Tag: ಸಾರ್ವಜನಿಕರು

  • ಅವ್ಯವಸ್ಥೆಯ ಆಗರವಾಗಿದೆ ಬೆಳಗಾವಿ ಉಪ ನೋಂದಣಿ ಕಚೇರಿ

    ಅವ್ಯವಸ್ಥೆಯ ಆಗರವಾಗಿದೆ ಬೆಳಗಾವಿ ಉಪ ನೋಂದಣಿ ಕಚೇರಿ

    ಬೆಳಗಾವಿ: ಪ್ರತಿ ನಿತ್ಯ ಸಾವಿರಾರು ಜನರು ವಿವಾಹ ನೋಂದಣಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಗೆ ಆಗಮಿಸುತ್ತಾರೆ. ಆದರೆ ಈ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ.

    ಸರ್ಕಾರಕ್ಕೆ ದಿನಕ್ಕೆ ಲಕ್ಷಾಂತರ ರೂ. ಆದಾಯ ಬರುವುದು ಈ ವಿವಾಹ ನೋಂದಣಿ ಕಚೇರಿಯಿಂದ. ಆದರೆ ಇಲ್ಲಿನ ಅಧಿಕಾರಿಗಳ ಒಣ ರಾಜಕಾರಣದಿಂದ ಇಲ್ಲಿ ಬರುವ ಜನರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡದಿರುವುದಕ್ಕೆ ಜನರು ಹಿಡಿಶಾಪ ಹಾಕಿಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೆಳಗಾವಿ ಉಪ ನೋಂದಣಿ ಕಚೇರಿ ಬರೋಬ್ಬರಿ 140 ವರ್ಷ ಹಳೆಯದಾದ ಕಟ್ಟಡದಲ್ಲಿದೆ. ಅಮೂಲ್ಯ ದಾಖಲೆಗಳಿರುವ ಕಚೇರಿಯ ಮಾಡು ಸೋರುತ್ತಿದ್ದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಕೇಂದ್ರದಲ್ಲಿ ಕುಳಿತುಕೊಳ್ಳಲು ಬೇಕಾದ ಆಸನದ ವ್ಯವಸ್ಥೆ ಇಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಜನರು ಬಂದರೆ ಕಟ್ಟಡದ ಬದಿಯಲ್ಲೇ ನಿಲ್ಲಬೇಕಿದೆ. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಕಂಪ್ಯೂಟರ್, ಸ್ಕ್ಯಾನರ್ ಇನ್ನಿತರ ಉಪಕರಣ ಮೇಲ್ದರ್ಜೆಗೇರಬೇಕಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

    ಒಟ್ಟಾರೆ ತಮ್ಮ ಕೆಲಸ ಬೇಗ ಇತ್ಯರ್ಥವಾಗಲು ವಿವಾಹ ನೋಂದಣಿ ಕಚೇರಿಗೆ ಬಂದರೆ ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣ ನೀಡಿ ಜನರಿಗೆ ರಸ್ತೆಯ ಮಧ್ಯದಲ್ಲೇ ಕಾಯುವ ಸ್ಥಿತಿ ಬದಲಾಗಬೇಕು. ಶೀಘ್ರದಲ್ಲೇ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

  • ಬಿಜೆಪಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ

    ಬಿಜೆಪಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ

    ಮಂಡ್ಯ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ್ಯಾಂತ ಹಲವರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಯ್ದೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅವರುಗಳು ವಿರೋಧಿಸುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಇಂದು ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಹಾಗೂ ಆವರಣಗಳಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜಾಗೃತಿ ಮೂಡಿಸಲಾಯಿತು.

    ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ದೇಶದಲ್ಲಿ ಈ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಹಾಗೂ ಅವಘಡಗಳು ಸಂಭವಿಸುತ್ತಿವೆ. ಈ ಕಾಯ್ದೆಯ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಯಾರು ಪ್ರತಿಭಟನೆ ಮುಂದಾಗುವುದಿಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಕೆಲವೊಂದು ಸಮೂದಾಯವನ್ನು ಎತ್ತಿ ಕಟ್ಟುತ್ತಿದ್ದಾರೆ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದ ಅವಶ್ಯವಾಗಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಲ್ಲಿಕಾರ್ಜುನ್ ಹೇಳಿದರು.

