Tag: ಸಾರ್ವಜನಿಕ ಸಾರಿಗೆ

  • ನಾಳೆಯಿಂದ ಹೊಸ ಲಾಕ್‍ಡೌನ್ – ಪ್ಲಾನ್ ಹೇಗಿರಬಹುದು? ಯಾವುದಕ್ಕೆ ವಿನಾಯಿತಿ?

    ನಾಳೆಯಿಂದ ಹೊಸ ಲಾಕ್‍ಡೌನ್ – ಪ್ಲಾನ್ ಹೇಗಿರಬಹುದು? ಯಾವುದಕ್ಕೆ ವಿನಾಯಿತಿ?

    – ಇಂದು ಕೇಂದ್ರದಿಂದ ಬರಲಿದೆ ಹೊಸ ಮಾರ್ಗಸೂಚಿ
    – ಸಾರ್ವಜನಿಕ ಸಾರಿಗೆ ಪೂರ್ಣ ಪ್ರಮಾಣದಲ್ಲಿ ಆರಂಭ?

    ನವದೆಹಲಿ: ಕೋವಿಡ್ 19 ಲಾಕ್‍ಡೌನ್ 3.0 ಇಂದು ಅಂತ್ಯವಾಗಲಿದ್ದು, ಸೋಮವಾರದಿಂದ ಹೊಸ ಲಾಕ್‍ಡೌನ್ 4.0 ಜಾರಿಯಾಗುತ್ತಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿರುವ ಕೇಂದ್ರ ಇಂದು ಹೊಸ ಮಾರ್ಗಸೂಚಿ ಪ್ರಕಟ ಮಾಡಲಿದೆ.

    ಹೊಸ ಲಾಕ್‍ಡೌನ್ ಹೊಸ ರೀತಿಯಲ್ಲಿ ಇರಲಿದೆ ಅಂತ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದು, ಕೇಂದ್ರ ಸರ್ಕಾರದ ಲೆಕ್ಕಾಚಾರ ಹೇಗಿರಲಿದೆ ಎನ್ನುವುದೇ  ಕುತೂಹಲ. ಯಾಕಂದ್ರೆ, ಈಗಾಗಲೇ 3 ಲಾಕ್‍ಡೌನ್‍ಗಳಲ್ಲೂ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಜೊತೆಗೆ, ಲಾಕ್‍ಡೌನ್ 3ರಲ್ಲಿ ಮತ್ತಷ್ಟು ಸಡಿಲ ಮಾಡಿರುವ ಕಾರಣ ಕೊರೋನಾ ವೈರಸ್ ಸಂಖ್ಯೆಯೋ ಮೂರ್ನಾಲ್ಕು ಪಟ್ಟು ವೇಗವಾಗಿ ಏರಿಕೆ ಕಾಣುತ್ತಿದೆ.

    ಬಿಗಿ ಕ್ರಮ ಕೈಗೊಳ್ಳುತ್ತಿದ್ದರೂ ಕಾರ್ಮಿಕರ ವಲಸೆ ನಿಂತಿಲ್ಲ. ತಮ್ಮೂರುಗಳನ್ನು ತಲುಪಲು ಹರಸಾಹಸವೇ ಮಾಡಿ ಸಂಚಾರ ಮಾಡುತ್ತಿರುವ ಪ್ರವಾಸಿ ಕಾರ್ಮಿಕರು ಸಾವಿಗೀಡಾಗ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಿದೆ. ಹೀಗಾಗಿ, ಲಾಕ್‍ಡೌನ್ 4.0 ಲೆಕ್ಕಾಚಾರಗಳು, ಪ್ಲಾನ್‍ಗಳೇ ವಿಭಿನ್ನವಾಗಿರೋದ್ರಲ್ಲಿ ಎರಡು ಮಾತಿಲ್ಲ.

    ಲಾಕ್‍ಡೌನ್ 4.0 ಪ್ಲಾನ್ ಏನು?
    ಪ್ಲಾನ್ 1: ಇನ್ನೆರೆಡು ವಾರ ಲಾಕ್‍ಡೌನ್ ವಿಸ್ತರಣೆ – ಮೇ 31ವರೆಗೆ ವಿಸ್ತರಣೆ..?
    ಪ್ಲಾನ್ 2: ಕಂಟೈನ್ಮೆಂಟ್ ಝೋನ್‍ಗಷ್ಟೇ ಲಾಕ್‍ಡೌನ್ (ರೆಡ್‍ಝೋನ್‍ಗಳಿಗೂ ಲಾಕ್‍ಡೌನ್ ವಿನಾಯ್ತಿ ಸಾಧ್ಯತೆ)
    ಪ್ಲಾನ್ 3: ರಾತ್ರಿಯ ಕರ್ಫ್ಯೂ ಅವಧಿ ವಿಸ್ತರಣೆ ಸಾಧ್ಯತೆ (ರಾತ್ರಿ 7 ಗಂಟೆ ಬದಲಿಗೆ ರಾತ್ರಿ 10ರಿಂದ ಬೆಳಗ್ಗೆ 7ವರೆಗೆ ವಿಸ್ತರಣೆ ಸಾಧ್ಯತೆ)
    ಪ್ಲಾನ್ 4: ಝೋನ್‍ಗಳ ನಿರ್ಧಾರ ಅಧಿಕಾರ ರಾಜ್ಯಗಳಿಗೆ ಸಾಧ್ಯತೆ
    ಪ್ಲಾನ್ 5: ವಲಸೆ ಕಾರ್ಮಿಕರ ಹಿತದೃಷ್ಟಿಗಾಗಿ ಮತ್ತಷ್ಟು ಶ್ರಮಿಕ್ ರೈಲು

    ಯಾವುದಕ್ಕೆ ವಿನಾಯಿತಿ?
    ಈ ಪ್ಲಾನ್ ಹೊರತು ಪಡಿಸಿ, ಸೋಮವಾರದಿಂದ ಶುರುವಾಗಲಿರೋ ಹೊಸ ಲಾಕ್‍ಡೌನ್‍ನಲ್ಲಿ ಈಗಾಗಲೇ ಚಾಲ್ತಿಯಲ್ಲಿರೋ ವಿನಾಯ್ತಿಗಳೂ ಸೇರಿದಂತೆ ಮತ್ತಷ್ಟು ಸಡಿಲಿಕೆ ಮಾಡೋ ಸಾಧ್ಯತೆ ಇದೆ. ಯಾಕೆಂದರೆ ಪ್ರಧಾನಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಆರ್ಥಿಕತೆ ದೃಷ್ಟಿಯಿಂದ ಲಾಕ್‍ಡೌನ್ ತೆರವಿಗೆ ಮನವಿ ಮಾಡಿದ್ದರು. ಕೇವಲ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ಬಿಗಿಗೊಳಿಸಿ ಉಳಿದೆಡೆ ರಿಲೀಫ್ ಕೊಡುವಂತೆ ಕೇಳಿಕೊಂಡಿದ್ದರು.

    ಲಾಕ್‍ಡೌನ್ ಮುಂದುವರಿಸಲು ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಮನವಿ ಮಾಡಿದರೆ, ಆಂಧ್ರ, ಮಣಿಪುರ, ಅರುಣಾಚಲ ಪ್ರದೇಶ ಲಾಕ್‍ಡೌನ್ ತೆರವು ಮಾಡುವಂತೆ ಮನವಿ ಮಾಡಿದ್ದವು. ಲಾಕ್‍ಡೌನ್ ಮುಂದುವರಿಸಿ ಆದರೆ ಕಂಟೈನ್ಮೆಂಟ್ ಆಧಾರದ ಮೇಲೆ ಮುಂದುವರಿಸುವಂತೆ ದೆಹಲಿ, ಕರ್ನಾಟಕ, ಪಂಜಾಬ್, ತಮಿಳುನಾಡು, ಉತ್ತರಾಖಂಡ ಸರ್ಕಾರಗಳು ಮೋದಿಗೆ ಕೇಳಿಕೊಂಡಿದ್ದವು.

    ಮುಖ್ಯಮಂತ್ರಿಗಳ ಈ ಸಲಹೆ ಜೊತೆಗೆ, ಖುದ್ದು ಪ್ರಧಾನಿ ಮೋದಿ, ಈ ಕೊರೋನಾ ವೈರಸ್ ಅಷ್ಟು ಬೇಗ ದೂರ ಆಗಲ್ಲ. ಹಾಗಾಗಿ, ಕೊರೋನಾ ಜೊತೆಗೆ ಬದುಕೋದನ್ನು ಕಲಿಬೇಕು ಅಂತ ಮೊನ್ನೆಯ ಭಾಷಣದಲ್ಲಿ ಹೇಳಿದ್ದರು.

    ಹೊಸ ಲಾಕ್‍ಡೌನ್ ನಿರೀಕ್ಷೆಗಳು ಏನು?
    * ಖಾಸಗಿ, ಸರ್ಕಾರಿ ಬಸ್‍ಗಳ ಓಡಾಟ
    * ದೇಶಿಯ ವಿಮಾನ, ಕೆಲ ರೈಲುಗಳ ಸಂಚಾರ ಆರಂಭ (ನಾಳೆಯಿಂದಲೇ ಪೂರ್ಣ ಪ್ರಮಾಣದಲ್ಲಿ ಸಂಚಾರವಿಲ್ಲ)
    * ಆಟೋ, ಕ್ಯಾಬ್‍ಗಳ ಸಂಚಾರ
    * ಆಪ್ ಆಧಾರಿತ ಆಟೋ, ಕ್ಯಾಬ್ ಸೇವೆ
    * ರೆಡ್‍ಝೋನ್‍ಗಳಲ್ಲಿ ಸಲೂನ್, ಬ್ಯೂಟಿ ಪಾರ್ಲರ್, ಸ್ಪಾಗೆ ಅನುಮತಿ


    * ಜಿಮ್, ಫಿಟ್ನೆಸ್ ಸೆಂಟರ್,  ಗಾಲ್ಫ್ ಕ್ಲಬ್ ಓಪನ್
    * ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಪ್ರಮಾಣ ಹೆಚ್ಚಳ
    * ಎಲ್ಲಾ ಮಾದರಿಯ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ (ಸಮಯ ನಿಗಧಿಯೊಂದಿಗೆ ಅನುಮತಿ)
    * ಸಮ-ಬೆಸ ಆಧಾರದ ಮೇಲೆ ಮಾರುಕಟ್ಟೆ ತೆರೆಯಲು ಅವಕಾಶ (ರಾಜ್ಯ ಸರ್ಕಾರದ ನಿರ್ಣಯಕ್ಕೆ ಬಿಡಬಹುದು)
    * ಇ-ಕಾಮರ್ಸ್ ಮೂಲಕ ತುರ್ತು ಅವಶ್ಯಕವಲ್ಲದ ವಸ್ತುಗಳ ಮಾರಾಟ
    * ಬೈಕ್‍ನಲ್ಲಿ ಒಬ್ಬರು, ಕಾರಿನಲ್ಲಿ ಡ್ರೈವರ್ ಬಿಟ್ಟು ಇಬ್ಬರ ಪ್ರಯಾಣ ನಿಯಮ ವಿಸ್ತರಣೆ
    * ಎಲ್ಲ ಮಾದರಿಯ ಕೈಗಾರಿಕೆ, ಹಾರ್ಡ್‍ವೇರ್ ಉದ್ಯಮಕ್ಕೆ ಅವಕಾಶ (ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯ )


    * ನಗರ ಭಾಗದಲ್ಲಿ ಕಟ್ಟಡ ನಿರ್ಮಾಣ ಆರಂಭಿಸಬಹುದು (ಕಾರ್ಮಿಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಹೊರಗಡೆಯಿಂದ ಕಾರ್ಮಿಕರನ್ನು ಕರೆತರಬಾರದು)
    * ಕೊರಿಯರ್ ಪೋಸ್ಟಲ್ ಸೇವೆ ವಿಸ್ತರಣೆ
    * ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಶೇ.33 ರಿಂದ 50ಕ್ಕೆ ಉದ್ಯೋಗಿಗಳ ಹೆಚ್ಚಳ ಮಾಡುವುದು
    * 10 ವರ್ಷದೊಳಗಿನ ಮಕ್ಕಳು, 60ವರ್ಷ ಮೇಲ್ಪಟ್ಟ ವೃದ್ಧರು ಮನೆಯಿಂದ ಆಚೆ ಬರುವಂತಿಲ್ಲ (ವೈದ್ಯಕೀಯ ಅನಿವಾರ್ಯತೆ ಹೊರತುಪಡಿಸಿ)
    * ಖಾಸಗಿ ಆಸ್ಪತ್ರೆಗಳ ಓಪಿಡಿ ಕಾರ್ಯ ನಿರ್ವಹಣೆಗೆ ಅವಕಾಶ

    ಯಾವುದಕ್ಕೆ ನಿರ್ಬಂಧ ಮುಂದುವರಿಕೆ?
    * ಥಿಯೇಟರ್, ಶಾಪಿಂಗ್ ಮಾಲ್, ಕಾಂಪ್ಲೆಕ್ಸ್
    * ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
    *  ಎಲ್ಲ ರೈಲುಗಳ ಓಡಾಟ, ನಮ್ಮ ಮೆಟ್ರೋ ರೈಲು ಓಡಾಟಕ್ಕೂ ಅನುಮತಿ ಅನುಮಾನ
    * ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ ಮುಂದುವರಿಕೆ
    * ಜೂನ್ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ

  • ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    ಬಸ್‍ಗಳಲ್ಲಿ ಮಹಿಳೆಯರ ಸುರಕ್ಷತೆಗೆ 13 ಸಾವಿರ ಮಾರ್ಷಲ್‍ಗಳ ನೇಮಿಸಿದ ಕೇಜ್ರಿವಾಲ್ ಸರ್ಕಾರ

    – ನಾಳೆಯಿಂದ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

    ನವದೆಹಲಿ: ಸಾರ್ವಜನಿಕರ ಸಂಪರ್ಕ ಸಾರಿಗೆ ಬಸ್‍ಗಳಲ್ಲಿ ನಿತ್ಯ ಓಡಾಡುವ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಸಿಎಂ ಕೇಜ್ರಿವಾಲ್ ಸರ್ಕಾರ, ಮತ್ತೆ 13 ಸಾವಿರ ಮಂದಿ ಮಾರ್ಷಲ್ ಗಳನ್ನ ನೇಮಕ ಮಾಡಿಕೊಳ್ಳುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಕೇಜ್ರಿವಾಲ್, ಮಂಗಳವಾರದಿಂದ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ದೃಷ್ಟಿಯಿಂದ 13 ಸಾವಿರ ಮಾರ್ಷಲ್ ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

    ಮಹಿಳೆಯರಿಗೆ ರಕ್ಷಣೆ ನೀಡುವುದೆ ನಮ್ಮ ಮೊದಲ ಆದ್ಯತೆ. ನಮ್ಮ ಸರ್ಕಾರ ಸಂತಸದಿಂದ ತೆಗೆದುಕೊಂಡ ನಿರ್ಧಾರವಾಗಿದ್ದು, ಇದುವರೆಗೂ ವಿಶ್ವದ ಯಾವುದೇ ನಗರದಲ್ಲಿ ನೀಡಿರದ ಮಾದರಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ.

    ಮಹಿಳೆಯರು ಸಾರಿಗೆ ವಾಹನದಲ್ಲಿ ಪ್ರಯಾಣಿಸುವ ವೇಳೆ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವ ಅನುಭವ ಪಡೆಯಬೇಕು ಎಂದು ತಿಳಿಸಿದರು. ನವದೆಹಲಿಯಲ್ಲಿ ಸರ್ಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡುವ ಯೋಜನೆ ಜಾರಿಯಾಗುವ ಒಂದು ದಿನ ಮುನ್ನ ಕೇಜ್ರಿವಾಲ್ ಈ ತೀರ್ಮಾನ ಪ್ರಕಟಿಸಿರುವುದು ವಿಶೇಷವಾಗಿದೆ. ಅಲ್ಲದೇ ಕೇಜ್ರಿವಾಲ್ ಇಂದಿನಿಂದಲೇ ಮುಂದಿನ ಚುನಾವಣೆಗೆ ಜನಪ್ರಿಯ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬಸ್, ರೈಲಿನಲ್ಲಿ ಸ್ಮಾರ್ಟ್‌ಫೋನ್ ಕಿರಿಕಿರಿ ತಪ್ಪಿಸಿ – ಪಿಐಎಲ್ ಸಲ್ಲಿಕೆ

    ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಫೋನಿನಿಂದ ಕಿರಿಕಿರಿ ಆಗುತ್ತಿರುವ ವಿಚಾರವಾಗಿ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

    ವಕೀಲ ರಮೇಶ್ ನಾಯ್ಕ್ ಎಲ್ ಅವರು ಪಿಐಎಲ್ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

    ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಾದ ರೈಲು, ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಸ್ಮಾರ್ಟ್‍ಫೋನ್ ಗಳಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೆಲ ಪ್ರಯಾಣಿಕರು ಸ್ಮಾರ್ಟ್ ಫೋನ್ ಗಳಲ್ಲಿ ಓಪನ್ ಸ್ಪೀಕರ್ ಇಟ್ಟು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಹಾಡು ಕೇಳುವುದು, ವಿಡಿಯೋಗಳನ್ನು ಪ್ಲೇ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನಿಯಮ ರೂಪಿಸುವಂತೆ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಕರಿಗೆ ಆಸನ ಹಾಗೂ ಧೂಮಪಾನ ನಿಷೇಧಿಸಲಾಗಿದೆ ಎನ್ನುವ ಸೂಚನಾ ಫಲಕದಂತೆ ಈ ಸಮಸ್ಯೆ ನಿವಾರಿಸಲು ಬಸ್ ಹಾಗೂ ರೈಲಿನಲ್ಲಿ ಫಲಕವನ್ನು ಹಾಕಲು ಆದೇಶಿಸಬೇಕೆಂದು ರಮೇಶ್ ನಾಯ್ಕ್ ಮನವಿ ಮಾಡಿದ್ದಾರೆ.

    ಅರ್ಜಿದಾರರ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ಭಾರತೀಯ ರೈಲ್ವೇ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.