Tag: ಸಾರ್ವಜನಿಕರು

  • ಚಾರ್ಮಾಡಿ ಸೌಂದರ್ಯಕ್ಕೆ ಜರ್ಮನ್ ಪ್ರಜೆ ಫಿದಾ

    ಚಾರ್ಮಾಡಿ ಸೌಂದರ್ಯಕ್ಕೆ ಜರ್ಮನ್ ಪ್ರಜೆ ಫಿದಾ

    ಚಿಕ್ಕಮಗಳೂರು: ಜರ್ಮನ್ ದೇಶದ ವ್ಯಕ್ತಿ ಭಾರತಕ್ಕೆ ಆಗಮಿಸಿದ್ದು ಮೂರು ತಿಂಗಳುಗಳ ಕಾಲ ದೇಶದಾದ್ಯಂತ ಸಂಚಾರ ಮಾಡಲು ಮುಂದಾಗಿದ್ದಾರೆ. ಹೀಗೆ ಚಿಕ್ಕಮಗಳೂರಿಗೆ ಆಗಮಿಸಿದ ಪ್ರವಾಸಿಗ ಚಾರ್ಮಾಡಿ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ.

    ದೆಹಲಿಯಿಂದ ಬೆಂಗಳೂರಿಗೆ ಬಂದು ಸ್ನೇಹಿತನ ಬೈಕ್‍ನಲ್ಲಿ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ದೇಶ ಹಾಗೂ ರಾಜ್ಯದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಭಾನುವಾರ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಆಗಮಿಸಿದ್ದರು. ಜರ್ಮನಿಯಲ್ಲಿ ಎಂಜಿನಿಯರ್ ಆಗಿರೋ ತೌಬಾ ಕೊಟ್ಟಿಗೆಹಾರದಲ್ಲಿ ಬೈಕ್ ನಿಲ್ಲಿಸಿ ಹೊಟೇಲ್‍ನಲ್ಲಿ ತಿಂಡಿ ಸವಿದಿದ್ದಾರೆ. ಈ ವೇಳೆ ಸ್ಥಳಿಯರೊಂದಿಗೆ ಮಾತನಾಡಿದ ಅವರು ಚಾರ್ಮಾಡಿಯ ಸೌಂದರ್ಯಕ್ಕೆ ಮನಸೋತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

    ಭಾರತ ಶಾಂತಿಪ್ರಿಯ ಹಾಗೂ ಆತ್ಮೀಯತೆಯ ಗುಣ ಹೊಂದಿರೋ ದೇಶ. ಹೀಗಾಗಿ ನಾನು ಪ್ರತಿ ವರ್ಷ ಭಾರತಕ್ಕೆ ಬಂದು ಬೈಕ್‍ನಲ್ಲಿಯೇ ದೇಶದ ಪ್ರಮುಖ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಇಲ್ಲಿನ ಸೌಂದರ್ಯವನ್ನ ಸವಿಯುತ್ತೇನೆ ಎಂದಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷವೂ ಸಹ ಮುರುಡೇಶ್ವರ, ಕೊಲ್ಲೂರು, ಗೋಕರ್ಣ, ಶೃಂಗೇರಿ, ಧರ್ಮಸ್ಥಳ ಹಾಗೂ ಹೊರನಾಡಿಗೆ ಭೇಟಿ ನೀಡಲಿದ್ದೇನೆ. ಬಳಿಕ ಬೇಲೂರು-ಹಳೇಬೀಡನ್ನ ನೋಡಿಕೊಂಡು ಮಡಿಕೇರಿಗೆ ಹೋಗುವುದಾಗಿ ವಿದೇಶಿ ಪ್ರಜೆ ತಿಳಿಸಿದರು. ಭಾರತದ ಸಂಸ್ಕೃತಿ ಹಾಗೂ ಸಂಸ್ಕೃತಿಯುತ ಬದುಕು ನಮ್ಮನ್ನ ಆಕರ್ಷಿಸಿದೆ ಎಂದು ಈ ಪುಣ್ಯಭೂಮಿಯನ್ನ ಹಾಡಿ ಹೊಗಳಿದ್ದಾರೆ. ಸ್ಥಳಿಯರು ಕೂಡ ಜರ್ಮನ್ ಪ್ರಜೆ ಕಂಡು ಕುತೂಹಲಭರಿತರಾಗಿ ವೀಕ್ಷಿಸಿ ಮಾತನಾಡಿಸಿದ್ದಾರೆ.

  • ಪತಿಯ ಜೊತೆ ಜಗಳವಾಡಿ ಮೋರಿಯಲ್ಲಿ ಮಗುವನ್ನು ಬಿಸಾಡಿದ ತಾಯಿ

    ಪತಿಯ ಜೊತೆ ಜಗಳವಾಡಿ ಮೋರಿಯಲ್ಲಿ ಮಗುವನ್ನು ಬಿಸಾಡಿದ ತಾಯಿ

    – ಮಗುವನ್ನು ಹುಡುಕಿಕೊಂಡ ಬಂದ ತಂದೆಗೆ ತರಾಟೆ

    ಮೈಸೂರು: ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಇದೆ. ಅದೇ ರೀತಿ ಮೈಸೂರಿನಲ್ಲಿ ನಡೆದ ಒಂದು ಘಟನೆಯಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಮೋರಿ ಪಾಲಾಗಿದೆ.

