Tag: ಸಾರ್ವಜನಿಕರು

  • ಲಾಠಿ ಪ್ರಹಾರಕ್ಕೆ ಬ್ರೇಕ್ ಹಾಕಿದ ಕಮಲ್ ಪಂತ್

    ಲಾಠಿ ಪ್ರಹಾರಕ್ಕೆ ಬ್ರೇಕ್ ಹಾಕಿದ ಕಮಲ್ ಪಂತ್

    ಬೆಂಗಳೂರು: ಕೊರೊನಾದಿಂದ ಲಾಕ್‍ಡೌನ್ ಘೋಷಿಸಿದ್ದರು ರಸ್ತೆಗಳಿದವರ ಮೇಲೆ ಬಲ ಪ್ರಯೋಗ ಮಾಡಿದ್ದರಿಂದ ಜನರು ಪೊಲೀಸರ ಮೇಲೆ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತ ಕಮಲ್ ಪಂತ್‍ರವರು ಸಾರ್ವಜನಿಕರ ಮೇಲೆ ಪೊಲೀಸರು ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಸೂಚಿಸಿದ್ದಾರೆ.

    ಈ ಬಗ್ಗೆ ಕಮಲ್ ಪಂತ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಒಂದು ವೇಳೆ ಸಾರ್ವಜನಿಕರು ಲಾಕ್‍ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೆ, ಲಾಕ್ ಡೌನ್ ಜಾರಿಯಾಗಿರುವ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಒಪ್ಪಿಗೆ ನೀಡಲಾದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅಥವಾ ಕೆಲಸದ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಾದಲ್ಲಿ ಡಿಸಿಪಿ ಇಂಟಲಿಜೆನ್ಸ್ ಶ್ರೀ.ಸಂತೋಷ್ ಬಾಬು ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-22942354 ಎಂದು ಸಲಹೆ ನೀಡಿದ್ದಾರೆ.

  • ‘ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಚಾಲನೆ ನೀಡಿದ ಕೊಡಗು ಎಸ್ ಪಿ ಕ್ಷಮ ಮಿಶ್ರ

    ‘ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಚಾಲನೆ ನೀಡಿದ ಕೊಡಗು ಎಸ್ ಪಿ ಕ್ಷಮ ಮಿಶ್ರ

    ಮಡಿಕೇರಿ: ಪೊಲೀಸ್ ಇಲಾಖೆಯಿಂದ ಕೊಡಗು ಜಿಲ್ಲಾ ಪೊಲೀಸ್ ಘಟಕಕ್ಕೆ ನೀಡಲಾಗಿರುವ 7 `ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ಅವರು ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಚಾಲನೆ ನೀಡಿದರು.


    ಬಳಿಕ ಮಾತನಾಡಿದ ಅವರು, ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಸಾರ್ವಜನಿಕರ ಅನುಕೂಲಕ್ಕೆ ತರಲಾಗಿದೆ. ಆ ದಿಸೆಯಲ್ಲಿ `ದೇಶಾದ್ಯಂತ ಒಂದೇ ತುರ್ತು ಕರೆ 112′ ಸಂಖ್ಯೆಗೆ ಕರೆ ಮಾಡಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಪರಿಹರಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.

    ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು ಇಆರೆಸ್‍ಎಸ್ 112 ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ತುರ್ತು ಕರೆಗಳಾದ 100(ಪೊಲೀಸ್), 101 (ಅಗ್ನಿಶಾಮಕ ಮತ್ತು ತುರ್ತು ಸೇವೆ) ಹಾಗೂ ಇತರೆ ತುರ್ತು ಕರೆಗಳನ್ನು 112ರಲ್ಲಿ ಏಕೀಕೃತ ಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಮಾಹಿತಿ ನೀಡಿದರು.

    ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಅಕ್ರಮ ಜೂಜಾಟ, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ರಕ್ಷಣೆ, ಪ್ರಾಕೃತಿಕ ವಿಪತ್ತು ಮತ್ತಿತರ ಸಂದರ್ಭಗಳಲ್ಲಿ ತುರ್ತು ಸೇವೆಗಳು ಕಂಡುಬಂದಲ್ಲಿ 112ಕ್ಕೆ ದೂರವಾಣಿ ಕರೆ ಮಾಡಿ ಸೇವೆ ಪಡೆಯಬಹುದಾಗಿದೆ ಎಂದು ಕ್ಷಮ ಮಿಶ್ರ ಅವರು ವಿವರಿಸಿದರು.

    ತುರ್ತು ಸ್ಪಂದನ ಸಹಾಯಕ ವ್ಯವಸ್ಥೆಯು ದೇಶಾದ್ಯಂತ ಒಂದೇ ತುರ್ತು ಕರೆ 112, ರಾಜ್ಯದ್ಯಂತ ತುರ್ತು ಕರೆ ಸ್ವೀಕರಿಸಲು ಬೆಂಗಳೂರಿನಲ್ಲಿ ವೈರ್ಲೆಸ್ ಕೇಂದ್ರ, ಕರೆ 112, ಎಸ್‍ಎಂಎಸ್ 112,  ಇಮೇಲ್ erss112ktk@ksp.gov.in ವೆಬ್ ಪೋರ್ಟಲ್ https://ka.ners.in, 112 ಇಂಡಿಯಾ ಆ್ಯಪ್ ವೆಬ್ ಪೋರ್ಟಲ್ ಸಾಮಾನ್ಯ ಮೊಬೈಲ್‍ನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘವಾಗಿ ಒತ್ತುವ ಮೂಲಕ ಸೇವೆ ಪಡೆಯುವುದು ಇದರ ವೈಶಿಷ್ಟ್ಯವಾಗಿದೆ ಎಂದರು.

    ಇನ್ನಷ್ಟು ಮಾಹಿತಿ: ಸ್ಮಾರ್ಟ್ ಮೊಬೈಲ್‍ನಲ್ಲಿ ಪವರ್ ಬಟನ್‍ನ್ನು ಐದು ಬಾರಿ ನಿರಂತರವಾಗಿ ಒತ್ತುವ ಮೂಲ ತುರ್ತು ವಿನಂತಿ ಕಳುಹಿಸಬಹುದಾಗಿದೆ. ಹಾಗೆಯೇ ಕರೆ ಮಾಡಿದವರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆಯೊಂದಿಗೆ ಹತ್ತಿರದ ತುರ್ತು ಸ್ಪಂದನ ವಾಹನದ ಸಿಬ್ಬಂದಿಗಳಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ.

    ರಾಜ್ಯಾದ್ಯಂತ ತುರ್ತು ಕರೆ ಸ್ವೀಕರಿಸಲು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವೈರ್ಲೆಸ್ ಸ್ಥಾಪಿಸಲಾಗಿದೆ. ಸ್ವೀಕೃತಗೊಂಡ ಕರೆಗಳ್ನು ಸಂಬಂಧಿಸಿದ ಜಿಲ್ಲೆಗಳ ಸಂಯೋಜನಾ ಕೇಂದ್ರಕ್ಕೆ ರವಾನಿಸಿ ಹತ್ತಿರದ ತುರ್ತು ಸ್ಪಂದನ ವಾಹನಕ್ಕೆ ಮಾಹಿತಿ ನೀಡಿ ದೂರುದಾರರ ದೂರಿಗೆ ಸ್ಪಂದಿಸಲಿದ್ದಾರೆ.

    ಡಿವೈಎಸ್‍ಪಿ ದಿನೇಶ್ ಕುಮಾರ್, ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಇನ್ಸ್‍ಪೆಕ್ಟರ್ ಮೇದಪ್ಪ, ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್ ರಾಚಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಸಾಗರದಲ್ಲಿ ವ್ಯಾಕ್ಸಿನ್ ಕೊರತೆ- ವೈದ್ಯಕೀಯ ಸಿಬ್ಬಂದಿಗೆ ಸಾರ್ವಜನಿಕರಿಂದ ತರಾಟೆ

    ಸಾಗರದಲ್ಲಿ ವ್ಯಾಕ್ಸಿನ್ ಕೊರತೆ- ವೈದ್ಯಕೀಯ ಸಿಬ್ಬಂದಿಗೆ ಸಾರ್ವಜನಿಕರಿಂದ ತರಾಟೆ

    ಶಿವಮೊಗ್ಗ: ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳುತ್ತಲೇ ಇವೆ. ಆದರೆ ಪೂರೈಕೆ ಸರಿಯಾಗಿ ಆಗದೆ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. ಹೀಗಾಗಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲೆಯ ಸಾಗರ ಪಟ್ಟಣದ ದೇವರಾಜು ಅರಸು ಭವನದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ಕೋವಿಡ್ ಲಸಿಕೆ ದಾಸ್ತಾನು ಖಾಲಿಯಾಗಿದೆ. ರಾಜ್ಯಮಟ್ಟದಿಂದ ಲಸಿಕೆ ಪೂರೈಕೆಯಾದ ನಂತರ ಲಸಿಕೆ ನೀಡಲಾಗುವುದು ಎಂದು ವ್ಯಾಕ್ಸಿನ್ ಕೇಂದ್ರದಲ್ಲಿ, ಆರೋಗ್ಯ ಸಿಬ್ಬಂದಿ ಫಲಕ ಹಾಕಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಿಗೆ ರೈತರ ಮತ ಮಾತ್ರ ಬೇಕು, ವ್ಯಾಕ್ಸಿನ್ ನೀಡಲು ಆಗುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಲಸಿಕೆ ಪಡೆಯಲು ಸಾರ್ವಜನಿಕರು ಮುಂಜಾನೆಯಿಂದ ಸಾಲಿನಲ್ಲಿ ನಿಂತಿದ್ದು, ಮಧ್ಯಾಹ್ನವಾದರೂ ಲಸಿಕೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಲಸಿಕೆ ಪಡೆಯಲು ಸಾಧ್ಯವಾಗದ್ದರಿಂದ ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ, ನೌಕರರ ಸಂಘದ ಮುಖಂಡರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಮೇಲೆ ಕೂತು ಲಸಿಕೆ ಬಗ್ಗೆ ಜಾಹಿರಾತು ನೀಡುತ್ತೀರಿ. ಆದರೆ ಸರಿಯಾದ ಪ್ರಮಾಣದಲ್ಲಿ ನಮಗೆ ಲಸಿಕೆ ಕಳುಹಿಸುವುದಿಲ್ಲ. ಅಗತ್ಯ ಪ್ರಮಾಣದಲ್ಲಿ ನಮಗೆ ಕಳುಹಿಸಿದರೆ ನಾವು ಯಾಕೆ ಕೊಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಲಸಿಕೆ ದಾಸ್ತಾನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಸಾರ್ವಜನಿಕರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯವೂ ಜಗಳವಾಡಬೇಕಾಗುತ್ತದೆ. ಕೂಡಲೇ ಲಸಿಕೆ ಪೂರೈಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಮಾಸ್ಕ್ ಇಲ್ಲದವರಿಗೆ ಹಾರ ಹಾಕಿ ಸ್ಥಳದಲ್ಲೇ ಕೋವಿಡ್ ಟೆಸ್ಟ್

    ಮಾಸ್ಕ್ ಇಲ್ಲದವರಿಗೆ ಹಾರ ಹಾಕಿ ಸ್ಥಳದಲ್ಲೇ ಕೋವಿಡ್ ಟೆಸ್ಟ್

    – ಬೇಡ ಬೇಡ ಅಂದ್ರೂ ಬಿಡದೇ ಟೆಸ್ಟ್

    ಚಿಕ್ಕೋಡಿ(ಬೆಳಗಾವಿ): ಜಿಲ್ಲೆಯಲ್ಲಿ ಮಾಸ್ಕ್ ಇಲ್ಲದೆ ಓಡಾಡುವ ಸಾರ್ವಜನಿಕರಿಗೆ ಹೂವಿನ ಹಾರ ಹಾಕಿ, ಸ್ಥಳದಲ್ಲೇ ಕೋವಿಡ್ ಪರೀಕ್ಷೆ ನಡೆಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಹೊಸ ಐಡಿಯಾ ಮಾಡಿಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ತಾಲೂಕಾಡಳಿತದಿಂದ ಟಫ್ ರೂಲ್ಸ್ ಜಾರಿ ಮಾಡಿದ್ದರು ಕೂಡ ಸಾರ್ವಜನಿಕರು ಮಾತ್ರ ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿದ್ದಾರೆ. ಇದನ್ನು ಕಂಡು ಜನರಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ ಬಂದ ಮಹಾನುಭಾವರಿಗೆ ಹಾರ ಹಾಕಿ, ಕೋವಿಡ್ ಪರೀಕ್ಷೆಯನ್ನು ಸ್ಥಳದಲ್ಲೇ ಅಧಿಕಾರಿಗಳು ನಡೆಸಿದ್ದಾರೆ.

    ಅಥಣಿ ತಹಶೀಲ್ದಾರ್ ದುಂಡಪ್ಪಾ ಕೋಮಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಾರ್ವಜನಿಕರು ಬೇಡ ಬೇಡ ಎಂದರೂ ಬಿಡದೇ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಿ ಕೊರೊನಾ ಜಾಗೃತಿ ಜೊತೆಗೆ ಕಠಿಣ ನಿಯಮಗಳನ್ನು ಅಥಣಿ ತಾಲೂಕಾಡಳಿತ ಜಾರಿಗೊಳಿಸಿದೆ.

    ಮಾಸ್ಕ್ ಇಲ್ಲದ ಬೈಕ್ ಸವಾರರಿಗೆ ಸರಿಯಾದ ಪಾಠ ಕಲಿಸುವದರ ಜೊತೆಗೆ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವವರಿಗೆ ತಾಲೂಕಾಡಳಿತ ಬಿಸಿ ಮುಟ್ಟಿಸಿದೆ. ಕೊರೊನಾ ಜಾಗೃತಿ ಕಾರ್ಯಾಚರಣೆಯಲ್ಲಿ ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭಾಗಿಯಾಗಿದ್ದರು.

  • ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

    ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಮಗೇ ಅಸಡ್ಡೆ ಯಾಕೆ- ಉಡುಪಿ ಡಿಸಿ ಪ್ರಶ್ನೆ

    ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಪ್ರತಿ ದಿನ ನೂರರ ಮೇಲೆ ಕೇಸ್ ದಾಖಲಾಗುತ್ತಿವೆ. ಜನ ಕೋವಿಡ್ ಮಾರ್ಗಸೂಚಿ ಪಾಲಿಸದೆ ಓಡಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಗರದ ಹೊರಭಾಗದಲ್ಲಿ ರೈಡ್ ಗೆ ಇಳಿದ ಡಿಸಿ, ಉಡುಪಿ ತಾಲೂಕಿನ ಸಂತೆಕಟ್ಟೆ ಬ್ರಹ್ಮಾವರದಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ಖಾಸಗಿ ಬಸ್ ಗಳಿಂದ ನಿಯಮ ಉಲ್ಲಂಘನೆಯಾಗುತ್ತಿದ್ದು, ಪೀಕ್ ಹವರ್ ನಲ್ಲಿ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಬಸ್ ಗಳನ್ನು ತಡೆದು ದಂಡ ಹಾಕಿದ ಅಧಿಕಾರಿಗಳು, ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

    ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಡಿಸಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂಗಡಿ ಮಾಲೀಕರು, ಮೆಡಿಕಲ್, ಬ್ಯಾಂಕ್ ಗಳ ಮೇಲೆ ಡಿಸಿ 5 ಸಾವಿರ ದಂಡ ಹಾಕಿದ್ದಾರೆ. ಮಾಸ್ಕ್ ಹಾಕದ ಸಾರ್ವಜನಿಕರ ಮೇಲೆ 100 ರೂಪಾಯಿ ದಂಡ ವಿಧಿಸಿದ್ದಾರೆ. ಬಸ್ ನಿಂದ ಕೆಳಗಿಳಿಸಿ ತೆರಳಿದ ಜಿಲ್ಲಾಧಿಕಾರಿ ವಿರುದ್ಧ ವಿದ್ಯಾರ್ಥಿನಿಯರು ಅಸಮಧಾನ ವ್ಯಕ್ತಪಡಿಸಿದರು. ಹೆಚ್ಚುವರಿ ಪ್ರಯಾಣಿಕರನ್ನು ಕರೆದುಕೊಂಡು ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಯಾಣಿಕರು ಯಾವುದೇ ಕಾರಣಕ್ಕೂ ನಿಂತು ಪ್ರಯಾಣ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಜಿಲ್ಲಾಧಿಕಾರಿ ಮಾಧ್ಯಮಗಳ ಜೊತೆ ಮಾತನಾಡಿ, ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಜನ ಮಾರ್ಗಸೂಚಿ ಪಾಲಿಸುತ್ತಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದ್ದರೂ ಅಸಡ್ಡೆ ಯಾಕೆ? ಸಾಂಕ್ರಾಮಿಕ ರೋಗ ಹತೋಟಿಗೆ ಬರುವ ತನಕ ಜಾಗರೂಕರಾಗಿರಿ ಎಂದರು.

    ಗ್ರಾಮೀಣ ಭಾಗಕ್ಕೆ ಕಡಿಮೆ ಸಂಖ್ಯೆಯಲ್ಲಿ ಬಸ್ ಇದೆ. ಕಾಲೇಜು ಬಿಡುವ ಸಂದರ್ಭದಲ್ಲಿ ಸಿದ್ಧಾಪುರ ರಸ್ತೆಯಲ್ಲಿ ಒಂದೇ ಬಸ್ ಇದೆ. ಹೀಗಾಗಿ ತುಂಬಿದ ಬಸ್ ನಲ್ಲೇ ಓಡಾಡಬೇಕಾಗುತ್ತದೆ. ಬಸ್ ನಿಂದ ಇಳಿಸಿದರೆ ಎಲ್ಲಿಗೆ ಹೋಗಬೇಕು ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

  • ಒಂಟಿ ಸಲಗ ಪತ್ತೆಗೆ ಮುಂದುವರಿದ ಕಾರ್ಯಾಚರಣೆ

    ಒಂಟಿ ಸಲಗ ಪತ್ತೆಗೆ ಮುಂದುವರಿದ ಕಾರ್ಯಾಚರಣೆ

    ಧಾರವಾಡ: ನಗರದಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಒಂಟಿ ಸಲಗ(ಕಾಡಾನೆ) ಪತ್ತೆಗಾಗಿ ಧಾರವಾಡದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ಮುಂದುವರಿಸಿದ್ದಾರೆ.

    ನಗರದಲ್ಲಿ ನಿನ್ನೆ ಬೆಳಗ್ಗೆ ಕಾಣಿಸಿಕೊಂಡಿದ್ದ ಒಂಟಿ ಸಲಗ ಪತ್ತೆಯ ಕಾರ್ಯ ಇಂದೂ ಕೂಡ ಮುಂದುವರೆದಿದೆ. ಕರ್ನಾಟಕ ವಿ.ವಿ. ಆವರಣದಿಂದ ಆನೆಯು ಹೊರಬಂದಿದ್ದು, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಹಿಂಭಾಗದ ಉಸುಕಿನ ಅಡ್ಡಾ ಸುತ್ತಲಿನ ಪ್ರದೇಶಗಳಲ್ಲಿ ಇಂದು ಗೋಚರಿಸಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಣಸಿಕ್ಕಿಲ್ಲ ಹಾಗಾಗಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಆನೆಯು ಹೆದ್ದಾರಿ ದಾಟಲು ಪ್ರಯತ್ನಿಸಿದೆ. ಜನ ಹಾಗೂ ವಾಹನ ಸಂಚಾರ ನೋಡಿ ಮರಳಿ ಬಂದಿದೆ. ಗದಗ ಪ್ರಾಣಿ ಸಂಗ್ರಹಾಲಯ ಹಾಗೂ ಶಿವಮೊಗ್ಗದಿಂದ ತಜ್ಞವೈದ್ಯರು ಬರುತ್ತಿದ್ದಾರೆ, ಅರವಳಿಕೆ ಮದ್ದು ನೀಡುವ ಗನ್ ಕೂಡ ತರಿಸಲಾಗುತ್ತಿದೆ, ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಿಂದ ತರಬೇತಿ ಹೊಂದಿದ ಮೂರು ಆನೆಗಳು ಕೂಡ ಬರುತ್ತಿವೆ. ಅವುಗಳ ನೆರವಿನಿಂದ ಕಾರ್ಯಾಚರಣೆ ಮುಂದುವರಿಯಲಿದೆ. ಹಾಗಾಗಿ ಪೊಲೀಸ್ ತರಬೇತಿ ಶಾಲೆ, ಕೇಂದ್ರೀಯ ವಿದ್ಯಾಲಯ, ಮೈಲಾರ ಲಿಂಗೇಶ್ವರ ನಗರ, ನುಗ್ಗಿಕೇರಿ ಮತ್ತಿತರ ಪ್ರದೇಶಗಳ ನಾಗರಿಕರು ಹೆಚ್ಚು ಎಚ್ಚರಿಕೆವಹಿಸಬೇಕು, ಮತ್ತು ಗ್ರಾಮಸ್ಥರು ಅನಗತ್ಯವಾಗಿ ಒಂದೆಡೆ ಸೇರಿದರೆ ಕಾರ್ಯಾಚರಣೆಗೆ ತೊಂದರೆಯಾಗುತ್ತದೆ. ಹಾಗಾಗಿ ಗುಂಪುಗೂಡಬಾರದು ಎಂದು ಸಾರ್ವಜನಿಕರಲ್ಲಿ ಯಶಪಾಲ್ ಅವರು ಮನವಿ ಮಾಡಿಕೊಂಡಿದ್ದಾರೆ.

  • ಯುಗಾದಿ ಹಬ್ಬಕ್ಕೆ ಕುರಿ, ಮೇಕೆ ವ್ಯಾಪಾರ ಜೋರು – ಕೊರೊನಾ ಮರೆತ ಜನ

    ಯುಗಾದಿ ಹಬ್ಬಕ್ಕೆ ಕುರಿ, ಮೇಕೆ ವ್ಯಾಪಾರ ಜೋರು – ಕೊರೊನಾ ಮರೆತ ಜನ

    ನೆಲಮಂಗಲ: ಯುಗಾದಿ ಹಬ್ಬ ಹತ್ತಿರವಾಗುತ್ತಿದ್ದಂತೆ ಹಬ್ಬದ ನೆಪದಲ್ಲಿ ಮಹಾಮಾರಿ ಕೊರೊನವನ್ನು ಜನ ಮರೆತ್ತಿದ್ದಾರೆ. ನಗರದ ವಾರದ ಸಂತೆಯಲ್ಲಿ ಯುಗಾದಿ ಹಬ್ಬಕ್ಕೆ ಕುರಿ ಮೇಕೆ ಖರೀದಿಗೆ ಮುಗಿಬಿದ್ದ ಜನರು ಕೊರೊನಾ ಎರಡನೇ ಅಲೆ ಮೆರೆತು ಬಿಂದಾಸ್ ವ್ಯಾಪಾರ ಮಾಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುರಿ, ಮೇಕೆ ಸಂತೆಯಲ್ಲಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಇಲ್ಲದೆ ಜನರು ತಮ್ಮ ತಮ್ಮ ವ್ಯಾಪಾರದಲ್ಲಿ ತೊಡಗಿಕೊಂಡಿರುವ ದೃಶ್ಯ ಸಾಮಾನ್ಯವಾಗಿತ್ತು. ಕೊರೊನಾ ಭೀತಿ ನಡುವೆಯು ರಸ್ತೆಯಲ್ಲಿ ಮತ್ತು ವಾರದ ಸಂತೆಯಲ್ಲಿ ಜನಜಂಗುಳಿ ಮಾತ್ರ ಅಪಾರ ಪ್ರಮಾಣದಲ್ಲಿ ಕಂಡುಬಂದಿದೆ.

