Tag: ಸಾರ್ವಜನಿಕರು

  • ರೈಲಿನಿಂದ ಇಂಧನ ಸೋರಿಕೆ- ಡೀಸೆಲ್‍ಗಾಗಿ ಬಕೆಟ್, ಕೊಡ ಹಿಡಿದು ಮುಗಿಬಿದ್ದ ಜನ

    ರೈಲಿನಿಂದ ಇಂಧನ ಸೋರಿಕೆ- ಡೀಸೆಲ್‍ಗಾಗಿ ಬಕೆಟ್, ಕೊಡ ಹಿಡಿದು ಮುಗಿಬಿದ್ದ ಜನ

    ಹುಬ್ಬಳ್ಳಿ: ರೈಲಿನ ಇಂಜಿನ್ ಇಂಧನ ಸೋರಿಕೆಯಿಂದ ಹುಬ್ಬಳ್ಳಿ-ಬೆಂಗಳೂರ ಪ್ಯಾಸೆಂಜರ್ ರೈಲು ಯಲವಿಗಿ ರೈಲು ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು, ಸೋರುತ್ತಿರುವ ಡೀಸೆಲ್ ತುಂಬಿಕೊಳ್ಳುವಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ.

    ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ 56516 ರೈಲಿನ ಇಂಜಿನ್‍ನಲ್ಲಿ ಇಂಧನ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲನ್ನು ಯಲವಿಗಿಯಲ್ಲಿಯೇ ನಿಲುಗಡೆಗೊಳಿಸಲಾಯಿತು. ಆದರೆ ಇಂಧನ ಸೋರಿಕೆಯನ್ನು ಗಮನಿಸಿದ ಸಾರ್ವಜನಿಕರು ಬಕೆಟ್, ಬಾಟಲಿ ಕೊಡಗಳನ್ನು ತೆಗೆದುಕೊಂಡು ಡೀಸೆಲ್ ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಇಂಧನ ಸೋರಿಕೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು. ಇದನ್ನೂ ಓದಿ: ‘ಫ್ರೀ ಪೆಟ್ರೋಲ್ ಬೇಕಾದ್ರೆ ಬಿಕಿನಿ ಧರಿಸಿ ಬನ್ನಿ’ – ಎದ್ನೋ ಬಿದ್ನೋ ಓಡಿ ಬಂದ ಪುರುಷರು

    ಆದರೆ ಜನರು ಮಾತ್ರ ಡಿಸೇಲ್ ತುಂಬಿಕೊಳ್ಳಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ನಿಂತು ಡೀಸೆಲ್ ತುಂಬಿಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಪುಕಸಟ್ಟೆ ಸಿಗುತ್ತೆ ಎಂದರೆ ಜನರು ಹೇಗೆ ನೂಕುನುಗ್ಗಲಿನಲ್ಲೂ ಹೋಗಿ ಆ ವಸ್ತುವನ್ನು ತೆಗೆದುಕೊಂಡು ಬರುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.

  • ಟೇಕಾಫ್ ಆದ ಕೂಡಲೇ ನೆಲಕ್ಕುರುಳಿದ ವಿಮಾನ- 29ಕ್ಕೂ ಹೆಚ್ಚು ಮಂದಿ ಸಾವು

    ಟೇಕಾಫ್ ಆದ ಕೂಡಲೇ ನೆಲಕ್ಕುರುಳಿದ ವಿಮಾನ- 29ಕ್ಕೂ ಹೆಚ್ಚು ಮಂದಿ ಸಾವು

    ಗೋಮ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಗೋಮ ನಗರದಲ್ಲಿ ಟೇಕಾಫ್ ಆದ ಕೂಡಲೇ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 29ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದುರಂತ ನಡೆದಿದೆ.

