾತನಾಡಲಿ, ನಮ್ಮದೇ ಆದ ರೀತಿಯಲ್ಲಿ ಸಂಘಟನೆ ಪ್ರಾರಂಭಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಡದಿ ಪುರಸಭೆ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಗೆ ಭರ್ಜರಿ ಗೆಲುವು ಸಿಕ್ಕಿದೆ. ಆದರೆ ಈ ಫಲಿತಾಂಶ ನನಗೆ ದೊಡ್ಡಮಟ್ಟದ ಅಚ್ಚರಿ ಫಲಿತಾಂಶ ಅಲ್ಲ. ನನಗೆ 18-20 ಸ್ಥಾನಗಳಲ್ಲಿ ಗೆಲುವು ಆಗಲಿದೆ ಅಂದುಕೊಂಡಿದ್ದೆ. ಕೆಲವು ಓವರ್ ಕಾನ್ಫಿಡೆನ್ಸ್ ನಲ್ಲೂ ಹೋಗಿದೆ. ಬಿಡದಿಯ ಮತದಾರರು ದುಡಿಮೆಗೆ ಆರ್ಶೀವಾದ ಮಾಡಿದ್ದಾರೆ. ಬಿಡದಿ ನನಗೆ ರಾಜಕೀಯ ಜನ್ಮ ಕೊಟ್ಟ ಸ್ಥಳ ಎಂದು ಬಿಡದಿಯ ಮತದಾರರಿಗೆ ಅಭಿನಂದನೆ ತಿಳಿಸಿದರು. ಇದನ್ನೂ ಓದಿ:  ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ನಾನು ಎರಡೂ ದಿನ ಶಾಸಕರ ಜೊತೆ ಪ್ರಚಾರ ಮಾಡಿದ್ದೆ. ಮುಂದಿನ 2023ರ ಚುನಾವಣೆಗೆ ಈ ಫಲಿತಾಂಶ ನನಗೆ ಮಾನಸಿಕವಾಗಿ ಶಕ್ತಿ ತುಂಬಿದೆ. ಕಾಂಗ್ರೆಸ್ ಅವರು ದೊಡ್ಡಮಟ್ಟದಲ್ಲಿ ಬಿಡದಿ ಹಿಡಿಯಲು ಹೊರಟ್ಟಿದ್ದರು. ಆದರೆ ಬಿಡದಿಯ ಮತದಾರರು ಆರ್ಶೀವಾದ ಮಾಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ

    ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ

    – ಮತದಾನದ ವೇಳೆ 17 ಜನ ಬಲಿ

    ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಾರ್ಟಿ ಜಯಗಳಿಸಿದ್ದು, ಪಕ್ಷದ ನಾಯಕಿ ಶೇಖ್ ಹಸೀನಾ ಅವರು ನಾಲ್ಕನೇ ಬಾರೀ ಪ್ರಧಾನಿ ಅಧಿಕಾರ ಸ್ವೀಕರಿಸಲಿದ್ದಾರೆ.

    ಬಾಂಗ್ಲಾದೇಶ 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳ ಮತದಾನವು ನಿನ್ನೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೆ ನಡೆಯಿತು. ಬಳಿಕ ಆರಂಭವಾದ ಮತ ಎಣಿಕೆಯಲ್ಲಿ ಅವಾಮಿ ಲೀಗ್ ಪಾರ್ಟಿ ಮುನ್ನಡೆ ಸಾಧಿಸಿದೆ.

    17 ಜನ ಬಲಿ:
    ಮತದಾನದ ವೇಳೆ ಆಡಳಿತರೂಢ ಅವಾಮಿ ಲೀಗ್ ಪಾರ್ಟಿ ಮತ್ತು ವಿಪಕ್ಷ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‍ಪಿ) ಕಾರ್ಯಕರ್ತರ ನಡುವೆ ಜಗಳ ಆರಂಭವಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಪರಿಣಾಮ ಓರ್ವ ಪೊಲೀಸ್, ಸರ್ಕಾರಿ ಅಧಿಕಾರಿಗಳು, ಅವಾಮಿ ಲೀಗ್ ಪಾರ್ಟಿ ಐವರು ಸದಸ್ಯರು, ಬಿಎನ್‍ಪಿ ಕಾರ್ಯಕರ್ತರು ಸೇರಿದಂತೆ 17 ಜನರು ಬಲಿಯಾಗಿದ್ದಾರೆ. ಇವರಲ್ಲಿ ಮೂವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

    ಇವಿಎಂ ಬಳಕೆ:
    ಸಾರ್ವತ್ರಿಕ ಚುನಾವಣೆ ವೇಳೆ ಇದೇ ಮೊದಲಬಾರಿಗೆ ಬಾಗ್ಲಾದೇಶ ಚುನಾವಣಾ ಆಯೋಗವು ಮತಯಂತ್ರ (ಇವಿಎಂ) ಬಳಕೆ ಮಾಡಿದೆ. 300 ಕ್ಷೇತ್ರಗಳ ಪೈಕಿ 21 ಲಕ್ಷ ಜನಸಂಖ್ಯೆ ಇರುವ 6 ಕ್ಷೇತ್ರಗಳಲ್ಲಿ ಇವಿಎಂ ವ್ಯವಸ್ಥೆ ಅಳವಡಿಸಲಾಗಿತ್ತು. ಎರಡು ಕಡೆಗಳಲ್ಲಿ ಮಾತ್ರ ಇವಿಎಂ ದೋಷ ಕಂಡುಬಂದಿದೆ.

    ಚುನಾವಣಾ ಭದ್ರತೆ:
    ಸಾರ್ವತ್ರಿಕ ಚುನಾವಣೆ ವೇಳೆ ಭಾರೀ ಭದ್ರತೆಗೆ ಮುಂದಾಗಿದ್ದ ಆಡಳಿತ ರೂಢ ಪಕ್ಷವು, 6 ಲಕ್ಷ ಸೈನಿಕರು, ಸ್ಥಳೀಯ ಪೊಲೀಸ್ ಹಾಗೂ ವಿವಿಧ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು. ಆದರೆ ಅವಾಮಿ ಲೀಗ್ ಪಾರ್ಟಿ ಮತ್ತು ಬಿಎನ್‍ಪಿ ಕಾರ್ಯಕರ್ತರ ಮಾರಾಮರಿಯಿಂದಾಗಿ 17 ಜನರು ಮೃತಪಟ್ಟಿದ್ದಾರೆ. ಬಿಎನ್‍ಪಿ ಸದಸ್ಯನೊಬ್ಬ ಹಿಂಸಾಚಾರದ ವೇಳೆ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv