Tag: ಸಾರ್ವಜನಿಕರು

  • ತಲೆಯಲ್ಲಿ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧನನ್ನು ರಕ್ಷಿಸಿದ ಸಾರ್ವಜನಿಕರು

    ತಲೆಯಲ್ಲಿ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧನನ್ನು ರಕ್ಷಿಸಿದ ಸಾರ್ವಜನಿಕರು

    ಬೆಂಗಳೂರು: ತಲೆಗೆ ಆಗಿದ್ದ ಗಾಯಕ್ಕೆ ಹುಳುವಾಗಿ ನರಳುತ್ತಿದ್ದ ಅನಾಥ ವೃದ್ಧರೊಬ್ಬರನ್ನು ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ನಿವಾಸಿಗಳು ಹಾಗೂ ಸರ್ಕಾರೇತರ ಸಂಸ್ಥೆಯೊಂದು ರಕ್ಷಣೆ ಮಾಡಿ ಮಾನವಿಯತೆ ಮೆರೆದಿದ್ದಾರೆ.

    ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಮದ ನಿವಾಸಿ ಸಿದ್ದಲಿಂಗಪ್ಪರನ್ನು ರಕ್ಷಿಸಲಾಗಿದೆ. ಅಪಘಾತವಾಗಿ ಮನೆ ತೊರೆದಿದ್ದ ಸಿದ್ದಲಿಂಗಪ್ಪ ತಲೆಗೆ ಗಾಯಮಾಡಿಕೊಂಡು ಅದರಲ್ಲಿ ಹುಳವಾಗಿ ನರಳಾಡುತ್ತಿದ್ದರು. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಬಳಿ ಸಿದ್ದಲಿಂಗಪ್ಪ ಸ್ಥಿತಿ ಕಂಡ ಸ್ಥಳೀಯರು ಕಳೆದ ಒಂದು ವಾರದ ಹಿಂದೆ ರಕ್ಷಣೆ ಮಾಡಿ, ತಲೆಗೆ ಔಷಧಿ ಹಚ್ಚಿ, ಊಟವನ್ನು ನೀಡಿ ನೋಡಿಕೊಳ್ಳುತ್ತಿದ್ದರು.

    ಸಾಮಾಜಿಕ ಜಾಲತಾಣಗಳ ಮೂಲಕ ಡಾಬಸ್ ಪೇಟೆ ನಿವಾಸಿಗಳು ಎನ್‍ಜಿಓಗಳನ್ನು ಸಂಪರ್ಕಿಸಿ, ವಯೋವೃದ್ಧನ ಬಗ್ಗೆ ತಿಳಿಸಿದ್ದರು. ಆಗ ಎಐಆರ್ ಚಾರಿಟಬಲ್ ಹೋಂ ಹಾಗೂ ಇನ್ನೀತರ ಎನ್‍ಜಿಓಗಳು ಈ ಬಗ್ಗೆ ತಿಳಿದು ಸಹಕಾರ ನೀಡಲು ಮುಂದಾದವು. ಸದ್ಯ ಸಿದ್ದಲಿಂಗಪ್ಪರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಬನ್ನೇರಘಟ್ಟದ ಎಐಆರ್ ಚಾರಿಟಬಲ್ ಹೋಂಗೆ ಸ್ಥಳೀಯರು ಸೇರಿಸಿದ್ದಾರೆ.

  • ಕಂಡಕಂಡಲ್ಲಿ ಕಸ ಎಸೆದ್ರೆ  ಬೀಳುತ್ತೆ ಬಿಬಿಎಂಪಿಯಿಂದ ಭಾರೀ ದಂಡ

    ಕಂಡಕಂಡಲ್ಲಿ ಕಸ ಎಸೆದ್ರೆ ಬೀಳುತ್ತೆ ಬಿಬಿಎಂಪಿಯಿಂದ ಭಾರೀ ದಂಡ

    ಬೆಂಗಳೂರು: ಕಸ ಸಂಸ್ಕರಣೆ ಹಾಗೂ ವಿಂಗಡಣೆ ಉಲ್ಲಂಘಿಸಿದರೆ ಭಾರೀ ದಂಡ ಹಾಕಲು ಬಿಬಿಎಂಪಿ ಸಜ್ಜಾಗಿದೆ. ಬಿಬಿಎಂಪಿ ಕಸ ನಿರ್ವಹಣೆ ಬೈಲಾ 2019ರ ಕರಡು ಸಿದ್ಧಗೊಂಡಿದೆ.

    ಇದರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದರೆ, ಉಗುಳಿದರೆ 500 ರಿಂದ 1000 ರೂ. ದಂಡ ಬೀಳಲಿದೆ. ಕಸ ವಿಂಗಡಣೆ ಮಾಡದಿದ್ದರೆ 500 ರೂ ನಿಂದ 1 ಸಾವಿರ ರೂ. ದಂಡ ಬೀಳಲಿದೆ. ಜುಲೈ ತಿಂಗಳ ಕೌನ್ಸಿಲ್ ಸಭೆಯಲ್ಲಿ ಕರಡು ಪ್ರಸ್ತಾವನೆ ಮಾಡಿದೆ.

    ಮುಂದಿನ ವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿ ಸಾರ್ವಜನಿಕರ ಆಕ್ಷೇಪಕ್ಕೆ ಅವಕಾಶವನ್ನು ಪಾಲಿಕೆ ನೀಡಲಿದೆ.

    ಎಷ್ಟು ದಂಡ?
    ಕಸ ಸುಟ್ಟರೆ – 25 ಸಾವಿರ ರೂ ದಂಡ
    ಕಸ ವಿಂಗಡಣೆ ತಪ್ಪಿದ್ರೆ 500 – 1 ಸಾವಿರ ರೂ ದಂಡ
    ಕಟ್ಟಡ ತ್ಯಾಜ್ಯ ನಿರ್ವಹಣೆ ಉಲ್ಲಂಘಿಸಿದರೆ -5 ರಿಂದ 10 ಸಾವಿರ ದಂಡ
    ಮಾಂಸ ತ್ಯಾಜ್ಯ ನಿರ್ವಹಣೆ ವೈಫಲ್ಯವಾದರೆ -1 ರಿಂದ 2 ಸಾವಿರ ರೂ ದಂಡ
    ಕಸ ಉತ್ಪಾದನೆ ಸುಳ್ಳು ಮಾಹಿತಿ ಕೊಟ್ಟರೆ -10 ಸಾವಿರ ರೂ ದಂಡ

  • ಅಟ್ಟಿಸಿಕೊಂಡು ಬಂದವರಿಂದ ತಪ್ಪಿಸಿಕೊಳ್ಳಲು ಗುಂಡು ಹಾರಿಸಿದ ಪೊಲೀಸ್: ವಿಡಿಯೋ

    ಅಟ್ಟಿಸಿಕೊಂಡು ಬಂದವರಿಂದ ತಪ್ಪಿಸಿಕೊಳ್ಳಲು ಗುಂಡು ಹಾರಿಸಿದ ಪೊಲೀಸ್: ವಿಡಿಯೋ

    ನವದೆಹಲಿ: ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯನ್ನು ಸ್ಥಳೀಯರು ಥಳಿಸಿ, ಅಟ್ಟಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಾಲಿಂದಿ ಕುಂಜ್ ಪ್ರದೇಶದ ಜೆಜೆ ಕಾಲೋನಿಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಸಾರ್ವಜನಿಕರಿಂದ ಪೊಲೀಸ್ ಪೇದೆ ರಾಮ್‍ಕಿಶನ್ ತಪ್ಪಿಸಿಕೊಂಡಿದ್ದಾರೆ. ರಾಮ್‍ಕಿಶನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಅಶೋಕ್ ಹಾಗೂ ಗುಡ್ಡಿ ಎಂದು ಗುರುತಿಸಲಾಗಿದೆ.

    ಪೇದೆ ರಾಮ್‍ಕಿಶನ್ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಜೆಜೆ ಕಾಲೋನಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು, ಇಲ್ಲಿ ಯಾಕೆ ನಿಂತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಪೇದೆಯ ಬಳಿಗೆ ಬಂದ ಅಶೋಕ್ ಹಾಗೂ ಗುಡ್ಡಿ ವಾಗ್ವಾದ ಆರಂಭಿಸಿದರು. ಈ ವೇಳೆ ಕಾಲೋನಿಯ ಅನೇಕರು ಸೇರಿ ರಾಮ್‍ಕಿಶನ್ ಅವರನ್ನು ಸುತ್ತುವರಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಬೈಕ್ ಅನ್ನು ಹಾನಿಗೊಳಿಸಿದ್ದಾರೆ.

    ಪರಿಸ್ಥಿತಿ ಕೈ ಮೀರುತ್ತಿದ್ದಂತೆ ರಾಮ್‍ಕಿಶನ್ ಅವರು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಸ್ಥಳೀಯರಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮಹಿಳೆ ಸೇರಿದಂತೆ ಕೆಲವರು ಅವರ ಬೆನ್ನು ಹತ್ತಿದರು. ಅವರಿಂದ ತಪ್ಪಿಸಿಕೊಳ್ಳಲು ರಾಮ್‍ಕಿಶನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದು, ಮತ್ತೊರ್ವನಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.

  • ಪೊಲೀಸರನ್ನೇ ಅಡ್ಡ ಹಾಕಿ ಹೆಲ್ಮೆಟ್ ಎಲ್ಲಿ ಎಂದ ಸಾರ್ವಜನಿಕರು

    ಪೊಲೀಸರನ್ನೇ ಅಡ್ಡ ಹಾಕಿ ಹೆಲ್ಮೆಟ್ ಎಲ್ಲಿ ಎಂದ ಸಾರ್ವಜನಿಕರು

    ಚಿಕ್ಕಬಳ್ಳಾಪುರ: ಹೆಲ್ಮೆಟ್ ಧರಿಸದೆ ಬರುತ್ತಿದ್ದ ಪೊಲೀಸರ ಬೈಕ್‍ನ್ನು ಅಡ್ಡಗಟ್ಟಿದ ಸಾರ್ವಜನಿಕರು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಬಳಿ ನಡೆದಿದೆ.

    ಆಂದಹಾಗೆ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿದ್ದರು. ಹೆಲ್ಮೆಟ್ ಧರಿಸದೆ ಬಂದ ಕಾಂಗ್ರೆಸ್ ಮುಖಂಡ ಪಂಚಾಕ್ಷರಿರೆಡ್ಡಿಯವರ ಬೈಕ್ ತಡೆದು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ದಂಡ ಹಾಕಲು ಮುಂದಾಗಿದ್ದಾರೆ.

    ಪೊಲೀಸರು ಏಕವಚನದಲ್ಲಿ ಮಾತಾನಾಡಿಸಿದ್ದಾರೆ ಎಂದು ಪೊಲೀಸರ ವರ್ತನೆಗೆ ಕೆರಳಿದ ಪಂಚಾಕ್ಷರಿರೆಡ್ಡಿ ಬೆಂಬಲಿಗರು ಪೊಲೀಸರು ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ರಸ್ತೆ ತಡೆ ನಡೆಸಿ ವಾಹನಗಳನ್ನು ಅಡ್ಡಗಟ್ಟಿ ರಸ್ತೆ ಬಂದ್ ಮಾಡಿದ್ದಾರೆ.

    ಈ ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಬಂದೋಬಸ್ತ್‍ಗೆಂದು ಬೈಕಿನಲ್ಲಿ ಬಂದ ಇಬ್ಬರು ಪೊಲೀಸರು ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ಕಂಡ ಸಾರ್ವಜನಿಕರು, ನಮ್ಮ ಬಳಿ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ಹಾಕ್ತಿರಲ್ಲ. ಯಾಕೆ ನೀವ್ ಹೆಲ್ಮೆಟ್ ಹಾಕಿಲ್ಲ. ಎಲ್ಲಿ ಫೈನ್ ಕಟ್ಟಿದ್ದೀರಾ ಎಂದು ಪೊಲೀಸರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ. ಪೊಲೀಸರ ಮೇಲೆ ಸಾರ್ವಜನಿಕರು ಮುಗಿಬಿದ್ದಿರುವ ಈ ಎರಡು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ವಿಜಯಪುರ: ದಾಳಿ ವೇಳೆ ನಕಲಿ ಅಧಿಕಾರಿಯೊಬ್ಬ ಸಿಕ್ಕಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಗೆ ಎಸಿಬಿ ಅಧಿಕಾರಿಗಳಾದ ಡಿಎಸ್‍ಪಿ ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ಸಚಿನ್ ಚಲವಾದಿ ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಹಾಸ ಹೊಸಮನಿ ನಕಲಿ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

    ಸರ್ಕಾರಿ ಸಿಬ್ಬಂದಿಯಂತೆ ತಹಶೀಲ್ದಾರ್ ಕಚೇರಿಯಲ್ಲೇ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಹಣಮಂತ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ನಕಲಿ ಅಧಿಕಾರಿ ಅನ್ನೋದು ಬಯಲಾಗಿದೆ.

    ಸಿಂಧುತ್ವ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದ ಹೊಸಮನಿ, ಜನರಿಂದ ಸಿಂಧುತ್ವಕ್ಕಾಗಿ ಹಣ ಪಡೆಯುತ್ತಿದ್ದ. ಈ ಚಂದ್ರಹಾಸ ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತಿತ್ತು ಎಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ. ಹೊಸಮನಿಯನ್ನು ತಹಶೀಲ್ದಾರ್ ಕಚೇರಿಯ ಸರ್ಕಾರಿ ಸಿಬ್ಬಂದಿ ಎಂದು ಭಾವಿಸಿದ್ದ ಜನರು ಮತ್ತು ಎಸಿಬಿ ಅಧಿಕಾರಿಗಳು ನಕಲಿ ಎಂದು ತಿಳಿದು ದಂಗಾಗಿದ್ದಾರೆ.

    ನಕಲಿ ಅಧಿಕಾರಿ ಹೊಸಮನಿಯನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, 25 ಕ್ಕೂ ಅಧಿಕ ಸಿಂಧುತ್ವ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸಿ ಈತನಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

  • ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರವಾರ: ಕಾರ್ಗಿಲ್ ವಿಜಯ್ ದಿವಸದ ಆಚರಣೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಇಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೌಕ ಹಡಗುಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

    ಜಿಲ್ಲೆಯ ಜನರಲ್ಲದೇ ಹೊರರಾಜ್ಯದ ಜನರು ಇಂದು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಐ.ಎನ್.ಎಸ್. ವಿಕ್ರಮಾದಿತ್ಯ ಹಾಗೂ ಸುವರ್ಣ ಯುದ್ಧ ನೌಕೆಯನ್ನು ವೀಕ್ಷಿಸುವ ಮೂಲಕ ಕಣ್ತುಬಿಂಕೊಂಡರು.

    ಪ್ರತಿ ವರ್ಷದಲ್ಲಿ ಒಂದು ಬಾರಿ ಮಾತ್ರ ಸಾರ್ವಜನಿಕರಿಗೆ ಏಷ್ಯಾದ ಅತಿದೊಡ್ಡ ಹಡಗು ವಿಕ್ರಮಾದಿತ್ಯ ಹಾಗೂ ನೌಕಾನೆಲೆಯನ್ನು ನೋಡಲು ಅವಕಾಶ ಕಲ್ಪಿಸಲಾಗುತ್ತದೆ. ಇಂದು ಒಂದೇ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ನೌಕಾನೆಲೆಗೆ ಭೇಟಿ ನೀಡಿದರು.

  • ವರ್ಷದ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಮೇಲ್ಸೇತುವೆ ದಿಢೀರ್ ಕುಸಿತ

    ವರ್ಷದ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಮೇಲ್ಸೇತುವೆ ದಿಢೀರ್ ಕುಸಿತ

    ಚಿಕ್ಕಬಳ್ಳಾಪುರ: ಕಳೆದ ಒಂದು ವರ್ಷದ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಮೇಲ್ಸೇತುವೆಯೊಂದು ಇಂದು ದಿಢೀರ್ ಕುಸಿದಿದ್ದು, ಜನರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.

    ಬೆಂಗಳೂರು ಹಿಂದೂಪುರ ಮಾರ್ಗದ ಬಾಶೆಟ್ಟಿಹಳ್ಳಿ ಬಳಿ ಇರುವ ಮೇಲ್ಸೇತುವೆ ಇಂದು ಮಧ್ಯಾಹ್ನ ದಿಢೀರ್ ಕುಸಿದಿದೆ. ಈ ದೃಶ್ಯ ಕಂಡು ಎಚ್ಚೆತ್ತ ಸ್ಥಳೀಯರು ಸೇತುವೆಗೆ ಎರಡು ಕಡೆಯಲ್ಲೂ ಕಲ್ಲುಗಳನ್ನಿಟ್ಟು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ಸೇತುವೆ ಕುಸಿಯಲು ಆರಂಭಿಸಿದ್ದು, ಯಾವುದೇ ಕ್ಷಣದಲ್ಲಿ ಮೇಲ್ಸೇತುವೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ.

    ಉದ್ಘಾಟನೆಯಾಗಿ ಒಂದು ವರ್ಷವಷ್ಟೇ ಆಗಿದೆ, ಆಗಲೇ ಈ ದುಸ್ಥಿತಿಗೆ ಸೇತುವೆ ತಲುಪಿದೆ. ಉತ್ತಮ ಗುಣಮಟ್ಟದ ಸೇತುವೆ ನಿರ್ಮಿಸುವ ಬದಲು ಕಳಪೆ ಮಟ್ಟದ ಸೇತುವೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಜೊತೆಗೆ ಇದರಿಂದ ಆನಾಹುತ ಸಂಭವಿಸುವ ಮೊದಲು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

  • ನಗರದಲ್ಲಿ ಇನ್ನೆರಡು ದಿನ ಮಳೆರಾಯನ ಸಿಂಚನ

    ನಗರದಲ್ಲಿ ಇನ್ನೆರಡು ದಿನ ಮಳೆರಾಯನ ಸಿಂಚನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇನ್ನು ಎರಡು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶನಿವಾರದಿಂದ ಎರಡು ದಿನ ಮಳೆರಾಯ ಅಬ್ಬರಿಸಲಿದ್ದಾನೆ. ಈಗಾಗಲೇ ರಾಜಧಾನಿಯಲ್ಲಿ ಮಳೆರಾಯನ ಸಿಂಚನ ಶುರುವಾಗಿದ್ದು, ಕಾರ್ಪೋರೇಶನ್, ಶಾಂತಿನಗರ, ಯಶವಂತಪುರ ಸೇರಿ ಹಲವಡೆ ಭಾರೀ ಮಳೆ ಆಗುತ್ತಿದೆ. ಗಾಳಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮಳೆ ಆಗುತ್ತಿದ್ದು, ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಾದ್ಯಂತ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಕಳೆದ ಕೆಲ ದಿನದಿಂದ ಮೋಡ ಮುಸುಕಿದ ವಾತಾವರಣ ಇತ್ತು. ಆದರೆ ಇಂದು ಸಂಜೆ 3:30 ರಿಂದ ಗಾಳಿ ಜೊತೆ ಜೋರು ಮಳೆ ಆಗುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದು, ಫ್ಲೈ ಓವರ್, ಅಂಗಡಿ, ಬಸ್ ನಿಲ್ದಾಣದಲ್ಲಿ ವಾಹನ ಸವಾರರು ಆಶ್ರಯ ಪಡೆಯುತ್ತಿದ್ದಾರೆ.

    ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದ್ದು, ಬ್ರಹ್ಮಗಿರಿ ಬೆಟ್ಟದ ಶ್ರೇಣಿಯಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕನ್ನಿಕೆ ಸುಜೋತಿ ಮೈದುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರುತ್ತಿದೆ. ಒಂದು ವೇಳೆ ಮಳೆ ಇದೇ ರೀತಿ ಮುಂದುವರಿದಲ್ಲಿ ಎರಡು ದಿನದಲ್ಲಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.

  • ನಾಯಿಗಳ ವಿರುದ್ಧ ಪೊಲೀಸರಿಗೆ ದೂರು

    ನಾಯಿಗಳ ವಿರುದ್ಧ ಪೊಲೀಸರಿಗೆ ದೂರು

    ಬೆಂಗಳೂರು: ನಗರದ ಹೊರಮಾವು ವಾರ್ಡ್‍ನ ದೊಡ್ಡಯ್ಯ ಬಡಾವಣೆ ಏರಿಯಾದಲ್ಲಿ ನಾಯಿಗಳಿಗೆ ಹೆದರಿಕೊಂಡು ಜನ ಮನೆ ಮುಂದೆ ತಿರುಗಾಡುವುದಕ್ಕೆ ಭಯಭೀತರಾಗಿದ್ದಾರೆ. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸೋದು ಇರಲಿ, ರಸ್ತೆಯಲ್ಲಿ ಆಟವಾಡಲು ಬಿಡೋಕು ಹಿಂದೇಟು ಹಾಕುತ್ತಿದ್ದಾರೆ.

    ಕಳೆದ ವರ್ಷ ಅಂದರೆ 2018ರ ಜೂನ್ 27ರಲ್ಲಿ ಹೊರಮಾವು ವಾರ್ಡ್ ನ ದೊಡ್ಡಯ್ಯ ಬಡಾವಣೆಯಲ್ಲಿ ನಾಯಿಯೊಂದು ಮಗುವನ್ನು ಎಳೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 5 ನಾಯಿಗಳ ವಿರುದ್ಧ ಸ್ಥಳೀಯರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

    ಈ ಬಗ್ಗೆ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಕನಿಷ್ಠ ಪಕ್ಷ ಸ್ಥಳಕ್ಕೆ ಭೇಟಿ ಸಹ ಕೊಟ್ಟಿಲ್ಲ. ಇದರಿಂದಾಗಿ ಬಾಬಾಸ್‍ಪಾಳ್ಯ ಅಥವಾ ಹೊರಮಾವು ವಾರ್ಡ್ ನ ದೊಡ್ಡಯ್ಯ ಬಡಾವಣೆ ಈ ಡೆಡ್ಲಿ ಗ್ಯಾಂಗ್ ನ ಅಡ್ಡವಾಗಿದೆ. ಹೀಗಾಗಿ ಇಲ್ಲಿನ ಜನ ಬೀದಿ ನಾಯಿಗಳ ಕಾಟದಿಂದ ಬೇಸತ್ತಿದ್ದಾರೆ. ಅದರಲ್ಲೂ ತಾಯಂದಿರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.

    ಈ ನಾಯಿಗಳ ಹಿಂದೆ ದೊಡ್ಡ ಕಹಾನಿಯೇ ಇದ್ದು, ಯಾರದ್ದೋ ಇಬ್ಬರ ದ್ವೇಷಕ್ಕೆ ಸಾರ್ವಜನಿಕರು, ಮಕ್ಕಳು ಬಲಿಯಾಗುತ್ತಿದ್ದಾರೆ. ಸುಮಾರು 10 ವರ್ಷದ ಹಿಂದೆ, ಮಾಂಸದ ವ್ಯಾಪಾರಿಗಳಿಗೂ ಹಾಗೂ ಸ್ಥಳೀಯರಿಗೂ ಜಗಳವಾಗಿತ್ತು. ಇದರಿಂದ ಬೇಸತ್ತ ಮಾಂಸದ ವ್ಯಾಪಾರಿ ಅವನ ನಾಯಿಗಳನ್ನು ಸ್ಥಳೀಯರ ಮೇಲಿನ ದ್ವೇಷದಿಂದ ಇಲ್ಲೇ ಬಿಟ್ಟು ಹೋಗಿದ್ದಾನೆ. ಅದೇ ನಾಯಿಗಳೇ ಈಗ ಈ ಕೃತ್ಯ ಎಸಗುತ್ತಿವೆ.