    ಬ್ಯುಸಿ ಬೀ ಎಂಬ ಸ್ಥಳೀಯ ಸಂಸ್ಥೆಗೆ ಸೇರಿದ ವಿಮಾನ ಬೆನಿ ನಗರಕ್ಕೆ ಹೊರಟಿತ್ತು. ಟೇಕಾಫ್ ಆಗುವ ವೇಳೆ ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವರು ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಕೊನೆಯುಸಿರು ಎಳೆದಿದ್ದಾರೆ. ಸಾಕಷ್ಟು ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ನಾರ್ತ್ ಕಿವು ಸರ್ಕಾರ ತಿಳಿಸಿದೆ

    ಈ ವಿಮಾನ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ವಿಮಾನ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಯುರೋಪಿಯನ್ ಒಕ್ಕೂಟದಲ್ಲಿ ಈ ವಿಮಾನಗಳ ಕಾರ್ಯ ನಿರ್ವಹಣೆಯನ್ನು ನಿಷೇಧಿಸಲಾಗಿದೆ. ಟೇಕಾಪ್ ಆದ ಬಳಿಕ ಏರ್‌ಪೋರ್ಟ್‌ ಬಳಿ ಇದ್ದ ವಸತಿ ಪ್ರದೇಶಕ್ಕೆ ವಿಮಾನ ಬಂದು ಅಪ್ಪಳಿಸಿದೆ. 2 ಮನೆಗಳ ಮೇಲೆ ವಿಮಾನ ಬಿದ್ದ ಪರಿಣಾಮ ಮನೆಗಳು ನೆಲಸಮವಾಗಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

    ಘಟನಾ ಸ್ಥಳದಲ್ಲಿ ಒಟ್ಟಾರೆ 29 ಮೃತದೇಹಗಳು ಪತ್ತೆಯಾಗಿವೆ. ತಾಂತ್ರಿಕ ಸಮಸ್ಯೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

    ಸರ್ಕಾರಿ ಕಚೇರಿಯಲ್ಲಿ ಖಾಸಗಿ ದರ್ಬಾರ್-ಲಂಚ ಕೊಟ್ರೆ ಮಾತ್ರ ಆಗುತ್ತೆ ನಿಮ್ಮ ಕೆಲಸ

    ಕೋಲಾರ: ಜಿಲ್ಲೆಯ ಮಾಲೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲಂಚ ನೀಡಿದರೆ ಮಾತ್ರ ನಿಮ್ಮ ಕೆಲಸಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಲ್ಲಿನ ಸರ್ಕಾರಿ ಕಚೇರಿಯೊಳಗೆ ಖಾಸಗಿ ವ್ಯಕ್ತಿಗಳು ಪತ್ಯೇಕ ಆಸನದ ವ್ಯವಸ್ಥೆ ಮಾಡಿಕೊಂಡು ದರ್ಬಾರ್ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಚೇರಿಯಿಂದ ಹೊರಗೆ ಸಾರ್ವಜನಿಕರೊಂದಿಗೆ ಮಧ್ಯವರ್ತಿಗಳು ಅಧಿಕಾರಿಗಳ ಮುಂದೆಯೇ ವ್ಯಾಪಾರ ಮಾಡುತ್ತಾರೆ.

    ಹೌದು, ಇಲ್ಲಿ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ದರ್ಬಾರ್ ಮಿತಿಮೀರಿದೆ. ಕಚೇರಿಯಲ್ಲಿ ದಲ್ಲಾಳಿಗಳಿಗೆ ಟೇಬಲ್ ವ್ಯವಸ್ಥೆ ಮಾಡಿಕೊಟ್ಟು ಸಾರ್ವಜನಿಕರಿಂದ ನೇರವಾಗಿ ಅಧಿಕಾರಿಗಳೇ ಸುಲಿಗೆ ಮಾಡಿಸುತ್ತಿದ್ದಾರೆ. ಇದನ್ನು ತಿಳಿಯದ ಸಾರ್ವಜನಿಕರು, ಮಧ್ಯವರ್ತಿಗಳನ್ನೇ ಸರ್ಕಾರಿ ನೌಕರರೆಂದು ಭಾವಿಸಿ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಚೇರಿಯ ಉಪನೊಂದಣಾಧಿಕಾರಿ ಪದ್ಮಾವತಿ ಸಹ ನಿಗದಿಗಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