    ಮಂಡ್ಯ ನಗರ ಹಾಗೂ ಜಿಲ್ಲೆಯ ಜನರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಘಟಕ ಕರ ಪತ್ರಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕರಪತ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳು, ಈ ಕಾಯ್ದೆಯಿಂದ ದೇಶಕ್ಕೆ ಅನುಕೂಲಕರವಾಗುವ ಅಂಶಗಳನ್ನು ಮುದ್ರಿಸಲಾಗಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದರು.

  • ಕಳ್ಳರ ಹಾವಳಿಗೆ ಬೇಸತ್ತು ಕೈಯಲ್ಲಿ ದೊಣ್ಣೆ ಹಿಡಿದ ಕಲಬುರಗಿ ಜನ

    ಕಳ್ಳರ ಹಾವಳಿಗೆ ಬೇಸತ್ತು ಕೈಯಲ್ಲಿ ದೊಣ್ಣೆ ಹಿಡಿದ ಕಲಬುರಗಿ ಜನ

    ಕಲಬುರಗಿ: ನಗರದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಾಣವಾದರೆ ಕಳ್ಳರು ಮತ್ತು ಪುಂಡರ ಹಾವಳಿ ಕಡಿಮೆಯಾಗುತ್ತೆ ಎಂದು ಕಲಬುರಗಿ ಜನ ಅಂದುಕೊಂಡಿದ್ದರು. ಆದರೆ ದುರಂತ ಎಂದರೆ ಪೊಲೀಸ್ ಆಯುಕ್ತಾಲಯ ಜಾರಿಯಾದ ದಿನದಿಂದ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಹೀಗಾಗಿ ಬಡಾವಣೆಯ ಜನ ಇದೀಗ ತಮ್ಮ ರಕ್ಷಣೆಗೆ ತಾವೇ ದೊಣ್ಣೆಗಳನ್ನು ಹಿಡಿದು ರಸ್ತೆಗಿಳಿದಿದ್ದಾರೆ.

    ಕಳೆದ ನಾಲ್ಕು ತಿಂಗಳಿನಿಂದ ನಗರದಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿವೆ. ಆದ್ರೆ ಇಲ್ಲಿಯವರೆಗೂ ಒಬ್ಬ ಕಳ್ಳನನ್ನು ಕೂಡ ಪೊಲೀಸರು ಹಿಡಿದಿಲ್ಲ. ಇದರಿಂದ ಬೇಸತ್ತ ಜನ ಅವರ ಆಸ್ತಿಯ ರಕ್ಷಣೆಗೆ ಅವರೇ ಮುಂದಾಗಿದ್ದಾರೆ.

    ಈ ಹಿಂದೆ ರಾತ್ರಿ ಸಮಯದಲ್ಲಿ ಜನರು ಮಲಗಿರುವಾಗ ಮಾತ್ರ ಖದೀಮರು ಕಳ್ಳತನ ಮಾಡುತ್ತಿದ್ದರು. ಆದರೆ ಕಲಬುರಗಿ ನಗರದಲ್ಲಿ ಇತ್ತೀಚೆಗೆ ಹಗಲಿನಲ್ಲಿಯೇ ಮನೆಗೆ ಕಳ್ಳರು ಕನ್ನ ಹಾಕುತ್ತಿದ್ದಾರೆ. ಕೆಲ ದುಷ್ಕರ್ಮಿಗಳಂತೂ ಹಣ ನೀಡಿ ಇಲ್ಲ ನಿಮ್ಮನ್ನು ಬಿಡಲ್ಲ ಎಂದು ಮನೆಗಳಿಗೆ ಕಲ್ಲು-ಇಟ್ಟಿಗೆ ಹೊಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೊಟ್ಟರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಇದರಿಂದಾಗಿ ಇಲ್ಲಿನ ಜನರಿಗೆ ಬೆಳಗ್ಗೆ ಕಚೇರಿ, ವ್ಯಾಪಾರ ಅಂತ ಕರ್ತವ್ಯ ಮುಗಿಸಿಕೊಂಡು ಬಂದು ರಾತ್ರಿ ಮನೆ ಕಾಯುವುದೇ ತಲೆನೋವಿನ ಕೆಲಸವಾಗಿಬಿಟ್ಟಿದೆ. ಹೀಗಾಗಿ ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಈ ಕಳ್ಳರ ಹಾವಳಿಗೇ ಬ್ರೆಕ್ ಹಾಕಬೇಕಾಗಿದೆ.