    ಯುಗಾದಿ ಹಬ್ಬಕ್ಕೆ ಕುರಿ ಮೇಕೆ ಖರೀದಿಗೆ ಮುಗಿಬಿದ್ದ ಜನರ ಮೇಲೆ ನಿಯಂತ್ರಣ ಹೇರಲು ಯಾವೊಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಸುಳಿವೇ ಇಲ್ಲದಂತಾಗಿದೆ. ಇತ್ತ ನೆಲಮಂಗಲ ತಾಲೂಕಿನಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ.

    ವಾರದ ಸಂತೆ ನಡೆಸಲು ಸೂಕ್ತ ವ್ಯವಸ್ಥೆಯಿಲ್ಲದೆ ರೈತರ ಪರದಾಟದ ಜೊತೆ ಸಾರ್ವಜನಿಕರು ಕೊರೊನಾ ಮರೆತ್ತಿದ್ದಾರೆ. ಜನರನ್ನು ನಿಯಂತ್ರಿಸದ ನಗರಸಭೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.

  • ಮೈಸೂರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸರು ನಮ್ಮನ್ನು ಮುಟ್ಟೇ ಇಲ್ಲ ಎಂದ ಬೈಕ್ ಸಹ ಸವಾರ

    ಮೈಸೂರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸರು ನಮ್ಮನ್ನು ಮುಟ್ಟೇ ಇಲ್ಲ ಎಂದ ಬೈಕ್ ಸಹ ಸವಾರ

    – ಪೊಲೀಸರ ಮೇಲೆ ಹಲ್ಲೆ, 13 ಮಂದಿ ಬಂಧನ

    ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮೈಸೂರಿನ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಘಾತದಲ್ಲಿ ಗಾಯಗೊಂಡಿರುವ ಸಹ ಸವಾರನ ವೀಡಿಯೋ ಹೇಳಿಕಯನ್ನು ಪೊಲೀಸರು ಇಂದು ಬಿಡುಗಡೆ ಮಾಡಿದ್ದಾರೆ. ಇನ್ನೊಂದೆಡೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಕ್ಕೆ 13 ಜನರನ್ನು ಬಂಧಿಸಿದ್ದು, ಇನ್ನೂ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

    ಮೈಸೂರಿನಲ್ಲಿ ನಡೆದ ಬೈಕ್ ಅಪಘಾತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಅಪಘಾದಲ್ಲಿ ಬೈಕ್ ಸವಾರ ದೇವರಾಜ್ ಸಾವನ್ನಪ್ಪಲು ಪೊಲೀಸರೇ ಕಾರಣ. ದಂಡ ಕಟ್ಟಿಸಿಕೊಳ್ಳಲು ತಕ್ಷಣವೇ ಪೊಲೀಸರು ನಿಲ್ಲಿಸಿದ್ದಕ್ಕೆ ಹಿಂದಿನಿಂದ ಬಂದ ಲಾರಿ ಬೈಕ್ ಸವಾರನ ಮೇಲೆ ಹರಿದಿದೆ. ಹೀಗಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶಗೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

    ವಿಜಯನಗರ ಪೊಲೀಸ್ ಕಾರ್ಯಚರಣೆಯಲ್ಲಿ 13 ಮಂದಿಯನ್ನು ಬಂಧಿಸಲಾಗಿದ್ದು, 15 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿನ ವಿಡಿಯೋ ದೃಶ್ಯಾವಳಿ ಆಧರಿಸಿ 13 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಜಯನಗರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.

    ಅಪಘಾತ ಪ್ರಕರಣದಲ್ಲಿ ಪೊಲೀಸರ ತಪ್ಪೇ ಇಲ್ಲ ಎಂದು ಪೊಲೀಸ್ ಇಲಾಖೆ ಹೇಳುತ್ತಿದ್ದು, ಪೊಲೀಸರ ಬಳಿ ವಾಹನ ಬರುವ ಮೊದಲೇ ಅಪಘಾತವಾಗಿತ್ತು. ಪೊಲೀಸರು ನಿಂತಿದ್ದ 200 ಮೀಟರ್ ದೂರದಲ್ಲಿ ಸವಾರ ಬೈಕ್ ನಿಲ್ಲಸಿದ್ದ. ಈ ವೇಳೆ ಹಿಂಬದಿಯಿಂದ ಬಂದ ಟ್ರಕ್ ಬೈಕ್ ಸವಾರರ ಮೇಲೆ ಹರಿದಿದೆ. ಹಿರೋ ಹೋಂಡಾ ಬೈಕ್‍ನಲ್ಲಿ ಇಬ್ಬರಿದ್ದರು. ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆ. ತಪ್ಪು ಗ್ರಹಿಕೆಯಿಂದ ಸಾರ್ವಜನಿಕರು ಆಕ್ರೋಶಭರಿತರಾಗಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

    ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಬೈಕ್ ಸಹ ಸವಾರ ಸುರೇಶ್ ಅವರ ವೀಡಿಯೋ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪೊಲೀಸರು ನಮ್ಮನ್ನು ತಡೆಯಲಿಲ್ಲ. ಮೃತ ದೇವರಾಜ್ ಅವರೇ ಬೈಕ್ ನಿಧಾನ ಮಾಡಿದರು. ಆಗ ಹಿಂಬದಿಯಿಂದ ಬಂದ ಟಿಪ್ಪರ್ ನಮಗೆ ಡಿಕ್ಕಿಯಾಗಿತ್ತು. ಪೊಲೀಸರು ನಮ್ಮನ್ನು ಸ್ಪರ್ಶಿಸಲೇ ಇಲ್ಲ. ಬೈಕ್ ಹಿಡಿಯುತ್ತಿದ್ದುದನ್ನು ಕಂಡು ದೇವರಾಜ್ ನಿಧಾನ ಮಾಡಿದರು. ಆಗ ಹಿಂದಿನಿಂದ ಟಿಪ್ಪರ್ ಬಂದು ಡಿಕ್ಕಿಯಾಯಿತು. ನಾನು ಕೆಳಗೆ ಬಿದ್ದಿದ್ದು ಮಾತ್ರ ನೆನಪಿದೆ. ನಂತರ ನೋಡಿದರೆ ಅಪಘಾತವಾಗಿ ಜನ ಸೇರಿದ್ದರು. ಘಟನೆಗೆ ಪೊಲೀಸರು ಕಾರಣವಲ್ಲ ಎಂದು ಮೈಸೂರು ಪೊಲೀಸ್ ಇಲಾಖೆಯಿಂದ ಸಹ ಸವಾರ ಸುರೇಶ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.

    ನಾಲ್ಕು ಪ್ರಕರಣ ದಾಖಲು
    ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದ್ದು, ಪೊಲೀಸರಿಂದಲೇ ಮೂರು ಪ್ರಕರಣ ದಾಖಲಾಗಿವೆ. ಬೈಕ್ ಸವಾರನ ಕುಟುಂಬಸ್ಥರಿಂದ ಒಂದು ಪ್ರಕರಣ ದಾಖಲಾಗಿದೆ. ತಮ್ಮ ಮೇಲಿನ ಹಲ್ಲೆ ಕುರಿತು ಇಬ್ಬರು ಪೊಲೀಸರಿಂದ 2 ದೂರು, ಪೊಲೀಸ್ ವಾಹನ ಜಖಂ ಕುರಿತು 1 ದೂರು, ಬೈಕ್ ಸವಾರನ ಕುಟುಂಬಸ್ಥರಿಂದ ಪೊಲೀಸರ ನಿರ್ಲಕ್ಷ್ಯದ ಆರೋಪದ ಮೇಲೆ 1 ದೂರು ದಾಖಲಾಗಿದೆ. ಪ್ರತ್ಯಕ್ಷದರ್ಶಿಗಳಿಂದಲೂ ಪೊಲೀಸರ ಮೇಲೆ ಆರೋಪ ಮಾಡಲಾಗಿದೆ. ಆದರೆ ಪೊಲೀಸರಿಂದ ತಪ್ಪೇ ಆಗಿಲ್ಲ ಎಂದು ಇಲಾಖೆ ಹೇಳುತ್ತಿದೆ.

  • ರಾಷ್ಟ್ರ ಧ್ವಜ ಸುಟ್ಟ ಟಿಪ್ಪರ್ ಚಾಲಕ – ಹಿಡಿದು ಥಳಿಸಿದ ಸಾರ್ವಜನಿಕರು

    ರಾಷ್ಟ್ರ ಧ್ವಜ ಸುಟ್ಟ ಟಿಪ್ಪರ್ ಚಾಲಕ – ಹಿಡಿದು ಥಳಿಸಿದ ಸಾರ್ವಜನಿಕರು

    ಕೋಲಾರ: ಕನ್ನಡ ರಾಜ್ಯೋತ್ಸವದೊಂದೆ ರಾಷ್ಟ್ರ ಧ್ವಜ ಸುಟ್ಟು ಅಪಮಾನವೆಸಿಗಿದ್ದ ಟಿಪ್ಪರ್ ಚಾಲಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ ತಿಮ್ಮಸಂದ್ರ ಬಳಿ ಉತ್ತರ ಭಾರತ ಮೂಲದ ಟಿಪ್ಪರ್ ಲಾರಿ ಡ್ರೈವರ್ ಸತ್ಯೇಂದ್ರ ಕುಮಾರ್ ಯಾದವ್ ರಾಷ್ಟ್ರ ಧ್ವಜಕ್ಕೆ ಅಪಮಾನವೆಸಿಗಿದ್ದ ಕಿಡಿಗೇಡಿ. ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಅಪಮಾನವೆಸಗಿದ್ದ ಕಿಡಿಗೇಡಿ ಕೈಗೆ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜವನ್ನು ಕೊಟ್ಟು ಮೆರವಣೆಗೆ ಮಾಡಿದ ಸ್ಥಳೀಯರು ಭಾರತಾಂಭೆಗೆ ಜಯಕಾರಗಳನ್ನು ಹಾಕಿಸಿದ್ದಾರೆ. ಸ್ಥಳಕ್ಕೆ ಮಾಸ್ತಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಿಡಿಗೇಡಿಯನ್ನು ವಶಕ್ಕೆ ಪಡೆದಿದ್ದಾರೆ. ಸಧ್ಯ ಆರೋಪಿ ರಾಷ್ಟ್ರಧ್ವಜವನ್ನು ಸುಟ್ಟ ಹಿನ್ನೆಲೆಯಲ್ಲಿ ಆತನ ಬಗ್ಗೆ ಪೂರ್ಣ ಮಾಹಿತಿಯನ್ನು ಪಡೆದು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ.

  • ಮತ್ತೆ ಸಂಯುಕ್ತ ಹೆಗ್ಡೆಯಿಂದ ಕಿರಿಕ್ – ಸಾರ್ವಜನಿಕರಿಂದ ದೂರು, ಪಾರ್ಕಿನಲ್ಲೇ ಲಾಕ್

    ಮತ್ತೆ ಸಂಯುಕ್ತ ಹೆಗ್ಡೆಯಿಂದ ಕಿರಿಕ್ – ಸಾರ್ವಜನಿಕರಿಂದ ದೂರು, ಪಾರ್ಕಿನಲ್ಲೇ ಲಾಕ್

    ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯವರು ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದು, ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

    ಸಿಲಿಕಾನ್ ಸಿಟಿಯ ಅಗರ ಉದ್ಯನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಂದು ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ತುಂಡು ಹುಲಾ ಹೂಪ್ ಡ್ಯಾನ್ಸ್ ಮಾಡಿದ್ದಾರೆ.

    ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಿದ್ದಕ್ಕೆ ಸ್ಥಳೀಯರು ಮತ್ತು ಹಿರಿಯ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಸಾರ್ವಜನಿಕರ ವಿರುದ್ಧ ನಟಿ ಸಂಯುಕ್ತ ಕಿರುಚಾಡಿ ರಂಪ ಮಾಡಿದ್ದಾರೆ. ಈ ವೇಳೆ ಸಾರ್ವಜನಿಕರು ನಟಿಯ ವಿರುದ್ಧ ಧಿಕ್ಕಾರ ಕೂಗಿ, ನಂತರ ಪಾರ್ಕ್ ಗೇಟನ್ನು ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

    ಈ ವೇಳೆ ಗೇಟ್ ಓಪನ್ ಮಾಡುವಂತೆ ಸಂಯುಕ್ತ ಮತ್ತು ಸಾರ್ವಜನಿಕರ ನಡುವೆ ಜಗಳವಾಗಿದೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ ತಕ್ಷಣ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದ ಸಂಯುಕ್ತ, ನಾನು ಏನೂ ತಪ್ಪು ಮಾಡಿಲ್ಲ. ಇವರು ಸುಮ್ಮನೆ ನಮ್ಮನ್ನು ಕೂಡಿ ಹಾಕಿದ್ದಾರೆ ಎಂದು ದೂರಿದ್ದಾರೆ. ಆನಂತರ ಪೊಲೀಸರು ಬಂದು ಆಕೆಯನ್ನು ಮತ್ತು ಅವರ ಸ್ನೇಹಿತರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.

    https://www.instagram.com/tv/CEtwP4plMhN/?utm_source=ig_web_copy_link