    ಈ ಮಧ್ಯವರ್ತಿಗಳಿಗೆ ಹಣ ಕೊಡಲಿಲ್ಲ ಅಂದರೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಜನರನ್ನು ಪದೇ-ಪದೇ ಕಚೇರಿಗೆ ಅಲೆಯುವಂತೆ ಮಾಡುತ್ತಾರೆ. ಹೆಚ್ಚಿನ ಹಣ ನೀಡಿದರೆ ಕಣ್ಮುಚ್ಚಿ ಸಹಿ ಹಾಕುವುದು ಇಲ್ಲಿ ಹವ್ಯಾಸವಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ವಿಷಯ ತಿಳಿದ ಮಾಧ್ಯಮಗಳು ಕಚೇರಿಗೆ ತೆರಳಿದರೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಕಚೇರಿಯಲ್ಲಿ ಕೆಲಸ ಮಾಡುತ್ತಿರೋದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

    ಒಟ್ಟಿನಲ್ಲಿ ನಿವೇಶನ, ಮದುವೆ ನೊಂದಣಿಗೆ ಎಂದು ಬರುವ ಅಮಾಯಕರನ್ನು ಯಾಮಾರಿಸಿ ಪರ್ಸಂಟೇಜ್ ಫಿಕ್ಸ್ ಮಾಡಿ ಸಾರ್ವಜನಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

  • ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ 10 ಅಡಿ ಹೆಬ್ಬಾವು ಕಂಡು ಶಾಕ್

    ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ 10 ಅಡಿ ಹೆಬ್ಬಾವು ಕಂಡು ಶಾಕ್

    ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರು 10 ಅಡಿ ಹೆಬ್ಬಾವು ಕಂಡು ಶಾಕ್ ಆದ ಘಟನೆ ಕೃಷ್ಣಗಿರಿ ಜಿಲ್ಲೆಯ ಸುಲಗಿರಿಯಲ್ಲಿ ನಡೆದಿದೆ.

    ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಸುಲಗಿರಿಯಲ್ಲಿ ಇರುವ ಕಿರಾಣಿ ಅಂಗಡಿಯ ಗೋಡೌನ್ ನಲ್ಲಿ ಹೆಬ್ಬಾವು ಅವಿತು ಕುಳಿತಿತ್ತು. ಸಿಬ್ಬಂದಿ ಅಂಗಡಿಯಲ್ಲಿ ಮೂಟೆ ತೆಗೆದುಕೊಳ್ಳಲು ಹೋದಾಗ ಹೆಬ್ಬಾವು ಪ್ರತ್ಯಕ್ಷವಾಗಿದೆ.

    ಸುಮಾರು 10 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಸ್ಥಳೀಯರು ಗಾಬರಿಗೊಂಡರು. ಬಳಿಕ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ರಕ್ಷಿಸಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಹೆಬ್ಬಾವು ರಕ್ಷಿಸಿದ್ದಾರೆ. ಹೆಬ್ಬಾವನ್ನು ರಕ್ಷಿಸಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವನ್ನು ರಕ್ಷಿಸುವಾಗ ಸ್ಥಳೀಯರು ಅದನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

  • ಸರ್ಕಾರಿ ಕಚೇರಿಗೆ ಬೇಕಾಗಿದ್ದು 47 ಸಿಬ್ಬಂದಿ, ಆದ್ರೆ ಇರೋದು ಮಾತ್ರ 6 ಮಂದಿ

    ಸರ್ಕಾರಿ ಕಚೇರಿಗೆ ಬೇಕಾಗಿದ್ದು 47 ಸಿಬ್ಬಂದಿ, ಆದ್ರೆ ಇರೋದು ಮಾತ್ರ 6 ಮಂದಿ

    – ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ
    – ಸಿಎಂ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ

    ಶಿವಮೊಗ್ಗ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸರ್ಕಾರಿ ಇಲಾಖೆಗಳ ಅವ್ಯವಸ್ಥೆ ಹೇಳತೀರದಾಗಿದೆ. ಅದರಲ್ಲೂ ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ(ಆರ್‌ಟಿಒ) ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ವಾರಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕಚೇರಿಗೆ ಒಟ್ಟು 47 ಮಂದಿ ಸಿಬ್ಬಂದಿ ಬೇಕು ಆದರೆ ಇಲ್ಲಿರೋದು ಮಾತ್ರ ಕೇವಲ 6 ಮಂದಿ.

    ಹೌದು. ಶಿವಮೊಗ್ಗದ ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಮಿತಿಮೀರಿದೆ. 45 ಮಂದಿ ಕರ್ತವ್ಯ ಸಲ್ಲಿಸಬೇಕಾದ ಜಾಗದಲ್ಲಿ ಕೇವಲ 6 ಮಂದಿ ಮಾತ್ರ ಇದ್ದಾರೆ. ಇದರಿಂದ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನೂತನ ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ವಾಹನಗಳ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳಲು ಹಾಗೂ ಡಿಎಲ್ ಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರ ತವರಿನಲ್ಲೇ ಜನರ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದ್ದು, ಇಲ್ಲಿನ ಅಧಿಕಾರಿಗಳು ಕೂಡ ತಮ್ಮ ಅಸಹಾಯಕ ಪರಿಸ್ಥಿತಿ ತೋರ್ಪಡಿಸುತ್ತಿದ್ದಾರೆ.

    ಕೇವಲ ಆರ್‌ಟಿಒ ಕಚೇರಿ ಮಾತ್ರವಲ್ಲ ದೂರದ ಮಲವಗೊಪ್ಪ ಬಡಾವಣೆಯಲ್ಲಿರುವ ಡಿಎಲ್ ಟೆಸ್ಟ್ ಕಚೇರಿ ಮತ್ತು ಟ್ರ್ಯಾಕ್‍ನಲ್ಲಿಯೂ ಇದೇ ಸಮಸ್ಯೆಯಿಂದ ಜನರು ಹೈರಾಣಾಗಿ ಹೋಗಿದ್ದಾರೆ. ವಾಹನ ನೋಂದಣಿ, ಡಿಎಲ್‍ಗಾಗಿ ದಿನವಿಡಿ ಕಾದು ಕಾದು ಜನ ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಪ್ರತಿದಿನ ಜಟಾಪಟಿ ನಡೆಯುತ್ತಲೇ ಇದೆ.

    5 ಬ್ರೇಕ್ ಇನ್ಸ್‌ಪೆಕ್ಟರ್ ಹುದ್ದೆಗಳಲ್ಲಿ 4 ಹುದ್ದೆಗಳು ಖಾಲಿ ಇವೆ. ಇರುವ ಒಬ್ಬರು ಕಳೆದ ಒಂದು ವಾರದಿಂದ ಜ್ವರ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಯಂ ಆರ್‌ಟಿಒ ಅಧಿಕಾರಿ ಇಲ್ಲದೇ ಇರುವ ಒಬ್ಬರೇ ಅಧಿಕಾರಿ ಮಂಗಳೂರು ಮತ್ತು ಶಿವಮೊಗ್ಗ ಕಚೇರಿ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಮಂಗಳೂರಿನ ಆರ್‌ಟಿಒ ಅಧಿಕಾರಿ ವಾರದಲ್ಲಿ ಎರಡು ದಿನ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಚೇರಿ ಒಂದರಲ್ಲೇ ಬ್ರೇಕ್ ಇನ್ಸ್‌ಪೆಕ್ಟರ್ ಗಳನ್ನು ಹೊರತುಪಡಿಸಿದರೆ ಸುಮಾರು 35ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಸಾರ್ವಜನಿಕರು ಒಂದು ಚಲನ್ ಪಡೆಯಲು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸ್ ಇಲಾಖೆ ಸಂಚಾರ ನಿಯಮ ಉಲ್ಲಂಘನೆಯಡಿ, ಭಾರೀ ದಂಡ ವಿಧಿಸುತ್ತಿರುವುದರಿಂದ ಬಚಾವಾಗಲು ಜನ ತಮ್ಮ ವಾಹನಗಳ ದಾಖಲೆಗಳನ್ನು ಸರಿಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರುತ್ತಿದ್ದಾರೆ. ಆದರೆ ಕಚೇರಿಯಲ್ಲಿಯೇ ಸಾಕಷ್ಟು ಸಮಸ್ಯೆಗಳು ಇವೆ. ಹೀಗಾಗಿ ಸಿಎಂ ಅವರು ಈ ಬಗ್ಗೆ ಗಮನ ಹರಿಸಿ ಈ ಕೂಡಲೇ ಸಿಬ್ಬಂದಿ ಕೊರತೆ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕಿದೆ.