    ನಾಯಿಗಳ ಅಟ್ಟಹಾಸದಿಂದ ಈಗಾಗಲೇ 10ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಈ ಬಗ್ಗೆ ಬಿಬಿಎಂಪಿಗೆ ದೂರು ಕೊಟ್ಟರೆ, ಪ್ರಾಣಿ ದಯಾ ಸಂಘದ ನಿಯಮಗಳ ಪ್ರಕಾರ ನಾಯಿಗಳನ್ನು ಬಂಧಿಸಲ್ಲ ಎನ್ನುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಮಳೆಗಾಲದಲ್ಲಿ ಆರಂಭವಾಯ್ತು ಅಮಾನಿಕೆರೆಯ ಹೂಳೆತ್ತುವ ಕಾಮಗಾರಿ

    ಮಳೆಗಾಲದಲ್ಲಿ ಆರಂಭವಾಯ್ತು ಅಮಾನಿಕೆರೆಯ ಹೂಳೆತ್ತುವ ಕಾಮಗಾರಿ

    ತುಮಕೂರು: ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ದರಂತೆ ಎನ್ನುವ ಹಾಗೆ ಮಳೆಗಾಲದಲ್ಲಿ ತುಮಕೂರು ನಗರದಲ್ಲಿರುವ ಅತೀ ದೊಡ್ಡ ಅಮಾನಿಕೆರೆಯ ಹೊಳೆತ್ತುವ ಕಾರ್ಯ ಶುರುವಾಗಿದೆ.

    ಕೆರೆಗಳ ಹೂಳೆತ್ತುವ ಕೆಲಸ ಯಾರಾದರೂ ಮಳೆಗಾಲದಲ್ಲಿ ಮಾಡುತ್ತಾರಾ? ಬೇಸಿಯಲ್ಲಿ ಹೂಳೆತ್ತಿ ಮಳೆಗಾಲದಲ್ಲಿ ನೀರು ತುಂಬಿಸ್ತಾರೆ. ಆದರೆ ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾತ್ರ ಹೇಳಿ ಕೇಳಿ ಮಳೆಗಾಲದಲ್ಲಿ ಅಮಾನಿಕೆರೆಯ ಹೂಳೆತ್ತುವ ಕೆಲಸ ಮಾಡಿಸುತ್ತಿದ್ದಾರೆ. ಮಳೆ ಬಂದು ಕೆರೆಗೆ ನೀರು ಹರಿದರೆ ಕಾಮಗಾರಿ ಪೂರ್ಣ ಮಾಡಿದ್ದೇವೆ ಎಂದು ಹಣ ಹೊಡೆಯಲು ಈ ರೀತಿ ಪ್ಲಾನ್ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

    ತುಮಕೂರು ಅಮಾನಿಕೆರೆ ಸುಮಾರು 400 ಎಕೆರೆ ಪ್ರದೇಶದಲ್ಲಿ ಇರುವ ಅತಿದೊಡ್ಡ ಕೆರೆ. ಸ್ಮಾರ್ಟ್ ಸಿಟಿ ಕೆಲಸ ಆರಂಭವಾದ ಮೇಲೆ ಕೆರೆಯ ಅಭಿವೃದ್ಧಿಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಅದು ಎಂತಹ ಯೋಜನೆ ಅಂದರೆ ಮಳೆಗಾಲದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ. ಬರೋಬ್ಬರಿ 24 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

    ಸಹಜವಾಗಿ ಕೆರೆಯ ಹೂಳೆತ್ತುವ ಕಾಮಗಾರಿಗಳನ್ನ ಎಲ್ಲೇ ಆದರೂ ಬೇಸಿಗೆಗಾಲ ಅಥವಾ ಚಳಿಗಾಲದಲ್ಲಿ ಆರಂಭ ಮಾಡುತ್ತಾರೆ. ಆದರೆ ಇಲ್ಲಿ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರೋದು ವ್ಯಾಪಕ ಟೀಕೆಗೆ ಕಾರಣವಾಗಿದ್ದು. ಕೆರೆಯ ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಸ್ಮಾರ್ಟ್ ಸಿಟಿಯ ಸದಸ್ಯರೂ ಜೊತೆಗೆ ಮಹಾನಗರ ಪಾಲಿಕೆ ಆಯುಕ್ತ ಭುಬಾಲನ್ ರವರನ್ನ ಕೇಳಿದ್ರೆ ಮುಂದಿನ ಸ್ಮಾರ್ಟ್ ಸಿಟಿ ಸಭೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.