    ಪತಿ-ಪತ್ನಿ ಜಗಳ ಮಗುವನ್ನು ಮೋರಿಗೆ ಬಿಸಾಡೋ ಹಂತಕ್ಕೆ ಬಂದಿದೆ. 6 ತಿಂಗಳ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಮೋರಿಗೆ ಹಾಕಿದ್ದಾಳೆ. ಒಂದು ದಿನದ ನಂತರ ಇದು ನನ್ನ ಮಗು ಕೊಡಿ ಎಂದು ಬಂದ ತಂದೆಗೆ ಸ್ಥಳೀಯರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ರೇಣುಕಾರಾಧ್ಯ ಮತ್ತು ಪತ್ನಿ ರಾಣಿ ಮನೆಯಲ್ಲಿ ಜಗಳವಾಡಿಕೊಂಡಿದ್ದಾರೆ. ಹೆಣ್ಣು ಮಗು ಆಗಿದೆ ಎಂಬ ಕೋಪದಲ್ಲಿ ಜಗಳ ಜೋರಾಗಿದೆ. ಇದೇ ಕೋಪದಲ್ಲಿದ್ದ ಹೆಂಡತಿ, ಮಗುವನ್ನ ತಂದು ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ದೊಡ್ಡ ಮೋರಿಗೆ ಬಿಸಾಡಿದ್ದಾಳೆ. ಈ ವೇಳೆ ಮೋರಿಯಲ್ಲಿ ಬಿದ್ದ ಪುಟ್ಟ ಕಂದಮ್ಮನ ಕಾಲಿಗೆ ಗಾಯವಾಗಿ, ಮಗು ಚಿರಾಡಿದೆ. ಈ ವೇಳೆ ಮಗುವನ್ನು ಕಂಡ ಸ್ಥಳೀಯರು ಮೋರಿಗೆ ಇಳಿದು ಮಗುವನ್ನು ಮೇಲೆತ್ತಿ, ಸ್ನಾನ ಮಾಡಿಸಿದ್ದಾರೆ. ಮಗು ಯಾರದು ಎಂದು ಕೇಳಿದ್ರು, ಅಕ್ಕಪಕ್ಕದವರಿಗೆ ವಿಚಾರಿಸಿದ್ರು ಯಾರಿಗು ಗೊತ್ತಾಗಿಲ್ಲ. ಈ ವೇಳೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಬಳಿಕ ಪೊಲೀಸರ ಜೊತೆಯಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಕ್ಕಳ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.

    ಮಗುವನ್ನು ಮೋರಿಗೆ ಹಾಕಿದ ತಾಯಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳು ಎನ್ನಲಾಗಿದೆ. ಹೀಗಂತಾ ಪತಿ ನನ್ನ ಮಗು ಬೇಕೆಂದು ಬಂದ ವೇಳೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುವ ವೇಳೆ ತಿಳಿಸಿದ್ದಾನೆ. ಮಾತ್ರವಲ್ಲದೆ, ಕೆ.ಆರ್ ಆಸ್ಪತ್ರೆಯಲ್ಲಿ ಪತಿ-ಪತ್ನಿಗೆ ಕೌನ್ಸಿಲ್ ಕೊಡಲಾಗುತ್ತಿದ್ದು, ಮಾನಸಿಕೆ ಖಿನ್ನತೆಯಿಂದ ಮಗುವಿನ ತಾಯಿ ಹೀಗೆ ಮಾಡಿದ್ದಾಳೆ ಎಂಬುದು ಪತಿಯ ವಾದ. ಆದರೆ ಮಗುವನ್ನು ಕಾಪಾಡಿದವರು ಪೋಷಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಗೆ ತಕ್ಕಂತೆ ಮೈಸೂರಿನಲ್ಲಿ ಘಟನೆ ನಡೆದಿದ್ದು, ಪೋಷಕರಿಬ್ಬರ ವಿರುದ್ಧವೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಆದರೆ ಇದೀಗ ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತಿ-ಪತ್ನಿಯ ಕೌನ್ಸಿಲ್ ರಿಪೋರ್ಟ್ ಬಂದ ಬಳಿಕ ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.

  • ನಲ್‍ಪಾಡ್ ಕೇಸಿನಲ್ಲಿದ್ದ ಆತುರ ಬಳ್ಳಾರಿ ಕೇಸಿನಲ್ಲಿ ಯಾಕಿಲ್ಲ? ಸಾರ್ವಜನಿಕರಿಂದ ಪೊಲೀಸ್ರಿಗೆ ಪ್ರಶ್ನೆ

    ನಲ್‍ಪಾಡ್ ಕೇಸಿನಲ್ಲಿದ್ದ ಆತುರ ಬಳ್ಳಾರಿ ಕೇಸಿನಲ್ಲಿ ಯಾಕಿಲ್ಲ? ಸಾರ್ವಜನಿಕರಿಂದ ಪೊಲೀಸ್ರಿಗೆ ಪ್ರಶ್ನೆ

    ಬೆಂಗಳೂರು: ವಿವಿಐಪಿ ಮಕ್ಕಳು ದುಡ್ಡಿನ ದೌಲತ್ತಿನಲ್ಲಿ ಮಾಡಿದ್ದನ್ನು ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಸಾರ್ವಜನಿಕರ ಪ್ರಶ್ನೆಯ ಬಳಿಕ ಇಡೀ ಪ್ರಕರಣಕ್ಕೆ ತಿರುವು ಸಿಗುತ್ತೆ. ಅದೂ ಒಂದೇ ದಿನ ಒಂದೇ ಸಮಯದಲ್ಲಿ ಎರಡು ಘಟನೆಗಳು ನಡೆದು ಹೋಗಿದ್ದು, ಬೆಂಗಳೂರು ಮತ್ತು ಬಳ್ಳಾರಿ ಅಪಘಾತಗಳಾಗಿವೆ. ಎರಡು ಅಪಫಾತದಲ್ಲಿ ವಿವಿಐಪಿ ಮಕ್ಕಳೇ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಬೆಂಗಳೂರಿನ ನಲ್‍ಪಾಡ್ ಪ್ರಕರಣದಲ್ಲಿ ಇದ್ದ ಆತುರ ಮತ್ತು ತನಿಖೆಯ ಚುರುಕು ಬಳ್ಳಾರಿ ಪ್ರಕರಣದಲ್ಲಿ ಏಕಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ನಲಾಪಾಡ್ ಕೂಡ ಅಪಘಾತ ಮಾಡಿ ಬೇರೊಂದು ಕಾರಿನಲ್ಲಿ ಓಡಿ ಹೋಗಿದ್ದರು. ಈ ಬಗ್ಗೆ ಅನುಮಾನ ಬಂದು ಪ್ರಶ್ನೆ ಕೇಳಿದರೆ ನನ್ನ ಹತ್ತಿರ ಅಂತಹ ಕಾರು ಇಲ್ಲ. ನಾನು ಘಟನೆ ನಡೆದ ಜಾಗದಲ್ಲಿ ಇರಲಿಲ್ಲ ಎಂದು ಹಾರಿಕೆ ಉತ್ತರ ಕೊಟ್ಟಿದ್ದರು. ಆದರೆ ಪೊಲೀಸರು ತನಿಖೆಯನ್ನು ನಡೆಸಿ ವಿಚಾರಣೆಗೆ ಕರೆದಾಗ ನಾನು ಅಲ್ಲಿ ಇದ್ದೇ ಬೇರೆ ಕಾರಿನಲ್ಲಿ ಇದ್ದೇ ಎಂದು ಹೇಳಿಕೆ ಕೊಟ್ಟಿದ್ದರು.

    ನಲ್‍ಪಾಡ್ ಪ್ರಕರಣದಲ್ಲಿ ಪೊಲೀಸರು ತಾಂತ್ರಿಕ ಸಾಕ್ಷ್ಯವನ್ನು ಕಲೆ ಹಾಕಿ ವಿಚಾರಣೆಗೆ ಕರೆದಿದ್ದೇವೆ ಎಂದಿದ್ದರು. ಆದರೆ ಬಳ್ಳಾರಿಯ ಪ್ರಕರಣ ನಡೆದು ಒಂದು ವಾರ ಆಗುತ್ತಾ ಬಂದರು ಕೂಡ ತನಿಖೆಯ ಫಲಿತಾಂಶ ಶೂನ್ಯ ಅಂತ ಪೊಲೀಸರೇ ಒಪ್ಪಿಕೊಳ್ಳುತ್ತಿದ್ದಾರೆ. ತಾಂತ್ರಿಕ ತನಿಖೆಯನ್ನಾಗಲಿ ಮಾಹಿತಿಯನ್ನಾಗಲಿ ಕಲೆಹಾಕಿಲ್ಲ ಅಂತಲೇ ಕಾಲ ಕಳೆಯುತ್ತಿರುವುದು ಸಾರ್ವಜನಿಕರಿಗೆ ಅನುಮಾನ ಮೂಡಿಸಿದೆ. ಆದ್ದರಿಂದ ಒಂದೊಂದು ಪ್ರಕರಣವನ್ನು ಒಂದೊಂದು ರೀತಿ ತನಿಖೆ ಮಾಡುತ್ತಿದ್ದೀರಾ ಎಂದು ಆಕೋಶ ವ್ಯಕ್ತಪಡಿಸಿದ್ದಾರೆ.

  • ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ರಕ್ಷಿಸಿದ ಸಾರ್ವಜನಿಕರು

    ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ರಕ್ಷಿಸಿದ ಸಾರ್ವಜನಿಕರು

    ಮಡಿಕೇರಿ: ಆಹಾರ ಅರಸಿ ಕಾಡಿನಿಂದ ನಗರಕ್ಕೆ ಬಂದು ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ ಘಟನೆ ಮಂಜಿನನಗರಿ ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನಸುಕಿನ ಜಾವ ತಂತಿ ಬೇಲಿಗೆ ಸಿಲುಕಿಕೊಂಡು ಕಡವೆ ನರಳುತ್ತಿತ್ತು. ಇದನ್ನು ಕಂಡ ಸಾರ್ವಜನಿಕರು ಕಡವೆಯನ್ನು ರಕ್ಷಣೆ ಮಾಡಲು ಮುಂದಾದರು. ಆದರೆ ಕಡವೆ ಹತ್ತಿರ ಹೋಗುವುದಕ್ಕೆ ಭಯ ಪಡುತ್ತಿದ್ದ ಸಾರ್ವಜನಿಕರು ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

    ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಡವೆಯನ್ನು ತಂತಿ ಬೇಲಿಯಿಂದ ರಕ್ಷಣೆ ಮಾಡಿದರು. ಬಳಿಕ ಹಗ್ಗದ ಮೂಲಕ ಬೇರೆ ಕಡೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಗಾಬರಿಗೊಂಡ ಕಡವೆ ಜಿಲ್ಲಾ ಕ್ರೀಡಾಂಗಣ ಇರುವ ಮನೆಯ ಮೇಲೆ ಹಾರಿದ ಪರಿಣಾಮ ಮನೆಯ ಸೀಟ್ ಮುರಿದುಹೋಗಿದೆ.

    ಅಲ್ಲದೇ ಪಕ್ಕದ ಮನೆಯ ತಡೆಗೋಡೆಗೂ ಹಾನಿಯಾಗಿದೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾಲ ಶ್ರಮಪಟ್ಟು ಕಡವೆಯನ್ನು ಅರಣ್ಯ ಇಲಾಖೆಗೆ ಕರೆತಂದರು. ಅಲ್ಲದೆ ಗಾಯಗೊಂಡಿದ ಕಡವೆಗೆ ಚಿಕಿತ್ಸೆ ನೀಡಿ ನಂತರ ದುಭಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬಂದರು.

  • ಮಂಗಳೂರು ಗೋಲಿಬಾರ್ – ಮ್ಯಾಜಿಸ್ಟ್ರೇಟ್ ತನಿಖೆ ನಿರ್ಣಾಯಕ ಹಂತಕ್ಕೆ

    ಮಂಗಳೂರು ಗೋಲಿಬಾರ್ – ಮ್ಯಾಜಿಸ್ಟ್ರೇಟ್ ತನಿಖೆ ನಿರ್ಣಾಯಕ ಹಂತಕ್ಕೆ

    ಮಂಗಳೂರು: ಡಿಸೆಂಬರ್19 ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣ ತನಿಖೆ ವೇಗ ಪಡೆದಿದೆ. ಮ್ಯಾಜಿಸ್ಟ್ರೇಟ್ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಈವರೆಗೆ 201 ಮಂದಿಯ ಸಾಕ್ಷ್ಯ ನುಡಿದಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯಾಗುತ್ತಿದ್ದು, ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

    ಒಟ್ಟು ಎರಡು ಬಾರಿ ಸಾರ್ವಜನಿಕರಿಗೆ ಸಾಕ್ಷ್ಯ ನುಡಿಯಲು ಅವಕಾಶ ನೀಡಿದ್ದು, ಇಂದು ಕೂಡಾ 75 ಕ್ಕೂ ಹೆಚ್ಚು ಮಂದಿ ತನಿಖಾಧಿಕಾರಿಗಳ ಮುಂದೆ ಸಾಕ್ಷ್ಯ ನುಡಿದಿದ್ದಾರೆ. ಫೆಬ್ರವರಿ 13 ರಂದು ಮತ್ತೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಸಾಕ್ಷ್ಯ ಜೊತೆಗೆ ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ನೀಡುವಂತೆ ಮ್ಯಾಜಿಸ್ಟ್ರೀಯಲ್ ಜಗದೀಶ್ ಮನವಿ ಮಾಡಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿಎಸ್ ಹರ್ಷರವರಿಗೂ ನೋಟಿಸ್ ನೀಡಲಾಗಿದ್ದು, ಪೊಲೀಸರ ಬಳಿ ಇರುವ ವಿಡಿಯೋವನ್ನೂ ಫೆಬ್ರವರಿ 13 ರಂದು ಒಪ್ಪಿಸುವಂತೆ ಸೂಚನೆ ನೀಡಲಾಗಿದೆ.