  • ಹಾಳಾದ ರಸ್ತೆಯಲ್ಲಿ ಭತ್ತ ನಾಟಿ

    ಹಾಳಾದ ರಸ್ತೆಯಲ್ಲಿ ಭತ್ತ ನಾಟಿ

    ಕೊಪ್ಪಳ: ಹಾಳಾದ ರಸ್ತೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಂಪ್ಲಿಗೆ  ಸಂಪರ್ಕ ಕಲ್ಪಿಸುವ ಪ್ರಮುಖ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಗಂಗಾವತಿಯ ಹೊಸಳ್ಳಿ ರಸ್ತೆ ಹಾಳಾಗಿ ಗದ್ದೆಯಂತಾಗಿದೆ. ರಸ್ತೆ ಹಾಳಾಗಿ ಆರು ತಿಂಗಳಾದ್ರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿರಲಿಲ್ಲ. ಹಾಗಾಗಿ ಜನರು ನಮ್ಮೂರಿಗೆ ಸರಿಯಾದ ರಸ್ತೆಯನ್ನು ಮಾಡಿಕೊಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅಧಿಕಾರಿಗಳು ಇದಕ್ಕೆ ಸ್ಪಂದಿಸದ ಕಾರಣ ರಸ್ತೆ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂದು ತೋರಿಸಲು ರಸ್ತೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ.

    ಸುಮಾರು 2 ವರ್ಷದಿಂದ ರಸ್ತ ಕಾಮಗಾರಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಮಳೆಗಾಲ ಆದ ನಂತರ ಮಾಡುತ್ತೇವೆ ಎಂದು ನಾನಾ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ ಇದುವರೆಗೂ ಈ ರಸ್ತೆಯನ್ನು ಸರಿ ಮಾಡಿಲ್ಲ. ಅಲ್ಲದೆ ಶಾಲಾ – ಕಾಲೇಜು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಬೀಳುವುದನ್ನು ನೋಡಿದ್ದೇವೆ. ವಯೋವೃದ್ಧರು ನಡೆದುಕೊಂಡು ಹೋಗುವುದಕ್ಕೆ ಪರದಾಡುತ್ತಿದ್ದಾರೆ. ಆಟೋದಲ್ಲಿ ಇಲ್ಲಿಗೆ ಬಂದರೆ ರಸ್ತೆ ಸರಿಯಿಲ್ಲ ಎಂದು ಚಾಲಕರು ಡಬಲ್ ಚಾರ್ಜ್ ಕೇಳುತ್ತಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

    ಹೊಸಳ್ಳಿ ರಸ್ತೆಗೆ ಲಿಂಕ್ ಆಗುವ ರೋಡ್ ಇದು. ಅಲ್ಲದೆ ಕಂಪ್ಲಿ ಬೈಪಾಸ್ ರಸ್ತೆ ಕೂಡ ಇದಾಗಿದೆ. ಹಿರಿಯರ ನೇತೃತ್ವದಲ್ಲಿ ಅಧಿಕಾರಿಗಳನ್ನು ಮನವಿ ಮಾಡಿಕೊಂಡರು ಕೂಡ ಯಾರು ಸರಿಯಾಗಿ ಸ್ಪಂದಿಸಿಲ್ಲ. ಸದ್ಯ ಈಗ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಈ ರಸ್ತೆ ಸರಿ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅವರು ಆದಷ್ಟು ಬೇಗ ಈ ರಸ್ತೆ ಸರಿ ಮಾಡಿಕೊಡಲಿ. ಆಗ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

  • ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

    ಉಡುಪಿಯಲ್ಲಿ ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜನ

    ಉಡುಪಿ: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆಯ ದಂಡ ವಸೂಲಿ ವಿರುದ್ಧ ಸಾರ್ವಜನಿಕರು ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಗ ಉಡುಪಿಯಲ್ಲೂ ಈ ರೀತಿಯ ಘಟನೆ ನಡೆದಿದೆ.