  • ಘನತ್ಯಾಜ್ಯ ವೀಕ್ಷಣೆಗೆ ಹೋದ ಅಧಿಕಾರಿಗಳ ಮೇಲೆ ಹಂದಿ ದಾಳಿ

    ಘನತ್ಯಾಜ್ಯ ವೀಕ್ಷಣೆಗೆ ಹೋದ ಅಧಿಕಾರಿಗಳ ಮೇಲೆ ಹಂದಿ ದಾಳಿ

    ಕಾರವಾರ: ಘನತ್ಯಾಜ್ಯ ಘಟಕದ ಸ್ಥಳ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೇಲೆ ಹಂದಿಗಳು ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಸಾಗರ ರಸ್ತೆಯಲ್ಲಿನ ಪುರಸಭೆಯ ಘನತ್ಯಾಜ್ಯ ಘಟಕದ ಸ್ಥಳ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು, ಪೊಲೀಸರು, ತಾಲೂಕು ಆಡಳಿತದ ಸಿಬ್ಬಂದಿ ಹಾಗೂ ಸ್ಥಳೀಯರು ತೆರಳಿದ್ದರು.

    ಈ ಸಂದರ್ಭದಲ್ಲಿ ಕಸದ ರಾಶಿಯಲ್ಲಿದ್ದ ಹಂದಿಗಳು ಸ್ಥಳಕ್ಕೆ ತೆರಳಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ದಾಳಿಗೆ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವ ಅಧಿಕಾರಿ, ಸಾರ್ವಜನಿಕರಿಗೂ ಪೆಟ್ಟಾಗಿಲ್ಲ.

  • ಗುಂಡಿಗಳಾದ ರಸ್ತೆಗಳು- ಶಾಸಕರು ಮಾತ್ರ ಮೌನ

    ಗುಂಡಿಗಳಾದ ರಸ್ತೆಗಳು- ಶಾಸಕರು ಮಾತ್ರ ಮೌನ

    ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆ ದುಸ್ಥಿತಿ ಕಂಡು ಜನರು ಹೈರಾಣಾಗಿದ್ದಾರೆ.

    ಕನಕಗಿರಿ ಸಮೀಪದ ಹಿರೇಖೇಡ, ಚಿಕ್ಕಖೇಡ, ನಿರಲೂಟಿ, ಗುಡದೂರು, ಮಲ್ಲಿಗೆವಾಡ, ಹುಲಿಹೈದರ್, ಗೋಡಿನಾಳ, ಹೊಸಗುಡ್ಡ, ಹುಲಿಹೈದರ್, ಕಲಕೇರಿ ಗ್ರಾಮದಿಂದ ಜೀರಾಳ, ಚಿಕ್ಕಡಂಕನಕಲ್, ನವಲಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಗ್ರಾಮಗಳ ಹದಗೆಟ್ಟ ರಸ್ತೆಗಳ ಪಟ್ಟಿ ದೊರೆಯುತ್ತದೆ. ಬಿಜೆಪಿಯ ಬಸವರಾಜ ದಡೇಸುಗೂರು ಶಾಸಕರಾಗಿ ಆಯ್ಕೆಯಾಗಿ 2 ವರ್ಷ ಸಮೀಪಿಸುತ್ತಾ ಬಂದರೂ ರಸ್ತೆಗಳ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ಬಿಡುಗಡೆಗೊಳಿಸಿಲ್ಲ.

    ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಲೋಕೋಪಯೋಗಿ, ನೀರಾವರಿ, ಸಾರಿಗೆ ಸೇರಿದಂತೆ ನಾನಾ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಸನ್ಮಾನಿಸಿದ್ದು ಬಿಟ್ಟರೆ ಶಾಸಕರಿಂದ ನಯಾ ಪೈಸೆ ಬಿಡುಗಡೆಗೊಳಿಸುವ ಕೆಲಸ ಮಾತ್ರ ಆಗಿಲ್ಲ. ಈಗ ತಮ್ಮ ಆಡಳಿತ ಪಕ್ಷ ಇದ್ದರೂ ಸಹ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿಲ್ಲ. ಶಾಸಕರು ಹೊರ ಯೋಜನೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುತ್ತಿಲ್ಲ ಬದಲಾಗಿ ಈ ಹಿಂದೆ ಇದ್ದ ಸರ್ಕಾರದ ಕೆಲಸವನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

    ಕನಕಗಿರಿ ಭಾಗದ ಹಲವು ಗ್ರಾಮಗಳ ಮುಖ್ಯ ರಸ್ತೆಗಳ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ. ಹಿರೇಖೇಡ, ಗುಡದೂರು ಗ್ರಾಮದಿಂದ ಹುಲಿಹೈದರ್, ಗೋಡಿನಾಳ, ಜೀರಾಳ, ನವಲಿ, ಚಿಕ್ಕಡಂಕನಕಲ್, ಉಮಳಿಕಾಟಾಪುರ, ವಡಕಿ, ಚರ್ಚಿನಗುಡ್ಡತಾಂಡ ಸೇರಿದಂತೆ ಹಲವು ರಸ್ತೆಗಳಲ್ಲಿ ದೊಡ್ಡ, ದೊಡ್ಡ ಕಂದಕ ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿವೆ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಹೇಳತಿರದಂತಾಗಿದೆ. ಶಾಸಕ ಬಸವರಾಜ ದಡೇಸುಗೂರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ.

    ಇತ್ತ ಹಿರೇಖೇಡ, ನಿರರ್ಲೂಟಿ, ಚಿಕ್ಕಖೇಡ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಅಕ್ರಮ ಮರಳು ಲಾರಿ, ಟ್ರ್ಯಾಕ್ಟರ್ ಸಂಚಾರದಿಂದ ರಸ್ತೆ ಮತ್ತಷ್ಟು ಹಳ್ಳ ಹಿಡಿದಿದೆ. ಹಾಳಾಗಿರುವ ರಸ್ತೆಗಳಿಂದ ಕ್ಷೇತ್ರದ ನಾನಾ ಗ್ರಾಮೀಣ ಭಾಗಕ್ಕೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿವೆ.

    ಕಾಟಾಪುರದಿಂದ ಮಲ್ಲಿಗೆವಾಡಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುಡದೂರು ಗ್ರಾಮದಿಂದ ಗೋಡಿನಾಳ ಗ್ರಾಮಕ್ಕೆ ಬರುತ್ತಿದ್ದ ಬಸ್ ಮಾರ್ಗ ಬದಲಿಸಿದೆ. ಗುಡದೂರು ಗ್ರಾಮದಿಂದ ಹೊಸಗುಡ್ಡಕ್ಕೆ ಹಾಗೂ ಲಾಯದುಣಿಸಿ, ಕರಡಿಗುಡ್ಡ ಗ್ರಾಮದ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಗಂಗಾವತಿ, ಕನಕಗಿರಿಯ ಶಾಲಾ ಕಾಲೇಜಿಗೆ ತೆರಳಬೇಕಿರುವ ಕಾರಣ ಕಾಲ್ನಡಿಗೆ ಅಥವಾ ಖಾಸಗಿ ವಾಹನವನ್ನು ಅವಲಂಬಿಸಿದ್ದಾರೆ.