    ಈ ನಡುವೆ ತನಿಖೆಯಲ್ಲಿ ಪೊಲೀಸ್ ಹಸ್ತಕ್ಷೇಪವಾಗುತ್ತಿದೆ ಎಂದು ಸಾಕ್ಷ್ಯ ನುಡಿಯಲು ಬಂದವರು ಆರೋಪಿಸಿದ್ದಾರೆ. ಈವರೆಗೆ ಒಟ್ಟು 30 ಮಂದಿಯನ್ನು ಬಂಧನ ಮಾಡಲಾಗಿದ್ದು, ಜಾಮೀನು ಸಿಗದಂತೆ ಪೊಲೀಸರು ವರ್ತಿಸುತ್ತಿರೋದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಾಪರಾಧಿಗಳಿಗೆ ಪ್ರಕರಣದಲ್ಲಿ ಶಿಕ್ಷೆಯಾಗುತ್ತಿದ್ದು, ಕೇಸ್ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

    ಈ ಮಧ್ಯೆ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ. ಗೋಲಿಬಾರ್ ಜಸ್ಟಿಸ್ ಫಾರಂ, ಗೋಲಿಬಾರ್ ನಡೆಸಿದ ತಪ್ಪಿತಸ್ಥ ಪೊಲೀಸರ ಮೇಲೆ ಕೊಲೆ ಪ್ರಕರಣ ಮತ್ತು ಲಾಠಿ ಚಾರ್ಜ್ ನಡೆಸಿದ ಪೊಲೀಸರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ. ಇದಲ್ಲದೆ ಗೋಲಿಬಾರ್ ನಲ್ಲಿ ಸಾವಿಗೀಡಾದ ಅಬ್ದುಲ್ ಜಲೀಲ್ ಮತ್ತು ನೌಸೀನ್ ಮೇಲಿನ ಪ್ರಕರಣ ಕೈಬಿಡಬೇಕು, ಜಲೀಲ್ ಮತ್ತು ನೌಸೀಬ್ ಕುಟುಂಬಕ್ಕೆ ತಲಾ 25 ಲಕ್ಷ ಮತ್ತು ಗಂಭೀರ ಗಾಯಗೊಂಡವರಿಗೆ 15 ಲಕ್ಷ ಪರಿಹಾರ ನೀಡಬೇಕೆಂದು ವೇದಿಕೆ ಆಗ್ರಹಿಸಿದೆ. ತನಿಖೆಯ ನೆಪದಲ್ಲಿ, ಘಟನಾ ಸ್ಥಳದಲ್ಲಿದ್ದ ಕೇರಳ ನಾಗರಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದ್ದು, ಪೊಲೀಸರು ತಕ್ಷಣ ಈ ಕ್ರಮವನ್ನು ನಿಲ್ಲಿಸಬೇಕೆಂದು ಗೋಲಿಬಾರ್ ಜಸ್ಟಿಸ್ ಫಾರಂ ಒತ್ತಾಯಿಸಿದೆ.

    ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಪ್ರಕರಣ ಮ್ಯಾಜಿಸ್ಟ್ರೇಟ್ ತನಿಖೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಪೊಲೀಸರ ಮೇಲೆ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿದ್ದು, ಕಾನೂನು ಹೋರಾಟದಲ್ಲಿ ತಪ್ಪು ಒಪ್ಪುಗಳು ನಿರ್ಣಯವಾಗಲಿದೆ.

  • ಕರಾವಳಿಯಲ್ಲಿ ಕಂಬಳ ಅಬ್ಬರ – ಜಾನಪದ ಕ್ರೀಡೆ ಕಣ್ತುಂಬಿಕೊಂಡ ಮಂಗ್ಳೂರಿಗರು

    ಕರಾವಳಿಯಲ್ಲಿ ಕಂಬಳ ಅಬ್ಬರ – ಜಾನಪದ ಕ್ರೀಡೆ ಕಣ್ತುಂಬಿಕೊಂಡ ಮಂಗ್ಳೂರಿಗರು

    ಮಂಗಳೂರು: ಕಂಬಳ ಕರಾವಳಿಯ ಜಾನಪದ ಕ್ರೀಡೆಯಾಗಿದ್ದು, ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಜ್ ಬೇರೆಲ್ಲೂ ಕಾಣಸಿಗದು. ಆದರೆ ನಗರ ಬೆಳೆಯುತ್ತಿದ್ದಂತೆ ಕಂಬಳದಂತಹ ಹಳ್ಳಿ ಸೊಗಡಿನ ಆಚರಣೆಗಳು ನಗರ ಪ್ರದೇಶದ ಜನತೆಯಿಂದ ದೂರವಾಗಿತ್ತು. ಆದರೆ ಈಗ ಅಂತಹ ಭಾವನೆಯನ್ನು ದೂರ ಮಾಡುವ ಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ.

    ನಗರದ ಜನರಿಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಅರಿವು ಮೂಡಿಸಲು, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರು ನಗರದ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಕಂಬಳ ಏರ್ಪಡಿಸಲಾಗಿತ್ತು. ಕೃತಕವಾಗಿ ರೂಪಿಸಿದ ಕಂಬಳದ ಕರೆಯಲ್ಲಿ ಓಟದ ಕೋಣಗಳು ಜನರಲ್ಲಿ ಆಟದ ರಂಗನ್ನು ಮೂಡಿಸಿದ್ದವು.

    ಸಾಮಾನ್ಯವಾಗಿ ಕಂಬಳ ಹಳ್ಳಿಗಳಲ್ಲಿ ಮಾತ್ರ ನಡೆಯುತ್ತೆ ಎನ್ನುವಂತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ರಾಮ-ಲಕ್ಷ್ಮಣ ಮಂಗಳೂರು ಕಂಬಳೋತ್ಸವ ನಡೆಸಲಾಗುತ್ತಿದೆ. ಕ್ಯಾಪ್ಟನ್ ಬೃಜೇಶ್ ಚೌಟ ನೇತ್ರತ್ವದಲ್ಲಿ ಕಂಬಳ ನಡೆದಿದ್ದು, ಮಣ್ಣಿನ ಆಟವನ್ನು ನೋಡಿ ನಗರದ ಜನ ಸಂಭ್ರಮ ಪಡುವಂತೆ ಕಂಬಳವನ್ನು ಆಯೋಜಿಸಲಾಗಿತ್ತು.

    ಈ ಕಂಬಳ ಯಾವುದೇ ಕ್ರಿಕೆಟ್ ಆಟಕ್ಕೆ ಕಡಿಮೆ ಇಲ್ಲ. ಕ್ರಿಕೆಟ್‍ನಲ್ಲಿ ಕ್ರೀಡಾಪಟುಗಳೇ ಪ್ರಮುಖ ಆಕರ್ಷಣೆಯಾದರೆ, ಇಲ್ಲಿ ಮೂಕ ಪ್ರಾಣಿ ಕೋಣಗಳೇ ಪ್ರಮುಖ ಆಕರ್ಷಣೆ. ಪ್ರತೀ ಕೋಣದ ಮೇಲೂ ಸಾವಿರಾರು ರೂಪಾಯಿ ಬಾಜಿ ಕಟ್ಟುವ ಕಂಬಳ ಪ್ರೇಮಿಗಳು, ಕ್ರಿಕೆಟ್‍ನಂತೆ ಇಲ್ಲಿಯೂ ಕೂಡಾ ಮೂರನೇ ಅಂಪೈರ್, ವೀಕ್ಷಕ ವಿವರಣೆ, ನುರಿತ ತೀರ್ಪುಗಾರರು ಇರುತ್ತಾರೆ. ಮೂಕ ಪ್ರಾಣಿಗಳನ್ನು ಪಳಗಿಸಿ ಶಿಸ್ತಿಗೆ ಒಡ್ಡಿಕೊಳ್ಳುವ ರೀತಿಯೇ ಆಧುನಿಕತೆಯ ನಡುವೆಯೂ ಕೃಷಿಕರ ಪಾಲಿನ ಕಂಬಳ ಮನೋರಂಜನೆಯಾಗಿದೆ. ಅದಕ್ಕೂ ಮಿಗಿಲಾಗಿ ಪ್ರತಿಷ್ಟೆಯ ಕ್ರೀಡೆಯಾಗಿ ಕಂಬಳ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಒಟ್ಟಿನಲ್ಲಿ ನಗರ ಭಾಗದಲ್ಲೂ ಈ ಕರಾವಳಿಯ ಜಾನಪದ ಕ್ರೀಡೆಯನ್ನು ಆಯೋಜಿಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ.

  • ಆಂಧ್ರ ಗಡಿಭಾಗದಲ್ಲಿ ಕನ್ನಡದ ಕಂಪು – ಕನ್ನಡ ಹಾಡಿನಿಂದಲೇ ಜಾಗೃತಿ ಮೂಡಿಸುವ ಗ್ರಾ.ಪಂ. ಸದಸ್ಯ

    ಆಂಧ್ರ ಗಡಿಭಾಗದಲ್ಲಿ ಕನ್ನಡದ ಕಂಪು – ಕನ್ನಡ ಹಾಡಿನಿಂದಲೇ ಜಾಗೃತಿ ಮೂಡಿಸುವ ಗ್ರಾ.ಪಂ. ಸದಸ್ಯ

    ಚಿತ್ರದುರ್ಗ: ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಶಾಲಾ ಕಾಲೇಜುಗಳಲ್ಲೇ ಕನ್ನಡ ಮಾತನಾಡೋದು, ಓದೋದು ಕಡಿಮೆ. ಹೀಗಾಗಿ ಉದ್ಯಾನವನಗಳಲ್ಲಿ ಮತ್ತು ಜನನಿಬಿಡ ಪ್ರದೇಶದಲ್ಲಿ ಕನ್ನಡ ಹಾಡನ್ನು ಹಾಡುತ್ತಾ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ.

    ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್ ಪಲ್ಲವಿ ಅವರು ಕನ್ನಡದ ಜಾಗೃತಿ ಹಾಡುಗಳ ಮೂಲಕ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗಾಗಿ ಶ್ರಮವಹಿಸುತಿದ್ದಾರೆ.

    ಲೋಕೇಶ್ ಪಲ್ಲವಿ ಅವರು ಕಳೆದ 15 ವರ್ಷಗಳಿಂದ ಜಾಗೃತಿ ಗೀತೆಗಳು, ಜಾನಪದ ಗೀತೆಗಳು, ಚಿತ್ರ ಗೀತೆಗಳು ಹಾಗೂ ದೇಶ ಭಕ್ತಿಗೀತೆಗಳನ್ನು ಸ್ವಯಂ ರಚಿಸಿ ಹಾಡುತ್ತಿದ್ದಾರೆ. ಇವರು ಆಂಧ್ರ ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಹಿರೆಕೇರೂರಹಳ್ಳಿಯ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದು, ಜಿಲ್ಲೆಯಾದ್ಯಂತ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಅನುಭವಿಸುವ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ, ಬಾಲಕಾರ್ಮಿಕ ಪದ್ಧತಿ ಹಾಗೂ ಸಾಮಾಜಿಕ ಅಸಮಾನತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಕರೆತರುವಂತಹ ಆಕರ್ಷಕ ಹಾಡುಗಳನ್ನು ರಚಿಸಿರುವುದರ ಜೊತೆಗೆ ಹಲವು ಚಿತ್ರಗೀತೆಗಳನ್ನು ಸಹ ಲೋಕೇಶ್ ರಚಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಹಾಗೂ ಜಾಗೃತಿ ಭಾವ ಕಂಡ ಜಿಲ್ಲೆಯ ಜನರು ಕೂಡ ಇವರನ್ನು ಮನಸಾರೆ ಹೊಗಳಿದ್ದು, ಸಾಮಾಜಿಕ ಪಿಡುಗುಗಳನ್ನು ನಿವಾರಣೆ ಮಾಡುವಲ್ಲಿ ಲೋಕೇಶ್ ಅವರ ಸೇವೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಹೆಚ್ಚಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.

    ಆಂಧ್ರ ಗಡಿಭಾಗದಲ್ಲಿದ್ದರೂ ಸಹ ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ತಮ್ಮ ಗಾಯನದ ಕಲೆಯನ್ನು ಉಳಿಸಿಕೊಳ್ಳುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡ್ತಿರೋ ಲೋಕೇಶ್ ಕಾರ್ಯ ಇತರರಿಗೆ ಮಾದರಿಯಾಗಿದೆ.

  • ಪರ ಸ್ತ್ರೀಯರೊಂದಿಗೆ ಚಕ್ಕಂದ ಆಡುತ್ತಿದ್ದ ಪತಿರಾಯರಿಗೆ ಪತ್ನಿಯರಿಂದ ಗೂಸಾ

    ಪರ ಸ್ತ್ರೀಯರೊಂದಿಗೆ ಚಕ್ಕಂದ ಆಡುತ್ತಿದ್ದ ಪತಿರಾಯರಿಗೆ ಪತ್ನಿಯರಿಂದ ಗೂಸಾ

    ಬೆಳಗಾವಿ: ಪರ ಸ್ತ್ರೀಯರೊಂದಿಗೆ ಚಕ್ಕಂದ ಆಡುತ್ತಿದ್ದ ಪತಿರಾಯರನ್ನು ಪತ್ನಿಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    ಹುಕ್ಕೇರಿ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಮನೆಯೊಂದರಲ್ಲಿ ಇಬ್ಬರು ಮಹಿಳೆಯರ ಜೊತೆ ಇಬ್ಬರು ಪುರುಷರು ಚಕ್ಕಂದ ಆಡುತ್ತಿದ್ದ ವೇಳೆಯಲ್ಲಿ ಪತ್ನಿಯರಿಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಸ್ಥಳಕ್ಕೆ ಬಂದ ಪತ್ನಿಯರು ತಮ್ಮ ಪತಿರಾಯರಿಗೆ ಹಾಗೂ ಮಹಿಳೆಯರಿಗೆ ಥಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪತ್ನಿಯರಿಗೆ ಅಲ್ಲಿದ್ದ ಸಾರ್ವಜನಿಕರು ಸಾಥ್ ನೀಡಿದ್ದಾರೆ. ಥಳಿಸಿಕೊಂಡ ಇಬ್ಬರು ಪುರುಷರು ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಹಾಗೂ ಮಸರಗುಪ್ಪಿ ಗ್ರಾಮಗಳ ನಿವಾಸಿಗಳು ಎಂದು ತಿಳಿದು ಬಂದಿದೆ. ಅಕ್ರಮ ಸಂಬಂಧ ಹೊಂದಿ ಥಳಿತಕ್ಕೊಳಗಾದ ಮಹಿಳೆಯರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