    ನಗರದ ಪಿಪಿಸಿ ಕಾಲೇಜು ಸಮೀಪ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ನಿಂತಿದ್ದರು. ಸಮೀಪದಲ್ಲಿ ಉಡುಪಿ ನಗರದ ಪಿಪಿಸಿ ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿ ಇರುವ ಪೊಲೀಸರು ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು.

    ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸರು ಕರ್ತವ್ಯ ಪಾಲನೆಯಲ್ಲಿ ಇದ್ದದ್ದು ಸಂಶಯ ಮೂಡಿಸುವಂತಿತ್ತು. ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅಲ್ಲಿಯೇ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್‍ಐ ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಎಸ್‍ಐ ದೂರದಲ್ಲಿ ವಾಹನದೊಳಗೆ ಕುಳಿತ್ತಿದ್ದರು. ಸಮವಸ್ತ್ರ ಧರಿಸದ ಪೊಲೀಸ್ ಸಿಬ್ಬಂದಿಯನ್ನು ವಾಹನ ತಡೆದು ನಿಲ್ಲಿಸಲು ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಈ ರಾದ್ಧಾಂತಕ್ಕೆ ಕಾರಣವಾಯಿತು. ಜನರಲ್ಲಿ ಸರ್ಕಾರದ ದಂಡದ ಕುರಿತು ಇದ್ದ ಆಕ್ರೋಶ ಈಗ ಪೊಲೀಸರ ಮೇಲೆ ಶಿಫ್ಟಾಗಿದೆ.

  • ಡಿಜೆ ವಿಚಾರಕ್ಕೆ ಪೊಲೀಸ್ರು, ಜನರ ನಡುವೆ ಜಟಾಪಟಿ- ನೆಲಕ್ಕೆ ಬಿದ್ದ ಗಣೇಶ ಮೂರ್ತಿ

    ಡಿಜೆ ವಿಚಾರಕ್ಕೆ ಪೊಲೀಸ್ರು, ಜನರ ನಡುವೆ ಜಟಾಪಟಿ- ನೆಲಕ್ಕೆ ಬಿದ್ದ ಗಣೇಶ ಮೂರ್ತಿ

    ದಾವಣಗೆರೆ: ಸಾರ್ವಜನಿಕರ ಹಾಗೂ ಪೊಲೀಸರ ಜಟಾಪಟಿಯಲ್ಲಿ ಗಣಪತಿ ಮೂರ್ತಿ ನೆಲಕ್ಕೆ ಬಿದ್ದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ.

    ಚನ್ನಗಿರಿಯ ಹಿಂದೂ ಏಕತಾ ಸಮಿತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, 11ನೇ ದಿನವಾದ ಇಂದು ಗಣೇಶ ಮೂರ್ತಿಯನ್ನು ವಿಸರ್ಜನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ಮೆರವಣಿಯಲ್ಲಿ ಡಿಜೆಗೆ ಪರವಾನಿಗೆ ನೀಡಲು ಪೊಲೀಸರ ನಿರಾಕರಿಸಿದ್ದಾರೆ.

    ಈ ಹಿನ್ನೆಲೆ ಸಾರ್ವಜನಿಕರಿಗೂ ಹಾಗೂ ಪೊಲೀಸರ ನಡುವೆ ವಾಗ್ವಾದ ಶುರುವಾಗಿದ್ದು, ನಡು ರಸ್ತೆಯಲ್ಲಿ ಗಣೇಶ ಮೂರ್ತಿಯನ್ನು ನಿಲ್ಲಿಸಿ ಪ್ರತಿಭಟನೆಗೆ ಸಾರ್ವಜನಿಕರು ಮುಂದಾಗಿದ್ದಾರೆ. ಅಲ್ಲದೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಕೈವಾಡದಿಂದ ಡಿಜೆಗೆ ಪರವಾನಿಗೆ ನೀಡುತ್ತಿಲ್ಲ. ಹಿಂದೆ ನಡೆದ ಶಾಂತಿ ಸಭೆಯಲ್ಲಿ ಪರವಾನಿಗೆ ನೀಡುತ್ತೇವೆ ಎಂದು ಹೇಳಿದ್ದ ಪೊಲೀಸರು ಈಗ ಕೊನೆ ಕ್ಷಣದಲ್ಲಿ ನಿರಾಕರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳಕ್ಕೆ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಬೇಟಿ ನೀಡಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರ ಜೊತೆಗೆ ರಸ್ತೆಯಲ್ಲಿದ್ದ ಗಣಪತಿ ಮುಗುಚಿ ಬಿದ್ದಿದ್ದು, ಸಾರ್ವಜನಿಕ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಈಗ ಸ್ಥಳದಲ್ಲಿ ಪೊಲೀಸರು ಭಿಗಿ ಭದ್ರತೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

  • ಲೇಟ್‍ನೈಟ್ ಪಬ್‍ಗಳ ಮೇಲೆ ಖಾಕಿ ನಿಗಾ

    ಲೇಟ್‍ನೈಟ್ ಪಬ್‍ಗಳ ಮೇಲೆ ಖಾಕಿ ನಿಗಾ

    ಬೆಂಗಳೂರು: ಇತ್ತೀಚಿಗಷ್ಟೇ ಪಬ್‍ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಲೇಟ್‍ನೈಟ್ ಪಬ್‍ಗಳನ್ನು ಕ್ಲೋಸ್ ಮಾಡಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

    ಇತ್ತೀಚೆಗೆ ಇಂದಿರಾನಗರದಲ್ಲಿ ಸ್ಥಳೀಯರಿಗೆ ಪಬ್‍ಗಳಿಂದ ಶಬ್ದ ಮಾಲಿನ್ಯ ಆಗುತ್ತಿದೆ ಎಂದು ಸ್ಥಳೀಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಅರ್ಜಿ ಕೈಗೆತ್ತಿಕೊಂಡ ಕೋರ್ಟ್ ಸರ್ಕಾರಕ್ಕೆ ಜಾಡಿಸಿತ್ತು. ಇದಾದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಪಬ್‍ಗಳ ಮೇಲೆ ನಿಗಾ ವಹಿಸಿದ್ದರು. ನಿಗದಿತ ಸಮಯಕ್ಕೆ ಪಬ್‍ಗಳು ಕ್ಲೋಸ್ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

    ಹೈಕೋರ್ಟ್ ಚಾಟಿ ಏಟಿನಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಎಲ್ಲ ಏರಿಯಾಗಳನ್ನು ಕಂಟ್ರೋಲ್‍ಗೆ ತೆಗೆದುಕೊಂಡಿದೆ. ಪಬ್‍ಗಳ ಮೇಲೆ ಖಾಕಿ ನಿಗಾವಿಟ್ಟಿದ್ದು ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಜಯನಗರ, ಕೋರಮಂಗಲ, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ಹಲವೆಡೆ ಪೊಲೀಸರು ಗಸ್ತು ತಿರುಗುತ್ತಿದ್ದು ನಿಗದಿತ ಸಮಯಕ್ಕೆ ಪಬ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಬಂದ್ ಆಗುವಂತೆ ನೋಡಿಕೊಂಡಿದ್ದಾರೆ. ಲೇಟ್‍ನೈಟ್ ಪಬ್‍ಗಳಿಗೆ ಖಾಕಿ ಕಡಿವಾಣ ಬಿದ್ದಿದ್ದು ಗುಂಪು-ಗಲಾಟೆ ಎಲ್ಲದಕ್ಕೂ ಕಡಿವಾಣ ಬಿದ್ದಿದೆ.

    ಪಬ್ ಆಗಲಿ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ ಆಗಲಿ ಸಾರ್ವಜನಿಕರು ಸೇರುವ ಕಡೆ ಪೊಲೀಸರು ಗಸ್ತು ಇದ್ದರೆ ಕಾನೂನು ಸುವ್ಯವಸ್ಥೆ ಎಲ್ಲವೂ ಸರಿಯಾಗಿರುತ್ತೆ. ಹಾಗೆ ಪ್ರಭಾವಿಗಳು, ರಾಜಕಾರಣಿಗಳು ನಡೆಸುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗೆ ಒಂದು ನಿಯಮ, ಬೇರೆಯವರಿಗೆ ಒಂದು ನಿಯಮ ಮಾಡದೇ ಎಲ್ಲರಿಗೂ ಒಂದೇ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.

  • ಕಾಲೇಜಿಗೆ ಚಕ್ಕರ್- ಪಾರ್ಕಿನಲ್ಲಿ ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ

    ಕಾಲೇಜಿಗೆ ಚಕ್ಕರ್- ಪಾರ್ಕಿನಲ್ಲಿ ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ

    -ಪಡ್ಡೆ ಹುಡುಗರ ಗ್ಯಾಂಗ್ ಹಾಜರ್

    ದಾವಣಗೆರೆ: ಕಾಲೇಜಿಗೆ ಚಕ್ಕರ್ ಹಾಕಿ ನಗರದ ಕೆಲ ವಿದ್ಯಾರ್ಥಿಗಳು ಪಾರ್ಕಿನಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದಾರೆ.

    ನಗರದ ವಿಶ್ವೇಶ್ವರಯ್ಯ ಪಾರ್ಕ್, ವಿದ್ಯಾನಗರ ಪಾರ್ಕ್ ಸೇರಿದಂತೆ ಪ್ರಮುಖ ಪಾರ್ಕ್ ತುಂಬಾ ಪ್ರೇಮ ಪಕ್ಷಿಗಳು ಗರಿ ಬಿಚ್ಚಿ ಹಾರಾಡುತ್ತಿರುತ್ತವೆ. ಅದರಲ್ಲೂ ವಾಯು ವಿಹಾರಕ್ಕೆ ಎಂದು ನಗರದ ಜನರು ಪಾರ್ಕ್ ಗಳಿಗೆ ಹೋದರೆ ಸಾಕು ಮುಜುಗರಪಡುವಂತ ಸನ್ನಿವೇಶಗಳೇ ಹೆಚ್ಚಿರುತ್ತವೆ. ಕಾಲೇಜು ಯುವಕ- ಯುವತಿಯರು ಪಾರ್ಕಿನ ಒಳಗೆ ಕೂತು ಪ್ರಪಂಚವನ್ನೇ ಮರೆತಿರುತ್ತಾರೆ. ಆದರೆ ಇದನ್ನು ನೋಡಲು ಪಡ್ಡೆ ಹುಡುಗರ ಗ್ಯಾಂಗ್‍ಗಳು ಹಾಜರು ಇರುತ್ತವೆ. ಪಾರ್ಕಿನಲ್ಲಿ ನಡೆಯುವ ಇಂತಹ ಅಸಭ್ಯ ಘಟನೆಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಯಾರು ಕೂಡ ಕುಟುಂಬ ಸಮೇತರಾಗಿ ಕಾಲು ಇಡಲು ಕೂಡ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾರ್ಕಿನೊಳಗೆ ಮೋಜು ಮಸ್ತಿ

    ಪಾರ್ಕಿನಲ್ಲಿ ಬಹುತೇಕ ಪಿಯುಸಿ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದು, ಕ್ಲಾಸಿಗೆ ಚಕ್ಕರ್ ಹಾಕಿ ಪಾರ್ಕ್ ಪೊದೆಗಳಲ್ಲಿ ಕೂತಿರುತ್ತಾರೆ. ಕೆಲವೊಮ್ಮೆ ಕುಟುಂಬದ ಜೊತೆ ಹೋಗುವುದಕ್ಕೂ ಮುಜುಗರವಾಗುವಂತಹ ಸನ್ನಿವೇಶಗಳು ಸೃಷ್ಟಿ ಆಗಿರುತ್ತವೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರೆ ಇದುವರೆಗೂ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಎಲ್ಲಾ ಕಡೆಗಳಲ್ಲಿ ಸೂಕ್ತವಾದ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.