  • ಚಿಂತಾಮಣಿ ತಹಶೀಲ್ದಾರ್ ಹುಟ್ಟುಹಬ್ಬ – ಕಚೇರಿಗೆ ಬೀಗ ಜಡಿದು ಪಾರ್ಟಿಯಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರ್

    ಚಿಂತಾಮಣಿ ತಹಶೀಲ್ದಾರ್ ಹುಟ್ಟುಹಬ್ಬ – ಕಚೇರಿಗೆ ಬೀಗ ಜಡಿದು ಪಾರ್ಟಿಯಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರ್

    – ಕಚೇರಿ ಸಮಯದಲ್ಲಿ ಪಾರ್ಟಿ
    – ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಪರದಾಟ

    ಚಿಕ್ಕಬಳ್ಳಾಪುರ: ಸರ್ಕಾರದ ಸಂಬಳ ಪಡೆದು ಸಾರ್ವಜನಿಕರ ಕೆಲಸ ಮಾಡಬೇಕಾದ ಅಧಿಕಾರಿ, ಸಿಬ್ಬಂದಿ ಕಚೇರಿ ಸಮಯದಲ್ಲಿ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

    ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್ ಅವರು ಡಿ.6 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು ಸಿಬ್ಬಂದಿಗೆ ಊಟೋಪಚಾರ ಪಾರ್ಟಿ ವ್ಯವಸ್ಥೆ ಮಾಡದ್ದಕ್ಕೆ ಇಂದು ತಮ್ಮ ಹುಟ್ಟು ಹಬ್ಬದ ಸವಿನೆನಪಿಗಾಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿ ಸಿಬ್ಬಂದಿ ಸ್ಥಳೀಯ ವಿಲೇಜ್ ಅಕೌಂಟೆಂಟ್, ಪಿಡಿಓಗಳು ಸೇರಿದಂತೆ ಗ್ರಾಮಪಂಚಾಯತಿಗಳ ನೌಕರರಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದಾರೆ.

    ಚಿಂತಾಮಣಿ ನಗರ ಹೊರವಲಯದ ಪೆರಮಾಚನಹಳ್ಳಿ ಬಳಿಯ ನೇಚರ್ ಆರೋಮ ರೆಸ್ಟೋರೆಂಟ್ ನಲ್ಲಿ ಎಲ್ಲರಿಗೂ ತಹಶೀಲ್ದಾರ್ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಮಧ್ಯಾಹ್ನ ಊಟದ ಸಮಯದ ನಂತರ ಎಲ್ಲಾ ಸಿಬ್ಬಂದಿಗಳು ತಮ್ಮ ಕಚೇರಿಗಳಿಗೆ ಬೀಗ ಜಡಿದು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸಹಜವಾಗಿ ತಹಶೀಲ್ದಾರ್ ಕಚೇರಿಗೆ ಬಂದ ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳು ಆಗದೆ ಪರದಾಡಿದ್ದಾರೆ.

    ಈ ವಿಚಾರವನ್ನು ಸಾರ್ವಜನಿಕರು ಪಬ್ಲಿಕ್ ಟಿವಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಪರೀಶೀಲನೆ ನಡೆಸಿದಾಗ ತಾಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿ ಊಟೋಪಚಾರದಲ್ಲಿ ಭಾಗಿಯಾಗಿರೋದು ಖಾತ್ರಿಯಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿಶ್ವನಾಥ್, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಊಟೋಪಚಾರ ವ್ಯವಸ್ಥೆ ಮಾಡಿದ್ದೆವು. ಆದರೆ ಮಧ್ಯಾಹ್ನ ಊಟದ ಸಮಯದಲ್ಲಿ ಹೋಗಿ ಪುನಃ ಕಚೇರಿಗೆ ಹಾಜರಾಗಿದ್ದು, ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಕಚೇರಿಯ ಬಹುತೇಕ ಸಿಬ್ಬಂದಿ ಹಾಗೂ ಅಧಿಕಾರಿಗಳು ತಹಶೀಲ್ದಾರ್ ವಿಶ್ವನಾಥ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕೆ ದೂರದ ಊರಿನಿಂದ ಬಂದಿದ್ದ ಸಾರ್ವಜನಿಕರು ಪರದಾಡಿ ಹಿಡಿಶಾಪ ಹಾಕಿ ತೆರಳಿದ್ದಾರೆ.

  • ಕಾರೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ – ಯುವಕನನ್ನು ಹಿಡಿದ ಪೊಲೀಸರು

    ಕಾರೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ – ಯುವಕನನ್ನು ಹಿಡಿದ ಪೊಲೀಸರು

    – ಮದ್ಯದ ಅಮಲಿನಲ್ಲಿದ್ದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ

    ಮಂಗಳೂರು: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಯುವಕನೋರ್ವ ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಘಟನೆ ಮಂಗಳೂರಿನ ಸುರತ್ಕಲ್ ಸಮೀಪ ನಡೆದಿದೆ.

    ಸುರತ್ಕಲ್ ಪರಿಸರದಲ್ಲಿ ಕಾರೊಂದರ ಮುಂದಿನ ಸೀಟ್ ನಲ್ಲಿ ಯುವತಿಯೋರ್ವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಳು. ಯುವಕನೋರ್ವ ಗಾಬರಿಯಿಂದ ವೇಗವಾಗಿ ಕಾರು ಚಲಾಯಿಸುತ್ತಾ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಈ ಕಾರನ್ನು ಇತರೆ ವಾಹನ ಸವಾರರು ಹಿಂಬಾಲಿಸಿ ಸುರತ್ಕಲ್ ನ ಕುಳಾಯಿ ಎಂಬಲ್ಲಿ ತಡೆದು ನಿಲ್ಲಿಸಿದ್ದಾರೆ.

    ಆತನಲ್ಲಿ ಪ್ರಶ್ನಿಸುವಾಗ ಈಕೆ ತನ್ನ ಗೆಳತಿ ಎಂದಿದ್ದು ಆಕೆಯ ಪ್ರಜ್ಞಾಹೀನ ಸ್ಥಿತಿಗೆ ಕಾರಣ ಏನು ಎಂಬುದನ್ನು ಸರಿಯಾಗಿ ಹೇಳದೆ ಚಡಪಡಿಸುತ್ತಿದ್ದ. ಸ್ಥಳೀಯರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಂತೆ ಯುವಕ ಎಲ್ಲರ ಎದುರಲ್ಲೇ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದ. ಯುವತಿ ಆಗಲೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದುದ್ದರಿಂದ ಸ್ಥಳೀಯರು ಆತನ ಕಾರು ನಂಬರ್ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕಾರನ್ನು ದಾರಿ ಮಧ್ಯೆ ತಡೆದು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಬಾಯಿಬಿಟ್ಟಿದ್ದು, ಯುವತಿ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು ತನ್ನ ಗೆಳತಿ ಎಂದು ಹೇಳಿದ್ದ. ಜೊತೆಗೆ ಸ್ನೇಹಿತರೆಲ್ಲ ಸೇರಿ ಸುರತ್ಕಲ್ ಬೀಚ್ ನಲ್ಲಿ ಪಾರ್ಟಿ ಮಾಡಿದ್ದು, ಈ ಸಂದರ್ಭ ಯುವತಿ ಮದ್ಯಪಾನ ಸೇವಿಸಿದ್ದು ಅದರ ಪರಿಣಾಮ ಆಕೆ ಪ್ರಜ್ಞೆ ಇಲ್ಲದಂತಾಗಿದೆ. ನಾನು ಆಕೆಯನ್ನು ಆಕೆಯ ಮನೆಗೆ ಬಿಡಲು ಹೋಗುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು, ಆಕೆಗೆ ಪ್ರಜ್ಞೆ ಬಂದ ಬಳಿಕ ಇಬ್ಬರನ್ನು ಕಳಿಸಿದ್ದಾರೆ.

  • ಸಾರ್ವಜನಿಕರು ಅಧಿಕಾರಿಗಳ ಭೇಟಿಗೆ ಸಮಯ ನಿಗದಿ

    ಸಾರ್ವಜನಿಕರು ಅಧಿಕಾರಿಗಳ ಭೇಟಿಗೆ ಸಮಯ ನಿಗದಿ

    ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

    ಅಧಿಕಾರಿಗಳು ಯಾರೂ ಸರಿಯಾಗಿ ಭೇಟಿಯಾಗಲು ಸಿಗುವುದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

