ತುಮಕೂರು: ಕೆರೆಗಳನ್ನು ಹೂಳೆತ್ತಲು ಸ್ವಾಮೀಜಿಯೊಬ್ಬರು ಜೋಳಿಗೆ ಹಿಡಿದು ಜನರ ಸಹಕಾರ ಕೇಳಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಕೆರೆಗಳ ಪುನಶ್ಚೇತನಕ್ಕಾಗಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀಗಳು ಈ ಹೆಜ್ಜೆಯಿಟ್ಟಿದ್ದಾರೆ. ಕೆರೆ ಹೂಳೆತ್ತುವುದಕ್ಕಾಗಿ ಪಣತೊಟ್ಟ ಶ್ರೀಗಳು ಹಣ ಸಂಗ್ರಹಿಸಲು ಜೋಳಿಗೆ ಹಿಡಿದು ಊರೂರು ಸುತ್ತುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮಿ ಜಲತರು ಸಂವರ್ಧನಾ ಸಮಿತಿ ಮೂಲಕ ಕೆರೆಗಳ ಉಳಿವಿಗಾಗಿ ಈ ರೀತಿಯ ಹೋರಾಟ ಆರಂಭಿಸಿದ್ದಾರೆ.
ಒಂದು ಕೆರೆ ಹೂಳೆತ್ತಲು ಸರಿಸುಮಾರು 2 ಕೋಟಿ ರೂ. ಬೇಕಾಗುತ್ತದೆ. ಹೀಗೆ ತಾಲೂಕಿನ 134 ಕೆರೆ ಹೂಳೆತ್ತಲು ಸರಿಸುಮಾರು 300 ಕೋಟಿ ರೂ. ಗಳ ಅವಶ್ಯಕತೆ ಇದೆ. ಭಕ್ತಾಧಿಗಳು ಕೂಡಾ ಸಾಧ್ಯವಾದಷ್ಟು ಧನಸಹಾಯ ಮಾಡುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ ಮಣುವಿನಕುರಿಕೆ ಗ್ರಾಮದ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಸುಮಾರು 180 ಎಕರೆ ಪ್ರದೇಶದಲ್ಲಿರುವ ಈ ಕೆರೆ ಅರ್ಧದಷ್ಟು ಹೂಳೆತ್ತಲಾಗಿದೆ. ಊರಿನ ಜನರು ಕೂಡಾ ಶ್ರೀಗಳಿಗೆ ಹಣಕಾಸಿನ ನೆರವಿನ ಜೊತೆಗೆ ಹೂಳೆತ್ತಲೂ ಸಹಾಯ ಮಾಡುತ್ತಿದ್ದಾರೆ. ತಮ್ಮ ಟ್ರಾಕ್ಟರ್, ಎತ್ತಿನ ಗಾಡಿ ತಂದು ಮಣ್ಣು ಸಾಗಿಸುತ್ತಿದ್ದಾರೆ. ಕೆರೆಗಳನ್ನು ಉಳಿಸುವ ದೃಷ್ಟಿಯಿಂದ ಶ್ರೀಗಳು ಕೈಗೊಂಡಿರುವ ಈ ಕಾರ್ಯವನ್ನು ಸಾರ್ವಜನಿಕರು ಮುಕ್ತವಾಗಿ ಸ್ವಾಗತಿಸಿದ್ದಾರೆ.




