    ಈ ಕುರಿತು ಯಾವುದೇ ಪ್ರಕರಣ ದಾಖಲಿಸಿದೆ ತಮ್ಮ ಮನೆಗಳಿಗಳಿಗೆ ಪತಿರಾಯರನ್ನು ಪತ್ನಿಯರು ಹಾಗೂ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ

    ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ

    ತುಮಕೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ತುಮಕೂರಿನಲ್ಲಿ ಉಚಿತವಾಗಿ ಹಂಚುತ್ತಿದ್ದ ಕಬ್ಬಿಗಾಗಿ ಜನರು ಮುಗಿಬಿದ್ದು ಕಿತ್ತಾಡಿಕೊಂಡಿದ್ದಾರೆ.

    ತುಮಕೂರು ತಾಲೂಕಿನ ಮಲ್ಲಸಂದ್ರದ ಎಸ್.ಕೆ ಕಲ್ಯಾಣ ಮಂಟಪದಲ್ಲಿ ಕಬ್ಬಿಗಾಗಿ ಕದನವೇ ನಡೆದಿದೆ. ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ತಮ್ಮ ಆಪ್ತ ಹಾಲನೂರು ಅನಂತ್ ಅವರ ಹುಟ್ಟು ಹಬ್ಬ ಹಾಗೂ ಸಂಕ್ರಾಂತಿ ಪ್ರಯುಕ್ತವಾಗಿ ಸಾರ್ವಜನಿಕರಿಗೆ ಕಬ್ಬು ವಿತರಣೆ ಮಾಡುತ್ತಿದ್ದರು.

    ಸುಮಾರು 1.5 ಲಕ್ಷಕ್ಕೂ ಹೆಚ್ಚು ಕಬ್ಬನ್ನು ಲಾರಿಯಲ್ಲಿ ತಂದು ವಿತರಣೆ ಮಾಡುತ್ತಿದ್ದರು. ಕಬ್ಬಿನ ಜೊತೆಗೆ ಸೀರೆ, ಬಾಗಿನವೂ ನೀಡಲಾಗುತಿತ್ತು. ಉಚಿತ ವಿತರಣೆಯ ಸುದ್ದಿ ತಿಳಿದ ಸಾವಿರಾರು ಸಾರ್ವಜನಿಕರು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಕಬ್ಬು ತೆಗೆದುಕೊಳ್ಳಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ. ಕೆಲವರು ಪರಸ್ಪರ ಕಿತ್ತಾಟ ಕೂಡ ಮಾಡಿಕೊಂಡಿದ್ದಾರೆ. ಜನಸಂದಣಿಯಲ್ಲಿ ಪುಟ್ಟ ಮಕ್ಕಳು, ವೃದ್ಧೆಯರು ಸಿಲುಕಿ ಪ್ರಯಾಸಪಟ್ಟಿದ್ದಾರೆ.

  • ಭ್ರಷ್ಟ ಅಧಿಕಾರಿಗಳ ವಿರುದ್ಧ ಧೈರ್ಯವಾಗಿ ದೂರು ನೀಡುವಂತೆ ಎಸಿಬಿ ಮನವಿ

    ಭ್ರಷ್ಟ ಅಧಿಕಾರಿಗಳ ವಿರುದ್ಧ ಧೈರ್ಯವಾಗಿ ದೂರು ನೀಡುವಂತೆ ಎಸಿಬಿ ಮನವಿ

    ಯಾದಗಿರಿ: ಸರ್ಕಾರ 2016ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚಿಸಿದ್ದು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳಿದ್ದಲ್ಲಿ ಎಸಿಬಿಗೆ ದೂರು ನೀಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಯಾದಗಿರಿ ನಗರದ ತಹಶೀಲ್ದಾರ್ ಕಾರ್ಯಾಲಯ ಆವರಣದಲ್ಲಿ ಇಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ವತಿಯಿಂದ ಜನಸಂಪರ್ಕ ಸಭೆ ಮತ್ತು ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‍ಸಿ ಡಾ.ಸಂತೋಷ ಕೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿ ಮಾತನಾಡಿದರು.

    ಸಾರ್ವಜನಿಕ ನೌಕರರು ತಮ್ಮ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿಗಳಿಕೆ ಮಾಡಿರುವ ಹಾಗೂ ಜನರಿಂದ ಯಾವುದೇ ರೀತಿಯ ಲಂಚದ ಬೇಡಿಕೆ ಇಟ್ಟಲ್ಲಿ, ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿ ಮಾನಸಿಕ ಕಿರುಕುಳ ನೀಡಿದರೆ ಎಸಿಬಿಗೆ ಧೈರ್ಯದಿಂದ ದೂರು ನೀಡಿ ಎಂದು ಮನವಿ ಮಾಡಿದರು.