    ರಜೆಯನ್ನ ಹೊರತುಪಡಿಸಿ ಪ್ರತಿದಿನ ಸಾರ್ವಜನಿಕರು ಅಧಿಕಾರಿಗಳನ್ನು ಮಧ್ಯಾಹ್ನ 3.30 ರಿಂದ 5.30 ವರೆಗೆ ಭೇಟಿಯಾಗಬಹುದು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಡಿಸಿ ಕಚೇರಿ, ಬಿಬಿಎಂಪಿ ಸೇರಿದಂತೆ ಎಲ್ಲ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೂ ಈ ಆದೇಶ ಅನ್ವಯವಾಗಲಿದೆ. ಹಿಂದೆಯೂ ಈ ಆದೇಶ ಇತ್ತು. ಆದರೆ ಅದು ಸರಿಯಾಗಿ ಪಾಲನೆಯಾಗದ ಕಾರಣ ಸರ್ಕಾರ ಹೊಸ ಆದೇಶ ಹೊರಡಿಸಿದೆ.

    ಹೊಸ ಅದೇಶದ ಪ್ರಕಾರ 3.30 ರಿಂದ 5.30 ವರೆಗೆ ಸಾರ್ವಜನಿಕರು ಅಧಿಕಾರಿಗಳನ್ನ ಭೇಟಿಯಾಗಬಹುದು. ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿರುವ ಸಮಯದಲ್ಲಿ ಅಧಿಕಾರಿಗಳು ಯಾವುದೇ ಸಭೆಗಳನ್ನ ನಡೆಸಬಾರದು. ನಿಗದಿ ಮಾಡಿದ ಸಮಯದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಮಯಾವಕಾಶ ನೀಡಬೇಕು ಎಂದು ತಾಕೀತು ಮಾಡಲಾಗಿದೆ.

    ಒಂದು ವೇಳೆ ಅಧಿಕಾರಿಗಳು ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಸರ್ಕಾರದ ಹೊಸ ಕಟ್ಟುನಿಟ್ಟಿನ ಆದೇಶದಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ- ತೆಲಂಗಾಣ ಪೊಲೀಸ್ರಿಗೆ ಹೆಚ್ಚಾಯ್ತು ಡಿಮ್ಯಾಂಡ್

    ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ- ತೆಲಂಗಾಣ ಪೊಲೀಸ್ರಿಗೆ ಹೆಚ್ಚಾಯ್ತು ಡಿಮ್ಯಾಂಡ್

    ಹೈದರಾಬಾದ್: ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಕಾಮುಕರನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹುಟ್ಟಡಗಿಸಿದ ಬೆನ್ನಲ್ಲೇ ತೆಲಂಗಾಣ ಪೊಲೀಸರಿಗೆ ಬೇಡಿಕೆ ಹೆಚ್ಚಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಹೀಗೆ ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ ಎಂದು ಪೊಲೀಸರ ಮುಂದೆ ತೆಲಂಗಾಣದ ಜನರು ಬೇಡಿಕೆ ಇಟ್ಟಿದ್ದಾರೆ.

    ದಿಶಾ ಪ್ರಕರಣದಲ್ಲಿ ಸೈಬರಾಬಾದ್ ಪೊಲೀಸರು ಕೈಗೊಂಡ ಕ್ರಮಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, ತೆಲಂಗಾಣದಲ್ಲಿ ಇತ್ತೀಚೆಗೆ ಘಟಿಸಿದ್ದ ಇನ್ನೂ ಮೂರು ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಲು ಪೊಲೀಸರು ಮುಂದಾಗಬೇಕು. ಈ ಮೂಲಕ ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೈದ್ರಾಬಾದ್ ರೇಪಿಸ್ಟ್‌ಗಳನ್ನು ಎನ್‍ಕೌಂಟರ್ ಮಾಡಿದಂತೆ ಆರೋಪಿಗಳಿಗೆ ಶಿಕ್ಷೆಯಾಗಲಿ: ಉನ್ನಾವೋ ಸಂತ್ರಸ್ತೆಯ ತಂದೆ

    ವಾರಂಗಲ್ ಜಿಲ್ಲೆಯ ಹನಮಕೊಂಡ ಗ್ರಾಮದಲ್ಲಿನ ಯುವತಿ, ಯಾದಾದ್ರಿ ಜಿಲ್ಲೆಯ ಹಾಜಿಪುರದ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕುಮುರಾಮ್ ಭೀಮ್ ಜಿಲ್ಲೆಯ ಅಸಿಫಾಬಾದ್‍ನಲ್ಲಿ ನಡೆದ ದಲಿತ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಈ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಮಾಂಧರನ್ನು ಪೊಲೀಸರು ಎನ್‍ಕೌಂಟರ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದನ್ನೂ ಓದಿ: ಕಾಮುಕರಿಗೆ ಗುಂಡೇಟು – ಇಂದು ಬೆಳಗ್ಗೆ ಎನ್‍ಕೌಂಟರ್ ನಡೆದಿದ್ದು ಹೇಗೆ?

    ಈ ಮೇಲಿನ ಮೂರು ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ದಿಶಾ ಪ್ರಕರಣದಂತೆ ಈ ಮೂರು ಪ್ರಕರಣದ ಆರೋಪಿಗಳ ಮೇಲೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದರೆ ಪೊಲೀಸರು ಸಂತ್ರಸ್ತೆಯರ ಆರ್ಥಿಕ ಪರಿಸ್ಥಿತಿ ಹಾಗೂ ಜಾತಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿದೆ. ದಯವಿಟ್ಟು ಪೊಲೀಸರು ಯಾವುದೇ ಭೇದಭಾವ ತೋರದೆ ಈ ಮೂರು ಪ್ರಕರಣದ ಆರೋಪಿಗಳನ್ನು ಗುಂಡಿಟ್ಟು ಹತ್ಯೆ ಮಾಡಿ ಎಂದು ಜನರು ಆಗ್ರಹಿಸಿದ್ದಾರೆ.

  • ಅತ್ಯಾಚಾರಿಗಳ ಎನ್‍ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಳ್ಳಾಟ

    ಅತ್ಯಾಚಾರಿಗಳ ಎನ್‍ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಳ್ಳಾಟ

    ತುಮಕೂರು: ಹೈದರಾಬಾದ್ ದಿಶಾ ಪ್ರಕರಣ ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ಎನ್‍ಕೌಂಟರ್ ಮಾಡಿರುವ ಹಿನ್ನೆಲೆ ಸಂಭ್ರಮಾಚರಣೆ ವೇಳೆ ಕಳ್ಳಾಟವಾಡಿದ ಕಾಮುಕನಿಗೆ ಸಖತ್ ಗೂಸ ಬಿದ್ದಿದೆ.

    ಇಡೀ ದೇಶವೇ ಹೈದರಾಬಾದ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದೆ. ಅತ್ಯಚಾರಿಗಳನ್ನು ಎನ್‍ಕೌಂಟರ್ ಮಾಡಿದ ಖುಷಿಯಲ್ಲಿ ತುಮಕೂರಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ. ತಿಪಟೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ವಿದ್ಯಾರ್ಥಿನಿಯರು, ಸಾರ್ವಜನಿಕರು ಸಿಹಿ ಹಂಚಿ ಸಂತೋಷಪಟ್ಟಿದ್ದಾರೆ. ಈ ನಡುವೆ ಹುಡಿಗಿಯರನ್ನ ಚುಡಾಯಿಸಿದ ವ್ಯಕ್ತಿಗೆ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಕಾಮುಕರಿಗೆ ಪೊಲೀಸರು ಎನ್‍ಕೌಂಟರ್ ಮಾಡಿ ತಕ್ಕಶಾಸ್ತಿ ಮಾಡಿದ್ದಾರೆ ಎಂದು ಜನರು ಖುಷಿಪಟ್ಟು ಸಂಭ್ರಮಿಸುತ್ತಿದ್ದಾಗಲೇ ಈ ಘಟನೆ ನಡೆದಿರುವುದು ವಿರ್ಪಯಾಸ ಎಂದು ಸಾರ್ವಜನಿಕರು ಬೇಸರ ವ್ಯಕಪಡಿಸಿದ್ದಾರೆ.

    ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ.